ISSN (Print) - 0012-9976 | ISSN (Online) - 2349-8846

ಸಿರಿಯಾ ಮೇಲೆ ಟರ್ಕಿಯ ಆಕ್ರಮಣ

ಶಕ್ತರಾಷ್ಟ್ರಗಳ ಮೇಲಾಟಗಳು ಮತ್ತು ಪ್ರಾದೇಶಿಕ ಲೆಕ್ಕಾಚಾರಗಳು ಸಿರಿಯನ್ ಕುರ್ದಿಶ್ ಜನಾಂಗದ ಆಶಯಗಳನ್ನು ದಮನ ಮಾಡಿವೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಸಿರಿಯಾ ಮೇಲೆ ದಾಳಿ ನಡೆಸಲು ಟರ್ಕಿಗೆ ಅನುಮತಿ ನೀಡಿದ್ದಾರೆ. ಟರ್ಕಿ ವಾಯುಪಡೆಗಳು ಸಿರಿಯನ್ ಕುರ್ದಿಷ್ ನೆಲೆಗಳ ಮೇಲೆ ವಾಯುದಾಳಿ ನಡೆಸಿವೆ. ಅವರ ಪದಾತಿ ದಳದಲ್ಲಿ ಅಧಿಕೃತ ಸೈನಿಕರಿಲ್ಲ. ಬದಲಿಗೆ ಅದು ಸೌದಿ, ಖತಾರ್, ಟರ್ಕಿ ಮತ್ತು ಅಮೆರಿಕದ ಹಣ ಮತ್ತು ಸರಂಜಾಮು ಸಹಕಾರಗಳಿಂದ ಸಜ್ಜಿತರಾದ,  ಅಲೆಪ್ಪೊ ಮತ್ತು ಇದ್ಲಿಬ್‌ನಂಥ ನಗರಗಳಲ್ಲಿ ಸೌದಿ ಹಣದಿಂದ ನಡೆಯುವ ಮಸೀದಿಗಳಲ್ಲಿ ತಯಾರಾಗಿರುವ ಪ್ರತಿಗಾಮಿ  ಜಿಹಾದಿಗಳಿಂದ ಕೂಡಿದೆ. ಈ ಶಸ್ತ್ರಧಾರಿ ಬಂಡುಕೋರರಿಗೆ ಬೇಕಿರುವುದು ಕೇವಲ ರಕ್ತ. ಹೀಗಾಗಿ ಅವರು ನಾಲ್ಕೂ ದಿಕ್ಕಿನಲ್ಲಿ ಗುಂಡುಹಾರಿಸುತ್ತಾ ಯಾರನ್ನೆಲ್ಲಾ ಅವರು ದೈವ ನಿಂದಕರೆಂದು ಭಾವಿಸುತ್ತಾರೋ ಅವರನ್ನೆಲ್ಲಾ ಸಾಮೂಹಿಕ ಹತ್ಯೆಗೈಯುವ ಬೆದರಿಕೆ ಹಾಕುತ್ತಾರೆ. ಟರ್ಕಿ sಸರ್ಕಾರವು ತಮ್ಮ ದೇಶದಲ್ಲಿರುವ ೩೦ ಲಕ್ಷ ಸಿರಿಯನ್ ನಿರಾಶ್ರಿತರನ್ನು ರೋಜಾವ ಎಂದು ಕರೆಯಲ್ಪಡುತ್ತಿದ್ದ ಪ್ರದೇಶದಲ್ಲಿ ನೆಲೆಗೊಳಿಸುವುದಾಗಿ ಹೇಳಿದೆ. ಜಗತ್ತಿನ ಕಾನೂನಿನ ಕಣ್ಣಿನಲ್ಲಿ ಈ ಬಗೆಯ ಜನಸಂಖ್ಯಾ ವರ್ಗಾವಣೆಯು ಒಂದು  ಯುದ್ಧಾಪರಾಧವಾಗುತ್ತದೆ.

ಸಿರಿಯನ್ ಕುರ್ದರು ಬಹುಸಂಖ್ಯಾತರಾಗಿರುವ ಪ್ರದೇಶದಲ್ಲಿ ಅರಬ್ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಿಬ್ಬರೂ, ಆಸೀರಿಯನ್ನರು, ಯಝಿದೀಗಳು ಹಾಗೂ ಮತಿತರ ಅಲ್ಪಸಂಖ್ಯಾತರೂ ಇದ್ದು  ವೈವಿಧ್ಯಮಂi ಜನರು ವಾಸಿಸುವ ಪ್ರದೇಶವಾಗಿದೆ. ಇದು ಪ್ರಮುಖವಾದ ಕೃಷಿ ಸಂಪನ್ಮೂಲವಿರುವ  ಪ್ರದೇಶವೂ ಆಗಿದ್ದು ಅದರ ದಕ್ಷಿಣಕ್ಕೆ ಸಿರಿಯಾದಲ್ಲಿ ಅಳಿದುಳಿದಿರುವ ತೈಲ ನಿಕ್ಷೇಪಗಳಿವೆ. ಇಂಥಾ ಜನಾಂಗೀಯ ವೈವಿಧ್ಯ  ಹಾಗೂ ಸಂಪನ್ಮೂಲ ಶ್ರೀಮಂತಿಕೆಯಿರುವುದರಿಂದ ಸಿರಿಯನ್ ಕುರ್ದರ ರಾಜಕೀಯ ಶಕ್ತಿಗಳು ಅಲ್ಲಿ ಸ್ವಾಯತ್ತತೆಯನ್ನು ಕೇಳಲು ಕಷ್ಟವಾಗುತ್ತಿದೆ. ಏಕೆಂದರೆ ನೆರೆಹೊರೆಯವರಾಗಲೀ ಅಥವಾ ಸಿರಿಯಾದ ಆಡಳಿತವಾಗಲೀ ಅದನ್ನು ಒಪ್ಪಲು ಸಿದ್ಧವಿಲ್ಲ. 

ಸಿರಿಯಾದ ಬಶರ್ ಅಲ್-ಅಸ್ಸಾದ್ ಸರ್ಕಾರದ ವಿರುದ್ಧ ೨೦೧೧ರಲ್ಲಿ ಬಂಡಾಯವು ಪ್ರಾರಂಭವಾದಾಗ ಸಿರಿಯಾ ಸರ್ಕಾರವು ರಾಜಧಾನಿ ಡೆಮಸ್ಕಸ್ ಹಾಗೂ ಪಶ್ಚಿಮ ಗಡಿ ಪ್ರದೇಶಗಳ ನಗರಗಳನ್ನು ರಕ್ಷಿಸಿಕೊಳ್ಳಲು ತನ್ನ ಅತ್ಯುತ್ತಮ ಸೇನಾ ತುಕಡಿಗಳನ್ನು ಅಲ್ಲಿಂದ ಹಿಂತೆಗೆದುಕೊಂಡಿತು. ಸಿರಿಯಾದ ಸೇನೆಯ ಹಿಂತೆಗೆತದಿಂದ ಸಿರಿಯನ್ ಕುರ್ದಿಷರ ರಾಜಕೀಯ ಪಕ್ಷಗಳು ಯೂಫ್ರಟೀಸ್ ನದಿಯ ಪೂರ್ವ ಭಾಗದಿಂದ ಹಿಡಿದು ಇರಾಕಿನ ಗಡಿಯವರೆಗಿನ ಪ್ರದೇಶಗಳನ್ನು ತಮ್ಮ  ನಿಯಂತ್ರಣಕ್ಕೆ ತೆಗೆದುಕೊಂಡಿತು. ಆ ಪ್ರದೇಶವನ್ನು ಸಿರಿಯನ್ ಕುರ್ದರ ಒಂದು ವಿಭಾಗವು ಸಮಾಜವಾದಿ ಸಮಾಜವಾಗಿ, ರೋಜಾವಾ ಆಗಿ ಪರಿವರ್ತಿಸುವ ಪ್ರಯತ್ನವನ್ನೂ ಮಾಡಿತು. ಆದರೆ ಅಂಥಾ ಪ್ರಯತ್ನಗಳಿಗೆ ಹೆಚ್ಚು ಅವಕಾಶವನ್ನು ಕೊಡದೆ ಇರಾಕಿನ ಇಸ್ಲಾಮಿಕ್ ಪ್ರಭುತ್ವ, ಮತ್ತು ಸಿರಿಯಾದ ಐಸಿಸ್ (ಇಸ್ಲಾಮಿಕ್ ಸ್ಟೇm) ರೋಜಾವ ಮೇಲೆ ತೀವ್ರವಾದ ದಾಳಿಯನ್ನು ನಡೆಸಿದರು ಮತ್ತು ಕೋಬಾನೆ ಹಾಗೂ ಮತ್ತಿತರ ಸಣ್ಣಪುಟ್ಟ ನಗರಗಳನ್ನು ವಶಕ್ಕೆ ತೆಗೆದುಕೊಂಡರು. ಐಸಿಸ್ ಎಮಿರೇಟರು ರೋಜಾವವನ್ನು ನಾಶಮಾಡಿದರು. ಹಾಗೂ ಸಿರಿಯನ್ ಕುರ್ದರನ್ನು ಮಾತ್ರವಲ್ಲದೆ ಯಾಝಿದಿಯಂಥ ಇತರ ಅಲ್ಪಸಂಖ್ಯಾತರನ್ನು ಕೊಂದುಹಾಕುವ ಬೆದರಿಕೆ ಹಾಕಿದರು.

ಸಿರಿಯನ್ ಕುರ್ದಿಷ ನಾಯಕರು ತಮ್ಮ ಉಳಿವಿಗಾಗಿ ಎಲ್ಲಾಕಡೆಗಳಿಂದಲೂ ರಾಜಕೀಯ ಮೈತ್ರಿಗಳನ್ನು ಏರ್ಪಡಿಸಿಕೊಳ್ಳಲು ಪ್ರಯತ್ನಪಟ್ಟರು. ಅವರು ಮಾಸ್ಕೋದಲ್ಲಿ ತಮ್ಮ ಕಚೇರಿಯೊಂದನ್ನು ತೆರೆದು ಅಮೆರಿಕದೊಂದಿಗೆ ಮಾತುಕತೆಯನ್ನು ಸಹ ಪ್ರಾರಂಭಿಸಿದರು. ಅಮೆರಿಕದ ಸೇನೆಯು ಐಸಿಸ್ ಮೇಲೆ ದಾಳಿಯನ್ನು ಕೇಂದ್ರೀಕರಿಸಿದ ನಂತರ ಸಿರಿಯನ್ ಕುರ್ದರು ತಮ್ಮ ಜನ ರಕ್ಷಕ ಪಡೆ- ವೈಪಿಜಿ-ಯನ್ನು ವಿಶಾಲವಾದ ಸಿರಿಯನ್ ಡೆಮಾಕ್ರಟಿಕ್  ಫೊರ್ಸ್- ಸಿರಿಯನ್ ಪ್ರಜಾತಾಂತ್ರಿಕ ದಳ (ಎಸ್‌ಡಿಎಫ್) ವಾಗಿ ಮಾರ್ಪಡಿಸಿಕೊಂಡರು. ಇದರಲ್ಲಿ ಅರಬ್ಬರು, ಅಸೀರಿಯನ್ನರು ಮತ್ತು ಕುರ್ದರೂ ಇದ್ದಾರೆ. ಐಸಿಸ್ ಮೇಲೆ ಅಮೆರಿಕ ನಡೆಸಿದ ದಾಳಿಗಳಲ್ಲಿ ಇವರೇ ಅಮೆರಿಕದ ಪದಾತಿ ದಳವಾಗಿ ಕೆಲಸ ಮಾಡಿದರು. ಎಸ್‌ಡಿಎಫ್ ನ ಬೆಂಬಲವಿಲ್ಲದಿದ್ದರೆ ಅಮೆರಿಕವು ಐಸಿಸ್‌ನ ಉತ್ತರ ಸಿರಿಯಾದ ನೆಲೆಗಳನ್ನು ಧ್ವಂಸಗೊಳಿಸಲು ಸಾಧ್ಯವಾಗುತ್ತಿರಲಿಲ್ಲ.

ಐಸಿಸ್ ನ ಸೋಲು ಮತ್ತು ಎಸ್‌ಡಿಎಫ್ ನ ವಿಜಯವು ಸಿರಿಯನ್ ಕುರ್ದಿಷರ ನಾಯಕತ್ವದಲ್ಲಿ ಒಂದು ಪೊಳ್ಳು ಭರವಸೆಯನ್ನು ಹುಟ್ಟುಹಾಕಿತು. ತಮ್ಮ ಮೇಲಿನ ಅಮೆರಿಕದ ಕೃಪಾಕಟಾಕ್ಷವು  ಮುಂದುವರೆಯುತ್ತದೆಂದೂ,  ಆ ಮೂಲಕ ಟರ್ಕಿ ಮತ್ತು ಸಿರಿಯಾಗಳು ತಮ್ಮ ಮೇಲಿನ ದಾಳಿಯನ್ನು ನಿಲ್ಲಿಸಬಹುದೆಂದೂ ಅವರು ನಿರೀಕ್ಷಿಸಿದ್ದರು. ಆದರೆ ಟರ್ಕಿಯ ಬಲಪಂಥೀಯ ಸರ್ಕಾರ ತನ್ನ ಗಡಿಗಳಲ್ಲಿ ಯಾವುದೇ ಬಗೆಯ ಕುರ್ದಿಶ್ ಸ್ವಾಯತ್ತತೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಕಾರ್ಯಕ್ರಮಗಳನ್ನೇ  ರೂಪಿಸಿಕೊಂಡಿದೆ. ರೋಜಾವ ಪ್ರಯೋಗವನ್ನು ನಾಶಮಾಡಲೆಂದೇ ಟರ್ಕಿಯು ಸಿರಿಯಾದ ಮೇಲೆ ೨೦೧೪ರಲ್ಲಿ ಮತ್ತು ೨೦೧೫ರಲ್ಲಿ ದಾಳಿಯನ್ನು ನಡೆಸಿತ್ತು. ಅದು ರೋಜಾವ ಪ್ರಯೋಗವನ್ನು ಸಂಪೂರ್ಣವಾಗಿ ನಾಶಗೊಳಿಸುವ ಅವಕಾಶಕ್ಕಾಗಿ ಕಾಯುತ್ತಿತ್ತು. ಸಿರಿಯಾದ ಕುರ್ದರ ಮತ್ತು ಅಮೆರಿಕದ ನಿಯಂತ್ರಣದಲ್ಲಿದ್ದ ಸಿರಿಯಾದ ದೇಶದ ಮೂರನೇ ಒಂದು ಭಾಗದಷ್ಟಿರುವ ಎಲ್ಲಾ ಪ್ರದೇಶಗಳನ್ನು ಸಿರಿಯಾ ಸರ್ಕಾರವು ಮತ್ತೆ ಪಡೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದೆ.  ಸಿರಿಯಾ ಸರ್ಕಾರಕ್ಕೆ ಸಹಾಯ ಮಾಡುತ್ತಿದ್ದ ರಷಿಯಾ ಮತ್ತು ಇರಾನ್‌ಗಳು ಅಸ್ಸಾದ್ ಸರ್ಕಾರಕ್ಕೆ ಸಂಪೂರ್ಣ ಭೌಗೋಳಿಕ ಸಾರ್ವಭೌಮತೆ ದಕ್ಕಬೇಕೆಂದು ಸ್ಪಷ್ಟಪಡಿಸಿವೆ. ಅದಕ್ಕೆ ರೋಜಾವ ಒಂದು ದೊಡ್ಡ ತಡೆಯಾಗಿದೆ.

ಸಿರಿಯಾ, ರಷಿಯಾ ಹಾಗೂ ಇರಾನ್ ದೇಶಗಳ ಸಮ್ಮತಿಯಿಲ್ಲದೆ ಟರ್ಕಿ ಸೇನೆಯು ದಾಳಿ ಮಾಡಿದೆ ಎಂಬುದನ್ನು ನಂಬಲು ಆಗುವುದಿಲ್ಲ. ಮಂದಾಗಾಮಿ ಸಿರಿಯನ್ ಕುರ್ದಿಷ್ ರಾಜಕೀಯ ನಾಯಕರುಗಳಿಗೆ ರೋಜಾವ ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲವೆಂಬುದು ತಿಳಿದೇ ಇತ್ತು. ಹಲವಾರು ಬಗೆಯ ಕಾರಣಗಳಿಂದ ಯಾವ ಸರ್ಕಾರಗಳಿಗೂ ಅದನ್ನು ಉಳಿಸಿಕೊಳ್ಳಬೇಕೆಂಬ ಇರಾದೆಯೇ ಇರಲಿಲ್ಲ. ಅಮೆರಿಕವು ಮಿಂಚಿನ ವೇಗದಲ್ಲಿ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡ ನಂತರ ಆ ಪ್ರದೇಶವನ್ನು ಈಗ ಸಿರಿಯಾ ಮತ್ತು ರಷಿಯಾ ಸೇನಾಪಡೆಗಳು ನಿಯಂತ್ರಿಸುತ್ತಿವೆ. ಈ ಪ್ರದೇಶದ ಒಂದು ಭಾಗದ ಮೇಲೆ ಸಿರಿಯಾ ಸರ್ಕಾರವು ನಿಯಂತ್ರಣ ಹೊಂದಿರಬೇಕೆಂಬ ಶರತ್ತಿನ ಮೇಲೆ ಟರ್ಕಿಯು ತನ್ನ ಆಕ್ರಮಣವನ್ನು ನಿಲ್ಲಿಸುವ ಆಶ್ವಾಸನೆಯನ್ನು ನೀಡಿದೆ. ಸಿರಿಯನ್ ಕುರ್ದರ ಪ್ರಕಾರ ಆ ಪ್ರದೇಶದಲ್ಲಿ ಟರ್ಕಿ ಸೇನೆಯು ಇರುವುದಕ್ಕಿಂತ ಸಿರಿಯಾ ಸೇನೆಯು ಇರುವುದೇ ವಾಸಿ. ಅವರ ಕನಸುಗಳು ಈಗ ನಿರ್ನಾಮವಾಗಿವೆ. ಅಮೆರಿಕದ ಸೇನೆಯು ಹಿಂತೆಗೆಯುತ್ತಿದ್ದಂತೆ ಅಮೆರಿಕ ಸೈನಿಕರಮೇಲೆ ಕುರ್ದರು ಕಲ್ಲುಗಳನ್ನು ಹಾಗೂ ಕೊಳೆತ ಹಣ್ಣುಗಳನ್ನು ಎಸೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾ ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾದ ಮಾರ್ಕ್ ಎಸ್ಪರ್ ಅವರು  ನಾವು ನಮ್ಮ ದೀರ್ಘಕಾಲದ ನ್ಯಾಟೋ ಸ್ನೇಹಿತನಾದ ಟರ್ಕಿಯ ವಿರುದ್ಧ ಕುರ್ದರನ್ನು ರಕ್ಷಿಸುವುದಕ್ಕಾಗಲಿ ಅಥವಾ ಒಂದು ಸ್ವಾಯತ್ತ ಕುರ್ದಿಷ್ ಪ್ರಭುತ್ವವನ್ನು ಸ್ಥಾಪಿಸುವ ಸಲುವಾಗಿಯಾಗಲೀ ಯುದ್ಧ ಮಾಡಲು ಬಂದಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ  ಕುರ್ದಿಶ್ ಜನರ ಆಶಯಗಳು ಭಗ್ನಗೊಂಡಿವೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top