ISSN (Print) - 0012-9976 | ISSN (Online) - 2349-8846

ಎನ್ಡಿಎ ಸರ್ಕಾರದ ಮಧ್ಯಂತರ ಬಜೆಟ್ಟಿನ ಬರ್ಕತ್ತೇನು?

ಅತಾರ್ಕಿಕ ಜನಪ್ರಿಯ ಕಾರ್ಯಕ್ರಮಗಳು ಜನರಲ್ಲಿ ಆಶೋತ್ತರಗಳನ್ನು ಹುಟ್ಟಿಸುತ್ತವಾದರೂ ಆಚರಣೆಗಿಳಿಯುವುದಿಲ್ಲ

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ತಮ್ಮ ಆಳ್ವಿಕೆಯ ಅಂತಿಮಾವಧಿಯಲ್ಲಿ ಸರ್ಕಾರಗಳು ಮಂಡಿಸುವ ಮಧ್ಯಂತರ ಬಜೆಟ್ಟುಗಳು ಆಳುವ ಪಕ್ಷಗಳಿಗೆ ಪೊಳ್ಳು ಭರವಸೆಗಳನ್ನು ನೀಡಲು ದಕ್ಕುವ ಮುಕ್ತ ವೇದಿಕೆಗಳಾಗಿರುತ್ತವೆ. ಎನ್‌ಡಿಎ ಸರ್ಕಾರದ ಈ ಸಾಲಿನ ಮಧ್ಯಂತರ ಬಜೆಟ್ಟಿನ ಹೇಳಿಕೆಗಳು ಇದಕ್ಕೆ ಹೊರತೇನಲ್ಲ. ಅತಾರ್ಕಿಕವಾದ ಆದರೆ ಜನಪ್ರಿಯ ಯೋಜನೆಗಳಾದ ಆದಾಯ ಬೆಂಬಲ ಮತ್ತು ತೆರಿಗೆ ವಿನಾಯತಿ ಘೋಷಣೆಗಳಿಂದ ತುಂಬಿತುಳುಕುತ್ತಿದ್ದ ಈ ಬಜೆಟ್ಟನ್ನು ಸರ್ಕಾರವು ಕುಸಿಯುತ್ತಿರುವ ತನ್ನ ರಾಜಕೀಯ ಇಮೇಜನ್ನು ಮರುಪಡೆದುಕೊಳ್ಳಲು ಬಳಸಿಕೊಂಡಿದೆ. ಆದರೆ ಇದರಲ್ಲಿನ ಅಸಾಧಾರಣವಾದ ವಿಷಯವೇನೆಂದರೆ ಮಧ್ಯಂತರ ಬಜೆಟ್ಟಿನಂಥ ಒಂದು ತಾತ್ಕಾಲಿಕ ಕ್ರಮವನ್ನು ಸಹ ಅದು ತನ್ನ ದೀರ್ಘಕಾಲೀನ ರಾಜಕೀಯ ಲಾಭಗಳಿಗಾಗಿ ಬಳಸಿಕೊಂಡಿರುವುದು. ಈ ಮಧ್ಯಂತರ ಬಜೆಟ್ಟು ಆಳುವ ಪಕ್ಷದ ಚುನಾವಣಾ ಪ್ರಣಾವಳಿಕೆಯಾಗಿರುವಷ್ಟೆ ಜನರ ಆಶೋತ್ತರಗಳ ಮೇಲೆ ಸವಾರಿ ಮಾಡುವ ರಣತಂತ್ರವೂ ಆಗಿದೆ.

ಉದಾಹರಣೆಗೆ ಸರ್ಕಾರವು ಹೊಸದಾಗಿ ಖರ್ಚು ಮಾಡುವ ಬಾಬತ್ತಿನಲ್ಲಿ ಸೇರಿಸಿರುವ ಸಣ್ಣ ರೈತರಿಗೆ ವಾರ್ಷಿಕ ೬,೦೦೦ರೂ ಆದಾಯ ಬೆಂಬಲ ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕೆಐಎಸ್‌ಎಎನ್) ಯೋಜನೆಯನ್ನೆ ತೆಗೆದುಕೊಳ್ಳಿ. ಈ ಹಣದ ಪ್ರಮಾಣ ಎಷ್ಟು ಕ್ಷುಲ್ಲಕವಾದುದೆಂಬ ಚರ್ಚೆಯಾಚೆಗೆ ಈ ಯೋಜನೆಯ ರಾಜಕೀಯ ಪರಿಣಾಮಗಳು ಅಡಗಿವೆ. ಚುನಾವಣೆಗೆ ಮುಂಚೆಯೇ ಈ ೬೦೦೦ರೂ ಯೋಜನೆಯ ಮೊದಲ ೨೦೦೦ ರೂ.ದ ಕಂತನ್ನು ಬಿಡುಗಡೆ ಮಾಡಿದರೆ ಜನರಿಂದ ಓಟುಗಳನ್ನು ಖರೀದಿ ಮಾಡಿದ ಆರೋಪಕ್ಕೆ ಆಳುವ ಸರ್ಕಾರದ ಪಕ್ಷ ಗುರಿಯಾಗಬೇಕಾಗುತ್ತದೆ. ಮತ್ತೊಂದು ಕಡೆ ಈ ಯೋಜನೆಯನ್ನು ಚುನಾವಣೆ ಆಗುವವರೆಗೆ ಮುಂದೂಡಿ ನಂತರ ಬಿಜೆಪಿ ನೇತೃತ್ವದ ಪಕ್ಷವೇ ಆಧಿಕಾರಕ್ಕೆ ಬಂದರೆ  ಜನರ ಚುನಾವಣಾ ಆಯ್ಕೆಗಳನ್ನು ಈ ಯೋಜನೆಯ ಮೂಲಕ ವಿಕೃತಗೊಳಿಸಿದ ಆರೋಪವನ್ನು ವಿರೋಧ ಪಕ್ಷಗಳಿಂದ ಎದುರಿಸಬೇಕಾಗುತ್ತದೆ. ಮತ್ತು ಚುನಾವಣೆಯ ನಂತರ ಬರುವ ಹೊಸ ಸರ್ಕಾರ ಈ ಯೋಜನೆಯನ್ನು ಜಾರಿ ಮಾಡದಿದ್ದರೆ ಮತ್ತಷ್ಟು ಆರೋಪಗಳಿಗೆ ಗುರಿಯಾಗಬೇಕಾಗುತ್ತದೆ. ಒಂದು ವೇಳೆ ಬಿಜೆಪಿಯೇತರ ಸರ್ಕಾರವು ಅಧಿಕಾರಕ್ಕೆ ಬಂದರೂ ಈ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಪ್ರಮಾಣದ ವಿತರಣೆಯನ್ನು  ಮಾಡಬೇಕೆಂಬ ಒತ್ತಡ ಅದರ ಮೇಲೆ ಹೆಚ್ಚಿರುತ್ತದೆ. ಇಂಥಾ ಯೋಜನೆಗಳು ಪಡೆದುಕೊಳ್ಳುವ ಜನಪ್ರಿಯತೆಯನ್ನು ನೋಡಿದರೆ ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆಯಾದರೂ ಸರಿ ಯಾವ ಸರ್ಕಾರಗಳು ಈ ಭರವಸೆಗಳಿಂದ ಹಿಂದೆ ಸರಿಯುವುದಿಲ್ಲ. ಆದರೆ ಈ ಮೊತ್ತದ ಪ್ರಮಾಣ ಎಷ್ಟು ಚಿಕ್ಕದೆಂಬ ವಿಮರ್ಶೆಯಲ್ಲಿ ತೊಡಗಿಕೊಳ್ಳುವ ಮೂಲಕ ವಿರೋಧ ಪಕ್ಷವು ತನ್ನ ಮಾತನ್ನು ತಾನೇ ನುಂಗಲಾಗದ ಸ್ಥಿತಿಯನ್ನು ತಂದುಕೊಳ್ಳಬಹುದು. ಅಷ್ಟು ಮಾತ್ರವಲ್ಲದೆ, ತಾವು ಅಧಿಕಾರಕ್ಕೆ ಬಂದರೆ ಇದಕ್ಕಿಂತ ಇನ್ನೂ ಹೆಚ್ಚು ಪ್ರಮಾಣದ ಮತ್ತು ಸಂಖ್ಯೆಯ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂಬ ಭರವಸೆಗಳನ್ನು ನೀಡುತ್ತಾ  ಮತದಾರರಲ್ಲಿ ಅಪಾರ ನಿರೀಕ್ಷೆಗಳನ್ನು ಹುಟ್ಟಿಸಿರುವ ವಿರೋಧಪಕ್ಷಗಳು ಒಂದೊಮ್ಮೆ ಈ ಭರವಸೆಗಳಿಂದ ಒಂದಷ್ಟು ಹಿಂದೆ ಸರಿದರೂ ಆಡಳಿತವಿರೋಧಿ ಆಕ್ರೋಶಕ್ಕೆ ತುತಾಗುವ ಸಾಧ್ಯತೆಗೂ ಏಕಕಾಲದಲ್ಲಿ ತುತ್ತಾಗುತ್ತಿದ್ದಾರೆ. ಇದೇ ಅಪಾಯವು ಅಸಂಘಟಿತ ಕಾರ್ಮಿಕರ ಪಿಂಚಣಿ ಯೋಜನೆಯಾದ ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಥನ್ ನಂಥ  ಯೋಜನೆಗಳಲ್ಲೂ ಇವೆ.

ವಿರೋಧ ಪಕ್ಷವಾದ ಕಾಂಗ್ರೆಸ್ಸಿಗೆ ನಿರುದ್ಯೋಗ ವು ಚುನಾವಣಾ ಪ್ರಚಾರ ಸಾಧನದ ನೆಲೆಯಾಗಿರುವಂತೆ ಕಂಡುಬರುತ್ತಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಹಲವಾರು ರ್‍ಯಾಲಿಗಳಲಿ ಏರುತ್ತಿರುವ ನಿರುದ್ಯೋಗದ ದರದ ಬಗ್ಗೆ ಆಡಳಿತರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರಲ್ಲದೆ ತಾವು ಅಧಿಕಾರಕ್ಕೆ ಬಂದರೆ ನಿರುದ್ಯೋಗ ನಿವಾರಣೆ ಮಾಡುವ ಭರವಸೆಯನ್ನು ನೀಡಿದ್ದಾರೆ. ಆದರೆ ನಿರುದ್ಯೋಗವೆಂಬುದು ಮೂಲಭೂತವಾಗಿ ಕಾರ್ಮಿಕ ಮಾರುಕಟ್ಟೆ ವ್ಯವಸ್ಥೆಯ ರಾಚನಿಕ ಸಂಗತಿಯಾಗಿದ್ದು ಅದನ್ನು ಹೋಗಲಾಡಿಸಬೇಕೆಂದರೆ ಪ್ರಜ್ನಾಪೂರ್ವಕವಾದ ನೀತಿ-ತತ್ವ ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ. ಆದರೆ ಚುನಾವಣೆಗಳಲ್ಲಿ ನೀತಿಗಳನ್ನು ಒಳಗೊಂಡ ಯಾವ ವಿಷಯವಾದರೂ ಚರ್ಚೆಗೆ ಬಂದಿವೆಯೇ? ವಿಪರ್ಯಾಸವೆಂದರೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ತಾವು ಬಿಜೆಪಿಯನ್ನು ಯಾವ ಒಣ ಭರವಸೆಗಳ (ಜುಮ್ಲಾಬಾಜಿ) ಕಾರಣಕ್ಕಾಗಿ ಆಕ್ಷೇಪಿಸುತ್ತಿದ್ದವೋ ಅದೇ ಜುಮ್ಲಾಬಾಜಿಯಲ್ಲಿ ತಾವೂ ಸಹ ತೊಡಗಿಕೊಂಡಿವೆ. ಹೀಗೆ ಬರಿಮಾತುಗಳ ಒಣಸಮರದಲ್ಲಿ ಯಾವುದೇ ನೀತಿ ಹಾಗೂ ತತ್ವಗಳ ಚರ್ಚೆಯೇ ಬದಿಗೆ ಸರಿಯುತ್ತವೆ ಮತ್ತು ಚುನಾವಣಾ ಆಯ್ಕೆಗಳು ನೀತಿ-ತತ್ವಗಳ ಮೇಲೆ ಆಧಾರಿತವಾಗದೆ ಕೇವಲ ವ್ಯಕ್ತಿಗಳನ್ನು ಆಧರಿಸುವಂತಾಗುತ್ತದೆ. ಮತದಾರರು ತಮ್ಮ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಮತ್ತು ಕಾಳಜಿಗಳನ್ನು ಯಾರು ಪ್ರತಿನಿಧಿಸುತ್ತಾರೆಂದು ಭಾವಿಸುತ್ತಾರೋ ಅಂಥವರನ್ನು ತಮ್ಮ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಅಸಂಘಟಿತ ಕಾರ್ಮಿಕರಿಗೆ ಘೋಷಿಸಲಾಗಿರುವ ಪಿಂಚಣಿ ಯೋಜನೆಯು ಹಲವಾರು ಕಾರಣಗಳಿಂದಾಗಿ ಎದುರಾಳಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವಲ್ಲಿ ಆಳುವ ಸರ್ಕಾgದ ಬಲವಾದ ಕಾರ್ಯತಂತ್ರವಾಗಿ ಪರಿಣಮಿಸುವ ಸಾಧ್ಯತೆಯಿದೆ. ಮೊದಲನೆಯದಾಗಿ ಉದ್ಯೋಗದ ಅಂಕಿಅಂಶಗಳ ಬಗ್ಗೆ ನಡೆಯುತ್ತಿರುವ ವಾದ ವಿವಾದಗಳ ಹಿನ್ನೆಲೆಯಲ್ಲಿ ಈ ಯೋಜನೆಯು ವಾಸ್ತವದಲ್ಲಿ ಭಾರತದ ಉದ್ಯೋಗ ಮಾರುಕಟ್ಟೆಯ ಬಲಹೀನತೆಯನ್ನಷ್ಟೇ ಎತ್ತಿತೋರಿಸುತ್ತದೆ. ಎರಡನೆಯದಾಗಿ ಸಮಸ್ಯೆಯನ್ನು ಅಂಗೀಕರಿಸಿದ ನಂತರದಲ್ಲಿ,  ಐತಿಹಾಸಿಕವಾಗಿ ಅತಿಹೆಚ್ಚು ಉದ್ಯೋಗಗಳನ್ನು ನೀಡುತ್ತಾ ಬಂದಿರುವ ಅಸಂಘಟಿತ ಕ್ಷೇತ್ರದಲಾದರೂ ಕನಿಷ್ಟ ಪಕ್ಷ ಪರಿಹಾರ ಒದಗಿಸುವ  ಭರವಸೆಗಳನ್ನು ನೀಡಲಾಗಿದೆ. ಮೂರನೆಯದಾU, ಹಾಗೆ ಮಾಡುವ ಮೂಲಕ ಮುಂದೆ ಅಧಿಕಾರಕೆ ಬರಲಿರುವ ಸರ್ಕಾರವು ತಾನು ಉಳಿಯಬೇಕೆಂದರೂ ಅನುಸರಿಸಲೇ ಬೇಕಾದ ಒಂದು  ಉನ್ನತವಾದ ಆದರೆ ತಳಗಟ್ಟಿಯಿಲ್ಲದ ಉದಾಹರಣೆಯೊಂದನ್ನು ಈ ಹೊರಹೋಗುತ್ತಿರುವ ಸರ್ಕಾರವು ನಿರ್ಮಿಸಿ ನಿರ್ಗಮಿಸುತ್ತಿದೆ.

ಜನರ ಆಶೋತ್ತರಗಳನ್ನು ದುರ್ಬಳಕೆ ಮಾಡಿಕೊಳ್ಳುವ ರಾಜಕೀಯದ ಅತಂತ್ರತೆಯು ಜಾರಿಗೆ ತರಲಾಗದ ಒಣಭರವಸೆಗಳ ಮೇಲಾಟಗಳಲ್ಲಿ ವ್ಯಕ್ತವಾಗುತ್ತದೆ. ಪಿಎಂ-ಕಿಸಾನ್ ಯೋಜನೆ, ಪಿಎಮ್‌ವೈಎಸ್ಸೆಮ್ ಯೋಜನೆ ಅಥವಾ ವಾರ್ಷಿಕ ಐದು ಲಕ್ಷಕ್ಕಿಂತ ಕಡಿಮೆ ಆದಾಯವಂತರ ಮೇಲೆ ಆದಾಯ ತೆರಿಗೆಯನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಯೋಜನೆಗಳ ಆಧಾರದ ಮೇಲೆ ವಿರೋಧಪಕ್ಷಗಳು ಸಹ ಅಧಿಕಾರಕ್ಕೆ ಬರುವ ತಂತ್ರವು ಎರಡಲಗಿನ ಕತ್ತಿಗಳಾಗಿ ವರ್ತಿಸಲಿವೆ. ಮೊದಲನೆಯದಾಗಿ ಈ ಯೋಜನೆಗಳಲ್ಲಿ ಅಡಕವಾಗಿರುವ ಜನಕಲ್ಯಾಣ ಆಶಯಗಳಿಂದಾಗಿ ಯಾವುದೇ ಸರ್ಕಾರ ಈ ಭರವಸೆಗಳಿಂದ ಹಿಂದೆ ಸರಿಸಲಾಗುವುದಿಲ್ಲ. ಆದರೆ ಇವುಗಳನ್ನು ಜಾರಿಗೆ ತರುವುದು ಇನ್ನೂ ಹೆಚ್ಚು ದುಸ್ತರವಾಗಲಿದೆ. ಉದಾಹರಣೆಗೆ ಆದಾಯ ತೆರಿಗೆ ವಿನಾಯತಿ ಬಗ್ಗೆ ಕೊಡಲಾಗಿರುವ ಭರವಸೆಗಳನ್ನು ಜಾರಿಗೆ ತರಬೇಕೆಂದರೆ ಹಣಕಾಸು ಮಸೂದೆಗೆ ತಿದ್ದುಪಡಿಗಳನ್ನು ತರಬೇಕಾಗುತ್ತದೆ. ಮತ್ತು ಅದಕ್ಕೆ ಸಾಕಷ್ಟು ಕಾಲಾವಧಿ ಬೇಕಾಗುತ್ತದೆ. ಮತದಾರರು ಅಷ್ಟು ವಿಳಂಬವನ್ನು ಸಹಿಸಿಕೊಂಡು ಇರುತ್ತಾರೆಯೇ ಎಂಬುದು ಇತರ ಕಲ್ಯಾಣ ಕಾರ್ಯಕ್ರಮಗಳನ್ನು ಅಧಿಕಾರರೂಢ ಸರ್ಕಾರವು ಎಷ್ಟು ಪರಿಣಾಮಕಾರಿ ರೀತಿಯಲ್ಲಿ ಜಾರಿ ಮಾಡುತ್ತದೆ ಎಂಬುದನ್ನು ಆಧರಿಸಿರುತ್ತದೆ. ಮತ್ತೊಂದು ಕಡೆ  ಅಧಿಕಾರರೂಢ ಸರ್ಕಾರವು ಒಂದು ವೇಳೆ ಇದರಲ್ಲಿನ ಯಾವುದೇ ಭರವಸೆಯನ್ನು ಪೂರೈಸಲು ಸಫಲವಾದರೂ ಅದು ಸಮಾಜದ ಇತರ ವರ್ಗಗಳು ಸಹ ಅದೇ ರೀತಿಯ ಬೇಡಿಕೆಯನ್ನು ಮುಂದಿಡಲು ಪ್ರಚೋದಿಸುತ್ತದೆ. ಅದರಲ್ಲೂ ಬಿಜೆಪಿಯ ಶೇ.೧೦ ರ ಮೀಸಲಾತಿ ರಾಜಕಾರಣವು ಇಂಥಾ ಗುಂಪುವಾರು ಆಗ್ರಹಗಳಿಗೆ ಬೇಕಿರುವ ಭೂಮಿಕೆಯನ್ನು ಒದಗಿಸಿಕೊಟ್ಟಿದೆ. ಮತ್ತು ಹಣಕಾಸು ಮಂತ್ರಿ ಪೀಯೂಷ್ ಗೋಯಲ್ ಅವರು ತಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅಧಿಕ ಆದಾಯ ಹೊಂದಿರುವ ವರ್ಗಗಳಿಗೂ ತೆರಿಗೆ ಸಡಿಲಿಸುವುದಾಗಿ ನೀಡಿರುವ ಭರವಸೆಯು ಈ ಉನ್ಮಾದಕ್ಕೆ ಇನ್ನಷ್ಟು ಉರುವಲನ್ನು ಸರಬರಾಜು ಮಾಡಿದೆ.

ಹೀಗಿರುವಾಗ ಈ ರಾಜಕೀಯ ಆಶೋತ್ತರಗಳ ಆರ್ಥಿಕ ಕಾರ್ಯಸಾಧ್ಯತೆಗಳ ಪ್ರಶ್ನೆ ಗಂಭೀರವಾಗಿ ಎದುರಾಗುತ್ತದೆ. ಸರ್ಕಾರದ ಅಂದಾಜುಗಳೇ ಹೇಳುವಂತೆ ವಿತ್ತೀಯ ಕೊರತೆಯ ಮಟ್ಟವನ್ನು ಈಗಿರುವ ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ ಶೇ.೩.೩ರಿಂದ ಕೇವಲ ಶೇ.೦.೧ರಷ್ಟು ಏರಿಸಿ ೩.೪ರಷ್ಟಕ್ಕೆ ನಿಗದಿಗೊಳಿಸಿಕೊಂಡರೆ ಸಾಕು  ಈ ಎಲ್ಲಾ ಭರವಸೆಗಳನ್ನು ಈಡೇರಿಸಬಹುದು. ಆದರೆ ಇದು ನಂಬಲರ್ಹವೇ ಎಂಬ ಪ್ರಶ್ನೆ ಇದೆ. ಏಕೆಂದರೆ ವಿತ್ತೀಯ ಕೊರತೆಯ ಲೆಕ್ಕಾಚಾರ ಮಾಡುವಾಗ ಹಾಲೀ ಸರ್ಕಾರವು ಸಾಮಾನ್ಯ ಒಟ್ಟಾರೆ ಅಂತರಿಕ ಉತ್ಪನ್ನ (ನಾಮಿನಲ್ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಅನ್ನು ಶೇ. ೧೧.೫ರಷ್ಟಿರುತ್ತದೆ ಎಂದೂ ಹಾಗೂ  ರಿಸರ್ವ್ ಬ್ಯಾಂಕ್ ಮತ್ತು ಇತರ ಸಾರ್ವಜನಿಕ ಬ್ಯಾಂಕುಗಳಿಂದ ಸರ್ಕಾರಕ್ಕೆ ಇನ್ನೂ ಹೆಚ್ಚು ಲಾಭದ ಪಾಲು ದೊರೆಯುತ್ತದೆ ಎಂದೂ ಉತ್ಪ್ರೇಕ್ಷಿತ ಹಾಗೂ ತಪ್ಪು ಅಂದಾಜುಗಳನ್ನಿಟ್ಟುಕೊಂಡಿದೆ. ಹೀಗಾಗಿ ಸರ್ಕಾರದ ಲೆಕ್ಕಾಚಾರು ನಂಬಲನರ್ಹ  ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ವ್ಯಾಪಕವಾಗಿದೆ. ಸರ್ಕಾರವು ಬದಲಾದಂತೆ ಬ್ಯಾಂಕುಗಳೊಡನೆ ಇರುವ ಸಾಂಸ್ಥಿಕ ಹೊಂದಾಣಿಕೆಗಳೂ ಬದಲಾಗುತ್ತವೆ. ಆರ್ಥಿಕ ಅಭಿವೃದ್ಧಿಯನ್ನು ಪುನಶ್ಚೇತನಗೊಳಿಸಬೇಕೆಂದರೆ ಸರ್ಕಾರಗಳು ಮೂಲಭೂತ ಬದಲಾವಣೆಗಳನ್ನು ಸಾಧಿಸಲು ಪ್ರಾಮಾಣಿಕ ನೀತಿಗಳನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ. ವಿತ್ತೀಯ ಅಸಮತೋಲನದ ಅಪಾಯವು ನೆತ್ತಿಯ ಮೇಲೆ ತೂಗುತ್ತಿರುವಾಗ ಮತ್ತು ತತ್‌ಕ್ಷಣದ ಲಾಭವನ್ನು ಪಡೆಯುವ ಸಲುವಾಗಿ ಸುವ್ಯವಸ್ಥಿತ ರಾಜಕೀಯ ಒತ್ತಡಗಳು ಏರುತ್ತಿರುವಾಗ ಹೊಸದಾಗಿ ಅಧಿಕಾರಕ್ಕೆ ಬರುವ ಯಾವುದೇ ಸರ್ಕಾರವು ಅಂಥ ದೀರ್ಘ ಕಾಲೀನ ಕ್ರಮಗಳ ಬಗ್ಗೆ ತನ್ನ  ಗಮನವನ್ನು ಕೇಂದ್ರೀಕರಿಸಲು ಸಾಧ್ಯವೇ? ಇಂಥಾ ಸನಿವ್ವೇಶದಲ್ಲಿ ಬಿಜೆಪಿ ಸರ್ಕಾರವು ಮಂಡಿಸಿರುವ ಮಧ್ಯಂತರ ಬಜೆಟ್ಟು ವೋಟುಬ್ಯಾಂಕಿಗೆ ನೀಡಿರುವ ಆಮಿಷ ಮಾತ್ರವಲ್ಲದೆ ಭಿನ್ನಾವದ ರಾಜಕೀಯ ಅಜೆಂಡಾ ಮತ್ತು ಇಚ್ಚಾಶಕ್ತಿಯನ್ನು ಹೊಂದಿರುವ ಸರ್ಕಾರವೊಂದು ಕಾರ್ಯನಿರ್ವಹಿಸದಂತೆ ಮಾಡುವ ನೇಣುಹಗ್ಗವೂ ಆಗಿದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top