ಕುಸಿಯುತ್ತಿರುವ ಸಂತಾನೋತ್ಪತ್ತಿ ಫಲವಂತಿಕೆ ಮತ್ತು ಜನಸಂಖ್ಯಾ ಲಾಭ
ಜನಸಂಖ್ಯಾ ಲಾಭವನ್ನು ಪಡೆದುಕೊಳ್ಳಲು ಪರಿಣಾಮಕಾರಿ ನೀತಿಯನ್ನು ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಜನಸಂಖ್ಯೆಯಲ್ಲಾಗುವ ಬದಲಾವಣೆಗೆ ಸಂತಾನೋತ್ಪತ್ತಿ ಫಲವಂತಿಕೆಯಲ್ಲಾಗುವ ಬದಲಾವಣೆ ಮತ್ತು ಮರಣದರದ ಬದಲಾವಣೆಯೆಂಬ ಎರಡು ಭಾಗಗಳಿರುತ್ತವೆ. ಆದರೆ ಯಾವುದೇ ಜನಸಮುದಾಯವು ತನ್ನ ವಯೋಮಾನದ ಲಾಭವನ್ನು ಪಡೆದುಕೊಳ್ಳುವಲ್ಲಿ ನಿರ್ಣಯಾತ್ಮಕ ಪಾತ್ರವನ್ನು ವಹಿಸುವುದು ಸಂತಾನೋತ್ಪತ್ತಿ ಫಲವಂತಿಕೆಯ ಬದಲಾವಣೆಯೇ ಆಗಿದೆ. ಒಬ್ಬ ಮಹಿಳೆಯ ಫಲವಂತಿಕೆಯ ಅವಧಿಯಲ್ಲಿ ಎಷ್ಟು ಮಕ್ಕಳನ್ನು ಹೆರಬಹುದೆಂಬ ಸರಾಸರಿ ಸಂಖ್ಯೆಯನ್ನು ಆಧರಿಸಿದ ಒಟ್ಟಾರೆ ಫಲವಂತಿಕೆಯ ದರ (ಟೋಟಲ್ ಫರ್ಟಿಲಿಟಿ ರೇಟ್- ಟಿಎಫ್‌ಆರ್)ವು ಸತತವಾಗಿ ಕುಸಿಯುತ್ತಿರುವುದೇ ಕಳೆದೆರಡು ದಶಕಗಳಲ್ಲಿ ಭಾರತದಲ್ಲಿ ಜನಸಂಖ್ಯಾ ಹೆಚ್ಚಳದ ನಿಯಂತ್ರಣಕ್ಕೆ ಪ್ರಮುಖ ಕಾರಣವಾಗಿದೆ. ಪರಿಣಾಮವಾಗಿ ಬರಲಿರುವ ದಿನಗಳಲ್ಲಿ ಜನಸಂಖ್ಯಾ ಹೆಚ್ಚಳವು ನಿಧಾನಗತಿಯನ್ನು ಪಡೆಯುವುದರಿಂದ ಮತ್ತು ಅದರ ಜೊತೆಗೆ ದುಡಿಯಬಲ್ಲ ವಯೋಮಾನದ ಜನಸಂಖ್ಯೆಯ ಪ್ರಮಾಣ ಒಟ್ಟಾರೆ ಜನಸಂಖ್ಯೆಯಲ್ಲಿ ಹೆಚ್ಚಾಗಿರುವುದರಿಂದ ಇದು ದೇಶದ ನೀತಿ ನಿರ್ಣಯಗಳ ಮೇಲೆ ಹಲವು ಪ್ರಭಾವಗಳನ್ನು ಬೀರಬಹುದಾದ ಅಂಶವಾಗಿದೆ. ಅತಿ ಹೆಚ್ಚು ಸಂತಾನ ಫಲವಂತಿಕೆಯಿರುವ ರಾಜ್ಯಗಳಲ್ಲೂ ಕಳೆದೆರಡು ದಶಕಗಳಲ್ಲಿ ಫಲವಂತಿಕೆಯ ಪ್ರಮಾಣ ಇಳಿಕೆಯಾಗುತ್ತಿದ್ದರೆ ೨೦೧೭ರ ವೇಳೆಗೆ ೨೨ ಪ್ರಮುಖ ರಾಜ್ಯಗಳಲ್ಲಿ ಪ್ರತಿಮಹಿಳೆಯ ಫಲವಂತಿಕೆಯ ಸರಾಸರಿ ೨.೨ಕ್ಕೆ ಇಳಿದಿದೆ. ಆದರೆ ಲಿಂಗಾನುಪಾತದ ಪ್ರಮಾಣವು ಗಂಡಿನ ಕಡೆಗೇ ವಾಲಿರುವುದರಿಂದ ಅತ್ಯಗತ್ಯ ಅಥವಾ ಬದಲೀ ಫಲವಂತಿಕೆಯ ಪ್ರಮಾಣವು ಮಾತ್ರ ನಿಗದಿಯಾಗಿದ್ದ ಸರಾಸರಿ ೨.೧ಕ್ಕಿಂತ ಹೆಚ್ಚೇ ಇದೆ. ಮೇಲಾಗಿ ಫಲವಂತಿಕೆ, ಮರಣಪ್ರಮಾಣ ಮತ್ತು ವಯೋಮಾನ ಸ್ವರೂಪಗಳಲ್ಲಿ ರಾಜ್ಯ-ರಾಜ್ಯಗಳ ನಡುವೆ ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಸಾಕಷ್ಟು ಭಿನ್ನತೆಗಳಿವೆ. ಟಿಎಫ್‌ಆರ್ ದರವು ಇಳಿಕೆಯಾಗಲು ಹೆಚ್ಚಿದ ಓಡಾಟ, ತಡವಾದ ಮದುವೆಗಳು, ಉನ್ನತ ಶಿಕ್ಷಣಕ್ಕೆ ಹೆಚ್ಚಿದ ಪ್ರವೇಶ ಮತ್ತು ಹೆಚ್ಚಿದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಳು ಪ್ರಮುಖ ಕಾರಣಗಳಾಗಿವೆ.
೨೦೧೭ರ ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್ (ಎಸ್‌ಆರ್‌ಎಸ್)ನ ದತ್ತಾಂಶಗಳು ಹೇಳುವಂತೆ ಫಲವಂತಿಕೆಯ ಇಳಿಕೆಯ ವಿಷಯದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪರಸ್ಪರ ಹಲವಾರು ವಿರುದ್ಧಾಂಶಗಳು ಚಾಲ್ತಿಯಲ್ಲಿವೆ. ಎಲ್ಲಾ ವಯೋಮಾನದ ಗುಂಪುಗಳಲ್ಲೂ ಫಲವಂತಿಕೆಯ ಪ್ರಮಾಣ ಕುಸಿದಿದ್ದರೂ ನಗರ ಪ್ರದೇಶಗಳಲ್ಲಿ ಮಾತ್ರ ಹಿರಿ ವಯಸ್ಸಿನ ವಯೋಮಾನದವರಲ್ಲಿ ಫಲವಂತಿಕೆಯು ಹೆಚ್ಚಿರುವುದು ಕಂಡುಬರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಹಿರಿ ವಯಸ್ಸಿನ ತಾಯಂದಿರ ಅಂದರೆ ೩೫ ವರ್ಷಕ್ಕೂ ಮೇಲ್ಪಟ್ಟ ಮಹಿಳೆಯರ ಫಲವಂತಿಕೆ ಕುಸಿದಿದ್ದರೆ ನಗರ ಪ್ರದೇಶದಲ್ಲಿ ಅದೇ ವಯೋಮಾನದ ಮಹಿಳೆಯರ ಫಲವಂತಿಕೆ ಹೆಚ್ಚಾಗಿದೆ. ಆದರೂ ಒಟ್ಟಾರೆಯಾಗಿ ಮಹಿಳೆಯರ ಫಲವಂತಿಕೆಯು ಇಳಿಕೆಯತ್ತಲೇ ಮುಖಮಾಡಿದೆ. ಮಹಿಳೆಯರ ಫಲವಂತಿಕೆಯ ಇಳಿಕೆಯ ವಿಷಯದಲ್ಲಿ ಶಿಕ್ಷಣವೂ ಪ್ರಮುಖ ಪಾತ್ರ ವಹಿಸಿರುವುದು ಕಂಡುಬಂದಿದೆ. ಸಾಧಾರಣವಾಗಿ ಸುಶಿಕ್ಷಿತ ಮಹಿಳೆಯರಲ್ಲಿ ಫಲವಂತಿಕೆಯ ಪ್ರಮಾಣ ಕಡಿಮೆಯಾಗಿದ್ದರೂ ನಗರ ಪ್ರದೇಶದಲ್ಲಿ ೩೦ ವರ್ಷಕ್ಕೂ ಮೇಲ್ಪಟ್ಟ ಹೆಚ್ಚು ಸುಶಿಕ್ಷಿತ ಮಹಿಳೆಯರ ಫಲವಂತಿಕೆಯು, ಕಡಿಮೆ ಸುಶಿಕ್ಷಿತ ಮಹಿಳೆಯರಿಗಿಂತ ಹೆಚ್ಚಿರುವುದು ಕಂಡುಬಂದಿದೆ. ಇದಕ್ಕೆ ಕಾರಣವೇನೆಂದರೆ ಸಾಪೇಕ್ಷವಾಗಿ ಹೆಚ್ಚಿನ ಶಿಕ್ಷಣವನ್ನು ಹೊಂದಿರುವ ಮಹಿಳೆಯರು ಮದುವೆ ಮತ್ತು ಗರ್ಭಧಾರಣೆಯನ್ನು ತಡವಾಗಿ ಮಾಡಿಕೊಳ್ಳುತ್ತಿದ್ದಾರೆ ಮತ್ತು ಅದರೊಂದಿಗೆ ಉತ್ತಮ ಆರೋಗ್ಯ ಸೇವಾ ಸೌಲಭ್ಯಗಳ ಲಭ್ಯತೆಯೂ ಸಹ ಮಹಿಳೆಯು ತಡವಾಗಿ ಮಕ್ಕಳನ್ನು ಹೊಂದಲು ಸಹಕಾರಿಯಾಗುತ್ತಿದೆ. ಅದೇನೇ ಇದ್ದರೂ ಒಟ್ಟಾರೆಯಾಗಿ ನಗರ ಪ್ರದೇಶಗಳಲ್ಲಿ ನಿರೀಕ್ಷೆಗಿಂತ ವೇಗವಾಗಿ ಫಲವಂತಿಕೆಯು ಇಳಿಕೆಯಾಗುತ್ತಿದೆ. ೨೦೧೭ರ ವೇಳೆಗೆ ನಗರ ಪ್ರದೇಶದ ಟಿಎಫ್‌ಆರ್ ಪ್ರಮಾಣ ಶೇ.೧.೭ಕ್ಕೆ ಇಳಿಕೆಯಾಗಿತ್ತು. ಇದು ಅಪೇಕ್ಷಿತ ಬದಲೀ ಫಲವಂತಿಕೆ ದರಕ್ಕಿಂತ ಕಡಿಮೆಯಾಗಿದೆ. ಬಿಹಾರ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ನಗರಪ್ರದೇಶಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ರಾಜ್ಯಗಳ ಫಲವಂತಿಕೆದರವು ಹೆಚ್ಚುಕಡಿಮೆ ಅಪೇಕ್ಷಿತ ಬದಲಿ ಫಲವಂತಿಕೆ ದರದಷ್ಟಿವೆ ಅಥವಾ ಅದಕ್ಕಿಂತ ಕಡಿಮೆಯಾಗಿದೆ. ಅಷ್ಟು ಮಾತ್ರವಲ್ಲದೆ ಹತ್ತು ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲೂ ಟಿಎಫ್‌ಆರ್ ದರವು ಶೇ.೨ ಕ್ಕಿಂತ ಕಡಿಮೆಯಾಗಿದೆ.
ಭಾರತದಲ್ಲಿನ ವಯೋಮಾನಾಧಾರಿತ ಜನಸಂಖ್ಯಾ ಬದಲಾವಣೆಯು ಭಾರತದಾದ್ಯಂತ ಏಕರೂಪಿಯಾಗಿಲ್ಲ ಎಂಬುದನ್ನು ಜನಸಂಖ್ಯಾ ಮಾನದಂಡಗಳು ಸೂಚಿಸುತ್ತಿವೆ. ಒಟ್ಟಾರೆಯಾಗಿ ಜನಸಂಖ್ಯಾ ಹೆಚ್ಚಳವು ಇಳಿಕೆಯ ದಿಕ್ಕಿನಲ್ಲಿದ್ದರೂ ಕೆಲಸ ಮಾಡಬಲ್ಲ ವಯೋಮಾನzವರ ಪ್ರಮಾಣ ಜನಸಂಖ್ಯೆಯಲ್ಲಿ ಹೆಚ್ಚಿರುವುದು ಭಾರತಕ್ಕೆ ಈ ಜನಸಂಖ್ಯಾ ಲಾಭ ಪಡೆದುಕೊಳ್ಳುವ ಅವಕಾಶವಿರುವುದನ್ನು ಸೂಚಿಸುತ್ತದೆ. ಅಂದರೆ ಒಟ್ಟಾರೆ ಜನಸಂಖ್ಯಾ ಹೆಚ್ಚಳಕ್ಕಿಂತ ಕೆಲಸ ಮಾಡುವ ವಯೋಮಾನದವರ ಜನಸಂಖ್ಯೆ ಹೆಚ್ಚುತ್ತಿದೆಯೆಂದರ್ಥ. ಸಾಮಾನ್ಯವಾಗಿ ಇಂಥಾ ವಯೋಮಾನ ಜನಸಂಖ್ಯೆಯ ಲಾಭವನ್ನು ಪಡೆಯುವ ಅವಕಾಶವು ಒಂದು ದೇಶಕ್ಕೆ ೪೦-೫೦ ವರ್ಷಗಳವರೆಗೆ ಮಾತ್ರ ದಕ್ಕುತ್ತದೆ. ಮತ್ತು ಆ ಅವಕಾಶವನ್ನು ಆಯಾ ದೇಶಗಳು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಮಾತ್ರ ಅದರ ಲಾಭ ಆ ದೇಶಗಳಿಗೆ ದಕ್ಕುತ್ತದೆ. ಇಲ್ಲದಿದ್ದರೆ ಆ ಜನಸಂಖ್ಯಾ ಲಾಭವೇ ಹೊರೆಯಾಗಿಯೂ ಪರಿಣಮಿಸಿಬಿಡುತ್ತದೆ. ಭಾರತದಲ್ಲಿ ಜನಸಂಖ್ಯಾ ವಯೋಮಾನದ ಸ್ವರೂಪವು ಪ್ರದೇಶದಿಂದ ಪ್ರದೇಶಕ್ಕೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುವುದರಿಂದ ಜನಸಂಖ್ಯಾ ಲಾಭದ ಅವಕಾಶಗಳು ಸಹ ಬೇರೆಬೇರೆ ಸಮಯದಲ್ಲೇ ದಕ್ಕುತ್ತವೆ. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಪ್ರಕಾರ ದಕ್ಷಿಣದ ಹಾಗೂ ಪಶ್ಚಿಮದ ಭಾಗಗಳಲ್ಲಿ ವಯಸ್ಸಾದವರ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಈ ವಯೋಮಾನ ಜನಸಂಖ್ಯಾ ಲಾಭದ ಅವಕಾಶವು ಇನ್ನು ಐದು ವರ್ಷಗಳಲ್ಲಿ ಮುಗಿಯಲಿದೆ. ಆದರೆ ಇನ್ನಿತರ ರಾಜ್ಯಗಳಲ್ಲಿ ಅದು ಇನ್ನೂ ೧೦-೧೫ ವರ್ಷಗಳ ಕಾಲ ಮುಂದುವರೆಯಲಿದೆ. ಅತ್ಯಂತ ಹೆಚ್ಚು ಫಲವಂತಿಕೆಯನ್ನು ಹೊಂದಿರುವ ಉತ್ತರದ ರಾಜ್ಯಗಳಲ್ಲಿ ಈ ಅವಕಾಶವು ಇನ್ನೂ ತೆರೆದುಕೊಳ್ಳಬೇಕಿದೆ. ಹೀಗೆ ಭಾರತದ ಬೇರೆಬೇರೆ ಪ್ರದೇಶಗಳಲ್ಲಿ ವಯೋಮಾನ ಬದಲಾವಣೆಯ ಸ್ವರೂಪಗಳು ಬೇರೆಬೇರೆಯಾಗಿರುವುದರಿಂದ ವಯೋಮಾನ ಲಾಭವು ದೀರ್ಘಾವಧಿಯವರೆಗೆ ದಕ್ಕುವ ಅವಕಾಶವಿದೆ.
ಈ ಜನಸಂಖ್ಯಾ ಲಾಭಾವಕಾಶದಿಂದಾಗಿ ಅವಲಂಬನಾ ಪ್ರಮಾಣದಲ್ಲಿ ಸುಧಾರಣೆಯಾಗುವುದರಿಂದ ಕೆಲಸ ಮಾಡುವ ವಯೋಮಾನದ ಜನಸಂಖ್ಯೆಯ ಹೆಚ್ಚಳದಿಂದಾಗಿ ಅಭಿವೃದ್ಧಿಯಲ್ಲಿ ಹೆಚ್ಚಳ ಕಂಡುಬರುತ್ತದೆಂಬ ಊಹಾಸಿದ್ಧಾಂತಕ್ಕೆ ಅದು ದಾರಿ ಮಾಡಿಕೊಡುತ್ತದೆ. ಆದರೆ ನಮ್ಮ ದೇಶದ ನೀತಿಶಾಸನಕರ್ತರು ಈ ವಯೋಮಾನ ಅವಕಾಶಗಳ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುವಂತೆ ಮಾನವ ಸಂಪನ್ಮೂಲದ ನಿರ್ಮಾಣವನ್ನು ನಿರ್ಮಿಸುವಲ್ಲಿ ತೀವ್ರವಾದ ಪ್ರಯತ್ನಗಳನ್ನು ಮಾಡುತ್ತಿದ್ದಾರೆಯೇ? ಹೆಚ್ಚುತ್ತಿರುವ ಶ್ರಮಿಕ ಶಕ್ತಿಗೆ ಸೂಕ್ತವಾದಷ್ಟು ಸಂಖ್ಯೆಯ ಉದ್ಯೋಗಾವಕಾಶಗಳನ್ನು ನಿರ್ಮಿಸುವುದರ ಜೊತೆಜೊತೆಗೆ ಮೂಲಭೂತ ಸೌಕರ್ಯಗಳಲ್ಲಿ, ಆರೋಗ್ಯ ಮತ್ತು ಶೈಕ್ಷಣಿಕ ಅರ್ಹತೆಯನ್ನು ಲಭ್ಯಗೊಳಿಸುವಲ್ಲಿ, ಕೆಲಸಗಾರರ ಕೌಶಲ್ಯವನ್ನು ಹೆಚ್ಚಿಸುವುದರಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡದೆ ಈ ವಯೋಮಾನ ಜನಸಂಖ್ಯಾ ಲಾಭವನ್ನು ದೇಶವು ಪಡೆದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಲಭ್ಯವಿರುವ ಶ್ರಮಶಕ್ತಿಯನ್ನು ಹೇಗಿದೆಯೋ ಹಾಗೆಯೇ ಒಳಗೊಂಡರೆ ಅಧಿಕ ಅಭಿವೃದ್ಧಿಯನ್ನು ಹೊಂದಲು ಸಾಧ್ಯವಿಲ್ಲ.
ಹೀಗಾಗಿ ಈ ವಯೋಮಾನ ಜನಸಂಖ್ಯೆಯ ಲಾಭವನ್ನು ಪಡೆಯಬೇಕೆಂದರೆ ಶ್ರಮಿಕರಾಗುವ ವಯಸ್ಸಿನ ಪ್ರತಿಯೊಬ್ಬರಿಗೂ ಆದಾಯತರುವ ಉದ್ಯೋಗಗಳನ್ನು ಕಲ್ಪಿಸುವುದು ಮತ್ತು ಯಾರು ಈಗಾಗಲೇ ಶ್ರಮಶಕ್ತಿಯ ಭಾಗವಾಗಿದ್ದಾರೋ ಅವರು ತಮ್ಮ ಕೆಲಸಗ ಜಾಗದಲ್ಲಿ ಹೆಚ್ಚು ಉತ್ಪಾದಾಯಕವಾಗುವಂತೆ ಸೂಕ್ತ ಶಿಕ್ಷಣ ಮತ್ತು ಕೌಶಲ್ಯಗಳನ್ನು ಒದಗಿಸುವುದು ಅತ್ಯಗತ್ಯವಾಗಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಇಂದು ನಿರುದ್ಯೋಗವು ಕಳೆದ ೪೫ ವರ್ಷಗಳಲ್ಲೇ ಅತ್ಯಧಿPವಾಗಿ ಶೇ.೬.೧ರಷ್ಟನ್ನು ಮುಟ್ಟಿರುವುದು ಅಗತ್ಯವಿರುವಷ್ಟು ಉದ್ಯೋಗಗಳು ಇಲ್ಲದಿರುವುದನ್ನು ಸೂಚಿಸುತ್ತಿದೆ. ಮಾತ್ರವಲ್ಲದೆ ಲಭ್ಯವಿರುವ ಶ್ರಮಶಕ್ತಿಯು ಉದ್ಯೋಗಾರ್ಹತೆಗಳು ಕಳಪೆಯಾಗಿರುವುದಕ್ಕೆ ಅವರ ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯಗಳ ಗುಣಮಟ್ಟದಲ್ಲಿ ಕೊರೆತೆಯಿರುವುದನ್ನೂ ಸೂಚಿಸುತ್ತದೆ. ಇವು ನಮ್ಮ ದೇಶಕ್ಕೆ ಲಭ್ಯವಿರುವ ವಯೋಮಾನ ಜನಸಂಖ್ಯೆಯ ಲಾಭವನ್ನು ಪಡೆದುಕೊಳ್ಳಲು ಮಾಡಬೇಕಿರುವಷ್ಟನ್ನು ನಾವು ಮಾಡುತ್ತಿಲ್ಲವೆಂಬುದನ್ನು ಸೂಚಿಸುತ್ತದೆ.