ISSN (Print) - 0012-9976 | ISSN (Online) - 2349-8846

ವೈದ್ಯರ ಮುಷ್ಕರ

ವೈದ್ಯರು ತಮ್ಮ ಮೇಲೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಧ್ವನಿ ಎತ್ತುವಾಗ ಅದನ್ನು ಕೇವಲ ಭದ್ರತಾ ವಿಷಯಗಳಿಗೆ ಸೀಮಿತಗೊಳಿಸಿಕೊಳ್ಳಬಾರದು.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಕಳೆದ ವಾರ ಕೋಲ್ಕತ್ತಾದ ಆಸ್ಪತ್ರೆಯೊಂದರಲ್ಲಿ ಮೃತರಾದ ವ್ಯಕ್ತಿಯ ಸಂಬಂಧಿಕರು ಇಬ್ಬರು ವೈದ್ಯರ ಮೇಲೆ ನಡೆಸಿದ ಹಲ್ಲೆ ಮತ್ತು ಆ ನಂತರ ನಡೆದ ಬೆಳವಣಿಗೆಗಳು ದೇಶಾದ್ಯಂತ ವೈದ್ಯರು ಮುಷ್ಕರಕ್ಕಿಳಿಯಲು ಕಾರಣವಾಯಿತು. ಕೋಲ್ಕತ್ತಾದ ’ನೀಲ್ ರತನ್ ಸರ್ಕಾರ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ’ಯ ಕಿರಿಯ ವೈದ್ಯರು ತಮಗೆ ಹೆಚ್ಚಿನ ಭದ್ರತೆಯನ್ನು ನೀಡಬೇಕೆಂದು ಆಗ್ರಹಿಸಿ ಮುಷ್ಕರಕ್ಕಿಳಿಯುವುದರೊಂದಿಗೆ ಈ ಘಟನಾವಳಿಗಳು ಪ್ರಾರಂಭವಾದವು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಈ ಬಗ್ಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳದಿದ್ದುದು ಮಾತ್ರವಲ್ಲದೆ ಮುಷ್ಕರ ನಿಲ್ಲಿಸಲು ವೈದ್ಯರಿಗೆ ಅಂತಿಮ ಎಚ್ಚರಿಕೆಯನ್ನು ನೀಡಿದ್ದರಿಂದ ಕ್ರುದ್ಧರಾದ ನಗರದ ಹಲವಾರು ಹಿರಿಯ ವೈದ್ಯರುಗಳು ರಾಜೀನಾಮೆ ನೀಡಿದರು. ಹಾಗೂ ದೇಶಾದ್ಯಂತ ವೈದ್ಯರುಗಳು ಪ್ರತಿಭಟನಾ ಪ್ರದರ್ಶನವನ್ನೂ ನಡೆಸಿದರು. ಇದರ ಮುಂದುವರೆದ ಭಾಗವಾಗಿ ಭಾರತೀಯ ಮೆಡಿಕಲ್ ಅಸೋಸಿಯೇಷನ್ (ಐಎಂಎ) ೨೦೧೯ರ ಜೂನ್ ೧೭ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆನೀಡಿತು. ಇದರೊಂದಿಗೆ ಹೊರರೋಗಿ ಸೇವೆಯನ್ನು ಒಳಗೊಂಡಂತೆ ಅತ್ಯಗತ್ಯವಲ್ಲದ ಎಲ್ಲಾ ವೈದ್ಯಕೀಯ ಸೇವೆಗಳು ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ದೇಶಾದ್ಯಂತ ರೋಗಿಗಳ ಪರಿಸ್ಥಿತಿಯನ್ನು ಯಾರೂ ಕೇಳದಂತಾಯಿತು.

ಇದೇರೀತಿ ೨೦೦೭ರಲ್ಲಿ ವೈದ್ಯರ ಮೇಲೆ ನಡೆಯುತ್ತಿದ್ದ ಸತತ ಹಲ್ಲೆಗಳನ್ನು ವಿರೋಧಿಸಿ ಮಹಾರಾಷ್ಟ್ರದ ರೆಸಿಡೆಂಟ್ ವೈದ್ಯರುಗಳ ಸಂಸ್ಥೆಯು ಐದು ದಿನಗಳ ಕಾಲ ಮುಷ್ಕರ ಮಾಡಿದ್ದರು. ಆಗಲೂ ಅವರ ಆಗ್ರಹವಿದ್ದದ್ದು ತಮ್ಮ ಭದ್ರತೆಯ ಬಗ್ಗೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬುದನ್ನು ಕುರಿತೇ ಅಗಿತ್ತು. ಅದನ್ನು ಸರ್ಕಾರ ಒಪ್ಪಿಕೊಂಡಿತ್ತು. ಆದರೆ ಈ ನಡುವಿನ ಅವಧಿಯಲ್ಲಿ ನಾವು ಯಾವುದೇ ಪಾಠಗಳನ್ನೂ ಕಲಿತಂತಿಲ್ಲ. ವೈದ್ಯರ ಬೇಡಿಕೆ ಮತ್ತು ಅದಕ್ಕೆ ಸರ್ಕಾರ ಸೂಚಿಸುತ್ತಿರುವ ಪರಿಹಾರಗಳೆರಡೂ ಭದ್ರತೆಯ ಸುತ್ತಲೇ ಗಿರಕಿ ಹೊಡೆಯುತ್ತಿವೆ.  ತಮಗೆ ಹೆಚ್ಚಿನ ಭದ್ರತೆ, ಸುರಕ್ಷತಾ ಕ್ರಮಗಳು ಮತ್ತು ಆ ನಿಟ್ಟಿನಲ್ಲಿ ಒಂದು ಬಲವಾದ ಕಾನೂನು ಜಾರಿಯಾಗಬೇಕೆಂಬ ವೈದ್ಯರ ಆಗ್ರಹಗಳು ಸಮರ್ಥನೀಯವೇ ಆಗಿದ್ದರೂ ಅವು ಕೇವಲ  ತಾತ್ಕಾಲಿಕ ಕ್ರಮಗಷ್ಟೇ ಆಗಿರಲು ಸಾಧ್ಯ.

ಕೋಲ್ಕತ್ತಾದ ಮುಷ್ಕರ ನಿರತ ವೈದ್ಯರುಗಳು ಒಂದು ಕುಂದುಕೊರತೆ ಕೋಶವನ್ನು ರಚಿಸಿಬೇಕೆಂದು ಆಗ್ರಹಿಸಿದ್ದರಲ್ಲದೆ ಆರೋಗ್ಯ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸಲು ಒಂದು ಕೇಂದ್ರೀಯ ಶಾಸನವು ಜಾರಿಯಾಗಬೇಕೆಂಬ ಬೇಡಿಕೆಯನ್ನೂ ಸಹ ಮಂಡಿಸಿದ್ದರು. ಐಎಂಎ ಕೂಡಾ ತನ್ನೆಲ್ಲಾ ಪ್ರಯತ್ನಗಳನ್ನು ಒಂದು ಕೇಂದ್ರೀಯ ಶಾಸನವನ್ನು ರೂಪಿಸುವತ್ತ ಕೇಂದ್ರಿಕರಿಸುತ್ತಾ ಭದ್ರತಾ ಬೇಡಿಕೆಯ ಚೌಕಟ್ಟಿನೊಳಗೆ ಸೀಮಿತಗೊಂಡಿತು. ಆರೋಗ್ಯ ಕಾರ್ಯಕರ್ತರ ಮೇಲೆ ನಡೆಯುವ ಹಿಂಸಾಚಾರವನ್ನು ಶಿಕ್ಷಾರ್ಹ ಅಪರಾಧವನ್ನಾಗಿಸುವ ಕಾಯಿದೆಗಳು ಪ. ಬಂಗಾಳದಲ್ಲಿ ಮತ್ತು ಇನ್ನೂ ಹಲವಾರು ರಾಜ್ಯಗಳಲ್ಲಿ ಅಸ್ಥಿತ್ವದಲ್ಲಿದ್ದರೂ ಸರ್ಕಾರಗಳು ಅದನ್ನು ಜಾರಿ ಮಾಡುತ್ತಿಲ್ಲ. ಇತ್ತೀಚಿನ ಅಧ್ಯಯನಗಳು ತಿಳಿಸುವಂತೆ ವೈದ್ಯರ ಮೇಲೆ ಮತ್ತು ವೈದ್ಯಕೀಯ ಸಿಬ್ಬಂದಿಗಳ ಮೇಲಿನ ಹಲ್ಲೆಗಳು ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿಯೂ ಕೂಡಾ ಸಾಮಾನ್ಯವಾಗಿಬಿಡುತ್ತಿದೆ. ಒಂದು ಅಧ್ಯಯನದ ಪ್ರಕಾರ ರೋಗಿಗಳ ಕುಟುಂಬದ ಜೊತೆ ನೇರ ಸಂಪರ್ಕಕ್ಕೆ ಬರುವ ನರ್ಸ್‌ಗಳು, ತುರ್ತು ಚಿಕಿತ್ಸಾ ಘಟಕದ ಸಿಬ್ಬಂದಿಗಳು ಮತ್ತು ತೀವ್ರ ನಿಗಾ ಘಟಕದ ಸಿಬ್ಬಂದಿಗಳು ಹೆಚ್ಚು ದಾಳಿಗೆ ಗುರಿಯಾಗುತ್ತಾರೆ. ಮತ್ತೊಂದು ವರದಿಂi ಪ್ರಕಾರ ದೀರ್ಘ ಕಾಲ ಕಾಯುತ್ತಾ ಕೂರಬೇಕಾದ ಸಂದರ್ಭವೇ ರೋಗಿಗಳ ಕುಟುಂಬ ವರ್ಗವನ್ನು ಹತಾಷೆಗೆ ದೂಡಿ ಹಿಂಸಾಚಾರಕ್ಕೆ ಮುಂದಾಗುವಂತೆ ಮಾಡುತ್ತದೆ. ಆರೋಗ್ಯ ಕಾರ್ಯಕರ್ತರ ಸ್ಥಿತಿಗತಿಯ ಬಗ್ಗೆ ೨೦೧೮ರಲ್ಲಿ ನಡೆದ ಮತ್ತೊಂದು ಅಧ್ಯಯನದ ಪ್ರಕಾರ ಕೆಲಸ ಮಾಡುವ ಸ್ಥಳದಲ್ಲಿ ಆರೋಗ್ಯ ಕಾರ್ಯಕರ್ತರ ಮೇಲೆ ಹಿಂಸಾಚಾರಗಳು ನಡೆಯುತ್ತಲೇ ಬಂದಿವೆಯಾದರೂ ಆರೋಗ್ಯ ಕಾರ್ಯಕರ್ತರು ಅದರ ಬಗ್ಗೆ ದೂರು ಅಥವಾ ವರದಿಯನ್ನು ಸಲ್ಲಿಸಿರುವುದು ಕಡಿಮೆ .ಅದಕ್ಕೆ ಕಾರಣ ಆಸ್ಪತ್ರೆಯಲ್ಲಿರಬೇಕಾದ ದೂರು ನೀಡುವ ವ್ಯವಸ್ಥೆಯ ಬಗ್ಗೆ ಅರಿವೇ ಇರದಿರುವುದು. ಇದು ಭಾರತದ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿರುವ ಆಳವಾದ ಲೋಪದೋಷಗಳನ್ನು ಎತ್ತಿತೋರಿಸುತ್ತದೆ.

ಮೃತ ರೋಗಿಯ ಕುಟುಂಬದವರು ವೈದ್ಯರ ಮೇಲೆ ನಡೆಸಿದ ಹಿಂಸಾಚಾರನ್ನಾಗಲೀ, ಅಥವಾ ವೈದ್ಯರ ಮುಷ್ಕರದಿಂದ ರೋಗಿಗಳು ಸಹಿಸಬೇಕಾಗಿ ಬಂದ ಹಿಂಸೆಯನ್ನಾಗಲೀ ಎತ್ತಿಹಿಡಿಯಲು ಸಾಧ್ಯವೇ ಇಲ್ಲ. ಇಂಥ ಘಟನಾವಳಿಗಳನ್ನು ಸಮರ್ಥಿಸಿಕೊಳ್ಳದೆ ಇವು ಸಂಭವಿಸಿದ ಸಂದರ್ಭವನ್ನು ಅರ್ಥಮಾಡಿಕೊಂಡಲ್ಲಿ ಇಂಥಾ ಘಟನೆಗಳು ಏಕೆ ಸಂಭವಿಸುತ್ತವೆ ಎಂಬುದು ಅರ್ಥವಾಗುತ್ತದೆ.

 

ಭಾರತದ ಆರೋಗ್ಯ ಸೇವಾ ವ್ಯವಸ್ಥೆಯನ್ನು ಬಾಧಿಸುತ್ತಿರುವ ಸಮಸ್ಯೆಗಳು ಗುಟ್ಟಾಗಿಯೇನೂ ಉಳಿದಿಲ್ಲ. ವೈದ್ಯರ ಮುಷ್ಕರವು ನಡೆಯುತ್ತಿದ್ದ ಸಂದರ್ಭದಲ್ಲೇ ಬಿಹಾರದ ಮುಝಫ್ಫರ್‌ನಗರ್ ಜಿಲ್ಲೆಯಲ್ಲಿ ನೂರಾರು ಮಕ್ಕಳು ಮಿದುಳು ಜ್ವರದ ಸೋಂಕಿಗೆ ಬಲಿಯಾಗತೊಡಗಿದರು. ವರದಿಗಳ ಪ್ರಕಾರ ಈಗಾಗಲೇ ನೂರಕ್ಕೂ ಹೆಚ್ಚು ಮಕ್ಕಳು ಈ ಸೋಂಕಿಗೆ ಬಲಿಯಾಗಿ ಅಸುನೀಗಿದ್ದಾರೆ. ಬಿಹಾರವು ಮಿದುಳು ಜ್ವರಕ್ಕೆ  ಪದೆಪದೇ ಬಲಿಯಾಗುತ್ತಿರುವುದು ಗೊತ್ತಿರುವ ಸಂಗತಿಯೇ ಆಗಿದ್ದರೂ ಅದನ್ನು ತಡೆಗಟ್ಟಲಾಗದ ವಾಸ್ತವವು ನಮ್ಮ ಆರೋಗ್ಯ ಸೇವಾ ವ್ಯವಸ್ಥೆಯ ಘೋರ ಅಸಾಮರ್ಥ್ಯವನ್ನು ಮತ್ತೊಮ್ಮೆ ಎತ್ತಿತೋರಿಸಿದೆ. ವರದಿಗಳ ಪ್ರಕಾರ ಮುಝಫ್ಫರ್‌ಪುರ್ ಜಿಲ್ಲೆಯಲ್ಲಿ ಯಾವ ಸಾರ್ವಜನಿಕ ಆರೋಗ್ಯ ಕೇಂದ್ರಗಳೂ ಸಹ ಕನಿಷ್ಟ ಗುಣಮಟ್ಟವನ್ನೂ ಕೂಡಾ ಹೊಂದಿಲ್ಲ. ಇಂಥಾ ಸನ್ನಿವೇಶವೇ ರೋಗವು ವ್ಯಾಪಕವಾಗಿ ಹರಡಲು ಕಾರಣವಾಯಿತು. ಅಲ್ಲದೆ, ಈಗಾಗಲೇ ಅಗತ್ಯ ಸೌಕರ್ಯಗಳಿಲ್ಲದೆ ದುರ್ಬಲವಾಗಿದ್ದ ವ್ಯವಸ್ಥೆಯ ಮೇಲೆ ಮತ್ತಷ್ಟು ಹೊರೆಯನ್ನು ಹೇರಿತು. ಇಂಥಾ ಸನ್ನಿವೇಶವೇ ರೋಗಿಗಳ ಕುಟುಂಬದವರು ಹತಾರಾಗಲೂ ಮತ್ತು ವ್ಯಗ್ರರಾಗಲೂ ಕಾರಣವಾಗುತ್ತವೆ. ರೋಗಿಗಳ ಕುಂದುಕೊರತೆಯನ್ನು ಆಲಿಸುವ ವ್ಯವಸ್ಥೆಯಿಲ್ಲದಿರುವ ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಿರುವಷ್ಟು ಸಿಬ್ಬಂದಿಗಳು ಇಲ್ಲದಿರುವ ಸಂದರ್ಭವು ಆರೋಗ್ಯ ಕಾರ್ಯಕರ್ತರ ನಡುವೆ ಮತ್ತು ಅಸಹಾಯಕ ರೋಗಿಗಳ ನಡುವೆ ಬಿಸಿಬಿಸಿ ಮಾತುಕತೆಗಳಾಗುವುದಕ್ಕೆ ಮತ್ತು ಹಿಂಸಾಚಾರಕ್ಕಿಳಿಯುವುದಕ್ಕೆ ಪೂರಕವಾದ ಸನ್ನಿವೇಶವನ್ನು ಸೃಷ್ಟಿ ಮಾಡುತ್ತದೆ.

ಅತ್ಯಗತ್ಯವಾದ ವೈದ್ಯಕೀಯ ಸೌಕರ್ಯ ಮತ್ತು ಸಂಪನ್ಮೂಲಗಳಿರದಿರುವ ಸಂದರ್ಭ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅವಧಿಗಿಂತ ಹೆಚ್ಚು ಕೆಲಸ ಮಾಡಬೇಕಾದ ಸನ್ನಿವೇಶಗಳಿಂದಾಗಿ ವೈದ್ಯರು ಕೆಲಸ ಮಾಡುವ ಜಾಗಗಳು ಅತಿ ಒತ್ತಡದಲ್ಲಿ ಕೆಲಸ ಮಾಡುವ ಜಾಗಗಳಾಗಿಬಿಟ್ಟಿವೆ. ಇದರ ಜೊತೆಗೆ ಈ ಕ್ಷೇತ್ರವು ಅತಿ ಹೆಚ್ಚು ಕಾರ್ಪೊರೇಟೀಕರಣವಾಗುತ್ತಿದೆ. ಕಾರ್ಪೊರೇಟ್ ವ್ಯವಸ್ಥೆಯು ಆರೋಗ್ಯಸೇವೆಯನ್ನು ಒಂದು ವ್ಯಾವಹಾರಿಕ ಉದ್ದಿಮೆಯನ್ನಾಗಿ ಮಾತ್ರ ಪರಿಗಣಿಸುತ್ತದೆಯಾದ್ದರಿಂದ ಇಂದು ಆ ಕ್ಷೇತ್ರದ ನೈತಿಕ ಮೌಲ್ಯಗಳೂ ಸಹ ಬದಲಾಗುತ್ತಿವೆ. ವೈದ್ಯಕೀಯ ರಂಗದಲ್ಲಿ ಯಾವುದೇ ನಿಯಂತ್ರಣಕ್ಕೆ ಒಳಗಾಗದೆ ಮತ್ತು ಯಾವುದೇ ಉಸ್ತುವಾರಿಗೂ ಒಳಪಡದೆ ಬೆಳೆಯುತ್ತಿರುವ ಖಾಸಗಿ ಕ್ಷೇತ್ರ, ವೈದ್ಯಕೀಯ ನಿರ್ಲಕ್ಷ್ಯ ಮಾಡಿದರೂ ಯಾವುದೇ ಕ್ರಮಗಳಿಗೆ ಗುರಿಯಾಗದಿರುವುದು, ಮತ್ತು ಈ ಬಗೆಯ ಹಿಂಸಾಚಾರದ ಘಟನೆಗಳು; ಇವೆಲ್ಲವೂ ಒಟ್ಟು ಸೇರಿ ವೈದ್ಯ ಮತ್ತು ರೋಗಿಯ ನಡುವಿನ ಸಂಬಂಧಗಳಲ್ಲಿ ಹೆಚ್ಚೆಚ್ಚು ಅವಿಶ್ವಾಸಗಳನ್ನು ಹುಟ್ಟುಹಾಕಿಬಿಟ್ಟಿವೆ. ಇಂದು ರೋಗಿಯ ಕಣ್ಣುಗಳಲ್ಲಿ ವೈದ್ಯರು ರಕ್ಷಕರಂತೆ ಕಾಣುತ್ತಿಲ್ಲ. ಆರೋಗ್ಯ ಸೇವೆ-ಆರೋಗ್ಯ ಕಾಳಜಿಯಲ್ಲಿರುವ ಕಾಳಜಿ ಮತ್ತು ಸೇವೆಗಳು ಹಿಂದೆ ಸರಿದಿವೆ. ತೀವ್ರರೋಗಗ್ರಸ್ಥ ಪರಿಸ್ಥಿತಿಯಲ್ಲಿರುವ ರೋಗಿಯ ಜೊತೆ ಮತ್ತು ದುಃಖಗ್ರಸ್ಥರಾಗಿರುವ ಅವರ ಕುಟುಂಬಗಳ ಜೊತೆ ಸರಿಯಾದ ರೀತಿಯಲ್ಲಿ ಸಂವಹನ ಮಾಡುವ ಕೌಶಲ್ಯಗಳು ವೈದ್ಯರುಗಳಿಗಿಲ್ಲ.

ಇಂಥಾ ಸಂದರ್ಭದಲ್ಲಿ ವೈದ್ಯರು ನಡೆಸಿದ ಎಲ್ಲಾ ಪ್ರತಿಭಟನೆಗಳ ಮತ್ತು ಮುಷ್ಕರಗಳ ಆಗ್ರಹಗಳು ಕೇವಲ ಭದ್ರತಾ ಕ್ರಮಗಳ ಸುತ್ತಲೇ ಸುತ್ತಿರುವುದು ದೂರದೃಷ್ಟಿಯಿಲ್ಲದ ಸಂಗತಿಯಾಗಿದೆ. ನಿಜವಾದ ಸಮಸ್ಯೆಯು ವ್ಯವಸ್ಥೆಯೊಳಗಿದ್ದು ಅದನ್ನು ಅದೇ ಮಟ್ಟದಲ್ಲೇ ನಿಭಾಯಿಸಬೇಕು. ಅದಾಗಬೇಕೆಂದರೆ ಮೊದಲು ಸರ್ಕಾರವು ಆರೋಗ್ಯ ಕಾರ್ಯಕರ್ತರ ರಕ್ಷಣೆ ಮಾಡಲು ಇರುವ ಕಾನೂನನ್ನು ಜಾರಿ ಮಾಡಬೇಕು. ಅಷ್ಟು ಮಾತ್ರವಲ್ಲದೆ ಅದು ಚಿಕಿತ್ಸಾ ಕೇಂದ್ರಗಳ ಕಾಯಿದೆಯನ್ನೂ ಜಾರಿಗೆ ತರಬೇಕು. ಮಾನವ ಹಾಗೂ ಇತರ ಸಂಪನ್ಮೂಲಗಳಿಗೆ ಅಗತ್ಯವಿರುವಷ್ಟು ಹಣಕಾಸನ್ನು ಒದಗಿಸಬೇಕು, ಮತ್ತು ಎಲ್ಲಾ ಆರೋಗ್ಯ ಸೇವಾ ಕೇಂದ್ರಗಳೂ ಕಾನೂನಿನ ಪ್ರಕಾರ ನಿಗದಿ ಮಾಡಲ್ಪಟ್ಟ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅಗತ್ಯವಿರುವ ಬದಲಾವಣೆಗಳನ್ನು  ವೈದ್ಯ ಸಮುದಾಯವೇ ಆಗ್ರಹಿಸಬೇಕಿದೆ. ಏಕೆಂದರೆ ಒಂದು ಕಾರ್ಯಸಾಧು, ಸಮರ್ಥ ಮತ್ತು ಸುರಕ್ಷಿತ ಆರೋಗ್ಯ ಸೇವೆಯನ್ನು ಖಾತರಿಗೊಳಿಸಲು ಅಡ್ಡಿಯಾಗಿರುವ ವ್ಯವಸ್ಥೆಯೊಳಗಿನ ವಿಷಯಗಳನ್ನು ಗುರುತಿಸಿ ಅದರ ನಿವಾರಣೆಗೆ ಬೇಕಾದ ಪರಿಣಾಮಕಾರಿ ಪರಿಹಾರೋಪಾಯಗಳನ್ನು ಮುಂದಿಡಲು ಎಲ್ಲರಿಗಿಂತ ಅವರಿಗೇ ಹೆಚ್ಚು ಸಾಧ್ಯ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top