ISSN (Print) - 0012-9976 | ISSN (Online) - 2349-8846

ಮತಗಟ್ಟೆ ಸಮೀಕ್ಷೆಯ ಜೊತೆಜೊತೆಗೆ ಶೇರು ಗೂಳಿಗಳ ದಾಳಿ!

ಮಾರುಕಟ್ಟೆಗಳು ಸ್ಥಿರತೆಯನ್ನು ಮಾತ್ರವಲ್ಲ ಸರ್ವಾಧಿಕಾರವನ್ನೂ ಪ್ರೀತಿಸುತ್ತವೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಭಾರತದ ಸ್ಟಾಕ್ ಮಾರುಕಟ್ಟೆಗಳ ಸೆನ್ಸೆಕ್ಸ್ ಸೂಚ್ಯಂಕ ಮೊಟ್ಟಮೊದಲ ಬಾರಿಗೆ ೪೦,೦೦೦ ಅಂಕಗಳನ್ನು ದಾಟಿ ಮುನ್ನುಗ್ಗಿದೆ. ಈ ಕನಸಿನ ಓಟವು ಮೇ ೨೦ರಂದು ಚುನಾಣಾ ಫಲಿತಾಂಶಗಳ ಬಗೆಗಿನ ಮತಗಟ್ಟೆ ಸಮೀಕ್ಷೆಗಳ (ಎಕ್ಸಿಟ್ ಪೋಲ್) ಫಲಿತಾಂಶಗಳು ಹೊರಬೀಳುತ್ತಿದ್ದಂತೆ ಶುರುವಾಗಿತ್ತು. ಈ ಬಗೆಯ ಹೆಚ್ಚಳವು ಅತ್ಯಕರ್ಷಕವಾಗಿ ಕಾಣಲು ಕಾರಣವೇನೆಂದರೆ ವ್ಯತಿರಿಕ್ತ ಜಾಗತಿಕ ಆರ್ಥಿಕ ಮತ್ತು ವಾಣಿಜ್ಯ ಅಂದಾಜುಗಳಿಂದಾಗಿ ಸೂಚ್ಯಂಕ ಈ ಮುಂಚೆ ತೀರಾ ಕೆಳಹಂತದಲ್ಲಿದ್ದದ್ದು. ಅದೇನೇ ಇದ್ದರೂ ರಿಸರ್ವ್ ಬ್ಯಾಂಕು ಜೂನ್ ೬ ರಂದು ಬ್ಯಾಂಕುಗಳ ಬಡ್ಡಿದರದಲ್ಲಿ ಕಡಿತವನ್ನು ಘೋಷಿಸಿದೊಡನೆಯೇ ಶೇರು ಮಾರುಕಟ್ಟೆಯು ೪೦೦ ಅಂಕಗಳಷ್ಟು ಕುಸಿಯಿತು.

ಈ ಸಣ್ಣಮಟ್ಟದ ಕುಸಿತವೇನೇ ಇರಲಿ ಎನ್‌ಡಿಎ ಸರ್ಕಾರದ ಅಥವಾ ಯುಪಿಎ-೨ ಸರ್ಕಾರದ ಘೋಷಣೆಗಳೂ ಕೂಡಾ ಶೇರುಮಾರುಕಟ್ಟೆಯಲ್ಲಿ ಹುಟ್ಟಿಸದಷ್ಟು ಉತ್ಸಾಹವನ್ನು ಮತಗಟ್ಟೆ ಸಮೀಕ್ಷೆಗಳು (ಎಕ್ಸಿಟ್ ಪೋಲ್) ಹುಟ್ಟುಹಾಕಿದವು. ಏಕೆ ಹೀಗೆ? ಶೇರುಮಾರುಕಟ್ಟೆಗಳ ಚಲನೆಯು ಎರಡು ಅಂಶಗಳನ್ನು ಹೊಂದಿರುತ್ತವೆ: ಶೇರು ಮಾರಾಟವಾಗುವ ಕಾರ್ಪೊರೇಟ್ ಸಂಸ್ಥೆಗಳ ಮೂಲಭೂತ ಅಂಶಗಳ ದೀರ್ಘಕಾಲಿನ ಸ್ಥಿತಿಗತಿ ಮತ್ತು ವ್ಯವಸ್ಥೆಯು ಎದುರಿಸಬೇಕಾಗಿ ಬರುವ ಅನಿರೀಕ್ಷಿತ ಮತ್ತು ದಿಢೀರ್ ಆಘಾತಗಳು. ಶೇರು ಮಾರುಕಟ್ಟೆಯಲ್ಲಿ ಆಗುತ್ತಿರುವ ಹಾಲೀ ಚಲನೆಗಳನ್ನು, ಕೀನ್ಸ್ ಮುಂದಿಟ್ಟ ರೀತಿ ಎರಡು  ವಿಭಾಗಗಳಾಗಿ ಅರ್ಥಮಾಡಿಕೊಳ್ಳಬಹುದು. ಒಂದು,  ಈ ಹೆಚ್ಚಳದಲ್ಲಿ ಎಷ್ಟು ಭಾಗ ಸಟ್ಟಾ -ಜೂಜು ಲೆಕ್ಕಾಚಾರದಿಂದ ಬಂದಿರುವುದು (ಇದರಿಂದ ತತ್ಕಾಲಿನ ಲಾಭವಷ್ಟೇ ಸಾಧ್ಯ). ಎರಡನೆಯದು,  ಹೆಚ್ಚಳದ ಎಷ್ಟು ಭಾಗ ಆ ಉದ್ಯಮಗಳ ಆರ್ಥಿಕ ಆರೋಗ್ಯದ ಕಾರಣದಿಂದ ಹರಿದು ಬಂದಿರುವುದು (ಅಂದರೆ ಆಯಾ ಉದ್ಯಮಗಳ ಮೂಲಭೂತ ಆರ್ಥಿಕ  ಆರೋಗ್ಯಗಳು). ಒಟ್ಟಾರೆ ಲೆಕ್ಕಾಚಾರದಲ್ಲಿ ಹೆಚ್ಚಳದ ಬಹುಭಾಗವು ಮೊದಲನೆಯ ಕಾರಣದಿಂದ ಉಂಟಾಗಿದೆಯೆಂದರೆ ಮಾರುಕಟ್ಟೆಯ ಮೌಲ್ಯವನ್ನು ಇರುವುದಕ್ಕಿಂತ ಉತ್ಪ್ರೇಕ್ಷಿತವಾಗಿ ಅಂದಾಜಿಸಲಾಗಿದೆಯೆಂದರ್ಥ ಮತ್ತು ಕೂಡಲೇ ಅದನ್ನು ಸರಿಪಡಿಸಲು ತಿದ್ದುಪಡಿ ಕ್ರ,ಮಗಳನ್ನು ಕೈಗೊಳ್ಳಬೇಕೆಂದರ್ಥ. ಅದರ ಬದಲಿಗೆ ಹೆಚ್ಚಳದ ಬಹುಭಾಗವು ಆಯಾ ಉದ್ಯಮಗಳ ಮೂಲಭೂತ ಆರ್ಥಿಕ ಆರೋಗ್ಯಗಳನ್ನು ಆಧರಿಸಿ ಸಂಭವಿಸಿದೆಯೆಂದಾದಲ್ಲಿ ಹಾಲೀ ಚಾಲ್ತಿ ಬೆಲೆಯ ಗಳಿಕೆಗಳ ಅನುಪಾತವು ಹೆಚ್ಚೇ ಇದ್ದರೂ ಅವು ಭವಿಷ್ಯದಲ್ಲಿನ ಆರ್ಥಿಕತೆಯ ಆರೋಗ್ಯದ ಬಗ್ಗೆ ಉತ್ತಮ ನಿರೀಕ್ಷೆಗಳನ್ನು ಇಟ್ಟುಕೊಂಡು ಮಾಡಲಾಗಿದೆಯೆಂದು ಅರ್ಥೈಸಿಕೊಳ್ಳಲಾಗುತ್ತದೆ. ಆದರೂ ಈ ಸಟ್ಟಾ ಬಜಾರಿನಲ್ಲಿ ಹಿಟ್ಟನ್ನು ಹೊಟ್ಟಿನಿಂದ ಬೇರ್ಪಡಿಸುವುದು ಕಷ್ಟ. ಏಕೆಂದರೆ ಇಂದು ಹೊಟ್ಟು ಎಂದು ಭಾವಿಸಲಾಗಿರುವುದು ನಾಳೆ ಹಲವಾರು ಕಾರಣಗಳಿಗೆ ಹಿಟ್ಟಾಗಿ ಬಿಡಬಹುದು. ಏಕೆಂದರೆ ಒಮ್ಮೊಮ್ಮೆ ಹಾಲೀ ಹೆಚ್ಚಳವು ಆಯಾ ಉದ್ಯಮಗಳು ಚೆನ್ನಾಗಿ ಕಾರ್ಯನಿರ್ವಹಿಸಲಿದೆ ಎಂಬ ಅಂದಾಜಿನ ಮೇಲೆ ಮಾಡಿದವಾಗಿದ್ದು ಅವರ ನಿರೀಕ್ಷೆಗೆ ತಕ್ಕಂತೆ ಹಾಗೆ ಆಗಿಯೂ ಬಿಡಬಹುದು. ಆದರೆ ಕಳೆದ ಕೆಲವು ವಾರಗಳಲ್ಲಿ ಮಾರುಕಟ್ಟೆಯಲ್ಲಿ ಕಂಡುಬಂದ ಈ ರಭಸಕ್ಕೆ ಪ್ರೇರಣೆಯೇನು?

ಮೊದಲನೆಯದಾಗಿ ಒಂದೇ ದಿನದಲ್ಲಿ ಶೇರು ಬಜಾರಿನಲ್ಲಿ ಆ ಪ್ರಮಾಣದ ವ್ಯವಹಾರವಾಗಲು ತತ್‌ಕ್ಷಣದ ಕಾರಣವೆಂದರೆ, ಅಂದು ಎಲ್ಲಾ ಎಕ್ಸಿಟ್ ಪೋಲ್‌ಗಳೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ವಾಪಸ್ ಅಧಿಕಾರಕ್ಕೆ ಮರಳುತ್ತದೆಂದು ಭವಿಷ್ಯ ನುಡಿದದ್ದು. ಎರಡನೆಯ ಕಾರಣ ಮೊದಲನೆಯದರ ಜೊತೆ ಸಂಬಂಧ ಹೊಂದಿದೆ. ಒಂದು ಬಹುಮತವುಳ್ಳ ಸ್ಥಿರ ಸರ್ಕಾರ ರಾಜಕೀಯ ಸ್ಥಿರತೆಯನ್ನು ಕೊಡುವುದರ  ಮೂಲಕ ನಿರೀಕ್ಷಿತ ವಾಣಿಜ್ಯ ವಾತಾವರಣವನ್ನು ಒದಗಿಸಬಹುದೆಂಬ ದೀರ್ಘಕಾಲೀನ ಲೆಕ್ಕಾಚಾರಗಳೂ ಸಹ ಇದಕ್ಕೆ ಕಾರಣವಾಗಿವೆ. ಆದರೆ ಈ ಸರ್ಕಾರವು ತನ್ನ ಮೊದಲ ಅವಧಿಯಲ್ಲಿ ಕೂಡಾ ಆರ್ಥಿಕತೆಯ ಪುನಶ್ಚೇತನಕ್ಕೆ ಮಾಡಬೇಕಾದುದನ್ನು ಮಾಡದ ಚರಿತ್ರೆಯನ್ನು ಹೊಂದಿರುವಾಗ ಕೇವಲ ಮರು ನಿರೀಕ್ಷೆಗಳೇ ಹೂಡಿಕೆ ಮಾಡಲು ಸಾಲುವುದಿಲ್ಲ. ಹಳೆಯ ರೀತಿ ಒಂದು ಅಸಮರ್ಥ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುವುದನ್ನು ಯಾವ ಹೂಡಿಕೆದಾರರೂ ಉತ್ತಮ ಸಂಕೇತವೆಂದು ಭಾವಿಸುವುದಿಲ್ಲ. ಹಾಗಿದ್ದರೂ ಏಕೆ ಅಂದು ಸಟ್ಟಾ ಬಜಾರಿನಲ್ಲಿ ಆ ಪ್ರಮಾಣದ ಹೂಡಿಕೆಯಾಯಿತು? ಜನರ ಸಂಪೂರ್ಣ ವಿಶ್ವಾಸವನ್ನು ಗೆದ್ದುಕೊಂಡಂತೆ ಕಾಣುವ ನರೇಂದ್ರ ಮೋದಿಯಂಥ ಪ್ರಬಲ ನಾಯಕ,  ರಾಜಕೀಯವಾಗಿ ಜಾರಿ ಮಾಡಲು ಅತಿಕಷ್ಟಕರವಾಗಿರುವ ಆದರೆ ಅತ್ಯಂತ ಮಾರುಕಟ್ಟೆ ಸ್ನೇಹಿಯಾಗಿರುವ ಆರ್ಥಿಕ ಸುಧಾರಣೆ ನೀತಿಗಳನ್ನು ಜಾರಿ ಮಾಡುವಲ್ಲಿ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬಹುದೆಂಬ ಭರವಸೆಯನ್ನು ಕಾರ್ಪೊರೇಟುಗಳಲ್ಲಿ ಹುಟ್ಟಿಸಿದೆ. ಮೋದಿಯವರು ತಮ್ಮ  ಈ ಎರಡನೇ ಅವಧಿಯಲ್ಲಿ ದೊಡ್ಡ ದೊಡ್ಡ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಿಸುವ ಮತ್ತು ಕಠಿಣವಾದ ಕಾರ್ಮಿಕ ನೀತಿಗಳನ್ನು ಜಾರಿಗೆ ತರುವ ಕ್ರಮಗಳನ್ನು ಕೈಗೊಳ್ಳುತ್ತಾರೆಂದು ಕಾರ್ಪೊರೇಟ್ ವಲಯ ನಿರೀಕ್ಷಿಸುತ್ತಿದೆ. ಕಾರ್ಪೊರೇಟ್ ವಲಯಕ್ಕೆ  ಮೋದಿಯ ಬಗ್ಗೆ ಇರುವ ನಿರೀಕ್ಷೆಗಳು ಅತಿಯಾದದ್ದೆಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ತಮ್ಮ ಮೊದಲ ಅವಧಿಯಲ್ಲಿ ಮೋದಿಯವರು ಜನರಿಂದ ಅತ್ಯಂತ ವಿರೋಧ ಎದುರಿಸಿದ ನೋಟು ನಿಷೇಧ ಕ್ರಮವನ್ನು ಕೈಗೊಳ್ಳಲಿಲ್ಲವೇ?

ಮೊರನೆಯದಾಗಿ, ಐಎಂಎಫ್ ಸಂಸ್ಥೆಯು ಭಾರತದ ಆರ್ಥಿಕತೆಯನ್ನು ಅತಿವೇಗವಾಗಿ ವರ್ಧಿಸುತ್ತಿರುವ ವಿಶ್ವದ ಮೂರನೇ ಆರ್ಥಿಕತೆಯೆಂದು ಘೋಷಿಸಿದ್ದೂ ಸಹ ಸರ್ಕಾರದ ತತ್‌ಕ್ಷಣದ ಕಾರ್ಯನಿರ್ವಹಣೆಯ ಬಗ್ಗೆ ಭರವಸೆಗಳನ್ನು ಹುಟ್ಟಿಸುವಲ್ಲಿ ಪ್ರಮುಖ ಪಾತ್ರವನ್ನೇ ನಿರ್ವಹಿಸಿತು. ಇದು ಆಶ್ಚರ್ಯಕರ. ಏಕೆಂದರೆ ಕಳೆದ ಹಲವು ತ್ರೈಮಾಸಿಕಗಳಲ್ಲೂ ಭಾರತದ ಆರ್ಥಿಕತೆ ಯಾವ ಚೇತರಿಕೆಯನ್ನೂ ಕಂಡಿರಲಿಲ್ಲ. ಹೀಗಾಗಿ ಹೂಡಿಕೆದಾರದು ಅಷ್ಟೇನೂ ಹಿತವಾಗಿರದಿದ್ದ ಗತ ಹಾಗೂ ಅನಿಶ್ಚಿತ ಭವಿಷ್ಯ ಎರಡರ ಮಧ್ಯೆ ಜೂಜನ್ನೇ ಆಡುತ್ತಿದ್ದಾರೆ. ಈ ಉತ್ಸಾಹಕ್ಕೆ ಮತ್ತೊಂದು ಕಾರಣವೇನೆಂದರೆ ತೈಲ ಮಾರುಕಟ್ಟೆಯಲ್ಲಿ  ದರಗಳು ಇನ್ನೂ ಅಗ್ಗವಾಗಿಯೇ ಮುಂದುವರೆದಿರುವುದರಿಂದ  ಸರ್ಕಾರವು ತತ್‌ಕ್ಷಣದಲ್ಲಿ  ಮಾರುಕಟ್ಟೆಯನ್ನು ಒಳಗೊಳ್ಳು ಹಣಕಾಸು ನೀತಿಯನ್ನೇ ಅನುಸರಿಸಬಹುದೆಂಬ ನಿರೀಕ್ಷೆಯನ್ನು ಮಾರುಕಟ್ಟೆಯು ಹೊಂದಿದೆ. ಸಾಧಾರಣ ಸಂದರ್ಭಗಳಲ್ಲಿ ಕಡಿಮೆ ಲಾಭದ ಬಾಂಡುಗಳು ಶೇರುಗಳ ಖರೀದಿಯನ್ನು ಅತಿ ಹೆಚ್ಚು ಆಕರ್ಷಕಗೊಳಿಸುತ್ತದೆ. ಇದಲ್ಲದೆ ಬಡ್ಡಿದರ ಇಳಿಸುವ ನಿರೀಕ್ಷೆಯೂ ಕಾರ್ಪೊರೇಟ್ ಹೂಡಿಕೆ ಮತ್ತು ಮನೆಮಟ್ಟುಗಳ ಹೂಡಿಕೆಗಳು ಹೆಚ್ಚಿಸಿ ಒಟ್ಟಾಗಿ ಆರ್ಥಿಕತೆ ಚೇತರಿಸಿಕೊಳ್ಳಬಹುದೆಂಬ ಆಶಾಭಾವನೆಯೂ ಸಹ ಹೂಡಿಕೆಯ ಪ್ರೇರಣೆಯನ್ನು ಒದಗಿಸಿತು. ಆದರೆ ರಿಸರ್ವ್ ಬ್ಯಾಂಕು ಮಾತ್ರ ಗೊಂದಲಕಾರಿ ಸಂಕೇತಗಳನ್ನು ನೀಡಿದೆ. ಒಂದೆಡೆ ಅದು ಬಡ್ಡಿದರಗಳನ್ನು ಕಡಿತಗೊಳಿಸಿದೆಯಾದರೂ ಒಟ್ಟಾರೆ ಅಭಿವೃದ್ಧಿಯ ಗತಿ ಇಳಿಮುಖವೇ ಆಗುಬಹುದೆಂಬ ಸೂಚನೆಯನ್ನು ನೀಡಿದೆ ಮತ್ತು ನಗದು ಹರಿವಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ಯಾವ ನೇರ ಪರಿಹಾರವನ್ನೂ ರಿಸರ್ವ್ ಬ್ಯಾಂಕ್ ಸೂಚಿಸಿಲ್ಲ.

ನಾಲ್ಕನೆಯದಾಗಿ ೨೦೧೯ರ ಸಾಲಿನಲ್ಲಿ ಈವರಗೆ ಶೇರುಮಾರುಕಟ್ಟೆಗೆ ಅಗಾಧವಾದ ವಿದೇಶಿ ಶೇರು ಬಂಡವಾಳ ಹೂಡಿಕೆಗಳು ಹರಿದು ಬಂದಿವೆ. ಈ ಹರಿವಿಗೆ ಒಂದಷ್ಟು ಕಾರಣ ಹೂಡಿಕೆದಾರರ ದೇಶಗಳಲ್ಲಿನ ಪರಿಸ್ಥಿತಿಗಳು ಲಾಭದಾಯಕವಾಗಿರದೆ ಹೊರಹೂಡಿಕೆ ಮಾಡುವಂತೆ ಮಾಡಿರುವ ಹೊರದಬ್ಬುವ (ಪುಶ್) ಅಂಶಗಳು. ಇವುಗಳಲ್ಲಿ ಅಮೆರಿಕ ಮತ್ತು ಚೀನಾಗಳ ನಡುವೆ ಸ್ಪೋಟಗೊಂಡಿರುವ ಮಾರುಕಟ್ಟೆ ಯುದ್ಧಗಳು, ಅಮೆರಿಕತೆ ಆರ್ಥಿಕತೆ ಎಣಿಸಿದ ರೀತಿಯಲ್ಲಿ ಚೇತರಿಸಿಕೊಳ್ಳದಿರುವುದು, ಅಮೆರಿಕದ ಹಣಕಾಸು ನೀತಿಗಳು ಸಡಿಲಗೊಂಡು ಅಮೆರಿಕದ ಬಾಂಡುಗಳ ಖರೀದಿಯಿಂದ ಸಿಗುವ ಲಾಭಾಂಶವು ಕಡಿಮೆಯಾಗುವ ನಿರೀಕ್ಷೆಗಳು ಪ್ರಮುಖವಾದವುಗಳು. ವಿನಿಮಯದ ದರಗಳ ತೊಂದರೆ ಎದುರಾಗದಿದ್ದಲ್ಲಿ ಈ ಕೊನೆಯ ಅಂಶವು ಏಕಕಾಲದಲ್ಲಿ ಹಲವು ದೇಶಗಳ ಮಾರುಕಟ್ಟೆಗಳ ವಹಿವಾಟನ್ನು ಹೆಚ್ಚಿಸಬಹುದು. ಇನ್ನು ಭಾರತದ ಶೇರು ಮಾರುಕಟ್ಟೆಯ ಕಡೆಗೆ ಸೆಳೆಯು  (ಪುಲ್) ಅಂಶದ ಬಗ್ಗೆ ಹೇಳುವುದಾದರೆ ಅವೆಲ್ಲಾ ಸ್ಥಳೀಯ ಹೂಡಿಕೆದಾರರನ್ನು ಮಾತ್ರ ಪ್ರಭಾವಿಸಿರುವ ವಿಷಯಗಳಾಗಿವೆ.

ಈ ಶೇರು ಮಾರುಕಟ್ಟೆಯ  ಗೂಳಿಗಳು ಈ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಂಡಿವೆಯೋ ಇಲ್ಲವೋ, ಒಂದಂತೂ ಖಂಡಿತಾ ನಿಜ: ಎಕ್ಸಿಟ್ ಪೋಲ್ ಫಲಿತಾಂಶಗಳ ನಂತರದಲ್ಲಿ ತಾತ್ಕಾಲಿಕ ಅವಧಿಗೆ ಶೇರು ಮಾರುಕಟ್ಟೆಯಲ್ಲಿ ಕಂಡ ಏರಿಕೆಗಳು ನಿಜಾರ್ಥದಲ್ಲಿ ಹೊಟ್ಟಾಗಿರುತ್ತವೆಯೇ ಹೊರತು ಹಿಟ್ಟಾಗಿರುವುದಿಲ್ಲ. ಅಲ್ಲದೆ ಇದೊಂದು ಉತ್ಪ್ರೇಕ್ಷಿತ ಮೌಲ್ಯಗಳನ್ನು ಪಡೆದ ಮಾರುಕಟ್ಟೆಯೇ ಆಗಿದ್ದಲ್ಲಿ ಇಂದಿನ ಅತ್ಯಂತ ಅನಿಶ್ಚಿತ ಜಾಗತಿಕ ವಾತಾವರಣದಲ್ಲಿ ಯಾವುದೇ ಆರ್ಥಿಕತೆಗೂ ಹಾನಿಕಾರಕವಾದ ಪರಿಣಾಮಗಳನ್ನೇ ಬೀರಲಿದೆ. ಈ ಬಗೆಯ ಉತ್ಪ್ರೇಕ್ಷಿತ ಮೌಲೀಕರಣದಿಂದ ಉಂಟಾಗುವ ಅಪಾಯಗಳಿಂದ ಪಾರಾಗಲು ಕೀನ್ಸ್‌ವಾದಿಗಳು ಇಂಥಾ ವ್ಯವಹಾರಗಳ ಮೇಲೆ ಅಲ್ಪಕಾಲೀನ ಲಾಭ  ತೆರಿಗೆಯನ್ನು ವಿಧಿಸಬೇಕೆಂದು ಪ್ರತಿಪಾದಿಸುತ್ತಾರೆ. ಅದೇ ಸಮಯದಲ್ಲಿ ಅವು ಶೇರುಮಾರುಕಟ್ಟೆಯಲ್ಲಿನ ಹೂಡಿಕೆಯನ್ನೇ ನಿರುತ್ತೇಜಗೊಳಿಸಬಾರದು. ಏಕೆಂದರೆ ಅದು ಅಗಾಧ ಪ್ರಮಾಣದಲ್ಲಿರುವ ಅವಿಭಜಿತ ಬಂಡವಾಳವನ್ನು ವಿಭಜಿತಗೊಳಿಸಿ ಹೂಡಿಕೆಯಲ್ಲಿರುವ ಅಪಾಯಗಳನ್ನು ಕಡಿಮೆ ಮಾಡುತ್ತವೆ. ಇದಕ್ಕೆ ಅತ್ಯುತ್ತಮ ಮಾರ್ಗವೆಂದರೆ ವಿತ್ತೀಯ ನಿಯಂತ್ರಣ ಸಾಧನಗ ಮೂಲಕ ಸರ್ಕಾರವೇ ಆರ್ಥಿಕತೆಯ ಸಾಧನಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದೇ ಹೊರತು ಕಾರ್ಪೊರೇಟ್ ಹೂಡಿಕೆ ಅಥವಾ ಮನೆವಾರು ಹೂಡಿಕೆಗಳಂತ ಪರೋಕ್ಷ ಮತ್ತು ತನ್ನ ಕೈಲಿರದ ಸಾಧನಗಳನ್ನು ಅವಲಂಬಿಸುವುದಲ್ಲ.  ದುರದೃಷ್ಟವಶಾತ್ ಹಾಲಿ ಆಡಳಿತರೂಢ ಸರ್ಕಾರವು ಎಂಥಾ ಕಠಿಣ ಸಂದರ್ಭಗಳಲ್ಲೂ ಕೂಡಾ ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಶಾಸನವನ್ನು ಕಟ್ಟುನಿಟ್ಟಾಗಿ ಪಾಲಿಸಲು ಪಣತೊಟ್ಟಿದೆ. ಇದರಿಂದಾಗಿ ಸರ್ಕಾರಕ್ಕೆ ಯಾವುದೇ ನೀತಿಗಳ ಮೂಲಕ ಆರ್ಥಿಕತೆಯನ್ನು ಪ್ರಭಾವಿಸುವ ಅವಕಾಶಗಳೇ ಇಲ್ಲದಂತಾಗುತ್ತದೆ. ಮತ್ತು ಆ ಮೂಲಕ ದೇಶದ ಆರ್ಥಿಕತೆಯ ಉದ್ದೇಶಗಳ ಬಗ್ಗೆ ಯಾವ ಕಾಳಜಿಯನ್ನೂ ಹೊಂದಿರದ ಶೇರುಬಜಾರಿನ ಏರಿಳಿವುಗಳಿಗೆ ಮತ್ತು  ಕಾರ್ಪೊರೇಟ್ ಕಂಪನಿಗಳ ನಿರ್ಧಾರಗಳಿಗೆ ದೇಶದ ಆರ್ಥಿಕತೆಯು ಅಧೀನವಾಗಬೇಕಾಗುತ್ತದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top