ISSN (Print) - 0012-9976 | ISSN (Online) - 2349-8846

ಸಾವು ಮತ್ತು ವಿಷವನ್ನು ಭಟ್ಟಿ ಇಳಿಸುತ್ತಿರುವ ಸರ್ಕಾರ

ಸುರಕ್ಷಿತ ಮದ್ಯವನ್ನು ಖಾತರಿ ಮಾಡಲಾಗದ ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡುವ ಸುಲಭದ ದಾರಿಯನ್ನು ಹುಡುಕಿಕೊಳ್ಳುತ್ತಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಉತ್ತರಪ್ರದೇಶ ಮತ್ತು ಉತ್ತರಖಂಡ್‌ಗಳಲ್ಲಿ ನಕಲಿ ಸಾರಾಯಿ ಕುಡಿದು ೧೧೬ ಜನ ಸಾವಿಗೀಡಾದ ಪ್ರಕರಣವು ಸಂಪೂರ್ಣ ಪಾನ ನಿಷೇಧ ಮತ್ತು ಸುರಕ್ಷಿತ ಮದ್ಯದ ಎಚ್ಚರಿಕೆಯ ಸೇವನೆಯ ನಡುವಿನ ವಾಗ್ವಾದವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಅಧಿಕ ಆದಾಯ ಇರುವ ದೇಶಗಳಿಗೆ ಹೋಲಿಸಿದರೆ ಮದ್ಯಸೇವನೆಯ ಅಭ್ಯಾಸಗಳು ಹೆಚ್ಚು ಖಾಯಿಗಳನ್ನು ಮತ್ತು ಅಪಾಯಗಳನ್ನು ಉಂಟುಮಾಡುತ್ತಿರುವುದು ಬಡ ಮತ್ತು ಮಧ್ಯಮ ಆದಾಯದ ದೇಶಗಳಲ್ಲೇ ಎಂಬುದನ್ನು ಹಲವಾರು ಅಧ್ಯಯನಗಳು ಧೃಢಪಡಿಸಿವೆ. ಇದಕ್ಕೆ ಇತರ ಕಾರಣಗಳ ಜೊತೆಗೆ ಜನರು ಸೇವಿಸುತ್ತಿರುವ ಮದ್ಯದ ಗುಣಮಟ್ಟವೂ ಮುಖ್ಯ ಕಾರಣವಾಗಿದೆ. ನಕಲಿ ಸಾರಾಯಿ ಸೇವನೆಯ ಅಪಾಯಗಳಿಗೆ ಗುರಿಯಾಗುವವರು ಅತ್ಯಂತ ಬಡವರು ಮತ್ತು ನಿರ್ಗತಿಕರೇ ಆಗಿರುತ್ತಾರೆ. ಇಂಥಾ ದುರಂತಗಳಿಗೆ ಮುಂಚೆ ಸಂಭವಿಸುವ ವಿದ್ಯಮಾನಗಳು ಮತ್ತು ಆನಂತರದಲ್ಲಿ ನಡೆಯುವ ಘಟನೆಗಳು ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿ ಇರುತ್ತವೆ. ಸಂತ್ರಸ್ತರಿಗೆ ಒಂದಷ್ಟು ಸಮಾಧಾನಕಾರಿ ಪರಿಹಾರಗಳನ್ನು ನೀಡಿ ವಾತಾವರಣದಲ್ಲಿನ ಆಕ್ರೋಶವನ್ನು ಶಮನ ಮಾಡುವ ಪ್ರಯತ್ನಗಳನ್ನು ಸರ್ಕಾರ ಮಾಡುತ್ತದೆ. ಆದರೆ ಒಂದು ವೇಳೆ ಆರ್ಥಿಕವಾಗಿ ಸ್ಥಿತಿವಂತರಾಗಿರುವ ವರ್ಗಕ್ಕೆ ಸೇರಿದ ಜನ  ಕಳಪೆ ಗುಣಮಟ್ಟದ ಮದ್ಯವನ್ನು ಸೇವಿಸಿ ಇದೇ ರೀತಿಯ ಅಪಾಯಕ್ಕೆ ಗುರಿಯಾಗಿದ್ದರೆ ಸರ್ಕಾರದ ಪ್ರತಿಕ್ರಿಯೆ ಇದೇ ರೀತಿ ಇರುತ್ತಿತ್ತೇ?

ಇಂಥಾ ದುರದೃಷ್ಟಕರ ಘಟನೆಗಳು ಎಷ್ಟು ಸರ್ವೇ ಸಾಮಾನ್ಯವಾಗಿಬಿಟ್ಟಿವೆಯೆಂದರೆ ಸಾವಿನ ಸಂಖ್ಯೆಗಳೂ ಸಹ ಒಂದೆರಡು ದಿನಗಳ ನಂತರ ಸಾರ್ವಜನಿಕರ ಚರ್ಚೆ ಮತ್ತು ಆಸಕ್ತಿಯನ್ನು ಈ ಬಗ್ಗೆ ಹಿಡಿದಿರಿಸಿಕೊಳ್ಳಲಾಗುತ್ತಿಲ್ಲ. ಗೋಳಾಡುತ್ತಿರುವ ಹೆಂಡತಿ-ಮಕ್ಕಳ ಚಿತ್ರಗಳು, ಪರಿಹಾರದ ಘೋಷಣೆಗಳು ಮತ್ತು ಒಂದಿಬ್ಬರ ಬಂಧನಗಳೊಂದಿಗೆ ಇಂಥಾ ಪ್ರಕರಣಗಳು ಮುಕ್ತಾಯಗೊಳ್ಳುತ್ತವೆ. ಆದರೆ ಈ ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಗಳು ಈ ಪ್ರಕರಣಕ್ಕೆ ಹೊಸ ತಿರುವೊಂದನ್ನು ನೀಡಿದ್ದಾರೆ. ಈ ಪ್ರಕರಣದ ಹಿಂದೆ ಇರಬಹುದಾದ ರಾಜಕೀಯ ವಿರೋಧಿಗಳ ಸಂಚಿನ  ಬಗ್ಗೆ ತನಿಖೆ ನಡೆಸಲು ಇದರ ಬಗ್ಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ ಸರ್ಕಾರವು ಸೂಚಿಸಿದೆ. ತಮ್ಮ ಸಾವಿನಲ್ಲೂ ಬಡವರು ಒಂದು ರಾಜಕೀಯ ವರ್ಗಕ್ಕೆ ಉಪಯುಕ್ತವಾಗಬೇಕೆಂದು ನಿರೀಕ್ಷಿಸಲಾಗುತ್ತದೆ!

ಭಾರತದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧದ ಪರಿಣಾಮಕಾರಿತ್ವದ ಬಗೆಗಿನ ವಾಗ್ವಾದಗಳಿಗೆ ಸುದೀರ್ಘವಾದ ಇತಿಹಾಸವಿದೆ. ಸಂಪೂರ್ಣ ಮದ್ಯಪಾನ ನಿಷೇಧವು ಪರ್ಯಾಯವಾದ ಮತ್ತು ಆಗ್ಗದ ಕಾನೂನು ಬಾಹಿರ ಮದ್ಯದ ಉತ್ಪಾದನೆ ಮತ್ತು ಮಾರಾಟಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಮದ್ಯದ ಗುಣಮಟ್ಟ ಮತ್ತು ನಿಯಂತ್ರಣಗಳಂಥ  ಅನಾಕರ್ಷಕ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಿಂತ ಮದ್ಯ ನಿಷೇಧದಂಥ ಕ್ರಮಗಳನ್ನು ತೆಗೆದುಕೊಳ್ಳುವುದು ರಾಜಕಾರಣಿಗಳಿಗೆ ಸುಲಭ. ಕುಡುಕರ ಕುಟುಂಬಗಳು ಅನುಭವಿಸುವ ಸಂಕಟಗಳನ್ನು ಮುಂದುಮಾಡಿ ಮದ್ಯ ನಿಷೇಧ ಮಾಡಬೇಕೆಂಬ ನೈತಿಕ ಧೋರಣೆಯನ್ನು ತಳೆಯುವುದು ಸಲೀಸಿನ ದಾರಿ. ಹೀಗಾಗಿ ಪಾನನಿಷೇಧದ ಸಂದರ್ಭದಲ್ಲೂ  ಅರ್ಥಿಕವಾಗಿ ಸ್ಥಿತಿವಂತರಾಗಿರುವವರಿಗೆ ಗುಣಮಟ್ಟದ ಬ್ರಾಂಡೆಡ್ ಮದ್ಯಗಳು ದೊರೆಯುತ್ತದಾದರೂ ಬಡವರ್ಗದವರಿಗೆ ಸರ್ಕಾರದಿಂದ ಪರವಾನಗಿ ಪದೆದ  ದೇಸೀ ಸಾರಾಯಿಯೂ ಸಹ ದೊರಕದೆ ಅವರು ನಕಲಿ ಮತ್ತು ಕಳ್ಳಭಟ್ಟಿಗಳ ಮೊರೆಹೋಗುವಂತಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಹೇಳುವಂತೆ ತೆರಿಗೆಗಳಿಂz ಬಾಚಾವಾಗುವ ಸಲುವಾಗಿ ಸಾವಿಗೆ ಕಾರಣವಾಗುವ ಸಾರಾಯಿಯಯನ್ನು ಕಳ್ಳತನದಲ್ಲಿ ತಯಾರಿಸುತ್ತಾರೆ. ಅವನ್ನು ತಯಾರಿಸಲು ಬಳಸುವ ದೊಡ್ಡಮಟ್ಟದ ಮೆಥನಾಲ್, ಬ್ಯಾಟರಿ ಆಸಿಡ್, ಚರ್ಮದಿಂದ ತಯಾರಾದ ಹಳೆವಸ್ತುಗಳು, ಇನ್ನಿತ್ಯಾದಿ ಸರಕುಗಳನ್ನು ಗಮನಿಸಿದಾಗ ತಯಾರಿಯಲ್ಲಿ ನೈರ್ಮಲ್ಯವಿಲ್ಲದಿರುವ ಪ್ರಶ್ನೆ ಕೂಡಾ ಇವುಗಳ ಮುಂದೆ ಅಷ್ಟೊಂದು ಮುಖ್ಯವಾದ ಪ್ರಶ್ನೆಯೇ ಅಲ್ಲ ಎನಿಸಿಬಿಡುತ್ತದೆ. ಈ ವಸ್ತುಗಳ ಗುಣಮಟ್ಟ ಅಥವಾ ಲಭ್ಯವಿರುವ ಸ್ಥಿತಿಯನ್ನು ನೋಡಿದರೆ ಇವುಗಳಲ್ಲಿ ಯಾವೊಂದು ಬೇಕಾದರೂ ಬೇಕಾದರೂ ಮಾರಣಾಂತಿPವಾಗಿ ಪರಿಣಮಿಸಬಹುದೆನ್ನುವುದು ಸ್ಪಷ್ಟ. ಕಳ್ಳಭಟ್ಟಿಯು ಒಮ್ಮೊಮ್ಮೆ ಪ್ರಾಣವನ್ನು ತೆಗೆಯದಿದ್ದರೂ ಕುರುಡುತನವನ್ನೂ ಒಳಗೊಂಡಂತೆ ಹಲವಾರು ಅಂಗಾಂಗಗಳ ಹಾನಿಗೆ ಕಾರಣವಾಗುತ್ತದೆ.

ಉತ್ತರಪ್ರದೇಶದ ಮುಖ್ಯಮಂತ್ರಿಗಳು ಯಾವರೀತಿ ನಕಲಿ ಸಾರಾಯಿ ದುರಂತದಲ್ಲಿ ಒಂದು ಸಂಚನ್ನು ಕಾಣಬಯಸುತ್ತಾರೋ ಅದೇರೀತಿ ಮದ್ಯಪಾನ ನಿಷೇಧ ಮಾಡಬೇಕೆನ್ನುವವರೂ ಸಹ ವಾಸ್ತವ ಸತ್ಯಗಳಿಗೆ ಬೇಕೆಂತಲೇ ಕುರುಡಾಗಿದ್ದಾರೆ. ವಾಸ್ತವವಾಗಿ ಒಂದು ರಾಜ್ಯ ಸರ್ಕಾರವಂತೂ ಗ್ರಾಹಕರ ಬಗೆಗಿನ ಕಾಳಜಿಯ ನೆಪದಲ್ಲಿ ಪರವಾನಗಿ ಪಡೆದ ದೇಸೀ ಸಾರಾಯಿ ಕೂಡಾ ಲಭ್ಯವಾಗುವುದು ಕಷ್ಟವಾಗುವಂತೆ ನೋಡಿಕೊಂಡಿತು. ಆದರೆ ಅದು ವಾಸ್ತವದಲ್ಲಿ ಭಾರತೀಯ ತಯಾರಿಕೆಯ ವಿದೇಶಿ ಮದ್ಯ (ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್- ಐಎಂಎಫ್‌ಎಲ್)ದ ಬಳಕೆ ಹೆಚ್ಚಾಗುವಂತೆ ಮಾಡುವ ಕುತಂತ್ರವಾಗಿತ್ತೆಂಬ ಆಪಾದನೆಯನ್ನು ಎದುರಿಸಬೇಕಾಯಿತು. ಈ ಎಲ್ಲಾ ಕ್ರಮಗಳು ಬಡಗ್ರಾಹಕರ ಬಗೆಗಿನ ಕಾಳಜಿಗಿಂತ ಸಿನಿಕತೆಯನ್ನೇ ಪ್ರದರ್ಶಿಸುತ್ತವೆ. ಮದ್ಯವನ್ನು ಸೇವಿಸಕೂಡದೆಂಬುದು ಅವಾಸ್ತವಿಕ ನಿರೀಕ್ಷೆಯಾಗಿದ್ದು ಅದರ ಗುಣಮಟ್ಟವನ್ನು ನಿಯಂತ್ರಿಸುವುದು ಮತ್ತು ನಿಯಂತ್ರಣವನ್ನು ಅನುಷ್ಠಾನಕ್ಕೆ ತರುವುದು ಹೆಚ್ಚು ವಿವೇಕಯುತವಾದ ಕ್ರಮವಾಗಿರುತ್ತದೆ. ರಾಜಕೀಯವಾಗಿ ಪ್ರಯೋಜನಕಾರಿಯಾದ ಮತ್ತು ಆಡಳಿತಾತ್ಮಕವಾಗಿ ಸುಲಭವಾದ ಕ್ರಮಗಳಿಗೆ ಮುಂದಾಗುವ ಬದಲಿಗೆ ಸರ್ಕಾರವು ಹೆಚ್ಚಿನ ಕಷ್ಟದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪೊಲೀಸರು ಕಳ್ಳಸಾರಾಯಿ ದಂಧೆಕೋರರ ಜಾಲಗಳನ್ನು ಬೇಧಿಸಬೇಕು. ನಿಯಮಗಳ ಕಡ್ಡಾಯ ಪಾಲನೆ ಮತ್ತು ಗುಣಮಟ್ಟ ನಿಯಂತ್ರಣಗಳನ್ನು ಮೊದಲು ಜಾರಿಗೆ ತರಬೇಕು. . ೨೦೧೫ರಲ್ಲಿ ಮುಂಬೈನಲ್ಲಿ ಕಳ್ಳಸಾರಾಯಿ ಸೇವನೆಯಿಂದ ೧೦೬ ಜನರು ಮೃತಪಟ್ಟರೆ, ೨೦೧೧ರಲ್ಲಿ ಪ. ಬಂಗಾಳದ ಸಂಗ್ರಾಮ್‌ಪುರದಲ್ಲಿ ೧೭೦ ಜನರು ಮೃತಪಟ್ಟರು. ಪ್ರತಿರಾಜ್ಯಗಳಲ್ಲೂ ಇಂಥಾ ಹಲವಾರು ಭೀಕರ ಕಥೆಗಳು ಮತ್ತು ಸಂಖ್ಯೆಗಳು ಸಿಗುತ್ತವೆ. ಇನ್ನೂ ಅಧಿಕೃತವಾಗಿ ದಾಖಲಾಗದ ಮತ್ತು ವರದಿಯಾಗದ ಕಥೆಗಳನ್ನು ಬಿಟ್ಟೇಬಿಡಿ. ಮದ್ಯವು ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾದ್ದರಿಂದ ಪ್ರತಿಯೊಂದು ರಾಜ್ಯವೂ ವಿವೇಚನೆಯಿಂದ ಕೂಡಿದ ಕ್ರಮಗಳನ್ನು ಜಾರಿ ಮಾಡಬೇಕು ಮತ್ತು ಅವುಗಳು ಜಾರಿಯಾಗುವುದನ್ನು ಖಾತರಿಪಡಿಸಬೇಕು. ತಮಿಳುನಾಡಿನಲ್ಲಿ ಮದ್ಯ ಮಾರಾಟದ ಮೇಲೆ ೨೦೦೧ರಿಂದ ಸರ್ಕಾರವೇ ಸಂಪೂರ್ಣ ಏಕಸ್ವಾಮ್ಯವನ್ನು ಇಟ್ಟುಕೊಂಡಿದ್ದು ೨೦೧೫ರ ಸಾಲಿನಿಂದ ಒಂದು ಸರ್ಕಾರಿ ಸಂಸ್ಥೆಯ ಮೂಲಕ ತಾನೇ ಅಗ್ಗದ ದರದ ಮದ್ಯ ಮಾರಾಟವನ್ನು ಪ್ರಾರಂಭಿಸಿದೆ. ಬಡವರಿಗೆ ಒಂದು ಸುರಕ್ಷಿತವಾದ ಮದ್ಯ ಸೇವನೆಯ ಆಯ್ಕೆಯನ್ನು ಒದಗಿಸುವಲ್ಲಿ ತಮಿಳುನಾಡು ಸರ್ಕಾರದ ಈ ಮಾದರಿ ಅನುಸರಣಯೊಗ್ಯವಾಗಿದೆ.

ಮದ್ಯಸೇವನೆಯ ಬಗ್ಗೆ ಸಿನಿಕತನದಿಂದ ಕೂಡಿದ ಹಾಗೂ ನೈತಿಕ ಮತ್ತು ಆಷಾಢಭೂತಿತನದ ನಿಲುವುಗಳನ್ನು ತೊರೆದು ಬಡಮದ್ಯಸೇವಕರ ಬಗೆಗಿನ ನೈಜಕಾಳಜಿಯ ಕ್ರಮಗಳನ್ನು ಜಾರಿ ಮಾಡದ ಹೊರತು ಸರ್ಕಾರವು ಈ ಸಾಮೂಹಿಕ ಸಾವುಗಳನ್ನು ತಡೆಗಟ್ಟಲು ಸಾಧ್ಯವಿಲ್ಲ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top