ISSN (Print) - 0012-9976 | ISSN (Online) - 2349-8846

ದೇಶದ ಮತದಾರರನ್ನು ಭಾವೋದ್ರಿಕ್ತರನ್ನಾಗಿಸುತ್ತಿರುವುದೇಕೆ?

ಯಶಸ್ಸಿಗೆ ತನ್ನದೇ ಆದರ ಮೌಲಿಕ ಕಾರಣಗಳಿರುತ್ತವೆ. ಆದರೆ ವೈಫಲ್ಯಗಳಿಗೆ ಭಾವನಾತ್ಮಕ ಸಮರ್ಥನೆಗಳ ಅಗತ್ಯ ಬೀಳುತ್ತದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರುವ ರಾಜಕೀಯ ಪಕ್ಷಗಳು ಆಡಳಿತರೂಢ ಬಿಜೆಪಿ ಪಕ್ಷದ ವೈಫಲ್ಯಗಳನ್ನು ಜನರ ಮುಂದಿರಿಸಿ ಮತವನ್ನು ಯಾಚಿಸುತ್ತಿದ್ದಾರೆ. ಆಡಳಿತರೂಢ ಬಿಜೆಪಿ ಪಕ್ಷದ ವೈಫಲ್ಯಗಳನ್ನು ಗಮನದಲ್ಲಿರಿಸಿಕೊಂಡು ಹೇಳುವುದಾದರೆ ಬಿಜೆಪಿಯ ಬಗ್ಗೆ ವಿರೋಧಪಕ್ಷಗಳು ಮಾಡುತ್ತಿರುವ ಟೀಕೆಗಳಲ್ಲಿ ಸತ್ವವಿರುವುದರಿಂದ ಅವು ನೈತಿಕ ಮಹತ್ವವನ್ನು ಪಡೆದುಕೊಳ್ಳುತ್ತದೆ. ವಿರೋಧ ಪಕ್ಷಗಳ ಪ್ರಚಾರದಲ್ಲಿ ಒಂದು ಸಮರ್ಥನೀಯ ಕಾರಣಗಳಿರುವುದರಿಂದ ಅವುಗಳು ಮಾಡುವ ಮತಯಾಚನೆಗೆ ಭಾವನಾತ್ಮಕ ವಿಷಯಗಳ ಬೆಂಬಲದ ಅಗತ್ಯ ಬೀಳುವುದಿಲ್ಲ. ತಾನು ೨೦೧೪ರಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದಲ್ಲಿ ಬಿಜೆಪಿ ಪಕ್ಷವು ಕೂಡಾ ಅದನ್ನು ದೊಡ್ಡ ಮಟ್ಟದಲ್ಲಿ ಪ್ರಚಾರಕ್ಕೆ ಬಳಸಿಕೊಳುತ್ತಿತ್ತು. ಆದರೆ ಈಗ ಅಂಥ ಯಾವುದೇ ಸಾಧನೆಗಳನ್ನು ಮಾಡದೇ ವಿಫಲವಾಗಿರುವುದರಿಂದ ಬಿಜೆಪಿ ಪಕ್ಷವು ತನ್ನ ಪ್ರಚಾರಕ್ಕಾಗಿ ಭಾವನಾತ್ಮಕ ವಿಷಯಗಳ ಬೆಂಬತ್ತಿದೆ. ತನ್ನ ಈ ವೈಫಲ್ಯತೆಗಳಿಂದಾಗಿ ಉಂಟಾಗುತ್ತಿರುವ ಮುಜುಗುರದಿಂದಾಗಿ  ಜನರ ಗಮನವನ್ನು ತರ್ಕ ಮತ್ತು ವಿಚಾರಗಳಿಂದ ದಾರಿ ತಪ್ಪಿಸಲು ಬಿಜೆಪಿಯು ಭಾವನಾತ್ಮಕ ವಿಷಯಗಳನ್ನೇ ಅತ್ಯಧಿಕವಾಗಿ ಬಳಸಿಕೊಳ್ಳುತ್ತಿದೆ. ಬಿಜೆಪಿಯ ಚುನಾವಣಾ ಪ್ರಚಾರಗಳಲ್ಲಿ ಆಕ್ರಮಣಕಾರಿ ರಾಷ್ಟ್ರೀಯವಾದಕ್ಕೆ ಅಚಲ ನಿಷ್ಟೆಯನ್ನು ಆಗ್ರಹಿಸುವ ವಿಷಯಗಳೇ ತುಂಬಿಕೊಂಡಿವೆ. ಚುನಾವಣಾ ಪೂರ್ವ ಸಮೀಕ್ಷೆಗಳು ಹೆಚ್ಚಿಸಿರುವ ತೋರಿಕೆಯ ಆತ್ಮವಿಶ್ವಾಸವನ್ನು ಬಿಟ್ಟರೆ ಇತರ ಯಾವುದೇ ವಿಶ್ವಾಸ ಮೂಡಿಸುವ ಸಂಗತಿಗಳಿಲ್ಲವೆಂಬ ಬಗ್ಗೆ ಬಿಜೆಪಿಯ ಒಳವರ್ತುಲಗಳಲ್ಲಿ ದಿಗಳೆದಂತೆ ಅರಿವು ಹೆಚ್ಚಾಗುತ್ತಿದೆ. ಅದೇ  ಈ ಆಡಳಿತರೂಢ ಪಕ್ಷವನ್ನು ಮಾದರಿ ನೀತಿ ಸಂಹಿತೆಯ ಎಲ್ಲಾ ಗಡಿಗಳನ್ನೂ ಉಲ್ಲಂಘಿಸುತ್ತಾ ಭಾವನಾತ್ಮಕ ವಿಷಯಗಳಿಗೇ ಅಂಟಿಕೊಳ್ಳುವಂತೆ ಮಾಡುತ್ತಿದೆ. ತನ್ನ ಯಶಸ್ಸಿಗೆ ಪೂರಕವಾಗಿ ಮತದಾರರನ್ನು ಗೆದ್ದುಕೊಳ್ಳಲು ಬಿಜೆಪಿಯು ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಮತ್ತು ಸಾಮಾಜಿಕ ಜಾತಾಣಗಳನ್ನು ನಿಯಂತ್ರಿಸುತ್ತಿರುವುದು ಮಾತ್ರವಲ್ಲದೆ ಮುದ್ರಣ ಮಾಧ್ಯಮದಲ್ಲಿನ ಪ್ರಚಾರದಲ್ಲಿನ ಬಹುದೊಡ್ಡ ಆವರಣವನ್ನು ಆಕ್ರಮಿಸಿಕೊಂಡಿದೆ.

ಆದರೆ, ಪ್ರಚಾರ ಮಾಧ್ಯಮಗಳ ಪ್ರಧಾನ ಮೂಲಗಳನ್ನೆಲ್ಲಾ ಒಂದೇ ಪಕ್ಷವು ಆವರಿಸುಕೊಳ್ಳುತ್ತಾ ಅದರ ನಾಯಕರ ಭಾಷಣಗಳ ಅಬ್ಬರಗಳು ಹೆಚ್ಚುತ್ತಿದ್ದಂತೆ ಲಕ್ಷಾಂತರ ಮತದಾರರ ಕಿವಿಗಳು ಆ ಮಾತುಗಳಲ್ಲಿನ ಟೊಳ್ಳನ್ನೂ ಅರ್ಥಮಾಡಿಕೊಳ್ಳುತ್ತಿರುವುದು  ಹೆಚ್ಚೆಚ್ಚು ಖಚಿತವಾಗುತ್ತಿದೆ.  ಏಕೆಂದರೆ ರಾಜಕೀಯ ಪಕ್ಷಗಳ  ಚುನಾವಣಾ ಭಾಷಣಗಳಲ್ಲಿ  ಪ್ರಾಮಾಣಿಕ ಮತ್ತು ಸತ್ವಯುತವಾದ ಮಾತುಗಳನ್ನು ದುಷ್ಟತನದ ಮತ್ತು ತೋರಿಕೆಯ ಮಾತುಗಳಿಂದ ಬೇರ್ಪಡಿಸಿ ಅರ್ಥಮಾಡಿಕೊಳ್ಳಬಲ್ಲಷ್ಟು ವಿವೇಚನಾ ಸಾಮರ್ಥ್ಯವು ಮತದಾರರಿಗಿರುತ್ತದೆ ಎಂದು ನಿರೀಕ್ಷಿಸಬಹುದಾಗಿದೆ. ಇತ್ತೀಚಿನ ಉದಾಹರಣೆಗಳೆ ಸ್ಪಷ್ಟಪಡಿಸುವಂತೆ ಮತದಾರರರು ರಾಜಕೀಯ ಪಕ್ಷಗಳು ಮಾಡುವ ಭಾವನಾತ್ಮಕ ಭಾಷಣಗಳಲ್ಲಿ  ತರ್ಕ ಮತ್ತು ವಿಚಾರಗಳಿಗಿಂತ ತಮ್ಮನ್ನು ಬಡಕಾಯಿಸುವ ಭಾವನಾತ್ಮಕ ಮತ್ತು ತೋರಿಕೆಯ ವಿಷಯಗಳೇ ಹೆಚ್ಚಿದೆಯೆಂಬುದನ್ನು ಅರ್ಥಮಾಡಿಕೊಂಡಿದ್ದಾರೆ. ಅಂಥಾ ಪಕ್ಷಗಳಿಗೆ ಮತ್ತೊಂದು ಬಾರಿ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಟ್ಟರೆ ಅವರ ಭಾಷಣಗಳಲ್ಲಿ ಡಾಳಾಗಿ ಕಾಣುವ ದ್ವೇಷದ ಅಂಶವು ಸರ್ಕಾರದ ಪ್ರಜಾತಾಂತ್ರಿಕ ಸ್ವರೂಪಕ್ಕೆ ಕಳಂಕ ಹಚ್ಚುತ್ತವೆ. ಆಡಳಿತರೂಢ ಪಕ್ಷವು ದ್ವೇಶ ಮತ್ತು ವೈಷಮ್ಯದ ನೈತಿಕ ಘಾಸಿಯನ್ನು ವಿರೋಧ ಪಕ್ಷಗಳ ಮೇಲೆ ವರ್ಗಾಯಿಸುತ್ತಾ ಅವುಗಳ ವಾದಗಳನ್ನು ನಿರಾಕರಿಸುವ ಪ್ರಯತ್ನವನ್ನು ಮಾಡುತ್ತಿದೆ. ಅಂಥಾ ಭಾವನಾತ್ಮಕ ಪ್ರತಿ ಆಕ್ರಮಣಗಳಲ್ಲಿ ವಿಕೃತವಾದ ತರ್ಕವಿರುತ್ತದೆಯೇ ವಿನಃ ಪ್ರಬಲವಾದ ವಿಚಾರಗಳಲ್ಲ. ಚುನಾವಣಾ ದಿನಗಳು ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳ ಆಕ್ರಮಣಕಾರಿ ಧೋರಣೆಗಳು ಹೆಚ್ಚಾಗುತ್ತಾ ಹೋಗುವುದನ್ನು ಈ ಹಿಂದೆಯೂ ನಾವು ಗಮನಿಸಿದ್ದೇವೆ. ಚುನಾವಣಾ ರಾಜಕಾರಣದ ಹೆಚ್ಚುತ್ತಿರುವ ಭಾವೋನ್ಮಾದೀಕರಣದ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲೇ ಬೇಕಾಗುತ್ತದೆ: ಬಿಜೆಪಿ ಪಕ್ಷವು ಮತದಾರರನ್ನು ಏನೆಂದು ಭಾವಿಸುತ್ತದೆ? ಹಾಗು ಮತದಾರರು ತಮ್ಮ ಬಗ್ಗೆ ಇಟ್ಟುಕೊಳ್ಳಬೇಕಾದ ಸ್ವ-ಅರಿಮೆ ಅರಿಮೆ ಏನು? ಮತದಾರರ ಸಮಸ್ಯೆಗಳೇನೆಂಬುದನ್ನು  ಒಂದು ರಾಜಕೀಯ ಪಕ್ಷವು ನಿರ್ಧರಿಸಬೇಕೆ? ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮತದಾರರು ಇಂಥಾ ಬೆಳವಣಿಗೆಗಳನ್ನು ಏಕೆ ಸಹಿಸಿಕೊಳ್ಳಬೇಕು?

ಮತದಾರರ ಸಮಸ್ಯೆಗಳೇನು ಮತ್ತು ಅದರ ಆದ್ಯತೆಗಳೇನೆಂದು ಬಿಜೆಪಿಯು ತೀರ್ಮಾನಿಸುತ್ತಿದೆ. ಆದರೆ ಬಿಜೆಪಿ ಪಕ್ಷದ ಸ್ವಂತ ಅದ್ಯತೆಗಳು ಜನತೆಯ ಆದ್ಯತೆಗಳಾಗಲಾರದು. ಆದರೆ ಜನರ ಅದ್ಯತೆಗಳ ಬಗ್ಗೆ ಹೀಗೆ ಏಕಪಕ್ಷೀಯವಾಗಿ ನಡೆಯುವ ಅಬ್ಬರದ ಘೋಷಣೆಗಳಿಂದಾಗಿ ತಾವು ಘನತೆಯಿಂದ ಬದುಕಲು ಪೂರಕವಾಗುವ ವಿಷಯಗಳ ಆದ್ಯತೆಯೇನೆಂದು ತೀರ್ಮಾನಿಸಬಲ್ಲ ಮತದಾರರ ವಿವೇಚನಾ ಸಾಮರ್ಥ್ಯಕ್ಕೆ ಕೆಲವೊಮ್ಮೆ ಭಂಗ ಉಂಟಾಗುತ್ತದೆ. ಪಕ್ಷವೊಂದು ನಡೆಸುವ ಈ ಬಗೆಯ ಪ್ರಚಾರಗಳು ಪ್ರಜ್ನಾವಂತ ಮತದಾರರನ್ನು ವಿಚಾರಹೀನಗೊಳಿಸುತ್ತಾ ತಮಗೆ ಅತ್ಯಂತ ತುರ್ತಿನ ಮತ್ತು ಅಷ್ಟು ತುರ್ತಿಲ್ಲದ ವಿಷಯಗಳು ಯಾವುವು ಎಂಬುದನ್ನು ಬೇರ್ಪಡಿಸಿ ನೋಡಲಾಗದಂತೆ ಮಾಡಿಬಿಡುತ್ತದೆ. ಆದರೂ ಆಡಳಿತರೂಢ ಸರ್ಕಾರದ ವಿನಾಶಕಾರಿ ನೀತಿಗಳ ಕಾರಣದಿಂದ ಕಠಿಣ ಮತ್ತು ಜಟಿಲವಾಗಿರುವ ಬದುಕಿನ ಅನುಭವಗಳು ಮಾತ್ರ ಶಾಶ್ವತ ಸತ್ಯಗಳಾಗಿ ಉಳಿದಿರುತ್ತವೆ.

 ಕಳೆದ ಐದು ವರ್ಷಗಳ ಆಡಳಿತದಲ್ಲಿ ಕೊಟ್ಟ ಯಾವ ಭರವಸೆಗಳನ್ನು ಈಡೇರಿಸದಿದ್ದರೂ ಮತದಾರರು ತಮ್ಮ ಮಿತ್ರಕೂಟಕ್ಕೆ ಮತದಾನ ಮಾಡಬೇಕೆಂದು ನಿರೀಕ್ಷಿಸುವ ಪಕ್ಷವು ಮತದಾರರನ್ನು ವಿಚಾರಹೀನರೆಂದು ಭಾವಿಸುತ್ತದೆ. ಈ ಹಿನ್ನೆಲೆಯಲ್ಲಿ ಮತದಾರರು ನೈತಿಕ ಪ್ರಜ್ನೆಯಿಂದ ಕೂಡಿದ ವೈಚಾರಿಕ ನಿಲುವನ್ನು ತಾಳಬೇಕಾಗುತ್ತದೆ. ಹೀಗಾಗಿ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾದ ಒಂದು ಪಕ್ಷದ ಮೇಲೆ ಭರವಸೆ ಇಡುವುದು ನಿರರ್ಥಕವೆಂಬುದನ್ನೂ ಅವರು ಮನಗಾಣಬೇಕಾಗುತ್ತದೆ. ಈ ಸಂಗತಿಯನ್ನು ಮತದಾರರು ಈ ಹಿಂದೆಯೂ ಮನಗಂಡಿದ್ದಾರೆ ಮತ್ತು ಈ ಬಾರಿಯೂ ಆ ಸತ್ಯವನ್ನು ಮನವರಿಕೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಹೀಗಾಗಿ ಭರವಸೆಗಳನ್ನು ಈಡೇರಿಸಬಲ್ಲ ಮತ್ತು ಒಂದೊಮ್ಮೆ ಈಡೇರಿಸಲಾಗದಿದ್ದಲ್ಲಿ ಅದಕ್ಕಾಗಿ ಕ್ಷಮೆ ಕೋರುವಷ್ಟು ತಾತ್ವಿಕ ಸ್ಥೈರ್ಯ ಹೊಂದಿರುವ ಪಕ್ಷಕ್ಕೆ ಮತ ಚಲಾಯಿಸುವಷ್ಟು ವೈಚಾರಿಕ ಸಾಮರ್ಥ್ಯ ಹೊಂದಿರುವುದನ್ನು ಮತದಾರರು ಸಾಬೀತು ಪಡಿಸಬೇಕಿದೆ.

ಹೀಗಾಗಿ ತಮ್ಮ ಮತದಾನವು ಶರತ್ತುಗೊಳಪಡುತ್ತವೆ ಎಂಬುದನ್ನು ತೋರಿಸುವುದು ಮತದಾರರ ಸಾಮೂಹಿಕ ಜವಾಬ್ದಾರಿಯಾಗಿದೆ. ಪಕ್ಷಗಳ ಸಾಧನೆಗಳನ್ನು ಕೇವಲ ಐದು ವರ್ಷಕ್ಕೊಮ್ಮೆ ಮಾತ್ರವಲ್ಲದೆ ನಿರಂತರವಾಗಿ ಮತದಾರರು ಪರಿಶೀಲನೆಗೊಡ್ಡಬೇಕಿದೆ.

ಅದರಲ್ಲೂ ಕೇವಲ ಸುಳ್ಳು ಭರವಸೆಗಳನ್ನು ಮಾತ್ರ ನೀಡಿದ ಹಾಗೂ ಭರವಸೆಗಳನ್ನು ಈಡೇರಿಸಲಾಗದಿದ್ದಕ್ಕೆ ಯಾವ ಕಾರಣಗಳನ್ನೂ ನೀಡದ ಒಂದು ಪಕ್ಷಕ್ಕೆ ಬಡವರು ಮತ್ತೊಮ್ಮೆ ಐದು ವರ್ಷಗಳ ಕಾಲ ಅಧಿಕಾರ ನಡೆಸುವ ಅವಕಾಶ ಕೊಡದಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಅಂಥಾ ಒಂದು ಪಕ್ಷಕ್ಕೆ ಇನ್ನೈದು ವರ್ಷಗಳ ಕಾಲ ಅಧಿಕಾರ ನೀಡುವ ಪ್ರಯೋಗಕ್ಕೆ ಒಡ್ಡಿಕೊಳ್ಳುವುದು ಒಂದು ವಿಚಾರಹೀನವಾದ ಮತ್ತು ಆತ್ಮವಂಚನೆಯ ಮತದಾನವಾಗುತ್ತದೆ.

ಮಾರುಕಟ್ಟೆ ಪರ ಆರ್ಥಿಕ ವ್ಯವಸ್ಥೆಯು ಅಂಚಿನಲ್ಲಿರುವ ಸಮುದಾಯಗಳ ಸ್ಥಿತಿಗತಿಯನ್ನು ಸುಧಾರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದರಿಂದ ಅರ್ಥಿಕ ಮರುವಿತರಣಾ ಕಾರ್ಯಭಾರವನ್ನು ಹೊಂದಿರುವ ಪ್ರಭುತ್ವವು ಅತಿ ಮುಖ್ಯವಾಗುತ್ತದೆ. ಆದರೆ ಮತದಾರರು ಜಾತಿ, ಭಾಷೆ, ಮತ್ತು ಕೋಮುವಾದಿ ಸಿದ್ಧಾಂತಗಳನ್ನು  ಆಧರಿಸಿ ವ್ಯಕ್ತಿಗತ ಆಯ್ಕೆಯನ್ನು ಮಾಡಿಕೊಳ್ಳುವುದರಿಂದ ಪ್ರಾಮಾಣಿಕತೆಯಾಗಲೀ, ಸಂವೇದನಾಶಿಲತೆಯಾಗಲೀ ಇಲ್ಲದ ಸಂಕುಚಿತ ದೃಷ್ಟಿಕೋನದ ಪಕ್ಷಗಳನ್ನು ಅಧಿಕಾರಕ್ಕೆ ತರಲು ಹೆಚ್ಚಿನ ಅವಕಾಶ ಮಾಡಿಕೊಟ್ಟಂತಾಗುತ್ತದೆ. ವ್ಯಕ್ತಿಗತವಾದ ಹಿತಾಸಕ್ತಿಗಳನ್ನು ಸಾಮೂಹಿಕ ಒಳಿತಿಗಾಗಿ ಪೂರಕವಾಗಿ ಪರಿವರ್ತನೆ ಮಾಡುವ ನೈಜ ಪ್ರಜಾತಾಂತ್ರಿಕ ಆಶಯದ ಭರವಸೆಯನ್ನು ನೀಡಬಲ್ಲ ಪ್ರಾಮಾಣಿಕ ಮತ್ತು ಸಂವೇದನಾಶೀಲ ಮತ್ತು ಹೊಣೆಗಾರಿಕೆಯುಳ್ಳ ಸರ್ಕಾರಕ್ಕಾಗಿ ಮತದಾನ ಮಾಡುವ ಸಾಮೂಹಿಕ ಕ್ರಿಯೆಯಲ್ಲಿ ಮಾತ್ರ  ವ್ಯಕ್ತಿಗತ ಆಸಕ್ತಿಗಳೂ ಸುರಕ್ಷಿತವಾಗಿರುತ್ತವೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top