ISSN (Print) - 0012-9976 | ISSN (Online) - 2349-8846

ಕೃಷಿ ಮಾರುಕಟ್ಟೆಯಲ್ಲಿ ಬರಲಿರುವ ಖಾಸಗಿ ನಿಯಮಗಳು

ಎಸೆನ್ಷಿಯಲ್ ಕಮಾಡಿಟೀಸ್ ಆಕ್ಟ್ (ಅತ್ಯಗತ್ಯ ಸರಕು-ಸೇವಾ ಕಾಯಿದೆ)ಯನ್ನು ಅಮಾನತ್ತುಗೊಳಿಸುವುದು ಅಷ್ಟು ಸುಲಭವಲ್ಲ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ನೀತಿ ಅಯೋಗದ ನಿರ್ದೇಶನಾ ಮಂಡಳಿಯ ಐದನೇ ಸಭೆಯು ೨೦೧೯ರ ಜೂನ್ ೧೫ಕ್ಕೆ ನಡೆಯಿತು. ಆ ಸಭೆಯು ಅಗ್ಯಗತ್ಯ ಸಾಮಗ್ರಿ ಕಾಯಿದೆ (ಇಸಿಎ)-೧೯೫೫ ಮತ್ತು ಮಾದರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯಿದೆಯಂಥಾ ಕೃಷಿ ಮಾರುಕಟ್ಟೆ ನಿಯಮಗಳಿಗೆ ತಿದ್ದುಪಡಿಗಳನ್ನು ತರುವುದರ ಮೂಲಕ ಭಾರತದ ಕೃಷಿ ಕ್ಷೇತ್ರದ ಅಮೂಲಾಗ್ರ ಬದಲಾವಣೆಯನ್ನು ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಕರೆ ನೀಡಿದೆ. ದೇಶಾದ್ಯಂತ ವ್ಯಾಪಕವಾಗಿರುವ ಕೃಷಿ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಈ ಸುಧಾರಣೆಗಳು ಕುಸಿಯುತ್ತಿರುವ ಕೃಷಿ ಆದಾಯವನ್ನು ಪುನಶ್ಚೇತನಗೊಳಿಸಿ ಕೃಷಿ ಬದುಕಿಗೆ ಜೀವ ತುಂಬಬಹುದೆಂದು ನಿರೀಕ್ಷಿಸಲಾಗಿದೆ. ಇಂದು ಕೃಷಿ ಕ್ಷೇತ್ರದಲ್ಲಿ ಹೆಚ್ಚುವರಿ ಉತ್ಪಾದನೆಯ ನಿರ್ವಹಣೆಯು ಕೃಷಿ ಕ್ಷೇತ್ರದ ದೊಡ್ಡ ಸಮಸ್ಯೆಯಾಗಿ ತಲೆದೋರಿರುವಾಗ ಇಸಿಎ ಕಾಯಿದೆಯ ತಿದ್ದುಪಡಿ ಪ್ರಸ್ತಾಪವನ್ನು ವಿಶೇಷವಾಗಿ ಗಮನಿಸುವ ಅಗತ್ಯವಿದೆ. ಇಸಿಎ ಕಾಯಿದೆಯು ಈವರಗೆ ಕೃಷಿ ಮಾರುಕಟ್ಟೆಯ ಏಕೀಕರಣಕ್ಕೆ ದೊಡ್ಡ ಅಡ್ಡಿಯಾಗಿತ್ತು. ಇದು ತಿದ್ದುಪಡಿಯಾದಲ್ಲಿ ಒಂದು ಕೃಷಿ ಮಾರುಕಟ್ಟೆಯಲ್ಲಿ ಹೆಚ್ಚುವರಿ ಬೇಡಿಕೆ (ಸರಬರಾಜು)ಯಿಂದ ಬೆಲೆಧಾರಣೆಯಲ್ಲಿ ಕಂಡುಬರುವ ಸಂಕೇತಗಳು  ಮತ್ತೊಂದು ಮಾರುಕಟ್ಟೆಗೆ ವರ್ಗಾವಣೆಯಾಗುವ ಅವಕಾಶ ಉಂಟಾಗುತ್ತದೆ. ಮತ್ತೊಂದು ಮಾತಿನಲ್ಲಿ ಹೇಳುವುದಾದರೆ ರೈತರಿಗೆ ಮಾರುಕಟ್ಟೆಯಿಂದ ಸರಿಯಾದ ಬೆಲೆಯು ದೊರೆಯುವುದಲ್ಲದೆ ಸರಕು ಲಭ್ಯತೆಯು ಹೆಚ್ಚಾಗುವುದರಿಂದ ಗ್ರಾಹಕರಿಗೂ ನಿರಾಳವಾಗುತ್ತದೆ.

ಆದರೆ ಈ ಬಗ್ಗೆ ನೀತಿ ಅಯೋಗವಾಗಲೀ ಅಥವಾ ಸರ್ಕಾರವಾಗಲೀ ಯಾವುದೇ ಹೆಚ್ಚುವರಿ ಮಾಹಿತಿಯನ್ನು ನೀಡದೇ ಇರುವುದರಿಂದ ಜನಸಾಮಾನ್ಯರಲ್ಲಿ ಈಬಗ್ಗೆ ಹಲವಾರು ಅನುಮಾನಗಳು ಹುಟ್ಟುಕೊಳ್ಳಲು ಕಾರಣವಾಗಿದೆ. ಆಹಾರ ಸಾಮಗ್ರಿಗಳ ಬೆಲೆಗಳ ಮೇಲೆ ಸರ್ಕಾರವು ನಿಯಂತ್ರಣವನ್ನು ಇಟ್ಟುಕೊಳ್ಳದಿದ್ದರೆ ಆಹಾರ ವಸ್ತುಗಳ ಅತಾರ್ಕಿಕ ಬೆಲೆ ಏರಿಕೆಯಿಂದ ಗ್ರಾಹಕರ ರಕ್ಷಣೆ ಹೇಗೆ ಸಾಧ್ಯವಾಗುತ್ತದೆ? ಇಸಿಎ ಕಾಯಿದೆಯು ಅಸ್ಥಿತ್ವದಲ್ಲಿರುವಾಗಲೇ ಸರ್ಕಾರವು ಆಹಾರ ವಸ್ತುಗಳ ಬೆಲೆಗಳ ಏರಿಳಿತಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲವೆಂಬುದನ್ನು ಗಮನದಲ್ಲಿರಿಸಿಕೊಂಡಾಗ ಈ ಪ್ರಶ್ನೆಯ  ಗಹನತೆ ಅರ್ಥವಾಗುತ್ತದೆ. ಐತಿಹಾಸಿಕವಾಗಿ ನೋಡುವುದಾದರೆ ಸರ್ಕಾರವು ಆಹಾರ ದಾಸ್ತಾನಿನ ಮೇಲೆ ಮಿತಿಂiನ್ನು ವಿಧಿಸಿದ ನಂತರದಲ್ಲಿ ಅತ್ಯಗತ್ಯ ಆಹಾರ ವಸ್ತುಗಳ ಚಿಲ್ಲರೆ ಮಾರಾಟದ ಬೆಲೆ ಗಗನ ಮುಟ್ಟಲು ಪ್ರಾರಂಭಿಸಿತು. ಉದಾಹರಣೆಗೆ ೨೦೦೩ರಲ್ಲಿ ಸರ್ಕಾರವು ನಿಗದಿತ ದಾಸ್ತಾನು ಮತ್ತು ಚಿಲ್ಲರೆ ಮಾರುಕಟ್ಟೆಗೆ ಸಕ್ಕರೆ ಬಿಡುಗಡೆಯ ಪ್ರಮಾಣವನ್ನು ಘೋಷಿಸಿದ ನಂತರದಲ್ಲಿ ಸಕ್ಕರೆಯ ಬೆಲೆಯು ಟನ್ನಿಗೆ ೨೫೦ ರೂ.ಗಳಷ್ಟು ಹೆಚ್ಚಾಯಿತು. ಮತ್ತು ೨೦೧೪ರ ಜನವರಿ ಮತ್ತು ಜುಲೈ ನಡುವಿನ ಅವಧಿಯಲ್ಲಿ ದಾಸ್ತಾನು ಮಿತಿಯನ್ನು ಕಟ್ಟುನಿಟ್ಟಾಗಿ ಹೇರಿದ್ದರಿಂದ ಉದ್ದಿನ ಬೇಳೆಯ ಬೆಲೆ ಕೆಜಿಗೆ ೧೪ ರೂ, ಹೆಸರು ಬೇಳೆಯ ಬೆಲೆ ಕೆಜಿಗೆ ೮ ರೂ, ಮತ್ತು ಅಲಸಂದೆಯ ಬೇಲೆ ಕೆಜಿಗೆ ೯ ರೂ.ನಷ್ಟು ಹೆಚ್ಚಾಯಿತು. ಹಾಗೆಯೇ ಅಕ್ಕಿಯ ಬೆಲೆಯೂ ಸಹ ಕೆಜಿಗೆ ೧-೨ ರೂ ನಷ್ಟು ಹೆಚ್ಚಾಯಿತು. ಹೀಗಿರುವಾಗ ಹಂಗಾಮಿ ದಾಸ್ತಾನು ಮತ್ತು ಮಾರಾಟದಂಥ ಸಾಧನಗಳ ಮೂಲಕ ಸರ್ಕಾರವು ಬೆಲೆಯನ್ನು ನಿಯಂತ್ರಿಸುವುದು ಹೆಚ್ಚು ಸಹಕಾರಿಯಾಗಬಲ್ಲವೇ ವಿನಾ ಇಸಿಎ ಕಾಯಿದೆಯನ್ನು ಮತ್ತಷ್ಟು ಸಡಿಲಗೊಳಿಸುವುದು ಅಥವಾ ಅಮಾನತ್ತುಗೊಳಿಸುವುದಲ್ಲ. ಹೆಚ್ಚೆಂದರೆ ಅವು ಇನ್ನಷ್ಟು ಆತಂಕಗಳನ್ನಷ್ಟೇ ಹುಟ್ಟಿಸಬಲ್ಲವು. .

ಇಸಿಎ ತಿದ್ದುಪಡಿಯು ಒಂದು ಸಾಂಕ್ರಾಮಿಕ ವಿಷಯವಾಗಿದ್ದು ಅದರಲ್ಲೂ ವಿಶೇಷವಾಗಿ ಸರ್ಕಾರವೇ ಆಡಳಿತಾತ್ಮಕ ಬೆಲೆಯನ್ನು ನಿಗದಿಗೊಳಿಸುವಂಥ ಬಲವಾದ ರಾಜಕೀಯ ವ್ಯವಸ್ಥೆಯನ್ನು ಆಧರಿಸಿರುವ ಬೆಳೆಗಳ ವಿಷಯದಲ್ಲಿ ಇದು ಇನ್ನೂ ಹೆಚ್ಚು ನಿಜವಾಗಿದೆ. ಯಾವ ಬೆಳೆಗಳಿಗೆ ಸರ್ಕಾರವು ಒಂದು ನಿಶ್ಚಿತ ಬೆಲೆಯನ್ನು ಘೋಷಿಸುತ್ತದೆಯೋ ಅಂಥಾ ಬೆಳೆಗಳನ್ನು ಎಷ್ಟು ಬೆಳೆದರೂ ಕೊಂಡುಕೊಳ್ಳಲೇ ಬೇಕಾಗುತ್ತದೆ. ಉದಾಹರಣೆಗೆ ಕಬ್ಬಿನ ಬೆಳೆಯ ವಿಷಯವನ್ನು ತೆಗೆದುಕೊಳ್ಳೋಣ. ಸಕ್ಕರೆ ಕಾರ್ಖಾನೆಗಳು ಒಂದು ದೊಡ್ಡ ರಾಜಕೀಯ ಲಾಬಿಯಾಗಿ ಬೆಳೆದಿವೆ. ಮತ್ತು  ಅವು ಕಬ್ಬಿನ ಸಾಗಾಟ ಮತ್ತು ಖರೀದಿಯ ಮೇಲಿನ ನಿಯಂತ್ರಣವನ್ನು ತೆಗೆಯುವುದನ್ನು ಬಲವಾಗಿ ವಿರೋಧಿಸುತ್ತವೆ. ಏಕೆಂದರೆ ಅದರಿಂದ ಬೇಡಿಕೆಯು ಕುಸಿದು ಸರ್ಕಾರವು ಕಾರ್ಖಾನೆಯಿಂದ ಕೊಂಡುಕೊಳ್ಳುವುದನ್ನು ಕಡಿಮೆ ಮಾಡುವುದರಿಂದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರವು ನಿಗದಿ ಮಾಡಿದಷ್ಟು ಕನಿಷ್ಟ ಬೆಂಬಲ ಬೆಲೆಯನ್ನು ಕಬ್ಬು ಬೆಳೆಗಾರರಿಗೆ ನೀಡಲು ಒಪ್ಪುವುದಿಲ್ಲ. ಸಕಾರವು ಕಾರ್ಖಾನೆಯ  ಮೇಲೆ ಸೆಸ್ ವಿಧಿಸಿ ತಾತ್ಕಾಲಿನ ದಾಸ್ತಾನನ್ನು ಕಡಿಮೆಗೊಳಿಸಿದರೂ ಅದರ ಹೊರೆಯನ್ನು ಗ್ರಾಹಕರೇ ಹೊರಬೇಕಾಗುತ್ತದೆ. ಆದರೆ ಸರ್ಕಾರಗಳ ರಾಜಕೀಯ ಭವಿಷ್ಯಗಳು ಸಕ್ಕರೆ ಕಾರ್ಖಾನೆಯ ಮಾಲೀಕರ ಮರ್ಜಿಯಲ್ಲಿ ಇರುತ್ತದೆ. ಆದ್ದರಿಂದ ಈ ಪ್ರಕ್ರಿಯೆಯಲ್ಲಿ ನಡೆಯುವ ಯಾವುದೇ ಹೇರಾಫೇರಿಗಳನ್ನು ಸರ್ಕಾರ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಇಂಥಾ ಉದಾಹರಣೆಗಳು ಕಣ್ಣಮುಂದಿರುವಾಗ ಕೃಷಿ ಸುಧಾರಣೆಯ ವಿಷಯದಲ್ಲಿ ಸಹಕಾರಿ ಒಕ್ಕೂಟವಾದವನ್ನು ಅನುಸರಿಸಬೇಕೆಂಬ ತತ್ವ  ಆಚರಣೆಯಾಗುವುದು ಕಷ್ಟ. ಮಾದರಿ ಎಪಿಎಂಸಿ ಕಾಯಿದೆಯನ್ನು ಜಾರಿ ಮಾಡುವ ವಿಷಯದಲ್ಲೂ ಒಂದೊಂದು ರಾಜ್ಯಗಳು ಒಂದೊಂದು ರೀತಿಯಲ್ಲಿ ಕಾಯಿದೆಯ ಸಾರದಲ್ಲೇ ಬೇಕಾಬಿಟ್ಟಿ ತಿದ್ದುಪಡಿಗಳನ್ನು ಮಾಡಿಕೊಂಡಿದ್ದನ್ನು ಮರೆಯಲುಂಟೇ? ಅದೇ ರೀತಿ ಕೇಂದ್ರವು ಪ್ರಸ್ತಾಪಿಸುತ್ತಿರುವ ಈ ಇಸಿಎ ತಿದ್ದುಪಡಿಗಳನ್ನು ಯಾವ್ಯಾವ ರಾಜ್ಯಗಳು ಎಷ್ಟೆಷ್ಟು ಪಾಲಿಸುತ್ತವೆಂಬುದೂ ಸಹ ಅಯಾ ರಾಜ್ಯಗಳ ರಾಜಕೀಯ ಲೆಕ್ಕಾಚಾರಗಳನ್ನೇ ಅವಲಂಬಿಸಿರುತ್ತದೆ.

ಇವೆಲ್ಲಕ್ಕಿಂತ ಹೆಚ್ಚು ಅಸಮಾಧಾನ ಹುಟ್ಟಿಸುವ ವಿಷಯವೆಂದರೆ ಈ ಸುಧಾರಣೆಯನ್ನು ಜಾರಿ ಮಾಡಬೇಕಾದ ಅಗತ್ಯದ ಬಗ್ಗೆ ಸರ್ಕಾರ ನೀಡಿರುವ ಅಧಿಕೃತ ವಿವರಣೆಗಳು. ಅದರಲ್ಲೂ ದಾಸ್ತಾನು ಮಿತಿಯ ನಿಯಂತ್ರಣದ ಬಗೆಗಿನ ಹೇಳಿಕೆಗಳು. ಅದರ ಪ್ರಕಾರ ಈ ಸುಧಾರಣೆಗಳು ಕೃಷಿ ಮಾರುಕಟ್ಟೆಯ ಕ್ಷೇತ್ರದಲ್ಲಿ ಅತ್ಯಗತ್ಯವಾಗಿಬೇಕಿರುವ ಹೂಡಿಕೆಗಳನ್ನು ಅದರಲ್ಲೂ ಕಾರ್ಪೊರೇಟ್ ಬಂಡವಾಳ ಹೂಡಿಕೆಗಳನ್ನು ಉತ್ತೇಜಿಸಲಿದೆಯೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಆ ವಿವರಣೆಯ ಹಿಂದೆ ಮಾರುಕಟ್ಟೆಯ ಬಗೆಗಿನ ಮೋಹ ದಿಂದ ಹುಟ್ಟಿಕೊಳ್ಳುವ ಧೋರಣೆಗಳಿವೆಯೇ ವಿನಾ ಸತ್ಯಾಂಶಗಳಲ್ಲ. ಮೊದಲನೆಯದಾಗಿ ಅದರ ಪ್ರಕಾರ ಖಾಸಗಿ ಕ್ಷೇತ್ರದ ಮಧ್ಯಪ್ರವೇಶವು ಕೃಷಿ ಸುಧಾರಣೆಯಲ್ಲಿ ಪ್ರವರ್ತಕನಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಖಾಸಗಿ ಕ್ಷೇತ್ರವನ್ನು ಗ್ರಾಮೀಣಾಭಿವೃದ್ಧಿ ಯೋಜನೆಗಳಲ್ಲಿ ಸಂಪೂರ್ಣವಾಗಿ ಒಳಗೊಳ್ಳಬೇಕು.  ಎರಡನೆಯದಾಗಿ ಖಾಸಗಿ ಕ್ಷೇತ್ರವನ್ನು ಒಳಗೊಂಡಾಗ ಕೃಷಿ ಮಾರುಕಟ್ಟೆ ಸಾಮರ್ಥ್ಯವನ್ನು ಹೆಚ್ಚಿಸುವುದರಲ್ಲಿ ಅದು ಎಂಥಾ ಪರಿಣಾಮವನ್ನು ಬೀರಬಲ್ಲದೆಂಬುದನ್ನು ವಿವರಿಸುವ ಅಗತ್ಯವೇ ಇಲ್ಲ. ಈ ಧೋರಣೆಗಳು ನರೇಂದ್ರ ಮೋದಿಯವರ ೨೦೧೪ರ ಚುನಾವಣಾ ಭರವಸೆಗಳಾದ ಕನಿಷ್ಟ ಸರ್ಕಾರ ಗರಿಷ್ಟ ಆಡಳಿತ ವೆಂಬ ಘೋಷಣೆಗೆ ಪೂರಕವೇ ಆಗಿದೆ. ಆದರೆ ಖಾಸಗಿ ಕ್ಷೇತ್ರವು ಈ ಯೋಜನೆಯಲ್ಲಿ ಹೇಗೆ ಭಾಗಿಯಾಗಲಿದೆಯೆಂಬ ಬಗ್ಗೆ ಒಂದು ಸ್ಪಷ್ಟ ನೀಲನಕ್ಷೆಯಿಲ್ಲದೆ ರೈತರ  ಮೇಲೆ ಅದರಲ್ಲೂ ಸಣ್ಣ ಹಿಡುವಳಿದಾರರ ಮೇಲೆ ಅದು ಯಾವ ರೀತಿಯ ಪರಿಣಾಮವನ್ನು ಬೀರಲಿದೆ ಎಂದು ಹೇಳಲು ಸಾಧ್ಯವಿಲ್ಲ. ವಾಸ್ತವವಾಗಿ, ದಾಸ್ತಾನು ಸಂಗ್ರಹ, ದರ ಚೌಕಾಶಿ ಶಕ್ತಿ, ಲಾಭಕ್ಕಾಗಿ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ, ಮತ್ತು ಮಾಹಿತಿ ನಿಯಂತ್ರಣಗಳು ಖಾಸಗಿ ಕ್ಷೇತ್ರದ ಮಾರುಕಟ್ಟೆ ಶಕ್ತಿಗಳಾಗಿದ್ದು ಅದರ  ಅಧಿಕಾರ ಚಲಾವಣೆಯನ್ನು ತೀರ್ಮಾನಿಸುವ ಅಂಶಗಳೆಂಬುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಮಾರುಕಟ್ಟೆ ಮೋಹದ ಬಗ್ಗೆ ನಡೆದಿರುವ ಸಾಕಷ್ಟು ಅಧ್ಯಯನಗಳು ತಿಳಿಸುವುದೇನೆಂದರೆ ಮಾರುಕಟ್ಟೆಯ ಅಧಿಕಾರ ವರ್ತನೆಗಳು ಪ್ರಭುತ್ವನ್ನು ತಮ್ಮ ಹಿತಾಸಕ್ತಿಗೆ ಅಡ್ಡಿಯಾಗದ ರೀತಿ  ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತವೆ. ಅದು ಕಾರ್ಪೊರೇಟ್ ಮತ್ತು ಸರ್ಕಾರಗಳ ನಡುವೆ ಸಂಪನ್ಮೂಲ ಹಂಚಿಕೆಯ ಕರಾರುಗಳನ್ನು ಬದಲಿಸಬಹುದೇ ವಿನಃ ಅವುಗಳನ್ನು ಇಲ್ಲವಾಗಿಸುವುದಿಲ್ಲ. ಹೀಗಾಗಿ ಮತ್ತೆ ಅಧಿಕಾರಕ್ಕೆ ಬಂದಿರುವ ಈ ಸರ್ಕಾರದ ಒಳಗೊಳ್ಳುವ ಕೃಷಿ ಸುಧಾರಣೆಗಳ ಬಗೆಗಿನ ನೀತಿಗಳು ಜಾರಿ ಸಾಧ್ಯವಾದ ಒಂದು  ಸಬಲೀಕೃತ ವಾತಾವರಣವನ್ನು ನಿರ್ಮಿಸಿದಲ್ಲಿ ಮಾತ್ರ ಕಾಲದ ಪರಿಕ್ಷೆಯನ್ನು ಗೆಲ್ಲಲಿವೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top