ISSN (Print) - 0012-9976 | ISSN (Online) - 2349-8846

ದೂರದೃಷ್ಟಿಯಿಲ್ಲದ ಕೃಷಿ ಸಾಲ ಮನ್ನಾಗಳು

ಆಳವಾಗಿ ಬೇರುಬಿಟ್ಟಿರುವ ಕೃಷಿ ಬಿಕ್ಕಟ್ಟಿಗೆ ಪರಿಣಾಮಕಾರಿ ದೀರ್ಘಕಾಲೀನ ಪರಿಹಾರಗಳ ಅಗತ್ಯವಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಭಾರತದ ಕೃಷಿ ಬಿಕ್ಕಟ್ಟು ರಾಜಕೀಯಕರಣಗೊಂಡು ಚುನಾವಣಾ ಉದ್ದಿಶ್ಯಗಳೊಂದಿಗೆ ಬೆರೆತುಹೋಗಿರುವುದರಿಂದ ಕೃಷಿ ಸಾಲ ಮನ್ನಾ ಎನ್ನುವುದು ಕೃಷಿ ಬಿಕ್ಕಟ್ಟನು ಎದುರಿಸಲು ಸರ್ಕಾರಗಳು ಕಂಡುಕೊಂಡಿರುವ  ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿಟ್ಟಿದೆ. ಹೆಚ್ಚುತ್ತಿರುವ ಸಾಲದ ಹೊರೆಯನ್ನು ನಿಭಾಯಿಸುವ ಸಲುವಾಗಿ ಕೃಷಿ ಸಲ ಮನ್ನಾವನ್ನು ಆಗ್ರಹಿಸುತ್ತಿದ್ದರೂ,  ಬೆಲೆಗಳಲ್ಲಿರುವ ವೈಪರೀತ್ಯಗಳ ಕಾರಣದಿಂದ ಸಾಲದ ಕೂಪಕ್ಕೆ ಬೀಳುವ ಸಾಧ್ಯತೆ ಇನ್ನೂ ಹೆಚಿದೆ. ಹೀಗಾಗಿ ರೈತಾಪಿಯು ಸ್ಥಿರ ಮತ್ತು ಲಾಭದಾಯಕ ಬೆಲೆಯನ್ನು ಒದಗಿಸಲು ಸೂಕ್ತವಾದ ವ್ಯವಸ್ಥೆಯನ್ನು ರೂಪಿಸಬೇಕೆಂದೂ ಆಗ್ರಹಿಸುತ್ತಾ ಬಂದಿದ್ದಾರೆ. ಈ ಪರಿಸ್ಥಿತಿಯು ಹವಾಮಾನ ವೈಪರೀತ್ಯಗಳಿಂದ ಇನ್ನಷ್ಟು ಬಿಗಡಾಯಿಸುತ್ತಿದೆ.

ಮಹಾರಾಷ್ಟ್ರದ ಮಹಾ ವಿಕಾಸ್ ಅಗಾಧಿ ಸರ್ಕಾರವು ೨೦೧೫ರ ಮಾರ್ಚ್ ೧ ರಿಂದ ೨೦೧೯ರ ಸೆಪ್ಟೆಂಬರ್ ೩೦ರ ನಡುವೆ ರೈತರು ಮಾಡಿರುವ ೨ ಲಕ್ಷದ ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವ ಸಲುವಾU ಘೋಷಿಸಿರುವ ಮಹಾತ್ಮ ಜ್ಯೋತಿರಾವ್ ಫುಲೆ ಕೃಷಿ ಸಾಲ ಮನ್ನಾ ಯೋಜನೆಯು ಈ ನಿಟ್ಟಿನಲ್ಲಿ ಒಂದು ಹೊಸ ಸೇರ್ಪಡೆಯಾಗಿದೆ. ಕೇವಲ ೩-೬ ತಿಂಗಳೊಳಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಬಹುದೆಂದು ಮಹಾರಾಷ್ಟ್ರ ಸರ್ಕಾರವು ನಿರೀಕ್ಷೆಯನ್ನಿಟ್ಟುಕೊಂಡಿದೆ. ಈ ಹಿಂzನ ಸರ್ಕಾರವು ಸಹ ರೈತರು ರಾಜ್ಯವ್ಯಾಪಿ ಹೋರಾಟಗಳನ್ನು ನಡೆಸಿದ ನಂತರ ೨೦೧೭ರ ಜೂನ್‌ನಲ್ಲಿ ೮೯ ಲಕ್ಷ ರೈತಾಪಿಗಳಿಗೆ ಪರಿಹಾರ ಕೊಡುವ ಅಂದಾಜು ೩೪,೦೪೪ ಕೋಟಿ ರೂ.ಗಳಷ್ಟು ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿತ್ತು. ಆದರೆ ಸಾಲ ಮನ್ನಾ ಪಡೆದುಕೊಳ್ಳಲು ರೂಪಿಸಲಾಗಿದ್ದ ಸಂಕೀರ್ಣ ಅರ್ಹತಾ ಮಾನದಂಡಗಳು, ತ್ರಾಸದಾಯಕ ಆನ್‌ಲೈನ್ ಪ್ರPಯೆಗಳು ಮತ್ತು ಸರ್ಕಾರದಿಂದ ಬ್ಯಾಂಕುಗಳಿಗೆ ಹಣ ಪಾವತಿ ಮಾಡುವಲ್ಲಿ ಏರ್ಪಟ್ಟ್ ಏರುಪೇರುಗಳಿಂದಾಗಿ ಈ ಯೋಜನೆಯ ಅನುಷ್ಠಾನದಲ್ಲಿ ತೊಡಕುಗಳುಂಟಾಯಿತು.

ಈ ಅಂಶಗಳಿಂದಾಗಿ ಸಾಲ ಮನ್ನಾ ಸೌಲಭ್ಯವನ್ನು ಪಡೆದುಕೊಳ್ಳುವುದು ಅತ್ಯಂತ ಕಷ್ಟದಾಯಕವಾಗಿತ್ತು. ತಳಮಟ್ಟದಲ್ಲಿ ನಡೆದ ಅಧ್ಯಯನಗಳ ಪ್ರಕಾರ ಸಾಲ ಮನ್ನಾಗಳು ತತ್‌ಕ್ಷಣದ ಗಾಯಕ್ಕೆ ಔಷಧಿಯನ್ನು ಹಚ್ಚಿದರೂ ಹೆಚ್ಚಿನ ಲಾಭವನ್ನೇನೂ ಒದಗಿಸುವುದಿಲ್ಲ. ಆದ್ದರಿಂದ ಈ ವಿಷಯದಲ್ಲಿ ಸರಿಯಾದ ಯೋಜನಾತ್ಮಕ ಅರಿವು ಮತ್ತು ನಿಖರ ಗುರಿ ಇರುವ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಅದಕ್ಕಾಗಿ ಸಾಂಸ್ಥಿಕ ಹಾಗೂ ಅನೌಪಚಾರಿಕ ಸಾಲಗಳೆಲ್ಲವನ್ನು ಒಳಗೊಳ್ಳುವ ಹಾಗೂ ಅತಿ ಸಣ್ಣ, ಸಣ್ಣ ಮಧ್ಯಮ ರೈತರೆಲ್ಲರನ್ನೂ ಸಾರ್ವತ್ರಿಕವಾಗಿ ಒಳಗೊಳ್ಳುವಂತೆ ಎಚ್ಚರಿಕೆಯಿಂದ ರೂಪಿಸಲಾದ ಯೋಜನೆಗಳ ಸರಿಯಾದ ಅನುಷ್ಠಾನದ ಅಗತ್ಯವಿದೆ. ೨೦೦೬ರಿಂದ ಕೇರಳದಲ್ಲಿ ಚಾಲ್ತಿಯಲ್ಲಿರುವ ಕೇರಳ ರಾಜ್ಯ ರೈತರ ಸಾಲ ಮನ್ನಾ ಅಯೋಗದ ಮಾದರಿಯನ್ನು ಒಂದು ಸಮಗ್ರ ಹಾಗೂ ಒಳಗೊಳ್ಳುವ ಸಾಲ ಮನ್ನಾ ಯೋಜನೆಯನ್ನು ರೂಪಿಸಲು ಪರಿಗಣಿಸಬಹುದಾಗಿದೆ. ಕೃಷಿ ಪರಿಣಿತರು, ರೈತ ಪ್ರತಿನಿಧಿಗಳು ಮತ್ತು ಮಾಜಿ ನ್ಯಾಯಾಧೀಶರನ್ನೊಳಗೊಂಡ ಈ ಶಾಶ್ವತ ಅಯೋಗವು ರೈತ ಮತ್ತು ಅವರಿಗೆ ಸಾಲ ನೀಡಿದವರ ನಡುವಿನ ಸಾಲ ಹೊಣೆಗಾರಿಕೆಯನ್ನು ಪುನರ್ ರೂಪಿಸಲು ಪ್ರತಿಯೊಬ್ಬ ರೈvನ ಅರ್ಜಿಯನ್ನು ಪ್ರತ್ಯೇಕವಾಗಿ ಪರಿಗಣಿಸುತ್ತದೆ. ಅಂತಹ ಒಂದು ಶಾಶ್ವತ ಅಯೋಗದ ಲಾಭವೇನೆಂದರೆ ರೈತರಿಗೆ ದೊರಕುವ ಬೆಂಬಲಕ್ಕೂ ಹಾಗೂ ಚುನಾವಣಾ ವರ್ತುಲಗಳಿಗೂ ಇದ್ದ ಸಂಬಂಧ ಕಡಿಯುತ್ತದೆ.

ಆದರೆ ಕೃಷಿರಂಗದಲ್ಲಿ ಸುದೀರ್ಘವಾಗಿ ಬೆಳೆಯುತ್ತಾ ಬಂದಿರುವ ಬಿಕ್ಕಟ್ಟಿನ ಪರಿಣಾಮವಾಗಿರುವ ಆಳವಾಗಿರುವ ಕೃಷಿ ಬಿಕ್ಕಟ್ಟನ್ನು ಬಗೆಹರಿಸಲು ನಿರಂತರವಾದ ಮತ್ತು ದೂರಗಾಮಿಯಾದ ಮಧ್ಯಪ್ರವೇಶಗಳ ಅಗತ್ಯವಿದೆ. ಮೂಲಭೂತ ಬದಲಾವಣೆಗಳಾಗದಿದ್ದರೆ ಪದೇಪದೇ ಈ ಬಿಕ್ಕಟ್ಟು ಪುನರಾವರ್ತನೆಯಾಗುತ್ತಲೇ ಇರುತ್ತದೆ. ಏಕೆಂದರೆ ಸಾಲ ಮನ್ನಾಗಳು ಹೆಚ್ಚುತ್ತಿರುವ ಹೂಡಿಕಾ ವೆಚ್ಚಗಳ ಹಾಗೂ ಬೆಳೆಗಳ ಬೆಲೆ ಇಳಿಕೆಯಿಂದಾಗಿ ಕುಸಿಯುತ್ತಲೇ ಹೋಗುವ ಆದಾಯದ ಸಮಸ್ಯೆಯನ್ನೇನೂ ಬಗೆಹರಿಸುವುದಿಲ್ಲ. ವಾಸ್ತವವಾಗಿ ಕೃಷಿ ಬಿಕ್ಕಟ್ಟಿಗೆ ಪ್ರಧಾನ ಕಾರಣ ಇದೇ ಆಗಿದೆ. ತಳಮಟ್ಟದ ಅಧ್ಯಯನಗಳ ಪ್ರಕಾರ ಸಾಲ ಮನ್ನಾಗಳು ಪ್ರಧಾನವಾಗಿ ಸಾಂಸ್ಥಿಕ ಸಾಲ ಪಡೆದುಕೊಂಡವರಿಗೆ ಹಾಗೂ ಇದ್ದಿದ್ದರಲ್ಲಿ ಸುಸ್ಥಿತಿಯಲ್ಲಿರುವ ರೈತಾಪಿಗಳಿಗೆ ಹೆಚ್ಚಾಗಿ ದೊರಕುತ್ತದೆ. ಹೀಗಾಗಿ ಪದೇಪದೇ ನಡೆಯುವ ಸಾಲ ಮನ್ನಾಗಳು ಒಂದೆಡೆ ಹೆಚ್ಚು ಅಗತ್ಯವಿರುವವರಿಗೆ ದಕ್ಕದೇ ಹೋಗುವುದು ಮಾತ್ರವಲ್ಲದೆ ಗ್ರಾಮೀಣ ಸಾಲ ನೀಡಿಕೆ ವ್ಯವಸ್ಥೆಯನ್ನೇ ಏರುಪೇರುಗೊಳಿಸುತ್ತದೆ. ಹಾಗೂ ಈಗಾಗಲೇ ವಾಪಸ್ ಆಗದ ಸಾಲದ ಸಮಸ್ಯೆಯಿಂದ ಹೈರಾಣಾಗಿರುವ ಬ್ಯಾಂಕುಗಳ ಮೇಲೂ ಹಾನಿಕಾರಕ ಪ್ರಭಾವವನ್ನೂ ಬೀರುತ್ತದೆ. ಮೇಲಾಗಿ ಸಾಲ ಮನ್ನಾಗಳು ಸರ್ಕಾರದ ಹಣಕಾಸು ಸಂಪನ್ಮೂಲಗಳನ್ನು ಬರಿದಾಗಿಸಿ ಕೃಷಿಯಲ್ಲಿ ಸಾರ್ವಜನಿಕ ಹೂಡಿಕೆಯ ಪ್ರಮಾಣವನ್ನು ಕಡಿತಗೊಳಿಸುತ್ತದೆ. ಹೀಗಾಗಿ ದೂರದೃಷ್ಟಿಯಿಂದ ನೋಡಿದರೆ ಇದು ಹೆಚ್ಚು ಕಾಲ  ಮುಂದುವರೆಯಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಕೇಳಬೇಕಿರುವ ಸೂಕ್ತವಾದ ಪ್ರಶ್ನೆಯೇನೆಂದರೆ ಬರ, ಹೆಚ್ಚುತ್ತಿರುವ ಒಳಸುರಿ ವೆಚ್ಚಗಳು, ಅಸಮರ್ಪಕ ಬೆಲೆ ಮತ್ತು ಕುಸಿಯುತ್ತಿರುವ ಆದಾಯಗಳಿಂದಾಗಿ ಸೃಷ್ಟಿಯಾಗಿರುವ ಕೃಷಿ ಬಿಕ್ಕಟ್ಟನ್ನು ಸಾಲ ಮನ್ನಾಗಳು ಬಗೆಹರಿಸುತ್ತವೆಯೇ? ಹಣದುಬ್ಬರವನ್ನು ಕಡಿತಗೊಳಿಸಬೇಕೆಂಬ ಒತ್ತಿನಿಂದ ಉತ್ಪಾದಕನಿಗಿಂತ ಗ್ರಾಹಕನ ಮೇಲೆ ಹೆಚ್ಚು ಒತ್ತು ಕೊಡುವ ಹಣಕಾಸು ನೀತಿಯಿಂದಾಗಿಯೂ ಸಹ ಕೃಷಿ ಬಿಕ್ಕಟ್ಟು ಏರ್ಪಟ್ಟಿದೆ. ಕೃಷಿ ಪ್ರಕ್ರಿಯೆಗಳ ನಗದೀಕರಣ ಮತ್ತು ಯಾಂತ್ರೀಕರಣಗಳಿಂದಾಗಿ  ಮತ್ತು ಹಣಕಾಸು ಹಾಗೂ ತೋಟಗಾರಿಕಾ ಬೆಳಗಳ ಕಡೆಗೆ ಕೃಷಿಯು ಸ್ಥಿತ್ಯಂತರವಾಗುತ್ತಿರುವುದರಿಂದ ಮಾರುಕಟ್ಟೆ ಮತ್ತು ಸಂಗ್ರಹ ವ್ಯವಸ್ಥೆಗಳ ಮೇಲೆ ಹೆಚ್ಚು ಹೂಡಿಕೆಗಳು ಆಗಬೇಕಿತ್ತು. ಆದರೆ ರೈತರು ಬೆಲೆ ಏರಿಳಿಕೆಗಳಿಗೆ ಬಲಿಯಾಗಿ ಹೆಚ್ಚೆಚ್ಚು ಸಾಲದ ಕೂಪಕ್ಕೆ ಬೀಳುತ್ತಿದ್ದಾರೆ. ಕೃಷಿ ಸರಕುಗಳ ಬೆಲೆ ಕುಸಿತ ಮತ್ತು ಹೆಚ್ಚುತ್ತಿರುವ ಬೆಲೆ ವೈಪರೀತ್ಯಗಳು ಕೃಷಿ ಬಿಕ್ಕಟ್ಟನ್ನು ಮತ್ತಷ್ಟು ಗಂಭೀರವಾಗಿಸಿವೆ.

ಆದರೆ ಒದಗಿಸಲಾಗುತ್ತಿರುವ ತುರ್ತು ಪರಿಹಾರಗಳು ಕೇವಲ ತಾತ್ಕಾಲಿಕ ಸ್ವರೂಪದ್ದಾಗಿದ್ದು ಬಿಕ್ಕಟ್ಟಿನ ಮೂಲ ಕಾರಣಗಳನ್ನು ನಿವಾರಿಸುವುದಿಲ್ಲ. ಆದಾಯಗಳಲ್ಲಿ ಸ್ಥಗಿತತೆ ಮತ್ತು ಕೃಷಿ ಉತ್ಪಾದನೆಯಲ್ಲಿ ಇಳಿಕೆಗಳು ಗ್ರಾಮೀಣ ಬಿಕ್ಕಟ್ಟಿನ ಗುಣಲಕ್ಷಣಗಳಾಗಿದ್ದು ಕೃಷಿಯೇತರ ವಲಯವನ್ನೂ ಒಳಗೊಂಡಂತೆ ಇಡೀ ಗ್ರಾಮೀಣ ಆರ್ಥಿಕತೆ ಭಾರೀ ಬೇಡಿಕೆ ಕುಸಿತದ ಪರಿಣಾಮಗಳನ್ನು ಎದುರಿಸುತ್ತಿದೆ. ಅಸಂಘಟಿತ ಕ್ಷೇತ್ರದಲ್ಲಿನ ಇಳಿಕೆಯು ಹೆಚ್ಚುತ್ತಿರುವ ನಿರುದ್ಯೋಗಳಿಗೆ ಮತ್ತು ಗ್ರಾಮೀಣ ಬೇಡಿಕೆಯ ಕುಸಿತಕ್ಕೆ ಕಾರಣವಾಗಿದೆ.

ಈ ಬಿಕ್ಕಟ್ಟನ್ನು ಬಗೆಹರಿಸಬೇಕೆಂದರೆ ಉತ್ಪಾದಕತೆಯನ್ನು ಹೆಚ್ಚಿಸುವ, ಒಳಸುರಿ ವೆಚ್ಚ ಹಾಗೂ ಬೇಸಾಯ ವೆಚ್ಚವನ್ನು ಕಡಿಮೆ ಮಾಡುವ, ಸ್ವಾಮಿನಾಥನ್ ಅಯೋಗದ ಶಿಫಾರಸ್ಸಿನಂತೆ ಲಾಭದಾಯಕ ಬೆಲೆಗಳನ್ನು ಒದಗಿಸುವ, ಬೆಳೆದದ್ದನ್ನು ಕೊಂಡುಕೊಳ್ಳುವ ಖಾತರಿಯನ್ನು ನೀಡುವ, ಭೂ ಹಿಡುವಳಿಯ ಗಾತ್ರ ಛಿದ್ರೀಕರಣವಾಗದ, ಸಾಂಸ್ಥಿಕ ಸಾಲ ಸೌಲಭ್ಯಗಳನ್ನು ವಿಸ್ತರಿಸುವ, ಕೃಷಿ ಮೂಲ ಸೌಕರ್ಯಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವ, ಪರಿಣಾಮಕಾರಿ ಬೆಳೆ ವಿಮಾ ಯೋಜನೆಗಳನ್ನು ನೀಡುವ, ಮತ್ತು ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ನೀತಿಗಳ ಅಗತ್ಯವಿದೆ. ಈ ಮೂಲಭೂತವಾದ ಅಂಶಗಳನ್ನು ಎಲ್ಲಾ ಸರ್ಕಾರಗಳೂ ಕಡೆಗಣಿಸಿವೆ. ಉತ್ತಮ ತಂತ್ರಜ್ನಾನದ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗಿಸುವಂತಹ ಹೂಡಿಕೆಯನ್ನು ಮಾಡುವುದು, ಸಂಶೋಧನೆ ಮತ್ತು ವಿಸ್ತರಣೆ ಕಾರ್ಯಕ್ರಮಗಳು ಮತ್ತು ಸಂಗ್ರಹ ಹಾಗೂ ದಾಸ್ತಾನು ಸೌಕರ್ಯಗಳ ಅಗತ್ಯವೂ ಹೆಚ್ಚಿದೆ. ಎಲ್ಲಕ್ಕಿಂತ ಹೆಚ್ಚಾಗಿ, ರೈತಾಪಿಗಳ ಹಿತಾಸಕ್ತಿಗೆ ವಿರುದ್ಧವಾಗಿ ಮಾರುಕಟ್ಟೆ ಶಕ್ತಿಗಳು ತಮ್ಮತಮ್ಮೊಳಗೆ ಒಟ್ಟು ಒಪ್ಪಂದವನ್ನು ಮಾಡಿಕೊಳ್ಳುವುದನ್ನು ತಡೆಗಟ್ಟುವಂತ ಮಾರುಕಟ್ಟೆ ಸುಧಾರಣೆಗಳೂ ಹಾಗೂ ಒಂದು ಸ್ಥಿರವಾದ ರಫ್ತು-ಆಮದು ನೀತಿಗಳೂ ಸಹ ಅಗತ್ಯವಾಗಿವೆ.

Back to Top