ISSN (Print) - 0012-9976 | ISSN (Online) - 2349-8846

ಸಂಶೋಧಕ ಮನಸ್ಸುಗಳ ಸರ್ಕಾರೀಕರಣ

ಒಂದು ಪುರೋಗಾಮಿ ಸರ್ಕಾರವು ಸಂಶೋಧನೆಯ ಕ್ಷಿತಿಜಗಳನ್ನು ವಿಸ್ತರಿಸಬೇಕೇ ವಿನಃ ಸರ್ಕಾರೀ ಚಿಂತನೆಗಳನ್ನು ಪ್ರೋತ್ಸಾಹಿಸಬಾರದು.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಕಳೆದ ಐದು ವರ್ಷಗಳ ತನ್ನ ಅಧಿಕಾರಾವಧಿಯಲ್ಲಿ ಎನ್‌ಡಿಎ ಸರ್ಕಾರವು ಉನ್ನತ ಶಿಕ್ಷu ಸಂಸ್ಥೆಗಳಲ್ಲಿ ಆಳವಾದ ಮತ್ತು ವೈವಿಧ್ಯಮಯವಾದ ಚಿಂತನೆಗಳನ್ನು ಬೆಳಸುವ ಕಡೆಗೆ ಯಾವ ಉತ್ಸಾಹವನ್ನೂ ತೋರಲಿಲ್ಲ. ಶಿಕ್ಷಣದ ಬಗೆಗಿನ ಅದರ ಸಂಕುಚಿತ ದೃಷ್ಟಿಕೋನವು ಚಿಂತನೆಯ ಸ್ವಾತಂತ್ರ್ಯವನ್ನು ಜೀವಂತವಾಗಿರಿಸಬೇಕಾದ ವಿಶ್ವವಿದ್ಯಾಲಯಗಳ ಪರಿಕಲ್ಪನೆಗೆ ತಡೆಯೊಡ್ಡುವಂತಿದೆ. ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಮತ್ತು ಚಿಂತನಾ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸುವ ಮತ್ತೊಂದು ಪ್ರಯತ್ನ ಇತ್ತೀಚೆಗೆ ನಡೆದಿದೆ. ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳ, ಕೇಂದ್ರದ ಮನವ ಸಂಪನ್ಮೂಲ ಸಚಿವಾಲಯದ ಮತ್ತು ಯುಜಿಸಿ ಯ ಜಂಟಿ ಸಭೆಯೊಂದು ೨೦೧೮ರ ಡಿಸೆಂಬರ್ ೧೫ರಂದು ನಡೆದಿದ್ದು ಅದರಲ್ಲಿ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳನ್ನು ರಾಷ್ಟ್ರೀಯ ಆದ್ಯತೆಗಳಿಗೆ ಪೂರಕವಾಗಿರುವಂತೆ ನಿಗಾ ವಹಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅವುಗಳಲ್ಲಿ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯಗಳಂತ ವಿವಿಗಳು ಈ ತೀರ್ಮಾನವನ್ನು ಜಾರಿಗೆ ತರುವಲ್ಲಿ ಅಸಾಧಾರಣವಾದ ಪ್ರಾಮಾಣಿಕತೆಯನ್ನು ಮೆರೆದಿವೆ. ವಿವಿಧ ಶೈಕ್ಷಣಿಕ ವಿಭಾಗಗಳು ಭಾಗವಹಿಸುತ್ತಾ ಮಹತ್ತರವಾದ ಸಂವಾದ ಮತ್ತು ಚರ್ಚೆಗಳ ಮೂಲಕ ಸಂಶೋಧನಾ ವಿಷಯವನ್ನು ತೀರ್ಮಾನಿಸುತ್ತಿದ್ದ ಪ್ರಕ್ರಿಯೆಯನ್ನು ಈ ತೀರ್ಮಾನವು ಇಲ್ಲವಾಗಿಸುತ್ತದೆ. ಹೀಗಾಗಿ ಈ ಪ್ರಕ್ರಿಯೆಯು ಒಂದು ಸಂಶೋಧನೆಯಲ್ಲಿ ಇರಬೇಕಾಗಿದ್ದ ಪ್ರಜಾತಾಂತ್ರಿಕ ಸ್ವರೂಪಕ್ಕೂ ವ್ಯತಿರಿಕ್ತವಾಗಿರುವುದಲ್ಲದೆ ಬೌದ್ಧಿಕತೆಯ ವಿರೋಧಿಯೂ ಆಗಿದೆ.

ಈ ತೀರ್ಮಾನವು ಹಾಕಿರುವ ಶರತ್ತುಗಳನ್ನು ಗಮನಿಸಿದರೆ ಇನ್ನು ಮುಂದೆ ಸಂಶೋಧಕರು ರಾಷ್ಟ್ರದೊಳಗೆ ನೈಜವಾಗಿ ಅಸ್ಥಿತ್ವದಲ್ಲಿರುವ  ಅಸಮಾನತೆ, ಅನ್ಯಾಯ, ತಾರತಮ್ಯ, ಬಿರುಕು ಹಾಗೂ ಅಸಮಾಧನಗಳನ್ಯಾವುದನ್ನೂ ಪರಿಗಣಿಸದೆ ರಾಷ್ಟ್ರವೆಂದರೆ ಸರ್ಕಾರವೆಂದು  ಸಮೀಕರಿಸುವ ವ್ಯಾಖ್ಯಾನವನ್ನು ಮಾತ್ರ ಒಪ್ಪಿಕೊಳ್ಳುವಂತೆ ಮಾಡುವ ಹುನ್ನಾರವೆಂಬುದು ಗೊತ್ತಾಗುತ್ತದೆ. ಹೀಗಾಗಿ ಸರ್ಕಾರದ ಯಾವುದೇ ನಿಲುವುಗಳಿಗೆ ಭಿನ್ನವಾದ ಅಭಿಪ್ರಾಯಗಳು ದೇಶದ ಹಿತಾಸಕ್ತಿಗೆ ವಿರುದ್ಧವಾದ ವಿಚ್ಚಿದ್ರಕಾರಿ ನಿಲುವುಗಳೆಂಬ ಹಣೆಪಟ್ಟಿಯನ್ನು ಪಡೆಯುತ್ತವೆ. ಹೀಗೆ ರಾಷ್ಟ್ರೀಯ ಆದ್ಯತೆಯ ಹರಹಿನಿಂದ ಹೊರಗಿರುವ ಎಲ್ಲಾ ಸಾಮಾಜಿಕ ಮತ್ತು ಐತಿಹಾಸಿಕ ವಾಸ್ತವಗಳನ್ನು ಎನ್‌ಸಿಇಆರ್‌ಟಿ ಯ ಪಠ್ಯಗಳಿಂದ ಈಗಾಗಲೇ ತೆಗೆದುಹಾಕಲಾಗುತ್ತಿದೆ. ಉನ್ನತ ಸಂಶೋಧನೆಗಳ ಹರವನ್ನು ಹೀಗೆ ಸೀಮಿತಗೊಳಿಸುತ್ತಾ ಹೋದಲ್ಲಿ ಬಹುಸಂಖ್ಯಾತಪರ ವ್ಯಾಖ್ಯಾನಗಳಿಗೆ ಸವಾಲೊಡ್ಡಲೂ ಆಗುವುದಿಲ್ಲ..ಮಾತ್ರವಲ್ಲ.  ರಾಷ್ಟ್ರವಾದದ ಬಗ್ಗೆ ವಿಭಿನ್ನ ವ್ಯಾಖ್ಯಾನಗಳನ್ನು ಮತ್ತು ರಾಷ್ಟ್ರದ ಕುರಿತು ಪರಸ್ಪರ ವಿರುದ್ಧವಾದ ಮತ್ತು ಭಿನ್ನವಾದ ಪರಿಕಲ್ಪನೆಗಳಿರುವುದನ್ನು ಮರೆಯುವಂತಾಗುತ್ತದೆ.

ವಿಶ್ವವಿದ್ಯಾಲಯಗಳಲ್ಲಿ ಈಗಿರುವ ವ್ಯವಸ್ಥೆಯೇ ಸಂಪ್ರದಾಯಕ್ಕೆ ಹೊರತಾದ ಯಾವುದೇ ಸಂಶೋಧನೆಗಳಿಗೆ ಮತ್ತು ಉನ್ನತಮಟ್ಟವನ್ನು ಕಾಯ್ದುಕೊಳ್ಳಬಹುದಾದ ಸಾಧ್ಯತೆಗಳಿಗೆ ಹಲವು ಬಗೆಯ ತಡೆಯೊಡ್ಡುತ್ತಲೇ ಬಂದಿವೆ. ಹೀಗಾಗಿ ಸುಸಂಗತವಲ್ಲದ ವಿಷಯಗಳ ಬಗೆಗಿನ ಸಂಶೋಧನೆಯನ್ನು ನಿರಾಕರಿಸಬೇಕೆಂಬ ಹೆಚ್ಚುವರಿ ಶರತ್ತುಗಳು ನೋಟು ನಿಷೇಧದ ಲಾಭಗಳ ಬಗೆಗಿನ ಅಥವಾ ಸ್ವಚ್ಚ ಭಾರತ್ ಅಭಿಯಾನದ ಸಾಮಾಜಿಕ-ಪರಿಸರಾತ್ಮಕ ಪ್ರಭಾವಗಳ ಬಗೆಗಿನ ಅಧ್ಯಯನಗಳಂಥ ಸುರಕ್ಷಿತವಲ್ಲದ ವಿಷಯಗಳ ಬಗೆಗಿನ ಸಂಶೋಧನೆಯನ್ನೇ ಸಾರಾಸಗಟು ನಿರಾಕರಿಸುವಂತೆ ಮಾಡಿಬಿಡಬಹುದು. ಮೇಲಾಗಿ ಒಂದು ಸಂಶೋಧನೆಯಲ್ಲಿ ಸಂಬಂಧಪಟ್ಟ ವಿಷಯವು ಸಂಶೋಧಕನಿಗೆ, ಶೈಕ್ಷಣಿಕ ಸಮುದಾಯಕ್ಕೆ ಮತ್ತು ಒಟ್ಟಾರೆಯಾಗಿ ಸಮಾಜಕ್ಕೆ ಎಷ್ಟು ಮಹತ್ವಪೂರ್ಣ ಎಂಬುದು ಮುಖ್ಯವಾಗುತ್ತವಾಗಲೀ, ಸರ್ಕಾರಕ್ಕೆ ಎಷ್ಟು ಸುಸಂಗತವೆಂಬುದಲ್ಲ. ಸಂಶೋಧನೆಗಳು ಸಂಶೋಧಕನಿಗೆ  ಅರ್ಥಪೂರ್ಣವಾಗುಳಿಯಬೇಕು. ಒಂದು ಆದರ್ಶವಾಗಿ ಹೇಳುವುದಾದಲ್ಲಿ, ಸಂಶೋಧನೆಯು ಸಂಶೋಧಕನ ವಿದ್ವತ್ತು ಮತ್ತು ಜೀವನಕ್ಕೆ ಪ್ರೇರಣೆ ನೀಡುವ ವಿಷಯಗಳಿಂದ ಹೊರಹೊಮ್ಮಬೇಕು. ಒಂದು ಸಂಶೋಧನೆಯು ಕುತೂಹಲದಿಂದ ಪ್ರೇರೇಪಣೆ ಪಡೆಯುತ್ತಾ ಅವರ ಸೃಜನಶೀಲತೆ ಮತ್ತು ಪ್ರತಿಫಲನಾತ್ಮಕ ಸಂವೇದನೆಗಳನ್ನೆಲ್ಲಾ ದುಡಿಸಿಕೊಳ್ಳುವುಂಥ ಬೌದ್ಧಿಕ ಕಸರತ್ತಿನ ಸಂಗತಿಯೆಂದಾದಲ್ಲಿ ಆ ಪ್ರಯಾಣದ ಮೊದಲ ಹೆಜ್ಜೆ ಆರಂಭವಾಗುವುದೇ ಪ್ರಶ್ನಿಸುವುದರಿಂದ. ಹೀಗಾಗಿ ಒಬ್ಬ ಸಂಶೋಧಕನಿಗೆ ಯಾವ ಪ್ರಶ್ನೆಯನ್ನಾದರೂ ಕೇಳಬಲ್ಲ ಮತ್ತು ಎಷ್ಟು ಪ್ರಶ್ನೆಯನ್ನಾದರೂ ಕೇಳಬಲ್ಲ ಪರಿಸರದ ಅಗತ್ಯವಿರುತ್ತದೆ.

ಒಂದು ಸಂಶೋಧನೆಯ ಉದ್ದೇಶವೇ ಈಗಾಗಲೇ ಗ್ರಹೀತವಾದ ತಿಳವಳಿಕೆಯಾಚೆಗೆ ಇರುವುದನ್ನು ಗ್ರಹಿಸಲು ಪ್ರಯತ್ನಿಸುವುದು ಅಥವಾ ಯಾವುದನ್ನು ಅರಿಯಲು ಅರ್ಹ ಎಂದು ನೀಡಲಾಗಿದೆಯೋ ಅದರಾಚೆಗಿನದ್ದನ್ನು ಬೆದಕುವುದು ಹಾಗೂ ಹಾಲಿ ಜ್ನಾನದಲ್ಲಿರುವ ಮೌನಗಳನ್ನು ಗುರುತಿಸಿ ಹೊಸ ಪ್ರಶ್ನೆಗಳನ್ನು ಕೇಳುವುದು. ಆದರೆ ಈಗಾಗಲೇ ಆಯ್ಕೆ ಮಾಡಲಾಗಿರುವ ವಿಷಯಗಳ ಪಟ್ಟಿಯಿಂದಲೇ ಸಂಶೋಧನಾ ವಿಷಯಗಳನ್ನು ಆಯ್ಕೆ ಮಾಡಬೇಕೆಂಬ ತೀರ್ಮಾನವು ಮೇಲೆ ವಿವರಿಸಲಾದ ಸಂಶೋಧನೆಯ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತದೆ. ಮಾರುಕಟ್ಟೆ ಹಿತಾಸಕ್ತಿಗಳಿಂದ ಅಥವಾ ಸರ್ಕಾರಿ ಹಿತಾಸಕ್ತಿಗಳಿಂದ  ಅಥವಾ ಚಾಲ್ತಿಯಲ್ಲಿರುವ ರೂಢಿಗತ ಶೈಕ್ಷಣಿಕ ಧೋರಣೆಗಳಿಂದಲೇ ನಿರ್ದೇಶಿತವಾದ ಮತ್ತು ಉಣಬಡಿಸಲ್ಪಟ್ಟ ಸಂಶೋಧನೆಯು ಸತ್ವಹೀನವಾಗಿರುತ್ತದೆ. ರೂಢಿಗತ, ಸುರಕ್ಷಿತ ಮತ್ತು ಯಥಾಸ್ಥಿತಿವಾದಿ ಸಂಶೋಧನೆಗಳ ಅಗತ್ಯವಾದರೂ ಏನಿದೆ? ಮೇಲಾಗಿ ವಿಶ್ವವಿದ್ಯಾಲಯಗಳ ನೈಜ ಮೌಲ್ಯವು ತತ್‌ಕ್ಷಣದ ಕಾಳಜಿಗಳಿಗೆ ಪ್ರತಿಸ್ಪಂದಿಸುವುದರ ಸಾಮರ್ಥ್ಯದಲ್ಲಿ ಮಾತ್ರವಲ್ಲದೆ ವರ್ತಮಾನದ ಮಿತಿಯನ್ನು ದಾಟಿ ನೋಡಬಲ್ಲ ಕಾಣ್ಕೆಗಳನ್ನು ಸೃಷ್ಟಿಸುವುದರಲ್ಲಿ ವ್ಯಕ್ತಗೊಳ್ಳುತ್ತದೆ. 

ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯವು ಹೊರಡಿಸಿರುವ ಸುತ್ತೋಲೆಯು ಸಾರ್ವಜನಿಕ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಹೆದರಿಕೆಯನ್ನು ಹೆಚ್ಚಿಸುವಂತಿದೆ  ಮತ್ತು ಸರ್ಕಾರವು ಅನುಮೋದಿಸಿರುವ ಆಯ್ದ ಕ್ಷೇತ್ರಗಳಲ್ಲಿನ ಸಂಶೋಧನೆಗಳಿಗೆ ಮಾತ್ರ ಧನ ಸಹಾಯವು ಸೀಮಿತಗೊಳ್ಳಬಹುದೆಂಬುದನ್ನೂ ಸಹ ಸೂಚಿಸುತ್ತಿದೆ. ಅಂದರೆ ಧನಸಹಾಯಗಳು ಆಲೋಚನೆಗಳನ್ನೂ ನಿರ್ದೇಶಿಸುತ್ತವೆ ಅಥವಾ ವಿಮರ್ಶಾತ್ಮಕ ಚಿಂತನೆಗಳಿಗೆ ಧನಸಹಾಯದ ಬೆಂಬಲ ದೊರೆಯುವುದಿಲ್ಲ. ಈ ಹಿಂದೆ ೬೦ ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ಸ್ವಾಯತ್ತವೆಂದು ಘೋಷಿಸಿದ್ದರ ಹಿಂದೆಯೂ ಯುಜಿಸಿ ಕೊಡುತ್ತಿದ್ದ ಧನಸಹಾಯವನ್ನು ಕಡಿತಗೊಳಿಸುತ್ತಾ ತಮಗೇ ಬೇಕಿರುವ ಹಣಕಾಸನ್ನು ತಾವೇ ರೂಢಿಸಿಕೊಳ್ಳಲು ಅರ್ಥಾತ್  ತಮ್ಮನ್ನು ತಾವು ವಾಣಿಜ್ಯಾತ್ಮಕ ಕೋರ್ಸುಗಳಿಗೆ  ಹಾಗೂ ಕಾರ್ಪೊರೇಟೀಕರಣೆಕ್ಕೆ ತೆರೆದುಕೊಳ್ಳುವಂತೆ ಮಾಡುವ ಹುನ್ನಾರಗಳಿವೆ. ಬೇರೆಬೇರೆ ಸಮಾಜ ಅಧ್ಯಯನ ಕೇಂದ್ರಗಳಿಗೆ ನೀಡುತ್ತಿದ್ದ ಧನಸಹಾಯಕ್ಕೆ ಹಾಕಲಾಗಿರುವ ಕತ್ತರಿಯೂ ಸಹ ಇದೇ ದಿಕ್ಕಿನೆಡೆ ಇಟ್ಟಿರುವ ಹೆಜ್ಜೆಯಾಗಿದೆ. ಸಮಾಜದ ಬಗೆಗಿನ ಭಿನ್ನಭಿನ್ನವಾದ ತಿಳವಳಿಕೆಗಳನ್ನು ಶ್ರೀಮಂತಗೊಳಿಸುವ ಸಮಾಜ ವಿಜ್ನಾನ ಮತ್ತು ಮಾನವಿಕ ವಿಭಾಗಳಲ್ಲಿನ ಗಂಭೀರವಾದ ಸಂಶೋಧನೆಗಳೆಲ್ಲವೂ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೇ ಮಾತ್ರ ಸೀಮಿತವಾಗಿರುವ ಹಿನ್ನೆಲೆಯಲ್ಲಿ ಇದು ಅತ್ಯಂತ ದುರದೃಷ್ಟಕರವಾದ ಮತ್ತು ರಾಷ್ಟ್ರದ ಹಿತಕ್ಕೆ ಹಾನಿಯನ್ನುಂಟು ಮಾಡಬಹುದಾದ ಬೆಳವಣಿಗೆಯಾಗಿದೆ.

ಓದುವ, ಬರೆಯುವ, ಆಲೋಚಿಸುವ, ಚಿಂತಿಸುವ, ಕನಸು ಕಾಣುವ ಮತ್ತು ಅಭಿವ್ಯಕ್ತಿ ಮಾಡುವ ಸ್ವಾತಂತ್ರ್ಯಗಳು ಪ್ರಜಾತಂತ್ರದಲ್ಲಿ ಜನರಿಗೆ ಎಷ್ಟು ಅಗತ್ಯವೋ ಹಾಗೆಯೇ ವಿಶ್ವವಿದ್ಯಾಲಯಗಳಲ್ಲಿ ಸಂಶೋಧಕರಿಗೂ ಅತ್ಯಗತ್ಯ. ಸಂಶೋಧನೆಗಳ ಮೇಲೆ ಸವಾರಿ ಮಾಡುವ ಈ ಕಣ್ಗಾವಲುಗಳು ಆ ಸ್ವಾತಂತ್ರ್ಯಕ್ಕೆ ತೀವ್ರವಾಗಿ ಧಕ್ಕೆಯುಂಟು ಮಾಡುತ್ತವೆ. ವಿದ್ವಾಂಸರು ಏನು ಯೋಚಿಸಬೇಕು ಮತ್ತು ಏನು ಅಧ್ಯಯನ ಮಾಡಬೇಕು ಎಂಬುದನ್ನೂ ಸಹ ಆಳುವ ಸರ್ಕಾರಗಳೇ ನಿರ್ದೇಶನ ಮಾಡುತ್ತಾ ಅವುಗಳನ್ನು ರಾಷ್ಟ್ರವಾದದ ಬಗೆಗಿನ ತಮ್ಮ ಸೀಮಿತ ತಿಳವಳಿಕೆಯ ಪರಿಧಿಯೊಳಗೆ ಕಟ್ಟಿಹಾಕಿದರೆ ವಿಶ್ವವಿದ್ಯಾಲಯಗಳು ಸರ್ಕಾರಕ್ಕೆ ಏನು ಬೇಕೋ ಅವನ್ನು ಹಾಗೂ ಅದರ ಮುಂದುವರೆಕೆಯಾಗಿ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಏನು ಬೇಕೋ ಅದನ್ನು ಮಾತ್ರ ಉತ್ಪಾದಿಸುವಂತಾಗುತ್ತದೆ. ಒಂದು ವಿಶ್ವವಿದ್ಯಾಲಯದ ಗುರಿ ಯಥಾಸ್ಥಿತಿವಾದಿ ಅಧ್ಯಯನಗಳನ್ನು ನಡೆಸುವುದೂ ಅಲ್ಲ. ಅಥವಾ ಒಂದು ಸರ್ವಾಧಿಕಾರಿ ಆಳುವವರ್ಗವು ಮುಂದೊಡ್ಡುವ ಸ್ವಗತ ಅಥವಾ ಏಕರೂಪೀ ತಿಳವಳಿಕೆಯನ್ನು ಅನುಸರಿಸುವುದೂ ಅಲ್ಲ. ಬದಲಿಗೆ ಒಂದು ವಿಶ್ವವಿದ್ಯಾಲಯವು ಭಿನ್ನಬಗೆಯ ಆಲೋಚನೆ ಮತ್ತು ದೃಷ್ಟಿಕೋನಗಳುಳ್ಳ, ಉತ್ತಮ ಸಮಾಜದ ಆಶಯಗಳನ್ನೂ ಹೊಂದಿರುವ, ರಾಷ್ಟ್ರ ಮತ್ತು ರಾಷ್ಟ್ರವಾದಗ ಬಗ್ಗೆ  ಭಿನ್ನಭಿನ್ನ ರಾಜಕೀಯ ಮತ್ತು ಚಿಂತನಗೆಳ ಸಂಶೋಧನೆಗಳಿಗೆ ಅವಕಾಶ ಮಾಡಿಕೊಡುವ ತಾಣವಾಗಬೇಕಿದೆ.

 

Back to Top