ISSN (Print) - 0012-9976 | ISSN (Online) - 2349-8846

ರಾಷ್ಟ್ರೀಯ ಸಮಗ್ರತೆಯ ಬಗ್ಗೆ ಬಿಜೆಪಿಯ ಪ್ರಶ್ನಾರ್ಹ ಪರಿಕಲ್ಪನೆಗಳು

ಆರೋಗ್ಯಕರ ಚುನಾವಣಾ ಪ್ರಕ್ರಿಯೆಗಳು ವೈಯಕ್ತಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ನಡುವಿನ ಪರಸ್ಪರ ಕೊಡುಕೊಳ್ಳುಗಳನ್ನು ಆಗಮಾಡಬೇಕೇ ವಿನ: ಯಾವೊಂದನ್ನು ಮತ್ತೊಂದಕ್ಕಿಂತ ಮಹತ್ವದ್ದಾಗಿಸಬಾರದು.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತದದ ಸಹಚರರು ತಮ್ಮ ಚುನಾವಣಾ ಪ್ರಚಾರಗಳಲ್ಲಿ ಒಂದು ನಿರ್ದಿಷ್ಟ ರೀತಿಯ ರಾಷ್ಟ್ರವಾದವನ್ನು ಪ್ರಚೋದಿಸುತ್ತಿರುವುದು ಸ್ಪಷ್ಟವಾಗಿದೆ. ಫುಲ್ವಾಮ ದಾಳಿಯಾಗುವವರೆಗೆ ಅದು ಸೇನಾತ್ಮಕ ಮತ್ತು ಆಕ್ರಮಣಕಾರಿ ರಾಷ್ರವಾದದ ಸ್ವರೂದಲ್ಲಿತ್ತು. ಬಿಜೆಪಿಯ ರಾಷ್ಟ್ರವಾದವು ತನ್ನ ನಿಲುವುಗಳನ್ನು ಪ್ರಜಾತಾಂತ್ರಿಕ ನೆಲೆಗಟ್ಟಿನಲ್ಲಿ ವಿರೋಧಿಸುವವರನ್ನು ಶತ್ರುಗಳೆಂದು ಚಿತ್ರಿಸುತ್ತಾ ಶತ್ರು ರಾಷ್ಟ್ರವಾದ ಪಾಕಿಸ್ತಾನದ ವಿರುದ್ಧದ ಸಂಘರ್ಷವನ್ನು ದೇಶದೊಳಗೂ ಜೀವಂತವಾಗಿರಿಸುತ್ತಿದೆ. ಕೆಲವು ಹಿಂದೀ ಚಾನೆಲ್‌ಗಳು ಮತ್ತು ಪತ್ರಿಕೆಗಳು ಈ ಸಂಗತಿಗಳನ್ನು ದಾಳಿ-ಪ್ರತಿದಾಳಿ, ಬೃಹತ್ ದಾಳಿ ಎಂಬ ನುಡಿಗಟ್ಟುಗಳನ್ನು ಬಳಸುತ್ತಾ ಈ ಆಕ್ರಮಣಕಾರಿ ರಾಷ್ಟ್ರವಾದಕ್ಕೆ ಪೂರಕವಾದ ಪ್ರಚಾರ ಮಾಡುತ್ತಾ ಬಂದಿವೆ. ಇತ್ತಿಚೆಗೆ ಅಂತರಿಕ್ಷದಲ್ಲಿದ್ದ ಉಪಗ್ರಹವನ್ನು ನಾಶ ಮಾಡಿದ ಕ್ಷಿಪಣಿ ಪ್ರಯೋಗವನ್ನು ಖುದ್ದು ಪ್ರಧಾನಿಗಳೇ ನಾಟಕೀಯವಾಗಿ ಘೋಷಣೆ ಮಾಡಿದ್ದು ಈ ಸೇನಾತ್ಮಕ ನುಡಿಗಟ್ಟುಗಳ ಬಳಕೆಗೆ ಮತ್ತೊಂದು ಉದಾಹರಣೆ. ಚುನಾವಣೆಯ ಸಂದರ್ಭದಲ್ಲಿ ನಡೆದಿರುವ ಈ ಬೆಳವಣಿಗೆಗಳು ನೈತಿಕವಾಗಿ ದಮನಕಾರಿಯಾದ ತಿರುವುಗಳನ್ನು ಪಡೆದುಕೊಂಡಿದೆ. ಒಂದು ವೇಳೆ ನೀವು ಬಿಜೆಪಿಗೆ ಓಟು ಹಾಕದಿದ್ದರೆ ಭಾರತವನ್ನು ಒಡೆಯಬಯಸುವ ಶಕ್ತಿಗಳಿಗೆ ಓಟು ಹಾಕಿದಂತಾಗುತ್ತದೆ ಎಂದು  ಬಿಜೆಪಿ ಸದಸ್ಯರು ನೀಡುತ್ತಿರುವ ಹೇಳಿಕೆಗಳಲ್ಲಿ ಇದು ಇನ್ನಷ್ಟು ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ. ಬಿಜೆಪಿಯು ಕಾಂಗ್ರೆಸ್ಸನ್ನು ದೇಶದ ಅಂತರಿಕ ಶತ್ರುಗಳ ಸಾಕಾರ ರೂಪವಾಗಿ ಜನರ ಮುಂದಿಡಲು ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಪ್ರಣಾಳಿಕೆಯ ಆಯ್ದ ಅಂಶಗಳ ಮೇಲೆ ಮಾತ್ರ ತಮ್ಮ ಟೀಕೆಯನ್ನು ಕೇಂದ್ರೀಕರಿಸುತ್ತಾ ಕಾಂಗ್ರೆಸ್ ಪ್ರಣಾಳಿಕೆಯನ್ನು ಒಂದು ದೇಶದ್ರೋಹೀ ಪ್ರಣಾಳಿಕೆಯೆಂದು ಬಣ್ಣಿಸಿದ  ಬಿಜೆಪಿಯ ವಕ್ತಾರರ ಹೇಳಿಕೆಗಳಲ್ಲೂ ಇದು ಮತ್ತೊಮ್ಮೆ ಸ್ಪಷ್ಟವಾಗಿದೆ. ವಾಸ್ತವವಾಗಿ ಬಿಜೆಪಿಯು ತನ್ನ ನೆಚ್ಚಿನ ರಾಷ್ಟ್ರವಾದದ ದೊಣ್ಣೆಯನ್ನು ಬೀಸುತ್ತಾ ಎಲ್ಲಾ ಬಗೆಯ ಭಿನ್ನಮತಗಳ ಬಾಯ್ಮುಚ್ಚಿಸಲು ಪ್ರಯತ್ನಿಸುತ್ತಿದೆ.

ಉಳಿದ ಸಮಯದಲ್ಲೂ ಸಹ ಬಿಜೆಪಿಯು ಭಾರತದ ರಾಷ್ಟ್ರೀಯತೆಯನ್ನು ಪಾಕಿಸ್ತಾನದ ಜೊತೆಗಿನ ಸಂಘರ್ಷಾತ್ಮಕ ಸಂಬಂಧಗಳ ಚೌಕಟ್ಟಿನಲ್ಲೇ ಚಿತ್ರಿಸುತ್ತಾ ಬಂದಿದೆ. ಚುನಾವಣೆಯ ಸಂದರ್ಭದಲ್ಲಂತೂ ಅದು ಕೇವಲ ಪಾಕಿಸ್ತಾನ ವಿರೋಧಿ ರಾಷ್ಟ್ರಿಯತೆಯ ಸ್ವರೂಪವನ್ನು ತೆಗೆದುಕೊಂಡು ಬಿಡುತ್ತದೆ. ಬಿಜೆಪಿಯ ಈ ಬಗೆಯ ಚುನಾವಣಾ ಪ್ರಚಾರವು ಮೂರು ಮುಖ್ಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಮೊದಲನೆಯದು, ಬಿಜೆಪಿಯು ಮತದಾರರ ಬೆಂಬಲವನ್ನು ಗಳಿಸಲು ಇತರ ವೈಚಾರಿಕ ಮತ್ತು ಜೀವನ ಸಂಬಂಧೀ ವಿಷಯಗಳನ್ನು ಆಧರಿಸದೆ ಕೇವಲ ರಾಷ್ಟ್ರೀಯ ಸಮಗ್ರತೆಯ ಬಗೆಗಿನ ಒಂದು ಬಗೆಯ ವ್ಯಾಖ್ಯಾನವನ್ನು ಮಾತ್ರ ಅಧರಿಸುವುದು ಏಕೆ? ಎರಡನೆಯದು, ಬಿಜೆಪಿ ಪ್ರಕಾರ ಮತದಾರರಿಗೆ ಯಾವುದು ಮುಖ್ಯವಾಗಬೇಕು- ವಾಸ್ತವಕ್ಕಿಂತ ಊಹಾತ್ಮಕವೇ ಆಗಿರುವ ರಾಷ್ಟ್ರೀಯ ಸಮಗ್ರತೆಯ ಬಗೆಗಿನ ವಿಷಯಗಳೋ ಅಥವಾ ಯಾವುದೇ ರಾಜಕೀಯ ಪಕ್ಷದ ಮುಲಾಜಿನ ದರ್ದಿಲ್ಲದೆ ಮತ್ತು ರಾಷ್ಟ್ರೀಯವಾದಿಗಳ ಅನುಮತಿಗಳ ಅಗತ್ಯಗಳಿಲ್ಲದೆ ಸಂಕಷ್ಟದಲ್ಲಿರುವ ಸಮುದಾಯಗಳು ಬದುಕಲು ಅವಕಾಶ ಮಾಡಿಕೊಡುವ ಸಂಗತಿಗಳೋ? ಮತ್ತು ಅಂತಿಮವಾಗಿ, ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡಬೇಕೆಂಬ ಬಿಜೆಪಿಯ ಆಗ್ರಹಗಳನ್ನು ಮತದಾರರು ಒಪ್ಪಿಕೊಳ್ಳುವರೇ? ಬಿಜೆಪಿಯ ಈವರೆಗಿನ ಆಳ್ವಿಕೆಯಿಂದ ಬದುಕಿನ ಮೇಲೆ ಆಗಿರುವ ದುರ್ಭರ ಪರಿಣಾಮಗಳನ್ನು ಮರೆತು ತರ್ಕಿಸುವ ವ್ಯಕ್ತಿಗಳು ಅಮೂರ್ತವಾದ ರಾಷ್ಟ್ರ ಕಲ್ಪನೆಯ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವರೇ?

ಸದರಿ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಎನ್‌ಡಿಎ ಕೂಟವು ಆಕ್ರಮಣಕಾರಿ ರಾಷ್ಟ್ರೀಯವಾದ ಅಥವಾ ತನ್ನ ನಾಯಕರ ಬಗ್ಗೆ ಅನುಕಂಪ ಮೂಡಿಸುವಂತಹ, ಅಥವಾ ಹಿಂದೂ ಭಾವನೆಗಳಿಗೆ ಆಗಿರುವ ಘಾಸಿಗಳಂತಹ ಭಾವನಾತ್ಮಕ ವಿಷಯಗಳನ್ನೇ ಹೆಚ್ಚೆಚ್ಚು ಬಳಕೆ ಮಾಡುವಂಥಾ ಅನಿವಾರ್ಯಕ್ಕೆ ಗುರಿಯಾಗಿದೆ. ಏಕೆಂದರೆ ಅದು ೨೦೧೪ರ ಚುನಾವಣಾ ಪ್ರಚಾರದಲ್ಲಿ ಮಾಡಿದಂತೆ ಪ್ರಧಾನ ಮಂತ್ರಿ ಜನಧನ್ ಯೋಜನೆಯಡಿ ಜನರ ಖಾತೆಗಳಲ್ಲಿ ತಲಾ ೧೫ ಲಕ್ಷ ರೂಪಾಯಿಗಳನ್ನು ಜಮೆ ಮಾಡುವ ಅಥವಾ ಲಕ್ಷಾಂತರ ಯುವಕರಿಗೆ ಉದ್ಯೋಗವನ್ನು ಒದಗಿಸುವ ಭರವಸೆಗಳನ್ನು ಕೊಡುವ ಸ್ಥಿತಿಯಲ್ಲಿ ಇಲ್ಲ. ಇನ್ನೂ ಬಿಡುಗಡೆ ಮಾಡಬೇಕಿರುವ ತನ್ನ ೨೦೧೯ರ ಚುನಾವಣಾ  ಪ್ರಣಾಳಿಕೆಯಲ್ಲಿ ಬಿಜೆಪಿಯು ಇದಕ್ಕೆ ಸಂಬಂಧಪಟ್ಟಂತೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿದರೂ ಅದು ಮತದಾರರ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎನ್ನುವುದು ಸ್ಪಷ್ಟ. ಎರಡನೆಯದಾಗಿ ಒಂದು ವೇಳೆ ಬಿಜೆಪಿಯು ಅಂಥಾ ಭರವಸೆಗಳನ್ನು ಮತ್ತೆ ನೀಡಿದರೆ ಭರವಸೆಯ ಪರಿಕಲ್ಪನೆಯನ್ನು ಒಣಮಾತಿನ ಮಟ್ಟಕ್ಕೆ ಇಳಿಸಿದಂತಾಗುತ್ತದೆ. ಭರವಸೆಗಳನ್ನು ಈಡೇರಿಸದ ಪಕ್ಷವು ತನ್ನ ನೈತಿಕ ಮೌಲ್ಯವನ್ನು ಕಳೆದುಕೊಳ್ಳುವುದರಿಂದ ಇದು ಒಣ ಭರವಸೆಗಳನ್ನು ನೀಡುವ ಎಲಾ ಪಕ್ಷಗಳಿಗೂ ಅನ್ವಯವಾಗುತ್ತದೆ. ನಿರುದ್ಯೋಗದಂತಹ ಮಹತ್ವದ ವಿಷಯಗಳಲ್ಲಿ ಎನ್‌ಡಿಎ ಸರ್ಕಾರದ ಭ್ರಮನಿರಸನಗೊಳ್ಳುವಂಥಾ ವಿಫಲ ಸಾಧನೆಗಳಿಂದಾಗಿ ಬಿಜೆಪಿಯ ಪ್ರಚಾರವು ಏಕಮುಖವಾಗಿ  ಉನ್ಮಾದ ರಾಜಕಾರಣದತ್ತ ಮುಖಮಾಡಿದೆ. ಮತದಾರರು ರಾಷ್ಟ್ರೀಯ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಏಕೈಕ ಕಾರಣಕ್ಕಾಗಿ ತಮಗೆ ಮತ ನೀಡಬೇಕೆಂದು ಅದು ಕೇಳುತ್ತಿರುವುದು ಸ್ಪಷ್ಟವಾಗಿದೆ.

ಆದರೆ ಆ ನೋಟವು ವಿಶಾಲವಾದ ಮತ್ತು ಒಳಗೊಳ್ಳುವ ರಾಷ್ಟ್ರೀಯವಾದದ ದೃಷ್ಟಿಕೋನವನ್ನು ಹೊಂದಿಲ್ಲ. ಬಿಜೆಪಿಯ ರಾಷ್ಟ್ರವಾದದ ಪ್ರತಿಪಾದನೆಗಳಲ್ಲಿ ರಾಷ್ಟ್ರ ಮತ್ತು ನಾಗರಿಕರ ನಡುವೆ ಪರಸ್ಪರ ಕೊಡು-ಕೊಳ್ಳು ಸಂಬಂಧವೇ ಇರುವುದಿಲ್ಲ. ಮತ್ತದು ಅಸಹಾಯಕರನ್ನು ಮತ್ತು ಅಮಾಯಕರನ್ನು  ಗುಂಪುಗೂಡಿ ಬಡಿದುಕೊಂದ ಲಿಂಚಿಂಗ್ ಪ್ರಕರಣಗಳ, ಸ್ವಾತಂತ್ರ್ಯವಿಲ್ಲದ ಭಯಭೀತ ಪರಿಸ್ಥಿತಿUಳ, ಭಯ ಮತ್ತು ಬೇಗುದಿಗಳಂಥ ಸಾಮಾಜಿಕವಾಗಿ ವಿಭಜಕವಾದ ಮತ್ತು ಆಳವಾದ ಭಯ-ಭೀತಿ ಹುಟ್ಟಿಸಿದ ಸಂಗತಿಗಳನ್ನು ಚರ್ಚೆಯ ಮುನ್ನೆಲೆಗೆ ತರದೆಯೇ ತನ್ನ ಪ್ರತಿಪಾದನೆಗಳನ್ನು ಒಪ್ಪಿಕೊಳ್ಳಬೇಕೆಂದು ಬಯಸುತ್ತದೆ.

ಸಹಜವಾಗಿಯೇ ಇಂದಿನ ಚುನಾವಣೆಯ ಸಂದರ್ಭದಲ್ಲಿ ನೋಟುನಿಷೇಧ ಮತ್ತು ಜಿಎಸ್‌ಟಿ ನೀತಿಗಳಿಂದ ಹಾನಿಗೊಳಗಾದವರು, ಉದ್ಯೋಗಗಳಿಗೆ ಹಾತೊರೆಯುತ್ತಾ ವಂಚಿತರಾದವರು, ಅತ್ಯಾಚಾರಕ್ಕೊಳಗಾದ ದಲಿತರು ಮತ್ತು ಲಿಂಚಿಂಗ್ ಪಡೆಗಳಿಗೆ ಗುರಿಯಾದ ಅಲ್ಪಸಂಖ್ಯಾತರು ಮತದಾನ ಮಾಡುವಾಗ ತಮ್ಮ ವೈಯಕ್ತಿಕ ಮತ್ತು ಸಾಮುದಾಯಿಕ ಹಿತಾಸಕ್ತಿಗಳನ್ನೇ ಪ್ರಧಾನವಾಗಿರಿಸಿಕೊಳ್ಳುತ್ತಾರೆ. ಅದು ತಮ್ಮನ್ನು  ವಾಸ್ತವಿಕ ನೆಲೆಗಟ್ಟಿನಲ್ಲಿ ತಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನು  ಆಧರಿಸಿಯೇ ಅವರು ರಾಷ್ಟ್ರದ ಪರಿಕಲ್ಪನೆಯನ್ನು ಮೌಲ್ಯಮಾಪನ ಮಾಡುತ್ತಾರೆ.

ಹೀಗಾಗಿ ಆ ಸಮುದಾಯಗಳು ಎನ್‌ಡಿಎ ಹಾಕಿರುವ ಭಾವನಾತ್ಮಕ ಚೌಕಟ್ಟಿನೊಳಗೆ ಉಳಿಯಲಾರರು: ಅವರು ಮತ್ತೊಂದು ಬಗೆಯ ಭಾವನಾತ್ಮಕ ಬಂಧನಗಳಿಗೆ ತಮ್ಮನ್ನು ತಾವು ಶಾಶ್ವತವಾಗಿ ಒಡ್ಡಿಕೊಳ್ಳಬಹುದು. ಆದರೆ ಮಾರುಕಟ್ಟೆಯ ಏರುಪೇರುಗಳಿಂದ ರಕ್ಷಿಸಿಕೊಳ್ಳುವ ಅವಕಾಶಗಳಿರುವ,  ಅಗತ್ಯವಿರುವಷ್ಟು ಉದ್ಯೋಗಗಳನ್ನು ಸೃಷ್ಟಿಸುವ, ಸ್ಥಳಾಂತರಮಾಡದ ಭದ್ರತೆ, ಲಿಂಚಿಂಗ್ ಹತ್ಯೆಗಳಿಗೆ ಈಡಾಗುವ ಭಯದಿಂದ ಮತ್ತು ಜಾತಿ ದಮನಗಳಿಂದ ಮುಕ್ತಿ ನೀಡಬಲ್ಲ ಪ್ರಭುತ್ವದ ಚೌಕಟ್ಟಿರುವ ರಾಷ್ಟ್ರವೊಂದರ ಅಗತ್ಯವನ್ನು ಅವರೂ ಮನಗಾಣುತ್ತಾರೆ. ಸಾಮಾಜಿಕವಾಗಿ ಪ್ರತಿಸ್ಪಂದಿಸುವ, ಮತ್ತು ಮಾನವೀಯವಾಗಿ ಸಂವೇದನಾಶೀಲವಾಗಿರುವ ಪ್ರಭುತ್ವವು ತನ್ನ ರಾಷ್ಟ್ರವನ್ನು ಬಹುತ್ವ ಮತ್ತು ವೈವಿಧ್ಯತೆಗಳನ್ನು ಆಧರಿಸಿ ರೂಪಿಸಬಯಸುತ್ತದೆ. ಅಧಿಕಾರಕ್ಕೇರ ಬಯಸುವ ಯಾವುದೇ ಪಕ್ಷವು ಜನರ ನಡುವಿನ ಒಡಕನ್ನು ಗಟ್ಟಿ ಮಾಡುವ ಮೂಲಕ ಬೆಳೆಯುವ ಶಕ್ತಿಗಳ ಪ್ರಭಾವವು ನಾಮಾವಶೇಷವಾಗುವಂತೆ ಮಾಡಲು ಶಕ್ತವಾಗಿರುವಂತೆ ತನ್ನ ಸಂಸ್ಥೆಗಳನ್ನು ರೂಪಿಸುವ ಮತ್ತು ಬಳಸುವ ಜವಾಬ್ದಾರಿಯನ್ನು ಹೊಂದಿರಬೇಕು. ಪ್ರಾಯಶಃ, ರಾಷ್ಟ್ರೀಯ ಸಮಗ್ರತೆಯ ಅತ್ಯಂತ ಸೃಜಶೀಲ ಪರಿಕಲ್ಪನೆ ಇದೇ ಆಗಿದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top