ISSN (Print) - 0012-9976 | ISSN (Online) - 2349-8846

ಭಯವಿಲ್ಲದ ಸಹಬಾಳ್ವೆಗಾಗಿ ನಡೆಯುತ್ತಿರುವ ಪ್ರತಿಭಟನೆಗಳು

ಸಂವಿಧಾನಕ್ಕೆ ಬದ್ಧತೆಯನ್ನು ತೋರಿಸಲು ಒಟ್ಟುಗೂಡುವುದು ಇಂದಿನ ಅಗತ್ಯವೂ ಹೌದು, ತುರ್ತೂ ಹೌದು.

 
 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಪೌರತ್ವ ತಿದ್ದುಪಡಿ ಕಾಯಿದೆಯು ಅನುಮೋದನೆಗೊಂಡ ನಂತರ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಒಂದೆಡೆ ಹಾಲಿ ಆಡಳಿತರೂಢ ಸರ್ಕಾರದ ನೈಜ ಸ್ವಭಾವವನ್ನೂ ಮತ್ತೊಂದೆಡೆ ಈ ದೇಶದ ಜನರ ಇಚ್ಚಾಶಕ್ತಿಯನ್ನೂ ಅನಾವರಣಗೊಳಿಸುತ್ತಿದೆ. ಒಂದೆಡೆ ಈ ಕಾಯಿದೆಯ ವಿರುದ್ಧ ಮತ್ತು ನ್ಯಾಷನಲ್ ರಿಜಿಸ್ಟರ್ ಆಫ ಸಿಟಿಜನ್ಸ್ (ಎನ್‌ಆರ್‌ಸಿ) ವಿರುದ್ಧ ವಿವಿಧ ಜನವರ್ಗಗಳಿಗೆ ಸೇರಿದ ಜನಸಮೂಹವು ಸ್ವಪ್ರೇರಿತವಾಗಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರವು ಈ ಪ್ರತಿರೋಧಕ್ಕೆ ಅತ್ಯಂತ ಅಪ್ರಜಾತಾಂತ್ರಿಕವಾಗಿ ಹಾಗೂ ದಮನಕಾರಿಯಾಗಿ ಪ್ರತಿಸ್ಪಂದಿಸುತ್ತಿದೆ. ಹೆಚ್ಚುತ್ತಿರುವ ಪ್ರತಿರೋಧಗಳು ಜನರ ಸಾಂವಿಧಾನಿಕ ಆಶೋತ್ತರಗಳನ್ನು ಹತ್ತಿಕ್ಕುವಂತಿರುವ ಸರ್ಕಾರದ ನೀತಿಗಳನ್ನು ಪ್ರಶ್ನಿಸುತ್ತಿವೆ. ಅಷ್ಟು ಮಾತ್ರವಲ್ಲದೆ ತಮ್ಮ ಸಂಕುಚಿತ ದ್ವೇಷಪೂರಿತ ಅಜೆಂಡಾಗಳಿಗೆ ಜನರ ಸಮ್ಮತಿಯನ್ನು ರೂಢಿಸಬೇಕೆಂದಿರುವ ಆಳುವ ಸರ್ಕಾರದ ನಾಯಕದ್ವಯರ ಪ್ರಯತ್ನಗಳ ಮಿತಿಯನ್ನೂ ಸಹ ಈ ಬೆಳವಣಿಗೆಗಳು ಸೂಚಿಸುತ್ತಿದೆ. ಮೊದಲು ಈಶಾನ್ಯ ಭಾರತದಲ್ಲಿ ಪ್ರಾರಂಭಗೊಂಡು ನಂತರ. ದೇಶಾದ್ಯಂತ, ಪ್ರಧಾನವಾಗಿ ವಿಶ್ವವಿದ್ಯಾಲಯಗಳಲ್ಲಿ, ಹಬ್ಬಿಕೊಂಡ ಈ ಪ್ರತಿರೋಧವು ಆ ದಮನಕಾರಿ ಭ್ರಾಂತಿಗಳಲ್ಲಿನ ಟೊಳ್ಳನ್ನು ಬಯಲಿಗೆಳೆಯಿತು.

ಪೌರತ್ವ ನಿಷೇಧ ಕಾಯಿದೆ ಜಾರಿಯಾದ ಕೂಡಲೇ ಅಸ್ಸಾಂ, ತ್ರಿಪುರ ಹಾಗೂ ಇನ್ನಿತರ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆಗಳು ಪ್ರಾರಂಭವಾದರೂ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಹಾಗೂ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಿಂಸಾತ್ಮಕ ದಮನ ಕಾರ್ಯಾಚರಣೆಯನ್ನು ಮಾಡಿದ ನಂತರ ಪ್ರತಿರೋಧಗಳು ವೇಗಗತಿಯಲ್ಲಿ ದೇಶಾದ್ಯಂತ ಭುಗಿಲೆದ್ದಿತು. ಮಾಧ್ಯಮದ ವರದಿಗಳು ಬಯಲುಗೊಳಿಸಿರುವಂತೆ ದೆಹಲಿ ಪೊಲೀಸರು ಜಾಮಿಯಾ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲೂ ಅಶ್ರುವಾಯುವನ್ನು ಪ್ರಯೋಗಿಸಿದ್ದಲ್ಲದೆ ವಿದ್ಯಾರ್ಥಿನಿಲಯಗಳ ಮೇಲೂ ದಾಳಿ ನಡೆಸಿ ವಿದ್ಯಾರ್ಥಿಗಳ ಮೇಲೆ ರಬ್ಬರ್ ಬುಲ್ಲೆಟ್ಟುಗಳನ್ನು ಪ್ರಯೋಗಿಸುವಷ್ಟು ಹಿಂಸಾಚಾರ ಎಸಗಿದರು. ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪೊಲೀಸರು ನಡೆಸಿದ ಹಿಂಸಾಚಾರಗಳು ಇದಕ್ಕಿಂತ ಭೀಕರವಾಗಿದ್ದವು. ವಿದ್ಯಾರ್ಥಿಗಳ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿದ್ದರೂ, ಅಲ್ಲಲ್ಲಿ ನಡೆದ ಬಿಡಿ ಹಿಂಸಾಚಾರಗಳಿಗೆ ವಿದ್ಯಾರ್ಥಿಗಳು ಕಾರಣರಲ್ಲವೆಂದು ನಂತರ ಪೊಲೀಸರೇ ಒಪ್ಪಿಕೊಂಡರೂ, ಪೊಲೀಸರು ತಮ್ಮ ಹಿಂಸಾತ್ಮಕ ದಮನವನ್ನು ಮುಂದುವರೆಸಿದರು. ಆದ್ದರಿಂದ ಪೊಲೀಸ ದಮನವನ್ನೂ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಆದ ನಷ್ಟವನ್ನೂ ಸಮೀಕರಿಸುವುದರಿಂದ ಸರ್ಕಾರದ ನೈತಿಕ ಜವಾಬ್ದಾರಿಯನ್ನು ಮರೆಮಾಚಿದಂತಾಗುತ್ತದೆ. ಆ ಎಲ್ಲಾ ಪ್ರಯತ್ನಗಳನ್ನೂ ಮತ್ತು ವಿದ್ಯಾರ್ಥಿಗ ಮೇಲೆ ಮಾಡಲಾದ ಎಲ್ಲಾ ಆರೋಪಗಳು ನಿಶ್ಫಲವಾಗುವ ರೀತಿಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಕೆಚ್ಚೆದೆಯಿಂದ ಪೊಲೀಸ್ ದಮನವನ್ನು ಪ್ರತಿಭಟಿಸಿದರು. ಪೊಲೀಸ್ ಲಾಠಿಚಾರ್ಜಿಗೆ ಎದುರಾಗಿ ನಿಲ್ಲುವ ಮೂಲಕ  ಜಾಮಿಯಾದ ವಿದ್ಯಾರ್ಥಿನಿಯರು ತಮ್ಮ ಹಕ್ಕುಗಳ ದಮನವನ್ನು ಸಹಿಸಲಾರೆವೆಂಬ ಸ್ಪಷ್ಟ ಸಂದೇಶವನ್ನು ಸರ್ಕಾರಕ್ಕೆ ನೀಡಿದರು. ಈ ವಿದ್ಯಾರ್ಥಿಗಳ ಅನುಸರಣೀಯ ಧೈರ್ಯ-ಸ್ಥೈರ್ಯಗಳು ಈವರೆಗೆ ಅಷ್ಟು ರಾಜಕೀಯವಾಗಿ ಸಕ್ರಿಯವಲ್ಲದ ವಿಶ್ವವಿದ್ಯಾಲಯಗಳನ್ನೂ ಒಳಗೊಂಡಂತೆ ದೇಶಾದ್ಯಂತ ಎಲ್ಲಾ ವಿದ್ಯಾರ್ಥಿUಳಿಗೂ ಸ್ಪೂರ್ತಿ ನೀಡಿತಲ್ಲದೆ ತಮ್ಮ ಹಕ್ಕುಗಳ ರಕ್ಷಣೆಗಾಗಿಯೂ ಮತ್ತು ಅಮಾಯಕ ನಾಗರಿಕರನ್ನು ಹೊರದಬ್ಬುವ ಕುತಂತ್ರದ ನೀತಿಗಳಾಗಿರುವ ಸಿಎಎ ಮತ್ತು ಎನ್‌ಆರ್‌ಸಿಗಳ ವಿರುದ್ಧವೂ ಬೀದಿಗೆ ಬಂದು ಹೋರಾಡುವಂತೆ ಮಾಡಿತು.

ಈ ಹೋರಾಟವನ್ನು ಅಪಮೌಲ್ಯಗೊಳಿಸಲು ಸರ್ಕಾರಗಳು ನಿರಂತರವಾಗಿ ಎಷ್ಟೇ  ಪ್ರಯತ್ನಪಟ್ಟರೂ ಇಂಥಾ ಉಜ್ವಲ ಸ್ಥೈರ್ಯದ ಹಿನ್ನೆಲೆಯಿಂದಾಗಿ, ಯಶಸ್ವಿಯಾಗಲಿಲ್ಲ. ಅತ್ಯಂತ ಹೀನಾಯದ ಸಂಗತಿಯೆಂದರೆ ಸಾರ್ವಜನಿಕ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿರುವ ವ್ಯಕ್ತಿಗಳು ಈ ಹೋರಾಟಕ್ಕೆ ಕೋಮುವಾದದ ಬಣ್ಣ ಹಚ್ಚಲು ಪ್ರಯತ್ನಿಸಿದ್ದು. ಆದರೆ ಸಿಎಎ- ಎನ್‌ಆರ್‌ಸಿಗಳ ಹಿಂದಿನ ಸಂವಿಧಾನ ವಿರೋಧಿ ಮತ್ತು ಒಡೆದು ಆಳುವ ಉದ್ದೇಶಗಳು ಎಲ್ಲಾ ವಿವೇಚನಾಶೀಲ ಮತ್ತು ಸಂವೇದನಶೀಲ ಮನಸ್ಸುಗಳಿಗೆ ಸ್ಪಷ್ಟವಾಗುತ್ತಿದ್ದಂತೆ ಪ್ರತಿಭಟನೆಗಳಿಗೆ ಕೋಮುವಾದಿ ಬಣ್ಣವನ್ನು ಹಚ್ಚಿ ಧ್ರುವೀಕರಿಸುವ ಪ್ರಯತ್ನಗಳು ಜನರೆದುರು ನಡೆಯಲಿಲ್ಲ. ಡಿಸೆಂಬರ್ ೧೯ರಂದು ದೇಶಾದ್ಯಂತ ನಡೆದ ಪ್ರತಿಭಟನೆಗಳಲ್ಲಿ ಐಕ್ಯತೆ ಮತ್ತು ಸೌಹಾರ್ದತೆಗಳ ಮೇಲಿನ ಒತ್ತುಗಳು  ಈ ದೇಶದ ಬಹುಬಗೆಯ ವೈವಿಧ್ಯತೆಗಳ ಅಭಿವ್ಯಕ್ತಿಯೂ ಆಗಿತ್ತು. ಅದು ಸಾಂವಿಧಾನಿಕ ಚೌಕಟ್ಟಿನಡಿಯಲ್ಲಿ ಸಹಬಾಳ್ವೆ ಮಾಡಬಹುದಾದ ಸಾಧ್ಯತೆಯನ್ನು ನಿಚ್ಚಳಗೊಳಿಸಿತ್ತು.

ಪ್ರತಿಭಟನಾಕಾರರ ಮನಒಲಿಸುವುದಿರಲಿ ಅವರ ಜೊತೆಗೆ ಮಾತನಾಡಲೂ ಸಿದ್ಧವಿಲ್ಲದ ಸರ್ಕಾರ ಬಲಪ್ರಯೋಗಕ್ಕೆ ಮುಂದಾಯಿತು. ಎಲ್ಲೆಡೆ ೧೪೪ನೇ ಸೆಕ್ಷನ್ ಅನ್ನು ವಿಧಿಸಿದ್ದಲ್ಲದೆ ದೆಹಲಿಯಲ್ಲಿ ಹಲವಾರು ಕಡೆಗಳಲ್ಲಿ ಮೆಟ್ರೋ ಮತ್ತು ಇಂಟರ್‌ನೆಟ್ ಸೇವೆಗಳನ್ನೂ ಸಹ ಬಂದ್ ಮಾಡಿತು. ಆಳುವ ತಂತ್ರದ ಭಾಗವಾಗಿ ಭೀತಿಯನ್ನು ಹುಟ್ಟಿಸುವುದೂ ಸಹ ಒಂದು ಹಂತದ ನಂತರ ಉಪಯೋಗಕ್ಕೆ ಬರುವುದಿಲ್ಲವೆಂಬುದನ್ನು ಜನರು ಪ್ರತಿಬಂಧಕ ಕಾಯ್ದೆಗಳಿದ್ದರೂ ತಮ್ಮ ಮೂಲಭೂತ ಹಕ್ಕುಗಳಿಗಾಗಿ ಶಾಂತಿಯುತವಾಗಿ ಸಮಾವೆಶಗೊಳ್ಳುವುದರ ಮೂಲಕ ಸಾಬೀತು ಪಡಿಸಿದರು. ಕುತೂಹಲದಾಯಕ ಸಂಗತಿಯೆಂದರೆ ಹೋರಾಟದ ಸಂದರ್ಭದಲ್ಲಿ ಘರ್ಷಣೆ, ಹಿಂಸೆ ಅಥವಾ ಬೆಂಕಿ ಹಚ್ಚುವ ಪ್ರಕರಣಗಳೆಲ್ಲಾ ಸಂಭವಿಸಿರುವುದು ಬಿಜೆಪಿ ಆಳುತ್ತಿರುವ ರಾಜ್ಯಗಳಲ್ಲೇ ಆಗಿದ್ದು ಮತ್ತಷ್ಟು ಆಳವಾದ ತನಿಖೆಯ ಅಗತ್ಯವಿರುವುದನ್ನು ಸೂಚಿಸುತ್ತದೆ. ಈ ಹಿಂದೆ ಅಸ್ಸಾಮಿನಲ್ಲಿ ಪ್ರತಿಭಟನೆಯ ವೇಳೆಯಲ್ಲಿ ಐದು ಜನರು ಸಾವನ್ನಪ್ಪಿದ್ದರೆ, ಲಕ್ನೋ ಮತ್ತು ಮಂಗಳೂರಿನಲ್ಲಿ ಮೂವರು ವ್ಯಕ್ತಿಗಳು ಪೊಲೀಸ್ ಗೋಲಿಬಾರಿನಲ್ಲಿ ಮೃತಪಟ್ಟಿದ್ದಾರೆ. ಸರ್ಕಾರದ ಹಠಮಾರಿ ಧೋರಣೆಯಿಂದಲೇ ಈ ಎಲ್ಲಾ ಅಮೂಲ್ಯ ಜೀವಗಳು ನಷ್ಟವಾಗಿದ್ದು ಆಳುವವವರ ಗಂಭೀರ ನೈತಿಕ ವೈಫಲ್ಯವನ್ನು ಸೂಚಿಸುತ್ತದೆ. ಒಂದು ಪ್ರಜಾತಂತ್ರದಲ್ಲಿ ಇಂಥ ಸಂಘರ್ಷ ಮತ್ತು ಬಿಕ್ಕಟ್ಟಿನ ವಾತಾವರಣವನ್ನು ಸಮಾಲೋಚನೆಯ ಮೂಲಕ ಮತ್ತು ಪ್ರತಿಭಟನೆಯಲ್ಲಿರುವ ಸತ್ಯವನ್ನು ಅರ್ಥಮಾಡಿಕೊಳ್ಳುವ ಇಂಗಿತದ ಮೂಲಕ ನಿಭಾಯಿಸಬೇಕು. ಅಂಥಾ ಸಮಾಲೋಚನಾ ಹಾಗೂ ಅನುಸಂಧಾನದ ಪ್ರಯತ್ನಗಳ ಮೂಲಕ ಮಾತ್ರ ದೇಶವನ್ನು ಶಾಶ್ವತವಾಗಿ ಸಂಘರ್ಷಮಯ ಹಾಗೂ ಒತ್ತಡದ ವಾತಾವರಣದಲ್ಲಿರದಂತೆ ತಡೆಗಟ್ಟಬಹುದು. ಸರ್ಕಾರವು ಶಾಂತಿಯುತ ಸಹಬಾಳ್ವೆಯನ್ನು ಖಾತರಿಗೊಳಿಸುವ ತನ್ನ ಕರ್ತವ್ಯದಲ್ಲಿ ವಿಫಲವಾದರೆ ಜನರೇ ಆ ನಿಟ್ಟಿನಲ್ಲಿ ನಾಯಕತ್ವವನ್ನು ವಹಿಸಬೇಕಾಗುತ್ತದೆ. ವಿಶಾಲ ಜನಸಮುದಾಯಗಳಲ್ಲಿ ಆಳವಾಗಿ ಬೇರುಬಿಡುತ್ತಿರುವ ನಾಗರಿಕ ಅಸಹಕಾರದ ಸ್ಪೂರ್ತಿ ಮತ್ತು ಸಾಂವಿಧಾನಿಕ ಬದ್ಧತೆಗಳು ಆ ನಿಟ್ಟಿನಲ್ಲಿ ಹೃದಯಸ್ಪರ್ಷಿಯಾಗಿದೆ. ಭರವಸೆದಾಯಕವಾಗಿದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top