ISSN (Print) - 0012-9976 | ISSN (Online) - 2349-8846

ಊಹೆಗೆ ತಕ್ಕಂತೆ ನಡೆದುಕೊಳ್ಳುವುದರಲ್ಲಿನ ರಾಜಕೀಯ ಅಪಾಯಗಳು

.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಮೊದಲಿಗೇ ನಾನು ಸ್ಪಷ್ಟಪಡಿಸುವುದೇನೆಂದರೆ, ನಾನು ಮಾತನಾಡುತ್ತಿರುವುದು ಕಾಲಕಾಲಕ್ಕೆ ಚುನಾವಣಾ ಪರಿಣಿತರು ಮತ್ತು ವಿಶ್ಲೇಷಕರು ಕೈಗೊಳ್ಳುವ ಚುನಾವಣಾ ವಿಶ್ಲೇಷಣೆಗಳಲ್ಲಿ ಅಡಕವಾಗಿರುವ ಭವಿಷ್ಯದ ಊಹೆಗಳ ಬಗ್ಗೆಯಲ್ಲ. ಅಥವಾ ಮತಗಟ್ಟೆ ಸಮೀಕ್ಷೆಗಳ ಪದ್ಧತಿಯ ಮೂಲಕ ಚುನಾವಣಾ ಫಲಿತಾಂಶಗಳ ಬಗ್ಗೆ ಮಾಡುವ ಊಹೆಗಳ ಬಗ್ಗೆಯೂ ಅಲ್ಲ. ಇವೆಲ್ಲವೂ ಚುನಾವಣೆಗೆ ಮುನ್ನ ಮತದಾರರ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಅವರೊಡನೆ ನಡೆಸುವ ಮಾತುಕತೆಗಳನ್ನು ಆಧರಿಸಿ ಊಹಿಸುವ ಪ್ರಯತ್ನಗಳಾಗಿವೆ. ಈ ಫಲಿತಾಂಶಗಳ ಊಹಾತ್ಮಕತೆಯು ರಾಜಕೀಯದ ಒಂದು ನಿರ್ದಿಷ್ಟ ವಲಯಕ್ಕೆ ಅನ್ವಯಿಸಬಹುದು. ಮತ್ತೊಂದಕ್ಕೆ ಆಗದು. ಈ ಫಲಿತಾಂಶಗಳ ಊಹಾತ್ಮಕತೆಯ ಪರಿಕಲ್ಪನೆಯನ್ನು ರಾಜಕೀಯ ಅಧಿಕಾರವನ್ನು ಕೈವಶ ಮಾಡಿಕೊಳ್ಳುವುದೇ ಪ್ರಧಾನ ಪ್ರೇರಣೆಯಾಗಿರುವ ಪಕ್ಷ ರಾಜಕೀಯವನ್ನು ಅರ್ಥಮಾಡಿಕೊಳ್ಳಲು ಬೇರೊಂದು ಕೋನದಿಂದಲೂ ಅರ್ಥೈಸಬಹುದು. ಫಲಿತಾಂಶಗಳ ಊಹಾತ್ಮಕತೆಯನ್ನು ರಾಜಕೀಯ ಪಕ್ಷಗಳು ಅರ್ಥೈಸುವ ರೀತಿಯೇ ಬೇರೆ ಹಾಗೂ ಪರಿಣಿತರು ಮತ್ತು ವಿಶ್ಲೇಷಕರು ಅರ್ಥೈಸುವ ರೀತಿಯೇ ಬೇರೆ ಎಂದೂ ವಾದಿಸಬಹುದು. ಮತದಾರರು ತಮ್ಮ ಪಕ್ಷದ ಅವಕಾಶಗಳನ್ನು ಹೆಚ್ಚಿಸುವ ರೀತಿಯಲ್ಲಿ ಮತ್ತು ದಿಕ್ಕಿನಲ್ಲಿ ಮತದಾನ ಮಾಡಬೇಕೆಂದು ರಾಜಕೀಯ ಪಕ್ಷಗಳು ನಿರೀಕ್ಷಿಸುತ್ತವೆ.

ಮತದಾರರ ಆಯ್ಕೆಯ ಬಗೆಗಿನ ಊಹೆಗಳು ಒಂದು ನಿರ್ದಿಷ್ಟ ಪಕ್ಷದ ತಂತ್ರೋಪಾಯಗಳಿಗೆ ತಕ್ಕಂತೆ ಹೇಗೆ ಮತದಾರರ ಮನೋಭಾವವನ್ನು ರೂಪಿಸಲಾಗಿರುತ್ತದೆ ಎಂಬುದನ್ನು ಆಧರಿಸಿರುತ್ತದೆ. ಆದರೆ ಅದಕ್ಕೂ ಮತ್ತು ಚುನಾವಣೆಗೆ ಮತದಾರರು ಸಜ್ಜುಗೊಳ್ಳುವ ರೀತಿಗೂ ನಡುವೆ ವ್ಯತ್ಯಾಸವಿರುತ್ತದೆ. ಕೆಲವು ಪಕ್ಷಗಳು ಚುನಾವಣಾ ನಂತರದಲ್ಲೂ ಮತದಾರರು ಎದುರಿಸಬೇಕಾದ ವಾಸ್ತವಿಕ ಸಮಸ್ಯೆಗಳ ಸುತ್ತ ಮತದಾರರನ್ನು ಅಣಿನೆರೆಸುವ ಪ್ರಯತ್ನಗಳನ್ನು ಮಾಡುತ್ತಾರೆ. ಅಂತಹ ಪ್ರಕ್ರಿಯೆಗಳಲ್ಲಿ ರಾಜಕೀಯ ಪಕ್ಷಗಳು ಮಾಡುವ ಪ್ರಯತ್ನಗಳಲ್ಲಿ ಕೈಜೋಡಿಸುವುದರಲ್ಲಿ ಮತದಾರರು ತಮ್ಮ ರಾಜಕೀಯ ಸ್ವಾಯತ್ತತೆಯನ್ನು ಪ್ರದರ್ಶಿಸುತ್ತಾರೆ. ಆದರೆ ಮತದಾರರು ತಮ್ಮ ಪಕ್ಷದ ಪರವಾಗಿಯೇ ಆಯ್ಕೆ ಮಾಡುವಂತೆ ವ್ಯೂಹತಂತ್ರಗಳನ್ನು ರೂಪಿಸುವುದರಲ್ಲೇ ಬಹುಪಾಲು ರಾಜಕೀಯ ಪಕ್ಷಗಳು ವ್ಯಸ್ತವಾಗಿರುತ್ತವೆ. ೨೦೧೪ ಮತ್ತು ೨೦೧೯ರ ಚುನಾವಣೆಗಳಲ್ಲಿ ಗಮನಿಸಿದಂತೆ ಪ್ರಧಾನವಾಗಿ ಭಾವನಾತ್ಮಕ ವಿಷಯಗಳನ್ನು ಬಡಿದೆಬ್ಬಿಸುವ, ಸುಳ್ಳು ಭರವಸೆಗಳನ್ನು ನೀಡುವ ಹಾಗೂ ಅಪ್ಪಟ ಸುಳ್ಳುಗಳನ್ನು ಹೇಳುವ ಮೂಲಕ ಮತದಾರರ ಆಯ್ಕೆಯನ್ನು ರೂಪಿಸಲಾಯಿತು.

ಯಾವ ಬೌದ್ಧಿಕ ಮತ್ತು ಸಾಂಸ್ಕೃತಿಕ ಸನ್ನಿವೇಶಗಳಲ್ಲಿ ವ್ಯಕ್ತಿಗಳು ಸುಳ್ಳುಗಳನ್ನು ಒಪ್ಪಿಕೊಳ್ಳಲು ಅಥವಾ ಆತ್ಮವಂಚನೆಯನ್ನು ಮಾಡಿಕೊಳ್ಳಲು ಸಿದ್ಧರಾಗುತ್ತಾರೆ? ಮತದಾನವನ್ನು ಮಾಡುವಾಗ ತಾವು ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಿರುತ್ತಾರೋ ಅವರ ಬಗ್ಗೆ ಹೆಚ್ಚುವರಿ ಮಾಹಿತಿಗಳನ್ನು ಪಡೆದುಕೊಳ್ಳುವ ಅಗತ್ಯವಿರುವುದಿಲ್ಲ. ಆ ಬಗ್ಗೆ ಅವರಿಗೆ ಅವರಿಗೆ ಬೌದ್ಧಿಕವಾಗಿ ಸಂತೃಪ್ತಿಯಿರಬೇಕು. ರಾಷ್ಟ್ರೀಯತೆಯಂತಹ ಬಲವಾದ ಭಾವನಾತ್ಮಕ ಅಂಶವನ್ನು ಹೊಂದಿರತಕ್ಕಂತ ಸಾರ್ವಜನಿಕ ಸಂಗತಿಗಳು iತದಾರರಿಗೆ ಒಂದು ಬಗೆಯ ಸಂತೃಪ್ತಿಯನ್ನು ಒದಗಿಸುತ್ತವೆ. ಮೇಲಾಗಿ ಮಡುಗಟ್ಟಿದ ಹತಾಷೆಗಳ ಕಾರಣದಿಂದಾಗಿ ತಾರ್ಕಿಕವಾಗಿ ಹಸಿಸುಳ್ಳುಗಳೆಂದು ಕಂಡುಬರುವ ಸಂಗತಿಗಳನ್ನೂ ನಂಬುವಂತೆ ಮಾಡುತ್ತದೆ. ಈ ಎರಡು ಬಗೆಯ ಊಹೆಗೆ ಖಚಿತವಾಗಿ ನಿಲುಕುವ ಅಂಶಗಳನ್ನೇ ಬಿಜೆಪಿಯು ೨೦೧೪ ಮತ್ತು ೨೦೧೯ರ ಲೋಕಸಭಾ ಚುನಾವಣೆಗಳಲ್ಲಿ  ಬಳಕೆ ಮಾಡಿಕೊಂಡಿತು. ಅದು ೨೦೧೪ರಲ್ಲಿ ಸುಳ್ಳು ಭರವಸೆಗಳನ್ನೂ, ೨೦೧೯ರಲ್ಲಿ ಭಾವನಾತ್ಮಕ ಅಂಶಗಳನ್ನು ಬಳಸಿಕೊಂಡು ಮತದಾರರು ತಮ್ಮ ಪರವಾದ ಆಯ್ಕೆಯನ್ನು ಮಾಡುವಂತೆ ಪ್ರಭಾವಿಸಿತು. ಅಂತಹ ರಾಜಕೀಯದಲ್ಲಿ ಸಮಾಲೋಚನೆ, ಚರ್ಚೆ, ಮತ್ತು ಸಂವಾದಗಳಿಗೆ ಯಾವ ಸ್ಥಾನವೂ ಇರುವುದಿಲ್ಲ.

ಅಂತಹ ಪಕ್ಷಗಳು ಮತದಾರರಲ್ಲಿ ತಮ್ಮ ಪಕ್ಷವು ಮಾಡುವ ನೀತಿಗಳೆಲ್ಲಾ ಜನಪರವೆಂಬ, ಅವು ಜಾರಿಗೊಳಿಸುವ ನೀತಿಗಳು ಮತ್ತು ಆವರ ದೃಷ್ಟಿಕೋನದ ಭಾರತವೇ ಸರಿಯಾದುದೆಂದು ನಂಬಿಕೊಳ್ಳುವಂತೆ ಮಾಡುತ್ತದೆ. ಅಂತಹ ಒಂದು ಸ್ವಚಹರೆಯನ್ನು ಹೊಂದಿರುವ ಪಕ್ಷಗಳಲ್ಲಿ ಗತಿಶೀಲ ಮತ್ತು ಪಾರದರ್ಶಕ ರಾಜಕೀಯಕ್ಕೆ ಅವಕಾಶಗಳೇ ಇರುವುದಿಲ್ಲ. ಜನರ ಅಂತಹ ಭಾಗೀದಾರಿಕೆಯನ್ನು ಸಹ ಅದು ಬಯಸುವುದಿಲ್ಲ. ಹೀಗೆ ಈ ಇಡೀ ಪ್ರಕ್ರಿಯೆಯು ಪ್ರಜಾತಂತ್ರವನ್ನು ಬರಡುಗೊಳಿಸುತ್ತದೆ. ಇಂತಹ ಮತದಾರರು ಮತ್ತು ಪ್ರದೇಶಗಳು ಸುದೀರ್ಘ ಕಾಲ ಅಧಿಕಾರದಲ್ಲಿರಬೇಕೆಂದು ಬಯಸುವ ಪಕ್ಷಗಳ ದಾಳಗಳಾಗಿ ಮಾತ್ರ ಉಳಿದುಬಿಡುತ್ತವೆ. ಮತದಾರರಿಗೆ ಸುಳ್ಳು ಹೇಳಿ ನಂಬಿಸುವ ಮೂಲಕ ಅವರ ವಿಮರ್ಶಾತ್ಮಕ ತೀರ್ಮಾನಗಳಿಗೆ ಬರುವ ಸಾಮರ್ಥ್ಯವನ್ನೇ ಕಸಿಯಲಾಗುತ್ತದೆ. ಈಗ ಜನತೆಯ ಸ್ವ ಮರ್ಯಾದೆಯೇ ಪರಿಶೀಲನೆಗೆ ಒಳಪಟ್ಟಿದೆ. ಅಂತಹ ಪಕ್ಷಗಳು ಮತದಾರರಿಗೆ ಯಾವುದೇ ಮೌಲಿಕ ಮರ್ಯಾದೆಯನ್ನು ನೀಡುವುದಿಲ್ಲ. ಅವರಿಗೆ ಮತದಾರರು ಅಧಿಕಾರಕ್ಕೇರುವ ಸಾಧನವಷ್ಟೇ.

ಆದರೆ ಐದು ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶಗಳು, ಯಾವುದೇ ಪಕ್ಷಕ್ಕೆ ಮತ್ತೊಂದು ಪಕ್ಷದ ವಿರುದ್ಧ ಶಾಶ್ವತವಾಗಿ ಮೇಲುಗೈ  ಪಡೆಯುವ ಅವಕಾಶವನ್ನೇನು ನೀಡುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಯಾವುದೇ ಒಬ್ಬ ವ್ಯಕ್ತಿಯ ಕೈಯಲ್ಲಿ ಅಧಿಕಾರವು ಕೇಂದ್ರೀಕರಣಗೊಳ್ಳುವುದು ಯಾವಾಗಲೂ ಅಪಾಯಕಾರಿಯೇ. ಆಳುವ ಪಕ್ಷದ ಫಲಿತಾಂಶ ಊಹೆಗಳು ವಾಸ್ತವಿಕ ಮಟ್ಟದಲ್ಲಿ ಸುಳ್ಳೆಂದು ರುಜುವಾತಾಗಿದೆ. ಜನರನ್ನು ತಮ್ಮ ಊಹೆಗೆ  ತಕ್ಕಂತೆ ಕಟ್ಟಿಕೊಂಡು ಸುದೀರ್ಘ ಕಾಲ ಅಧಿಕಾರದಲ್ಲಿರಬೇಕೆಂಬ ನಿರೀಕ್ಷೆಯಲ್ಲಿರುವವರು ಅಂತಹ ಪ್ರಯತ್ನಗಳಿಗೆ ಮಿತಿಯಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.

Back to Top