ISSN (Print) - 0012-9976 | ISSN (Online) - 2349-8846

ಶ್ರಮಶಕ್ತಿ ಭಾಗೀದಾರಿಕೆಯಲ್ಲಿ ಮಹಿಳಾ ಪ್ರಮಾಣದ ಕುಸಿತ

ಬೇಡಿಕೆ ಹಾಗೂ ಸರಬರಾಜು ಎರಡೂ ಕಡೆಗಳ ಸಮಸ್ಯೆಗಳೂ ಗ್ರಾಮೀಣ ಮಹಿಳೆಯರು ಶ್ರಮಿಕರಾಗಿ ಪಾಲ್ಗೊಳ್ಳುವುದಕ್ಕೆ ತೊಡಕನ್ನುಂಟುಮಾಡುತ್ತಿವೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಭಾರತದಲ್ಲಿನ ಮಹಿಳಾ ಶ್ರಮಶಕ್ತಿ ಭಾಗೀದಾರಿಕೆ ದರವು ಇತರ ಮುನ್ನುಗ್ಗುತ್ತಿರುವ (ಎಮರ್ಜಿಂಗ್) ಆರ್ಥಿಕತೆಗಳಿಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆಯಾಗಿರುವುದು ಮಾತ್ರವಲ್ಲದೆ ದಿನೇದಿನೇ ಕುಸಿಯುತ್ತಲೂ ಇದೆ. ಇದರಿಂದಾಗಿ ಕೆಲಸ ಮಾಡಬಲ್ಲ ವಯೋಮಾನದ ಮಹಿಳಾ ಜನಸಂಖ್ಯೆಗೆ ಹೋಲಿಸಿದಲ್ಲಿ  ಕೆಲಸ ಮಾಡುತ್ತಿರುವ ಮಹಿಳೆಯರ ಅನುಪಾತ ಕುಸಿದಿದೆ. ಇದು ೨೦೧೧-೧೨ರಲ್ಲಿ ಶೇ.೩೧.೨ರಷ್ಟಿದ್ದದ್ದು ೨೦೧೭-೧೮ರಲ್ಲಿ ಶೇ.೨೩.೩ಕ್ಕಿಳಿದಿದೆ. ಗ್ರಾಮೀಣ ಪ್ರದೇಶದಲ್ಲಿ  ೨೦೧೭-೧೮ರಲ್ಲಿ ಅದು ಶೇ.೧೧ರಷ್ಟು ಇಳಿದಿದೆ. ಶ್ರಮಶಕ್ತಿಯಲ್ಲಿ ಗ್ರಾಮೀಣ ಪುರುಷರ ಪ್ರಮಾಣವೂ ಇಳಿದಿದೆಯಾದರೂ ಗ್ರಾಮೀಣ ಮಹಿಳೆಯರ ಪ್ರಮಾಣವು ತೀವ್ರವಾಗಿ ಕುಸಿದಿದೆ. ಶ್ರಮಶಕ್ತಿಯಿಂದ ಗ್ರಾಮೀಣ ಮಹಿಳೆಯರು ಹಿಂತೆಗೆಯುತ್ತಿರುವುದು ಮಾತ್ರವಲ್ಲದೆ ಅಲ್ಲಿ ಅಳಿದುಳಿದಿರುವ  ಉದ್ಯೋಗಾವಕಾಶಗಳನ್ನೂ ಕೂಡಾ ಮಹಿಯರಿಗಿಂತ ಹೆಚ್ಚು ಪುರುಷರೇ ಪಡೆದುಕೊಳ್ಳುತ್ತಿದ್ದಾರೆ. ಈ ವಿದ್ಯಮಾನವು ಶ್ರಮಶಕ್ತಿಯಲ್ಲಿ ಮಹಿಳೆಯರ ಭಾಗೀದಾರಿಕೆಗೆ ಅಡ್ಡಿಯುಂಟು ಮಾಡುವ ಸಂಗತಿಗಳೇನೆಂಬ ಬಗ್ಗೆ ಆಳವಾದ ಅಧ್ಯಯನದ ಅಗತ್ಯವನ್ನು ಸೂಚಿಸುತ್ತದೆ.

ಭಾರತದಲ್ಲಿನ ಶ್ರಮಶಕ್ತಿಯಲ್ಲಿ ಮಹಿಳೆಯರ ಕಡಿಮೆ ಭಾಗೀದಾರಿಕೆಗೆ ಉದ್ಯೋಗಾವಕಾಶಗಳ ಕೊರತೆ, ಹೆಚ್ಚುತ್ತಿರುವ ಶಿಕ್ಷಣದ ಮತ್ತು ಕೌಟುಂಬಿಕ ಆದಾಯ, ಮಹಿಳೆಯರ ಕೆಲಸದ ಬಗ್ಗೆ ಅಪರಿಪೂರ್ಣ ವರದಿಗಳನ್ನೂ ಒಳಗೊಂಡಂತೆ ಮಹಿಳಾ ಶ್ರಮಶಕ್ತಿಯನ್ನು ಮಾನ ಮಾಡುವುದರಲ್ಲಿರುವ ಸಮಸ್ಯೆಗಳಂಥ ಸಂಗತಿಗಳು ಕಾರಣವೆಂದು ಹೇಳಲಾಗುತ್ತದೆ. ಅದೇನೇ ಇದ್ದರೂ ಕೃಷಿ ಬಿಕ್ಕಟ್ಟಿನಿಂದಾಗಿ ಇತ್ತಿಚೆಗೆ ಆದಾಯ ಸೃಷ್ಟಿಸುವ ಉದ್ಯೋಗಾವಕಾಶಗಳೇ ಇಲ್ಲವಾಗಿರುವುದೂ ಸಹ ಮಹಿಳೆಯರ ಮೇಲೆ ತೀವ್ರ ಪರಿಣಾಮ ಬೀರಿವೆ. ಕೃಷಿ ಕೆಲಸಗಳು ಕಡಿತಗೊಂಡಿರುವುದರಿಂದ ಮತ್ತು ಕೃಷಿಯೇತರ ಉದ್ಯೋಗಾವಕಾಶಗಳು ಇಲ್ಲದಿರುವುದರಿಂದ ಶ್ರಮಿಕರ ಬೇಡಿಕೆಯ ಬಿಕ್ಕಟ್ಟು ಅಥವಾ ಸೂಕ್ತವಾದ ಉದ್ಯೋಗಾವಕಾಶಗಳ ಕೊರತೆಯು ಗ್ರಾಮೀಣ ಮಹಿಳೆಯರನ್ನು ಅತಿ ಹೆಚ್ಚು ಭಾದಿಸುತ್ತದೆ. ಕೃಷಿ ಮತ್ತು ಕೃಷಿಯೇತರ ಕೆಲಸಗಳ ಯಾಂತ್ರೀಕರಣವೂ ಸಹ ಕೆಲಸ ಸಿಗುವ ಅವಕಾಶಗಳನ್ನು ಕಡಿಮೆಯಾಗಿಸಿದೆ.

ಸಾಮಾನ್ಯವಾಗಿ ಮಹಿಳೆಯರು ಮನೆಯ ಸಮೀಪದಲ್ಲಿ ಮತ್ತು ತಮ್ಮ ಸಮಯಕ್ಕೆ ತಕ್ಕಂತೆ ಕೆಲಸ ಮಾಡಲು ಬಯಸುತ್ತಾರೆ. ಅದಕ್ಕೆ ತಕ್ಕ ಹಾಗೆ  ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಸಾರ್ವಜನಿಕ ಯೋಜನೆಯ ಕೆಲಸಗಳಲ್ಲಿ ಪೂರ್ವನಿಗದಿತ ಕೂಲಿ ದರಕ್ಕೆ ತಕ್ಕಂತೆ ವರ್ಷಕ್ಕೆ ನೂರು ದಿನಗಳ ಕೆಲಸವನ್ನು ಒದಗಿಸುತ್ತದೆ. ಆದರೆ ೨೦೧೮ರ ವರದಿಯೊಂದು  ಹೇಳುವಂತೆ ಮಹಿಳೆಯರು ಮನೆಗಳಲ್ಲಿ ಮತ್ತು ಸಮುದಾಯ ಮಟ್ಟದಲ್ಲಿ ಕೂಲಿ ರಹಿತ ಕೆಲಸಗಳ ಮೇಲೆ ವ್ಯಯ ಮಾಡುವ ಸಮಯವು ಎಂದರೆ ಆರೈಕೆ ಆರ್ಥಿಕತೆಯ ಹೊರೆಯು ಶ್ರಮಶಕ್ತಿಯಲ್ಲಿ ಮಹಿಳೆಯರ ಭಾಗೀದಾರಿಕೆಯನ್ನು ಪ್ರಭಾವಿಸುವ ಪ್ರಮುಖ ಅಂಶವಾಗಿದೆ. ಹೀಗಾಗಿ ಕೂಲಿ ರಹಿತ ಆರೈಕೆ ಮತ್ತು ದಿನನಿತ್ಯದ ಮನೆಗೆಲಸಗಳಿಗಾಗಿ ವ್ಯಯವಾಗುವ ಸಮಯವು ಮಹಿಳೆಯರು ಶ್ರಮಶಕ್ತಿಯಲ್ಲಿ ಭಾಗಿಯಾದಂತೆ ತಡೆಯುತ್ತಿರುವ ಪ್ರಮುಖ ಅಂಶವಾಗಿದೆ. ಇದು ಪುರುಷಾಧಿಪತ್ಯದ ಮೌಲ್ಯಗಳ ನಿರ್ದೇಶನಗಳು ಹಾಗೂ ಧಾರ್ಮಿಕ ನಿಷೇಧಗಳು ಮತ್ತು ಸಾಂಸ್ಕೃತಿಕ ಪೂರ್ವಗ್ರಹಗಳಿಂದ ಮತ್ತಷ್ಟು ಗಟ್ಟಿಗೊಂಡ ಲಿಂಗಾಧಾರಿವಾದ ಶ್ರಮ ವಿಭಜನೆಯಿರುವ ಗ್ರಾಮೀಣ ಪ್ರದೇಶದಲ್ಲಿ ಇದು ಮತ್ತಷ್ಟು ಹೆಚ್ಚಾಗಿ ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಕುಟುಂಬದ ಗಾತ್ರಗಳು ಕಡಿಮೆಯಾಗುತ್ತಾ ಆರ್ಥಿಕ ಬಿಕ್ಕಟ್ಟಿನಿಂದ ಪುರುಷರು  ವಲಸೆ ಹೋಗುವುದು ಹೆಚ್ಚಾಗುತ್ತಿದ್ದಂತೆ ಕೂಲಿ ಇಲ್ಲದ ಕೆಲಸಗಳ ಹೊರೆಯು ಮಹಿಳೆಯರ ಮೇಲೆ ಅತ್ಯಧಿಕವಾಗುತ್ತಿದೆ.

 ಒಇಸಿಡಿ ಸಂಸ್ಥೆಯು ಹೊರತಂದಿರುವ ಸಮಯ ಬಳಕೆಯ ದತ್ತಾಂಶಗಳ ಪ್ರಕಾರ ಭಾರತದ ಮಹಿಳೆಯರು ದಿನಕ್ಕೆ ೩೫೨ ನಿಮಿಷಗಷ್ಟು  ಕಾಲ  ಮನೆಗೆಲಸಗಳನ್ನು ಮಾಡುತ್ತಾರೆ. ಇದು ಕೂಲಿ ರಹಿತ ಕೆಲಸಗಳ ಮೇಲೆ ಪುರುಷರು ವ್ಯಯಿಸುವ ಸಮಯಕ್ಕಿಂತ ಶೇ.೫೭೭ರಷ್ಟು ಹೆಚ್ಚು. ಇದು ಶ್ರಮದ ಸರಬರಾಜಿನ ದಿಕ್ಕಿನಿಂದ  ಉಂಟಾಗುತ್ತಿರುವ ಸಮಸ್ಯೆಯಾಗಿದ್ದು ಕೂಡಲೇ ಅದನ್ನು ಸರಿಪಡಿಸಬೇಕಿದೆ. ಬಡವರಲ್ಲದವರಿಗೆ ಹೋಲಿಸಿದರೆ ಬಡವರೇ  ಸಮಯದ ಬಡತನದಿಂದ ಹೆಚ್ಚಿ ಬಾಧೆಗೊಳಗಾಗುವುದರಿಂದ ಇದನ್ನು ನೇರ್ಪು ಮಾಡುವುದು ತುಂಬಾ ಮುಖ್ಯವಾಗುತ್ತದೆ. ಮನೆಗೆಲಸಗಳ ಹೊರೆ ಮತ್ತು ಕೂಲಿ ಇರದ ಆರೈಕೆ ಸಂಬಂಧೀ ಕೆಲಸಗಳು ಕಬಳಿಸುವ ಸಮಯವು ಮಹಿಳೆಯು ಉತ್ತಮ ಕೆಲಸಗಳನ್ನು ಪಡೆದುಕೊಳ್ಳಲು ಅಗತ್ಯವಿರುವ ಕೌಶಲ್ಯಗಳನ್ನೂ ಕೂಡಾ ಗಳಿಸದಂತೆ ಮಾಡುತ್ತದೆ. ಇದು ಮಹಿಳೆಯನ್ನು ಶ್ರಮಶಕ್ತಿಯಿಂದ ಮತ್ತಷ್ಟು ಹೊರಗಿಡುತ್ತದೆ. ಹೀಗೆ ಈ  ವಿಷವೃತ್ತ ಮುಂದುವರೆಯುತ್ತಲೇ ಹೋಗುತ್ತದೆ. ಆದ್ದರಿಂದ ಮಹಿಳೆಯರು ಶ್ರಮಶಕ್ತಿಯಲ್ಲಿ ಭಾಗೀದಾರಿಕೆಯನ್ನು ಪಡೆಯಬೇಕೆಂದರೆ ಮಕ್ಕಳ ಆರೈಕಯ ಸೌಲಭ್ಯಗಳು ಮತ್ತು ವೃದ್ಧರ ಯೋಗಕ್ಷೇಮವನ್ನು ನೋಡಿಕೊಳ್ಳುವ ಆರೈಕೆ ಕೇಂದ್ರಗಳನ್ನೂ ಒಳಗೊಂಡಂತೆ ಮೂಲಭೂತ ಸೌಕರ್ಯಗಳ ಅಗತ್ಯವಿದೆ.

ಆದರೆ ಇತ್ತೀಚೆಗೆ ಜಾರಿ ಮಾಡಲಾದ ಆ ಬಗೆಯ ಸರ್ಕಾರಿ ನೀತಿಗಳು ಕೇವಲ ಸಂಘಟಿತ ಮಹಿಳಾ ಉದ್ಯೋಗಿ ವಲಯವನ್ನು ಮಾತ್ರ ಗುರಿಯಾಗಿರಿಸಿಕೊಂಡಿದೆ. ೨೦೧೬ರ ತಾಯ್ತನ ಸೌಲಭ್ಯ ತಿದ್ದುಪಡಿ ಕಾಯಿದೆಯು ಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ೨೬ ವಾರಗಳ ಸಂಬಳ ಸಹಿತ ರಜೆಯನ್ನು ಖಾತರಿ ಮಾಡಿದೆ. ೨೦೧೭ರಲ್ಲಿ ಈ ಕಾಯಿದೆಯೆಗೆ ತಂದ ತಿದ್ದುಪಡಿಯಿಂದಾಗಿ ೫೦ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುವಂತ  ಪ್ರತಿ ಸಂಸ್ಥೆಯು ಶಿಶು ಆರೈಕೆ ಕೇಂದ್ರವನ್ನು ಹೊಂದಿರುವುದನ್ನು ಕಡ್ಡಾಯ ಮಾಡುತ್ತದೆ. ಆದರೆ ಅಸಂಘಟಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮಾತ್ರ ಅಂತ ಸೌಲಭ್ಯಗಳು ತುಂಬಾ ಸೀಮಿತವಾಗಿವೆ. ನರೇಗ ಕಾಯಿದೆಯ ಪ್ರಕಾರ ಹೊರಗಡೆ ಕೆಲಸ ಮಾಡುವ ಮಹಿಳೆಯರಿಗೆ ಶಿಶು ಆರೈಕೆ ಸೌಲಭ್ಯವನ್ನು ಒದಗಿಸುವ ನಿಯಮವಿದ್ದರೂ ಅದು ವಾಸ್ತವದಲ್ಲಿ ಎಲ್ಲೂ ಜಾರಿಯಾಗುವುದಿಲ್ಲ. ರಾಷ್ಟ್ರೀಯ ಶಿಶು ಆರೈಕೆ ಯೋಜನೆಗಳಿಗೆ ನೀಡುತ್ತಿದ್ದ ಸಂಪನ್ಮೂಲವನ್ನು ತೀವ್ರವಾಗಿ ಕಡಿತಗೊಳಿಸಿರುವುದರಿಂದ ದೇಶಾದ್ಯಂತ ಇದ್ದ ಶಿಶು ಆರೈಕೆ ಕೇಂದ್ರಗಳು ಮುಚ್ಚಿಕೊಳ್ಳುತ್ತಿವೆ.

ನರೇಗಾ ಮತ್ತು ಐಸಿಡಿಎಸ್‌ನಂತಹ ಅಸ್ಥಿತ್ವದಲ್ಲಿರುವ ನೀತಿಗಳ ಮೇಲೆ ಹೆಚ್ಚಿನ ವೆಚ್ಚವನ್ನು ಮಾಡುವ ಮೂಲಕ ಮತ್ತು ತೀವ್ರವಾಗಿ ಬದಲಾಗುತ್ತಿರುವ ಉತ್ಪಾದನಾ ಪ್ರಕ್ರಿಯೆಗಳು ಬೇಡುವಂತಹ ಕೌಶಲ್ಯಗಳಲ್ಲಿ ತರಬೇತಿ ನೀಡುವ ಮೂಲಕ ಶ್ರಮಶಕ್ತಿಯಲ್ಲಿ ಮಹಿಳೆಯರ ಭಾಗೀದಾರಿಕೆಯನ್ನು ಹೆಚ್ಚಿಸಬಹುದು. ಕೆಲಸಗಳಲ್ಲಿ ಮತ್ತು ಬ್ಯಾಂಕ್ ಸಾಲಗಳಲ್ಲಿ ಮಹಿಳೆಯರಿಗೆ ಮೀಸಲು ಪಾಲನ್ನು ಒದಗಿಸುವಂತಹ ಪ್ರಭುತ್ವದ ನಿರ್ದಿಷ್ಟ ಗುರಿಯಾಧಾರಿತ ನೀತಿಗಳು ಉದ್ಯೋಗ ಮಾರುಕಟ್ಟೆಯಲ್ಲಿ ಮಹಿಳೆಯರ ಭಾಗೀದಾರಿಕೆಯನ್ನು ಹೆಚ್ಚಿಸುತ್ತದೆ.

ಹೀಗಾಗಿ ಭಾರತದಲ್ಲಿ ಶ್ರಮಶಕ್ತಿಯಲ್ಲಿ ಕುಸಿಯುತ್ತಿರುವ ಮಹಿಳೆಯರ ಭಾಗೀದಾರಿಕೆಯನ್ನು ತಡೆಯಬೇಕೆಂದರೆ ಶ್ರಮದ ಬೇಡಿಕೆಗೆ ತಡೆಯೊಡ್ಡುತ್ತಿರುವ ಸಂಗತಿಗಳನ್ನು ಸರಿಪಡಿಸುವುದರ ಜೊತೆಜೊತೆಗೆ ಮಹಿಳೆಯರ ಮೇಲಿರುವ ಕೂಲಿ ರಹಿತ ಆರೈಕೆ ಮತ್ತಿತರ ಮನೆಗೆಲಸಗಳ ಹೊರೆಯನ್ನು ಕಡಿಮೆ ಮಾಡಬಲ್ಲ ಸೂಕ್ತ ಲಿಂಗ ಸಂವೇದಿ ಉದ್ಯೋಗ ನೀತಿಯನ್ನೂ ರೂಪಿಸಬೇಕಿದೆ. ಏಕೆಂದರೆ ಶ್ರಮಶಕ್ತಿಯಲ್ಲಿ ಮಹಿಳಾ ಭಾಗೀದಾರಿಕೆಯು ಕಡಿಮೆಯಾಗಲು ಮತ್ತು ಮಹಿಳೆಯು ಕೂಲಿ ರಹಿತ ಶ್ರಮದ ಹೊರೆಯನ್ನು ಹೊತ್ತುಕೊಂಡಿರುವುದಕ್ಕೆ ಕಾರಣ ಶ್ರಮದ ಬೇಡಿಕೆಯ ಸುತ್ತಲಿರುವ ಸಮಸ್ಯೆಗಳು ಮತ್ತು ಸರ್ಕಾರವು ಅದನ್ನು ಬಗೆಹರಿಸಲು ಸೂಕ್ತವಾಗಿ ಮಧ್ಯಪ್ರವೇಶ ಮಾಡದಿರುವುದು. ಇದರ ಜೊತೆಜೊತೆಗೆ ಈ ಸಮಸ್ಯೆ ಹೆಚ್ಚಾಗಲು ಸಮಾಜೋ-ಸಾಂಸ್ಕೃತಿಕ ಬೇರುಗಳನ್ನು ಹೊಂದಿರುವ ವ್ಯವಸ್ಥೆಯ ಜಡತೆಯೂ ಕಾರಣವಾಗಿದೆ.

Back to Top