ಕಾರ್ಮಿಕರನ್ನು ಸಂಘಟಿಸುವುದೂ ಸಹ ಒಂದು ರಾಜಕೀಯ ಯೋಜನೆಯೇ ಅಲ್ಲವೇ?
ಒಂದು ಅರಾಜಕೀಯ ಕಾರ್ಮಿಕ ಸಂಘಟನೆಯು ಸಂಕಷ್ಟದಲ್ಲಿರುವ ಕಾರ್ಮಿಕ ವರ್ಗಕ್ಕೆ ಯಾವ ಒಳಿತನ್ನೂ ಮಾಡಲು ಸಾಧ್ಯವಿಲ್ಲ.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಭಾರತದಲ್ಲಿನ ಕಾರ್ಮಿಕ ಸಂಘಟನೆಗಳು ಪ್ರಾಯಶಃ ಸಮಕಾಲೀನ ಸಂದರ್ಭದಲ್ಲೇ ಎರಡು ಅತ್ಯಂತ ಕಡುಕಷ್ಟದ ಸವಾಲುಗಳನ್ನೆದುರಿಸುತ್ತಿವೆ. ದಿನೇ ದಿನೇ ಹದಗೆಡುತ್ತಿರುವ ಉದ್ಯೋಗದ ಹಾಗೂ ಕೆಲಸದ ಪರಿಸ್ಥಿತಿಗಳ ಜೊತೆಜೊತೆಗೆ ಸರ್ಕಾರಗಳು ಜಾರಿ ಮಾಡುತ್ತಿರುವ ಕಾರ್ಮಿಕ ವಿರೋಧಿ ಕಾರ್ಮಿಕ ಸುಧಾರಣೆಗಳನ್ನೂ ಕಾರ್ಮಿಕ ಸಂಘಟನೆಗಳು ಎದುರಿಸಬೇಕಾಗಿವೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಅರೆಸ್ಸೆಸ್)ದ ಕಾರ್ಮಿಕ ಸಂಘಟನೆಯಾಗಿರುವ ಭಾರತೀಯ ಮಜ್ದೂರ್ ಸಂಘವು (ಬಿಎಂಎಸ್) ಕಾಂಗ್ರೆಸ್ ಪಕ್ಷದ ಕಾರ್ಮಿಕ ಸಂಘಟನೆಯಾದ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್‌ಟಿಯುಸಿ- ಇಂಟಕ್)ನಿಂದ ಬೇರ್ಪಟ್ಟಿರುವ ನ್ಯಾಷನಲ್ ಫ್ರಂಟ್ ಆಫ್ ಟ್ರೇಡ್ ಯೂನಿಯನ್ಸ್ (ಎನ್‌ಎಫ್‌ಟಿಯು) ಜೊತೆ ಸೇರಿಕೊಂಡು ಕನ್ಪಡರೇಷನ್ ಆಫ್ ಸೆಂಟ್ರಲ್ ಟ್ರೇಡ್ ಯೂನಿಯನ್ಸ್ (ಸಿಒಎನ್‌ಸಿಇಎನ್‌ಟಿ-ಕನ್ಸೆಂಟ್) ಎಂಬ ಒಕ್ಕೂಟವನ್ನು ಕಟ್ಟಿದೆ. ಕುತೂಹಲದಾಯಕ ವಿಷಯವೇನೆಂದರೆ ಈ ಬಗ್ಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಬಿಎಂಎಸ್ ಸಂಘಟನೆಯು ಕನ್ಸೆಂಟ್ ಒಕ್ಕೂಟವನ್ನು ರಾಜಕೀಯ ರಹಿತ ಕಾರ್ಮಿಕ ಒಕ್ಕೂಟವೆಂದು ಹೇಳಿಕೊಂಡಿದೆ. ಈ ಹೊಸ ಒಕ್ಕೂಟವು ಮುಖ್ಯವಾದ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೊದಲನೆಯದಾಗಿ ಇಂದಿನ ಸಂದರ್ಭದಲ್ಲಿ ಈ ಒಕ್ಕೂಟವು ಅಗತ್ಯವಾಗಿತ್ತೇ? ಎರಡನೆಯದಾಗಿ ಇಂದು ಕಾರ್ಮಿಕರು ಮತ್ತವರ ಸಂಘಟನೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಮತ್ತು ದ್ವಂದ್ವಗಳಿಗೆ ಅಗತ್ಯವಿರುವ ಪರಿಹಾರವನ್ನು ವಿಸ್ತೃತವಾದ ಮತ್ತು ಇನ್ನಷ್ಟು ಘೋರವಾಗಿರುವ ರಾಜಕೀಯ ಪರಿಸ್ಥಿತಿಗಳ ಪರಿಹಾರಗಳಿಗಿಂದ ಭಿನ್ನವಾಗಿ ಕಲ್ಪಿಸಿಕೊಳ್ಳಬಹುದೇ? ಕೇಂದ್ರ ಸರ್ಕಾರವು ಕಾರ್ಮಿಕ ಸಂಘಟನೆಗೆ ಮನ್ನಣೆ ನೀಡುವ ಪ್ರಕ್ರಿಯೆಯಲ್ಲಿ ಸರ್ಕಾರದ ಮಧ್ಯಪ್ರವೇಶಕ್ಕೆ ಅನುವು ಮಾಡಿಕೊಡುವ ದುರುದ್ದೇಶದಿಂದ ೧೯೨೬ರ ಕಾರ್ಮಿಕ ಕಾಯಿದೆಗೆ ತಿದ್ದುಪಡಿಗಳನ್ನು ತರುತ್ತಿದೆ. ವಿಪರ್ಯಾಸವೆಂದರೆ ಈ ತಿದ್ದುಪಡಿಗಳನ್ನು ಈ ಕನ್ಸೆಂಟ್ನ ಭಾಗವಾಗಿರದ ಇತರ ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ವಿರೋಧಿಸುತ್ತಿವೆ. ಆದರೆ ಈ ವಿರೋಧದಲ್ಲಿ ಬಿಎಂಎಸ್ ಪಾಲ್ಗೊಂಡಿಲ್ಲ. ಈ ಪ್ರಸ್ತಾಪಿತ ತಿದ್ದುಪಡಿ ಮತ್ತು ಕನ್ಸೆಂಟ್ ಒಕ್ಕೂಟಗಳೆರಡರ ಹಿಂದೆಯೂ ಕೆಲವು ಗಂಭೀರವಾದ ವಾಸ್ತವಗಳಿವೆ.
ದೇಶದ ಶ್ರಮಶಕ್ತಿಯ ಶೇ.೮ ಭಾಗದಷ್ಟು ಜನರು ಮಾತ್ರ ಸಂಘಟಿತ ಕ್ಷೇತ್ರದಲ್ಲಿದ್ದಾರೆ. ಇನ್ನುಳಿದ ಶೇ.೯೨ರಷ್ಟು ಕಾರ್ಮಿಕರು ಅಸಂಘಟಿತ ಕ್ಷೇತ್ರದಲ್ಲಿದ್ದು ದಾರುಣವಾದ ಉದ್ಯೋಗದ ಮತ್ತು ಜೀವನ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಅದರ ಬಗ್ಗೆ ಕಾರ್ಮಿಕ ಸಂಘಟನೆಗಳು ಮತ್ತು ಸರ್ಕಾರಗಳು ಗಮನ ಹರಿಸಲೇ ಬೇಕಾದ ಅಗತ್ಯವಿದೆ. ಆದರೆ ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವಲ್ಲಿ ಹಲವಾರು ತೊಡಕುಗಳಿವೆ. ಹೀಗಿರುವಾಗ ಕನ್ಸೆಂಟ್ ರೂಪುಗೊಂಡಿರುವುದು ಹೇಗೆ ಈ ಸಮಸ್ಯೆಯನ್ನು ಬಗೆಹರಿಸಬಹುದು? ಒಟ್ಟಾರೆ ದೇಶದ ಕಾರ್ಮಿಕ ಶಕ್ತಿಯ ಒಳ ರಚನೆಯೇ ತೀವ್ರವಾದ ಮತ್ತು ವ್ಯಾಪಕವಾದ ಬದಲಾವಣೆಗೊಳಗಾಗಿದೆ. ವಿಸ್ತಾರಗೊಳ್ಳುತ್ತಿರುವ ಈ ಅಸಂಘಟಿತ ಕ್ಷೇತ್ರದಲ್ಲಿ ಯುವಜನರು ಮತ್ತು ಮಹಿಳೆಯರು ಹೆಚ್ಚಾಗಿದ್ದಾರೆ, ಮಾಹಿತಿ ತಂತ್ರಜ್ನಾನ ಕ್ಷೇತ್ರವು ಅದಕ್ಕೇ ನಿರ್ದಿಷ್ಟವಾದ ಉದ್ಯೋಗ ಸಂಬಂಧೀ ಸಮಸ್ಯೆಗಳನ್ನು ಮುಂದಿಟ್ಟಿದೆ, ಇನ್ನು ಸಾರಿಗೆ ಕ್ಷೇತ್ರದ ಚಹರೆಯೇ ರಾತ್ರೋರಾತ್ರಿ ಬದಲಾಗಿದ್ದು, ಖಾಸಗಿ ಟ್ಯಾಕ್ಸಿ ಅದರಲ್ಲೂ ನಿರ್ದಿಷ್ಟವಾಗಿ ಓಲಾ ಮತ್ತು ಉಬರ್‌ನ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಭಾರತವು ಹಿಂದೆಂದೂ ಕಂಡಿರಲಿಲ್ಲ. ಬಹುಪಾಲು ಸಾರ್ವಜನಿಕ ಕ್ಷೇತ್ರದ ಕಂಪನಿಗಳು ಆಯಾ ಕಾಲದ ಸರ್ಕಾರಗಳ ಮಧ್ಯಪ್ರವೇಶದಿಂದ ಬಸವಳಿಯುತ್ತಿವೆ. ಆದರೆ ಅವುಗಳನ್ನು ಪುನರುತ್ಥಾನಗೊಳಿಸುವ ಯೋಜನೆಗಳ ಬಗ್ಗೆಯಾಗಲೀ ಅಥವಾ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಬದುಕಿಗೆ ಸಂಬಂಧಪಟ್ಟ ಪುನಶ್ಚೇತನ ಪ್ಯಾಕೇಜುಗಳಂಥ ವಿಷಯಗಳಲ್ಲೂ ಸಹ ಸರ್ಕಾರಗಳು ಕಾರ್ಮಿಕರ ಜೊತೆಗಾಗಲೀ ಅಥವಾ ಕಾರ್ಮಿಕ ಸಂಘಟನೆಗಳ ಜೊತೆಗಾಗಲೀ ಕನಿಷ್ಟ ಸಮಾಲೋಚನೆಯನ್ನೂ ನಡೆಸುತ್ತಿಲ್ಲ. ಈ ಹಿಂದೆ ೨೦೧೬ರಲ್ಲಿ ಕೇವಲ ಉಡುಪು ಉದ್ಯಮದಲ್ಲಿ ಮಾತ್ರ ಅಳವಡಿಸಲಾದ ನಿಗದಿತ ಅವಧಿಯ ಉದ್ಯೋಗ ಕರಾರು ಯೋಜನೆಯು ಒಟ್ಟಾರೆಯಾಗಿ ಉದ್ಯಮಸ್ನೇಹಿಯಾಗಿದ್ದು ಕಾರ್ಮಿಕರ ವ್ಯವಹಾರವನ್ನು ಮಾಲೀಕರು ತಮಗೆ ಬೇಕಾದಂತೆ ರೂಪಿಸಿಕೊಳ್ಳುವ ರೀತಿಯಲ್ಲಿ ಸಡಿಲವಾಗಿದೆ. ಈಗ ಆ ನೀತಿಯನ್ನು ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸಲಾಗಿದೆ. ನಿಗದಿತ ಅವಧಿಯ ಉದ್ಯೋಗ ಕರಾರು ನಿಯಮಗಳ ಪ್ರಕಾರ ಕಾರ್ಮಿಕರನ್ನು ಕರಾರಿನ ಅವಧಿಯಲ್ಲೂ ಸಹ ಯಾವಾಗ ಬೇಕಾದರೂ ಕಿತ್ತೊಗೆಂiಬಹುದು ಮತ್ತು ಅದಕ್ಕಾಗಿ ಮಾಲೀಕರು ಯಾವುದೇ ವಜಾ ಸೂಚನೆಯನ್ನು ನೀಡಬೇಕಿಲ್ಲ. ೧೯೭೦ರಿಂದಾಚೆಗೆ ಬಹುರಾಷ್ಟ್ರೀಯ ಕಂಪನಿಗಳನ್ನೂ ಒಳಗೊಂಡಂತೆ ಎಲ್ಲಾ ಉದ್ದಿಮೆಗಳು ಗುತ್ತಿಗೆ ಕಾರ್ಮಿಕ ಪದ್ಧತಿಯನ್ನೇ ಅಳವಡಿಸಿಕೊಳ್ಳುತ್ತಿರುವುದು ಕೂಡಾ ಕಾರ್ಮಿಕ ಸಂಘಟನೆಗಳಿಗೆ ದೊಡ್ಡ ಸವಾಲಾಗಿಯೇ ಉಳಿದಿದೆ.
ಕಾರ್ಮಿಕ ಸಂಘಟನೆಗಳ ಅಸ್ಥಿತ್ವಕ್ಕೇ ದೊಡ್ಡ ಅಪಾಯ ಎದುರಾಗಿರುವಾಗ ಮತ್ತು ಹೊಸ ಬಿಕ್ಕಟ್ಟುಗಳನ್ನೆದುರಿಸಲು ಬೇಕಾದ ಕಾರ್ಮಿಕ ಸಂಘಟನೆಗಳ ಸಾಮರ್ಥ್ಯUಳು ಅತೀವ ಒತ್ತಡವನ್ನು ಅನುಭವಿಸುತ್ತಿರುವಾಗ, ಅವಕ್ಕೆ ದೇಶದ ರಾಜಕೀಯ ಪರಿಸ್ಥಿತಿಗಳನ್ನು ಹೊರತುಪಡಿಸಿ ಹೇಗೆ ತಾನೇ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯ? ವಾಸ್ತವವಾಗಿ ಬಿಎಂಎಸ್ ಸಂಘಟನೆಯೂ ಸಹ ಈ ನಿಗದಿತ ಅವಧಿಯ ಗುತ್ತಿಗೆ ಪದ್ಧತಿಯನ್ನು ಮತ್ತು ಸರ್ಕಾರವು ೨೦೧೭ರ ಕೂಲಿ ಸಂಹಿತೆ ಮಸೂದೆಯೊಳಗೆ ಹಲವಾರು ಕಾರ್ಮಿಕ ಸಂಬಂಧೀ ಶಾಸನಗಳನ್ನು ಸೇರಿಸಿದ್ದನ್ನು ಖಂಡಿಸಿದೆ. ಜೊತೆಗೆ, ಸರ್ಕಾರವು ಬಹುರಾಷ್ಟ್ರೀಯ ಕಂಪನಿಗಳ ಮೇಲೆ ಅವಲಂಬಿಸಿರುವುದನ್ನು ಖಂಡಿಸಿ ಈವರೆಗೆ ಅವು ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿವೆ ಎಂಬ ಬಗ್ಗೆ ಒಂದು ಶ್ವೇತಪತ್ರವನ್ನು ಹೊರಡಿಸಬೇಕೆಂದೂ ಸಹ ಅದು ಆಗ್ರಹಿಸಿದೆ. ಈ ಹಿಂದೆ ಮೋದಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಬಿಎಂಎಸ್ ಸಹ ಬಹಿರಂಗವಾಗಿಯೇ ಖಂಡಿಸಿತ್ತು. ಆದರೆ ಬಿಎಂಎಸ್ ಸಂಘಟನೆಯು ದೇಶದ ಕಾರ್ಮಿಕರ ಭವಿಷ್ಯದ ಬಗೆಗಿನ ಸೂಕ್ಷ್ಮವಾದ ಸಂಗತಿಗಳ ಬಗ್ಗೆ ಇತರ ಕಾರ್ಮಿಕ ಸಂಘಟನೆಗಳು ಕರೆನೀಡಿದ ರಾಷ್ಟ್ರವ್ಯಾಪಿ ಪ್ರತಿಭಟನೆಗೆಳಲ್ಲಿ ೨೦೧೫ರ ಸೆಪ್ಟೆಂಬರ್ ನಂತರದಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಿತು. ತನಗೆ ರಾಜಕೀಯ ಮಾಡುವುದರಲ್ಲಿ ನಂಬಿಕೆಯಿಲ್ಲದಿರುವುದರಿಂದ ತಾನು ಅಂಥಾ ಸಾರ್ವತ್ರಿಕ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿಲ್ಲವೆಂದು ತನಗೆ ಅದಕ್ಕಿಂತ ಕಾರ್ಮಿಕರ ಕಲ್ಯಾಣದ ಬಗ್ಗೆ ಹೆಚ್ಚಿನ ಕಾಳಜಿಯೆಂದು ಅದು ಹೇಳಿಕೊಳ್ಳುತ್ತದೆ. ಕಾರ್ಮಿಕ ಸಂಘಟನೆಗಳ ಜಂಟಿ ಒಕ್ಕೂಟಗಳ ವೇದಿಕೆಯನ್ನು ಸರ್ಕಾರವು ಗಂಭೀರವಾಗಿ ತೆಗೆದುಕೊಳ್ಳುವಂತೆ ಮಾಡುವ ಮೂಲಕ ತ್ರಿಪಕ್ಷೀಯ ಮಾತುಕತೆಗಳನ್ನು ಗಂಭೀರವಾಗಿ ತೆಗೆದುಕೊಂಡು ಅರ್ಥಪೂರ್ಣ ಮಾತುಕತೆಗೆ ಮುಂದಾಗುವಂತೆ ಮಾಡಬೇಕಿರುವುದು ಇಂದು ಸಂಘಟಿತ ಕಾರ್ಮಿಕ ವರ್ಗದ ಚಳವಳಿಯ ಮುಂದಿರುವ ಸವಾಲುಗಳಲ್ಲಿ ಒಂದಾಗಿದೆ. ಎನ್‌ಡಿಎ ಸರ್ಕಾರವು ಕಾರ್ಮಿಕ ಸಂಘಟನೆಗಳೊಂದಿಗೆ ಮಾತುಕತೆ ಮಾಡುವುದನ್ನು ಸದಾ ತಿರಸ್ಕರಿಸುತ್ತದೆ ಎಂಬುದು ಬಹುಪಾಲು ಕಾರ್ಮಿಕ ನಾಯಕರ ಅಭಿಪ್ರಾಯವಾಗಿದೆ. ಕಾರ್ಮಿಕ ಸುಧಾರಣೆಗಳು ಕಾರ್ಖಾನೆಗಳ ಮುಚ್ಚುವಿಕೆಗೆ ಮತ್ತು ಕಾರ್ಮಿಕರನ್ನು ಕಿತ್ತೊಗೆಯುವುದಕ್ಕೆ ಕಾರಣವಾಗುವುದು ಮಾತ್ರವಲ್ಲದೆ ಅದು ಪ್ರಜಾತಂತ್ರದ ಮೇಲಿನ ಪ್ರಹಾರವಾಗಿದೆ. ಅದನ್ನು ಜನರಿಗೆ ತಿಳಿಸುವ ಮೂಲಕ ಕಾರ್ಮಿಕರ ಹಿತಾಸಕ್ತಿಯನ್ನು ಸಾರ್ವಜನಿಕ ಹಿತಾಸಕ್ತಿಯಾಗುವಂತೆ ಮಾಡಬೇಕಾದ ಬೃಹತ್ತಾದ ಮತ್ತು ಸಂಕೀರ್ಣವಾದ ಹೊಣೆಗಾರಿಕೆ ಕಾರ್ಮಿಕ ಸಂಘಟನೆಗಳ ಮೇಲಿದೆ. ಇದನ್ನು ಸಾಧಿಸಲು ಪ್ರಗತಿಪರ ರಾಜಕೀಯ ಮತ್ತು ಸಾಮಾಜಿಕ ಚಳವಳಿಗಳನ್ನು ಒಳಗೊಳ್ಳಬೇಕಿದೆ. ಉದ್ಯೋಗರಹಿತ ಅಭಿವೃದ್ಧಿ ಪಥವನ್ನು ದೇಶವು ಅನುಸರಿಸುತ್ತಿರುವುದರಿಂದ ಕಾರ್ಮಿಕ ಸಂಘಟನೆಗಳಲ್ಲಿ ಸದಸ್ಯತ್ವದ ಕೊರತೆಯೂ ಉಂಟಾಗಿದೆ. ಕಾರ್ಮಿಕ ನೀತಿಗಳನ್ನು ಸದನದ ಒಳಗಾಗಲೀ ಅಥವಾ ಹೊರಗಾಗಲೀ ಚರ್ಚಿಸುವ ಬಗ್ಗೆ ಸರ್ಕಾರ ಕಠಿಣವಾದ ನಿರಾಕರಣ ಧೋರಣೆಯನ್ನೇ ತಳೆಯುತ್ತಿರುವುದರಿಂದ ಸಾಮೂಹಿಕ ಚೌಕಾಸಿ (ಕಲೆಕ್ಟೀವ್ ಬಾರ್ಗೈನಿಂಗ್) ಪದ್ಧತಿಯ ಮಹತ್ವವನ್ನು ಮತ್ತೆ ಸಾಬೀತುಪಡಿಸಲು ಕಾರ್ಮಿಕ ಸಂಘಟನೆಗಳು ತಮ್ಮ ಸಮಸ್ಯೆಯನ್ನು ಜನರ ಬಳಿಯೇ ತೆಗೆದುಕೊಂಡು ಹೋಗಬೇಕಿದೆ. ಅದಕ್ಕಾಗಿ ಅವರು ಸರ್ಕಾರದ ಆಡಳಿತಾತ್ಮಕ ಮತ್ತು ರಾಜಕೀಯ ವಿಷಯಗಳ ಬಗ್ಗೆಯೂ ಹೋರಾಟ ನಡೆಸಲೇ ಬೇಕಾಗುತ್ತದೆ. ಅಂಥಾ ಸಂದರ್ಭದಲ್ಲಿ ಕನ್ಸೆಂಟ್ ನ ನಿಲುವೇನಾಗಬಹುದು?