ISSN (Print) - 0012-9976 | ISSN (Online) - 2349-8846

ಕಡಲ ತೀರದ ಮೇಲೆ ಹೊಸ ಆಕ್ರಮಣ

ಕೇವಲ ಲಾಭದ ಉದ್ದೇಶದಿಂದ ಜಾರಿಮಾಡಲಾಗುತ್ತಿರುವ ೨೦೧೮ರ ಕಡಲತೀರ ನಿಯಂತ್ರಣಾ ವಲಯ ನೀತಿಯು  ಪರಿಸರದ ಮತ್ತು ಮೀನುಗಾರರ ಹಿತಾಸಕ್ತಿಯನ್ನು ಬಲಿಕೊಡುತ್ತಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಕಡಲತೀರ ನಿಯಂತ್ರಣಾ ವಲಯ-೨೦೧೮ರ ಅಧಿಸೂಚನೆಗೆ ಕೇಂದ್ರದ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯವು ಅನುಮೋದನೆ ನೀಡಿದೆ. ಈವರೆಗೆ ಈ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಬಗೆಯ ಅಭಿವೃದ್ಧಿ ಚಟುವಟಿಕೆಗಳ ವಿಸ್ತರಣೆ ಮಾಡುವುದಕ್ಕೆ ತೀವ್ರ  ಸ್ವರೂಪದ ಹಲವಾರು ನಿರ್ಬಂಧಗಳಿದ್ದವು. ಈ ಅಧಿಸೂಚನೆಯ ಮೂಲಕ ಅಂಥಾ ನಿರ್ಭಂಧಗಳನ್ನೆಲ್ಲಾ ಸಡಿಲಗೊಳಿಸಲಾಗಿದೆ. ಈ ಹೊಸ ನೀತಿಯಲ್ಲಿ ಸಡಿಲಗೊಂಡಿರುವ ಅಂಶಗಳೆಂದರೆ-ತೀರ ನಿಯಂತ್ರಣಾ ವಲಯದ (ಕೋಸ್ಟಲ್ ರೆಗ್ಯುಲೇಷನ್ ಜೋನ್- ಸಿಆರ್‌ಜೆಡ್)ಮತ್ತು ಅಭಿವೃದ್ಧಿ ಶೂನ್ಯ ಪ್ರದೇಶದ (ನೋ ಡೆವಲಪ್‌ಮೆಂಟ್ ಜೋನ್-ಎನ್‌ಡಿಜೆಡ್) ಮಿತಿಯನ್ನು ಕಡಿಮೆ ಮಾಡಿರುವುದು ಮತ್ತು ಜನಸಂಖ್ಯಾ ಸಾಂದ್ರತೆಯನ್ನು ಆಧರಿಸಿ ಸಿಆರ್‌ಜೆಡ್‌ಗಳನ್ನು ಮರು ವರ್ಗೀಕರಣ ಮಾಡಿರುವುದು. ಇನ್ನುಮುಂದೆ ಸಿಆರ್‌ಜೆಡ್ ವರ್ಗೀಕರಣದಲ್ಲಿ ತೀವ್ರ ಸೂಕ್ಷ್ಮ ಪ್ರದೇಶವೆಂದು ವರ್ಗೀಕರಣವಾಗಿರುವ ಪ್ರದೇಶದಲ್ಲೂ ರಕ್ಷಣಾ ಮತ್ತು ಸಾರ್ವಜನಿಕ ಸೌಕರ್ಯಗಳಿಗೆ ಸಂಬಂಧಪಟ್ಟ ವ್ಯೂಹಾತ್ಮಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಕ್ಕೆ  ಅಡ್ಡಿಯಿರುವುದಿಲ್ಲ. ಆದರೆ ಮೀನುಗಾರನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಈ ಹೊಸ ಸಿಆರ್‌ಜೆಡ್ ಅಧಿನಿಯಮಗಳು ಪರಸರ ನ್ಯಾಯ ಮತ್ತು ವಿತರಣಾ ನ್ಯಾಯದ ದೃಷ್ಟಿಯಲ್ಲಿ ಏನು ಹೇಳುತ್ತದೆ?

ಅತಿ ಸೂಕ್ಷ್ಮ ತೀರ ಪ್ರದೇಶಗಳಲ್ಲಿ ದೊಡ್ಡ ಮಟ್ಟದ ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಈ ಹೊಸ ಸಿಅರ್‌ಜೆಡ್ ನೀತಿಯು ಅಸ್ಥಿತ್ವದಲ್ಲಿರುವ ಮಾನವ-ಪರಿಸರದ ಸಂಬಂಧಗಳನ್ನು ಬುಡಮೇಲು ಮಾಡುತ್ತದೆ. ಇದು ಈಗಾಗಲೇ ಹದಗೆಡುತ್ತಾ ಸಾಗಿರುವ ಸಮುದ್ರ ಪ್ರದೇಶದ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಹಾಳುಗೆಡವುದಲ್ಲದೆ ಸಮುದ್ರ ಸಂಪನ್ಮೂಲಗಳ ಮೇಲೆ ಆಧಾರಪಟ್ಟಿರುವ, ಅದರಲ್ಲೂ ವಿಶೇಷವಾಗಿ, ಸಣ್ಣಪುಟ್ಟ ಮೀನುಗಾರರ ಜೀವನೋಪಾಯಗಳನ್ನೇ ಅಸ್ತವ್ಯಸ್ತಗೊಳಿಸುತ್ತದೆ. ಹವಮಾನದಲ್ಲಾಗುತ್ತಿರುವ ಬದಲಾವಣೆಗಳಿಂದಾಗಿ ತಗ್ಗುಪ್ರದೇಶದಲ್ಲಿ ವಾಸಮಾಡುವ ಜನಸಮುದಾಯಗಳ ಜೀವನವು ಜಗತ್ತಿನೆಲ್ಲೆಡೆ ಅಪಾಯಕ್ಕೀಡಾಗಿರುವ ಸಮಯದಲ್ಲಿ ಜಾರಿಯಾಗುತ್ತಿರುವ ಈ ಹೊಸ ನೀತಿಯು ಆ ಸಮುದಾಯಗಳನ್ನು ಮತ್ತಷ್ಟು ಆತಂಕಕ್ಕೀಡು ಮಾಡುತ್ತಿದೆ. ಭಾರತದ ಪಶ್ಚಿಮ ಕರಾವಳಿ ಪ್ರದೇಶಗಳು ಮತ್ತು ಪೂರ್ವ ಕರಾವಳಿಯ ನದಿವಲಯದ ಆಸುಪಾಸಿನ ಪ್ರದೇಶಗಳು ಈ ನಿಟ್ಟಿನಲ್ಲಿ ಅತಿ ಹೆಚ್ಚು ಅಪಾಯಕ್ಕೆ ಪಕ್ಕಾಗುವ ಪ್ರದೇಶಗಳಾಗಿವೆ. ಹಾಗಿದ್ದಲ್ಲಿ ಈ ಹೊಸ ಅಧಿಸೂಚನೆಯು ಯಾರ ಹಿತಾಸಕ್ತಿಯನ್ನು ಪೋಷಿಸಲಿದೆ?

ಸಾರಾಂಶದಲ್ಲಿ ಈ ಹೊಸ ನೀತಿಯು ಕೇಂದ್ರದ ಮಹತ್ವಾಕಾಂಕ್ಷಿ ಸಾಗರಮಾಲ ಯೋಜನೆಯನ್ನು ಯಾವುದೇ ಅಡೆತಡೆಯಿಲ್ಲದೆ ಜಾರಿಗೆ ತರುವ ಉದ್ದೇಶವನ್ನಷ್ಟೇ ಹೊಂದಿದೆ. ಈ ಸಾಗರಮಾಲ ಯೋಜನೆಯು ಅಂದಾಜು ೮.೫ ಲಕ್ಷ ಕೋಟಿ ರೂ.ಗಳಷ್ಟು ವೆಚ್ಚದಲ್ಲಿ ಭಾರತದ ಸಮುದ್ರ ತೀರದುದ್ದಕ್ಕೂ ಸರಣಿ ವಾಣಿಜ್ಯ ಉದ್ದಿಮೆಗಳನ್ನೂ ಹಾಗೂ ಮೂಲಭೂತ ಸೌಕರ್ಯ ಯೋಜನೆಗಳನ್ನೂ, ರಿಯಲ್ ಎಸ್ಟೇಟ್, ಮತ್ತು ಪ್ರವಾಸೋದ್ಯಗಳ ಜೊತೆಜೊತೆಗೆ ಎಟಕುವ ದರದ ವಸತಿಯನ್ನೂ ನಿರ್ಮಿಸುವ ಉದ್ದೇಶಗಳನ್ನು ಹೊಂದಿವೆ. ಈ ನೀತಿಯಲ್ಲಿ ಅಳವಡಿಸಿಕೊಂಡಿರುವ ಉಪಭೋಗಿ ಮಾನದಂಡಗಳಿಂದಾಗಿ ಇದು ಕೇವಲ ವಾಣಿಜ್ಯೋದ್ಯಮಿಗಳ ಹಿತಾಸಕ್ತಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡಿದೆಯೆಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ ಸಮುದ್ರವನ್ನು ಕೇವಲ ಒಂದು ಸಂಪನ್ಮೂಲವೆಂದು ಮಾತ್ರ ಭಾವಿಸದೆ ಶತಮಾನಗಳಿಂದ ಸಮುದ್ರವನ್ನು ರಕ್ಷಿಸಿಕೊಂಡು ಬಂದಿರುವ ಮೀನುಗಾರರ ಹಿತಾಸಕ್ತಿಯನ್ನಾಗಲೀ, ಸಮುದ್ರ ಹವಾಮಾನವನ್ನು ಪರಿರಕ್ಷಿಸುವ ಕಾಳಜಿಯನ್ನಾಗಲೀ ಹೊಂದಿಲ್ಲವೆಂಬುದು ಸಹ ಸಾಬೀತಾಗುತ್ತದೆ. ಆದ್ದರಿಂದಲೇ ಲಾಭದ ಉದ್ದೇಶದಿಂದ ಸಮುದ್ರ ಸಂಪನ್ಮೂಲಗಳನ್ನು ಅಡೆತಡೆಗಳಲ್ಲಿದೆ ಬಳಸಿಕೊಳ್ಳುವ ಮತ್ತು ವ್ಯಾಪಾರಿಕರಿಸಬೇಕೆಂಬ ಉದ್ದೇಶವುಳ್ಳವರ ಹಿತಾಸಕ್ತಿಗಳಿಗೂ ಮತ್ತು ಮೀನುಗಾರರ ಹಿತಾಸಕ್ತಿಗಳಿಗೂ ಸಹಜವಾದ ವೈರುಧ್ಯಗಳು ಎದ್ದುಕಾಣುತ್ತವೆ.

 ಮುಂಬೈ ಮತ್ತು ಚೆನ್ನೈನಂಥ ಸಮುದ್ರ ತೀರದ ಮಹಾನಗರಗಳಲ್ಲಿ ಹೆಚ್ಚುತ್ತಿರುವ ನಗರೀಕರಣ, ಬದಲಾಗುತ್ತಿರುವ ಭೂಬಳಕೆಯ ರೀತಿಗಳು, ತೀರದುದ್ದಕ್ಕೂ ಭೂ ಉತ್ತುವರಿ, ಮತ್ತು ಅಡೆತಡೆಯಿಲ್ಲದ ಮಾಲಿನ್ಯದ ಕಾರಣಗಳಿಂದಾಗಿ ತಗ್ಗುಪ್ರದೇಶದ ಭಾಗಗಳಿಗೆ, ಜಕ್ಷೇಪಗಳಿಗೆ ಮತ್ತು ಸಮುದ್ರಕ್ಕೆ ಶಾಶ್ವತ ಹಾನಿಯಾಗುತ್ತಿದೆ. ಇದರ ಪರಿಣಾಮವಾಗಿ ಮೀನುಗಳ ಸಂಗ್ರಹವೂ ಕಡಿಮೆಯಾಗುತ್ತಿದೆ. ಇದು ಸಣ್ಣಪುಟ್ಟ ಮೀನುಗಾರರ ಜೀವನೋಪಾಯಗಳ ಮೇಲೆ ದೊಡ್ಡ ಹೊಡೆತ ನೀಡುತ್ತಾ ಅವರನ್ನು ಪ್ರಧಾನಾಧಾರೆಯಿಂದ ದೂರಮಾಡುತ್ತಿದೆ. ಅದರ ಮೂಲಕ ಸಮಾಜದಲ್ಲಿನ ಅಸಮಾನತೆಗಳ ಅಂತರವೂ ಹೆಚ್ಚುತ್ತಿದೆಯೆಂದು ಹಲವಾರು ಅಧ್ಯಯನಗಳು ತೋರಿಸಿಕೊಟ್ಟಿವೆ.

ಆದರೆ ಈ ಮೀನುಗಾರರ ಸಾಂಪ್ರದಾಯಿಕ ಹಕ್ಕುಗಳನ್ನು ಪರಿಗಣಿಸದೆ ಹೊಸ ಸಿಆರ್‌ಜೆಡ್ ನೀತಿಯನ್ನು ಜಾರಿಗೆ ತರುತ್ತಿರುವುದರಿಂದಾಗಿ ಸಾಮುದಾಯಿಕ ಸಂಪನ್ಮೂಲಗಳೊಡನೆ ಮೀನುಗಾಗರು ರೂಢಿಸಿಕೊಂಡು ಬಂದಿರುವ ಆಚರಣೆಗಳ ಉಲ್ಲಂಘನೆಯನ್ನು ಶಾಸನಬದ್ಧಗೊಳಿಸಿದಂತಾಗುತ್ತದೆ. ಇದು ಸಮುದ್ರ ಸಂಪನ್ಮೂಲಗಳ ಬಳಕೆಯ ಕುರಿತು ಘರ್ಷಣೆಯನ್ನು ತೀವ್ರಗೊಳಿಸುತ್ತದೆ. ಹಾಗೂ ಮೀನುಗಾರರ ಹಕ್ಕುಗಳನ್ನು ಮತ್ತು ಸಮುದ್ರ ತೀರದ ಹಕ್ಕುಗಳನ್ನು ಪರಿರಕ್ಷಿಸುವ ಯಾವುದೇ ಕಾನೂನುಗಳಿಲ್ಲದ ಸನ್ನಿವೇಶದಲ್ಲಿ ಈ ಹೊಸ ಕಾನೂನು ಅಂತಿಮವಾಗಿ, ಮೀನುಗಾರರನ್ನು ತೀರಪ್ರದೇಶದಿಂದ ಹೋರದೂಡುವುದಕ್ಕೆ ಕಾರಣವಾಗುತ್ತದೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಪ್ರೇರಿತ ಸ್ಥಳಾಂತರಗಳು ಸಂಭವಿಸುವ ಬಗ್ಗೆ  ಮತ್ತು ಜೀವನೋಪಾಯಗಳು ನಾಶವಾಗುವ ಬಗ್ಗೆ ಮೀನುಗಾರರ ಸಂಘಟನೆಗಳು ವ್ಯಕ್ತಪಡಿಸುತ್ತಿರುವ ಆತಂಕಗಳಲ್ಲಿ ಹುರುಳಿಲ್ಲದಿಲ್ಲ. ಕರಾವಳಿ ತೀರಗಳಲ್ಲಿ ಇತ್ತೀಚೆಗೆ ಇಂಟರ್‌ನ್ಯಾಷನಲ್ ಕಂಟೈನರ್ ಟ್ರಾನ್ಸ್‌ಶಿಪ್‌ಮೆಂಟ್ ಟರ್ಮಿನಲ್‌ಗಳು ಮತ್ತು ಬಂದರುಗಳಂಥ ದೊಡ್ಡದೊಡ್ಡ ಯೋಜನೆಗಳು ಸ್ಥಾಪನೆಗೊಂಡಿರುವುದರಿಂದ ಈಗಾಗಲೇ ಸಮುದ್ರಜೀವಿಗಳಿಗೆ ಹಾನಿಯುಂಟಾಗಿದೆ ಮತ್ತು ಸರಿಯಾದ ಪರಿಹಾರ ಮತ್ತು ಪುನರ್‌ವಸತಿ ಯೋಜನೆಗಳಿಲ್ಲದೆಯೇ ಸಾವಿರಾರು ಮೀನುಗಾರರು ಎತ್ತಂಗಡಿಗೆ ಗುರಿಯಾಗಿದ್ದಾರೆ. ವಾಣಿಜ್ಯ ಆಸಕ್ತಿಗಳನ್ನು ಉತ್ತೇಜಿಸುವ ಈ ನೀತಿಯ ಮೂಲಕ ಸರ್ಕಾರವು ಈಗಾಗಲೇ ಈ ಅಸಮಾನ ಸಮಾಜದ ಅಂಚಿಗೆ ತಳ್ಳಲ್ಪಟ್ಟಿರುವ ಸಮುದಾಯವೊಂದನ್ನು ಮತ್ತಷ್ಟು ನಿರ್ಗತಿಕರನ್ನಾಗಿಸುತ್ತಿದೆ.

ಅಸ್ಥಿತ್ವದಲ್ಲಿದ್ದ ಸಿಆರ್‌ಜೆಡ್ ನಿಯಮಗಳನ್ನು ಕಠಿಣವಾಗಿ ಜಾರಿ ಮಾಡಬೇಕೆಂಬ ಅಥವಾ ಸಮುದ್ರ ತೀರದಲ್ಲಿ ನಡೆಯುವ ಆ ಕಾಯಿದೆಯ ಉಲ್ಲಂಘನೆಗಳನ್ನು ತಡೆಗಟ್ಟಬೇಕೆಂಬ ಮೀನುಗಾರರ ಒತ್ತಾಯಗಳನ್ನು ಈ ಹಿಂದೆಯೂ ಸರ್ಕಾರವು ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಆದರೆ ಸೂಕ್ಷ್ಮ ವಲಯಗಳ ಮರುವರ್ಗೀಕರಣದ ಈ ಹೊಸ ನೀತಿಯ ಬಗ್ಗೆ ಸಂತ್ರಸ್ತ ಮೀನುಗಾರರ ಜೊತೆಯಾಗಲಿ ಅಥವಾ ಅವರ ಸಂಘಟನೆಯಾದ ನ್ಯಾಷನಲ್ ಫಿಷ್‌ವರ್ಕರ್ಸ್ ಫೋರಮ್ (ರಾಷ್ಟ್ರೀಯ ಮೀನುಕಾರ್ಮಿಕರ ವೇದಿಕೆ) ಜೊತೆಗಾಗಲೀ ಸೂಕ್ತವಾದ ಚರ್ಚೆಯನ್ನು ಮಾಡದೆ ಸರ್ಕಾರವು ಅವರ ಸಮಾಜೋ-ಪರಿಸರಾತ್ಮಕ ಕಾಳಜಿಗಳನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ಹೀಗಾಗಿ  ಈ ನೀತಿಯು ಕೇವಲ ಖಾಸಗಿ ಲಾಭದ ಉದ್ದೇಶದ ಪ್ರೇರಣೆಯಿಂದಲೇ ಜಾರಿಯಾಗುತ್ತಿರುವ ರಾಜಕೀಯ ಪ್ರಕ್ರಿಯೆಯಾಗಿದೆ. ಕಾರ್ಪೊರೇಟ್ ಬಂಡವಾಳ ಪ್ರೇರಿತವಾದ ಇಂಥಾ ರಾಜಕೀಯವು ಸಮುದ್ರ ಸಂಪನ್ಮೂಲ ಆಧಾರಿತ ಜೀವನೋಪಾಯಗಳನ್ನು ಮತ್ತು ಸಮುದ್ರ ಪರಿಸರದ ಸುಸ್ಥಿರತೆ ಮತ್ತು ಸಂರಕ್ಷಣೆಗಳಿಗಿರುವ ಅಂತರ್‌ಸಂಬಂಧಗಳನ್ನು ಗಣನೆಗೆ ತೆಗೆದುಕೊಳ್ಳುವುದರಲ್ಲಿ ವಿಫಲವಾಗಿದೆ. ಇದರಿಂದಾಗಿ ಸಮಾಜವು ಕಾಲಕ್ರಮದಲ್ಲಿ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ತತ್ಪರಿಣಾಮವಾಗಿ ಅದು ಜನರ ರಾಜಕೀಯ ಹಕ್ಕುಗಳನ್ನು ಹೊಸಬಗೆಯಲ್ಲಿ ಹರಣಮಾಡುತ್ತಾ ಸಮಾಜದ ಒಟ್ಟಾರೆ ಬೆಳವಣಿಗೆಗೆ ಧಕ್ಕೆ ತರಲಿದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top