ISSN (Print) - 0012-9976 | ISSN (Online) - 2349-8846

ಪ್ರಜಾತಂತ್ರದಲ್ಲಿ ಅಸಲಿ ಮತ್ತು ನಕಲಿ

.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಒಂದು ಸಧೃಢವಾದ ಪ್ರಜಾತಂತ್ರದಲ್ಲಿ ಸುಳ್ಳು ಸುದ್ದಿಗಳೆಂಬ ವಿದ್ಯಮಾನವು ಒಂದು ವಿರೋಧಾಭಾಸವೇ ಸರಿ. ಅಂಥಾ ಒಂದು ಪ್ರಜಾತಂತ್ರದಲ್ಲಿ, ವಾಸ್ತವ ಸತ್ಯಗಳು, ಅವೆಷ್ಟೇ ಅನಾನುಕೂಲಕರವಾಗಿದ್ದರೂ, ರಾಜಕೀಯ ನಾಯಕ್ರುಗಳ ಭಾಷಣಗಳಲ್ಲಿ ಮತ್ತು ಪ್ರತಿಪಾದನೆಗಳ ಮತ್ತಿತರ ಸಾಮಾಜಿಕ ಸ್ವರೂಪಗಳಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಒಂದು ಸಮಾಲೋಚಕ ಪ್ರಜಾತಂತ್ರದಲ್ಲಿ ಸತ್ಯದ ಅಭಿವ್ಯಕ್ತಿಯು ಮಾಧ್ಯಮಗಳ ಮೂಲಕ ಪರಿಚಲನೆಗೊಳ್ಳುವಲ್ಲಿ ಮತ್ತು ವಾಗ್ವಾದಗಳ ಅಭಿವ್ಯಕ್ತಿಯಲ್ಲಿ ಅತ್ಯಂತ ಪಾರದರ್ಶಕವಾಗಿರಬೇಕು. ಒಂದು ಜವಾಬ್ದಾರಿಯುತ ಮಾಧ್ಯಮವು ಯಾವುದೇ ವಿಕೃತಿಯಿಲ್ಲದೆ ಅದರ ಸಾರವನ್ನು ಸಂವಹನ ಮಾಡಬೇಕಿರುತ್ತದೆ. ಸಾಮಾಜಿಕ ಪ್ರಜ್ನೆಯನ್ನು ವಾಸ್ತವಗಳ ಪರಿಣಾಮಗಳ ಜೊತೆ ಬೆಸೆಯುವಲ್ಲಿ ಮಾಧ್ಯಮಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಸಮಾಜದಲ್ಲಿರುವ ವಾಸ್ತವ ಸತ್ಯಗಳ ಸುತ್ತ ಪ್ರಜಾತಾಂತ್ರಿಕ ಸಂವಾದಗಳನ್ನು ಬೆಳೆಸುವಲ್ಲಿ ಮಾಧ್ಯಮಗಳಿಗೆ ದೊಡ್ಡ ಜವಾಬ್ದಾರಿ ಇದೆ. ಈ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿಗಳು ಪ್ರಜಾತಂತ್ರದ ಆದರ್ಶಗಳಿಗೆ ತದ್ವಿರುದ್ಧವಾಗಿ ಕಾಣುತ್ತವೆ. ಅಷ್ಟೆಲ್ಲಾ ಇದ್ದರೂ, ಪಶ್ಚಿಮ ದೇಶಗಳಲ್ಲೂ ಮತ್ತು ಭಾರತದಲ್ಲೂ ಸುಳ್ಳು ಸುದ್ದಿ ಎಂಬ ವಿದ್ಯಮಾನವು ಪ್ರಜಾತಂತ್ರದ ಹಂದರವನ್ನು ಭ್ರಷ್ಟಗೊಳಿಸುತ್ತಿದೆ ಎಂಬ ಕೂಗು ಕೇಳಿ ಬರುತ್ತಲೇ ಇದೆ.

ಆದರೆ ಸುಳ್ಳು ಸುದ್ದಿಗಳೆಂಬವು ಅಸತ್ಯವಾದ ಅಥವಾ ವಿಕೃತವಾದ ಮಾಹಿತಿಗಳನ್ನು ಹರಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಚುನಾವಣಾ ಸಂದರ್ಭಗಳಲ್ಲಿ ಸುಳ್ಳು ಭರವಸೆಗಳನ್ನು ನೀಡುವುದು ಅಥವಾ ವೈಫಲ್ಯಗಳನ್ನು ಅದ್ಭುತವಾದ ಯಶಸ್ಸೆಂದು ಬಿಂಬಿಸುವುದೂ ಸಹ ಸುಳ್ಳು ಸುದ್ಧಿಯ ಭಾಗವಾಗಿದೆ. ವಿರೋಧ ಪಕ್ಷಗಳು ನೀಡುವ ದೂರುಗಳು ಈ ವ್ಯಾಖ್ಯಾನಕ್ಕೆ ಪುಷ್ಟಿ ಕೊಡುತ್ತದೆ.

ಸಾಮಾನ್ಯವಾಗಿ ಔಪಚಾರಿಕವಾಗಿ ಸಾಂಸ್ಥಿಕ  ಅಧಿಕಾರವನ್ನು ಗಳಿಸ ಬಯಸುವವರೂ ಮತ್ತು ತಮ್ಮ ಅಧಿಕಾರವು ಅತ್ಯಂತ ಪರಿಣಾಮಕಾರಿಯಾದದ್ದೆಂದು ಬಿಂಬಿಸಬಯಸುವವರು ಸುಳ್ಳು ಸುದ್ದಿಯನ್ನು ಬಳಸುತ್ತಾರೆಂದು ಗುರುತಿಸಲಾಗುತ್ತದೆ. ಆದರೆ ಪ್ರಶ್ನೆಯೇನೆಂದರೆ: ಅಧಿಕಾರವನ್ನು ಗಳಿಸಿಕೊಳ್ಳಲು ಮತ್ತು ನಂತರ ಅದನ್ನು ದಕ್ಕಿಸಿಕೊಳ್ಳಲು ಸುಳ್ಳು ಸುದ್ದಿಗಳ ಅಗತ್ಯವೇಕೆ ಉಂಟಾಗುತ್ತದೆ?

ಭಾರತದ ಮತ್ತು ಅಮೆರಿಕದ ಚುನಾವಣೆಯ ಪೈಪೋಟಿಯನ್ನು ಇದಕ್ಕೆ ಸರಳ ಉದಾಹರಣೆಯಾಗಿ ನೀಡಬಹುದು. ಅಧಿಕಾರದ ಚದುರಂಗದಾಟದಲ್ಲಿ, ರಾಜಕಾರಣಿಗಳು ತಮ್ಮ ಅತ್ಯಂತ ಸನಿಹದ ಪ್ರತಿಸ್ಪರ್ಧಿಗಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಳ್ಳಲು ಸುಳ್ಳು ಸುದ್ದಿಯನ್ನು ಬಳಸಿಕೊಳ್ಳುತ್ತಾರೆ. ಅಧಿಕಾರವನ್ನು ಪಡೆದುಕೊಂಡ ಪಕ್ಷಕ್ಕೆ ಅಧಿಕಾರದಲ್ಲುಳಿಯಲೋಸುಗ ಜನರನ್ನು ಮೋಸ ಮಾಡಲು ಸುಳ್ಳು ಸುದ್ದಿ, ಮತ್ತು ಅಸಮರ್ಪಕ ದತ್ತಾಂಶಗಳ ಅಗತ್ಯವಾಗುತ್ತವೆ. ಇದು ಅಧಿಕಾರರೂಢ ಪಕ್ಷದ ಬಳಿ ಜನರಿಗೆ ತಮ್ಮ ಅಧಿಕಾರದ ಪರಿಣಾಮಕತೆಯನ್ನು ತೋರಿಸಲು ಬೇಕಾದಂಥ ಅತ್ಯುತ್ತಮ ಸಾಧನೆಯಾಗಲೀ ಅಥವಾ ಪುರಾವೆಗಳಾಗಲೀ ಇಲ್ಲದಿರುವುದನ್ನು ಸ್ಪಷ್ಟಗೊಳಿಸುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಜನರ ಬದುಕನ್ನು ನಾಶಗೊಳಿಸುತ್ತಿರುವ ಜನರ ಬದುಕಿನ ಗುಣಮಟ್ಟದ ಕುಸಿತ, ಹೆಚ್ಚುತ್ತಿರುವ ಸಾಮಾಜಿಕ ಸಂಘರ್ಷ ಮತ್ತು ಮಾರುಕಟ್ಟೆ ಮತ್ತು ಹಣಕಾಸು ಸಂಸ್ಥೆಗಳ ವೈಪರೀತ್ಯಗಳಂಥ ಕೆಟ್ಟ ಉದಾಹರಣೆಗಳನ್ನು ಅವರು ಬಳಸಲಾರರು. ಆಳುವ ಪಕ್ಷಗಳು ಅಂಥ ಕೆಟ್ಟ ಉದಾಹರಣೆಗಳನ್ನು ಬಳಸುವ ಸಾಹಸ ಮಾಡಿದರೆ ವಿರೋಧ ಪಕ್ಷಗಳ ಬಾಯಿಗೆ ತುತ್ತಾಗುತ್ತವೆ. ಹೀಗಾಗಿ ವಿರೋಧಿಗಳ ಧ್ವನಿಯನ್ನು ಹತ್ತಿಕ್ಕುವುದೇ ಸುಳ್ಳು ಸುದ್ದಿಗಳ ಗುರಿಯೆಂದು ಕಾಣುತ್ತದೆ.

ಆದರೆ ಆಳುವಪಕ್ಷಗಳ ನಿಜವಾದ ಉದ್ದೇಶಗಳನ್ನು ಇನ್ನಷ್ಟು ಸನಿಹದಿಂದ ಗಮನಿಸಿದರೆ ಇದು ಪ್ರಧಾನವಾದ ಉದ್ದೇಶವಲ್ಲವೆಂಬುದು ಅರ್ಥವಾಗುತ್ತದೆ. ಮತದಾರರೇ ಈ ಸುಳ್ಳುಸುದ್ದಿಗಳ ಪ್ರಾಥಮಿಕ ಗುರಿಯಾಗಿದ್ದಾರೆ. ಏಕೆಂದರೆ ಮತದಾರರ ಚುನಾವಣಾ ಬೆಂಬಲವನ್ನು ಸದಾ ಖಾತರಿಯಾದದ್ದೆಂದೇನೂ ಪರಿಗಣಿಸಲಾಗುವುದಿಲ್ಲ. ಜನಸಾಮಾನ್ಯರ ಬದುಕನ್ನು ತೀವ್ರವಾಗಿ ಪ್ರಭಾವಿಸುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ವಿಷಯದಲ್ಲಿ ವಿಫಲವಾದಲ್ಲಿ ಮತದಾರರು ಪಕ್ಷದ ವಿರುದ್ಧವೇ ತಿರುಗಿಬೀಳುತ್ತಾರೆ. ಹೀಗಾಗಿ ಮತದಾರರನ್ನು ಅವರಷ್ಟಕ್ಕೆ ಬಿಟ್ಟುಬಿಡಲಾಗುವುದಿಲ್ಲ. ಆದ್ದರಿಂದಲೇ ಈ ಸುಳ್ಳುಗಳ ಕಾರ್ಖಾನೆಯ ಅಗತ್ಯ ಬೀಳುತ್ತದೆ. ಹೀಗಾಗಿ ಸುಳ್ಳು ಸುದ್ದಿ ಎಂಬ ವಿದ್ಯಮಾನ ಸತ್ಯದ ಕುರಿತಾದದ್ದಲ್ಲ. ಬದಲಿಗೆ ಜನರ ಕುರಿತಾದದ್ದು. ಜನರನ್ನು ಸತ್ಯದಿಂದ ದೂರಗೊಳಿಸುವ ಕುರಿತಾದದ್ದು. ಹೀಗಾಗಿ ಅಧಿಕಾರದ ಬಗೆಗಿನ ಎಂದೂ ತಣಿಯದ ದಾಹವುಳ್ಳ ಪಕ್ಷಗಳಿಗೆ ಸುಳ್ಳುಸುದ್ದಿಗಳ ಅಗತ್ಯ ಸದಾ ಇರುತ್ತದೆ. ಅವರ ಮಟ್ಟಿಗೆ ಸುಳ್ಳುಸುದ್ದಿಗಳೇ ಜನರನ್ನು ತಲುಪುವ ವಿಧಾನ. ಆದರೆ ಸುಳ್ಳುಸುದ್ದಿಯ ಪರಿಣಾಮಗಳು ಮಾತ್ರ ವಿನಾಶಕಾರಿಯಾಗಿರುತ್ತವೆ.

ಇಂಥಾ ಸುಳ್ಳುಗಳಿಗೆ ಸಾಧನವಾಗುವ ವ್ಯಕ್ತಿಗಳು ತರ್ಕವನ್ನು ಬಳಸಿ ಸುಳ್ಳಿನಿಂದ ಸತ್ಯವನ್ನು ಸೋಸುವುದನ್ನು ಅಥವಾ ಬೇರ್ಪಡಿಸುವುದನ್ನು ನಿಲ್ಲಿಸಿಬಿಡುತ್ತಾರೆ. ಒಂದು ಸರ್ಕಾರದ ಸಾಧನೆಗಳ ವಾಸ್ತವತೆಯ ಬಗ್ಗೆ ಅಥವಾ ಇನ್ಯಾವುದೇ ಸತ್ಯದ ಬಗೆಗೆ ಹರಡುವ ಸುಳ್ಳು ಸುದ್ದಿಗಳ ಪರಿಣಾಮಕತೆಯು ಅಂಥವನ್ನು ಒಪ್ಪಿಕೊಳ್ಳುವ ಮತದಾರರ ಮನಸ್ಥಿತಿ ಅಥವಾ ಸಿದ್ಧತೆಗಳನ್ನು ಆಧರಿಸಿರುತ್ತದೆ. ಸುಳ್ಳುಸುದ್ದಿಗಳ ಫಲಿತಾಂಶಗಳಿಗೆ ಜನರನ್ನು ಬಲಿಗೊಡುವ ಮೂಲಕ ಮತದಾರರ ಸ್ವಾಯತ್ತತೆಯ ಸ್ವಾತಂತ್ರ್ಯದ ಹರಣವಾಗುತ್ತದೆ. ವಿಮರ್ಶಾತ್ಮಕ ಸಾಮರ್ಥ್ಯಗಳ ಮೂಲಕ ಸ್ವಾಯತ್ತ ತೀರ್ಮಾನಗಳಿಗೆ ಬರಬಹುದಾದ ಸಾಮರ್ಥ್ಯವನ್ನು ಇಲ್ಲವಾಗಿಸುತ್ತದೆ. ಜನಸಾಮನ್ಯರ ಇಂಥಾ ಸಾಮರ್ಥ್ಯಗಳು ಮಾತ್ರ  ಆಳುವ ಪಕ್ಷಗಳ ಒಳಸಂಚುಗಳನ್ನು ಕಾಣುವ ಮತ್ತು ಮೀರುವ ಶಕ್ತಿಯನ್ನು ಒದಗಿಸುತ್ತದೆ.

ಇಂಥಾ ಸುಳ್ಳು ಸುದ್ದಿಗಳು ಪ್ರಜಾತಂತ್ರದ ಮೇಲೆ ಯಾವ ಪರಿಣಾಮವನ್ನು ಬೀರುತ್ತವೆ? ಸುಳ್ಳು ಸುದ್ದಿಗಳು ಪ್ರಜಾತಂತ್ರದಲ್ಲಿರುವ ಆಳವಾದ ಬಿಕ್ಕಟಿನ ಪ್ರತಿಫಲನವಾಗಿದೆ. ಆಳುವ ಪಕ್ಷಗಳು ಜನರನ್ನು ಹೀಗೆ ಸುಳ್ಳುಸುದ್ದಿಗಳಿಂದ ಮೋಸಗೊಳಿಸುವುದನ್ನು ಮುಂದುವರೆಸಿದರೆ ಪ್ರಜಾತಂತ್ರದಲ್ಲಿ ಬಿಕ್ಕಟ್ಟು ಉಂಟಾಗುವುದು ಮಾತ್ರವಲ್ಲದೆ ಗಂಭೀರವಾದ ವ್ಯವಸ್ಥಾತ್ಮಕ ಬಿಕ್ಕಟ್ಟಿಗೂ ದಾರಿ ಮಾಡಿಕೊಡುತ್ತದೆ. ಸಾಮಾಜಿಕ ವಿಭಜನೆಗಳು ಮತ್ತು ಆರ್ಥಿಕ ಇಳಿಮುಖತೆ ಅಂಥ ಒಂದು ಬಿಕ್ಕಟ್ಟಿನ ಸೂಚನೆಗಳಾಗಿವೆ. ತನ್ನ ಸ್ವರೂಪ ಮತ್ತು ಪರಿಣಾಮಕತೆಗಳಿಗಾಗಿ ಮತ್ತೊಬ್ಬರ ಅಸಹಾಯಕತೆ ಮತ್ತು ಅಜ್ನಾನವನ್ನು ಅಧgಸುವ ಯಾವುದೇ ಕ್ರಿಯೆಯು ಅಂತಿಮವಾಗಿ ಸೋಲನ್ನಪ್ಪುತ್ತದೆ.

Back to Top