ISSN (Print) - 0012-9976 | ISSN (Online) - 2349-8846

ಶೇ.೧೦ರ ಮೀಸಲಾತಿ - ಹಸುಮುಖದ ಹುಲಿರಾಯ!

ಮೇಲ್ಜಾತಿಗಳಲ್ಲಿನ ಆರ್ಥಿಕವಾಗಿ ಹಿಂದುಳಿದ ವಿಭಾಗಗಳಿಗೆ ಶೇ.೧೦ರಷ್ಟು ಮೀಸಲಾತಿಯನ್ನು ನೀಡುವ ಕ್ರಮವು ಸಾಮಾಜಿಕ ನ್ಯಾಯ ತತ್ವಕ್ಕಿರುವ ನೈತಿಕ ತಳಹದಿಯನ್ನೇ ಅಮಾನ್ಯಗೊಳಿಸುತ್ತದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಮೇಲ್ಜಾತಿಯೊಳಗಿನ ಆರ್ಥಿಕವಾಗಿ ಹಿಂದುಳಿದ ವಿಭಾಗಗಳಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಶೇ.೧೦ರಷ್ಟು ಮೀಸಲಾತಿಯನ್ನು ನೀಡುವ ಮಸೂದೆಯು ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಅನುಮೋದನೆಗೊಂಡಿದೆ. ಈ ಮಸೂದೆಯನ್ನು ಪಾಸುಮಾಡಿಸಿಕೊಳ್ಳುವಲ್ಲಿ ಕೇಂದ್ರಸರ್ಕಾರವು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯು ಬರಲಿರುವ ೨೦೧೯ರ ಸಾರ್ವತ್ರಿಕ ಚುನಾವಣೆಯು ಉಂಟುಮಾಡಿರುವ ಅನಿವಾರ್ಯತೆಗಳ ಭಾಗವಾಗಿಯೇ ಇದೆ. ಹೀಗಾಗಿಯೇ ಬಹುಪಾಲು ಪಕ್ಷಗಳೂ ಈ ಮಸೂದೆಯನ್ನು ವಿರೋದಿಸುವುದು ರಾಜಕೀಯವಾಗಿ ಲಾಭದಾಯಕವಲ್ಲವೆಂದು ಪರಿಗಣಿಸಿದವು. ಅದರೂ ಕೆಲವು ಪಕ್ಷಗಳು ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ ರೀತಿಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿವೆ. ಸರ್ಕಾರವು ಈ ಮಸೂದೆಗೆ ಸಂಸತ್ತಿನಲ್ಲಿ ಅಂತಿಮ ಅನುಮೋದನೆಯನ್ನು ಪಡೆಯುವ ಮುನ್ನ ಮಾಡಬೇಕಿದ್ದ ಚರ್ಚೆಗೆ ಸಾಕಷ್ಟು ಅವಕಾಶವನ್ನು ಕೊಡಲಿಲ್ಲವೆಂಬ ನೆಲೆಯಲ್ಲಿ ಅವರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಅದೇರೀತಿ ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯನ್ನು ನಿಷ್ಕರ್ಷೆ ಮಾಡಲು ಸರ್ಕಾರವು ನಿಗದಿ ಪಡಿಸಿದ ಮಾನದಂಡಗಳ ಬಗ್ಗೆಯೂ ಆಕ್ಷೇಪಣೆಯು ವ್ಯಕ್ತವಾಯಿತು. ಒಂದು ಸಾಂವಿಧಾನಿಕ ಅಯೋಗವು ಈ ಬಗ್ಗೆ ಸೂಕ್ತ ಮತ್ತು ಸಮಗ್ರ ದಾಖಲಾತಿಗಳನ್ನು ಸಂಗ್ರಹಿಸದೆ ಸರ್ಕಾರವು ತನ್ನಂತೆ ತಾನೇ ಮೀಸಲತಿಯು ಶೇ.೧೦ರಷ್ಟಿರಬೇಕೆಂಬ ಪ್ರಮಾಣವನ್ನು ಹೇಗೆ ನಿಗದಿ ಮಾಡಿತು? ಕಾಯಿದೆಯಲ್ಲಿ ಈ ಎಲ್ಲಾ ಲೋಪಗಳಿದ್ದು ದೇಶದ ಸರ್ವೋಚ್ಚ ನ್ಯಾಯಾಲಯದ ಮಂಜೂರಿಯ ನಿರಿಕ್ಷೆಯಲ್ಲಿರುವುದು ನಿಜವಾದರೂ, ಈ ಸಂದರ್ಭದಲ್ಲಿ ಈ ಶೇ.೧೦ರ ಮೀಸಲಾತಿಂi ಕಾಯಿದೆಯಿಂದ ಯಾವ ಬಗೆಯ ಅನುಕೂಲಗಳು ದಕ್ಕಬಹುದು ಎಂಬುದನ್ನೂ ಅವಲೋಕನ ಮಾಡುವ ಅಗತ್ಯವಿದೆ.

ಒಂದು ವೇಳೆ ಈ ಶಾಸನಕ್ಕೆ ಕೋರ್ಟಿನ ಅನುಮೋದನೆ ದೊರೆತು ಸರ್ಕಾರವು ಇದನ್ನು ಅನುಷ್ಟಾನಗೊಳಿಸಿದರೆ ಮೇಲ್ಜಾತಿಗಳಲ್ಲಿರುವ ಬಡವರಿಗೆ ಇದು ಅನುಕೂಲ ಮಾಡಿಕೊಡಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಅಲ್ಲದೆ ಮೇಲ್ಜಾತಿಯವರು ವೃತ್ತಿಶಿಕ್ಷಣಕ್ಕೆ ಪ್ರವೇಶ ಪಡೆದುಕೊಳ್ಳುವ ಸಲುವಾಗಿ ತಾವು ಪರಿಶಿಷ್ಟ ಜಾತಿ ಅಥವಾ ಪಂಗಡಗಳಿಗೆ ಸೇರಿದವರೆಂದು ಸುಳ್ಳು ಪ್ರಮಾಣಪತ್ರ ಪಡೆದುಕೊಳ್ಳುವ ಹತಾಷೆಯನ್ನು ಈ ಮೀಸಲಾತಿ ನಿವಾರಿಸುತ್ತದೆಂದೂ ಕೆಲವರು ನಿರೀಕ್ಷಿಸುತ್ತಿದ್ದಾರೆ. ಅಷ್ಟುಮಾತ್ರವಲ್ಲದೆ ಎಸ್‌ಸಿ ಮತ್ತು ಎಸ್‌ಟಿ ಎಂದು ಪ್ರಮಾಣಪತ್ರ ಪಡೆದುಕೊಳ್ಳಲು ಎಸ್‌ಸಿ ಮತ್ತು ಎಸ್‌ಟಿ ಕುಟುಂಬಗಳಿಂದ ಸವರ್ಣ ಜಾತಿಯವರು ದತ್ತಕವಾಗುವುದನ್ನೂ ಈ ಕಾಯಿದೆಯು ತಡೆಯಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಈ ಬಗೆಯಲ್ಲಿ ಮೋಸಪೂರಿತವಾಗಿ ತಮ್ಮ ಸ್ವ ನಿರ್ವಚನ ಮಾಡಿಕೊಳ್ಳಲು ಮುಂದಾಗುವ ಅನಿವಾರ್ಯತೆಯನ್ನು ಈ ಕಾಯಿದೆಯು ಹೋಗಲಾಡಿಸಬಹುದು. ವಿಪರ್ಯಾಸವೆಂದರೆ, ಶೇ.೧೦ ಕೋಟಾವು ಸವರ್ಣೀಯರು ತಮ್ಮ ಅಧಿಕೃತ ಮೇಲ್ಜಾತಿ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ನೀಡಿದ್ದರಿಂದ ನ್ಯಾಯಾಲಯಗಳಲ್ಲಿ ಆಗಬಹುದಾಗಿದ್ದ ಅಪಮಾನಗಳಿಂದ ಅವರು ಬಚಾವಾಗಬಹುದು. ಮೀಸಲಾತಿಯ ಫಲಾನುಭವಿಗಳಾದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಂತೆ ತಾವು ಸಹ ಮೀಸಲಾತಿ ಬಿರಾದರಿಗೆ ಸೇರಬೇಕೆಂದು ಮೇಲ್ಜಾತಿಗಳಲ್ಲಿದ್ದ ಆಸ್ಥೆಯನ್ನು ಶೇ.೧೦ರ ಮೀಸಲಾತಿ ಕೋಟಾ ಇನ್ನಷ್ಟು ಗಟ್ಟಿಗೊಳಿಸಲಿದೆಯೆಂದೂ ಸಹ ನಿರೀಕ್ಷಿಸಲಾಗಿದೆ.

ಕೊನೆಯದಾಗಿ ಮತ್ತು ಅತಿಮುಖ್ಯವಾಗಿ ದೇಶದ ಅನೈಕ್ಯತೆಗೆ ಮತ್ತು ಜಾತೀಯತೆಯ ಮುಂದುವರೆಕೆಗೆ ಮೀಸಲಾತಿಯನ್ನು ಹೊಣೆಮಾಡುವ ಮೇಲ್ಜಾತಿಗಳ ತಿಳವಳಿಕೆಯನ್ನು ಶೇ.೧೦ರ ಮೀಸಲಾತಿ ತಡೆಗಟ್ಟುತ್ತದೆ. ಈ ಹಿಂದಿನಿಂದ ಮೇಲ್ಜಾತಿಗಳು ಮಾಡಿಕೊಂಡು ಬಂದಂತೆ ಇನ್ನು ಮುಂದೆಯೂ ಮೀಸಲಾತಿಯನ್ನು ನಿಂದಿಸಿದರೆ ತಮಗೆ ತಾವೆ ನೈತಿಕ ಘಾಸಿ ಮಾಡಿಕೊಂಡಂತಾಗುತ್ತದೆ.

ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು  ಶೇ.೧೦ ಕೋಟಾಗೆ ಸಮ್ಮತಿಸುವ ಮೂಲಕ ಸವರ್ಣೀಯರಿಗೆ ಅಥವಾ ಮೇಲ್ಜಾತಿಗಳಿಗೆ ಮೀಸಲಾತಿ ನೀಡುವ ಶಾಸನದಲ್ಲಿರುವ ಆಳವಾದ ಸಮಸ್ಯೆಗಳನ್ನು ನಾವು ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಮೇಲ್ಜಾತಿಗಳಿಗೆ ಮೀಸಲಾತಿ ನೀಡುವ  ಶೇ.೧೦ ಕೋಟಾ ನೀತಿಯು ಮೂಲಭೂತವಾಗಿ ಪರಿಶಿಷ್ಟ ಜಾತಿಗಳ ಅನುಕೂಲಕ್ಕೆಂದು ರೂಪಿಸಲಾದ ಮೀಸಲಾತಿ ನೀತಿಯ  ಬುನಾದಿಗೆ ತದ್ವಿರುದ್ಧವಾಗಿದೆ. ಪರಿಶಿಷ್ಟ ಜಾತಿಗೆ ಮೀಸಲಾತಿ ನೀಡಲು ಮೂಲಭೂತ ಕಾರಣವೇ ಅವರು ಸಮಾಜದಿಂದ ಅಸ್ಪೃಷ್ಯತೆಗೆ ಗುರಿಯಾಗುತ್ತಿರುವುದು. ಆದರೆ ಶೇ.೧೦ರ ಕೋಟಾದ ಫಲಾನುಭವಿಗಳು ಆ ಬಗೆಯ ಯಾವುದೇ ಅನುಭವಗಳಿಗೆ ತುತ್ತಾಗದೆಯೇ ಕೇವಲ ಆರ್ಥಿಕ ಮಾನದಂಡದಿಂದಲೇ ಮೀಸಲಾತಿಯ ಲಾಭವನ್ನು ಪಡೆದುಕೊಂಡುಬಿಡುತ್ತಾರೆ. ದೌರ್ಜನ್ಯ ಅಥವಾ ಸಾಮಾಜಿಕ ಬಹಿಷ್ಕಾರದಂಥ ಸಮಾಜದಿಂದ ಹೇರಲ್ಪಟ್ಟ ನಾಗರಿಕತೆಯ ಹಿಂಸಾಚಾರಕ್ಕೆ ಬಲಿಯಾಗಿ ವೈಕಲ್ಯಗಳಿಗೆ ಗುರಿಯಾದ ಅನುಭವವೇ ಇಲ್ಲದೆ ಮೇಲ್ಜಾತಿಗಳು ಮೀಸಲಾತಿಯ ಲಾಭವನ್ನು ಪಡೆದುಕೊಳ್ಳುತ್ತಾರೆ. ಮೇಲ್ಜಾತಿ ಫಲಾನುಭವಿಗಳು ಬಡತನದ ಕಾರಣದಿಂದ ಅವಕಾಶ ವಂಚಿತರಾಗಿರಬಹುದು. ಆದರೆ ಮೀಸಲಾತಿಯನ್ನು ಪಡೆದುಕೊಳ್ಳಲು ಕೇವಲ ಭೌತಿಕ ದಾರಿದ್ರ್ಯವೊಂದನ್ನೇ ಮಾನದಂಡವಾಗಿಸಿಕೊಳ್ಳುವ ಮೂಲಕ ಯಾವ ಮಾನದಂಡದಿಂದ ಎಸ್‌ಸಿ ಸಮುದಾಯಗಳಿಗೆ ಮೀಸಲತಿಯನ್ನು ನೀಡಲಾಯಿತೋ ಆ ತಳಹದಿಯನ್ನು ದುರ್ಬಲಗೊಳಿಸಿದಂತಾಗುತ್ತದೆ. ಹೀಗಾಗಿಯೇ ಸಂವಿಧಾನದಲ್ಲಿ ಅಸ್ಪೃಷ್ಯತೆಯನ್ನು ನಿಷೇಧಿಸಲಾದರೂ ಅಸ್ಪೃಷ್ಯತೆಯ ಆಚರಣೆಗಳು ಹಲವು ರೂಪದಲ್ಲಿ ಸಮಾಜದಲ್ಲಿ ಮುಂದುವರೆಯುತ್ತಿದ್ದ ಕಾರಣಕ್ಕಾಗಿಯೇ ಎಸ್‌ಸಿ ಮೀಸಲಾತಿಯನ್ನು ಸಮರ್ಥಿಸಿಕೊಳ್ಳಲಾಯಿತು.

ಜಾತಿ ಪೂರ್ವಗ್ರಹಳಿಂದಾಗಿ ಎಸ್‌ಸಿ ಸಮುದಾಯಗಳ ಪರವಾಗಿ ರೂಪಿಸಲಾದ ಕಾರ್ಯಕ್ರಮಗಳಿಗೆ ತಡೆಯೊಡ್ಡುವ ಅಥವಾ ಮುಂದೂಡುವ  ಸಾಧ್ಯತೆಯನ್ನು ಇಲ್ಲಾವಾಗಿಸುವ ಉದ್ದೇಶದಿಂದಲೇ ಎಸ್‌ಸಿ ಸಮುದಾಯಗಳಿಗೆ ಸ್ಥಾನಾವಕಾಶಗಳಲ್ಲಿ ಮೀಸಲಾತಿಯನ್ನು ಅಥವಾ ನಿರ್ದಿಷ್ಟ ಕೋಟಾವನ್ನು ನಿಗದಿಪಡಿಸಲಾಯಿತೆಂಬುದನ್ನು ಗ್ರಹಿಸುವುದು ಇಲ್ಲಿ ತುಂಬಾ ಮುಖ್ಯ. ಎಸ್‌ಸಿ ಸಮುದಾಯಗಳಿಗೆ ಮೀಸಲಾತಿಯ  ಲಾಭ ದಕ್ಕುವಂತಾಗಲು ನೀತಿಯ ಅನುಷ್ಠಾನದಲ್ಲಿ ಪ್ರಾಮಾಣಿಕತೆಯನ್ನು ಖಾತರಿಪಡಿಸಿಕೊಳ್ಳಬೇಕೆಂಬ ಮತ್ತು ಜಾತಿ ಪೂರ್ವಗ್ರಹಗಳಿಂದ ಉಂಟಾಗಬಹುದಾದ ವಂಚನೆಗಳನ್ನು ತಡೆಗಟ್ಟಬೇಕೆಂಬ ಮೂಲಭೂತ ಉದ್ದೇಶದಿಂದಲೇ ಎಸ್‌ಸಿ ಸಮುದಾಯಗಳಿಗೆ ನಿರ್ದಿಷ್ಟ ಕೋಟಾವನ್ನು ನಿಗದಿ ಪಡಿಸುವ ನೀತಿ ಜಾರಿಯಾಯಿತು. ಹೀಗಾಗಿಯೇ ಜಾತಿ ಪೂರ್ವಗ್ರಹವನ್ನು ಹಿಮ್ಮೆಟ್ಟಿಸಲು ಕೇವಲ ಉತ್ತೇಜನಕಾರಿ ಕ್ರಮಗಳು ಮಾತ್ರ ಸಾಲದಾಗುತ್ತದೆಂದು ಪರಿಗಣಿಸಲಾಯಿತು. ನಮಗೆ ತಿಳಿದಿರುವಂತೆ ಉತ್ತೇಜನ ಕ್ರಮಗಳು (ಅಫಿರ್‌ಮೇಟೀವ್ ಆಕ್ಷನ್ಸ್) ಸಮಾನ ಅವಕಾಶಗಳನ್ನು ಕಲ್ಪಿಸಿಕೊಡಬಹುದೇ ವಿನಃ ಪರಿಣಾಮದಲ್ಲಿ ಸಮಾನತೆಯನ್ನೇನೂ ಖಾತರಿ ಮಾಡುವುದಿಲ್ಲ. ಹೀಗಾಗಿಯೇ ಸಂವಿಧಾನವು ಉತ್ತೇಜನಾ ಕ್ರಮಗಳನ್ನು ದಾಟಿ ನಿರ್ದಿಷ್ಟ ಕೋಟಾ ಪದ್ಧತಿಯನ್ನು ಅಳವಡಿಸಿತು.

ಈ ವೀಶಾಲ ವಾಸ್ತವಿಕ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡಾಗ, ಮೇಲೆ ವಿವರಿಸಿದಂಥಾ ಯಾವ ವಾಸ್ತವಿಕ ಅನಿವಾರ್ಯತೆಗಳು ಶೇ.೧೦ ಕೋಟಾವನ್ನು ನಿಗದಿ ಮಾಡುವಂತೆ ಕಡ್ಡಾಯ ಮಾಡಿತೆಂದು ಸರ್ಕಾರವನ್ನು ಪ್ರಶ್ನಿಸಬೇಕಿದೆ. ಸಮಾಜದಲ್ಲಿರುವ ಯಾವ ಪೂರ್ವಗ್ರಹದ ಸ್ವರೂಪಗಳು ಈ ಶೇ.೧೦ ಕೋಟಾವನ್ನು ಕಡ್ಡಾಯ ಮಾಡುವಂತೆ ಮಾಡಿದವು? ಸವರ್ಣೀಯರ  ಪರವಾದ ಈ ಕೋಟಾವನ್ನು ಜಾರಿಗೆ ಮಾಡುವುದಕ್ಕೆ ಸವರ್ಣೀಯರು ಜಾತಿ ಪೂರ್ವಗ್ರಹಗಳನ್ನು ಅನುಭವಿಸುತ್ತಿದ್ದಾರೆ ಎಂಬುದು ಖಂಡಿತವಾಗಿಯೂ ಕಾರಣವಾಗಲಾರದು. 

ಅಸ್ಪೃಷ್ಯತೆಯ ಆಚರಣೆಯಲ್ಲಿ ಒಂದು ಬಗೆಯ ತಾರತಮ್ಯ ಅಥವಾ ಅನ್ಯಾಯದ ಅಂಶಗಳು ಬೇರುಬಿಟ್ಟಿರುತ್ತವೆ. ಆದರೆ ಆರ್ಥಿಕ ಹಿಂದುಳಿದಿರುವಿಕೆಯ ಬೇರುಗಳು ಸವರ್ಣೀಯರಿಗೆ ಉದ್ಯೋಗಗಳನ್ನು ನೀಡಲಾಗದ ವ್ಯವಸ್ಥೆಯ ಅಸಮರ್ಥತೆಯಲ್ಲಿದೆ. 

ಅವಕಾಶಗಳ ಕೊರತೆಯುಂಟಾಗಿರುವುದು ಅಸ್ಪೃಷ್ಯತೆಯ ಕಾರಣದಿಂದಲ್ಲ. ಬದಲಿಗೆ ಪ್ರಭುತ್ವ ಮತ್ತು ಮಾರುಕಟ್ಟೆಯು ಅರ್ಹರಿಗೆ ಮತ್ತು ಅಗತ್ಯವಿರುವವರಿಗೆ ಸಾಕಷ್ಟು ಉದ್ಯೋಗಗಳನ್ನು ನೀಡಲು ಅಸಮರ್ಥವಾಗಿರುವುದರಿಂದ ಉದ್ಯೋಗಾವಕಾಶಗಳು ಸಿಗುತ್ತಿಲ್ಲ. ಸಂವಿಧಾನದಲ್ಲಿರುವ ಹಲವಾರು ಪರಿಚ್ಚೇಧಗಳು ಮತ್ತು ಕಂಡಿಕೆಗಳು ಎಸ್‌ಸಿ ಸಮುದಾಂiಕ್ಕೆ ನೀಡಲಾಗಿರುವ ಮೀಸಲಾತಿಯನ್ನು ಆ ಸಮುದಾಯವು ಅನುಭವಿಸುತ್ತಿರುವ ಸಮಗ್ರ ಹಿಂದುಳಿದಿರುವಿಕೆಯನ್ನು ಆಧರಿಸಿ ವರ್ಗೀಕರಣ ಮಾಡಿದೆಯೇ ವಿನಃ ಸವರ್ಣ ಮೀಸಲಾತಿಯಲ್ಲಿ ಮಾಡಿರುವಂತೆ ಕೆಲವೇ ಆಯ್ದ ಹಿಂದುಳಿದಿರುವಿಕೆ ಮಾನದಂಡಗಳ ಆಧಾರದಲ್ಲಲ್ಲ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top