ಅನುಕೂಲಸಿಂಧು ನೀತಿ ಮತ್ತು ತತ್ವಬದ್ಧ ನೀತಿ
ನಾಗಾಲ್ಯಾಂಡಿನ ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಇದೇ ಫೆಬ್ರವರಿ ೨೭ರಂದು ನಾಗಾಲ್ಯಾಂಡಿನಲ್ಲಿ ನಡೆಯಲಿರುವ ಚುನಾವಣೆಯು ಕೇವಲ ವಿವಿಧ ರಾಜಕೀಯ ಪಕ್ಷಗಳ ನಡುವಿನ ಸ್ಪರ್ಧೆಯಾಗಿರದೆ ಅನುಕೂಲಸಿಂಧು ನೀತಿ ಮತ್ತು ತತ್ವಬದ್ಧ ನೀತಿಗಳ ನಡುವಿನ ಸ್ಪರ್ಧೆಯೂ ಆಗಿಬಿಟ್ಟಿದೆ. ಆ ರಾಜ್ಯದಲ್ಲಿ ಜನವರಿ ೨೯ರಂದು ೧೧ ರಾಜಕೀಯ ಪಕ್ಷಗಳು ಒಟ್ಟು ಸೇರಿ ಎಲ್ಲಿಯತನಕ ನಾಗಾಗಳ ಭವಿಷ್ಯದ ಸ್ಥಾನಮಾನಗಳ ಕುರಿತು ಕೇಂದ್ರ ಮತ್ತು ನಾಗಾಗಳ ನಡುವೆ ಒಂದು ಒಪ್ಪಂದ ಏರ್ಪಡುವುದಿಲ್ಲವೋ ಅಲ್ಲಿಯತನಕ ತಾವು ಚುನಾವಣೆಗಳಲ್ಲಿ ಭಾಗವಹಿಸಬಾರದೆಂಬ ಒಪ್ಪಂದವನ್ನು ಮಾಡಿಕೊಂಡವು. ಆದರೆ ಕೆಲವೇ ದಿನಗಳಲ್ಲಿ ಆ ಒಗ್ಗಟ್ಟಿನ ಬಹಿಷ್ಕಾರ ಕರೆಯ ಒಪ್ಪಂದವು ಕುಸಿದುಬಿತ್ತು. ಭಾರತೀಯ ಜನತಾ ಪಕ್ಷವು ಕೂಡಾ ಆ ಹೇಳಿಕೆಗೆ ಸಹಿ ಹಾಕಿತ್ತು. ಆದರೆ ಯಾವ ಚುನಾವಣಾ ಬಹಿಷ್ಕಾರ ಒಪ್ಪಂದವು ಆ ಎಲ್ಲರನ್ನು ಒಟ್ಟಿಗೆ ತಂದಿತ್ತೋ ಅದಕ್ಕೆ ಯಾವ ಚುನಾವಣಾ ಪಕ್ಷಗಳು ಬದ್ಧತೆಯನ್ನು ತೋರಲಿಲ್ಲ. ಚುನಾವಣೆಯಲ್ಲಿ ತಾವು ಭಾಗವಹಿಸದೇ ಇರುವ ಲಾಭವನ್ನು ಮತ್ತೊಂದು ಪಕ್ಷವು ಪಡೆದುಕೊಂಡುಬಿಡುವ ಅಪಾಯವನ್ನು ಎದುರಿಸಲು ಯಾವ ಪಕ್ಷಗಳು ಸಿದ್ಧರಿರಲಿಲ್ಲ. ಏಕೆಂದರೆ ಇದೇ ಕಾರಣದಿಂದ ೧೯೯೮ರಲ್ಲಿ ಕಾಂಗ್ರೆಸ್ ಪಕ್ಷವು ನಾಗಾಲ್ಯಾಂಡಿನ ಎಲ್ಲಾ ಸೀಟುಗಳನ್ನೂ ಪ್ರತಿಸ್ಪರ್ಧಿಗಳೇ ಇಲ್ಲದಂತೆ ಗೆದ್ದುಕೊಂಡಿತ್ತು.
ರಾಜಕೀಯ ಮೈತ್ರಿಗಳ ವಿಷಯಕ್ಕೆ ಬರುವುದಾದಲ್ಲಿ ಭಾರತದ ಉಳಿದ ಯಾವುದೇ ಪ್ರದೇಶಕ್ಕಿಂತ ನಾಗಾಲ್ಯಾಂಡು ಒದಗಿಸುವ ಅವಕಾಶಗಳು ಹೆಚ್ಚು. ಹಾಲಿ ಚುನಾವಣೆಯಲ್ಲಿ ಗೆದ್ದುಬಂದಿರುವ ಎಲಾ ೬೦ ಶಾಸಕರೂ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ನೇತೃತ್ವದ ಆಳುವ ಡೆಮಾಕ್ರಾಟಿಕ್ ಅಲಿಯನ್ಸ್ ಆಫ್ ನಾಗಾಲ್ಯಾಂಡ್ (ಡಿಎಎನ್) ನ ಭಾಗವಾಗಿದ್ದಾರೆ. ಹೀಗಾಗಿ ಅಲ್ಲಿ ವಿರೋಧ ಪಕ್ಷವೆಂಬುದೇ ಇಲ್ಲ. ಎನ್‌ಪಿಎಫ್ ಪಕ್ಷವು ಬಿಜೆಪಿಯ ದೀರ್ಘಕಾಲೀನ ಮಿತ್ರ ಪಕ್ಷವಾಗಿದೆ. ೨೦೧೫ರಲ್ಲಿ ಎಂಟು ಜನ ಕಾಂಗ್ರೆಸ್ ಶಾಸಕರೂ ಸಹ ಡಿಎಎನ್ ಕೂಟವನ್ನು ಸೇರಿಕೊಂಡುಬಿಟ್ಟರು ಹೀಗೆ ವಿಚಿತ್ರವೆಂಬಂತೆ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಸಹ ಒಂದೇ ಮೈತ್ರಿಕೂಟದ ಅಂಗಪಕ್ಷಗಳಾಗಿಬಿಟ್ಟಿವೆ. ಹೀಗಿದ್ದರೂ ಚುನಾವಣೆಗೆ ಮುನ್ನ ನಡೆದ ಬೆಳವಣಿಗೆಯಲ್ಲಿ ನಾಗಾಲ್ಯಾಂಡಿನ ಮಾಜಿ ಮುಖ್ಯಮಂತ್ರಿ ನೆಯ್‌ಫೂ ರಿಯೋ ಅವರ ನೇತೃತ್ವದಲ್ಲಿ ರೂಪುಗೊಂಡಿರುವ ಎನ್‌ಪಿಎಫ್‌ನ ಪ್ರತಿಸ್ಪರ್ಧಿ ಕೂಟವಾದ ನ್ಯಾಷನಲ್ ಡೆಮಾಕ್ರಾಟಿಕ್ ಪ್ರೋಗ್ರೆಸೀವ್ ಪಾರ್ಟಿಗೆ ಬಿಜೆಪಿ ಪಕ್ಷವು ಬೆಂಬಲವನ್ನು ಘೋಷಿಸಿದೆ. ಆದರೆ ಅದೇ ಸಮಯದಲ್ಲಿ ನಾಗಾಲ್ಯಾಂಡಿನ ಹಾಲಿ ಮುಖ್ಯಮಂತ್ರಿ ಟಿ ಆರ್ ಜೆಲಿಯಾಂಗ್ ಅವರು ತಮ್ಮ ಪಕ್ಷವು ಬಿಜೆಪಿಯೊಡನೆ ಚುನಾವಣೋತ್ತರ ಮೈತ್ರಿಯನ್ನು ರಚಿಸಿಕೊಳ್ಳಲು ಸಿದ್ಧವಿದೆಯೆಂದು ಘೋಷಿಸಿದ್ದಾರೆ. ಹೀಗೆ ಇಂದು ನಾಗಾಲ್ಯಾಂಡಿನಲ್ಲಿ ಪರಸ್ಪರ ಬದ್ಧ ವೈರಿಗಳಾದ ಎರಡೂ ಪ್ರಾದೇಶಿಕ ಪಕ್ಷಗಳಿಗೆ ಸಮಾನ ರಾಷ್ಟ್ರೀಯ ಪಕ್ಷವೊಂದರ ಜೊತೆ ಮೈತ್ರಿ ಇದೆ. ಅದೇ ರೀತಿ ಪರಸ್ಪರ ಬದ್ಧ ವೈರಿಗಳಾದ ಎರಡು ರಾಷ್ಟ್ರೀಯ ಪಕ್ಷಗಳಿಗೆ ಒಂದೇ ಪ್ರಾದೇಶಿಕ ಪಕ್ಷದೂಡನೆ ರಾಜಕೀಯ ಮೈತ್ರಿ ಇದೆ.
ಇಂಥ ವಿಚಿತ್ರವಾದ ಸಂದರ್ಭಕ್ಕೆ ಕಾರಣವಾದ ಪರಿಸ್ಥಿತಿಗಳ ವಿವರಣೆ ಸುಪರಿಚಿತವಾದದ್ದೇ ಆಗಿದೆ. ರಾಜ್ಯದ ಚುನಾವಣೆಯಲ್ಲಿ ಗೆಲ್ಲುವ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದೊಂದಿಗೆ ಮೈತ್ರಿಯನ್ನು ಖಾತರಿಪಡಿಸಿಕೊಳ್ಳಬೇಕಿದೆ. ನಾಗಾಲ್ಯಾಂಡಿನ ರಾಜಕಾರಣವನ್ನು ದಶಕಗಳಿಂದ ಪ್ರಭಾವಿಸುತ್ತಿರುವುದು ಇದೇ ನಿಯಮವೇ ಆಗಿದೆ. ಇತರ ಈಶಾನ್ಯ ರಾಜ್ಯಗಳಂತೆ ನಾಗಾಲ್ಯಾಂಡೂ ಸಹ ತನ್ನ ಅಭಿವೃದ್ಧಿಗೆ ಸಂಪೂರ್ಣವಾಗಿ ಕೇಂದ್ರವನ್ನೇ ಅವಲಂಬಿಸಿದೆ. ಯಾವುದೇ ಚುನಾಯಿತ ಸರ್ಕಾರವೂ ಸಹ ಕೇಂದ್ರದ ಕೃಪೆಯಿಂದ ದೂರವುಳಿಯಲು ಸಾಧ್ಯವೇ ಇಲ್ಲ.
ಆದರೆ ಈ ವಾಸ್ತವವು ರಾಜ್ಯದ ರಾಜಕಾರಣದ ಸ್ವರೂಪವನ್ನು ವಿವರಿಸಬಹುದಾದರೂ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನು ಕಟುಟೀಕೆ ಮಾಡುವ ಪಕ್ಷಗಳೂ ಸಹ ಅದರ ಜೊತೆ ಹೊಂದಾಣಿಕೆಯನ್ನೇಕೆ ಮಾಡಿಕೊಳ್ಳುತ್ತವೆ ಎಂಬುದನ್ನು ಅರ್ಥಪಡಿಸುವುದಿಲ್ಲ. ನಾಗಾಲ್ಯಾಂಡಿನಲ್ಲಿ ಈಗ ಹಾಲಿ ಇರುವ ನೈಜ ವಿರೋಧ ಪಕ್ಷಗಳೆಂದರೆ ಅಲ್ಲಿನ ನಾಗರಿಕ ಸಮಾಜ ಮತ್ತು ಚರ್ಚು. ನಾಗಾಲ್ಯಾಂಡಿನ ಬಲಿಷ್ಠ ನಾಗಾಲ್ಯಾಂಡ್ ಬ್ಯಾಪ್ಟಿಸ್ಟ್ ಚರ್ಚ್ ಕೌನ್ಸಿಲ್ ನೀಡಿರುವ ಇತ್ತೀಚಿನ ಮಹತ್ವದ ಹೇಳಿಕೆಯೊಂದರಲ್ಲಿ ಬಿಜೆಪಿಯ ಹಿಂದೂತ್ವದ ಕಾರ್ಯಸೂಚಿಯ ಬಗ್ಗೆ ಎಚ್ಚರಿಸಿದೆ ಮತ್ತು ಅಭಿವೃದ್ಧಿ ಹಾಗೂ ರಾಜಕೀಯ ಪ್ರಯೋಜನಗಳಿಗಾಗಿ ನಮ್ಮ ಧರ್ಮದ ಜೊತೆ ರಾಜಿ ಮಾಡಿಕೊಳ್ಳಬಾರದೆಂದು ಕರೆ ನೀಡಿದೆ. ಚುನಾವಣೆಗಳ ಸಂದರ್ಭಗಳಲ್ಲಿ ಧರ್ಮವನ್ನು ಬಳಸಿಕೊಳ್ಳುವುದರಲ್ಲಿ ಪರಿಣಿತಿಯನ್ನು ಪಡೆದಿರುವ ಬಿಜೆಪಿ ಪಕ್ಷವು ಇದರ ಬಗ್ಗೆ ಪ್ರತಿಕ್ರಿಯಿಸುತ್ತಾ ನಾಗಾಲ್ಯಾಂಡಿನಲ್ಲಿ ಕೆಲವರು ಚುನಾವಣೆಯ ಸಂದರ್ಭದಲ್ಲಿ ಧರ್ಮದ ಆಧಾರದಲ್ಲಿ ಧೃವೀಕರಣ ಮಾಡುವ ತಂತ್ರವನ್ನು ಪ್ರಮುಖವಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಯಾವುದೇ ಅಳುಕಿಲ್ಲದೆ ದೂರಿದೆ. ಬಿಜೆಪಿಯ ಎಲ್ಲಾ ೨೦ ಉಮೇದುವಾರರು ಕ್ರಿಶ್ಚಿಯನ್ನರು ಮತ್ತು ನಾಗಗಳೇ ಆಗಿರುವುದರಿಂದ ಬ್ಯಾಪ್ಟಿಸ್ಟ್ ಕೌನ್ಸಿಲ್‌ನ ಹೇಳಿಕೆ ಈ ಹುರಿಯಾಳುಗಳ ಫಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದೆಂಬುದನ್ನು ಕಾದುನೋಡಬೇಕಿದೆ.
ಚುನಾವಣೆಯನ್ನು ಬಹಿಷ್ಕರಿಸಬೇಕೆಂಬ ಕರೆಯನ್ನು ನೀಡಲು ಪ್ರೇರೇಪಿಸಿದ ರಾಜಕೀಯ ತತ್ವವೆಂದರೆ ನಾಗಾಲ್ಯಾಂಡಿನ ರಾಜಕೀಯ ಸ್ಥಾನಮಾನದ ಪ್ರಶ್ನೆ. ೧೯೬೩ರಲ್ಲಿ ನಾಗಾಲ್ಯಾಂಡಿಗೆ ರಾಜ್ಯದ ಸ್ಥಾನಮಾನ ದೊರೆತರೂ ಪ್ರತ್ಯೇಕ ಸಾರ್ವಭೌಮಿ ನಾಗಾ ರಾಷ್ಟ್ರದ ಕನಸು ಮಾತ್ರ ಜೀವಂತವಾಗಿಯೇ ಉಳಿದುಕೊಂಡು ಬಂದಿದೆ. ನಂತರದ ಸರ್ಕಾರಗಳು ನಾಗ ಬಂಡಾಯಗಾರರ ಜೊತೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳುತ್ತಾ ಂದಿರುವುದು ರಾಜ್ಯದಲ್ಲಿ ಒಂದಷ್ಟು ಶಾಂತಿ ನೆಲಸಲು ಕಾರಣವಾಗಿದ್ದರೂ ಸಂಘರ್ಷವಿನ್ನೂ ನಿಂತಿಲ್ಲ. ೨೦೧೫ರ ಆಗಸ್ಟಿನಲ್ಲಿ ನಾಗಾ ಬಂಡಾಯಗಾರ ಬಣಗಳಲ್ಲೇ ಅತಿ ದೊಡ್ಡ ಬಣವಾದ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಐಸಾಕ್- ಮುಯಿವಾ) ಬಣವು ಕೇಂದ್ರ ಸರ್ಕಾರದೊಂದಿಗೆ ಒಂದು ಒಪ್ಪಂದದ ಚೌಕಟ್ಟಿನ ಸೂತ್ರಗಳಿಗೆ ಸಹಿ ಹಾಕಿತು. ಇದರೊಂದಿಗೆ ನಾಗಾ ಸಮಸ್ಯೆಗೆ ಯಾವುದಾದರೂ ಒಂದು ಬಗೆಯ ಪರಿಹಾರವು ಒದಗಿಬರುತ್ತದೆಂಬ ನಿರೀಕ್ಷೆ ಎಲ್ಲರಲ್ಲೂ ಹೆಚ್ಚಾಯಿತು. ಆದರೂ ಆ ಒಪ್ಪಂದದಲ್ಲೇನಿದೆ ಎಂಬುದನ್ನು ಈಗಲೂ ಅತ್ಯಂತ ರಹಸ್ಯವಾಗಿಯೇ ಕಾಪಾಡಿಕೊಂಡು ಬರಲಾಗಿದೆ ಮತ್ತು ಪ್ರತಿ ಕೆಲವು ತಿಂಗಳುಗಳಿಗೊಮ್ಮೆ ಇನ್ನೇನೂ ಒಪ್ಪಂದವು ಬಹಿರಂಗಗೊಳ್ಳುತ್ತದೆಂಬ ನಿರೀಕ್ಷೆಯನ್ನು ಮಾತ್ರ ಪದೇಪದೇ ಹುಟ್ಟುಹಾಕಲಾಗುತ್ತಿದೆ. ಈ ಬಗೆಯ ಪರಿಹಾರವೊಂದು ಸಿಗಲಿದೆ ಎಂಬ ನಿರೀಕ್ಷೆಯಿಂದಲೇ ನಾಗಾಲ್ಯಾಂಡಿನ ನಾಗರಿಕ ಸಮಾe, ಚರ್ಚು ಮತ್ತು ರಾಜಕೀಯ ಪಕ್ಷಗಳು ಅಲ್ಲಿಯವರೆಗೆ ಚುನಾವಣೆಯನ್ನು ಮುಂದೂಡಬೇಕೆಂಬ ಒತ್ತಾಯವನ್ನು ಮಾಡುತ್ತಾ ಬಂದಿದ್ದವು.
ಚುನಾವಣೆಗಳ ಫಲಿತಾಂಶಗಳು ಯಾವುದೇ ಸಮಾಧಾನವನ್ನಾಗಲೀ, ಪರಿಹಾರವನ್ನಾಗಲೀ ನೀಡುವ ಸಾಧ್ಯತೆ ಇಲ್ಲ. ಸಾಕಷ್ಟು ಸಂಪನ್ಮೂಲಗಳಿದ್ದಾಗ್ಯೂ ನಾಗಾಲ್ಯಾಂಡಿನ ಅಭಿವೃದ್ಧಿಯು ತುಂಬಾ ಕಡೆಗಣಿಸಲ್ಪಟ್ಟಿದೆ. ಅದರಲ್ಲಿ ಎದ್ದು ಕಾಣುವುದು ರಸ್ತೆಗಳ ಪರಿಸ್ಥಿತಿ. ರಾಜ್ಯದಲ್ಲಿ ಶಿಕ್ಷಣ ಮಟ್ಟ ಹೆಚ್ಚಿದ್ದು ಸುಶಿಕ್ಷಿತ ಯುವ ಜನತೆ ನಿರುದ್ಯೋಗದ ಸಮಸ್ಯೆಯನ್ನೂ ತೀವ್ರವಾಗಿ ಅನುಭವಿಸುತ್ತಿದ್ದಾರೆ. ಮತ್ತೊಂದು ಕಡೆ ರಾಜ್ಯದ ಸಾಮಾನ್ಯ ಜನ ಬಂಡುಕೋರ ಗುಂಪುಗಳಿಗೆ ಶಾಂತಿಯ ಸಲುವಾಗಿ ಪರೋಕ್ಷವಾಗಿ ತೆರಿಗೆಯನ್ನು ಸಲ್ಲಿಸುತ್ತಿದ್ದಾರೆ. ಆದರೆ ಆ ಪರೋಕ್ಷ ತೆರಿಗೆಗಳಿಂದಾಗಲೀ, ಕೇಂದ್ರ ಸರ್ಕಾರ ಕೊಡುತ್ತಿರುವ ಅನುದಾನಗಳಿಂದಾಗಲೀ ಅಲ್ಲಿನ ಜನರಿಗೆ ಯಾವುದೇ ಪ್ರಯೋಜನ ಸಿಗುತ್ತಿಲ್ಲ. ಇದು ಅವರನ್ನು ಹತಾಷರನ್ನಾಗಿಸುತ್ತಿದೆ. ಕೇಂದ್ರ ಸರ್ಕಾರದಿಂದ ಬರುವ ಅನುದಾನದ ಬಹಳಷ್ಟು ಭಾಗವು ನೇರವಾಗಿ ಅಧಿಕಾರದಲ್ಲಿರುವ ಕಿಸೆಗಳನ್ನು ಸೇರುತ್ತದೆ. ರಾಜಕೀಯ ಸಿದ್ಧಾಂತಗಳಿಗಿಂತ ಅಧಿಕಾರದಿಂದ ದೊರೆಯುವ ಸಂಪತ್ತು ಮತ್ತು ರಾಜಕೀಯ ಆಶ್ರಯಗಳೇ ರಾಜ್ಯದ ರಾಜಕೀಯವನ್ನು ನಿರ್ದೇಶಿಸುತ್ತಿದೆ.
ರಾಜಕೀಯ ರಂಗ ಇಷ್ಟೊಂದು ಹದಗೆಟ್ಟಿದ್ದರೂ ನಾಗಾಲ್ಯಾಂಡಿನ ನಾಗರಿಕ ಸಮಾಜ ಮಾತ್ರ ಸಾಕಷ್ಟು ಭರವಸೆಗಳನ್ನು ಹುಟ್ಟಿಹಾಕುತ್ತದೆ. ಅದರ ಸದಸ್ಯರು ಶಾಂತಿ ಪ್ರಕ್ರಿಯೆಯು ಮುಂದೆ ಸಾಗಲು ಪ್ರೇರೇಪಿಸಿದ್ದಾರೆ, ರಾಜಕೀಯದಲ್ಲಿರುವ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದಾರೆ ಮತ್ತು ಚುನಾವಣೆಯು ಸ್ವಚ್ಚವಾಗಿರಬೇಕೆಂದು ಆಗ್ರಹಿಸುತ್ತಾ ಜನಾಂದೋಲನಗಳನ್ನು ನಡೆಸಿದ್ದಾರೆ. ಕಳೆದ ವರ್ಷ ಸರ್ಕಾರಿ ಸಂಸ್ಥೆಗಳಲ್ಲಿ ಲಿಂಗ ಪ್ರಾತಿನಿಧ್ಯದಂಥ ವಿಷಯಗಳನ್ನು ನಾಗಾ ಮಹಿಳಾ ಗುಂಪುಗಳು ಎತ್ತಿದ್ದವು. ಸ್ಥಳಿಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ಯನ್ನು ಪಡೆದುಕೊಳ್ಳುವಲ್ಲಿ ಅವರು ವಿಫಲರಾದರೂ ಲಿಂಗ ಸಮಾನತೆಯ ಬಗ್ಗೆ ನಾಗಾಲ್ಯಾಂಡಂಥ ಸಂಪ್ರದಾಯಶೀಲ ಸಮಾಜದಲ್ಲಿ ಒಂದು ಅರ್ಥಪೂರ್ಣ ಚರ್ಚೆಯನ್ನು ಹುಟ್ಟುಹಾಕುವಲ್ಲಿ ಸಫಲರಾದರು.
ಬರಲಿರುವ ಚುನಾವಣೆಗಳಲ್ಲಿ ಕೇವಲ ಐದು ಮಹಿಳೆಯರು ಮಾತ್ರ ಸ್ಪರ್ಧಿಸುತ್ತಿದ್ದಾರೆ. ೧೯೬೩ರಿಂದ ಈವರೆಗೆ ನಾಗಾಲ್ಯಾಂಡ್ ವಿಧಾನಸಭೆಗೆ ಒಬ್ಬ ಮಹಿಳೆಯೂ ಆಯ್ಕೆಯಾಗಿಲ್ಲ. ಮತ್ತು ಒಂದೇ ಒಂದು ಬಾರಿ ಮಾತ್ರ ಒಬ್ಬ ಮಹಿಳೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ನಾಗಲ್ಯಾಂಡಿನೊಳಗೆ ನಾಗಾ ನಾಗರಿಕ ಸಮಾಜವು ಎತ್ತುತ್ತಿರುವ ಪ್ರಶ್ನೆಗಳೇ ರಾಜ್ಯದ ನಿಜವಾದ ರಾಜಕಾರಣವಾಗಿದೆಯೇ ಹೊರತು ಪ್ರತಿ ಕೆಲವು ವರ್ಷಗಳಿಗೊಮ್ಮೆ ನಡೆಯುವ ಚುನಾವಣಾ ನಾಟಕಗಳಲ್ಲ.