ISSN (Print) - 0012-9976 | ISSN (Online) - 2349-8846

ಮರುಚಿಂತನೆಯೆಂಬ ಪರಿಕಲ್ಪನೆ ಮತ್ತು ಆರ್ಟಿಕಲ್ ೩೭೦

.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಸಾಮಾನ್ಯವಾಗಿ ಯಾವುದಾದರೂ ವಿಷಯದ ಬಗ್ಗೆ ಮೊದಲ ಬಾರಿ ತೀರ್ಮಾನ ಅಥವಾ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಹೆಚ್ಚು ವೈಚಾರಿಕವಾಗಿ ವಿಶ್ಲೇಶಿಸಿರುವುದಿಲ್ಲ. ಆದ್ದರಿಂದ ಅದರಲ್ಲಿ ಪೂರ್ವಗ್ರಹಗಳು ಮತ್ತು ಏಕಪಕ್ಷೀಯತೆಗಳು ತನ್ನಂತೆ ತಾನೇ ಅಭಿವ್ಯಕ್ತಗೊಂಡಿರುತ್ತದೆ. ಕಾಶ್ಮೀರದ ವಿಷಯಕ್ಕೆ ಸಂಬಂಧಪಟ್ಟಂತೆ ಜೆಡಿಯು ನಂಥ ಕೆಲವು ಸಣ್ಣಸಣ್ಣ ಪಕ್ಷಗಳು ಈಗ ಮರುಚಿಂತನೆ ಮಾಡಿ ಆರ್ಟಿಕಲ್ ೩೭೦ರ ಬಗ್ಗೆ ತಮ್ಮ ಮೊದಲಿನ ತೀರ್ಮಾನವನ್ನು ಬದಲಿಸಿಕೊಂಡು ಕೇಂದ್ರ ಸರ್ಕಾರದ ತೀರ್ಮಾನವನ್ನು ಬೆಂಬಲಿಸುವ ನಿರ್ಣಯಕ್ಕೆ ಬಂದಿವೆ. ಅಷ್ಟು ಮಾತ್ರವಲ್ಲದೆ, ಮರುಚಿಂತನೆ ಮಾಡಿದ ನಂತರ ಕಾಂಗ್ರೆಸ್‌ನ ಕೆಲವು ಸದಸ್ಯರು ಸಹ ಈ ವಿಷಯದಲ್ಲಿ ಬಿಜೆಪಿಯನ್ನು ಬೆಂಬಲಿಸುವ ತೀರ್ಮಾನಕ್ಕೆ ಬಂದಿರುವುದು ಕುತೂಹಲಕಾರಿಯಾಗಿದೆ. ಕೇಂದ್ರ ಸರ್ಕಾರದ ರಾಜಕೀಯ ವಿರೋಧಿಗಳೆಂದು ಹೇಳಿಕೊಳ್ಳುವ ಇತರ ಸಣ್ಣ ಪಕ್ಷಗಳಾದ ಆಮ್ ಆದ್ಮಿ ಪಾರ್ಟಿ ಮತ್ತು ಬಿಎಸ್‌ಪಿಗಳೂ ಸಹ ಮರುಚಿಂತನೆಯ ನಂತರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ ೩೭೦ನ್ನು ರದ್ದುಗೊಳಿಸಬೇಕೆಂಬ ಕೇಂದ್ರ ಸರ್ಕಾರದ ತೀರ್ಮಾನವನ್ನು  ಬೆಂಬಲಿಸುವ ತೀರ್ಮಾನಕೆ ಬಂದಿವೆ.

ಆ ತೀರ್ಮಾನದ ಹೊಸ ಬೆಂಬಲಿಗರು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ಬೆಂಬಲಿಸುವ ತಮ್ಮ ಹಳೆಯ ತೀರ್ಮಾನದಲ್ಲಿದ್ದ ಕೊರತೆಗಳನ್ನು ಮೀರುವ ಮೂಲಕ ತಮ್ಮ ಪರಿಗ್ರಹಣಾ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಈ ಹೊಸ ಬೆಂಬಲಿಗರು ತಮ್ಮ ಹಳೆಯ ನಿಲುವಿನ ಬಗ್ಗೆ ಸ್ವಸಂದೇಹವನ್ನು ವ್ಯಕ್ತಪಡಿಸುತ್ತಾ, ನಂತರದಲ್ಲಿ ಅದನ್ನು ಸರಿತಿದ್ದುಕೊಂಡಿದ್ದರಿಂದಲೇ ಮರುಚಿಂತನೆಯ ಅಗತ್ಯ ಉಂಟಾಗಿದೆ. ಹೀಗಾಗಿ ಈಗ ಹೊಸ ಬೆಂಬಲಿಗರು ಆರ್ಟಿಕಲ್ ೩೭೦ರ ಬಗ್ಗೆ ತಮ್ಮ ಬದಲಾದ ನಿಲುವುಗಳು ಸರಿಯಾದದ್ದು ಎಂಬುದರ ಬಗ್ಗೆ ಅದಮ್ಯ ಬದ್ಧತೆಯನ್ನು ಪ್ರದರ್ಶಿಸುತ್ತಾರೆ. ಈ ಎಲ್ಲಾ ಹೊಸ ಬೆಂಬಲಿಗರಲ್ಲೂ ಕಂಡು ಬರುವ ಸಾಮಾನ್ಯ ಅಂಶವೇನೆಂದರೆ: ಜೆಡಿಯು ಮತ್ತು ಕಾಂಗ್ರೆಸ್‌ನ ಕೆಲವು ಸದಸ್ಯರು ಕಾಶ್ಮೀರಕ್ಕೆ ನೀಡಲಾಗಿರುವ ತಮ್ಮ ವಿಶೇಷ ಸ್ಥಾನಮಾನವನ್ನು ಬೆಂಬಲಿಸಬೇಕೆಂಬ ತಮ್ಮ ಮೊದಲಿನ ನಿಲುವು ತಪ್ಪಾಗಿತ್ತು ಎಂದು ಭಾವಿಸಿದರು. ಹೀಗಾಗಿ ಮತ್ತೊಮ್ಮೆ ಅದರ ಬಗ್ಗೆ ಯೋಚಿಸಿ ಅದನ್ನು ಬದಲಾಯಿಸಿಕೊಳ್ಳಬೇಕೆಂದು ತೀರ್ಮಾನಿಸಿದರು. ಮರುಚಿಂತನೆ ಮಾಡಿ ತೆಗೆದುಕೊಂಡ ಎರಡನೇ ನಿರ್ಧಾರವು ತಪ್ಪಾಗಲು ಸಾಧ್ಯವೇ ಇಲ್ಲದ ಸರಿಯಾದ ರಾಜಕೀಯ ನಿರ್ಧಾರವಾಗಿದೆ ಎಂಬ ನಿಲುವೇ ಆ ತೀರ್ಮಾನಕ್ಕೆ ಪರ್ಯಾಲೋಚನಾ ಸಮರ್ಥನೆಯನ್ನು ಒದಗಿಸುತ್ತದೆ. ಆದರೆ ಇಲ್ಲಿ ಕೇಳಬೇಕಾಗಿರುವ ಪ್ರಶ್ಬೆಯೇನೆಂದರೆ ಆರ್ಟಿಕಲ್ ೩೭೦ರ ಕೀಲಕಾಂಶಗಳನ್ನು ರದ್ದು ಮಾಡುವ ಈ ತೀರ್ಮಾನಕ್ಕೆ ಅಂಥಾ ದೋಷರಹಿತ ಚಿಂತನಾ ಸಮರ್ಥನೆಗಳಿವೆಯೇ? ಹಾಗೂ ಸ್ವ ತಿದ್ದುಪಡಿಯ ಪರಿಣಾಮವಾಗಿ ತೆಗೆದುಕೊಂಡ ಈ ಬದಲಾದ ತೀರ್ಮಾನದ ಹಿಂದಿನ ನೈತಿಕ ಶಕ್ತಿಯೇನು?

ಒಂದು ಮರುಚಿಂತನೆಯ ಭಾಗವಾದ ಈ ಹೊಸ ಸಮರ್ಥಕರ ತೀರ್ಮಾನದ ಮೌಲ್ಯ ಮಾಪನ ಮಾಡುವ ಅಗತ್ಯವಿದೆ. ಸರ್ಕಾರವು ತೆಗೆದುಕೊಂಡಿರುವ ನಿರ್ಧಾರದಿಂದ ಕೇವಲ ಪ್ರವಾಸಿಗರು ಮತ್ತು ಅಮರನಾಥ ಯಾತ್ರಿಗಳ ಮೇಲೆ ಮಾತ್ರವಲ್ಲದೆ ಕಣಿವೆಯಲಿ ವಾಸ ಮಾಡುತ್ತಿರುವ ಇಡೀ ಜನತೆಯ ಪರಿಸ್ಥಿತಿ ಇನ್ನಷ್ಟು ದುರ್ಭರವಾಗಬಹುದೆಂಬ ಎಚ್ಚರಿಕೆಯನ್ನು ಇವರು ಸರ್ಕಾರಕ್ಕೆ ನೀqಬಹುದಿತ್ತು ಕೇಂದ್ರ ಸರ್ಕಾರವನ್ನು ಬೆಂಬಲಿಸಲು ಈ ಪಕ್ಷಗಳಿಗೆ ತಮ್ಮದೇ ಆದ ಕಾರಣಗಳಿರಬಹುದು. ಆದರೆ ಸರ್ಕಾರದ ಬೆಂಬಲಿಗರಿಗೆ ಒಂದು ಮಾನವೀಯ ಹಾಗೂ ಸಾರ್ವತ್ರಿಕವಾದ ನೆಲೆಯಲ್ಲಿ ಅವುಗಳ ದೂರಗಾಮಿ ಪರಿಣಾಮಗಳ ಬಗ್ಗೆ ಎಚ್ಚರಿಸಲು ಬೇಕಾದ ನೈತಿಕ ಜವಾಬ್ದಾರಿಯೂ ಇರಬೇಕಾಗುತ್ತದೆ. ಎಲ್ಲಾ ಪಕ್ಷಗಳ ಸದಸ್ಯರು ಅಂತಹ ವಿಶ್ವಾತ್ಮಕ ನೆಲೆಗಳಲ್ಲಿ ನಿಂತು ತಮ್ಮ ರಾಜಕೀಯ ಚಟುವಟಿಕೆಗಳಲ್ಲಿ ಒಂದು ನೈತಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕೆಂಬ ನಿರೀಕ್ಷೆ ಇರುತ್ತದೆ. ಅಂದರೆ ಆರ್ಟಿಕಲ್ ೩೭೦ರ ರದ್ಧತಿಯಂಥ ಸೂಕ್ಷ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ನಾಗರಿಕರ ಭೌತಿಕ ರಕ್ಷಣೆಯ ಕ್ರಮಗಳನ್ನು ತೆಗೆದುಕೊಳ್ಳಬೇಕಿರುತ್ತದೆ.

ಆದರೆ ಸಮಾಜದ ಅತಂತ್ರ ಪರಿಸ್ಥಿತಿಯಲ್ಲಿರುವವರ ಪರವಾಗಿ ತಮ್ಮ ಚಿಂತನೆಗಳನ್ನು ರೂಪಿಸಿಕೊಳ್ಳಬೇಕಿರುವ ಗುರುತರ ಜವಾಬ್ದಾರಿ ಹೊಂದಿರುವ ಪಕ್ಷಗಳು ಅಂಥ ಯಾವುದೇ ಸೂಕ್ಷತೆಯನ್ನು ತೋರದಂಥ ವ್ಯಾವಹಾರಿಕ ರಾಜಕೀಯದ ಹೊಸ ಮಜಲನ್ನು ನಾವು ಪ್ರವೇಶಿಸಿಬಿಟ್ಟಿದ್ದೇವೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಅಂಥಾ ಪಕ್ಷಗಳು ತಮ್ಮ ರಾಜಕೀಯ ತೀರ್ಮಾನಗಳ ಬಗ್ಗೆ ನಿರಂತರ ಜಾಗೃತಿಯನ್ನು ಪ್ರದರ್ಶಿಸುವುದೇ ಇಲ್ಲ. ಆ ಮೂಲಕ ಅವರು ತಮ್ಮ ಪ್ರಜಾತಾಂತ್ರಿಕ ಆಶೋತ್ತರಗಳಿಗೆ ಬೇಕಾದ ಸಾಂವಿಧಾನಾತ್ಮಕ ಖಾತರಿಯನ್ನು ಪಡೆದುಕೊಳ್ಳುವಲ್ಲೂ ವಿಫಲರಾಗುತ್ತಾರೆ. ದುರದೃಷ್ಟವಶಾತ್ ಸಣ್ಣ ಪುಟ್ಟ ಪಕ್ಷಗಳೇ ಇಂಥಾ ವಿಷಯಗಳಲ್ಲಿ ಅಪಾರವಾದ ಅನಿಶ್ಚತತೆಯನ್ನು ಪ್ರದರ್ಶಿಸುತ್ತವೆ. ಆ ಕಾರಣಕ್ಕಾಗಿಯೇ ಅವು ದೇಶದ ಮೂಲೆಮೂಲೆಯಲ್ಲಿರುವ ಅತಂತ್ರ ಸಮುದಾಯಗಳ ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ವಿಫಲವಾಗುತ್ತವೆ.

ವಂಚಿತ ಸಮುದಾಯಗಳ ಪರವಾಗಿ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಬಹುದಾದ ವಿವೇಕ ತಮಗಿದೆಯೆಂದು ಭಾವಿಸಿಕೊಂಡಿರುವ ಆಳುವ ಸರ್ಕಾರಗಳು ಯಾವುದೇ ಸಮಾಲೋಚನೆಗಳನ್ನೇ ಮಾಡದೇ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುವ ಮೂಲಕ ವಂಚಿತ ಸಮುದಾಯಗಳನ್ನು ಮತ್ತಷ್ಟು ವಂಚನೆಗೆ ಗುರಿಮಾಡುತ್ತಿರುತ್ತವೆ ಎಂದು ಪ್ರಜಾತಾಂತ್ರಿಕ ವಂಚನೆಗೆ ಗುರಿಯಾಗಲ್ಪಟ್ಟ ಸಮುದಾಯಗಳನ್ನು ಪ್ರತಿನಿಧಿಸುತ್ತೇವೆ ಎಂದು ಕೊಚ್ಚಿಕೊಳ್ಳುವ ಈ ಪಕ್ಷಗಳು ಅರ್ಥಮಾಡಿಕೊಳ್ಳಬೇಕು. ತಮ್ಮ ತೀರ್ಮಾನಗಳ ಬಗ್ಗೆ ಮರುಚಿಂತನೆ ಮಾಡುವಾಗ ಈ ಪಕ್ಷಗಳು ತಾವು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಭಾಗವಾಗಿರುವ ಬಲಶಾಲಿ ಸರ್ಕಾರವು ತನ್ನ ಸರ್ವಾಧಿಕಾರಿ ಧ್ವನಿಯೊಳಗೆ ವಂಚಿತ ಸಮುದಾಯಗಳ ಧ್ವನಿಗಳನ್ನು ಲೀನಗೊಳಿಸಿಕೊಂಡುಬಿಟ್ಟಿರುತ್ತದೆ ಎಂದು ಅರ್ಥಮಾಡಿಕೊಳ್ಳುವುದಿಲ್ಲ. ಮರುಚಿಂತನೆ ಅಥವಾ ವಿವೇಕಯುತ ಚಿಂತನೆಯೊಂದು ಬಲಶಾಲಿ ಸರ್ಕಾರ, ಅವರ ಅಧೀನದಲ್ಲಿರುವ ಪಕ್ಷಗಳು ಮತ್ತು ರಾಜಕಾರಣಿಗಳ ನಡುವೆ ಏರ್ಪಟ್ಟಿರುವ ತಾರ್ಕಿಕ ಸಂಬಂಧವನ್ನು ಅರ್ಥಮಾಡಿಕೊಳ್ಳುವಂತಿರಬೇಕು.

ರಾಜಕೀಯ ತೀರ್ಮಾನಗಳ ನಿಶಿತ ಪರಿಶೀಲನೆಗಳಿಂದ ಹುಟ್ಟುವ ಸದುದ್ದೇಶದ ಮರುಚಿಂತನೆಗಳು ಸಂವಿಧಾನದ ಪ್ರಜಾತಾಂತ್ರಿಕ ಆಶೋತ್ತರಗಳಿಗೆ ಅನುಗುಣವಾಗಿ ದೇಶದ ಆಡಳಿತವನ್ನು ನಡೆಸುವಂತೆ ರಾಜಕೀಯ ಪಕ್ಷಗಳಿಗೆ ಮತ್ತು ಸಾರ್ವಜನಿಕ ಪ್ರತಿನಿಧಿಗಳಿಗೆ ಸಹಕರಿಸುತ್ತದೆ. ಆದರೆ ತನ್ನ ಸೈದ್ಧಾಂತಿಕ ಸರಿತನದ ಕಾರಣಕ್ಕೆ ತನ್ನ ನಿಲುವಲ್ಲಿ ಎಂದೂ ಯಾವುದೂ ತಪ್ಪಿರುವುದಿಲ್ಲ ಎಂದು ಭಾವಿಸುವ ನಿಲುವುಗಳು,  ಸರಿನೆಲೆಯಿಲ್ಲದೆ ತೆಗೆದುಕೊಂಡ ತಪ್ಪು ನಿರ್ಣಯಗಳಲ್ಲಿ ಸದಾ ತಿದ್ದುಪಡಿಯಾಗಬೇಕೆಂದು ಒತ್ತಾಯಿಸುವ ಸದುದ್ದೇಶದ ಮರುಚಿಂತನೆಗಳಿಗೆ ಸದಾ ಸವಾಲೆಸೆಯುತ್ತಲೇ ಇರುತ್ತದೆ. ಆದರೆ ಸಾಮಾಜಿಕ ಪರಿಸ್ಥಿತಿ ಸುಧಾರಣೆಯಾಗಲು  ಮತ್ತು ಆ ಮೂಲಕ ಪ್ರಜಾತಾಂತ್ರಿಕ ಸಂವಿಧಾನದ ಆಡಳಿತವನ್ನು ಖಾತರಿ ಪಡಿಸಲು ಈ ಪ್ರಕ್ರಿಯೆಯು ಅತ್ಯಗತ್ಯವಾಗಿರುತ್ತದೆ.

 

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top