ISSN (Print) - 0012-9976 | ISSN (Online) - 2349-8846

ದ್ವೇಷದ ರಾಜಕಾರಣ?

ಬಿಜೆಪಿ ಪಕ್ಷದ ಸದಸ್ಯರು ೨೦೧೯ರ ಚುನಾವಣೆಗಳ ಮೇಲಿನ ಹಿಡಿತವನ್ನು ಮಾತ್ರವಲ್ಲದೆ ತಮ್ಮ ನಾಲಿಗೆಯ ಮೇಲಿನ ಹಿಡಿತವನ್ನೂ ಕಳೆದುಕೊಳ್ಳುತ್ತಿದ್ದಾರೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕಿಯೊಬ್ಬರು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ಅಧ್ಯಕ್ಷೆಯಾದ ಮಾಯಾವತಿಯವರ ಬಗ್ಗೆ ಬಳಸಿದ ಅತ್ಯಂತ ಕೀಳು ಭಾಷೆಯು ಈವರೆಗೆ ರಾಜಕೀಯ ಉದ್ದೇಶಗಳಿಗಾಗಿ ಬಳಸಲಾಗುತ್ತಿದ್ದ ದ್ವೇಷಪೂರಿತ ಭಾಷಾಬಳಕೆಯ ಎಲ್ಲಾ ದಾಖಲೆಗಳನ್ನು ಮುರಿದುಹಾಕಿದೆ. ಆ ಜನಪ್ರತಿನಿಧಿಯು ಬಳಸಿದ ಭಾಷೆಯು ಅತ್ಯಂತ ಕೀಳುದರ್ಜೆಯದಾಗಿದ್ದು ಸಾರ್ವಜನಿಕವಾಗಿ ಅತ್ಯಂತ ಹಾನಿಕಾರಕ ಮೌಲ್ಯಗಳನ್ನು ಹೊಂದಿದೆ. ಏಕೆಂದರೆ ಅದು ಒಬ್ಬ ಮಹಿಳೆ, ಪುರುಷ ಮತ್ತು ಮೂರನೇ ಲಿಂಗಕ್ಕೆ ಸೇರಿದ ವ್ಯಕ್ತಿಯನ್ನು ಹೀನಾಯಗೊಳಿಸಿ ಆಡಿದ ಮಾತಾಗಿದೆ. ಆ ಶಾಸಕಿ ಮತ್ತು ಅವರ ಪಕ್ಷದ ನಾಯಕರು ಆ ಪದಬಳಕೆಯ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿ ಬಿಎಸ್‌ಪಿ ಅಧ್ಯಕ್ಷೆಯ ಕ್ಷಮೆ ಕೋರಿದ್ದಾರೆ. ಆದರೆ ಅದು ಕೇವಲ ಔಪಚಾರಿಕ ನಡೆಯೇ ವಿನಃ ನೈಜವಾದ ವಿಷಾದದಿಂದ ಹುಟ್ಟಿಬಂದಿರುವ ನಡೆಯಲ್ಲ. ಆದರೆ ನೈತಿಕ ಹಲ್ಲೆಕೋರರ ಇಂಥಾ ಯೋಜಿತ ಲೆಕ್ಕಾಚಾರದಿಂದ ಕೂಡಿದ ತಪ್ಪೊಪ್ಪಿಗೆಗಳು ಬಿಎಸ್‌ಪಿ ಅಧ್ಯಕ್ಷೆಯನ್ನೂ ಒಳಗೊಂಡಂತೆ ಯಾವುದೇ ಘನತೆಯುಳ್ಳ ವ್ಯಕ್ತಿಗೆ ಮಾಡುವ ಹಾನಿಯನ್ನು ಎಂದಿಗೂ ಸರಿಪಡಿಸುವಷ್ಟಿರುವುದಿಲ್ಲ. ಸಾರ್ವಜನಿಕವಾಗಿ ನಿಂದನಾತ್ಮಕ ಭಾಷೆಯನ್ನು ಬಳಸುವುದು ದೀರ್ಘಕಾಲದ ಪರಿಣಾಮವನ್ನುಂಟು ಮಾಡುತ್ತದೆ. ಸಾರ್ವಜನಿಕವಾಗಿ ಮಾಡಿದ ನಿಂದನೆಯು ಆ ನಂತರದಲ್ಲಿ ಸಹ ಸಮಾಜ ವಿರೋಧಿ ಗುಲ್ಲು ಮಾತಿನ (ಗಾಸಿಪ್) ಸ್ವರೂಪದಲ್ಲಿ ಬಹಳ ಕಾಲ ಉಳಿದುಕೊಂಡು ಬಿಡುತ್ತದೆ. ಆ ಗಾಸಿಪ್ಪಿಗೆ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಜಾತಿ ಮತ್ತು ಪಿತೃಸ್ವಾಮ್ಯ ಪೂರ್ವಗ್ರಹಗಳು ಮತ್ತಷ್ಟು ಹೂರಣವನ್ನು ಒದಗಿಸುತ್ತವೆ. ಮೇಲಾಗಿ ಅಂಥಾ ಯೋಜಿತ ವಿಷಾದ ಮತ್ತು ತಪ್ಪೊಪ್ಪಿಗೆಗಳು ಜಾತಿ ಮತ್ತು ಪಿತೃಸ್ವಾಮ್ಯ ಪೂರ್ವಗ್ರಹಗಳಲ್ಲಿ ಬೇರುಬಿಟ್ಟಿರುವ ಆಳವಾದ ದ್ವೇಷಭಾವನೆಗಳನ್ನು ಸಂಪೂರ್ಣವಾಗಿ ಅಳಿಸುವ ಬದಲು ಕೇವಲ ಮೇಲ್ತೋರಿಕೆಯ ಟೀಕೆಯ ಮಟ್ಟದಲ್ಲಿ ಮಾತ್ರ ಉಳಿದುಬಿಡುವುದರಿಂದ ಹೆಚ್ಚಿನ ಪ್ರಯೋಜನವೇನೂ ಆಗುವುದಿಲ್ಲ. ಹೀಗಾಗಿ ನಾವು ಕೇಳಬೇಕಿರುವ ಪ್ರಶ್ನೆಗಳೇನೆಂದರೆ: ಒಬ್ಬ ವ್ಯಕ್ತಿಯ ವಿರುದ್ಧ ಹುಟ್ಟುವ ಇಂಥಾ ದ್ವೇಷಕ್ಕೆ ಕಾರಣವೇನು? ಆ ದ್ವೇಷದ ಸ್ವರೂಪವೇನು? ಮತ್ತು ಅಂಥಾ ದ್ವೇಷವನ್ನು ಸಾಕಿಕೊಂಡಿರುವ ವ್ಯಕ್ತಿಯ ನೈತಿಕತೆಯ ಮೇಲೆ ಇದು ಎಂಥಾ ಪ್ರಭಾವವನ್ನು ಬೀರುತ್ತದೆ?

ಇಂಥಾ ಕೀಳು ನಿಂದನೆಯ ಮೂಲಕ ವ್ಯಕ್ತವಾಗಿರುವ ದ್ವೇಷಕ್ಕೆ ಒಂದು ಸಂದರ್ಭವಿದೆ. ಬಿಜೆಪಿಯ ಶಾಸಕಿಯು ಬಳಸಿದ ಕೀಳು ಭಾಷೆಯನ್ನು ಉತ್ತರಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿಗಳು ಮಾಡಿಕೊಂಡಿರುವ ಚುನಾವಣಾ ಮೈತ್ರಿಯು ಒಡ್ಡಿರುವ ರಾಜಕೀಯ ಸವಾಲನ್ನು ಬಿಜೆಪಿಯ ಸದಸ್ಯರು ನಿಜಕ್ಕೂ ಅಪಾಯಕಾರಿ ಎಂದು ಪರಿಗಣಿಸಿರುವ ಸಂದರ್ಭದಲ್ಲಿಟ್ಟು ಅರ್ಥಮಾಡಿಕೊಳ್ಳಬೇಕು. ವಿಪರ್ಯಾಸವೆಂದರೆ ಬಿಜೆಪಿ ಸದಸ್ಯರು ಹೊರಗಡೆ ಏನೇ ಹೇಳಿದರೂ, ಅವರು ಬಳಸಿರುವ ಕೀಳು ಭಾಷೆಯು ಈ ಮೈತ್ರಿಯನ್ನು ಬಿಜೆಪಿಯು ನಿಜಕ್ಕೂ ಅಪಾಯಕಾರಿ ಸವಾಲೆಂದು ಪರಿಗಣಿಸಿದೆ ಎಂಬುದನ್ನೇ ಸೂಚಿಸುತ್ತದೆ. ಕುತೂಹಲಕಾರಿ ಸಂಗತಿಯೆಂದರೆ ಮೈತ್ರಿ ಪಕ್ಷಗಳಲ್ಲಿ ಬಿಎಸ್ಪಿಯ ಮುಖ್ಯಸ್ಥೆಯನ್ನೇ ತಮ್ಮ ದಾಳಿಗೆ ಗುರಿಮಾಡಿಕೊಂಡಿರುವುದೂ ಸಹ ಅವರಿಗಿರುವ ಭಯವನ್ನು ಇನ್ನಷ್ಟು ರುಜುವಾತು ಮಾಡುತ್ತದೆ. ಬೇರೆ ಎಲ್ಲಾ ವಿರೋಧ ಪಕ್ಷಗಳಿಗಿಂತ ಬಿಎಸ್‌ಪಿ ಯ ಅಧ್ಯಕ್ಷೆಯೇ ಮೇಲೆಯೇ ಅತಿ ಹೆಚ್ಚು ನಿಂದನೆಗಳನ್ನು ಮಾಡಲಾಗುತ್ತಿದೆ. ಮಾಯಾವತಿಯವರಿಗೆ ನೀಡಲಾಗುತ್ತಿರುವ ಈ ವಿಶೇಷ ಪರಿಗಣನೆಗೆ ಎರಡು ಕಾರಣಗಳಿವೆ. ಮೊದಲನೆಯದಾಗಿ ಆಳುವ ಪಕ್ಷದಿಂದ ಎಷ್ಟೇ ದಾಳಿಗಳಿಗೆ ಒಳಗಾಗಿದ್ದರೂ ಅದಕ್ಕೆ ಬಲಿಯಾಗz  ಬಿಎಸ್‌ಪಿ ಮುಖ್ಯಸ್ಥೆಯು ಮೈತ್ರಿ ರಚನೆಗೆ ಧೃಢವಾಗಿ ಮುಂದಾದದ್ದು. ಎರಡನೆಯದಾಗಿ ಕೆಳಜಾತಿಗೆ ಸೇರಿದ ವ್ಯಕ್ತಿ, ಅದರಲ್ಲೂ ಒಬ್ಬ ಮಹಿಳೆಯು ಇಂಥಾ ಸವಾಲನ್ನು ಒಡ್ಡಿರುವುದು ಬಿಜೆಪಿಯ ಆ ಶಾಸಕರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿಯೇ ಅವರು ಬಳಸಿದ ಭಾಷೆಯ ಸಾರದಲ್ಲಿರುವುದು ಅಂಥಾ ಮಹಿಳೆಯ ಬಗ್ಗೆ ಇರುವ ಭೀತಿಯೇ ಆಗಿದೆ. 

ಒಬ್ಬ ಮಹಿಳೆಯ ಘನತೆಯನ್ನು ಹಾಳು ಮಾಡಲು ಆಕ್ರಮಣಕಾರಿ ನಿಂದನೆಯನ್ನು ಬಳಸುವುದನ್ನು ಪಿತೃಸ್ವಾಮ್ಯ ವ್ಯವಸ್ಥೆ ಒದಗಿಸಿರುವ ಸಹಜ ಹಕ್ಕು ಮತ್ತು ಸೌಕರ್ಯ ಎಂದಾಗಿಬಿಟ್ಟಿದೆ. ಆದರೆ ಒಬ್ಬ ಮಹಿಳೆಯೇ ಮತ್ತೊಬ್ಬ ಮಹಿಳೆಯ ಬಗ್ಗೆ ಅಂಥಾ ಭಾಷೆಯನ್ನು ಬಳಸುವಾಗ ಅಲ್ಲಿನ  ದ್ವೇಷ ಭಾಷೆಯ ಮೂಲವುಕೇವಲ ಪಿತೃಸ್ವಾಮ್ಯ ವ್ಯವಸ್ಥೆಂi ಪ್ರಭಾವ ಮಾತ್ರವಾಗಿರುವುದಿಲ್ಲ. ಬದಲಿಗೆ ಅದಕ್ಕೆ ಕಾರಣ ಮೂಲಭೂತವಾಗಿ ಜಾತಿ ಪೂರ್ವಗ್ರಹವೇ ಆಗಿರುತ್ತದೆ.  ಇಲ್ಲಿ ಪೌರುಷತೆಯ ತದ್ವಿರುದ್ಧ ಬಳಕೆಯಾಗುವುದು ಲಿಂಗತ್ವದ ಕಾರಣದಿಂದಲ್ಲ. ಬದಲಿಗೆ ಜಾತಿಯೇ ಅಂಥಾ ದ್ವೇಷಪೂರಿತ ಭಾಷೆಯ ರಾಜಕೀಯವನ್ನು ನಿರ್ಧರಿಸುತ್ತಿರುತ್ತದೆ.

ಬಿಜೆಪಿ ಶಾಸಕಿಯ ಆ ದ್ವೇಷಪೂರಿತ ನಿಂದನೆಗಳು ಇನ್ನು ಕೆಲವು ದೊಡ್ಡ ಪ್ರಶ್ನೆಗಳನ್ನು ನಮ್ಮ ಮುಂದಿರಿಸುತ್ತವೆ. ಆ ಮಹಿಳೆಯು ಪಿತೃಸ್ವಾಮ್ಯ ಪ್ರೇರಿತ ಭಾಷೆಯನ್ನು ಸ್ವೀಕಾರಾತ್ಮಕವಾಗಿಯೇ ಪರಿಗಣಿಸಿರುವುದು ತಾನು ಕೂಡ ಅಂಥ ಪೌರುಷೇಯ ಭಾಷೆಯ ಬಲಿಪಶು ಎಂಬ್ ತನ್ನ ಸ್ಥಿತಿಯ ವಾಸ್ತವಿಕತೆಯ ಬಗ್ಗೆ ಅರಿವಿಲ್ಲದಿರುವುದನ್ನು ಸೂಚಿಸುತ್ತದೆ. ಸಾರ್ವಜನಿಕವಾಗಿ ಅಂಥಾ ಭಾಷಾ ಬಳಕೆಯ ಬಗ್ಗೆ ದೊರಕುವ ಮೆಚ್ಚುಗೆ ಮತ್ತು ಸಮ್ಮತಿಯೂ ಆಕೆಯನ್ನು ಇನ್ನಷ್ಟು ಗೊಂದಲಕ್ಕೆ ಕೆಡವುದಲ್ಲದೆ ತಾನೂ ಬಲಿಯಾಗಿರುವ ಪಿತೃಸ್ವಾಮ್ಯ ವ್ಯವಸ್ಥೆಯ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳದಂತೆ ಮಾಡುತ್ತದೆ. ಒಬ್ಬ ವ್ಯಕ್ತಿಯು ಇಂಥಾ ಭಾಷಾ ಪ್ರಯೋಗ ಮಾಡುವುದಕ್ಕೆ ಅನುವು ಮಾಡಿಕೊಡುವ ಪಕ್ಷವೊಂದರ ರಾಜಕೀಯವು ಇಂಥಾ ಭಾಷೆಗಳನ್ನು ಪುನರುತ್ಪಾದನೆ ಮಾಡುವ ಮೂಲಕ ಪುರುಷರು, ಮಹಿಳೆಯರು ಮತ್ತು  ಮೂರನೇ ಲಿಂಗಿಗಳ ವ್ಯಕ್ತಿಗಳು ಸಮಾನ ಘನತೆಯ ಹಕ್ಕುಗಳನ್ನು ಹೊಂದುವ ಹಕ್ಕನ್ನು ನಿರಾಕರಿಸುತ್ತಿದೆಯೆಂಬ ಅರಿವು ಮೂಡದಂತೆ ಮಾಡುತ್ತದೆ. 

ಇಂದಿನ ಸಂದರ್ಭದಲ್ಲಿ ರೂಪುಗೊಂಡಿರುವ ರಾಜಕೀಯ ಹೊಂದಾಣಿಕೆಗಳ ಬಗ್ಗೆ ರಾಜಕೀಯ ವ್ಯಕ್ತಿಗಳು ಉತ್ತರಪ್ರದೇಶದ ಮಟ್ಟದಲ್ಲಿ ಮತ್ತು ದೇಶದ ಮಟ್ಟದಲ್ಲಿ ವಿಶ್ಲೇಷಣೆ ಮಾಡುವುದು ಅಪೇಕ್ಷಣೀಯವೇ. ಆದರೆ ಅಂಥ ವಿಮರ್ಶೆಗಳು ತಮ್ಮ ವಿರೋಧಿ ವಲಯದಲ್ಲಿರುವ ವಿವಿಧ ಸಾಮಾಜಿಕ ಗುಂಪುಗಳು ಮತ್ತು ಪಕ್ಷಗಳ ಬಗ್ಗೆ ಪರಸ್ಪರ ಗೌರವವನ್ನಿಟ್ಟುಕೊಳ್ಳುವಂಥ ಪ್ರಜಾತಂತ್ರಿಕ ನೈತಿಕತೆಯು ಮಿತಿಯೊಳಗಿರಬೇಕು. ಅಂಥಾ ವಿಮರ್ಶೆಗಳು ಮುಂದಿಡುವ ವಾದಗಳಲ್ಲಿ ಪರಸ್ಪರರ ಬಗೆಗಿನ ಗೌರವವನ್ನು ಕಾದುಕೊಳ್ಳುವಂಥ ಕನಿಷ್ಟ ನೈತಿಕ ಚೈತನ್ಯವಿರಬೇಕು. ಕೆಲವು ವಾದ-ಪ್ರತಿವಾದಗಳು ಸ್ಥಾಪಿತವಾದ ಮಾನದಂಡಗಳಲ್ಲಿ ಎಷ್ಟೇ ದುರ್ಬಲ ಮತ್ತು ಅಸಮರ್ಥ ಎನಿಸಿಕೊಂಡರೂ ಇಡೀ ಸನ್ನಿವೇಶವೇ ಆಕ್ರಮಣಕಾರಿ ರಾಜಕೀಯ ಭಾಷಣಗಳಿಂದ ಉಸಿರುಗಟ್ಟಿಸದಂತೆ ಮಾಡುತ್ತವೆ. ಎಷ್ಟೇ ಆದರೂ ಪ್ರಜಾತಂತ್ರವು ವಾಗ್ವಾದಗಳಿಗೆ ಅವಕಾಶ  ಮಾಡಿಕೊಡುವ ಮೂಲಕ ಒಂದು ಮೌಲಿಕ ವಾಗ್ವಾದದ ಬುನಾದಿಯನ್ನೇ ಭ್ರಷ್ಟಗೊಳಿಸುವ ಪೂರ್ವಗ್ರಹಗಳಿಂದ ಹೊರಬರಲು ಸಹಾಯ ಮಾಡುತ್ತದೆ. ಒಂದು ಪ್ರಜಾತಾಂತ್ರಿಕ ರಾಜಕೀಯದ ಸಾರಭೂತ ಅಂಶಗಳಾದ ಸಜ್ಜನಿಕೆ, ಪರಸ್ಪರ ಗೌರವ ಮತ್ತು ಘನತೆಗಳನ್ನು ತನ್ನೊಳಗಿಟ್ಟುಕೊಂಡಿರುವ ಪ್ರಜಾತಾಂತ್ರಿಕ ನೇಯ್ಗೆಗೆ ದುರ್ಬಲ ಅಥವಾ ಅಪರಿಪೂರ್ಣ ವಾದಗಳು ಈ ಕೂಡಲೇ ಅಷ್ಟು ಹಾನಿಯನ್ನೇನೂ ಮಾಡುವುದಿಲ್ಲ. ಆದರೆ ಯಾವುದೇ ಅರ್ಥಪೂರ್ಣ ವಾಗ್ವಾದಗಳಿಗೆ ಮುಂದಾಗದೆ ನಿರಂತರವಾಗಿ ಅಧಿಕಾರವನ್ನು ವಶಪಡಿಸಿಕೊಂಡಿರಬೇಕೆಂಬ ಆಕಾಂಕ್ಷೆಯು ಅನಿವಾರ್ಯವಾಗಿ ಕೀಳು ಭಾಷಾ ಬಳಕೆಗಳ ಮೇಲಾಟಕ್ಕೆ ದಾರಿ ಮಾಡಿಕೊಡುತ್ತವೆ. ಹೀಗಾಗಿ ರಾಜಕಾರಣದಲ್ಲಿ ಒಂದು ನೈಜ ವಾಗ್ವಾದದ ಸಂಸ್ಕೃತಿಗೆ ಅವಕಾಶ ಕಲ್ಪಿಸಿಕೊಡುವ ಮೂಲಕ ಪ್ರಜಾತಂತ್ರದ ಘನತೆಯನ್ನು ಉಳಿಬೇಕಾದ ಜವಾಬ್ದಾರಿ ಒಂದು ಬಲಿಷ್ಟ ಪ್ರಜಾತಂತ್ರದ ಭಾಗವಾಗಿರುವ ನಮ್ಮ ಮೇಲಿದೆಯಲ್ಲವೇ?

 

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top