ISSN (Print) - 0012-9976 | ISSN (Online) - 2349-8846

ಸುಪ್ರೀಂ ಕೋರ್ಟಿಗೆ ಅರ್ಧ ಅಭಿನಂದನೆಗಳು

ದಲಿತರ ಮೇಲಿನ ದೌರ್ಜನ್ಯ ತಡೆ ಕಾಯಿದೆಯ ಬಗ್ಗೆ ಸುಪ್ರೀಂ ಕೋರ್ಟು ಇತ್ತೀಚೆಗೆ ನೀಡಿರುವ ಆದೇಶದ ಮೂಲಕ ಕಾನೂನಿನಲ್ಲಿ ಇದ್ದ ದೋಷವೊಂದನ್ನು ಸರಿತಿದ್ದಿದಂತಾಗಿದೆಯಷ್ಟೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ದಲಿತರ ಮೇಲಿನ ದೌರ್ಜನ್ಯ ತಡೆ ಕಾಯಿದೆಯ ಬಗ್ಗೆ ಸುಪ್ರೀಂ ಕೋರ್ಟು ಇತ್ತೀಚೆಗೆ ನೀಡಿರುವ ಆದೇಶದ ಮೂಲಕ ಕಾನೂನಿನಲ್ಲಿ ಇದ್ದ ದೋಷವೊಂದನ್ನು ಸರಿತಿದ್ದಿದಂತಾಗಿದೆಯಷ್ಟೆ.

 

ಕಳೆದೊಂದು ದಶಕದಲ್ಲಿ ಸುಪ್ರೀಂ ಕೋರ್ಟು ಈ ಹಿಂದೆ ತಾನು ಮಾಡಿದ್ದ ಹಲವಾರು ತಪ್ಪುಗಳನ್ನು ಸರಿತಿದ್ದಿಕೊಳ್ಳಬೇಕಾದ ಸಂದರ್ಭಗಳನ್ನು ಎದುರಿಸಿದೆ. ತಕ್ಷಣ ಎರಡು ಉದಾಹರಣೆಗಳು ಕಣ್ಣೆದುರಿಗೆ ಬರುತ್ತವೆ. ೨೦೧೭ರ ಕೆ. ಎಸ್. ಪುಟ್ಟಸ್ವಾಮಿ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟು  ತಾನು ೧೯೭೬ರಲ್ಲಿ ಎಡಿಎಂ ಜಬಲ್ಪುರ್ ಮತ್ತು ಎಸ್‌ಕೆ ಶುಕ್ಲಾ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಬದಲಿಸಿತು. ಹಾಗೆಯೇ ೨೦೧೮ರಲ್ಲಿ  ಕುಮಾರ್ ಕೌಶಲ್ ಮತ್ತು ನಾಜ್ ಫೌಂಡೇಶನ್ ನಡುವಿನ ಪ್ರಕರಣದಲ್ಲಿ ತಾನೇ ನೀಡಿದ ಆದೇಶವನ್ನು ನವತೇಜ್ ಸಿಂಗ್ ಜೋಹರ್ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದಲ್ಲಿ ನೀಡಿದ ಆದೇಶz ಮೂಲಕ ಸರಿತಿದ್ದುಕೊಂಡಿದೆ. ಬದಲಾದ ಕಾಲ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಕೋರ್ಟುಗಳು ತಮ್ಮ ತಿಳವಳಿಕೆಯನ್ನು ಬದಲಿಸಿಕೊಳ್ಳುತ್ತವೆಯಾದರೂ, ಮೇಲಿನ ಎರಡು ನ್ಯಾಯಾದೇಶಗಳಲ್ಲಿ ಆ ಸಂಸ್ಥೆಯ ಹೃದಯವು ಬದಲಾಗಿರುವುದು ವ್ಯಕ್ತವಾಗುತ್ತದೆ. ಈ ತಿದ್ದುಪಡಿಗಳು ಯಾವುದಾದರೊಂದು ವಾಸ್ತವ ಸಂಗತಿಯಲ್ಲಿ ಆದ ಬದಲಾವಣೆ ಅಥವಾ ಕಾನೂನಾತ್ಮಕ ದೋಷಗಳನ್ನು ಒಪ್ಪಿಕೊಳ್ಳುವುದರಿಂದ ಮಾತ್ರ ಸಂಭವಿಸುವುದಿಲ್ಲ. ಬದಲಿಗೆ ಒಂದು ಪ್ರಮುಖವಾದ ಪ್ರಶ್ನೆಯ ಕುರಿತು ಈವರೆಗೆ ಕೋರ್ಟುಗಳು ಆಲೋಚಿಸುತ್ತಿದ್ದ ರೀತಿ ಮತ್ತು ಧೋರಣೆಗಳೇ ಮೂಲಭೂತವಾಗಿ ದೋಷಪೂರಿತವಾಗಿದ್ದವು ಎಂಬ ತಪ್ಪೊಪ್ಪಿಗೆಯಿಂದ ಮಾತ್ರ ಇಂಥಾ ತಿದ್ದುಪಡಿಗಳು ಸಾಧ್ಯವಾಗುತ್ತವೆ.

ಹಾಗೆಯೇ, ೧೯೮೯ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆಗೆ (ಪಿಒಎ) ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟು ೨೦೧೮ರಲ್ಲಿ ಡಾ. ಎಸ್‌ಕೆ ಮಹಾಜನ್ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ನೀಡಿದ ಆದೇಶವನ್ನು ಹಿಂತೆಗೆದುಕೊಂಡಿರುವುದೂ ಸಹ ಒಂದು ಮಹತ್ತರವಾದ ನ್ಯಾಯಿಕ ತಿದ್ದುಪಡಿ ಪ್ರಕರಣವಾಗಿದೆ. ಪಿಒಎ ಪ್ರಕರಣಗಳಲ್ಲಿ ಸರ್ಕಾರಿ ನೌಕರರನ್ನು ಆರೋಪಿಗಳಾಗಿಸುವ ಮೊದಲು ಸರ್ಕಾರದ ಪೂರ್ವನುಮತಿ ಅಗತ್ಯವೆಂದೂ ಮತ್ತು ಈ ಕಾಯಿದೆಯಡಿ ಎಫ್‌ಐಆರ್ ಅನ್ನು ದಾಖಲು ಮಾಡುವ ಮೊದಲು ಡಿಎಸ್‌ಪಿ ಮಟ್ಟದ ಅಧಿಕಾರಿಯೊಬ್ಬರು ಪ್ರಕರಣದ ಪೂರ್ವತನಿಖೆ ಮಾಡುವುದನ್ನು ಅಗತ್ಯಗೊಳಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠವು ಭಾರತ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ಪ್ರಕರಣ-೨೦೧೯ರಲ್ಲಿ ನೀಡಿದ ಪುನಾರವಲೋಕನ ಆದೇಶದ ಮೂಲಕ ಹಿಂತೆಗೆದುಕೊಂಡಿದೆ.

ಅಸ್ಥಿತ್ವದಲ್ಲಿರುವ ಸಂಬಂಧಪಟ್ಟ ಕಾನೂನುಗಳನ್ನು ಹಾಗೂ ಪಿಒಎ ಕಾಯಿದೆಯ ಉದ್ದೇಶಗಳನ್ನು ಪರಿಶೀಲಿಸಿದಾಗ ಸುಪ್ರೀಂ ಕೋರ್ಟು ಕಾನೂನಿನಲ್ಲಿದ್ದ ದೋಷವೊಂದನ್ನು ಸರಿತಿದ್ದುಕೊಳ್ಳುತ್ತಿದೆಯೆಂಬುದೂ ಸ್ಪಷ್ಟವಾಗುತ್ತದೆ. ಏಕೆಂದರೆ ಒಂದು ಕ್ರಿಮಿನಲ್ ಪ್ರಕರಂಣಗಳಲ್ಲಿ ಅಸ್ಥಿತ್ವದಲ್ಲಿ ಇರದ ಹಾಗೂ ಅಥವಾ ಯಾವುದೇ ಬದಲಾವಣೆಯನ್ನೇ ಕೋರಿರದ ಸನ್ನಿವೇಶದಲ್ಲಿ ಕೋರ್ಟುಗಳು ಯಾವುದೇ ವಿಶೇಷವಾದ ಪ್ರಕ್ರಿಯೆಗಳನ್ನು ರೂಪಿಸುವಂತಿಲ್ಲ. ಎಲ್ಲಾ ಬಗೆಯ ಪ್ರಕರಣಗಳಲ್ಲೂ ಮೇಲಿನ  ಕೋರ್ಟುಗಳು ಇತ್ತೀಚೆಗೆ ಅಸ್ಪಷ್ಟವಾದ ಮತ್ತು ಅಪ್ರಯೋಜಕವಾದ ಮಾರ್ಗದರ್ಶಿ ಸೂತ್ರಗಳನ್ನು ನಿಗದಿ ಮಾಡುತ್ತಾ ಬರುತ್ತಿವೆ. ಆದರೆ ಈ ಪ್ರಕರಣದಲ್ಲಿ ಮಾತ್ರ ಅದು ಈ ಹಿಂದೆ ನೀಡಿದ ನಿರ್ದೇಶನಗಳು ಪಿಒಎ ಕಾಯಿದೆಯ ಉದ್ದೇಶಗಳನ್ನೇ ಭಂಗಗೊಳಿಸಿ ಜಾತಿ ದೌರ್ಜನ್ಯಗಳಿಗೆ ತುತ್ತಾತದವರು ನ್ಯಾಯದ ನಿರೀಕ್ಷೆ ಮಾಡುವುದನ್ನು ಸಹ ಕಠಿಣಗೊಳಿಸುತ್ತಿತ್ತು. 

ಅದನ್ನು ಸರಿತಿದ್ದಿದ ಈ ನ್ಯಾಯಾದೇವು ಅಷ್ಟಕ್ಕೆ ಮಾತ್ರ ಸೀಮಿತಗೊಳ್ಳದೆ ಇನ್ನೂ ಆಳಕ್ಕೆ ಹೋಗುತ್ತದೆ. ಅದು ಹಳೆಯ ಆ ಮಹಾಜನ್ ಆದೇಶವು  ದಲಿತರು ಮತ್ತು ಆದಿವಾಸಿಗಳು, ಪಿಒಎ ಕಾಯಿದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆಂದು ಭಾವಿಸುವಾಗ ಭಾರತದ ಸಾಮಾಜಿಕ ವಾಸ್ತವಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲವೆಂದು ಗುರುತಿಸುತ್ತದೆ. ಭಾರತದ ಉದ್ದಗಲಕ್ಕೂ ಈ ವರ್ಗಗಳ ಮೇಲೆ ದೌರ್ಜನ್ಯಗಳು ಮುಂದುವರೆದಿದೆಯೆಂಬುದನ್ನೂ ಮತ್ತು ಕ್ರಿಮಿನಲ್ ನ್ಯಾಯವಿಚಾರಣೆ ವ್ಯವಸ್ಥೆಯಲ್ಲಿನ ಸಾಂಸ್ಥಿಕ ವೈಫಲ್ಯದಿಂದಾಗಿಯೇ ಇಂಥಾ ಪ್ರಕರಣಗಳಲ್ಲಿ ಶಿಕ್ಷಾ ಪ್ರಮಾಣವು ತೀರಾ ಕಡಿಮೆ ಇದೆಯೆಂಬುದನ್ನು ಸಹ ಅದು ಗುರುತಿಸುತ್ತದೆ ಮತ್ತು ಒಪ್ಪಿಕೊಳ್ಳುತ್ತದೆ. ಹೀಗಾಗಿ ಈ ದೇಶದ ದಲಿತರನ್ನು ಮತ್ತು ಆದಿವಾಸಿಗಳನ್ನು ಸಬಲೀಕರಿಸುವ ರಕ್ಷಣಾತ್ಮಕ ಕ್ರಮಗಳು ಇನ್ನಷ್ಟು ಹೆಚ್ಚಾಗಬೇಕಿದೆಯೇ ವಿನಾ ಕಡಿಮೆಯಾಗಕೂಡದೆಂಬುದನ್ನೂ ಸಹ ಸುಪ್ರೀಂಕೋರ್ಟು ಗುರುತಿಸುತ್ತದೆ. ಹಿಂದಿನ  ಮಹಾಜನ್ ಆದೇಶವನ್ನು ಇಬ್ಬರೂ ಸವರ್ಣೀಯರೇ ಇದ್ದ ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠವು ನೀಡಿದ್ದರೆ, ಈಗಿನ ಈ ಮಹಾಜನ್ ಪುನಾರವಲೋಕನ ಆದೇಶವನ್ನು ಒಬ್ಬ ದಲಿತ ನ್ಯಾಯಾಧೀಶರನ್ನು ಒಳಗೊಂಡಿದ್ದ ತ್ರಿಸದಸ್ಯ ಪೀಠವು ನೀಡಿದೆ.

ಆದರೆ ಈ ಮಹಾಜನ್ ಪುನಾರವಲೋಕನ ಆದೇಶವು ಎಷ್ಟೇ ಸ್ವಾಗತಾರ್ಹವಾಗಿದ್ದರೂ ಇವತ್ತಿನ ಸಂದರ್ಭದಲ್ಲಿಟ್ಟು ನೋಡಿದರೆ ಅದಕ್ಕೆ ಅಷ್ಟೊಂದು ಮಹತ್ವವಿಲ್ಲವೆಂಬುದೂ ಗೊತ್ತಾಗುತ್ತದೆ. ಮೊದಲನೆಯದಾಗಿ ಹಿಂದಿನ ಮಹಾಜನ್ ಆದೇವು ಹೊರಬಿದ್ದ ಕೆಲವು ತಿಂಗಳಲ್ಲೇ ಸಂಸತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ (ದೌರ್ಜನ್ಯ ಪ್ರತಿಬಂಧಕ) ಕಾಯಿದೆ- ೨೦೧೮ ಅನ್ನು ಜಾರಿಗೊಳಿಸಿ ಹಳೆಯ ಮಹಾಜನ್ ಆದೇಶವು ಜಾರಿಯಾಗದಂತೆ ತಡೆಗಟ್ಟಿತ್ತು. ಹೀಗಾಗಿ ಈ ಪುನಾರವಲೋಕನ ಆದೇಶವು ಕೇವಲ ಔಪಚಾರಿಕವಾಗಿದ್ದು ಸಂಸತ್ತು ತೆಗೆದುಕೊಂಡ ತೀರ್ಮಾನಕ್ಕೆ ನ್ಯಾಯಿಕ ಮುದ್ರೆಯನ್ನು ಮಾತ್ರ ಒತ್ತುತ್ತದೆ. ಎರಡನೆಯದಾಗಿ ವರಿಷ್ಟ ನ್ಯಾಯಾಲಯವು ಕೇಂದ್ರ ಸರ್ಕಾರದಿಂದ ಇರಿಸಿಕೊಳ್ಳಬೇಕಿದ್ದ ಸ್ವಾತಂತ್ರ್ಯವು ಹಿಂದೆದಿಂದಿಗಿಂತಲೂ ಈಗ ಕನಿಷ್ಟಮಟ್ಟದಲ್ಲಿದೆ. ಹೀಗಾಗಿ ವರಿಷ್ಟ ನ್ಯಾಯಾಲಯದ ಈ ಬದಲಾದ ಆದೇಶವು ಕೇಂದ್ರ ಸರ್ಕಾರ ಬಯಸಿದ್ದರಿಂದ ಸಾಧ್ಯವಾಯಿತೋ ಅಥವಾ ನಿಜಕ್ಕೂ ಸುಪ್ರೀಂ ಕೋರ್ಟಿನ ಮನಸ್ಸೇ ಬದಲಾಯಿತೋ ಎಂಬುದನ್ನು ಅಂದಾಜಿಸುವುದು ಕಷ್ಟ. ಬಹುಪಾಲು ಮಹತ್ವದ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ನೀತಿಗಳನ್ನೇ ಸುಪ್ರೀಂ ಕೋರ್ಟು ಅನುಮೋದಿಸುತ್ತಿರುವ ಸಂದರ್ಭದಲ್ಲಿ ಈ ಬದಲಾವಣೆಯು ಕೇಂದ್ರ ಸರ್ಕಾರದ ಬಯಕೆಯನ್ನು ಅನುಸರಿಸಿ ಸಂಭವಿಸಿರುವ ಸಾಧ್ಯತೆಯೇ ಹೆಚ್ಚು. ಕೊನೆಯದಾಗಿ, ಈ ಬದಲಾದ ಆದೇಶವನ್ನು ಕೊಟ್ಟ ತ್ರಿಸದಸ್ಯ ಪೀಠದಲ್ಲಿ ಸುಮಾರು ಹತ್ತು ವರ್ಷಗಳ ನಂತರ ಸುಪ್ರೀಂ ಕೋರ್ಟಿನ ಏಕೈಕ ದಲಿತ ನ್ಯಾಯುಧೀಶರಾಗಿರುವ ಬಿ.ಆರ್ ಗವಾಯಿಯವರು ಕೂಡಾ ಇದ್ದರೂ ಅವರು ಸ್ವತಂತ್ರವಾಗಿ ತಮ್ಮ ಅಭಿಪ್ರಾಯವನ್ನು ದಾಖಲಿಸಿಲ್ಲ. ಬದಲಿಗೆ ಬ್ರಾಹ್ಮಣ ನ್ಯಾಯಾಧೀಶರಾಗಿರುವ ಅರುಣ್ ಮಿಶ್ರಾ ಅವರು ಇಡೀ ಪೀಠದ ಪರವಾಗಿ ಆದೇಶ ನೀಡಿದರು. ಸುಪ್ರೀಂ ಕೋರ್ಟಿನಲ್ಲೂ ಸಹ ತಳಸಮುದಾಯದವರು ಮಾತನಾಡಲು ಆಗದೇ ಹೋಯಿತು.

ಸುಪ್ರೀಂ ಕೋರ್ಟು ಸರಿತಿದ್ದಿಕೊಂಡ ಪ್ರಕರಣಗಳಲ್ಲಿ ಮೊದಲು ಉಲ್ಲೇಖಿಸಿದ ಎರಡು ನ್ಯಾಯಾದೇಶಗಳಿಗಿಂತ ಈ ನ್ಯಾಯಾದೇಶವು ಭಿನ್ನವಾಗಿದೆ. ಮೊದಲೆರಡು ಸರಿಪಡಿಸಿಕೊಂಡ ಆದೇಶಗಳ ಮೂಲಕ ಸುಪ್ರೀಂ ಕೋರ್ಟು ಎಲ್ಲರ ಅಥವಾ ದಮನಿತ ಸಮುದಾಯಗಳ ಹಕ್ಕುಗಳನ್ನು ಮತ್ತಷ್ಟು ವಿಸ್ತರಣೆ ಮಾಡಿದರೆ, ಈ ಆದೇಶವು ಹೆಚ್ಚೆಂದರೆ ಈಗಾಗಲೇ ಇದ್ದ ಹಕ್ಕುಗಳು ಮತ್ತಷ್ಟು ಕುಸಿದು ಸಂಕುಚಿತಗೊಳ್ಳುವುದನ್ನು ತಡೆಗಟ್ಟಿದೆ. ಮತ್ತು ಅಂಥಾ ಪ್ರತಿಗಾಮಿ ಬೆಳವಣಿಗೆಗೆ ಸುಪ್ರೀಂ ಕೋರ್ಟೇ ಈ ಹಿಂದೆ ಕಾರಣವೂ ಆಗಿತ್ತು ಎಂಬುದನ್ನೂ ಸಹ ಮರೆಯುವಂತಿಲ್ಲ. ಈ ಮಹಾಜನ್ ಪುನಾರವಲೋಕನ ಆದೇಶದ ಬಗ್ಗೆ ಎಷ್ಟೇ ದೊಡ್ದದೊಡ್ಡ ಮಾತುಗಳನ್ನು ಆಡಲಾಗುತ್ತಿದ್ದರೂ ವಾಸ್ತವದಲ್ಲಿ ಈ ಆದೇಶ ತನ್ನ ಒಟ್ಟು ಪರಿಣಾಮದಲ್ಲಿ ಸ್ವಾತಂತ್ರ್ಯದ ಕ್ಷಿತಿಜಗಳನ್ನೇನೂ ವಿಸ್ತರಿಸುವುದಿಲ್ಲ. ಬದಲಿಗೆ ಉತ್ತರದಾಯಿಯಲ್ಲದ ಜಾತಿವಾದಿ ನ್ಯಾಯಾಂಗದ ಕೈಯಲ್ಲಿ ಸಿಕ್ಕು ದಲಿತರ ಮತ್ತು ಆದಿವಾಸಿ ಸಮುದಾಯಗಳ ಹಕ್ಕುಗಳು ಮತ್ತಷ್ಟು ಹರಣವಾಗುವುದನ್ನು ತಡೆದಿದೆಯಷ್ಟೆ.

ಹಾಗಿದ್ದಲ್ಲಿ ಸುಪ್ರೀಂ ಕೋರ್ಟು ತನ್ನ ಹಿಂದಿನ ಮಹಾಜನ್ ನ್ಯಾಯಾದೇಶದಲ್ಲಿ ಆಗಿರುವ ವೈಫಲ್ಯದ ಪ್ರಮಾಣವನ್ನು ಸಂಪೂರ್ಣವಾಗಿ ಅಂಗೀಕರಿಸಿದೆಯೇ? ನ್ಯಾಯಾಂಗವು ತನ್ನ ವೈಫಲ್ಯವನ್ನು ಎಷ್ಟರಮಟ್ಟಿಗೆ ಒಪ್ಪಿಕೊಂಡಿದೆಯೋ ಅಷ್ಟರಮಟ್ಟಿಗೆ ಅದು ಸ್ವಾಗತಾರ್ಹವಾದರೂ, ಮಹಾಜನ್ ಪುನಾರವಲೋಕನ ಆದೆಶವನ್ನು ಓದಿದರೆ ತನ್ನೆಲ್ಲಾ ವೈಫಲ್ಯಗಳನ್ನು ಅದು ಅಂಗೀಕರಿಸಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಮಹಾಜನ್ ಪುನಾರವಲೋಕನ ಆದೇಶ ಮತ್ತದರ ಪರಿಣಾಮಗಳಿಗಾಗಿ ಸುಪ್ರೀಂ ಕೋರ್ಟಿಗೆ ಅರ್ಧ ಅಭಿನಂದನೆಗಳನ್ನು ಮಾತ್ರ ತಿಳಿಸಬಹುದು.

Back to Top