ISSN (Print) - 0012-9976 | ISSN (Online) - 2349-8846

ಅಮೆಜಾನ್ ಕಾಳ್ಗಿಚ್ಚಿನಲ್ಲಿ ಉರಿಯುತ್ತಿರುವ ಪ್ರಶ್ನೆಗಳು

ಹವಾಮಾನ ಬಿಕ್ಕಟ್ಟಿನ ವಿದ್ಯಮಾನವನ್ನೇ ನಿರಾಕರಿಸುವ ಮತ್ತು ಮೂಲನಿವಾ ಸಮುದಾಯಗ ಮೇಲೆ ಆಕ್ರಮಣ ನಡೆಸುತ್ತಿರುವ ಬ್ರೆಜಿಲಿನ ಅಧ್ಯಕ್ಷ ಬೋಲ್ಸನಾರೊ ಅವರ ನಡೆಗಳು ಅನಾಹುತಗಳನ್ನು ತೀವ್ರಗೊಳಿಸಲಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಜಗತ್ತಿನ ಅತಿ ದೊಡ್ಡ ಇಂಗಾಲ ಹೀರಿಕೆಯ ತೊಟ್ಟಿಯಾಗಿ ಕೆಲಸ ಮಾಡುವ ೫೫ ಲಕ್ಷ ಚದುರ ಕಿಮೀನಷ್ಟು ವಿಸ್ತಾರದ ಅಮೆಜಾನ್ ಅರಣ್ಯದ ಒಂದು ಭಾಗದಿಂದ ದಟ್ಟವಾದ ಹೊಗೆ ಮೋಡಗಳು ಆಕಾಶವನ್ನು ಆವರಿಸಿಕೊಳ್ಳುತ್ತಿದೆ. ಈ ಕಾಳ್ಗಿಚ್ಚು ಅತ್ಯಂತ ಹೆಚ್ಚು ಹೊಗೆಯನ್ನು ಉಗುಳಿದಾಗ ಅದು ಬ್ರೆಜಿಲ್ ದೇಶದ ಅತಿ ಹೆಚ್ಚು ಜನದಟ್ಟಣೆ ಪ್ರದೇಶವಾದ ಪೂರ್ವ ಕರಾವಳಿಯ ಆಗಸವನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ಬ್ರೆಜಿಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ರಿಸರ್ಚ್‌ನ ವರದಿಯ ಪ್ರಕಾರ ೨೦೧೮ಕ್ಕೆ ಹೋಲಿಸಿದಲ್ಲಿ ಕಾಳ್ಗಿಚ್ಚು ಪ್ರಕರಣಗಳು ಶೇ.೮೪ರಷ್ಟು ಹೆಚ್ಚಿದೆ. ಹೀಗಾಗಿ ಈ ಸಾಲಿನಲ್ಲಿ ವರದಿಯಾದ ೭೪೦೦೦ ಕಾಳ್ಗಿಚ್ಚು ಪ್ರಕರಣಗಳು ಜಗತ್ತಿನ ಅತ್ಯಂತ ದೊಡ್ಡ ಜೀವವೈವಿಧ್ಯವನ್ನು ಹೊಂದಿರುವ ಈ ಅರಣ್ಯವನ್ನು ಸುಟ್ಟು ಬೂದಿ ಮಾಡುತ್ತಿದೆ. ಕಾಡಿನಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಅಪರೂಪವೇನಲ್ಲ. ಏಕೆಂದರೆ ಒಣಹವೆಯ ಸಂದರ್ಭದಲ್ಲಿ ಕಾಡು ಬೆಂಕಿಗಳು ಪದೇಪದೇ ಸಂಭವಿಸುತ್ತವೆ. ಆದರೆ ಈ ಬಾರಿ ಅದರ ತೀವ್ರತೆ ಅತ್ಯಂತ ಹೆಚ್ಚಾಗಿದ್ದು ಜಾಗತಿಕವಾಗಿ ಕಳವಳವನ್ನು ಹುಟ್ಟುಹಾಕಿದೆ.

ಅಮೆಜಾನ್ ಪರಿಸರ ಸಂಶೋಧನಾ ಕೇಂದ್ರದ (ಐಎನ್‌ಪಿಇ) ವಿಜ್ನಾನಿಗಳ ಪ್ರಕಾರ ಅತಿ ಹೆಚ್ಚು ಕಾಡುಕಡಿತಕ್ಕೆ ಬಲಿಯಾಗಿದ್ದ ಅಮೆಜಾಜಿನ ೧೦ ಮುನಿಸಿಪಲ್ ಪ್ರದೇಶಗಳಲ್ಲೇ ಈ ವರ್ಷ ಅತ್ಯಂತ ತೀವ್ರತರವಾದ ಕಾಳ್ಗುಚ್ಚುಗಳೂ ಸಂಭವಿಸಿವೆ. ಈ ಕಾಳ್ಗಿಚ್ಚು ಸಂಭವಿಸಿರುವುದರಲ್ಲಿ ೨೦೧೬ರಲ್ಲಿ ಕಾಣಿಸಿಕೊಂಡ ಬರಗಾಲಕ್ಕೆ ಒಂದು ಪಾತ್ರವಿದ್ದರೂ ಪರಿಸರ ವಿಜ್ನಾನಿಗಳ ಪ್ರಕಾರ ಈ ಬೃಹತ್ ಕಾಳ್ಗಿಚ್ಚು ಬರಗಾಲದಿಂದಲೋ ಅಥವ ಇನ್ಯಾವುದೇ ನೈಸರ್ಗಿಕ ಕಾರಣಗಳಿಂದಲೋ ಸಂಭವಿಸಿರಬಹುದೆಂಬ ಊಹಾಪೋಹಗಳನ್ನು ತಿರಸ್ಕರಿಸಬೇಕು. ಆ ವಿಜ್ನಾನಿಗಳ ಪ್ರಕಾರ ಹಾಲಿ ಒಣಹವೆ ಇರುವ ಋತುವಾಗಿದ್ದರೂ ಅಮೆಜಾನಿನಲ್ಲಿರುವ ತೇವಾಂಶದ ಮಟ್ಟವು ಕಳೆದ ಮೂರು ವರ್ಷದ ಸರಾಸರಿಗಿಂತಲೂ ಹೆಚ್ಚೇ ಇದೆ. ಅಮೆಜಾನ್ ಪರಿಸರ ಸಂಶೋಧನಾ ಕೇಂದ್ರ ಮತ್ತು ಡಿಫಾರೆಸ್ಟೇಷನ್ ಅಲರ್ಟ್ ಸಿಸ್ಟಮ್ (ಕಾಡುಕಡಿತ ಜಾಗೃತಿ ವ್ಯವಸ್ಥೆ)ಗಳ ಪ್ರಕಾರ ಈ ಕಾಳ್ಗಿಚ್ಚಿಗ ಏಕಮಾತ್ರ ಕಾರಣ ಕಾಡುಕಡಿತ-ಅಪ ಅರಣ್ಯೀಕರಣ.

ಬ್ರೆಜಿಲ್‌ನ ಅಧ್ಯಕ್ಷರಾದ ಬೋಲ್ಸನಾರೋ ಅವರಿಗೆ ಹವಾಮಾನ ವಿಜ್ನಾನದಲ್ಲೂ ನಂಬಿಕೆ ಇಲ್ಲ. ಅಥವಾ ವೈಜ್ನಾನಿಕ ಅರಣ್ಯೀಕರಣ ಮತ್ತು ಅರಣ್ಯ ಸಂರಕ್ಷಣೆಯಲ್ಲೂ ನಂಬಿಕೆ ಇಲ್ಲ. ಇದೇ ಆಗಸ್ತ್ ತಿಂಗಳ ಪ್ರಾರಂಭದಲ್ಲಿ ಐಎನ್‌ಪಿಇ ನ ಮುಖ್ಯಸ್ಥರಾದ ರಿಕಾರ್ಡೋ ಗಾಲ್ವಾವೋ ಅವರು ಬ್ರೆಜಿಲ್ ದೇಶದಲ್ಲಿ ಅತ್ಯಂತ ತೀವ್ರಗತಿಯ ಅಪ-ಅರಣ್ಯೀಕರಣವಾಗುತ್ತಿದೆಯೆಂದು (ಕಾಡು ಕಡಿತ) ಎಚ್ಚರಿಸಿದ್ದರು. ೨೦೧೯ರ ಜೂನ್ ತಿಂಗಳೊಂದರಲ್ಲೇ ಮಾಲಿಯಂಥ ದೇಶದ ಒಟ್ಟು ವಿಸ್ತೀರ್ಣಕ್ಕೆ ಸಮನಾದಷ್ಟು ಎಂದರೆ ೨೦೭೨ ಚದುರ ಕಿಮೀ ಯಷ್ಟು ಕಾಡನ್ನು ಬ್ರೆಜಿಲ್  ಕಳೆದುಕೊಂಡಿದೆಯೆಂದು ಅವರು ಹೇಳಿದ್ದರು. ಆದರೆ ಬ್ರೆಜಿಲ್ ಅಧ್ಯಕ್ಷ ಬೋಲ್ಸನಾರೋ ಅದನ್ನು ಸುಳ್ಳೆಂದು ನಿರಾಕರಿಸಿದ್ದಲ್ಲದೆ ಗಾಲ್ವಾವೋ ಅವರನ್ನು ಆ ಹುದ್ದೆಯಿಂದ ಕಿತ್ತುಹಾಕಿದ್ದರು. ೨೦೧೯ರ ಮೊದಲ ಆರು ತಿಂಗಳಲ್ಲಿ ನಾಟಾ ವ್ಯವಹಾರ, ಗಣಿಗಾರಿಕೆ ಮತ್ತು ಕೃಷಿ ಉದ್ದಿಮೆ ಸಂಸ್ಥೆಗಳ ಹಿತಾಸಕ್ತಿಯನ್ನು ಕಾಯಲು ಅವರು ಬ್ರೆಜಿಲ್‌ನ ಪರಿಸರ ಮತ್ತು ಪುನರ್‌ನವೀಕರಣ ಮಾಡಬಹುದಾದ ನೈಸರ್ಗಿಕ ಸಂಪನ್ಮೂಲಗಳ ಸಂಸ್ಥೆಗೆ (ಐಅರ್‌ಎಎಂಎ) ಕೊಡುತ್ತಿದ್ದ ಸಹಾಯ ಧನವನ್ನು ಶೇ.೨೦ರಷ್ಟು ಕಡಿತಗೊಳಿಸಿದರು. ಐಅರ್‌ಎಎಂಎ ಅಧಿಕಾರಿಗಳು ತುಂಬಾ ಕಠಿಣವಾದ ನಿಯಂತ್ರಣಗಳನ್ನು ಹೇರುತ್ತಾರಲ್ಲದೆ  ಎರಡು ಕೈಗಳಲ್ಲೂ  ಪೆನ್ನನ್ನು ಹಿರಿದುಕೊಂಡು ದಂಡಗಳನ್ನು ವಿಧಿಸುತ್ತಾರೆ ಎಂದು ಅವರು ಹೇಳಿದ್ದರು. ಅಲ್ಲದೆ ಈಗ ಅಮೆಜಾನ್ ಉದ್ದಿಮೆ-ವ್ಯವಹಾರಗಳನ್ನು  ಮಾಡಲು ಸಿದ್ಧವಾಗಿದೆಯೆಂದು ಅವರು ಘೋಷಿಸಿದರು.

ನಾಟಾ ಉದ್ದಿಮೆ, ಗಣಿಗಾರಿಕೆ ಹಾಗೂ ಕೃಷಿ ಉದ್ದಿಮೆಗಳಲ್ಲಿ ತೊಡಗಿಕೊಂಡಿರುವ ಉದ್ಯಮಿಗಳು ಅಮೆಜಾನ್ ಅರಣ್ಯದೊಳಗೆ ಮೂಲನಿವಾಸಿಗಳು ವಾಸಿಸುವುದನ್ನು ತಮ್ಮ ವ್ಯವಹಾರಗಳಿಗೆ ದೊಡ್ಡ ಅಡ್ಡಿಯೆಂದು ಪರಿಗಣಿಸುತ್ತಾರೆ. ಏಕೆಂದರೆ ಆ ಮೂಲನಿವಾಸಿಗಳು ತಾವು ವಾಸಿಸುತ್ತಿರುವ ಅರಣ್ಯವನ್ನು ಮಾರುಕಟ್ಟೆಯ ಸರಕಾಗಿ ಪರಿವರ್ತಿಸುವುದನ್ನು ವಿರೋಧಿಸುತ್ತಿದ್ದಾರೆ. ಬ್ರೆಜೆಲಿನ ಜನಸಂಖ್ಯೆಯ  ಶೇ.೦.೬ರಷ್ಟಾಗುವ ಈ ಮೂಲನಿವಾಸಿ ಸಮುದಾಯಗಳಿಗಾಗಿ ಬ್ರೆಜಿಲ್‌ನ ೧೯೮೮ರ ಸಂವಿಧಾನವು ವಿಶಾಲವಾದ ಮೀಸಲು ಅರಣ್ಯವನ್ನು, ಅಮೆಜಾನ್ ಅರಣ್ಯ ಪ್ರದೇಶದಲ್ಲಿ, ಕಾದಿರಿಸಿದೆ. ಈ ಅಮೆರಿಂಡಿಯನ್ ಮೂಲನಿವಾಸಿಗಳ ಬಗ್ಗೆ ಬೋಲ್ಸನಾರೋ ಮತ್ತವರ ಬಲಪಂಥೀಯ ಆಳುವ ಕೂಟದಲ್ಲಿ ಹಂತಕ ಧೋರಣೆಯೇ ಮನೆಮಾಡಿದೆ. ಯವನಾವ ಮೂಲನಿವಾಸಿ ಸಮುದಾಯದ ನಾಯಕರಾದ ತಾಷ್ಕಾ ಯವನಾವ ಅವರ ಪ್ರಕಾರ ಅಲ್ಲಿನ ಮೂಲನಿವಾಸಿಗಳು ಸಾಮೂಹಿಕ ನರಹತ್ಯೆಗೆ ಗುರಿಯಾಗುತ್ತಿದ್ದಾರೆ.

ಹಾಲಿ ಅಮೆಜಾನನ್ನು ಆವರಿಸಿರುವ ಕಾಳ್ಗಿಚ್ಚಿಗೆ ಪರಿಸರವಾದಿ ಸರ್ಕಾರೇತರ ಸಂಸ್ಥೆಗಳೇ ಕಾರಣವೆಂದು ಬೋಲ್ಸನಾರೋ ದೂಷಿಸಿದ್ದಾರೆ. ಬ್ರೆಜಿಲ್ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿ ಅವರ ಉದ್ದಿಮೆಪರ ನೀತಿಗಳಿಗೆ ಅಡ್ಡಿಯುಂಟು ಮಾಡಲೆಂದೇ ಸರ್ಕಾರೇತರ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ಕಾಡಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರ ಈ ಆರೋಪಕ್ಕೆ ಪೂರಕವಾದ ಯಾವ ಸಾಕ್ಷಿಗಳೂ ಇಲ್ಲ. ಬ್ರೆಜಿಲಿನ ಅಧ್ಯಕ್ಷರ ಕಡೆಯಿಂದ ಇದು ಮತ್ತೊಂದು ಪ್ರಚೋದನಾತ್ಮಕ ಹೇಳಿಕೆಯಾಗಿದೆ.

ಕಳೆದೆರಡು ವಾರಗಳಲ್ಲಿ ಬೋಲ್ಸನಾರೋ ವಿರುದ್ಧದ ಆಕ್ರೋಶವು ಮುಗಿಲುಮುಟ್ಟಿದೆ. ರಾಜಧಾನಿ ರಿಯೋ ಡಿ ಜನೈರೋ ಹಾಗೂ ಸಾವೋ ಪಾವ್ಲೋಗಳನ್ನು ಕೇಂದ್ರವಾಗಿಟ್ಟುಕೊಂಡು ಬ್ರೆಜಿಲಿನಾದ್ಯಂತ ಸಾಮೂಹಿಕ ಪ್ರದರ್ಶನಗಳು ನಡೆಯುತ್ತಿವೆ. ಹಾಗೂ ಆ ಸಾಮೂಹಿಕ ಪ್ರದರ್ಶನಗಳಲ್ಲಿ ಅಮೆಜಾನ್ ಜನತೆಗೆ ಸೇರಿದ್ದು ಎಂಬ ಹಾಗೂ  ಅಮೆಜಾನ್ ಉಳಿಯುತ್ತದೆ, ಬೋಲ್ಸನಾರೋ ಹೋಗುತ್ತಾರೆ ಎಂದು ಹಾಕುತ್ತಿರುವ ಘೋಷಣೆಗಳು ಜನತೆಯ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮತ್ತು ಬೋಲ್ಸನಾರೊ ಅವರ ಜನಪ್ರಿಯತೆಯೂ ಕುಸಿಯುತ್ತಿದೆ. ಸಿಎನ್‌ಟಿ/ ಎಂಡಿಎ ಎಂಬ ಸಂಸ್ಥೆಯೊಂದು ಮಾಡಿದ ಜನಾಭಿಪ್ರಾಯ ಸಂಗ್ರಹದ ಪ್ರಕಾರ ಅವರು ಅಭಿಪ್ರಾಯ ಕೇಳಿದ ಜನರಲ್ಲಿ ಶೇ.೩೯.೫ಕ್ಕೂ ಹೆಚ್ಚಿನವರು ಬೋಲ್ಸನಾರೋ ಸರ್ಕಾರ ಕೆಟ್ಟದಾಗಿದೆ ಅಥವಾ ಭಯಾನಕವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಬೋಲ್ಸನಾರೋ ಅವರ ವೈಯಕ್ತಿಕ ಜನಪ್ರಿಯತೆಯು ಇದೇ ಜನವರಿಯಲ್ಲಿ ಶೇ.೩೮.೯ರಷ್ಟಿದ್ದದ್ದು ಈಗ ಶೇ.೨೯.೪ಕ್ಕೆ ಕುಸಿದಿದೆ. ಅಮೆಜಾನಿನ ಕಾಳ್ಗಿಚ್ಚು, ಅದಕ್ಕೆ ಬೋಲ್ಸನಾರೋ ನೀಡಿದ ಅವೈಜ್ನಾನಿಕ ಪ್ರತಿಕ್ರಿಯೆ ಮತ್ತು ಜನಪ್ರತಿರೋಧಗಳು ಸರ್ಕಾರದ ಮೇಲೆ ಒತ್ತಡ ಹೇರಿವೆ.

ಯೂರೋಪೂ ಸಹ ಬೋಲ್ಸನಾರೋ ಅವರನ್ನು ಟೀಕಿಸುತ್ತಾ ಆತನ ಎರಡೂ ಪ್ರಮುಖ ವಾಣಿಜ್ಯ ಹಾಗೂ ವ್ಯಾವಹಾರಿಕ ಉದ್ದೇಶಗಳನ್ನೇ ಪ್ರಶ್ನಿಸತೊಡಗಿದೆ.  ಯೂರೋಪಿನ ರೈತರು ಬ್ರೆಜಿಲಿನಿಂದ ದನದ ಮಾಂಸವನ್ನು ಆಮದು ಮಾಡಿಕೊಳ್ಳದಂತೆ ಐರೋಪ್ಯ ಒಕ್ಕೂಟದ ಮನವೊಕಿಸಿದ್ದಾರೆ.  ಈ ನೀತಿಯೇ ಸಾಕಷ್ಟು ಹಾನಿಕರವಾಗಿತ್ತು. ಆದರೆ ಅದು ಅಲ್ಲಿಗೇ ನಿಲ್ಲದೆ ಅರ್ಜೆಂಟೀನಾ, ಬ್ರೆಜಿಲ್, ಪೆರುಗ್ವೆ, ಉರುಗ್ವೆ ಮತ್ತು ವೆನಿಜುಯೇಲಾ ದೇಶಗಳನ್ನೊಳಗೊಂಡ ವಾಣಿಜ್ಯ ವಲಯವಾದ ಮರ್ಕೋಸರ್ ನೊಂದಿಗಿನ ವಾಣಿಜ್ಯ ಒಪ್ಪಂದದಿಂದಲೇ ಐರೋಪ್ಯ ಒಕ್ಕೂಟವು ಹಿಂತೆಗೆಯುವ ರೂಪ ಪಡೆಯತೊಡಗಿತು. ಅಷ್ಟು ಮಾತ್ರವಲ್ಲ ಬೋಲ್ಸನಾರೋ ಅವರು ಬ್ರೆಜಿಲ್ ದೇಶವನ್ನು ಅಭಿವೃದ್ಧಿಗೊಂಡ ದೇಶಗಳು ಎಂದು ಹೇಳಲಾಗುವ ೩೬ ದೇಶಗಳ ಒಕ್ಕೂಟವಾದ ಒಇಸಿಡಿ (ಆರ್ಗನೈಸೇಷನ್ ಫಾರ್ ಎಕಾನಮಿಕ್ ಕೋಆಪರೇಷನ್ ಅಂಡ್ ಡೆವಲಪ್‌ಮೆಂಟ್)ಯ ಭಾಗ ಮಾಡುವ ಆಶಯವನ್ನು ಹೊಂದಿದ್ದರು. ಈಗ ಬ್ರೆಜಿಲ್‌ಗೆ ಒಇಸಿಡಿಗೆ ಪ್ರವೇಶ ಸಿಗುವುದು ಅನುಮಾನ.

ಫ್ರಾನ್ಸಿನಲ್ಲಿ ಇತ್ತೀಚೆಗೆ ನಡೆದ ಜಿ-೭ರ ಶೃಂಗ ಸಭೆಯಲ್ಲಿ ಅಮೆಜಾನ್ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಸೇರಿತ್ತು. ಬೋಲ್ಸನಾರೋಗೆ ಆಪ್ತನಾಗಿರುವ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆ ಸಭೆಯಲ್ಲಿ ಭಾಗವಹಿಸಲಿಲ್ಲ. ಅಮೆಜಾನ್ ಕಾಳ್ಗಿಚ್ಚಿನ ವಿರುದ್ಧ್ಗ ಸೆಣೆಸಲು ೨ ಕೋಟಿ ಡಾಲರ್‌ಗಳನ್ನು ನೀಡಲು ಆ ಸಭೆಯು ನಿರ್ಧರಿಸಿತು. ಆದರೆ ಸಮಸ್ಯೆಯ ಗಾತ್ರಕ್ಕೆ ಹೋಲಿಸಿದಲ್ಲಿ ಅದೊಂದು ಸಣ್ಣ ಮೊತ್ತವಷ್ಟೆ. ಈ ಅನುದಾನವು ಅತಾರ್ಕಿಕವಾಗಿರುವುದು ಮಾತ್ರವಲ್ಲದೆ ಅಮೆಜಾನಿನ ಮೇಲಿನ ಅನಗತ್ಯ ದಾಳಿಯಾಗಿದೆಯೆಂದು ಬಣ್ಣಿಸಿ ಬೋಲ್ಸನಾರೋ ಅದನ್ನು ನಿರಾಕರಿಸಿದರು. ಆದರೆ ಹೆಚ್ಚುತ್ತಲೇ ಇರುವ ಒತ್ತಡಕ್ಕೆ ಮಣಿದು ಕಾಳ್ಗಿಚ್ಚನ್ನು ನಂದಿಸಲು ಅವರು ಸೈನ್ಯವನ್ನು ಕಳಿಸಿದ್ದಾರೆ. ಆದರೆ ಅವರ ಈ ಅತ್ಯಂತ ಸಣ್ಣ ಕ್ರಮದ ಹಿಂದೆಯೂ ಇರುವುದು ವ್ಯಾವಹಾರಿಕ ಉದ್ದೇಶಗಳೇ ವಿನಾ ಅಮೆಜಾನ್ ಅರಣ್ಯ ಸಂಪತ್ತಿನ ಮೌಲಿಕ ಮಹತ್ವದ ಬಗ್ಗೆಯಾಗಲೀ, ಅಲ್ಲಿರುವ ಮೂಲನಿವಾಸಿಗಳ ಬಗೆಗಿನ ಕಾಳಜಿಯಿಂದಲ್ಲ.

ಈ ಮಧ್ಯೆ ಬ್ರೆಜಿಲಿಯನ್ ಕಾಳ್ಗಿಚ್ಚು ಪಕ್ಕದ ಬೊಲಿವಿಯಾಗೂ ಹರಡಿಕೊಂಡಿದೆ. ಬೊಲಿವಿಯಾದ ಅಧ್ಯಕ್ಷ ಇವೋ ಮೊರಲೆಸ್ ಅವರು ತ್ವರಿತಗತಿಯಲ್ಲಿ ಪ್ರತಿಕ್ರಿಯಿಸಿ ಈ ಕಾಳ್ಗಿಚ್ಚಿನ ಕೆನ್ನಾಲಗೆಗಳನ್ನು ತಣ್ಣಗಾಗಿಸಲು ಬಾಡಿಗೆ ಸೂಪರ್ ಟ್ಯಾಂಕರ್‌ಗಳನ್ನು ಬಳಸಿದರು. ಬೊಲಿವಿಯಾದ ಸಂವಿಧಾನದಲ್ಲಿ ಭೂಮಿತಾಯಿಯ ಕಾನೂನು ಎಂಬುದೊಂದಿದೆ. ಅದು ಪ್ರಕೃತಿಗೆ ಮನುಷ್ಯರಿಗೆ ಸರಿ ಸಮಾನವಾದ ಹಕ್ಕನ್ನು ನೀಡುತ್ತದೆ. ಅಮೆಜಾನ್ ಕಾಳ್ಗಿಚ್ಚಿಗೆ ಈ ಎರಡೂ ದೇಶಗಳು ನೀಡಿದ ವಿಭಿನ್ನ ಪ್ರಕ್ತಿಕ್ರಿಯೆಗಳನ್ನು ಗಮನಿಸಿದರೆ ಆಯಾ ಸರ್ಕಾರಗಳ ರಾಜಕೀಯ-ತಾತ್ವಿಕ ಧೋರಣೆಗಳೇ ಪರಿಸರಾತ್ಮಕ ಮತ್ತು ಮಾನವೀಯ ಬಿಕ್ಕಟ್ಟುUಳ ಕುರಿತಾಗಿ ಅವುಗಳ ಧೋರಣೆಯನ್ನೂ ತೀರ್ಮಾನಿಸುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದಲೇ ಅಮೆಜಾನ್ ಅನ್ನು ಉಳಿಸುವ ಹೋರಾಟವನ್ನು ಒಂದು ನ್ಯಾಯಯುತ ಮತ್ತು ಘನತೆಯುಳ್ಳ ರಾಜಕೀಯ ವ್ಯವಸ್ಥೆಯನ್ನು ಸ್ಥಾಪಿಸಲು ನಡೆಸುವ ಹೋರಾಟದಿಂದ ಹೊರತುಪಡಿಸಲು ಸಾಧ್ಯವೇ ಇಲ್ಲ. 

 

 

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top