ISSN (Print) - 0012-9976 | ISSN (Online) - 2349-8846

ಆದಿವಾಸಿಗಳ ಭೂಮಿಯನ್ನು ಒತ್ತುವರಿ ಮಾಡುತ್ತಿರುವವರು ಯಾರು?

ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಬಗೆಗಿನ ನಮ್ಮ ಈವರೆಗಿನ ತಿಳವಳಿಕೆ ಮತ್ತು ಕಾರ್ಯವಿಧಾನಗಳನ್ನು ಗಂಭೀರವಾಗಿ ಮರುಪರಿಶೀಲನೆ ಮಾಡಬೇಕಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಯುಪಿಎ ಸರ್ಕಾರವು ೨೦೦೬ರಲ್ಲಿ ಜಾರಿಗೆ ತಂದ ಪರಿಶಿಷ್ಟ ಪಂಗಡ ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳು (ಅರಣ್ಯಹಕ್ಕುಗಳ ಮಾನ್ಯೀಕರಣ) ಕಾಯಿದೆ ಅಥವಾ ಸಂಕ್ಷಿಪ್ತವಾಗಿ ಹೇಳುವುದಾದರೆ ಅರಣ್ಯ ಹಕ್ಕುಗಳ ಕಾಯಿದೆ (ಶೆಡ್ಯೂಲ್ದ್ ಟ್ರಬ್ಸ್ ಅಂಡ್ ಅದರ್ ಟ್ರಡಿಷನಲ್ ಫಾರೆಸ್ಟ್ ಡ್ವೆಲ್ಲರ್ಸ್(ರೆಕಾಗ್ನಿಷನ್ ಆಫ್ ಫಾರೆಸ್ಟ್ ರೈಟ್ಸ್ ಆಕ್ತ್)-೨೦೦೬)ಯ ಉದ್ದೇಶವೇ ಆ ಬುಡಕಟ್ಟು ಗುಂಪುಗಳು ಶತಮಾನಗಳಿಂದ ಅನುಭವಿಸಿಕೊಂಡು ಬಂದಿದ್ದ ಚಾರಿತ್ರಿಕ ಅನ್ಯಾಯಗಳನ್ನು ಸರಿಪಡಿಸುವುದಾಗಿತ್ತು. ಆದರೆ ಇದೀಗ ಯಾವ್ಯಾವ ಬುಡಕಟ್ಟು ಮತ್ತು ಇತರ ಅರಣ್ಯವಾಸಿಗಳು ಹಕ್ಕುಗಳು ತಿರಸ್ಕರಿಸಲ್ಪಟ್ಟಿವೆಯೋ ಅಂತವರನ್ನೆಲ್ಲಾ ಅರಣ್ಯದಿಂದ ಹೊರಹಾಕಬೇಕೆಂಬ ಸುಪ್ರೀಂ ಕೋರ್ಟಿನ ಇತ್ತೀಚಿನ ಆದೇಶವು ಈ ಅರಣ್ಯವಾಸಿಗಳ ಹಕ್ಕುಗಳನ್ನೇ ಕಿತ್ತುಕೊಂಡು ಅಪಾಯಕ್ಕೀಡುಮಾಡಿದೆ. ಈ ಆದೇಶವು ೧೬ ರಾಜ್ಯಗಳ ೧೦ ಲಕ್ಷಕ್ಕೂ ಹೆಚ್ಚು ಕುಟುಂಬಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿದೆ. ಹಲವಾರು ರಾಜ್ಯಗಳು ಸುಪ್ರೀಂ ಕೋರ್ಟಿಗೆ ಇನ್ನೂ ತಮ್ಮ ವರದಿಯನ್ನು ಸಲ್ಲಿಸದಿರುವುದರಿಂದ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇದು ಅರಣ್ಯ ಹಕ್ಕುಗಳ ಕಾಯಿದೆಯ ಸಿಂಧುತ್ವವನ್ನೇ ಪ್ರಶ್ನಿಸಿ ವೈಲ್ಡ್ ಲೈಫ್ ಫರ್ಸ್ಟ್ ಎಂಬ ಸರ್ಕಾರೇತರ ಸಂಘಟನೆ (ಎನ್‌ಜಿಒ)ಮತ್ತು ಹಲವು ನಿವೃತ್ತ ಅರಣ್ಯಾಧಿಕಾರಿಗಳು ಸಲ್ಲಿಸಿದ್ದ ದಾವೆಯ ಪ್ರಕರಣದಲ್ಲಿ ನೀಡಿದ ಆದೇಶವಾಗಿದೆ. ಈ ಸಂಚಿಕೆಯು ಅಚ್ಚಿಗೆ ಹೋಗುವ ವೇಳೆಗೆ ಸುಪ್ರೀಂ ಕೋರ್ಟು ತನ್ನ ಆದೇಶಕ್ಕೆ ತಡೆ ನೀಡಿದೆಯಲ್ಲದೆ ಆದಿವಾಸಿಗಳ ಹಕ್ಕು ಪ್ರತಿಪಾದನೆಯನ್ನು ತಿರಸ್ಕರಿಸುವಾಗ ರಾಜ್ಯಗಳು ಅನುಸರಿಸಿದ ವಿಧಾನಗಳ ಬಗ್ಗೆ ವರದಿಯನ್ನು ಸಲ್ಲಿಸಬೇಕೆಂದು ಎಲ್ಲಾ ರಾಜ್ಯಗಳಿಗೆ ಸೂಚನೆಯನ್ನು ನೀಡಿದೆ. ಆದರೆ ಇದು ಒದಗಿಸಿರುವ ನಿರಾಳವು ಕೇವಲ ತಾತ್ಕಾಲಿಕವಾಗಿದೆ. 

ಅರಣ್ಯವಾಸಿಗಳನ್ನು ಅವರ ಪಾರಂಪರಿಕ ಹಾಗೂ ತಲೆತಲಾಂತರಗಳಿಂದ ಬದುಕಿರುವ ವಾಸಸ್ಥಾನಗಳಿಂದ ಒಕ್ಕಲೆಬ್ಬಿಸಬೇಕೆಂದು ಸುಪ್ರೀಂ ಕೋರ್ಟು ಆದೇಶ ನೀಡುತ್ತಿರುವುದು ಇದೇ ಮೊದಲಲ್ಲ. ಅದು ೨೦೦೨ ಮತ್ತು ೨೦೦೪ರಲ್ಲೂ ಸಹ ಇದೇ ಬಗೆಯ ದಾವೆಗಳಲ್ಲಿ ದೇಶಾದ್ಯಂತ ಅರಣ್ಯವಾಸಿಗಳ ಎತ್ತಂಗಡಿಗೆ ಆದೆಶವನ್ನು ನೀಡಿತ್ತು. ಈ ಆದೇಶವು ಚಾಲನೆ ನೀಡಿದ ಪ್ರಕ್ರಿಯೆಯು ಹಿಂಸೆ, ಸಾವು, ಪ್ರತಿಭಟನೆಗಳಿಂದ ಕೂಡಿತ್ತಲ್ಲದೆ ಮೂರು ಲಕ್ಷಕ್ಕೂ ಹೆಚ್ಚು ಅರಣ್ಯವಾಸಿಗಳ ಎತ್ತಂಗಡಿಗೂ ಕಾರಣವಾಗಿತ್ತು. ಇತ್ತೀಚಿನ ಆದೇಶವೂ ಸಹ ಅರಣ್ಯವಾಸಿಗಳ ಬಗ್ಗೆ ಮತ್ತು ಅವರ ಬದುಕನ್ನು ಕಾಡುವ ಸಮಸ್ಯೆಗಳ ಬಗ್ಗೆ ಸರ್ಕಾರದ ತಿರಸ್ಕಾರದ ಧೋರಣೆ ಹೇಗಿದೆಯೆಂಬುದನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಒಂದು ವೇಳೆ ಈ ಪ್ರಕರಣದ ವಿಚಾರಣೆಯಲ್ಲಿ ಅರಣ್ಯವಾಸಿಗಳ ಹಿತಾಸಕ್ತಿಯನ್ನು ಪ್ರತಿನಿಧಿಸಲು ಸರ್ಕಾರಿ ವಕೀಲರು ಹಾಜರಿದ್ದಿದ್ದರೆ ಪ್ರಾಯಶಃ ಕೋರ್ಟಿನ ಆದೇಶವು ಇದಕ್ಕಿಂತ ಭಿನ್ನವಾಗಿರುತ್ತಿತ್ತು.

ಈ ಆದೇಶಕ್ಕೆ ಕಾರಣವಾದ ದಾವೆಯು ಅರಣ್ಯವಾಸಿಗಳೇ ಅರಣ್ಯನಾಶಕ್ಕೂ,  ರಕ್ಷಿತ ಪ್ರದೇಶಗಳನ್ನು ಒಳಗೊಂಡಂತೆ ಅರಣ್ಯ ಭೂಮಿಯ ಒತ್ತುವರಿಗೂ ಕಾರಣರಾಗಿದ್ದಾರೆ ಮತ್ತು  ಆ ಮೂಲಕ ವನ್ಯಜೀವಿಗಳ  ಬದುಕಿಗೆ ಕಂಟಕವಾಗಿದ್ದಾರೆ ಎಂದು ಆರೋಪಿಸುತ್ತದೆ. ಆದರೆ ಈ ಆದಿವಾಸಿಗಳು ಹಾಗೂ ಪರಂಪರಾನುಗತವಾಗಿ ಅರಣ್ಯದಲ್ಲೇ ವಾಸ ಮಾಡಿಕೊಂಡು ಬಂದಿರುವ ಇತರರು ಅರಣ್ಯವನ್ನು ಒತ್ತುವರಿ ಮಾಡುತ್ತಿದ್ದಾರೆ ಅಥವಾ ಕಾನೂನುಬಾಹಿರವಾಗಿ ಅರಣ್ಯಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬ ಆರೋಪದಲ್ಲಿ ನಿಜಕ್ಕೂ ಹುರುಳಿದೆಯೇ? ಈ ಹಿಂದೆ ವಸಾಹತು ಪ್ರಭುತ್ವವು ಈ ಅರಣ್ಯವಾಸಿಗಳ ಅರಣ್ಯ ನಿರ್ವಹಣೆ ಮತ್ತು ನಿಯಂತ್ರಣದ ಹಕ್ಕುಗಳನ್ನು ವಶಪಡಿಸಿಕೊಂಡಿತ್ತು. ಅದರಿಂದ ಅವರ ಹಕ್ಕುಗಳು ಅಲ್ಪಸ್ವಲ್ಪ ನಿಯಂತ್ರಣಕ್ಕೊಳಪಟ್ಟರೂ ಉಳಿದಂತೆ ಅವರ ಪಾರಂಪರಿಕ ಹಕ್ಕುಗಳು ಮುಕ್ಕಾಗಿರಲಿಲ್ಲ. ಆದರೆ ಸ್ವಾತಂತ್ರ್ಯಾ ನಂತರದಲ್ಲಿ ಜಾರಿ ಮಾಡಲಾದ ಹೊಸ ಅರಣ್ಯ ಕಾಯಿದೆಯು ಆದಿವಾಸಿಗಳು ಮತ್ತು ಇನ್ನಿತರ ಅರಣ್ಯವಾಸಿಗಳು ಅನುಭವಿಸಿಕೊಂಡುಬಂದಿದ್ದ ಹಕ್ಕುಗಳನ್ನೂ ಸಹ ಕಿತ್ತುಕೊಂಡಿತು. ಮುಂದೆ ದೇಶದ ಮೂರನೇ ಒಂದು ಭಾಗದಷ್ಟು ಭೂಭಾಗವನ್ನು ಅರಣ್ಯಕವಚದಡಿ ಉಳಿಸಿಕೊಳ್ಳಬೇಕೆಂಬ ನೀತಿಯನ್ನು ಅತ್ಯುತ್ಸಾಹದಿಂದ ಜಾರಿ ಮಾಡಬೇಕೆಂಬ ಭರದಲ್ಲಿ ಅರಣ್ಯ ಇಲಾಖೆಯು ಅರಣ್ಯವಾಸಿಗಳ ಭೂಮಿಯನ್ನು ಮಾತ್ರವಲ್ಲದೆ ಮರಗಳೇ ಇಲ್ಲದ ಭೂ ಭಾಗವನ್ನು ಅರಣ್ಯವೆಂದೇ ಪ್ರತಿಪಾದಿಸುತ್ತಾ ಅವೆಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಾರಂಭಿಸಿತು. ಆ ಮೂಲಕ ಸಾವಿರಾರು ಕಿಲೋಮೀಟರಿನಷ್ಟು ವಿಸ್ತಾರವಾದ ಅರಣ್ಯವಾಸಿಗಳ ಭೂಮಿಯನ್ನು ಅರಣ್ಯ ಇಲಾಖೆ ದೊಡ್ಡ ಮಟ್ಟದಲ್ಲಿ ಒತ್ತುವರಿ ಮಾಡಿಕೊಂಡಿತು. ನಂತರ ೧೯೭೨ರ ವನ್ಯಜೀವಿ ರಕ್ಷಣಾ ಕಾಯಿದೆ ಹಾಗೂ ೧೯೮೦ರ ಅರಣ್ಯ ಸಂರಕ್ಷಣಾ ಕಾಯಿದೆಗಳೂ ಸಹ ಆದಿವಾಸಿಗಳ ಭೂಮಿಯನ್ನು ಅತಿಕ್ರಮಿಸಿ ಒತ್ತುವರಿ ಮಾಡಿಕೊಂಡಿತು. ಹೀಗಾಗಿ ಅರಣ್ಯಭೂಮಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿರುವುದು ವಾಸ್ತವದಲ್ಲಿ ಪ್ರಭುತ್ವವೇ ಆಗಿದೆ.

ಆದ್ದರಿಂದ ಈಗ ಕೇಳಿಕೊಳ್ಳಬೇಕಿರುವ ಕೀಲಕವಾದ ಪ್ರಶ್ನೆಯೆಂದರೆ: ಅರಣ್ಯಭೂಮಿಯ ವಿಸ್ತಾರ ಕ್ರಮೇಣವಾಗಿ ಕಡಿಮೆಯಾಗುತ್ತಿರುವುದರ ಹೊರೆಯನ್ನು  ಆದಿವಾಸಿಗಳು ಮತ್ತಿತರ ಪಾರಂಪರಿಕ ಅರಣ್ಯವಾಸಿಗಳ ಮೇಲೆ ಹೊರಿಸಬಹುದೇ? ಸ್ವಾತಂತ್ರ್ಯಾ ನಂತರದಲ್ಲಿ ಆದಿವಾಸಿಗಳ ಭೂಮಿಯನ್ನು ಖನಿಜ ವಸ್ತುಗಳ ಗಣಿಗಾರಿಕೆಗಾಗಿ, ಕೈಗಾರಿಕೆಗ ಸ್ಥಾಪನೆಗಾಗಿ, ವಿದ್ಯುತ್ ಸ್ಥಾವರ, ಅಣೆಕಟ್ಟುಗಳು, ರಸ್ತೆ ನಿರ್ಮಾಣ ಹಾಗೂ ರಕ್ಷಣಾ ಸ್ಥಾವರಗಳ ನಿರ್ಮಾಣಕ್ಕಾಗಿ ಎಗ್ಗಿಲ್ಲದೆ ಬಳಸಿಕೊಂಡಿರುವುದರಿಂದ  ದೊಡ್ಡ ಮಟ್ಟದ ಅರಣ್ಯ ನಾಶವಾಗಿದೆಯಲ್ಲದೆ ಆದಿವಾಸಿಗಳನ್ನು ಹಾಗೂ ಮತ್ತಿತರ ಪಾರಂಪರಿಕ ಅರಣ್ಯವಾಸಿಗನ್ನು ಅವರ ಮೂಲಸ್ಥಾನದಿಂದ ಎತ್ತಂಗಡಿ ಕೂಡ ಮಾಡಲಾಗಿದೆ. ಉದಾರೀಕರಣದ ನಂತರ ಆದಿವಾಸಿ ಪ್ರದೇಶಗಳಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡಲು ಬಹುರಾಷ್ಟ್ರೀಯ ಕಂಪನಿಗಳನ್ನೂ ಒಳಗೊಂಡಂತೆ ದೊಡ್ಡ ದೊಡ್ಡ ಕಂಪನಿಗಳು ದಾಳಿ ಇಡುತ್ತಿವೆ. ಆದರೂ ಅರಣ್ಯ ನಾಶಕ್ಕೆ ಆದಿವಾಸಿಗಳನ್ನು ಹೊಣೆಗಾರರನ್ನಾಗಿಸಲಾಗುತ್ತಿದೆಯೇ ವಿನಃ ತಮ್ಮ ಸ್ವಂತ ಲಾಭಕ್ಕಾಗಿ ಅರಣ್ಯವನ್ನು ಲೂಟಿ ಮಾಡುತ್ತಾ, ಅರಣ್ಯ ನಾಶಕ್ಕೂ ಆ ಮೂಲಕ ಪರಿಸರಕ್ಕೂ ಹಾಗೂ ವನ್ಯಜೀವಿಗಳ ಬದುಕಿಗೆ ನಿಜಕ್ಕೂ ಮಾರಕವಾಗಿರುವವರನ್ನಲ್ಲ. 

ವಾಸ್ತವವೆಂದರೆ ಇಂದು ಅರಣ್ಯ ನಾಶಕ್ಕೆ ಆದಿವಾಸಿಗಳನ್ನು ಹೊಣೆಯನ್ನಾಗಿ ಮಾಡಲಾಗುತ್ತಿದ್ದರೂ ಆದಿವಾಸಿಗಳು ವಾಸಿಸುತ್ತಿರುವ ಪ್ರದೇಶಗಳಲ್ಲೇ ಅರಣ್ಯ ಹಾಗೂ ದಟ್ಟಾರಣ್ಯಗಳು ಇವತ್ತಿಗೂ ಅತ್ಯುತ್ತಮ ಸ್ಥಿತಿಯಲ್ಲಿವೆ. ಈ ಸತ್ಯ ಸಂಗತಿಯು ನಾವು ಹಾಲಿ  ಅನುಸರಿಸಿಕೊಂಡು ಬಂದಿರುವ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಕಾರ್ಯ ವಿಧಾನಗಳ ಬಗ್ಗೆ ಮೂಲಭೂತ ಪ್ರಶ್ನೆಗಳನ್ನೇ ಎತ್ತಬೇಕಾದ ಅಗತ್ಯವನ್ನು ಮನವರಿಕೆ ಮಾಡಿಕೊಡುತ್ತದೆ.

ಅರಣ್ಯ ಇಲಾಖೆ ಮತ್ತದರ ಅಧಿಕಾರಿಗಳು ಮತ್ತು ನಗರವಾಸಿ ಉಚ್ಚವರ್ಗೀಯ ಪರಿಸರ ಸಂರಕ್ಷಣಾವಾದಿಗಳು ಅರಣ್ಯ ಹಕ್ಕುಗಳ ಕಾಯಿದೆಯು ರೂಪುಗೊಳ್ಳುತ್ತಿದಾಗಲಿಂದ ಹಿಡಿದು ಅದರ ನಿಯಮಾವಳಿಗಳನ್ನು ರೂಪಿಸುವ ಪ್ರತಿ ಘಟ್ಟದಲ್ಲೂ ಈ ಕಾಯಿದೆಗೆ ಅಡ್ಡಗಾಲು ಹಾಕುತ್ತಲೇ ಬಂದಿದ್ದಾರೆ. ಈ ಕಾಯಿದೆಯನ್ನು ಅನುಷ್ಠಾನಕ್ಕೆ ತಂದ ರೀತಿಯ ಬಗ್ಗೆ ಹಲವಾರು ದೂರುಗಳಿವೆ. ಅರಣ್ಯವಾಸಿಗಳೆಂದು ಮಾಡುವ ಹಕ್ಕು ಪ್ರತಿಪಾದನೆಯನ್ನು ಮಾನ್ಯ ಮಾಡುವ ಪ್ರಕ್ರಿಯು ಮೂರು ಹಂತಗಳನ್ನು ಹಾದುಹೋಗುತ್ತದೆ. ಮೊದಲು ಗ್ರಾಮಸಭೆಯು ಅರಣ್ಯವಾಸಿಯ ಹಕ್ಕನ್ನು ಶಿಫಾರಸ್ಸು ಮಾಡುತ್ತದೆ. ಅದು ಮುಂದಿನ ಪರಿಶೀಲನೆಗೆ ಉಪವಿಭಾಗೀಯ ಮಟ್ಟದ ಪ್ರಾಧಿಕಾರಕ್ಕೆ ಹೋಗುತ್ತದೆ. ಅಲ್ಲಿಂದ ಅದು ಅಂತಿಮವಾಗಿ ಅರಣ್ಯಾಧಿಕಾರಿಗಳನ್ನೂ ಒಳಗೊಂಡಂತೆ ಕೇವಲ ಅಧಿಕಾರಿಗಳು ಮಾತ್ರ ಇರುವ ಜಿಲ್ಲಾ ಪ್ರಾಧಿಕಾರದ ಪರಿಶೀಲನೆಗೆ ಹೋಗುತ್ತದೆ. ಅರಣ್ಯವಾಸಿಗಳ ಹಕ್ಕುಗಳು ಅಮಾನ್ಯಗೊಳ್ಳುವುದು ಈ ಹಂತದಲ್ಲೇ. ಅಮಾನ್ಯಗೊಳ್ಳುವುದಕ್ಕೆ ಒಬ್ಬ ವ್ಯಕ್ತಿಯು ಅರಣ್ಯವಾಸಿಯಲ್ಲ ಎಂಬುದು ಮಾತ್ರ ಮಾನದಂಡವಾಗಿರುವುದಿಲ್ಲ. ಹಲವಾರು ಬಾರಿ ಗ್ರಾಮಸಭೆಯು ಶಿಫಾರಸ್ಸು ಮಾಡಿದ ಪ್ರಕರಣಗಳು ಯಾವುದೇ ಕಾರಣವಿಲ್ಲದೆ ಬೇಕಾಬಿಟ್ಟಿಯಾಗಿ ಅಮಾನ್ಯಗೊಳ್ಳುತ್ತವೆ. ಮತ್ತು ಆ ನಿರ್ಧಾರಗಳು ಅರಣ್ಯಭೂಮಿಗಳನ್ನು ಖಾಸಗಿಯವರಿಗೆ ಮತ್ತು ಉದ್ದಿಮೆಗಳಿಗೆ ಹಸ್ತಾಂತರಿಸಬೇಕೆಂದಿರುವ ಲಾಬಿಗಳ ಪ್ರಭಾವಕ್ಕೊಳಗಾಗಿರುತ್ತವೆ. ಕ್ಷುಲ್ಲಕ ಕಾರಣಗಳನ್ನು ಆಧರಿಸಿ ಹಲವಾರು ಅರಣ್ಯವಾಸಿಗಳ ಹಕ್ಕುಗಳನ್ನು ಅಮಾನ್ಯಗೊಳಿಸಲಾಗಿದೆಯೆಂದು ಬುಡಕಟ್ಟು ವ್ಯವಹಾರಗಳ ಸಚಿವಾಲಯವೇ ಗುರುತಿಸಿದೆ. ಈ ಅಮಾನ್ಯೀಕರಣದ ವಿರುದ್ಧ ಸಲ್ಲಿಸಿರುವ ಲಕ್ಷಾಂತರ ಮೇಲ್ಮನವಿಗಳು ತೀರ್ಮಾನವಾಗದೆ ನೆನೆಗುದಿಗೆ ಬಿದ್ದಿವೆ. ಅರಣ್ಯ ಹಕ್ಕುಗಳ ಕಾಯಿದೆಯ ೪ (೫)ನೇ ಕಲಮು ಸೂಕ್ತ ಪ್ರಕ್ರಿಯೆಯನ್ನು ಅನುಸರಿಸದೆ ಯಾರೊಬ್ಬರನ್ನೂ ಒಕ್ಕಲೆಬ್ಬಿಸಬಾರದೆಂದು ಸ್ಪಷ್ಟವಾಗಿ ಹೇಳುತ್ತದೆ. ಆದರೂ ಆದಿವಾಸಿಗಳ ಹಕ್ಕುಗಳನ್ನು ಬೇಕಾಬಿಟ್ಟಿಯಾಗಿ ತಿರಸ್ಕರಿಸುತ್ತಿರುವುದಕ್ಕೆ ಮತ್ತು ಅವರ ಹಕ್ಕುUಳ ಉಲ್ಲಂಘನೆಯಾಗುತ್ತಿರುವುದಕ್ಕೆ ಅಧಿಕಾರಿಗಳೇ ನೇರವಾಗಿ ಹೊಣೆಗಾರರಾಗಿದ್ದಾರೆ. ಹಲವಾರು ಪ್ರಕರಣದಲ್ಲಿ ಕಾಯಿದೆಯ ನಿಯಮಾವಳಿಗಳಿಗೆ ವಿರುದ್ಧವಾದ ವಿಧಾನಗಳನ್ನು ಅನುಸರಿಸಿ ಅರಣ್ಯವಾಸಿಗಳ ಹಕ್ಕುಗಳನ್ನು ತಿರಸ್ಕರಿಸಲಾಗಿದೆ. ಕಾಯಿದೆಯ ಪ್ರಕಾರ ಭೂ ಸರ್ವೇಯ ಮಾಹಿತಿಯು ಪುಷ್ಟೀಕರಿಸದ ಹೊರತು ಕೇವಲ ಉಪಗ್ರಹ ಚಿತ್ರಗಳ ಮಾಹಿತಿಯನ್ನು ಪರಿಗಣಿಸಬಾರದೆಂದು ಹೇಳಿದ್ದರೂ ಉಪಗ್ರಹ ಮಾಹಿತಿಯೊಂದನ್ನೇ ಆಧರಿಸಿ ಅರಣ್ಯವಾಸಿಗಳ ಹಕ್ಕನ್ನು ನಿರಾಕರಿಸಲಾಗಿದೆ.

ದಶಕದಷ್ಟು ಹಳೆಯದಾದ ಈ ಪ್ರಕರಣವನ್ನು ಸುಪ್ರೀಂ ಕೋರ್ಟು ನಿರ್ವಹಿಸುತ್ತಿರುವ ರೀತಿ ಅದರ ನ್ಯಾಯನಿರ್ಧಾರಕತ್ವದ ಬಗ್ಗೆ ವಿಶ್ವಾಸವನ್ನೇನೂ ಮೂಡಿಸುವುದಿಲ್ಲ. ಅರಣ್ಯವಾಸಿಗಳ ಬದುಕಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ನ್ಯಾಯಾಧೀಶರಿಗಾಗಲೀ ವಕೀಲರಿಗಾಗಲಿ ಸರಿಯಾದ ತಿಳವಳಿಕೆಯೇ ಇಲ್ಲ. ಸಂವಿಧಾನವು ಅರಣ್ಯವಾಸಿಗಳನ್ನು ವಿಶೇಶ ರೀತಿಯಲ್ಲಿ ಪರಿಗಣಿಸುತ್ತದೆ. ನ್ಯಾಯಾಧೀಶರುಗಳು ಮತ್ತು ವಕೀಲರು ಸಂವಿಧಾನದ ಈ ಅಂಶಗಳನ್ನು ಹಾಗೂ ನಮ್ಮ ಸಂವಿಧಾನದ ಕರ್ತೃಗಳು ಯಾವ ದೃಷ್ಟಿಕೋನದಲ್ಲಿ ಅರಣ್ಯವಾಸಿಗಳನ್ನು ಪರಗಣಿಸಿದ್ದರೆಂಬ ತಾತ್ಪರ್ಯವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ದೇಶದ ಕಾನೂನು ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳಲ್ಲೂ ಇದು ಕಡ್ಡಾಯವಾಗಿ ಸೇರ್ಪಡೆಯಾಗಬೇಕು.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top