ISSN (Print) - 0012-9976 | ISSN (Online) - 2349-8846

ಚುನಾವಣಾ ಪ್ರಣಾಳಿಕೆಗಳ ರಾಜಕೀಯ

ಪ್ರಣಾಳಿಕೆಗಳಲ್ಲಿ ಪ್ರಸ್ತಾಪಿತವಾಗುವ ಭರವಸೆಗಳು ನಿಜಕ್ಕೂ ಜಾರಿಯಾಗುತ್ತವೆಯೇ ಎಂಬುದನ್ನು ಮಾತ್ರವಲ್ಲದೆ ಅವುಗಳ ಸೈದ್ಧಾಂತಿಕ ಸಾರವನ್ನು ಪರಿಶೀಲಿಸುವ ಅಗತ್ಯವಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಹಾಲಿ ನಡೆಯುತ್ತಿರುವ ಚುನಾವಣೆಗಾಗಿ ಬಹುಪಾಲು ರಾಷ್ಟ್ರೀಯ ಪಕ್ಷಗಳು ಮತ್ತು ಆಯಾ ಪ್ರದೇಶಗಳ ಚುನಾವಣೆಯಲ್ಲಿ ಮಹತ್ವವಾಗಿರುವ ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ಪ್ರಕಟ ಮಾಡಿವೆ. ಆದರೆ ಪ್ರಣಾಳಿಕೆಗಳು ಹೇಳಿದ್ದನ್ನೇ ಹೇಳುವುದರಿಂದ ಸಾಮಾನ್ಯ ಜನರು ಈ ಪ್ರಣಾಳಿಕೆಗಳನ್ನು ಒಂದು ಚುನಾವಣೆಯ ರೀತಿ ರಿವಾಜು ಎಂಬಂತೆ ಮಾತ್ರ ಭಾವಿಸುತ್ತಿದ್ದಾರೆ. ಅದೇನೇ ಇದ್ದರೂ ಆಯಾ ರಾಜಕೀಯ ಪಕ್ಷಗಳ ರಾಜಕೀಯ ಆದ್ಯತೆಗಳನ್ನೂ ಮತ್ತು ಸೈದ್ಧಾಂತಿಕ ಧೋರಣೆಗಳನ್ನೂ ಅರ್ಥಮಾಡಿಕೊಳ್ಳುವಲ್ಲಿ ಈ ಪ್ರಣಾಳಿಕೆಗಳು ತಮ್ಮ ಮಹತ್ವವನ್ನು ಉಳಿಸಿಕೊಂಡಿವೆ.  ಅಷ್ಟು ಮಾತ್ರವಲ್ಲದೆ ಹಿಂದಿನ ಚುನಾವಣೆಗಳಿಗೆ ಮುನ್ನ ಅವರು ಕೊಟ್ಟ ಭರವಸೆಗಳನ್ನು ಹಾಗೂ ಅವುಗಳನ್ನು ಈಡೇರಿಸುವಲ್ಲಿ ಪಕ್ಷಗಳು ಕೈಗೊಂಡ ಕ್ರಮಗಳ ಮೌಲ್ಯಾಂಕನ ಮಾಡುವಲ್ಲಿಯೂ ಇವು ಅತ್ಯಗತ್ಯ ದಾಖಲೆಗಳಾಗಿಯೂ ಉಪಯುಕ್ತವಾಗಿವೆ. ಹೀಗಾಗಿ ಒಂದು ಪಕ್ಷದ ಪ್ರಣಾಳಿಕೆಯನ್ನು ಮತ್ತು ಆಯಾ ಪಕ್ಷಗಳನ್ನು ಮೌಲ್ಯಾಂಕನ ಮಾಡುವಲ್ಲಿ ಅವು ಕೊಟ್ಟ ಭರವಸೆಗಳನ್ನು ಈಡೇರಿಸಿದ ಅಥವಾ ಈಡೇರಿಸಲಾಗದ ಅಂಶಗಳು ಮಹತ್ವದ ಮಾನದಂಡಗಳಾಗಿವೆ. ಆದರೆ ಪ್ರಧಾನಧಾರೆ ಮಾಧ್ಯಮಗಳು ಆಳುವ ಪಕ್ಷಗಳು ಕಳೆದ ಐದು ವರ್ಷಗಳಲ್ಲಿ ಕೊಟ್ಟ ಭರವಸೆಗಳನ್ನು ಎಷ್ಟು ಈಡೇರಿಸಿದೆಯೆಂಬುದನ್ನು ಪರಿಶೀಲಿಸುವ ಗೋಜಿಗೇ ಹೋಗದೇ ವಿರೋಧ ಪಕ್ಷಗಳು ತಾವು ಅಧಿಕಾರಕ್ಕೆ ಬಂದರೆ ಮಾಡುತ್ತೇವೆಂದು ಹೇಳುತ್ತಿರುವ ಭರವಸೆಗಳ ತನಿಖೆ ಮಾತ್ರ ಮಾಡುತ್ತಿವೆ. ಆದರೆ ಈ ರೀತಿ ಒಂದು ರಾಜಕೀಯ ಪಕ್ಷದ ಪ್ರಣಾಳಿಕೆಯನ್ನು ಕೇವಲ ಭರವಸೆಗಳ ಅಂದಾಜುಗಳಿಗೆ ಇಳಿಸಿಬಿಡುವುದು ಕೂಡಾ ತಪ್ಪಾದ ಕ್ರಮವಾಗಿದೆ. ಏಕೆಂದರೆ ಆಗ ರಾಜಕೀಯ ಪಕ್ಷಗಳನ್ನು ಕೇವಲ ಸೇವಾ  ಸೌಲಭ್ಯಗಳನ್ನು ಒದಗಿಸುವ ಯಂತ್ರವೆಂಬಂತೆ ಗ್ರಹಿಸುವಂತಾಗುತ್ತದೆ. ಪ್ರಣಾಳಿಕೆಗಳ ರಾಜಕೀಯವು ಜಾರಿಸಾಧ್ಯವಾದ ಭರವಸೆಗಳನ್ನು ಕೊಡುವ ಮತ್ತು ಅದಕ್ಕೆ ಉತ್ತರದಾಯಿತ್ವವನ್ನು ಹೊದಿರಬೇಕಾದ ವಿಷಯಗಳಾಚೆಗೆ ಆಯಾ ಪಕ್ಷಗಳ ಪ್ರಚಾರ ಮತ್ತು ತತ್ವಸಿದ್ಧಾಂತಗಳ ಅಂಶಗಳನ್ನೂ ಹೊಂದಿರುತ್ತವೆ. ಹೀಗಾಗಿ ಒಂದು ರಾಜಕೀಯ ಪಕ್ಷವನ್ನು ಅದರ ಈಡೇರಿಸಬಹುದಾದ ಘೋಷಣೆ ಮತ್ತು ಭರವಸೆಗಳನ್ನು ಆಧರಿಸಿ ಮಾತ್ರವಲ್ಲದೆ ಅವುಗಳ ಪ್ರಚಾರಾತ್ಮಕ ಮತ್ತು ಸೈದ್ಧಾಂತಿಕ ಘೋಷಣೆಗಳ ಮೂಲಕವೂ ಅಳೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಏನು ಹೇಳುತ್ತವೆ?

ಬಿಜೆಪಿ ಪಕ್ಷವು ೨೦೧೪ರ ಚುನಾವಣೆಯಲ್ಲಿ ತನ್ನ ಪ್ರಣಾಳಿಕೆಯನ್ನು ಮೊದಲಹಂತದ ಚುನಾವಣೆಯಾದ ನಂತರದಲ್ಲಿ ಪ್ರಕಟಿಸಿತ್ತು. ಹೀಗಾಗಿ ಆ ಪಕ್ಷವು ಪ್ರಣಾಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ಚುನಾವಣಾ ಕಣದಲ್ಲಿ ಒಂದಷ್ಟು ಸದ್ದು ಮಾಡುತ್ತಿರುವುದನ್ನು ಮನಗಂಡು ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಬಿಜೆಪಿ ಪಕ್ಷವು ಸಹ ಅವಸರವಸರದಲ್ಲಿ ತನ್ನ ಪ್ರಣಾಳಿಕೆಯನ್ನು ಸಿದ್ಧಪಡಿಸಿದಂತಿದೆ. ಅದೇನೇ ಇರಲಿ, ಬಿಜೆಪಿ ಪ್ರಣಾಳಿಕೆಯು ಅಭಿವೃದ್ಧಿ ಸಂಬಂಧೀ ಹೇಳಿಕೆಗಳನ್ನು ಹೊಂದಿದ್ದರೂ, ಸಂಘಪರಿವಾರದ ಉದ್ದೇಶಗಳ ತಿರುಳನ್ನೇ ಪ್ರಧಾನವಾಗಿ ತನ್ನ ಪ್ರಣಾಳಿಕೆಯಲ್ಲಿ ಮಂಡಿಸಿದೆ. ಮತ್ತು ಅದರ ಪ್ರಣಾಳಿಕೆಯು ತನ್ನ ಚುನಾವಣಾ ಪ್ರಚಾರದಲ್ಲಿ ಅಳವಡಿಸಿಕೊಂಡಿರುವ ಒಟ್ಟಾರೆ ಸಮಾಜ ವಿಭಜಕ ಮತ್ತು ಕೋಮು ಧೃವೀಕರಣದ ರಾಜಕೀಯಕ್ಕೆ ತಕ್ಕಂತಿದೆ. ಬಿಜೆಪಿ ಪಕ್ಷದ ಪ್ರಣಾಳಿಕೆಯು ಪ್ರಾರಂಭವಾಗುವುದೇ ರಾಷ್ಟ್ರೀಯ ಭದ್ರತೆಯ ವಿಷಯಗಳ ಮೂಲಕ. ಅದರ ತಥಾಕಥಿತ  ಅಭಿವೃದ್ಧಿ ಅಜೆಂಡಾಗಳು  ನಂತರದಲ್ಲಿ ಹಿಂಬಾಲಿಸುತ್ತವೆ. ಈ ವಿಭಾಗದಲ್ಲಿರುವ ಪೌರತ್ವ ನೋಂದಣಿ ರಿಜಿಸ್ಟ್ರಾರ್ ಅನ್ನು ದೇಶದೆಲ್ಲೆಡೆ ವಿಸ್ತರಿಸುವುದು, ಪೌರತ್ವ ತಿದ್ದುಪಡಿ ಮಸೂದೆ, ೩೭೦ನೇ ಕಲಮನ್ನು ರದ್ದುಗೊಳಿಸುವುದು ಇತ್ಯಾದಿಗಳು ರಾಷ್ಟ್ರ ಮತ್ತು ರಾಷ್ಟ್ರವಾದದ ಬಗ್ಗೆ ಬಿಜೆಪಿಗಿರುವ ತಾರತಮ್ಯ ಪೂರಿತ ಮತ್ತು ಒಳಗೊಳ್ಳುವುದಕ್ಕಿಂತ ಹೊರದಬ್ಬುವ ತತ್ವದ ಸ್ವರೂಪವನ್ನು ಮತ್ತೊಮ್ಮೆ ಬಯಲುಗೊಳಿಸುತ್ತದೆ. ಇನು ಅಭಿವೃದ್ಧಿ ಸಂಬಂಧೀ ವಿಷಯದಲ್ಲೂ ಸಹ ಬಿಜೆಪಿ ಪ್ರಣಾಳಿಕೆಯು ಯುವಕರನ್ನು ಉಧ್ಯಮಿಗಳನ್ನಾಗಿಸುವ ನೀತಿಧೋರಣೆಯಡಿಯಲ್ಲಿ ನಿರುದ್ಯೋಗದ ಪ್ರಶ್ನೆಯನ್ನು ಹಿಂದಕ್ಕೆ ಸರಿಸಿಬಿಡುವ ಪ್ರಯತ್ನವನ್ನು ಮಾಡಿದೆ. ಆ ಮೂಲಕ ಒಂದು ಜ್ವಲಂತ ಮತ್ತು ತುರ್ತು ಸಮಸ್ಯೆಯನ್ನು ನಿರ್ವಹಿಸಬೇಕಾದ ಅಗತ್ಯವನ್ನೇ ಅದು ಪಕ್ಕಕ್ಕೆ ಸರಿಸಿದೆ. ಮಹಿಳಾ ಸಬಲೀಕರಣದ ಬಗ್ಗೆ ಉದ್ದುದ್ದನೇ ಮಾತುಗಳನ್ನಾಡಿದರೂ ಪ್ರಣಾಳಿಕೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನದ ಪ್ರಸ್ತಾಪವಿಲ್ಲ.  ಮಾತ್ರವಲ್ಲ ಲಿಂಗ ಸಮಾನತೆಯ ವಿಷಯವನ್ನು ಮುಸ್ಲಿಂ ಮಹಿಳೆಯರ ಆಚರಣೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಆದರೆ ಮುಸ್ಲಿಂ ಸಮುದಾಯದೊಳಗಿನ ಸಮಾನತೆಯ ಬಗ್ಗೆ ಇಷ್ಟೆಲ್ಲ ಮೊಸಳೆ ಕಣ್ಣೀರು ಸುರಿಸುವ ಬಿಜೆಪಿಯ ಪ್ರಣಾಳಿಕೆಯು ಅಲ್ಪಸಂಖ್ಯಾತರ ಬಗ್ಗೆ ಘನತೆಯೊಂದಿಗೆ ಅಭಿವೃದ್ಧಿ ಎಂಬ ಒಂದು ಸಾಲನ್ನು ಬಿಟ್ಟರೆ ಮತ್ತೇನನ್ನೂ ಹೇಳಿಲ್ಲ. ಇದು ಬಿಜೆಪಿಯ ರಾಷ್ಟ್ರದ ಪರಿಕಲ್ಪನೆಗೆ ಅಲ್ಪಸಂಖ್ಯಾತ ಸಮುದಾಯಗಳ ಅಸ್ಥಿತ್ವವು ಎಷ್ಟು ಅಪ್ರಮುಖ ಎಂದು ಭಾವಿಸುತ್ತದೆಂಬುದನ್ನು ಎತ್ತಿ ತೋರಿಸುತ್ತದೆ. ರಾಮಮಂದಿರ ಮತ್ತು ಶಬರಿಮಲ ವಿಷಯಗಳು ಪ್ರಣಾಳಿಕೆಯ ಭಾಗವಾಗಿದ್ದು ಒಂದು ಸಾಂವಿಧಾನಿಕ ಪ್ರಜಾತಂತ್ರಕ್ಕೆ ಬಿಜೆಪಿಯ ಆಳ್ವಿಕೆಯು ಒಡ್ಡಬಹುದಾದ ಅಪಾಯವನ್ನು ವಿವರಿಸುತ್ತದೆ. ಜನತೆಯ ಶ್ರದ್ಧೆ ಮತ್ತು ನಂಬಿಕೆಗಳಿಗೆ ಸಂಬಂಧಪಟ್ಟ ವಿಷಯಗಳಿಗೆ ಸಾಂವಿಧಾನಿಕ ರಕ್ಷಣೆಯನ್ನು ದಕ್ಕಿಸಿಕೊಳ್ಳಲು ತಮ್ಮ ಪಕ್ಷವು ಶ್ರಮಿಸುತ್ತದೆ  ಎಂದು ಅವರ ಪ್ರಣಾಳಿಕೆಯು ಹೇಳುತ್ತದೆ. ಆ ಮೂಲಕ ಅದು ಸಾಂವಿಧಾನಿಕ ಮೌಲ್ಯಗಳನ್ನೇ ಬುಡಮೇಲು ಮಾಡಲು ಬಹಿರಂಗ ಕರೆಯನ್ನೇ ಕೊಟ್ಟಂತಾಗಿದೆ.

ರಾಷ್ಟೀಯ ಭದ್ರತೆಯೇ ಮೊದಲು ಎಂಬ ಬಿಜೆಪಿಯ ಪ್ರಣಾಳಿಕೆಗೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಪ್ರಣಾಳಿಕೆಯು ಉದ್ಯೋಗದ ಪ್ರಶ್ನೆಗೆ ಮಹತ್ವವನ್ನು ನೀಡುವ ಮೂಲಕ ಈ ದೇಶದ ಜನತೆಯ ಜೀವನದ ಮತ್ತು ಜೀವನೋಪಾಯಗಳ ಪ್ರಶ್ನೆಯೇ ಪ್ರಮುಖ ರಾಷ್ಟ್ರೀಯ ಪ್ರಶ್ನೆಯೆಂದು ಪ್ರತಿಪಾದಿಸಿದೆ. ಕನಿಷ್ಟ ಆದಾಯ ಖಾತರಿ ಯೋಜನೆಯನ್ನು ಪ್ರಧಾನವಾಗಿರಿಸಿಕೊಂಡಿರುವುದು ಮತ್ತು ಕೃಷಿಗೆ ಪ್ರತ್ಯೇಕ ಬಜೆಟ್ಟನ್ನು ರೂಪಿಸುವ ಪರಿಕಲ್ಪನೆಗಳನ್ನು ಮುಂದಿರಿಸುವ ಮೂಲಕ, ಒಟ್ಟಾರೆಯಾಗಿ ನವ ಉದಾರವಾದಿ ಚೌಕಟ್ಟಿನೊಳಗೇ ಇದ್ದರೂ, ಪ್ರಜಾತಾಂತ್ರಿಕ ಒತ್ತಡಗಳಿಗೆ ಸಂವೇದನಾಶೀಲವಾಗಿರುವ ಅಂಶವನ್ನು ಕಾಂಗ್ರೆಸ್‌ನ ಪ್ರಣಾಳಿಕೆ ತೋರಿಸುತ್ತದೆ. ಅಷ್ಟು ಮಾತ್ರವಲ್ಲದೇ ನೈತಿಕ ಪೊಲೀಸ್‌ಗಿರಿ ಮತ್ತು ಗುಂಪುಹಲ್ಲೆಗಳ ದೊಂಬಿಕೋರರನ್ನು ಅಂತರಿಕ ಭದ್ರತೆಗೆ ಎದುರಾಗಿರುವ ಅಪಾಯಗಳೆಂದು ಗುರುತಿಸಿರುವುದು ನಿರಾಳ ಉಂಟುಮಾಡುವಂಥ ಸಂಗತಿಗಳಾಗಿವೆ. ಇದರ ಅರ್ಥ ಈ ವಿದ್ಯಮಾನವು ಒಂದು ಕಾನೂನು ಭದ್ರತೆಯ ಸಮಸ್ಯೆ ಎಂದಲ್ಲ. ಆ ಗುಂಪುಗಳು ಸಮಾಜದ ಐಕ್ಯತೆಗೆ ಮಾಡುತ್ತಿರುವ ಧಕ್ಕೆಯನ್ನು ಗುರುತಿಸುತ್ತಿರುವುದು ದೇಶದ ಬಹುತ್ವ ಸ್ವರೂಪಕ್ಕೆ ಸಿಕ್ಕಿರುವ ಮನ್ನಣೆಯಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ನಾಗರಿಕ ಹಕ್ಕುಗಳನ್ನು ರಕ್ಷಿಸುವ ಬಗ್ಗೆ (ಕನಿಷ್ಟ ಉದ್ದೇಶವನ್ನಾದರೂ) ವ್ಯಕ್ತಪಡಿಸಿರುವ ಅಂಶವು  ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ಬಿಜೆಪಿಗಿಂತ ಭಿನ್ನವಾಗಿಸುತ್ತದೆ. ಇದಲ್ಲದೆ ದೇಶದ್ರೋಹಿ ಕಾಯಿದೆಯನ್ನು ಮತ್ತು ಮಾನನಷ್ಟವನ್ನು ಕ್ರಿಮಿನಲ್ ಅಪರಾಧಗೊಳಿಸುವ  ಕಾಯಿದೆಯನ್ನು ರದ್ದು ಮಾಡುವ ಮತ್ತು ೧೯೫೮ರ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆಯ ಅಂಶಗಳನ್ನು ಪುನರ್‌ಪರಿಶೀಲಿಸುವ ಅಂಶಗಳು ಈ ದೇಶವು ಒಂದು ಸೇನಾಸೆರೆಯ ರಾಷ್ಟವಾಗದಂತೆ ಕಾಪಾಡಬೇಕೆಂಬ ಕಾಂಗ್ರೆಸ್‌ನ ಉದ್ದೇಶಗಳನ್ನು ಸ್ಪಷ್ಟಪಡಿಸುತ್ತದೆ. ಚುನಾವಣೆಯ ಬಗ್ಗೆ ನಡೆದಿರುವ ಸಾರ್ವಜನಿಕ ಚರ್ಚೆಯನ್ನು  ಸಾರಾಂಶದಲ್ಲಿ  ಒಂದು ಅಮೂರ್ತ ರಾಷ್ಟ್ರದ ಪರಿಕಲ್ಪನೆಗೂ ಮತ್ತು ನೈಜ ಹಾಗೂ ಜೀವಂತ ಮನುಷ್ಯರ ಪರಿಕಲ್ಪನೆಯೂ ನಡುವೆ ನಡೆಯುತ್ತಿರುವ ಸ್ಪರ್ಧೆಯೆಂಬಂತೆ ರೂಪಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾದಲ್ಲಿ ಅದರ ಪ್ರಣಾಳಿಕೆಯು ಒಂದು ಪರಿಣಾಮಕಾರಿ ರಾಜಕೀಯ ಸಾಧನವಾಗಿ ಸಹಾಯ ಮಾಡಬಲ್ಲದು.

ಒಂದು ಪರ್ಯಾಯ ಸಾಮಾಜಿಕ ಮತ್ತು ಆರ್ಥಿಕ ಮಾದರಿಯ ಬಗೆಗಿನ ಬದ್ಧತೆಯ ದೃಷ್ಟಿಯಿಂದ ಮತ್ತು ಸಂಘಪರಿವಾರವನ್ನು ನೇರವಾಗಿ ಮುಖಾಮುಖಿಯಾಗುತ್ತಿರುವ ದೃಷ್ಟಿಯಿಂದ ಕಮ್ಯುನಿಸ್ಟ್ ಪಕ್ಷದ ಪ್ರಣಾಳಿಕೆಯು ಮಹತ್ವದ ದಾಖಲೆಗಳಾಗಿವೆ. ಚುನಾವಣಾ ಕಣದಲ್ಲಿ ದಿನೇದಿನೇ ಕುಸಿಯುತ್ತಿರುವ ಅವರ ಸಾಮರ್ಥ್ಯದ ಕಾರಣದಿಂದಾಗಿ ಪ್ರಣಾಳಿಕೆಯಲ್ಲಿರುವ ವಿಷಯUಳು ಅದರ ಜಾರಿ ಸಾಧ್ಯತೆಗಿಂತ ಹೆಚ್ಚಾಗಿ ಅವು ಮುಂದೆ ಒಂದು ಜನಸಮೂಹದ ಚಳವಳಿಗಳನ್ನು ಕಟ್ಟುವ ಪ್ರಧಾನ ವಿಷಯಗಳಾಗುವ ದೃಷ್ಟಿಯಿಂದ ಮಹತ್ವದ್ದಾಗಿವೆ. ಐತಿಹಾಸಿಕವಾಗಿ ನೋಡಿದರೆ ಈ ಚಳವಳಿಗಳು ಈ ಹಿಂದೆ ಕನಿಷ್ಟ ಕಾಂಗ್ರೆಸ್‌ನಂಥ ಪಕ್ಷಗಳಾದರೂ ಚಳವಳಿಗಳ ಆಗ್ರಹಗಳಲ್ಲಿ ಕೆಲವನ್ನಾದರೂ ಜಾರಿಗೆ ತರುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತೆನ್ನುವುದನ್ನು ಕಂಡಿದ್ದೇವೆ. ಸಿಪಿಎಂ ಪಕ್ಷವು ಸಲಹೆ ಮಾಡಿರುವ ನಗರ ಉದ್ಯೋಗ ಖಾತರಿ ಯೋಜನೆ ಮತ್ತು ಸಮಾಜವಾದಿ ಪಕ್ಷವು ಬಡತನದ ಜಾತಿ ಸ್ವರೂಪವನ್ನು ಗುರುತಿಸಿರುವುದೂ ಮತ್ತು  ಅತಿ ಶ್ರಿಮಂತರ ಮೇಲೆ ಹೆಚ್ಚುವರಿ ತೆರಿಗೆಯನ್ನು ಹಾಕಬೇಕೆಂದು ಮಾಡಿರುವ ಪ್ರಸ್ತಾಪಗಳು ಅಂಥ ಚಳವಳಿ ಸಾಮರ್ಥ್ಯವನ್ನು ಹೊಂದಿವೆ.

ಈ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಸಫಾಯಿ ಕರ್ಮಾಚಾರಿ ಆಂದೋಲನವು ಮುಂದಿಟ್ಟಿರುವ ಪ್ರಣಾಳಿಕೆಯು ಜೀವದ ಹಕ್ಕನ್ನು ಪ್ರಧಾನವಾಗಿ ಮುನ್ನೆಲೆಗೆ ತಂದಿದೆ. ಅದು ಒಟ್ಟಾರೆಯಾಗಿ ಸಮಾಜ ಮತ್ತು ರಾಜಕೀಯ ವ್ಯವಸ್ಥೆಗೆ ಮಾಡಿರುವ  ಒಂದು ನೈತಿಕ ಮನವಿಯಾಗಿದೆ. ಆಳುವ ಪಕ್ಷದ ಟೊಳ್ಳು ರಾಷ್ಟ್ರವಾದಕ್ಕೆ ಪ್ರತಿಯಾಗಿ ಮಾನವ ಘನೆತಯು ಪ್ರಧಾನಾವಾದ ಆದ್ಯತೆಯಾಗಬೇಕೆನ್ನುವ  ವಿಷಯವು ನಿಜವಾದ ಅರ್ಥಪಡೆದುಕೊಳ್ಳಬೇಕೆಂದರೆ ಆ ಪ್ರತಿಪಾದನೆಯನ್ನು  ಪರಿಣಾಮಕಾರಿಯಾಗಿ ಮತದಾರರ ಬಳಿ ತೆಗೆದುಕೊಂದು ಹೋಗಬೇಕಾದ ಜವಾಬ್ದಾರಿಯು ಮಾತ್ರ   ಪ್ರಧಾನವಾಗಿ ವಿರೋಧಪಕ್ಷಗಳದ್ದೇ ಆಗಿದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top