ISSN (Print) - 0012-9976 | ISSN (Online) - 2349-8846

ಕುಸಿಯುತ್ತಿರುವ ನ್ಯಾಯಾಂಗದ ವಿಶ್ವಾಸಾರ್ಹತೆ

ನ್ಯಾಯಾಂಗವು ತಾನೇ ಹಾಕಿಕೊಂಡ ಕಟ್ಟುಕಟ್ಟಳೆಗಳನ್ನು ಅನುಸರಿಸದ ಮತ್ತು ಉತ್ತರದಾಯಿತ್ವವನ್ನು ಪಾಲಿಸದ ಸಾಂಸ್ಥಿಕ  ಸಮಸ್ಯೆಗಳಿಂದ ಹೊರಬರಲು ಅಸಮರ್ಥವಾಗಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಸುಪ್ರೀಂ ಕೋರ್ಟಿನ ಮಟ್ಟಿಗೆ ಕೋಲಾಹಲದಿಂದ ಕೂಡಿದ ಮತ್ತೊಂದು ವರ್ಷ ಹಾಗೂ ಮತ್ತೊಂದು ಜನವರಿ ತಿಂಗಳು ಪ್ರಾರಂಭವಾಗಿದೆ. ೨೦೧೮ರಲ್ಲಿ ಹೊಸವರ್ಷದ ಪ್ರಾರಂಭವು ಸುಪ್ರೀಂ ಕೋರ್ಟಿನ ಆಗಿನ ಮುಖ್ಯ ನ್ಯಾಯಮೂರ್ತಿಯವರ ವಿರುದ್ಧ ನಂತರದ ನಾಲು ಹಿರಿಯ ನ್ಯಾಯಮೂರ್ತಿಗಳು ಹೂಡಿದ ಬಂಡಾಯವೆನ್ನಬಹುದಾದ ಪ್ರತಿಭಟನೆಗೆ ಸಾಕ್ಷಿಯಾದರೆ, ಪ್ರತಿಭಟಿಸಿದ್ದ ಆ ನಾಲ್ವರಲ್ಲಿ ಒಬ್ಬರಾಗಿದ್ದ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರೇ ಈಗ ಮುಖ್ಯ ನ್ಯಾಯಾಧೀಶರಾಗಿದ್ದು ೨೦೧೯ರ ಪ್ರಾರಂಭದಲ್ಲಿ ಅವರೂ ಸಹ ಸಾಕಷ್ಟು ವಿವಾದಗಳಿಗೆ ಕಾರಣರಾಗಿದ್ದಾರೆ. ಇತ್ತೀಚಿನ ಮೂರು ವಿವಾದಗಳು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ಪ್ರತಿಷ್ಟೆ ಹಾಗು ವಿಶ್ವಾರ್ಹತೆಗಳಿಗೆ ಹಾನಿ ಮಾಡಿರುವುದು ಮಾತ್ರವಲ್ಲದೆ ನ್ಯಾಯಾಂಗದ ಸಾಂಸ್ಥಿಕ ಘನತೆಗೂ ಧಕ್ಕೆ ತಂದಿದೆ.

ಮೊದಲನೆಯ ವಿವಾದವು ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಅವರನ್ನು ವಜಾ ಮಾಡಿದ ಉನ್ನತ ಮಟ್ಟದ ಸಮಿತಿಯ ತೀರ್ಮಾನದಲ್ಲಿ ನ್ಯಾಯಮೂರ್ತಿ ಎ.ಕೆ. ಸಿಕ್ರಿಯವರ ಭಾಗವಹಿಸುವಂತೆ ಮಾಡಿದ್ದು. ಮೂವರು ಜನರ ಈ ಉನ್ನತ ಸಮಿತಿಯಲ್ಲಿ ಸರ್ಕಾರವನ್ನು ಪ್ರಧಾನ ಮಂತ್ರಿಗಳು ಪ್ರತಿನಿಧಿಸಿದ್ದರು. ಮೂರರಲ್ಲಿ ಎರಡು ಅಭಿಪ್ರಾಯದ ಬಹುಮತದಲ್ಲಿ ತೆಗೆದುಕೊಂಡ ಆ ತೀರ್ಮಾನದಲ್ಲಿ  ನ್ಯಾಯಮೂರ್ತಿ ಸಿಕ್ರಿಯವರು ತಮ್ಮ ಮತವನ್ನು ಸರ್ಕಾರದ  ಪರವಾಗಿ ಹಾಕಿದ್ದರು. ನ್ಯಾಯಮೂರ್ತಿ ಸಿಕ್ರಿಯವರ  ತೀರ್ಮಾನವು ಅವರನ್ನು ಕಾಮನ್‌ವೆಲ್ತ್ ಸೆಕ್ರೇಟ್ರಿಯೇಟ್ ಆರ್ಬಿಟರಿ ಟ್ರಿಬ್ಯುನಲ್‌ಗೆ ನಾಮಕರಣ ಮಾಡುವ ಸರ್ಕಾರದ ಪ್ರಸ್ತಾಪದಿಂದ ಯಾವುದೇ ರೀತಿಯಲ್ಲಿ ಪ್ರಭಾವಿತವಾಗಿರಲಿಲ್ಲ ಎಂದೇ ಭಾವಿಸಿಸಿದರೂ, ನ್ಯಾಯಾಂಗವು ಪದೇ ಪದೇ ಹೇಳುವ ನ್ಯಾಯವನ್ನು ನೀಡುವುದು ಮಾತ್ರವಲ್ಲದೆ ಅದು ಸ್ಪಷ್ಟವಾಗಿ ಕಾಣುವಂತೆಯೂ ಇರಬೇಕು ಎಂಬ ತತ್ವಕ್ಕೆ ಮೇಲಿನ ನಡೆಯು ತದ್ವಿರುದ್ಧವಾಗಿದೆ. ಈ ಉನ್ನತಾಧಿಕಾರದ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಯನ್ನು ಅಥವಾ ಅವರ ಪ್ರತಿನಿಧಿಯನ್ನು ಒಳಗೊಳ್ಳುವ ತೀರ್ಮಾನದ ಹಿಂದಿದ್ದ  ತಿಳವಳಿಕೆಯೇ ಆಯ್ಕೆ ಪ್ರಕ್ರಿಯೆಯಲ್ಲಿ ಒಂದಷ್ಟು ಮಟ್ಟದ ತಟಸ್ಥತೆ ಮತ್ತು ನಿಷ್ಪಕ್ಷಪಾತಿತನವನ್ನು ತರುವುದಾಗಿತ್ತು. ಆದರೆ ಈ ಪ್ರಕರಣದಲ್ಲಿ ಸಬಂಧಪಟ್ಟ ನ್ಯಾಯಮೂರ್ತಿಗಳ ತಟಸ್ಥತೆ ಮತ್ತು ನಿಷ್ಪಕ್ಷಪಾತಿತನದ ಬಗ್ಗೆ ಒಂದಷ್ಟು ಅನುಮಾನಗಳನ್ನು ಉಳಿದುಕೊಳ್ಳುವಂತೆ ಮಾಡಿದ ಗೊಗೋಯ್ ಅವರ ತೀರ್ಮಾನವು ನ್ಯಾಯಾಂಗದ ವಿಶ್ವಾಸಾರ್ಹತೆಗೆ ಗಂಭೀರವಾದ ಹಾನಿಯನ್ನುಂಟುಮಾಡಿದೆ.

ಇದಾದ ತರುಣದಲ್ಲೇ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಮತ್ತು ಪ್ರದೀಪ್ ನಂದ್ರಜೋಗ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ ಪದೋನ್ನತಿ ಮಾಡುವ ತೀರ್ಮಾನವನ್ನು ಪುನರಾವಲೋಕನ ಮಾಡುವ ಮತ್ತೊಂದು ವಿವಾದಾಸ್ಪದವಾದ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.ಇದು ಹಾಲೀ ನ್ಯಾಯಾಂಗ ವ್ಯವಸ್ಥೆಯನ್ನು ಅತಿನಿಷ್ಟೆಯಿಂದ ಬೆಂಬಲಿಸುತ್ತಾ ಬಂದವರೂ ಸಹ ಈ ತೀರ್ಮಾನವನ್ನು ಸಮರ್ಥಿಸಿಕೊಳ್ಳಲು ಹಿಂದೆಮುಂದೆ ನೋಡುವಂತೆ ಮಾಡಿತು. ಆ ನ್ಯಾಯಾಧೀಶರುಗಳ ಬದಲಿಗೆ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ದಿನೇಶ್ ಮಾಹೇಶ್ವರಿಯವರನ್ನು ಯಾವ ವಿಶೇಷ ಕಾರಣಗಳಿಗಾಗಿ ಆಯ್ಕೆ ಮಾಡಲಾಯಿತೆಂಬ ಯಾವ ವಿವರಗಳು ಆ ತೀರ್ಮಾನದಲ್ಲಿ ಸಿಗುವುದಿಲ್ಲ. ನ್ಯಾಯಾಧೀಶರನ್ನು ಆಯ್ಕೆ ಮಾಡುವ ಸುಪ್ರೀಂ ಕೋರ್ಟಿನ ಅತ್ಯಂತ ಹಿರಿಯ ನ್ಯಾಯಾಧೀಶರುಗಳನ್ನುಳ್ಳ ಕೊಲೆಜಿಯಂ ಅನ್ನು ಹೊಸದಾಗಿ ರಚಿಸಲಾಗಿದ್ದರಿಂದ ಹೊಸ ಸಮಾಲೋಚನೆಯ ಆಧಾರದಲ್ಲಿ ಈ ಹೊಸ ತೀರ್ಮಾನಕ್ಕೆ ಬರಲಾಯಿತೆಂಬ ವಾದದಲ್ಲೂ ಹೆಚ್ಚಿನ ಹುರುಳಿಲ್ಲ. ಇದು ಹಲವಾರು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದ್ದು ತಾನು ಮಾಡಿದ್ದ ತೀರ್ಮಾನವನ್ನೂ ಕೊಲೆಜಿಯಂ ಕೇವಲ ಒಂದು ತಿಂಗಳಿನಲ್ಲಿ ತಾನೇ ಏಕೆ ಬದಲಾಯಿಸಿತು ಎಂಬುದು ಯಾರಿಗೂ ಅರಿವಿಗೂ ನಿಲುಕುತ್ತಿಲ್ಲ.

ಈ ತೀರ್ಮಾನದ ಹಿಂದಿರುವ ಕೊಲೆಜಿಯಂನ ಪ್ರತಿಯೊಂದು ವೈಫಲ್ಯವೂ ಬಯಲಾಗಿದೆ. ಖನ್ನಾ ಮತ್ತು ಮಾಹೇಶ್ವರಿಯವರಿಗೇ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾಗಿ ಏಕೆ ಪದೋನ್ನತಿ ಕೊಡಲಾಯಿತು ಎಂಬುದಕ್ಕೆ ಅವರು ಅರ್ಹರಾಗಿದ್ದರು ಎಂಬ ಭೋಳೇ ಹೇಳಿಕೆಯನ್ನು ಬಿಟ್ಟರೆ ಬೇರೆ ಯಾವುದೇ ಸಮರ್ಥನೆಗಳನ್ನು ನೀಡಲಾಗುತ್ತಿಲ್ಲ. ಮೆನನ್ ಮತ್ತು ನಂದ್ರಜೋಗ್ ಅವರನ್ನು ಪರಿಗಣಿಸದೇ ಇದ್ದಕ್ಕೆ ಯಾವ ಕಾರಣಗಳನ್ನೂ ನೀಡಲಾಗುತ್ತಿಲ್ಲ. ಈ ಹಿಂದೆ ಮೆನನ್ ಮತ್ತು ನಂದ್ರಜೋಗ್ ಅವರ ಪದೋನ್ನತಿಯ ಬಗ್ಗೆ ತೆಗೆದುಕೊಂಡಿದ್ದ ತೀರ್ಮಾನವನ್ನು ಕೂಡಾ ನ್ಯಾಯಾಲಯದ ವೆಬ್‌ಸೈಟಿನಲ್ಲಿ ಅಪ್‌ಲೋಡ್ ಮಾಡಿಲ್ಲ. ತಮ್ಮ ಹಳೆಯ ತೀರ್ಮಾನವನ್ನು ಮರುಪರಿಶೀಲನೆ ಮಾಡಬೇಕಾಗಿ ಬಂದ ಯಾವುದೇ ನಿರ್ದಿಷ್ಟ ಮತ್ತು ಹೊಸ ಮಾಹಿತಿಗಳನ್ನು ಎಲ್ಲಿಯೂ ಕಾಣಿಸಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟಿನ ಹಾಲಿ ನ್ಯಾಯಮೂರ್ತಿಯವರನ್ನೂ ಒಳಗೊಂಡಂತೆ ಹಲವಾರು ನಿವೃತ್ತ ನ್ಯಾಯಮೂರ್ತಿಗಳು ಮತ್ತು ಹಿರಿಯ ವಕೀಲರು ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಆದರೂ ಈವರೆಗೆ ಮುಖ್ಯ ನ್ಯಾಯಮೂರ್ತಿಗಳು ವಿಷಯದ ಕುರಿತು ತುಟಿಬಿಚ್ಚಿಲ್ಲ.

ಈ ಎಲ್ಲಾ ಪ್ರಕ್ರಿಯೆಗಳು ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯು ವಸ್ತುನಿಷ್ಟತೆಗಿಂತ ಹೆಚ್ಚು ಮನೋನಿಷ್ಟೆತೆಯಿಂದಲೂ, ಅಪಾರದರ್ಶಕತೆಯಿಂದಲೂ, ಉತ್ತರದಾಯಿತ್ವದ ಗೈರಿಂದಲೂ ಕೂಡಿದೆಯೆಂಬುದನ್ನು ಮತ್ತೊಮ್ಮೆ ಸಾಬೀತುಮಾಡಿದೆ. ಸಂದರ್ಭದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿದ್ದರೂ, ೨೦೧೮ರ ಜನವರಿ ೧ರಂದು ಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನ್ಯಾಯಾಧೀಶರು ಅಂದಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರಾ ಅವರ ಮೇಲೆ ಅಕ್ಷರಶಃ ಇದೇ ಬಗೆಯ ಆರೋಪಗಳನ್ನು ಮಾಡಿದ್ದರು.

೨೦೧೯ರ ಜನವರಿಯಲ್ಲಿ ಕೊಲೆಜಿಯಂ ಅನ್ನು ಆವರಿಸಿಕೊಂಡಿರುವ ವಿವಾದವು ಖನ್ನಾ ಮತ್ತು ಮಹೇಶ್ವರಿಯವರ ಪದೋನ್ನತಿಗೆ ಮತ್ತು ನ್ಯಾಯಾಧೀಶರ ನೇಮಕಾತಿಗೆ ಸಂಬಂಧಪಟ್ಟ ಪ್ರಕ್ರಿಯೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಈ ವಿವಾದಾತ್ಮಕ ಪದೋನ್ನತಿಗಳನ್ನು ಮಾಡಿದ ಒಂದೇ ವಾರದಲ್ಲಿ ಹಲವಾರು ನ್ಯಾಯಾಧೀಶರುಗಳನ್ನು ವಿವಿಧ ಹೈಕೋರ್ಟುಗಳಿಗೆ ಪದೋನ್ನತಿ ಮಾಡಿದ್ದೂ ಕೂಡಾ ಕೊಲೆಜಿಯಂನ ಸ್ವಾತಂತ್ರ್ಯದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಬಹುಪಾಲು ತೀರ್ಮಾನಗಳು ಕಾನೂನು ಸಚಿವಾಲಯವು ಪರುಪರಿಶೀಲನೆ ಮಾಡಬೇಕೆಂದು ಕೊಲೆಜಿಯಂಗೆ ಮಾಡಿಕೊಂಡಿದ್ದ ಮನವಿಗೆ ಪೂರಕವಾಗಿಯೇ ಇವೆ. ಆದರೆ ಕೊಲೆಜಿಯಂ ಮಾತ್ರ ತಾನೇ ರೂಪಿಸಿರುವ ಯಾವುದೇ ಪ್ರಕ್ರಿಯೆಗಳನ್ನು ಮತ್ತು ವಿಧಿವಿಧಾನಗಳನ್ನು ಈ ವಿಷಯದಲ್ಲಿ ಅನುಸರಿಸಲಿಲ್ಲ್. ಹಾಗೂ ತಮ್ಮ ಮುಂದಿದ್ದ ಹೆಸರುಗಳನ್ನು ಕೈಬಿಡಲು ಯಾವುದೇ ಬಲವಾದ ಕಾರಣಗಳನ್ನು ಕೂಡಾ ನೀಡಲಿಲ್ಲ. ಬದಲಿಗೆ  ಕೇಂದ್ರ ಸಚಿವಾಲಯವು ಕೊಟ್ಟ ಕಾರಣಗಳನ್ನು ಮಾತ್ರ ಚಾಚೂ ತಪ್ಪದಂತೆ ಅಂಗೀಕರಿಸಿ ಪ್ರಸ್ತಾಪದಲ್ಲಿದ್ದ ೧೧ ನ್ಯಾಯಾಧೀಶg ಹೆಸರಲ್ಲಿ ೧೦ ನ್ಯಾಯಾಧೀಶರ ಹೆಸರನ್ನು ಕೈಬಿಟ್ಟಿದೆ.

ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಕೊಲೆಜಿಯಂ ಪದ್ಧತಿಯೇ ಅತ್ಯುತ್ತಮವಾದ ಮತ್ತು ಏಕೈಕ ಪದ್ಧತಿಯೆಂಬ ಸುಪ್ರೀಂ ಕೋರ್ಟಿನ ನ್ಯಾಯಾಂಗ ಸಮರ್ಥನೆಯನ್ನು ಗೊಗೋಯ್ ನೇತೃತ್ವದ ಕೊಲೆಜಿಯಂನ ನಡೆಗಳು ಅಪಹಾಸ್ಯಕ್ಕೀಡು ಮಾಡಿದೆ. ೨೦೧೫ರ ನಾಲ್ಕನೇ ನ್ಯಾಯಾಧೀಶರ ಪ್ರಕರಣದಲ್ಲಿ ನ್ಯಾಯಾಧೀಶರ ನೇಮಕಾತಿಯನ್ನು ಮಾಡಲು ಒಂದು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಅಯೋಗವನ್ನು ರಚಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ತರಲಿಚ್ಚಿಸಿದ್ದ ಸಾಂವಿಧಾನಿಕ ತಿದ್ದುಪಡಿಯನ್ನು ರದ್ದುಮಾಡಿತು. ಆ ಸಂದರ್ಭದಲ್ಲಿ ಸುಪ್ರೀಂ ಕೋರ್ಟಿನ ಪ್ರತಿಯೊಬ್ಬ ನ್ಯಾಯಾಧೀಶರೂ ಸಹ ಕೊಲೆಜಿಯಂ ಪದ್ಧತಿಯು ಹೇಗೆ ನ್ಯಾಯಾಂಗ ಸ್ವಾತಂತ್ರ್ಯವನ್ನು ಖಾತರಿ ಪಡಿಸುತ್ತದೆ ಎಂದು ಪರಿಪರಿಯಾಗಿ ವಿವರಿಸಿದ್ದರು. ಈ ವಿಷಯದಲ್ಲಿ ನ್ಯಾಯಮೂರ್ತಿ ಮದನ್ ಲೋಕೂರ್ ಅವರು ನೀಡಿದ ಆದೇಶವನ್ನು ಓದಿದರಂತೂ ನ್ಯಾಯಾಧೀಶರ ನೇಮಕಾತಿಯಲ್ಲಿ ಕೊಲೆಜಿಯಂ ಪದ್ಧತಿಯೊಂದೇ ಸಂವಿಧಾನಬದ್ಧ ಮಾರ್ಗವಾಗಿದ್ದು ಹೆಚ್ಚೆಂದರೆ ಸಣ್ಣ ಪುಟ್ಟ ತಿದ್ದುಪಡಿಗಳ ಅಗತ್ಯ ಮಾತ್ರವಿದೆ ಎಂದು ಭಾಸವಾಗುತ್ತದೆ. ಕಳೆದೆ ಎರಡು ವರ್ಷಗಳಲ್ಲಿ ಆಗಿರುವ ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಯ ವಿಷಯದಲ್ಲಿ ಎದ್ದಿದ್ದ ವಿವಾದವು ಏನನ್ನು ಮಾಡಿದೆಯೋ ಇಲ್ಲವೋ, ಆದರೆ ಕಳೆದ ಅಕ್ಟೋಬರ್ ನಂತರದ ಗೊಗೋಯ್ ನೇತೃತ್ವದ ಕೋಲೆಜಿಯಂ ಮಾತ್ರ ಕೊಲೆಜಿಯಂ ವ್ಯವಸ್ಥೆ ಮುಂದುವರೆಯಲು ಇದ್ದ ಅಳಿದುಳಿದ ಸಮರ್ಥನೆಗನ್ನೂ ಸಂಪೂರ್ಣವಾಗಿ ನಾಶಮಾಡಿದೆ.

ತೀವ್ರತರವಾದ ಸಾರ್ವಜನಿಕ ವಿಚಕ್ಷಣೆ ಮತ್ತು ಹೆಚ್ಚುತ್ತಿರುವ ಸರ್ಕಾರೀ ಒತ್ತಡಗಳು ನ್ಯಾಯಾಂಗದ ಸಾಂಸ್ಥಿಕ ದೌರ್ಬಲ್ಯಗಳನ್ನು ಬಯಲು ಮಾಡಿವೆ. ಅದು ಕೇವಲ ಒಬ್ಬ ವ್ಯಕ್ತಿಯ ನೈತಿಕ ವೈಫಲ್ಯದಿಂದಲೋ ಅಥವಾ ಹಲವರ ತಪ್ಪು ನಿರ್ಧಾರಗಳ ಪರಿಣಾಮದಿಂದಲೋ ಸಂಭವಿಸಿರುವುದಲ್ಲ. ಅದು ತಮ್ಮ ಅಂತರಿಕ ಹುಳುಕನ್ನು ಒಪ್ಪಿಕೊಳ್ಳಲಾಗದ ಸುಪ್ರೀಂ ಕೋರ್ಟಿನ ಸಾಂಸ್ಥಿಕ ಅಸಮರ್ಥತೆಯ ಮತ್ತೊಂದು ಉದಾಹರಣೆ. ಆದರೆ ಈU ಈ ಸಂಸ್ಥೆಯನ್ನು  ಮುನ್ನಡೆಸುತ್ತಿರುವ ವ್ಯಕ್ತಿಗೆ ಈ ಎಲ್ಲಾ ಹುಳುಕುಗಳ ಬಗ್ಗೆ ಸ್ಪಷ್ಟ ಅರಿವಿತ್ತೆಂಬುದೂ ಹಾಗೂ ಅಧಿಕಾರ ವಹಿಸಿಕೊಳ್ಳುವಾಗ ಅವೆಲ್ಲವನ್ನು ಪರಿಹರಿಸುವ ಭರವಸೆಯನ್ನೂ ಸಹ ನೀಡಿದ್ದರೆಂಬ ಕಹಿಸತ್ಯವು ಈ ಸಂದರ್ಭದ ಬಗ್ಗೆ ಮತ್ತಷ್ಟು ನಿರಾಶೆಯನ್ನು ಹುಟ್ಟಿಸುತ್ತದೆ. 

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top