ISSN (Print) - 0012-9976 | ISSN (Online) - 2349-8846

ಸ್ಪಷ್ಟವಾಗುತ್ತಿರುವ ಆರ್ಥಿಕ ಇಳಿಮುಖತೆ

ಆರ್ಥಿಕತೆಯು ಪುನಶ್ಚೇತನಗೊಳ್ಳಲು ಆರ್ಥಿಕ ಚಟುವಟಿಕೆUಳು ವಿಸ್ತಾರಗೊಳ್ಳಲು ಬೇಕಾದ  ಪ್ರೇರಣೆಗಳು ಇಂದು ಅತ್ಯಂತ ಅಗತ್ಯವಾಗಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಭಾರತದ ನೈಜ ಒಟ್ಟು ರಾಷ್ಟ್ರೀಯ ಉತ್ಪಾದನೆ- ಜಿಡಿಪಿ- ಯು ಹಾಲಿ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. ೫ಕ್ಕೆ ಕುಸಿದಿದೆ. ಇದು ಕಳೆದ ಹಲವಾರು ವರ್ಷಗಳಲ್ಲೇ ಅತ್ಯಂತ ಕನಿಷ್ಟ ಪ್ರಮಾಣದ ದಾಖಲೆಯಾಗಿದೆ. ಈ ನಿರಾಶಾದಾಯಕ ಅರ್ಥಿಕ ದುಸ್ಥಿತಿಗೆ ಬಳಕೆ ಮತ್ತು ಹೂಡಿಕೆಯ ಎರಡೂ ಕ್ಷೇತ್ರಗಳಲ್ಲೂ ಆಗಿರುವ ಕುಸಿತವೇ ಕಾರಣವಾಗಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ  ಅಂತಿಮ ಖಾಸಗಿ ಬಳಕೆ ವೆಚ್ಚ-ಪ್ರವೇಟ್ ಫೈನಲ್ ಕನ್ಸಮ್ಷನ್ ಎಕ್ಸ್ಪೆಂಡಿಚರ್- ಪಿಎಫ್‌ಸಿಇಯು ಶೇ.೭.೩ರ ದರದಲ್ಲಿ ಬೆಳೆದಿದ್ದರೆ ಈ ವರ್ಷ ಅದು ಶೇ.೩.೧ಕ್ಕೆ ಕುಸಿದಿದೆ. ೨೦೧೬-೧೭ರ ಸಾಲಿನಲ್ಲಿ ನೋಟು ನಿಷೇಧದ ನಂತರದ ನಾಲ್ಕನೇ ತ್ರೈಮಾಸಿಕದಲ್ಲೂ ಪಿಎಫ್‌ಸಿಇಯೂ ಶೇ.೪.೧ಕ್ಕೆ ಕುಸಿದಿತ್ತು. ಗ್ರಾಸ್ ಫಿಕ್ಸೆಡ್ ಕ್ಯಾಪಿಟಲ್ ಫ್ರಾಮೇಷನ್- ಒಟ್ಟಾರೆ ಸ್ಥಿರ ಬಂಡವಾಳ ಶೇಖರಣೆ- ಜಿಎಫ್‌ಸಿಎಫ್- ಸಹ ಇದೇ ರೀತಿಯ ಕುಸಿತವನ್ನು ದಾಖಲಿಸಿದೆ. ಅದು ೨೦೧೬-೧೭ರ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.೨ಕ್ಕೆ ಕುಸಿದಿತ್ತು. ಮತ್ತು ಕಳೆದ ವರ್ಷ ಶೇ.೧೩.೩ರಷ್ಟು ಏರಿಕೆಯನ್ನು ದಾಖಲಿಸಿತ್ತು. ಆದರೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅದು ಶೇ.೪ಕ್ಕೆ ಕುಸಿದಿದೆ.

ವಾಸ್ತವವಾಗಿ ೨೦೧೯-೨೦ರ ಮೊದಲ ತ್ರೈಮಾಸಿಕದಲ್ಲಿ ಕಾರ್ಖಾನೆ ಉತ್ಪಾದನೆ, ಗಣಿ ಉದ್ಯಮ, ಕೃಷಿಯನ್ನು ಒಳಗೊಂಡಂತೆ ಬಹುಪಾಲು ಉತ್ಪಾದಕ ಕ್ಷೇತ್ರಗಳು ಗಂಭೀರವಾದ ಹಿನ್ನೆಡೆಯನ್ನು ಅನುಭವಿಸಿವೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರವು ಅತ್ಯಂತ ಹಿಂದ್ಸರಿತವನ್ನು ಎದುರಿಸುತ್ತಿದೆ. ಕಳೆದ ಸಾಲಿನ ಇದೇ ಕಾಲಘಟ್ಟದಲ್ಲಿ ಆ ಕ್ಷೇತ್ರವು ಶೇ.೧೨.೧ರಷ್ಟು ಏರಿಕೆಯನ್ನು ದಾಖಲಿಸಿದ್ದರೆ ಈ ಸಾಲಿನಲ್ಲಿ ಅದು ಕೇವಲ ಶೇ.೦.೬ರಷ್ಟು ಏರಿಕೆಯನ್ನು ಮಾತ್ರ ದಾಖಲಿಸಿದೆ. ಕೈಗಾರಿಕಾ ಉತ್ಪನ್ನಗಳ ಸೂಚ್ಯಂಕಗಳ ಅಭಿವೃದ್ಧಿ ದರವು ಹೋದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಕ್ಷೀಣವಾಗಿದೆ ಅಥವಾ ಮೊದಲಿಗಿಂತ ಕಡಿಮೆಯಾಗಿ ನಕಾರಾತ್ಮಕ ಬದಲಾವಣೆಯನ್ನು ದಾಖಲಿಸಿದೆ. ಜವಳಿ ಕ್ಷೇತ್ರವು ಕೇವಲ ಶೇ.೦.೧ರಷ್ಟು ದರದಲ್ಲಿ ಕುಂಟುತ್ತಿದ್ದರೆ, ಚರ್ಮೋತ್ಪನ್ನಗಳು ಶೇ.೦.೨, ಕಾಗದ ಮತ್ತು ಕಾಗದೋತ್ಪನ್ನಗಳು ನಕಾರಾತ್ಮಕವಾದ -೧೪.೨ರಷ್ಟು ಕುಸಿತವನ್ನೂ, ಲೋಹೇತರ ಖನಿಜಗಳು ಶೇ.-೧೧, ಎರಕಕೀಕೃತ ಲೋಹೋತ್ಪನ್ನಗಳು ಶೇ. -೯.೮ ರಷ್ಟು, ವಿದ್ಯುದೋಪಕರಣಗಳು ಶೇ.-೪.೬ರಷ್ಟು, ಇನ್ನಿತರ ಯಂತ್ರೋಪಕರಣಗಳು ಶೇ.-೧.೬ರಷ್ಟು, ಮೋಟಾರು ವಾಹನಗಳು ಶೇ.-೮.೪ರಷ್ಟು, ಇನ್ನಿತರ ಸಾರಿಗೆ ಉಪಕರಣಗಳು ಶೇ.-೧.೭ರಷ್ಟು ನಕಾರಾತ್ಮಕ ಕುಸಿತವನ್ನು ದಾಖಲಿಸಿವೆ. ಈ ಎಲ್ಲಾ ಪ್ರಮುಖ ಉದ್ದಿಮೆಗಳಲ್ಲಿ ಕಂಡುಬರುತ್ತಿರುವ ಈ ಇಳಿಮುಖತೆಯು ಒಟ್ಟಾರೆ ಆರ್ಥಿಕತೆಯಲ್ಲೂ ಅಪಾಯಕಾರಿ ಹಿನ್ನೆಡೆಯನ್ನು ತಂದಿದೆ. ಮತ್ತು ಅದು ಇನ್ನೂ ಹಲವು ಕಾಲ ಮುಂದುವರೆಯುವ ಸೂಚನೆಗಳಿವೆ.

ಆರ್ಥಿಕತೆಯಲ್ಲಿನ ಈ ಇಳಿಮುಖತೆಯು ೨೦೧೬ರ ನೋಟು ನಿಷೇಧವೆಂಬ ಕೆಟ್ಟ ಕ್ರಮಗಳ ನಂತರ ಹಾಗೂ ಅತ್ಯಂತ ಅಸಮರ್ಪಕವಾಗಿ ಜಾರಿ ಮಾಡಲಾದ ಜಿಎಸ್‌ಟಿ ವ್ಯವಸ್ಥೆಯ ನಂತರ ಸ್ಪಷ್ಟವಾಗಿ ಕಣತೊಡಗಿತ್ತು. ಸೌದಿ ಅರೇಬಿಯಾದ ಅತ್ಯಂತ ದೊಡ್ಡ ತೈಲ ಸಂಸ್ಕರಣ ಘಟಕವಾದ ಅರಾಮ್ಕೋ ಮೇಲೆ ಡ್ರೋನ್ ದಾಳಿಯಾದ ನಂತರದಲ್ಲಿ ಪಶ್ಚಿಮ ಏಷಿಯದಲ್ಲಿ ಉಂಟಾಗಿರುವ ಉದ್ವಿಗ್ನ ವಾತಾವರಣವು  ಮುಂದುವರೆದು ಕಚ್ಚಾ ತೈಲದ ಬೆಲೆಗಳು ಏರತೊಡಗಿದಲ್ಲಿ ಭಾರತದ ಆರ್ಥಿಕತೆಯ ಇಳಿಮುಖತೆಯು ಇನ್ನಷ್ಟು ಬಿಗಡಾಯಿಸುವುದರಲ್ಲಿ ಸಂದೇಹವಿಲ್ಲ.

ಈ ಆರ್ಥಿಕ ಇಳಿಮುಖತೆಯು ೨೦೧೭-೧೮ರಲ್ಲಿ ನಡೆದ ನಿಯತಕಾಲಿಕ ಶ್ರಮಶಕ್ತಿ ಸರ್ವೇ- ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ- ಯ ಫಲಿತಾಂಶಗಳ ಮೇಲೂ ಪ್ರಭಾವವನ್ನು ಬೀರಿದೆ. ವಿಷಯವು ನಿಚ್ಚಳವಾಗಿದೆ. ನಗರದ ಶೇ.೭.೧ರಷ್ಟು ಹಾಗೂ ಗ್ರಾಮೀಣದ ಶೇ.೫.೮ರಷ್ಟು ಪುರುಷರು ಹಾಗೂ ನಗರದ ಶೇ.೧೦.೮ರಷ್ಟು ಮತ್ತು ಗ್ರಾಮೀಣದ ಶೇ.೩.೮ರಷ್ಟು ಮಹಿಳೆಯರು ಉದ್ಯೋಗರಹಿತರೆಂದು ದಾಖಲಾಗಿದೆ. ಹೀಗಾಗಿ ಇದು ೧೯೭೨-೭೩ ರಿಂದಾಚೆಗಿನ ಕಳೆದ ೪೫ ವರ್ಷಗಳಲ್ಲೇ ಎನ್‌ಎಸ್‌ಎಸ್‌ಒ ಸರ್ವೇಗಳು ನಡೆಸಿದ ಸಮೀಕ್ಷೆಗಳಲ್ಲಿ ಕಂಡುಬಂದ ಅತ್ಯಂತ ಹೆಚ್ಚಿನ ನಿರುದ್ಯೋಗ ಪ್ರಮಾಣವಾಗಿದೆ.

ವಿಶೇಷವಾಗಿ ಗ್ರಾಮೀಣ  ಕ್ಷೇತ್ರದಲ್ಲಿ ಹದಗೆಟ್ಟಿರುವ ನಿರುದ್ಯೋಗ ಪರಿಸ್ಥಿತಿಯಿಂದಾಗಿ ಬೇಡಿಕೆಯಲ್ಲೂ ಬಿಕ್ಕಟ್ಟನ್ನು ಉಂಟಾಗಿದೆ. ಇದು ಪ್ರಮುಖ ಮ್ಯಾನುಫ್ಯಾಕ್ಚರಿಂಗ್ ವಿಭಾಗಗಳ ಮೇಲೂ ಪ್ರಭಾವವನ್ನು ಬೀರುತ್ತಿದೆ. ಆದರೆ ಅದರ ಪರಿಣಾಮವು ಸರಣಿಯೋಪಾದಿಯ ರೂಪವನ್ನು ಪಡೆದುಕೊಳ್ಳುತ್ತಿರುವುದು ಹೆಚ್ಚು ಚಿಂತೆಗೀಡುಮಾಡುವ ವಿಷಯವಾಗಿದೆ. ಮೋಟಾರು ವಾಹನಗಳ ಮಾರಾಟದ ಬೆಳವಣಿಗೆಯಲ್ಲಿ ಕಳೆದ ಕೆಲವಾರು ತಿಂಗಳಿಂದ ಸ್ಥಗಿತತೆ ಕಂಡು ಬಂದಿರುವುದರಿಂದ ಮಾರುತಿ ಸುಜುಕಿ, ಅಶೋಕ್ ಲೇಲ್ಯಾಂಡ್ ಮತ್ತು ಟಾಟಾ ಮೋಟಾರ್ಸ್‌ನಂತ ಕಂಪನಿಗಳು ತಮ್ಮ ಕಾರ್ಖಾನೆಗಳಲ್ಲಿ ಕೆಲಸವಿಲ್ಲದ ದಿನಗಳ ಸಂಖ್ಯೆಯನ್ನು ಅರ್ಥಾತ್ ಸಂಬಳವಿಲ್ಲದ ರಜೆಯನ್ನು ಹೆಚ್ಚಿಸುತ್ತಿದ್ದಾರೆ ಮತ್ತು ಪೂರಕ ಉಪಗುತ್ತಿಗೆಗಳನ್ನೂ ಸಹ ಕಡಿತಗೊಳಿಸುತ್ತಿದ್ದಾರೆ. ಸಂಘಟಿತ ಕ್ಷೇತ್ರವೇ ಇಂಥಾ ದಾರುಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ ಇನ್ನೂ ಅಸಂಘಟಿತ ಕ್ಷೇತ್ರದ ಪರಿಸ್ಥಿತಿ ಏನಾಗಿರಬಹುದೆಂಬುದನ್ನೂ ಯಾರೂ ಊಹಿಸಬಹುದು.

ಅಭಿವೃದ್ಧಿಯು ಸಂಕುಚಿತಗೊಂಡಿರುವುದು ತೆರಿಗೆ ಸಂಗ್ರಹದಲ್ಲಿ ಸಂಭವಿಸುತ್ತಿರುವ ಇಳಿಕೆಯಲ್ಲೂ ವ್ಯಕ್ತಗೊಂಡಿದೆ. ಇತ್ತೀಚೆಗೆ ಬಿಡುಗಡೆಯಾದ ದತ್ತಾಂಶಗಳು ಹೇಳುವಂತೆ ಈ ಹಾಲಿ ಹಣಕಾಸು ವರ್ಷದಲ್ಲಿ ಸೆಪ್ಟೆಂಬರ್ ಮಧ್ಯ ಭಾಗದವರೆಗೆ ತೆರಿಗೆ ಸಂಗ್ರಹವು ಶೇ ೬ರ ದರದಲ್ಲಿತ್ತು. ಆದರೆ ಇದೇ ಅವಧಿಯಲ್ಲಿ ಕಳೆದ ವರ್ಷ ಅದು ಶೇ.೧೮ರಷ್ಟು ಏರಿಕೆಯನ್ನು ದಾಖಲಿಸಿತ್ತು. ಮತ್ತು ೨೦೧೬-೧೭ರಲ್ಲಿ ಅದು ಶೇ.೧೪ರಷ್ಟಾಗಿತ್ತು. ಈ ತೆರಿಗೆಯನ್ನು ಆಯಾ ಕ್ಷೇತ್ರದಲ್ಲಿ ಆದಾಯವು ಗಳಿಕೆಯಾದಾಗ ಸಂಗ್ರಹಿಸಲಾಗುತ್ತದೆ. ಆದ್ದರಿಂದ ಈ ಇಳಿಕೆಯು ಸಂಘಟಿತ ಕ್ಷೇತ್ರದಲ್ಲಿ ಆದಾಯ ಹುಟ್ಟುವಳಿಯ ಮೇಲೆ ತೀವ್ರವಾದ ಪರಿಣಾಮ ಬಿದ್ದಿರುವುದನ್ನು ಸೂಚಿಸುತ್ತದೆ. ಹೀಗಾಗಿ ಎರಡನೇ ತ್ರೈಮಾಸಿಕದಲ್ಲೂ ಪರಿಸ್ಥಿತಿ ಇದಕ್ಕಿಂತ ಉತ್ತಮವಾಗಿರುತ್ತದೆಂದು ಹೇಳಲು ಸಾಧ್ಯವಿಲ್ಲ.

ಮತ್ತೊಂದೆಡೆ ಆರ್‌ಬಿಐ, ಬ್ಯಾಂಕುಗಳಿಗೆ ವಿಧಿಸುವ ತನ್ನ ರೆಪೋ ದರವನ್ನು ಪ್ರತಿ ಸಲವೂ ಕಡಿಮೆ ಮಾಡುತ್ತಾ ಬಂದಿದೆ. ಹಾಗೂ ಕಳೆದ ಆಗಸ್ಟ್‌ನಲ್ಲಿ ಮತ್ತೆ ಶೇ.೦.೩೫ರಷ್ಟು ಕಡಿಮೆ ಮಾಡಿದೆ. ಇದರ ಉದ್ದೇಶ ಬ್ಯಾಂಕುಗಳೂ ಸಹ ತಾವು ವಿಧಿಸುವ ಬಡ್ಡಿ ದರದ ಮೇಲೆ ಇದೇ ಪ್ರಮಾಣದಲ್ಲಿ ಬಡ್ಡಿಯನ್ನು ಕಡಿಮೆಗೊಳಿಸುವ ಮೂಲಕ ಹೂಡಿಕೆದಾರರಿಗೆ ಮತ್ತು ಬಳಕೆದಾರರಿಬ್ಬರಿಗೂ ಸುಲಭ ದರದಲ್ಲಿ ಸಾಲವು ದೊರೆತು ಆರ್ಥಿಕತೆಯು ಚೇತರಿಸಿಕೊಳ್ಳಬಹುದು ಎಂಬುದಾಗಿದೆ. ಆದರೆ ಈ ಲಾಭವು ಬ್ಯಾಂಕುಗಳ ಗ್ರಾಹಕರಿಗೆ ವರ್ಗಾವಣೆ ಆಗದಿರುವುದನ್ನು ಗಮನಿಸಿರುವ ರಿಸರ್ವ್ ಬ್ಯಾಂಕು, ಬ್ಯಾಂಕುಗಳು ತಮ್ಮ ಬಡ್ಡಿ ದರವನ್ನು ಆರ್‌ಬಿಐ ನ ರೆಪೊ ದರಗಳಿಗೆ ತಕ್ಕಂತೆ ಮಾರ್ಪಾಡು ಮಾಡಬೇಕೆಂದು ಆದೇಶಿಸಿದೆ. ಆದರೆ ಬ್ಯಾಂಕು ಉದ್ಯಮವು ವಿಚಿತ್ರವಾದ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಇತರ ಆಕರ್ಷಕ ಉಳಿತಾಯ ಯೋಜನೆಗಳು ಮಾರುಕಟ್ಟೆಯನ್ನು ಪ್ರವೇಶಿಸಿರುವುದರಿಂದ ಬ್ಯಾಂಕುಗಳ ಡಿಪಾಸಿಟುಗಳ ಸಂಗ್ರಹದ ವೇಗವೂ ಕಡಿತಗೊಳ್ಳುತ್ತಿದೆ.

ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಆಗಸ್ಟ್ ಕೊನೆಯ ವಾರದಿಂದ ಸರ್ಕಾರವು ಹಲವಾರು ಯೋಜನೆಗಳನ್ನು ಪ್ರಕಟಿಸುತ್ತಿದೆ. ಸಾರ್ವಜನಿಕ ಕ್ಷೇತ್ರದ ಹತ್ತು ಬ್ಯಾಂಕುಗಳನ್ನು ವಿಲೀನಗೊಳಿಸಿ ಗ್ರಾಹಕರಿಗೆ ಸಾಲ ನೀಡಲು ಅವುಗಳಿಗೆ ೫೦,೦೦೦ ಕೋಟಿ ಹೆಚ್ಚುವರಿ ಹಣವನ್ನು ಒದಗಿಸಿರುವುದು, ವಿದೇಶಿ ಶೇರು ಹೂಡಿಕೆದಾರರ ಮೇಲೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ತೆರಿಗೆಯನ್ನು ಹಿಂತೆಗೆದುಕೊಂಡಿರುವುದು, ಮೋಟಾರು ವಾಹನ, ವಸತಿ ಮತ್ತು ರಫ್ತು ಕ್ಷೇತ್ರಗಳಿಗೆ  ನಿರ್ದಿಷ್ಟವಾz ಮತ್ತು ವಿಶೇಷವಾದ  ಯೋಜನೆಗಳನ್ನು ಪ್ರಕಟಿಸಿರುವುದು, ಇದೀಗ ೪೦೦ ಜಿಲ್ಲೆಗಳಲ್ಲಿ ಸಾಲ ಮೇಳವನ್ನು ಘೋಷಿಸಿರುವುದು ಹಾಗೂ ಕಾರ್ಪೊರೇಟ್ ತೆರಿಗೆಯನ್ನು ಶೇ.೩೦ರಿಂದ ಶೇ.೨೨ಕ್ಕೆ ಕಡಿತಗೊಳಿಸಿರುವುದು...ಇತ್ಯಾದಿ. ಇನ್ನೂ ಸಾಕಷ್ಟು ಕ್ರಮಗಳೂ ಮುಂದೆಯೂ ಘೋಷಿತವಾಗಬಹುದೆಂಬ ನಿರೀಕ್ಷೆಯಿದೆ. 

ಆದರೆ ಇವೆಲ್ಲವೂ ಮೈಕ್ರೋ ಮಟ್ಟದ ಕ್ರಮಗಳಿವೆ. ಆದರೆ ಅರ್ಥಿಕತೆಯು ಇಂದು ಮೂಲಭೂತ (ಸ್ಟ್ರಕ್ಚರಲ್) ಹಾಗೂ ಸರ್ವೇ ಸಹಜವಾದ ಆವರ್ತನೀಯ (ಸೈಕ್ಲಿಕಲ್) ಸ್ವರೂಪದ ಎರಡೂ ಬಗೆಯ ಮಹಾನ್ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೀಗಾಗಿ ಇದು ಹಣಕಾಸು ಹಾಗೂ ವಿತ್ತೀಯ ಕ್ಷೇತ್ರಗಳೆರಡರಲ್ಲೂ ಆರ್ಥಿಕ ವಿಸ್ತರಣಾ ಪ್ರೇರಣೆಗಳನ್ನು ನೀಡಬಲ್ಲ ಮ್ಯಾಕ್ರೋ ಮಟ್ಟದ ಮೂಲಭೂತ ಸುಧಾರಣೆಗಳನ್ನು ಅಪೇಕ್ಷಿಸುತ್ತಿದೆ. ಆರ್ಥಿಕತೆಯಲ್ಲಿ ಅದರಲ್ಲೂ ಗ್ರಾಮೀಣ ಕ್ಷೇತ್ರದಲ್ಲಿ ಬೇಡಿಕೆ ಮತ್ತು ಹೂಡಿಕೆಗಳೆರಡನ್ನೂ ಹೆಚ್ಚಿಸಬಲ್ಲ ವಿತ್ತೀಯ ಹಾಗೂ ಹಣಕಾಸು ಒತ್ತಾಸೆಗಳನ್ನು ನೀಡುವುದು ಇಂದು ಅತ್ಯಗತ್ಯವಾಗಿದೆ. ತೆರಿಗೆ ಸಂಗ್ರಹದ ಪ್ರಮಾಣವು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಆರ್ಥಿಕತೆಗೆ ಪುನಶ್ಚೇತನ ಒದಗಿಸಲು ಸರ್ಕಾರಿ ವೆಚ್ಚವನ್ನು ಹೆಚ್ಚಿಸುವುದು ಹೇಗೆ ಎನ್ನುವುದೇ ದೊಡ್ಡ ಸವಾಲಾಗಿದೆ. ಆದರೆ ಇದಾಗಬೇಕೆಂದರೆ ವಿತ್ತೀಯ ಸಧೃಡೀಕರಣದ ಬಗೆಗಿನ ನಮ್ಮ ಈವರೆಗಿನ ತಿಳವಳಿಕೆಯನ್ನು ಅಮೂಲಾಗ್ರವಾಗಿ ಮರುಪರಿಶೀಲಿಸುವ ಅಗತ್ಯವಿದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top