ತಪ್ಪುಗಳು ಮತ್ತು ಅದರ ರಾಜಕೀಯ
ಇತ್ತೀಚಿನ ದಿನಗಳಲ್ಲಿ ಯಾವುದೇ ರಾಜಕೀಯ ನಾಯಕರು ತಾವು ತೆಗೆದುಕೊಂಡ ರಾಜಕೀಯ ತೀರ್ಮಾನಗಳಲ್ಲಿ ತಪ್ಪು ಮಾಡಿದೆವು ಎಂದು ಒಪ್ಪಿಕೊಳ್ಳುವುದು ತುಂಬಾ ಅಪರೂಪವಾಗಿಬಿಟ್ಟಿದೆ. ಸತ್ಯವನ್ನು ಅರಸುವುದರಲ್ಲಿ ಯಾವ ಲಾಭವೂ ಇಲ್ಲವೆಂದು ಭಾವಿಸುವ ನಾಯಕರು ತಪ್ಪೊಪ್ಪಿಗೆಗೆ ಮುಂದಾಗುವುದಿಲ್ಲ. ಆದರೆ ಕೆಲವರು ಮಾತ್ರ ತಾವು ತೆಗೆದುಕೊಂಡ ತೀರ್ಮಾನಗಳಲ್ಲಿ ತಪ್ಪು ಎಸಗಿದ್ದೇವೆಂದು ಬಹಿರಂಗವಾಗಿ ಒಪ್ಪಿಕೊಳ್ಳುವಂಥ ನೈತಿಕ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾರೆ. ಹೀಗೆ ತಪ್ಪೊಪ್ಪಿಗೆಯನ್ನು ನಿರಾಕರಿಸುವ ಮತ್ತು ಅದಕ್ಕೆ ಮುಂದಾಗುವ ಈ ಎರಡೂ ಪ್ರವೃತ್ತಿಗಳನ್ನು ಗಮನಿಸಿದಾಗ ತಪ್ಪುಗಳು ಮತ್ತು ಅವನ್ನು ತಿದ್ದಿಕೊಳ್ಳುವ ರಾಜಕೀಯದ ನಡುವಿನ ಸಂಬಂಧ ತ್ರಾಸದಾಯಕವೂ ಹಾಗೂ ಸಂಕೀರ್ಣವೂ ಆಗಿದೆಯೆಂದು ಅರ್ಥವಾಗುತ್ತದೆ.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಇತ್ತೀಚಿನ ದಿನಗಳಲ್ಲಿ ಯಾವುದೇ ರಾಜಕೀಯ ನಾಯಕರು ತಾವು ತೆಗೆದುಕೊಂಡ ರಾಜಕೀಯ ತೀರ್ಮಾನಗಳಲ್ಲಿ ತಪ್ಪು ಮಾಡಿದೆವು ಎಂದು ಒಪ್ಪಿಕೊಳ್ಳುವುದು ತುಂಬಾ ಅಪರೂಪವಾಗಿಬಿಟ್ಟಿದೆ. ಸತ್ಯವನ್ನು ಅರಸುವುದರಲ್ಲಿ ಯಾವ ಲಾಭವೂ ಇಲ್ಲವೆಂದು ಭಾವಿಸುವ ನಾಯಕರು ತಪ್ಪೊಪ್ಪಿಗೆಗೆ ಮುಂದಾಗುವುದಿಲ್ಲ. ಆದರೆ ಕೆಲವರು ಮಾತ್ರ ತಾವು ತೆಗೆದುಕೊಂಡ ತೀರ್ಮಾನಗಳಲ್ಲಿ ತಪ್ಪು ಎಸಗಿದ್ದೇವೆಂದು ಬಹಿರಂಗವಾಗಿ ಒಪ್ಪಿಕೊಳ್ಳುವಂಥ ನೈತಿಕ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾರೆ. ಹೀಗೆ ತಪ್ಪೊಪ್ಪಿಗೆಯನ್ನು ನಿರಾಕರಿಸುವ ಮತ್ತು ಅದಕ್ಕೆ ಮುಂದಾಗುವ ಈ ಎರಡೂ ಪ್ರವೃತ್ತಿಗಳನ್ನು ಗಮನಿಸಿದಾಗ ತಪ್ಪುಗಳು ಮತ್ತು ಅವನ್ನು ತಿದ್ದಿಕೊಳ್ಳುವ ರಾಜಕೀಯದ ನಡುವಿನ ಸಂಬಂಧ ತ್ರಾಸದಾಯಕವೂ ಹಾಗೂ ಸಂಕೀರ್ಣವೂ ಆಗಿದೆಯೆಂದು ಅರ್ಥವಾಗುತ್ತದೆ. ಒಂದು ಪಾರದರ್ಶಕವಾದ ಆದರೆ ಅನಿಶ್ಚಿತವಾದ ರಾಜಕೀಯ ಸಂದರ್ಭದಲ್ಲಿ ತಪ್ಪುಗಳನ್ನು ತಿದ್ದುಕೊಳ್ಳುವ ರಾಜಕಾರಣದ ಮೂಲಕ ರಾಜಕೀಯಕ್ಕೆ ಒಂದು ನೈತಿಕ ತಳಹದಿಯನ್ನು ಒದಗಿಸಬಹುದು. ಈ ಹಿನ್ನೆಲೆಯಿಂದ ನೋಡಿದರೆ ತಪ್ಪುಗಳು ಒಂದು ತಾರ್ಕಿಕ ಅಗತ್ಯವೂ ಆಗಿಬಿಡುತ್ತದೆ. ತಮ್ಮ ತಪ್ಪುಗಳನ್ನು ತಿದ್ದುಕೊಳ್ಳುತ್ತಾ ಒಂದು ಆದರ್ಶವಾದ ಕೊನೆಯನ್ನು ಮುಟ್ಟುವ ಅವಕಾಶವನ್ನು ರಾಜಕೀಯದ ಈ ಅನಿಶ್ಚಿತ ಸ್ವರೂಪವೇ ಒದಗಿಸಬಹುದು.
ತಪ್ಪುಗಳು ಪ್ರಧಾನವಾಗಿ ಎರಡು ಕಾರಣಗಳಿಂದ ಸಂಭವಿಸಬಹುದು: ಮೊದಲನೆಯದು ಒಂದು ಗುರಿಯ ಬಗೆಗಿನ ನಿರ್ದಿಷ್ತ ಧೋರಣೆಯ ಕಾರಣದಿಂದ ಸಂಭವಿಸಬಹುದು. ಎರಡನೆಯದು ಈ ಗುರಿಯನ್ನು ಪಾರದರ್ಶಕ ಹಾಗೂ ಅನಿಶ್ಚಿತವಾಗಿರುವ ರಾಜಕೀಯ ಸಂದರ್ಭದಲ್ಲಿ ಸಾಧಿಸಬೇಕಿರುವ ಸಂದರ್ಭದಿಂದಾಗಿಯೂ ಸಂಭವಿಸಬಹುದು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಒಂದು ಗೊತ್ತಾದ ಗುರಿಯನ್ನು ತಲುಪಲು ಸ್ಪಷ್ಟವಾದ ದಾರಿ ಅಥವಾ ಖಚಿತ ನೀಲನಕ್ಷೆ ಮುಂದಾಗಿಯೇ ಲಭ್ಯವಿದ್ದರೆ ತಪ್ಪುಗಳು ಆಗುವ ಸಂಭವ ಕಡಿಮೆ. ಎಡಪಂಥೀಯ ರಾಜಕಾರಣಕ್ಕಂತೂ ಈ ವಿವರಣೆ ಬಹಳಷ್ಟು ಅನ್ವಯವಾಗುತ್ತದೆ. ಈ ಎಡಪಂಥೀಯ ಶಕ್ತಿಗಳು ರಾಜಕೀಯವನ್ನು ಸೂತ್ರೀಕರಿಸಲ್ಪಟ್ಟ ನಿಯಮಗಳಿಂದ ನಿಯಂತ್ರಿಸಬೇಕಾದ ವಲಯವೆಂದೇ ಪರಿಗಣಿಸುತ್ತವೆ. ಹೀಗಾಗಿ ಗಾಂಧಿವಾದಿಗಳಿಗೆ ಮತ್ತು ಎಡನಿಲುವುಗಳನ್ನು ಹೊಂದಿರುವಂಥಾ ರಾಜಕಾರಣಿಗಳಿಗೆ ಕೆಲವು ಭವಿಷ್ಯಗಾಮಿ ಅವಕಾಶಗಳೂ ಸಹ ತತ್ವನಿಯಮಗಳ ದೃಷ್ಟಿಯಿಂದ ಮಹಾನ್ ಅಪರಾಧವೆಂದೇ ಕಾಣಿಸಬಹುದು. ನಿಯಮಗಳಿಂದ ನಿಯಂತ್ರಿತವಾಗುವ ರಾಜಕೀಯವು ತಪ್ಪುಗಳನ್ನು ತಪ್ಪಿಹೋದ ಅವಕಾಶವೆಂದೂ ಭಾವಿಸುವುದಿಲ್ಲ.
ಅದೇರೀತಿ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಹಿಂಜರಿಯುವರು ಮತ್ತು ತಮ್ಮ ಯಾವುದೇ ರಾಜಕೀಯ ನಿಲುವುಗಳನ್ನು ಬಹಿರಂಗವಾಗಿ ಹೇಳದಿರುವರೂ ಸಹ ಯಾವುದೇ ತಪ್ಪನ್ನು ಮಾಡಲಾರರು. ಉದಾಹರಣೆಗೆ ಎಷ್ಟೇ ಪ್ರಾಮುಖ್ಯತೆ ಉಳ್ಳ ವಿಷಯಗಳೇ ಆಗಿದ್ದರೂ ಬಹುಪಾಲು ಸಿನಿಮಾ ತಾರೆಯರು ಬಹಿರಂಗವಾಗಿ ಯಾವುದೇ ನಿಲುವನ್ನು ತೆಗೆದುಕೊಳ್ಳದೆ ತಪ್ಪುಗಳನ್ನು ಮಾಡುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ತಪ್ಪುಗಳನ್ನು ಮಾಡುವ ಮೂಲಕ ಅನಗತ್ಯ ಅನುಮಾನಗಳನ್ನೂ ಸಹ ದೂರಮಾಡಬಹುದು. ಆದರೆ ಅದೇರೀತಿ ಯಾವುದೇ ತಿದ್ದುಪಡಿಗಳನ್ನು ಮಾಡಿಕೊಳ್ಳದೆ ತಪ್ಪುಗಳನ್ನು ಮಾಡುತ್ತಲೇ ಹೋಗುವುದು ಸಿನಿಕತನಕ್ಕೆ ದಾರಿ ಮಾಡಿಕೊಡುತ್ತದೆ. ಆಗ ತಿದ್ದುಪಡಿಗೆ ದಾರಿ ಮಾಡಿಕೊಡುವ ಅವಕಾಶವಾಗಿ ತಪ್ಪುಗಳು ತಮ್ಮ ನೈತಿಕ ಮಹತ್ವವನ್ನು ಕಳೆದುಕೊಳ್ಳುತ್ತವೆ. ಉದಾಹರಣೆಗೆ ಕೆಲವು ರಾಜಕಾರಣಿಗಳು ಬಾಯಿಗೆ ಬಂದದ್ದನ್ನು ಗಳಹುವುದನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಒಂದು ಪ್ರಶ್ನೆಯನ್ನು ಕೇಳುವುದು ಅತ್ಯಗತ್ಯವಾಗಿದೆ: ಯಾವ ಪರಿಸ್ಥಿತಿಗಳಲ್ಲಿ ತಪ್ಪುಗಳ ಸಂಭವನೀಯತೆಯನ್ನು ಸರಿತಿದ್ದುಕೊಳ್ಳಬಹುದು? ಸಮಕಾಲೀನ ಸಂದರ್ಭದಲ್ಲಿ ರಾಜಕಾರಣಿಗಳ ಮನಸ್ಥಿತಿಗಳನ್ನು ಗಮನಿಸಿದಾಗ ತಪ್ಪುಗಳ ಬಗ್ಗೆ ಬರೆಯುವುದರ ಮೂಲಕವೋ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವ ಮೂಲಕವೋ ಸರಿತಿದ್ದಲು ಸಾಧ್ಯವಿಲ್ಲ. ರಾಜಕೀಯ ವಲಯದಲ್ಲಿ ಮಾತ್ರವೇ ತಪ್ಪುಗಳ ಸರಿತಿದ್ದುವಿಕೆಗೆ ಬೇಕಾದ ಅವಕಾಶವು ಒದಗುತ್ತದೆ. ಹಲವು ನುರಿತ ರಾಜಕಾರಣಿಗಳು ಜನರನ್ನು ತಮ್ಮೆಡೆಗೆ ಅಥವಾ ಸತ್ಯದ ಕಡೆಗೆ, ಸೆಳೆದುಕೊಳ್ಳುವ ನೈತಿಕ ತಂತ್ರವಾಗಿಯೂ ತಮ್ಮ ತಪ್ಪುಗಳನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ. ತಪ್ಪುಗಳನ್ನು ಬಹಿರಂಗವಾಗಿ ಒಪ್ಪಿಕೊಳ್ಳುವ ಮೂಲಕ ರಾಜಕೀಯದ ನೈತಿಕ ತಳಹದಿಯನ್ನು ವಿಸ್ತರಿಸಬಹುದು. ಇತ್ತೀಚಿನ ಮಹಾರಾಷ್ಟ್ರದ ಚುನಾವಣೆಯಲ್ಲಿ ತಪ್ಪೊಪ್ಪಿಗೆಯನ್ನು ಪರಿಣಾಮಕಾರಿ ತಂತ್ರವನ್ನಾಗಿ ಬಳಸಲಾಯಿತು. ಹೀಗೆ ತಪ್ಪೊಪ್ಪಿಗೆಯಲ್ಲಿ ಮತ್ತು ಅದನ್ನು ತಿದ್ದುಕೊಳ್ಳಲು ಸಿದ್ಧರಿರುವ ಪ್ರಯತ್ನಗಳಲ್ಲಿ ಒಂದು ನೈತಿಕ ಮೌಲ್ಯವಿದೆ. ಹಾಗೂ ಭವಿಷ್ಯದಲ್ಲಿ ಯಾವುದೇ ಕ್ರಮಗಳನ್ನು ಅಥವಾ ರಾಜಕೀಯ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾದ ಸಂದರ್ಭದಲ್ಲೂ ಆ ತಪ್ಪುಗಳು ಮರುಕಳಿಸದಂತೆ ಸಹಾಯ ಮಾಡುತ್ತವೆ. ಹಿಂದಾದ ತಪ್ಪುಗಳನ್ನು ಗುರುತಿಸಿ, ಇಂದು ಅದನ್ನು ಸರಿತಿದ್ದುಕೊಂಡು, ಭವಿಷ್ಯದಲ್ಲಿ ಅದು ಮರುಕಳಿಸದಂತೆ ಮಾಡುವ ಮೂಲಕ ರಾಜಕೀಯದ ನೈತಿಕ ಬುನಾದಿಯು ಸದೃಢಗೊಳ್ಳುತ್ತದೆ. ಹೀಗೆ ವೈಯಕ್ತಿಕ ಲೆಕ್ಕಾಚಾರಗಳನ್ನು ತೀರಿಸಿಕೊಳ್ಳಲು ಅಲ್ಲದೆ ವಿಮೋಚನೆಯ ರಾಜಕೀಯದ ದೃಷ್ಟಿಯಿಂದ ರಾಜಕೀಯದಲ್ಲಿ ಆಗುವ ತಪ್ಪುಗಳನ್ನು ಸರಿತಿದ್ದುಕೊಳ್ಳುವುದು ಮುಖ್ಯ. ಆದ್ದರಿಂದ ತಪ್ಪುಗಳನ್ನು ಲಾಭಾಸಕ್ತ ರಾಜಕಾರಣದ ಜೊತೆ ಬೆರೆಸುವುದು ತಪ್ಪಾಗುತ್ತದೆ. ಹೀಗೆ ತಪ್ಪುಗಳನ್ನು ಸರಿತಿದ್ದುಕೊಳ್ಳುವ ಮೂಲಕ ಒಂದು ನೈತಿಕ ಯಾಜಮಾನ್ಯವನ್ನೂ ಸ್ಥಾಪಿಸಬಹುದು. ಆಗ ಅದು ಸಮುದಾಂiಗಳ ನಾಯಕರ ಅದರಲ್ಲೂ ವಂಚಿತ ಸಮುದಾಯಗಳ ನಾಯಕರಲ್ಲಿ ಪಕ್ಷಾಂತರವನ್ನು ಪ್ರಚೋದಿಸಿ ಆ ಮೂಲಕ ಸಾಮಾಜಿಕ ಯಾಜಮಾನ್ಯವನ್ನು ಮುಂದುವರೆಸುವ ಸಾಮಾಜಿಕ ಇಂಜನಿಯರಿಂಗ್ ಮಾಡಬಯಸುವ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧದ ಸಮೈಕ್ಯತೆಗೆ ಬೇಕಾದ ಪೂರ್ವಶರತ್ತಾಗಿಯೂ ವರ್ತಿಸಬಹುದು. ತಪ್ಪುಗಳ ಹೊಣೆಗಾರಿಕೆಯನ್ನು ಹೊತ್ತುಕೊಂಡು ತನ್ನನ್ನು ತಾನು ಹಳಿದುಕೊಳ್ಳುವುದರಲ್ಲಿ ಒಂದು ನೈತಿಕ ಮೌಲ್ಯವಿದೆ. ಅದು ಒಂದು ನೈತಿಕ ಯಾಜಮಾನ್ಯವನ್ನು ಸೃಷ್ಟಿಸುವ ಸಾಧ್ಯತೆಯನ್ನು ಹೊಂದಿದೆ. ಮತ್ತದು ರಾಜಕೀಯ ಸಮೈಕ್ಯತೆಗೆ ಪೂರ್ವಶರತ್ತಾಗಬೇಕು. ಯಾರಿಗೆ ಒಂದು ಆದರ್ಶವಾದಿ, ಪ್ರಜಾತಾಂತ್ರಿಕ ಮತ್ತು ಎಲ್ಲರನ್ನೂ ಒಳಗೊಳ್ಳುವ ಭಾರತವನ್ನು ನಿರ್ಮಿಸಲು ಆಸಕ್ತಿಯಿಲ್ಲವೋ ಅಂಥವರು ಮಾತ್ರ ಗತದಲ್ಲಿ ಸಂಭವಿಸಿದ ತಪ್ಪುಗಳ ಬಗ್ಗೆ ನಿರಂತರವಾಗಿ ಉಲ್ಲೇಖಿಸುತ್ತಾ ವರ್ತಮಾನದಲ್ಲಿ ತಪ್ಪುಗಳನ್ನು ಎಸಗುವ ಮೂಲಕ ತಮ್ಮ ಸ್ವಹಿತಾಸಕ್ತ ರಾಜಕೀಯದಲ್ಲಿ ತೊಡಗುತ್ತಾರೆ.