ISSN (Print) - 0012-9976 | ISSN (Online) - 2349-8846

ವಿಶ್ವವಿದ್ಯಾಲಯವೆಂಬ ಪರಿಕಲ್ಪನೆ

.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಒಂದು ಸಂಸ್ಥೆಯಾಗಿ ವಿಶ್ವವಿದ್ಯಾಲಯಗಳು ತಮ್ಮಂತೆ ತಾವೇ ವಿಹರಿಸುವುದಿಲ್ಲ; ಅವು ಹಲವರಿಗೆ ಆಕರ್ಷಕ ಆಲೋಚನೆಯಾಗಿ ಕಂಡುಬಂದ ನಂತರದಲ್ಲೇ ಅವು ವಿವಿಧ ಪ್ರದೇಶಗಳಲ್ಲಿ ಮತ್ತು ದೇಶಗಳಲ್ಲಿ ಹರಡಿಕೊಳ್ಳುತ್ತವೆ. ಹೀಗಾಗಿ ವಿಶ್ವವಿದ್ಯಾಲಯಗಳು ಒಂದು ಭೌತಿಕ ರಚನೆಗಳಲ್ಲೋ ಅಥವಾ ಸಂಖ್ಯೆಗಳಾಗಿಯೋ ಮಾತ್ರ ಅಸ್ಥಿತ್ವವನ್ನು ಪಡೆದುಕೊಳ್ಳುವುದಿಲ್ಲ. ವಾಸ್ತವದಲಿ ವಿಶ್ವವಿದ್ಯಾಲಯಗಳು ಸಾರ್ವತ್ರಿಕ ಮಾನವೀಯ ಮೌಲ್ಯಗಳನ್ನು ಸಾಂಸ್ಥೀಕರಿಸುವ ಸಂಸ್ಥೆಗಳಾಗಿವೆ. ಹೀಗಾಗಿ ವಿಶ್ವವಿದ್ಯಾಲಯಗಳು ಎರಡು ಕೆಲಸಗಳನ್ನು ನಿರ್ವಹಿಸುತ್ತವೆ. ಮೊದಲನೆಯದು, ಅಂಥ ಮೌಲಿಕ ಆಲೋಚನೆಗಳನ್ನು ಸಾಂಸ್ಥೀಕರಿಸುವುದು ಮತ್ತು ಎರಡನೆಯದಾಗಿ ಅಂಥಾ ಆಲೋಚನೆಗಳಿಗೆ ತಾವು ಕೊಡುವುದು. ಒಂದು ಆದರ್ಶಾತ್ಮಕ ನೆಲೆಯಲ್ಲಿ ನೋಡುವುದಾದರೆ ವಿಶ್ವವಿದ್ಯಾಲಯಗಳು ಸಾಮಾಜಿಕ ಕಾಳಜಿಗಳ ಬಗ್ಗೆ ಬದ್ಧತೆ ಮತ್ತು ನಿಖರವಾದ ವಿದ್ವತ್ತುಗಳನ್ನು ಹೊಂದಿರುವ sಸೃಜನಶೀಲ ಮನಸ್ಸುಗಳನ್ನು ಅತ್ಯಂತ ಜತನದಿಂದ ಬೆಳೆಸುವ ಮತ್ತು ಪೋಷಿಸುವ ಸಂಸ್ಥೆಗಳಾಗಿವೆ. ಹೀಗಾಗಿ ಒಂದು ಸಂಸ್ಥೆಯಾಗಿ ವಿಶ್ವವಿದ್ಯಾಲಯಗಳು ಸೃಜನಶೀಲ ಮನಸ್ಸುಗಳ ಬಗ್ಗೆ ಸಂವೇದನಾಶಿಲತೆಯನ್ನೂ ಮತ್ತು ತಮ್ಮೊಳಗೆ ಹಾಗೂ ತಮ್ಮ ಸಾಂಸ್ಥಿಕ ಗಡಿಗಳಾಚೆಗೂ ವೈವಿಧ್ಯಮಯ ಚಿಂತನೆಗಳ ಹುಟ್ಟಿಗೂ ಮತ್ತದರ ಪ್ರಸರಣೆಗೂ ಸ್ಪಂದಿಸುತ್ತವೆ.

ಒಂದು ಆಲೋಚನೆಯಾಗಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳು ತಮ್ಮ ಕೈಯನ್ನು ಬಳಸುವ ಮುನ್ನ ತಮ್ಮ ಮೆದುಳನ್ನು ಬಳಸುವಂತೆ ಪ್ರೋತ್ಸಾಹಿಸುತ್ತದೆ. ಚಿಂತನಾಶೀಲ ಮನಸ್ಸುಗಳಿಗೆ ಸಂವಾದ ಮತ್ತು ಚರ್ಚೆಗಳಿರುವ ಸಂಸ್ಕೃತಿಯಲ್ಲಿ ಹೆಚ್ಚು ಪ್ರಸ್ತುತತೆಯಿರುತ್ತದೆ. ಭಿನ್ನಧ್ವನಿಗಳಿರುವ ವಾತಾವರಣದಲ್ಲಿ ಅದು ಇನ್ನೂ ಹೆಚ್ಚು ಮೆರುಗನ್ನು ಪಡೆದುಕೊಳ್ಳುತ್ತದೆ. ಒಂದು ವಿಶ್ವವಿದ್ಯಾಲಯದ ಚಿಂತನೆಗಳ ಬದುಕಿಗೆ ಸ್ಪಂದಿಸುವ ಆಡಳಿತವರ್ಗವಿಲ್ಲದೆ ಈ ಆದರ್ಶಗಳು ವಾಸ್ತವಕ್ಕೆ ಬರುವುದಿಲ್ಲ. ವಿಶ್ವವಿದ್ಯಾಲಯಗಳು ಸಂಸ್ಥೆಗಳಾಗಿ ಸಾಮಾಜಿಕ ಮತ್ತು ಬೌದ್ಧಿಕ ಬದ್ಧತೆಗಳಿಗೆ ಒಂದು ನಿರ್ದಿಷ್ಟ ಅಭಿವ್ಯಕ್ತಿಯನ್ನು ಒದಗಿಸುತ್ತವೆ. ಅದರ ಕೆಲಸ ಸಂವಾದ ಮತ್ತು ಭಿನ್ನಮತಗಳಿಗೆ ಅವಕಾಶ ಕಲ್ಪಿಸುವುದು ಮಾತ್ರವಲ್ಲ ಬದಲಿಗೆ ಭಿನ್ನಮತವನ್ನು ಸಾರ್ವತ್ರೀಕರಿಸುವುದೂ ಆಗಿರುತ್ತದೆ. ವಿಶ್ವವಿದ್ಯಾಲಯಗಳು ವಿದ್ವತ್ತಿನ ಉತ್ಕೃಷ್ಟತೆ ಹಾಗೂ ಸಾಮಾಜಿಕ ಪ್ರಜಾತಂತ್ರ ಮತ್ತು ಅಂತಹ ಭರವಸೆಗಳ ಸಾರ್ವತ್ರಿಕ ಪ್ರತಿಪಾದನೆಗಳಂತಹ ಎರಡೂ ವಿಷಯಗಳಲ್ಲೂ ಸಾರ್ವತ್ರಿಕತೆಯನ್ನು ಕಾಪಾಡುವುದಕ್ಕಾಗಿ ವಿಶ್ವವಿದ್ಯಾಲಯಗಳಲ್ಲಿ ಭಿನ್ನಮತದ ಧ್ವನಿಯನ್ನು ಹಾಗೂ ಸಂವಾದದ ಸ್ಪೂರ್ತಿಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ಇಂಥ ಭರವಸೆಗಳನ್ನು ದಮನಿಸುವ ಯಾವುದೇ ಪ್ರಯತ್ನಗಳು ಸರ್ವಮಾನ್ಯವಾದ ಪ್ರತಿಭಟನೆಗಳಿಗೆ ದಾರಿ ಮಾಡಿಕೊಡುತ್ತದೆ. ಸೌಲಭ್ಯ ವಂಚಿತ ಸಾಮಾಜಿಕ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಒದಗಿಸಬೇಕಾದ ಜವಾಬ್ದಾರಿ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗಿದೆ. ಅಂತಹ ವಿಶ್ವವಿದ್ಯಾನಿಲಯಗಳು ಅವಕಾಶಗಳನ್ನು ಆಸ್ತಿಗಳನ್ನಾಗಿ ಮಾಡಿಕೊಳ್ಳಬಲ್ಲ ಅವಕಾಶಗಳನ್ನು ಸೌಲಭ್ಯವಂಚಿತ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. ಜಗತ್ತಿನ ಹಲವಾರು ದೇಶಗಳಲ್ಲೂ ಆಗಿರುವುದು ಇದೇ. ಅವರ ಆಶೋತ್ತರಗಳನ್ನು ಪ್ರಭುತ್ವವು ಉದಾಸೀನ ಮಾಡಲಾಗದು. ಪ್ರಭುತ್ವವು ವಿದ್ಯಾರ್ಥಿ ಸಮುದಾಯವನ್ನು ಜಾಗರೂಕವಾಗಿ ನಿಭಾಯಿಸಬೇಕಿರುತ್ತದೆ. ಸಂಕುಚಿತ ಸೈಧಾಂತಿಕ ಧೋರಣೆಗಳಿಗಿಂತ ಮೇಲೆ ನಿಲ್ಲಬೇಕಾದ ಪ್ರಭುತ್ವವು ಶೈಕ್ಷಣಿಕ ಸಂಸ್ಥೆಗಳ ಬೌಧಿಕ ಕಲ್ಯಾಣಕ್ಕೆ ಬದ್ಧಾರಗಿರಬೇಕು ಮತ್ತು ಒಂದು ಜೀವಂತ ಮಾದರಿಯಾಗಿರುವ ವಿಶ್ವವಿದ್ಯಾಲಯಕ್ಕೆ ಬೆಂಬಲ ನೀಡಬೇಕೆ ವಿನಾ ಅದನ್ನು ಬುಡಮೇಲುಗೊಳಿಸಲು ಪ್ರಯತ್ನಿಸಬಾರದು. ನೈತಿಕವಾಗಿ ಸಂವೇದನಾಶೀಲವಾದ ಪ್ರಭುತ್ವ ಹಾಗೂ ವಿಶ್ವವಿದ್ಯಾಲಯದ ಆಡಳಿತ ವರ್ಗವು ವಿದ್ಯಾರ್ಥಿಗಳನ್ನು ಪ್ರಭುತ್ವದ ಅಥವಾ ದೇಶದ ಶತ್ರುಗಳೆಂದು ಪರಿಗಣಿಸಬಾರದು. ಅಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅತಿಯಾಗಿ ಮಧ್ಯಪ್ರವೇಶ ಮಾಡುವುದು ಅಥವಾ ತೀವ್ರವಾದ ಹಾಗೂ ದ್ವೇಶಪೂರಿತ ವೈರತ್ವವನ್ನು ಸಾಧಿಸುವುದು ಒಂದು ವಿಶ್ವವಿದ್ಯಾಲಯದ ಆಲೋಚನೆಯ ಹಿಂದಿನ ಸಾಮಾಜಿಕ ಮತ್ತು ಬೌಧಿಕ ಉದ್ದಿಶ್ಯವನ್ನೇ ಹಾಳುಗೆಡವುತ್ತದೆ. ಒಂದು ವಿಶ್ವವಿದ್ಯಾಲಯದಲ್ಲಿ ನಡೆಯುವ ದಮನವು ಇತರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಸುಮ್ಮನಾಗಿಸಿಬಿಡಬಹುದು. ನಾಗರಿಕ ಸಮಾಜದ ಸದಸ್ಯರು ವಿಶ್ವವಿದ್ಯಾಲಯದ ಮಹತ್ವವನ್ನು ಅರಿತುಕೊಳ್ಳಬೇಕಿದೆ. 

ಪ್ರಭುತ್ವದಿಂದ ಅನುದಾನ ಪಡೆಯುವ ಸಾರ್ವಜನಿಕ ವಿಶ್ವವಿದ್ಯಾಲಯಗಳು ವಿದ್ವತ್ತಿನ ಸಾಮಾಜಿಕ ತಳಹದಿಯನ್ನು ವಿಸ್ತರಿಸುವ ಜವಾಬ್ದಾರಿಯನ್ನು ಹೊಂದಿರುತ್ತವೆ. ಆ ವಿದ್ವತ್ತು ಆಕ್ರಮಣಕಾರಿ ಸಾಮಾಜಿಕತೆಯನ್ನು ಪ್ರಚ್ಚನ್ನ ಮಾನವೀಯತೆಯೊಂದಿಗೆ ಸಮವಾಗಿ ಬೆಸೆಯಬೇಕಿರುತ್ತದೆ. ವಿಶ್ವವಿದ್ಯಾಲಯವೆಂಬ ಆಲೋಚನೆಯೇ ಒಂದು ದೇಶದ ಬೌದ್ಧಿಕ ಎತ್ತರವನ್ನು ಅಳೆಯುವ ಮಾನದಂಡವೂ ಆಗಿರುತ್ತದೆ. ಹಾಗಿದ್ದ ಪಕ್ಷದಲ್ಲಿ, ಸುಳ್ಳು ಪ್ರಚಾರಗಳ ಮೂಲಕ ಒಂದು ವಿಶ್ವವಿದ್ಯಾಲಯದ ಪ್ರತಿಷ್ಟೆಯನ್ನು ಹಾಳುಗೆಡವುದು ಆತ್ಮಹತ್ಯಾಕರ ಅಥವಾ ದುರದೃಷ್ಟಕರ. ಒಂದು ದೇಶದ ನೈತಿಕ, ಸಾಂಸ್ಕೃತಿಕ ಮತ್ತು ಬೌದ್ಧಿಕ ಎತ್ತರಗಳು ಆ ದೇಶದ ಚಿಂತನಾಶೀಲತೆಯು ಆಳಗೊಳ್ಳುವುದನ್ನೇ ಅವಲಂಬಿಸಿರುತ್ತದೆ ಎಂಬುದನ್ನು ಅತ್ಯಂತ ತುರ್ತಾಗಿ ಅರ್ಥಮಾಡಿಕೊಳ್ಳಬೇಕಿದೆ. ಮತ್ತು ಆ ಗುರಿಯನ್ನು ತಲುಪಲು ವಿಶ್ವವಿದ್ಯಾಲಯಗಳು ಪ್ರಾಥಮಿಕ ಮೂಲಗಳಾಗಿವೆ. ದೇದಲ್ಲಿ ಮತ್ತು ಹೊರದೇಶಗಳಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವವರು ಈ ಅಂಶವನ್ನು ಅರಿತಿದ್ದಾರೆ. ಆದ್ದರಿಂದಲೇ ಸಾರ್ವಜನಿಕ ಸಂಸ್ಥೆಗಳನ್ನು ನಾಶ ಮಾಡಲು ಹೊರಟಿರುವವರು ವಿಶ್ವವಿದ್ಯಾಲಯಗಳಲ್ಲಿ ಸೃಷ್ಟಿಸಿರುವ ರಾಜಕೀಯ ತಳಮಳಗಳ ವಿರುದ್ಧವಾಗಿ  ವಿಶ್ವವಿದ್ಯಾಲಯಗಳನ್ನು ರಕ್ಷಿಸಬೇಕೆಂಬ ಚಳವಳಿಗಳು ತೀವ್ರಗೊಳ್ಳುತ್ತಿವೆ.

                                                                                                               

Back to Top