ISSN (Print) - 0012-9976 | ISSN (Online) - 2349-8846

ನೈತಿಕವಾಗಿ ಸಂವೇದನಶೀಲವಾದ ಪ್ರಜಾತಂತ್ರದ ಅನ್ವೇಷಣೆಯಲ್ಲಿ

.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಪ್ರಜಾತಂತ್ರದ ವಿದ್ಯಾರ್ಥಿಗಳಲ್ಲಿ ಉದಾರವಾದಿ ಪ್ರಜಾತಂತ್ರವನ್ನು ಅದರ ಸಾರ ಮತು ರೀತಿ-ನಿಯಮಗಳೆಂಬ ಎರಡು ಅಂಶಗಳನ್ನು ಆಧರಿಸಿ ಮೌಲ್ಯಂದಾಜು ಮಾಡುವ ಪರಿಪಾಠವಿದೆ. ರೀತಿ-ನೀತಿಗಳ ವಿಷಯಗಳು  ಔಪಚಾರಿಕವಾದ ಎಲ್ಲಾ ರಾಜಕೀಯ ಅವಕಾಶಗಳನ್ನು ಯಾವುದೇ ಬೇಧಭಾವವಿಲ್ಲದೆ ಎಲ್ಲರಿಗೂ ಮುಕ್ತವಾಗಿಡುವ ಸಾಂವಿಧಾನಾತ್ಮಕ ಖಾತರಿಗಳಿಗೆ ಸಂಬಂಧಪಟ್ಟಿದ್ದಾಗಿದೆ. ಪ್ರಜಾತಂತ್ರದ ರೀತಿ-ನೀತಾತ್ಮಕ ಅಂಶಗಳ ಪ್ರಧಾನ ಕಾಳಜಿ ಏನೆಂದರೆ ರಾಜಕಿಯದಲ್ಲಿ ಅದರಲ್ಲೂ ಚುನಾವಣಾ ರಾಜಕಾರಣದಲ್ಲಿ ಹಕ್ಕುಗಳನ್ನು ಹೊಂದಿರುವ ನಾಗರಿಕರೆಲ್ಲರಿಗೂ ಸರಿಸಮವಾದ ಅವಕಾಶಗಳನ್ನು ಪಡೆಯುವಂತೆ ಮಾಡುವುದಾಗಿರುತ್ತದೆ. ಸರಳವಾಗಿ ಹೇಳಬೇಕೆಂದರೆ ಸ್ಪರ್ಧಾಳುಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರತಿಯೊಂದು ಮತಕ್ಕೂ ಒಂದೇ ಮೌಲ್ಯವಿರುತ್ತದೆ. ನಾಗರಿಕರಿಗೆ ಈ ಹಕ್ಕುಗಳು ದೊರೆತಿರುವುದು ಯಾವುದೋ ಧರ್ಮಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೋ ಅಥವಾ ಯಾವುದೋ ನಿರ್ದಿಷ್ಟ ಭಾಷೆಯನ್ನು ಆಡುತ್ತಾರೆ ಎಂಬ ಕಾರಣಕ್ಕಾಗಿಯೋ ಅಲ್ಲ. ಬದಲಿಗೆ ನಾಗರಿಕರಿಗೆ ಈ ಹಕ್ಕುಗಳನ್ನು ಸಂವಿಧಾನವೇ ನೀಡಿದೆ. ಹಲವಾರು ಪ್ರಜಾತಂತ್ರಗಳು ಕೇವಲ ಓಟಿನ ಹಕ್ಕನ್ನು ಮಾತ್ರವಲ್ಲದೆ ತಮ್ಮ ವೈಯಕ್ತಿಕ ಆಸಕ್ತಿಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಮಾತ್ರವಲ್ಲದೆ ಸಾರ್ವಜನಿಕ ನೀತಿಗಳನ್ನು ರೂಪಿಸುವ ವಿಷಯಗಳಲೂ ನಾಗರಿಕರ ಪಾಲುದಾರಿಕೆಗೆ ಅವಕಾಶ ಮಾಡಿಕೊಡುತ್ತವೆ. ಹೀಗಾಗಿ ಒಂದು ಮುಕ್ತ ವಲಯವಾಗಿ ಒಂದು ಪ್ರಜಾತಂತ್ರವು ನಾಗರಿಕರು ಯಾರ ಮುಲಾಜು, ಅನುಮತಿ ಅಥವಾ ಹಂಗುಗಳಿಲ್ಲದೆ ಬದುಕಲು ಅವಕಾಶ ಒದಗಿಸುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ನಾಗರಿಕತ್ವ ಎಂಬುದು ಯಾವುದೇ ಸಾಂಸ್ಥಿಕ ಶ್ರೇಣೀಕರಣಗಳಿಗೆ ಒಳಪಟ್ಟಿರುವುದಿಲ್ಲ.

ಆದರೆ ಭಾರತದ ಸಂದರ್ಭದಲ್ಲಿ ಪ್ರಜಾತಂತ್ರದ ಆಚರಣೆಯು ಒಂದು ಉದಾರವಾದಿ ಪ್ರಜಾತಂತ್ರದ ಸಾರಕ್ಕೆ ತದ್ವಿರುದ್ಧವಾಗಿದೆ. ಅದರಲ್ಲೂ ಕೆಲವು ಪಕ್ಷಗಳ ಚುನಾವಣಾ ವ್ಯೂಹತಂತ್ರಗಳು ಮತದಾರರನ್ನು ವೈಚಾರಿಕವಾಗಿ ಸಬಲೀಕರಣಗೊಂಡ ವ್ಯಕ್ತಿಗಳನ್ನಾಗಿ ರೂಪಿಸುವ ಬದಲು ಜಾತಿ ಅಥವಾ ಧರ್ಮಾಧಾರಿತ ಸಮುದಾಯದ ಭಾಗವಾಗಿ ಸೀಮಿತಗೊಳಿಸುತ್ತಿದೆ. ಸಂಕುಚಿತ ಮತ್ತು ಕೋಮುವಾದಿ ಧೋರಣೆಗಳನ್ನು ಉಳ್ಳಂತ ಪಕ್ಷಗಳು ವ್ಯಕ್ತಿಗಳನ್ನು ನಿರ್ದಿಷ್ಟ ಸಮುದಾಯಗಳ ಮಿತಿಗಳಲ್ಲಿ ಬಂಧಿಸಿಡುವ ಪ್ರಯತ್ನ ನಡೆಸಿದ್ದಾರೆ. ಒಂದು ಧರ್ಮವನ್ನು ಆಧರಿಸಿದ ರಾಜಕೀಯ ಬಹುಮತವನ್ನು ಪಡೆದುಕೊಳ್ಳುವ ಉದೇಶದಿಂದಲೇ ಇದನ್ನು ಮಾಡಲಾಗುತ್ತಿದೆ. ಮತ್ತೊಂದು ಮಾತಿನಲ್ಲಿ ಹೇಳುವುದಾದರೆ ಮತದಾರರನ್ನು  ನಿರ್ದಿಷ್ಟವಾಗಿ ವರ್ಗೀಕರಿಸುವ ಮೂಲಕ ಮಾತ್ರ ಒಂದು ಪಕ್ಷವು ಜನಾಂಗೀಯ ಬಹುಮತವನ್ನು ಆರೋಪಿಸಿಕೊಳ್ಳುವುದು ಸಾಧ್ಯ. ಆದರೆ ಅದು ಪ್ರಜಾತಾಂತ್ರಿಕ ಬಹುಮತವೇನೂ ಆಗಿರುವುದಿಲ್ಲ.

ಈ ರೀತಿ ವ್ಯಕ್ತಿಗಳ ವಿಘಟನೆ ಅಥವಾ ವಿಘಟಿತ ವ್ಯಕ್ತಿಗಳನ್ನು ಜಾತಿ ಅಥವಾ ಧರ್ಮಾಧಾರಿತವಾದ ಒಂದು ನಿರ್ದಿಷ್ಟ ಚೌಕಟ್ಟಿಗೆ ಸೀಮಿತಗೊಳಿಸುವ ರಾಜಕೀಯ ಯೋಜನೆಯು ಪರೋಕ್ಷವಾಗಿಯೇನೂ ಇರುವುದಿಲ್ಲ. ಬದಲಿಗೆ ಅಲ್ಪಸಂಖ್ಯಾತರ ವಿರುದ್ಧದ ತೀವ್ರವಾದ ದ್ವೇಷದ ಭಾವನೆಯೊಂದಿಗೇ ಆ ಯೋಜನೆಯು ಕಾರ್ಯಗತವಾಗುತ್ತದೆ. ಈ ಬಗೆಯಲ್ಲಿ ವ್ಯಕ್ತಿಗಳನ್ನು ಅಲ್ಪಸಂಖ್ಯಾತೀಕರಣಕ್ಕೆ ಗುರಿಮಾಡುವುದು ನೈತಿಕವಾಗಿ ವಿನಾಶಕಾರಿಯಾದದ್ದಾಗಿದೆ. ಅದು ತಮ್ಮ ಸಮುದಾಯದ ವ್ಯಕ್ತಿಗಳು ಪ್ರಜ್ನಾವಂತ ನಾಗರಿಕರಾಗಿ ಸ್ವಂತ ಅರಿವನ್ನು ಪಡೆದುಕೊಳ್ಳುವುದನ್ನೇ ನಿರಾಕರಿಸುವಷ್ಟು ಆಕ್ರಮಣಕಾರಿಯಾಗಿರುತ್ತದೆ.

ಹೀಗಾಗಿ ಒಂದು ರಾಜಕೀಯ ಅವಕಾಶವನ್ನು ಪಡೆದುಕೊಳ್ಳಲು ಮುಕ್ತ ಸಾಧ್ಯತೆಯನ್ನು ಒದಗಿಸುವ ಪ್ರಜಾತಂತ್ರವು ಪ್ರಾರಂಭಿಕ ಪೂರ್ವಾಗತ್ಯವಷ್ಟೇ ಆಗಿದೆ. ಆದರೆ ಸಮಾನ ಮೌಲ್ಯ ಹಾಗೂ ನಾಗರಿಕ ಕಾಳಜಿಯನ್ನು ಹೊಂದಿರುವ ವ್ಯಕ್ತಿಯು ಆ ಅವಕಾಶವನ್ನು ಸಾಕಾರಗೊಳಿಸಿಕೊಳ್ಳಲು ಆಷ್ಟೇ ಸಾಕಾಗುವುದಿಲ್ಲ. ಈ ಮುಕ್ತ ಹಾಗೂ ಬಹಿರಂಗ ಸಮಾವಕಾಶದ ತಾಣವಾಗಿರುವ ಪ್ರಜಾತಂತ್ರದ ಅತ್ಯಗತ್ಯ ಭಾಗವಾಗಿರುವ ಪ್ರತಿಯೊಬ್ಬ ನಾಗರಿಕರೂ ಮತ್ತೊಬ್ಬರ ಸಮಾನ ಮೌಲ್ಯದ ನೈತಿಕ ಸತ್ವವನ್ನು ಗುರುತಿಸುವಷ್ಟು ತಾತ್ವಿಕ ಸಾಮರ್ಥ್ಯವನ್ನು ಹೊಂದಿರಬೇಕಾದ ಅಗತ್ಯವಿದೆ.

ಒಂದು ಸಂವೇದನಾಶೀಲ ಪ್ರಜಾತಂತ್ರಕ್ಕೆ ಹೀಗೆ ಅವಕಾಶಗಳನ್ನು ಹಂಚಿಕೊಳ್ಳುವಂಥ ತಾತ್ವಿಕ ಸಿದ್ಧತೆ ಇರಬೇಕಿರುತ್ತದೆ. ಪ್ರಜಾತಾಂತ್ರಿಕ ವಲಯಗಳು ಸಸ್ನೇಹಪೂರ್ವಕವಾಗಿರಬೇಕೇ ವಿನಾ ದ್ವೇಶಕಾರಕವಾಗಿರಬಾರದು. ಅಂಥಾ ಪ್ರಜಾತಂತ್ರದಲ್ಲಿ ಒಬ್ಬ ನಿರ್ದಿಷ್ಟ ಸದಸ್ಯರು ದ್ವೇಷದ ಅಥವಾ ತಿರಸ್ಕಾರದ ವಸ್ತುಗಳಾಗಿ ಬಿಡುವುದಿಲ್ಲ. ಈ ಸಮುದಾಯಗಳ ಸದಸ್ಯರು ಮತದಾನ ಮಾಡುತ್ತಿರುವುದು ನಿಜವಾದರೂ ಪ್ರಜಾತಾಂತ್ರಿಕ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕ ವಲಯಗಳಲ್ಲಿ ತಮ್ಮ ಧ್ವನಿಯನ್ನು ದಾಖಲಿಸುವಷ್ಟು ಸ್ವತಂತ್ರರಾಗಿದ್ದಾರೆ ಎಂದು ಹೇಳಲಾಗುವುದಿಲ್ಲ. ಹೀಗಾಗಿ ಅವರು ಒಂದು ಬಗೆಯ ಬಂಧನದಲ್ಲಿದ್ದಾರೆ ಎಂದು ಹೇಳಿದರೆ ಅತಿಶಯೋಕ್ತಿಯೇನೂ ಆಗುವುದಿಲ್ಲ. ಕಳೆದೆರಡು ದಶಕಗಳ ಭಾರತದ ಪ್ರಜಾತಂತ್ರದ ರೀತಿನೀತಿಗಳನ್ನು ಗಮನಿಸಿದಾಗ ಅದಕ್ಕೆ ಮತ್ತೊಬ್ಬ ನಾಗರಿಕರ ನೈತಿಕತೆಯನ್ನು ಗೌರವಿಸುವಷ್ಟು ಸಂವೇದನಾಶೀಲತೆ ಉಳಿದಿದೆಯೇ ಎಂಬ ಅನುಮಾನ ಉಂಟಾಗುತ್ತದೆ. ಹೀಗಾU ಒಂದು ಪ್ರಜಾತಂತ್ರದಲ್ಲಿ ಅಗತ್ಯವಾಗಿರುವುದು ಕೇವಲ ಓಟು ಹಾಕುವ ರಾಜಕೀಯ ಮುಕ್ತತೆಯಲ್ಲ, ಬದಲಿಗೆ ಅದರ ಎಲ್ಲಾ ಸದಸ್ಯರು ಸರಿಸಮಾನವಾದ ಘನತೆ ಮತ್ತು ಗೌರವಗಳಿಂದ ಸಮನಾಗಿ ಹಂಚಿಕೊಳ್ಳಬಲ್ಲ ಒಂದು ಸಾರ್ವಜನಿಕ ವಯದ ಅಗತ್ಯವೂ ಇದೆ. ಒಂದು ರಾಜಕೀಯ ಸಮುದಾಯವು ಉಗಮಗೊಂಡು ಸಧೃಡೀಕರಣಗೊಳ್ಳುವ ಪ್ರಕ್ರಿಯೆಯು ಅದು ನೈತಿಕತೆಯುಳ್ಳ ಸಮುದಾಯವಾಗಿ  ರೂಪುಗೊಳ್ಳುವುದನ್ನು ಅಧರಿಸಿರಬೇಕು. ಅದು ಘನತೆ ಮತ್ತು ಪರಸ್ಪರ ಗೌರವಗಳೆಂಬ ನೈತಿಕ ಚೌಕಟ್ಟನ್ನು ಸಮಾನವಾಗಿ ಗೌgವಿಸುವುದರ ಮೂಲಕ ಮಾತ್ರ ಸಾಧ್ಯವಾಗುತ್ತದೆ. ಅಂಥ ಮೌಲ್ಯಗಳನ್ನು ನೈತಿಕ ಸೌಹಾರ್ದತೆಯನ್ನು ನಿರ್ಮಿಸುವ ಮೂಲಕ ರಕ್ಷಿಸಬಹುದೇ ವಿನಾ ಜನಾಂಗೀಯ  ಆಧಾರದ ಮೇಲೆ ರಾಜಕೀಯ ಬಹುಮತವನ್ನು ಕಟ್ಟಿಕೊಳ್ಳಬೇಕೆಂಬ ಆಶಯಗಳಿಂದಲ್ಲ.

Back to Top