ISSN (Print) - 0012-9976 | ISSN (Online) - 2349-8846

ಅಣ್ವಸ್ತ್ರಗಳ ಜವಾಬ್ದಾರಿಯುತ ನಿರ್ವಹಣೆ

ಅಣ್ವಸ್ತ್ರಗಳ ಬಗೆಗಿನ ಬೇಜವಾಬ್ದಾರಿ ಚುನಾವಣಾ ಭಾಷಣಗಳು ಪರಸ್ಪರ ವಿರೋಧಿ ದೇಶಗಳ ಖಾತರಿ ವಿಭ್ರಾಂತಿಗಳಿಗೆ ಎಡೆಮಾಡಿಕೊಡಬಲ್ಲದಷ್ಟೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜಸ್ಥಾನದಲ್ಲಿ ಮಾಡಿದ ಚುನಾವಣಾ ಭಾಷಣದಲ್ಲಿ ಭಾರತದ ಅಣ್ವಸ್ತ್ರಗಳ ಬಳಕೆಯ ಬಗ್ಗೆ ಒಂದು ಬಗೆಯ ಹೊಣೆಗೇಡಿ ಮತ್ತು ಬೇಜವಾಬ್ದಾರಿ ಟಿಪ್ಪಣಿಗಳನ್ನು ಮಾಡಿರುವುದಾಗಿ ವರದಿಯಾಗಿದೆ. ನಮ್ಮ ಬಳಿ ಅಣುಬಾಂಬುಗಳಿರುವುದು ದೀಪಾವಳಿಯಲ್ಲಿ ಬಳಸಲೆಂದಲ್ಲ ಎಂದು ಪ್ರಧಾನಿಗಳು ಹೇಳಿರುವುದಾಗಿ ವರದಿಯಾಗಿದೆ. ಅಣ್ವಸ್ತ್ರಗಳ ಬಗ್ಗೆ ಈ ಹಿಂದಿನ ಪ್ರಧಾನಿಗಳು ತೋರುತ್ತಿದ್ದ ಸಾರ್ವಜನಿಕ ಸಂಯಮ ಮತ್ತು ಮುನ್ನೆಚ್ಚರಿಕೆಗಳ ಧೋರಣೆಗಳಿಗೆ ಹೋಲಿಸಿದಲ್ಲಿ ಹಾಲಿ ಪ್ರಧಾನಿಗಳ ಈ ಹೇಳಿಕೆಗಳು ಸಂಪೂರ್ಣವಾಗಿ ಭಿದಾರಿ ಹಿಡಿದಿರುವಂತಿದೆ. ಮೋದಿಯವರ ಈ ಬಡಾಯಿಗಳು ಅವರ ರಾಜಕೀಯ ವ್ಯಕ್ತಿತ್ವ ಮತ್ತು ಬಹುಸಂಖ್ಯಾತ ದುರಭಿಮಾನಿ ರಾಜಕಾರಣಕ್ಕೆ ತಕ್ಕಹಾಗಿಯೇ ಇದೆ. ಆದರೆ ಭಾರತವು ಈವರೆಗೆ ಒಂದು ಜವಾಬ್ದಾರಿಯುತ ಮತ್ತು ಪ್ರಬುದ್ಧ ಅಣ್ವಸ್ತ್ರ ರಾಷ್ಟ್ರವಾಗಿ ನಡೆದುಕೊಂಡು ಬಂದಿರುವ ಇತಿಹಾಸಕ್ಕೆ ಅದು ಧಕ್ಕೆ ತರುತ್ತದೆ. 

ಭಾರತವು ೧೯೭೪ರ ವೇಳೆಗಾಗಲೇ ಒಂದು ಕನಿಷ್ಟ ಅಣ್ವಸ್ತ್ರ ಸಾಮರ್ಥ್ಯವನ್ನು ಗಳಿಸಿಕೊಂಡಾಗಿತ್ತು.  ಆದರೆ ಕೆಲವು ಕಾನೂನಾತ್ಮಕ, ತಾಂತ್ರಿಕ ಮತ್ತು ಈ ಭೂಪ್ರದೇಶದ ರಾಜಕೀಯ ಕಾರಣಗಳಿಂದಾಗಿ ಅ ಸಾಮರ್ಥ್ಯವನ್ನು ಜಾಹೀರುಗೊಳಿಸಿರಲಿಲ್ಲ. ಆದರೆ ೧೯೯೮ರಲ್ಲಿ ಭಾರತವು ಬಹಿರಂಗವಾಗಿ ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಘೋಷಿಸಿ ಅದಕ್ಕೆ ಬೇಕಾದ ಇನ್ನಿತರ ಕ್ರಮಗಳನ್ನು ತೆಗೆದುಕೊಂಡರೂ, ತಾನು ಈ ಅಣ್ವಸ್ತ್ರವನ್ನು ಹೊಂದಿರುವುದು ಶತ್ರು ಧಾಳಿಯ ಭೀತಿಯನ್ನು ಎದುರಿಸಲೆಂದೇ ಹೊರತು ಎಂದಿಗೂ ತಾನು ಅವುಗಳನ್ನು ತನ್ನ ಶತ್ರುಗಳ ವಿರುದ್ಧ ಪ್ರಯೋಗಿಸಲು ಮೊದಲು ಮುಂದಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿತ್ತು. ಆದರೆ ಈಗ ಅದಕ್ಕೆ ತದ್ವಿರುದ್ಧವಾಗಿ ಮೋದಿಯವರು ಮಾಡಿರುವ ಭಾಷಣವು ಲಜ್ಜೆಗೇಡಿ ಯುದ್ಧದಾಹಿತನವನ್ನು ತೋರುತ್ತಿದೆಯಲ್ಲದೆ ಈಗಾಗಲೇ ಅಣ್ವಸ್ತ್ರಗಳ ಪೆಟ್ಟಿಗೆಯ ಮೇಲೆ ಕೂತಿರುವ ಈ ಭೂಪ್ರದೇಶದ ಭವಿಷ್ಯದ ಮೇಲೆ ತೀವ್ರವಾದ ಪರಿಣಾಮವನ್ನೂ ಸಹ ಬೀರಲಿದೆ.

ಈ ಹಿಂದೆ ಪಾಕಿಸ್ತಾನದ ರಾಜಕೀಯ ಹಾಗೂ ಮಿಲಿಟರಿ ನಾಯಕರೂ ತಾವೂ ಸಹ  ಅಣ್ವಸ್ತ್ರ ಸ್ಫೋಟದ ಗುಂಡಿಯನ್ನು ಒತ್ತಲು ಹಿಂದೆ ಮುಂದೆ ನೋಡುವುದಿಲ್ಲವೆಂದೂ ಬಡಾಯಿ ಕೊಚ್ಚಿಕೊಂಡಿದ್ದರು. ಅಮೆರಿಕ ಮತ್ತು ರಷ್ಯಾಗಳು ಶೀತಲ ಯುದ್ಧದ ಅವಧಿಯುದ್ದಕ್ಕೂ ಒಬ್ಬರನ್ನೊಬ್ಬರು ಗುರಿಮಾಡಿಕೊಂಡು ಸಾವಿರಾರು ಅಣ್ವಸ್ತ್ರಗಳನ್ನು ಸನ್ನದ್ಧಗೊಳಿಸಿಟ್ಟುಕೊಂಡು ಸರ್ವಾನಾಶದ ಆತಂಕದಲ್ಲೇ ಕಾಲದೂಡಿದ್ದವು. ಆದರೆ ನಂತರದಲ್ಲಿ ಎರಡೂ ದೇಶಗಳೂ ವಿವೇಕಯುತವಾಗಿ ವರ್ತಿಸಲು ಪ್ರಾರಂಭಿಸಿವೆ. ಫ್ರೆಂಚ್ ಮತ್ತು ಬ್ರಿಟಿಷ್ ಸರ್ಕಾರಗಂತೂ ತಮ್ಮ ಅಣ್ವಸ್ತ್ರ ಸಾಮರ್ಥ್ಯದ ಬಗ್ಗೆ ಎಂದಿಗೂ ಬಹಿರಂಗವಾಗಿ ಮಾತನಾಡುವುದಿಲ್ಲ. ಚೀನಾ ಸಹ ಈ ಬಗ್ಗೆ ತನ್ನ ಹೇಳಿಕೆಗಳನ್ನೂ ಕೂಡಾ ನಿಗೂಢವಾಗಿಯೂ ಮತ್ತು ಅಳೆದು ಸುರಿದೂ ಕೊಡುತ್ತದೆ. ಈಗ ಜಗತ್ತಿನಲ್ಲಿ ಘೋಷಿತ ಅಣ್ವಸ್ತ್ರ ರಾಷ್ಟ್ರಗಳಾಗಿರುವ ಅಮೆರಿಕ, ರಷ್ಯಾ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್‌ಗನ್ನು ಬಿಟ್ಟರೆ ಇಸ್ರೇಲ್ ದೇಶವು ೧೯೬೦ರ ವೇಳೆಗೆ ಅಣ್ವಸ್ತ್ರ ಬಲವನ್ನು ಪಡೆದುಕೊಂಡಿದ್ದರೂ ಮತ್ತು ಮೇಲಿನ ಐದು ದೇಶಗಳನ್ನು ಬಿಟ್ಟರೆ ಜಗತ್ತಿನಲ್ಲೇ ಅತ್ಯಾಧುನಿಕ ಮತ್ತು ಅತ್ಯಂತ ಸುಧಾರಿತ ಅಣ್ವಸ್ತ್ರ ಯೋಜನೆಯನ್ನು ಹೊಂದಿರುವ ದೇಶವಾಗಿದ್ದರೂ ಈವರೆಗೆ ತನ್ನ ಬಳಿ ಅಣ್ವಸ್ತ್ರ ಇದೆಯೆಂದು ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಮತ್ತು ಈ ವಿಷಯದ ಬಗ್ಗೆ ಅದು ತೋರುತ್ತಿರುವ ನಿಗೂಢತೆಯು ಆ ಭೂಭಾಗದಲ್ಲಿ ಅದರ ಭದ್ರತಾ ಮತ್ತು ವ್ಯೂಹಾತ್ಮಕ ಆಸಕ್ತಿಗಳಿಗೆ ಸಹಾಯವನ್ನೇ ಮಾಡಿದೆ. ಆದರೆ ಮೋದಿಯವರು ಕೊಚ್ಚಿಕೊಳ್ಳುತ್ತಿರುವ ಬಡಾಯಿಗಳು ಭಾರತವು ಬಹಿರಂಗವಾಗಿ ಘೋಷಿಸಿಕೊಳ್ಳುವ  ಅಣ್ವಸ್ತ್ರ ಸಂಯಮದ ನಿಲುವುಗಳಿಗೆ ತದ್ವಿರುದ್ಧವಾಗಿದೆ. ಮತ್ತು ಅದರಿಂದಾಗಿ ಜಗತ್ತು ಬೇಜವಾಬ್ದಾರಿ ಪ್ರಭುತ್ವಗಳೆಂದು ಪರಿಗಣಿಸುವ ರಾಷ್ಟ್ರಗಳ ಸಾಲಿಗೆ ಭಾರತವನ್ನೂ ಸೇರಿಸಿಬಿಡುವ ಅಪಾಯವೂ ಇದೆ.

ಇದರ ಅರ್ಥ ಭಾರತವು ತನ್ನದೇ ಆದ ಅಣ್ವಸ್ತ್ರ ಯೋಜನೆಯನ್ನು ಹೊಂದಬಾರದೆಂದೇನೂ ಅಲ್ಲ.  ಹಾಗೆಯೇ ತಾರತಮ್ಯದಿಂದ ಕೂಡಿತ ಅಣ್ವಸ್ತ್ರ ಪ್ರಸರಣಾ ವಿರೋಧಿ ಒಪ್ಪಂದಕ್ಕೆ ಸಹಿ ಮಾಡಬೇಕೆಂದೂ ಆಲ್ಲ. ಜಗತ್ತನ್ನು ಅಣ್ವಸ್ತ್ರ ಮುಕ್ತವನ್ನಾಗಿ ಮಾಡುವ ಯಾವುದೇ ವಿಶ್ವಾಸಾರ್ಹ ಮತ್ತು ಕಾಲಬದ್ಧ ಜಾಗತಿಕ ಪ್ರಯತ್ನಗಳು ನಡೆಯುತ್ತಿಲದ ಇವತ್ತಿನ ಸಂದರ್ಭದಲ್ಲಿ  ಮತ್ತು ವೈರತ್ವದಿಂದ ಕೂಡಿರುವ ಅಣ್ವಸ್ತ್ರ ಶಕ್ತಿಬಲಗಳುಳ್ಳ ನೆರೆಹೊರೆಯಿಂದ ಸುತ್ತುವರೆಂiಲ್ಪಟ್ಟಿರುವ ಸನ್ನಿವೇಶದಲ್ಲಿ ತನ್ನ ವ್ಯೂಹಾತ್ಮಕ ಮತ್ತು ರಾಷ್ಟ್ರೀಯ ಭದ್ರತೆಗಳ ದೃಷ್ಟಿಯಿಂದ ಶತ್ರುಗಳನ್ನು ಹಿಮ್ಮೆಟ್ಟಿಸುವಷ್ಟು ಅಣ್ವಸ್ತ್ರ ಸಾಮರ್ಥ್ಯವನ್ನು ಭಾರತವು ಸಾಧಿಸುವ ಅಗತ್ಯವಿದೆ ಎಂದು ಖಂಡಿತಾ ವಾದಿಸಬಹುದು. ಆದರೆ ಅಣ್ವಸ್ತ್ರಗಳನ್ನು ಹೊಂದಿರುವ ರಾಷ್ಟ್ರಗಳು ಅದರ ವಿನಿಯೋಜನೆಯಲ್ಲಿ ಮತ್ತು ಅದರ ನಾಯಕರ ಸಾರ್ವಜನಿಕ ವರ್ತನೆಗಳಲ್ಲಿ ಅತ್ಯಂತ ಸಂಯಮವನ್ನೂ  ಕಾದುಕೊಳುವುದು ಅತ್ಯಂತ ಅಗತ್ಯವಾಗುತ್ತದೆ. ಏಕೆಂದರೆ ಒಂದೇ ಒಂದು ತಪ್ಪು ಲೆಕ್ಕಾಚಾರ ಅಥವಾ ಒಂದು ರಾಷ್ಟ್ರದ ನಡೆಗಳ ತಪ್ಪು ವ್ಯಾಖ್ಯಾನಗಳು ದೊಡ್ಡ ದೊಡ್ಡ ದುರಂತಕ್ಕೆ ದಾರಿಮಾಡಿಕೊಡುತ್ತದೆ.

ದೊಡ್ಡ ಮಟ್ಟದಲ್ಲಿ ನಡೆಯುವ ಒಂದು ಅಣುಯುದ್ಧವು ಪರಿಸರದ ಮೇಲೆ ಊಹಿಸಲಸಾಧ್ಯವಾದ ಪ್ರಾದೇಶಿಕ ಮತ್ತು ಜಾಗತಿಕ ಪರಿಣಾಮವನ್ನು ಬೀರುತ್ತದೆ. ಒಂದು ಅಣ್ವಸ್ತ್ರ ದಾಳಿಯಾದ ನಂತರದಲ್ಲಿ ಆ ನಗರದ ಅಥವಾ ಆ ಪ್ರದೇಶದ ಆರೋಗ್ಯ ವ್ಯವಸ್ಥೆಗಳು ಸಂಪೂರ್ಣವಾಗಿ ಹದಗೆಡುತ್ತವೆಂದೂ ಮತ್ತು ಅದರಿಂದಾಗಿ ಸತ್ತವರಿಗಿಂತ ತೀವ್ರ ನರಕಬಾಧೆ ಅನುಭವಿಸುವ ಗಾಯಾಳುಗಳಿಗೆ ಯಾವುದೇ ವೈದ್ಯಕೀಯ ನೆರವನ್ನೂ ಒದಗಿಸಲಾಗದ ಪರಿಸ್ಥಿತಿ ಉಂಟಾಗುತ್ತದೆಂದೂ ವೈದ್ಯ ಪರಿಣಿತರು ಈಗಾಗಲೇ ಜಗತ್ತಿಗೆ ಎಚ್ಚರಿಸಿದ್ದಾರೆ. ಈ ಬಗೆಯ ಸಂಭಾವ್ಯ ಚಿತ್ರಣಗಳು ಜಗತ್ತಿನಾದ್ಯಂತ ಆಣ್ವಸ್ತ್ರಗಳ ವಿರುದ್ಧ ಪ್ರಬಲವಾದ ಜಾಗತಿಕ ತಿರಸ್ಕಾರವನ್ನು ಹುಟ್ಟುಹಾಕಿದೆ. ಹಾಗೂ ಅವು  ಈವರೆಗೆ ಅನ್ವೇಷಿಸಲಾದ ಅತ್ಯಂತ ಅಪ್ರಯೋಜಕ ಅಸ್ತ್ರವೆಂಬ ತಲೆಪಟ್ಟಿಯನ್ನೂ ಪಡೆದುಕೊಂಡಿದೆ. ಹಾಗೂ ಯಾವ ಕಾರಣಕ್ಕೂ ಅಣ್ವಸ್ತ್ರಗಳನ್ನು ಬಳಸಬಾರದೆಂಬ ಕೂಗು ೧೯೪೫ರ ನಂತರದಲ್ಲಿ ಒಂದು ಬಲಿಷ್ಟ ಪರಂಪರೆಯಾಗಿ ಮುಂದುವರೆದುಕೊಂಡು ಬಂದಿದೆ.

ಅಮೆರಿಕ ಮತ್ತು ರಷ್ಯಗಳ ನಡುವೆ ನಡೆದ ಶೀತಲ ಯುದ್ಧದ ಹೋಲಿಕೆಗಳು ಭಾರತ-ಪಾಕಿಸ್ತಾನದ ಸಂದರ್ಭದಲ್ಲಿ ಅಷ್ಟು ಸುಸಂಗತವಲ್ಲವಾದರೂ ಈ ಎರಡೂ ದೇಶಗಳ ನಡುವೆ ನಡೆಯಬಹುದಾದ ಅಲ್ಪಮಟ್ಟದ ಅಣ್ವಸ್ತ್ರ ಪ್ರಯೋಗಗಳು ಸಹ ಈ ಪ್ರದೇಶದಲ್ಲಿ ಭೀಕರ ಪರಿಣಾಮಗಳುನ್ನುಂಟು ಮಾಡಬಹುದು. ಒಂದು ದೊಡ್ಡ ನೈಸರ್ಗಿಕ ಅನಾಹುತ ಸಂಭವಿಸಿದಾಗಲೂ, ತಮ್ಮ ಜನರಿಗೆ ಪುನರ್ವಸತಿಯನ್ನು ಪೂರೈಸುವುದರಲ್ಲಿ ಈ ಎರಡೂ ದೇಶಗಳು ಎಷ್ಟು ದುರ್ಬಲವಾಗಿವೆ ಎಂಬುದನ್ನು ನೋಡಿದ್ದೇವೆ. ಪಾಶ್ಚಿಮಾತ್ಯ ಮತ್ತು ಸೋವಿಯತ್ ದೇಶಗಳ ಸರ್ಕಾರಗಳು  ಅಣ್ವಸ್ತ್ರದ ಅಪಾಯಗಳ ಬಗ್ಗೆ ತಮ್ಮ ದೇಶದ ಜನರಿಗೆ ಸಾಪೇಕ್ಷವಾಗಿ ಉತ್ತಮವೆನ್ನಬಹುದಾದ ಶಿಕ್ಷಣವನ್ನು ನೀಡಿವೆ. ಅದಕ್ಕೆ ಹೋಲಿಸಿದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಜನತೆಗೆ ಅಣ್ವಸ್ತ್ರಗಳ ಅಪಾಯಗಳ ಬಗ್ಗೆ ಅರಿವಿಲ್ಲವೆಂದೇ ಹೇಳಬೇಕು. ಅಣ್ವಸ್ತ್ರಗಳನ್ನು ಹೊಂದಿರುವ ರಾಷ್ಟ್ರಗಳು ಪರಸ್ಪರ ಮುಖಾಮುಖಿ ಸಂಘರ್ಷಗಳನ್ನು ನಡೆಸುವುದಿಲ್ಲವೆಂಬ ಸಿದ್ಧಾಂತವನ್ನು ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಿರಂತರವಾಗಿ ನಡೆಯುತ್ತಲೇ ಇರುವ ಗಡಿ ಕಲಹಗಳು ಸುಳ್ಳೆಂದು ನಿರೂಪಿಸಿವೆ. ಈ ಎರಡು ದೇಶಗಳ ನಡುವೆ ಈ ಹಿಂದೆ ಸಂಭವಿಸಿದ ಕೆಲವು ಘರ್ಷಣೆಗಳು ಹಲವು ಬಾರಿ ಅಣ್ವಸ್ತ್ರ ಬಳಕೆಯ ಮಟ್ಟವನ್ನು ತಲುಪಿದಾಗ ಹೊರಗಿನ ದೇಶಗಳು ಮಧ್ಯಪ್ರವೇಶ ಮಾಡಿ ಆಗಬಹುದಾಗಿದ್ದ ಅನಾಹುತವನ್ನು ತಡೆಗಟ್ಟಿದ್ದವು. ಆದರೆ ಪ್ರತಿಬಾರಿಯೂ ಹೀಗೆಯೇ ಆಗುತ್ತದೆಂದು ಭಾವಿಸಲು ಸಾಧ್ಯವಿಲ್ಲ.

ಅಣ್ವಸ್ತ್ರ ಬಳಕೆಯಿಂದ ಆಗುವ ಅನಾಹುತದ ಬಗ್ಗೆ ಸಾರ್ವಜನಿಕರಲ್ಲಿ ವಿವೇಕಯುತವಾದ ತಿಳವಳಿಕೆ ಬರಬೇಕೆಂದರೆ ಈ ಉದಾಹರಣೆಯನ್ನು ಬೇಕಾದರೆ ಪರಿಗಣಿಸಬಹುದು: ಈವರೆಗೆ ಪಾಕಿಸ್ತಾನವು ಪರಿಕ್ಷಿಸಿರುವ ಅತ್ಯಂತ ಹೆಚ್ಚು ತೂಕದ ಅಣುಬಾಂಬಾದ ೪೫ ಕಿಲೋಟನ್ ತೂಕದ ಅಣುಬಾಂಬನ್ನು ಭಾರತದ ಯಾವುದಾದರೂ ಪ್ರಮುಖ ನಗರದ ಮೇಲೆ ಹಾಕಿದಲ್ಲಿ ಬಾಂಬ್ ಸ್ಪೋಟ ಮತ್ತು ಬೆಂಕಿಯಿಂದ ತತ್‌ಕ್ಷಣದಲ್ಲೇ ೫ ಲಕ್ಷ ಜನರು ಸಾಯುತ್ತಾರೆ ಮತ್ತು ೧೨ ಲಕ್ಷ ಜನರು ಗಾಯಗೊಳ್ಳುತ್ತಾರೆ. ಒಂದು ಮೆಗಾಟನ್ ತೂಕದ ಬಾಂಬು ಹಾಕಿದಲ್ಲಿ (ಚೀನಾದ ಬಳಿ ಇಂಥಾ ಹಲವಾರು ಬಾಂಬುಗಳಿವೆ) ೨೫ ಲಕ್ಷ ಜನರು ತತ್ ತಕ್ಷಣದಲ್ಲಿ ಸಾವನ್ನಪ್ಪುವುದಲ್ಲದೆ ೬೦ ಲಕ್ಷ ಜನರು ಗಾಯಗೊಳ್ಳುತ್ತಾರೆ. ಇಂಥಾ ಸಂದರ್ಭಗಳಲ್ಲಿ ಸಾವಿನ ಪ್ರಮಾಣವನ್ನು ಅಂದಾಜಿಸುವುದು ಕಷ್ಟದ ಮತ್ತು ಮುಜುಗರದ ಕೆಲಸವೇ ಆದರೂ ಈ ಅಂದಾಜಿನಲ್ಲಿ ದೀರ್ಘಕಾಲೀನ ವಿಕಿರಣ ಪರಿಣಾಮಗಳಿಂದ  ಉಂಟಾಗುವ ಸಾವುನೋವುಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ.

ಅಣ್ವಸ್ತ್ರಗಳ ಯುದ್ಧವು ಭಾರತ ಮತ್ತು ಪಾಕಿಸ್ತಾನಗಳೆರಡಕ್ಕೂ ಊಹಿಸಲಾಗದ ಸಂಕಷ್ಟಗಳನ್ನು ತಂದೊಡ್ಡಲಿದ್ದು ಅಣ್ವಸ್ತ್ರ ಯುದ್ಧವನ್ನು ಮಾಡುವುದಿರಲಿ ಅದರ ಕುರಿತು ಬೇಜವಾಬ್ದಾರಿಯಿಂದ ಮಾತುಗಳನ್ನೂ ಸಹ ಆಡಬಾರದು. ಶೀತಲ ಯುದ್ಧದ ಅವಧಿಯಲ್ಲಿ ಅಣ್ವಸ್ತ್ರಗಳನ್ನು ಪೇರಿಸಿಕೊಳ್ಳುತ್ತಾ ಹೋದ ಅಮೆರಿಕ ಮತ್ತು ರಷ್ಯಾಗಳು ಅಣುಯುದ್ಧವನ್ನು ಮಾಡಿ ಮತ್ತೊಂದು ದೇಶವನ್ನು ಸಂಪೂರ್ಣವಾಗಿ ನಾಶಮಾಡಬಹುದೆಂಬ ಭ್ರಾಂತಿಯಲ್ಲಿ ಮುಳುಗಿದ್ದರು. ಆದರೆ ಕ್ರಮೇಣ ಎರಡೂ ದೇಶಗಳಲ್ಲೂ ಇಂಥಾ ಯುದ್ಧವು ಪರಸ್ಪರ ಖಾತರಿ ಸರ್ವ ನಾಶವನ್ನು ಉಂಟುಮಾಡಲಿದೆ ಎಂಬ ಜ್ನಾನೋದಯವಾಯಿತು. ಹೀಗಾಗಿ ಭಾರತ ಮತ್ತು ಪಾಕಿಸ್ತಾನದ ನಾಯಕತ್ವವು ಎದುರಾಳಿ ದೇಶದ ಮೇಲೆ ಒಂದು ಅಣ್ವಸ್ತ್ರ ಯುದ್ಧವನ್ನು ಮಾಡಬಹುದೆಂಬ ಪರಸ್ಪರ ಖಾತರಿ ವಿಭ್ರಾಂತಿಯಿಂದ ಹೊರಬರಬೇಕಾಗಿದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top