ISSN (Print) - 0012-9976 | ISSN (Online) - 2349-8846

ಪ್ರತಿಮಾ ರಾಜಕಾರಣದ ಹಿಂದಿರುವುದೇನು?

ನವ-ಉದಾರವಾದದ ರಾಜಕೀಯವು ರಾಜತಾಂತ್ರಿಕ ಸಜ್ಜನಿಕೆಯನ್ನೂ ಉಲ್ಲಂಘಿಸುವಂತೆ ಮಾಡುವುದೇ?

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಒಬ್ಬ ವ್ಯಕ್ತಿಯ ಹೀರೋ, ಮತ್ತೊಬ್ಬ ವ್ಯಕ್ತಿಯ ವಿಲನ್ ಎಂಬುದು ರಾಜಕೀಯ ನಾಯಕರ ಪ್ರತಿಮೆಗಳ ಸ್ಥಾಪನೆಯ ವಿದ್ಯಮಾನಗಳಿಗೆ  ತಕ್ಕ ಶೀರ್ಷಿಕೆಯಾದೀತು. ರಾಷ್ಟ್ರೀಯ ಸ್ವನಿರ್ಣಯಾಧಿಕಾರದ ಹೆಸರಲ್ಲಿ ಇತ್ತೀಚೆಗೆ ಹಲವಾರು ರಾಜಕೀಯ ನಾಯಕರ ಪ್ರತಿಮೆಗಳು  ಪುಂಡಾಟಿಕೆಗೆ ಗುರಿಯಾಗಿವೆ ಅಥವಾ ಕಿತ್ತೊಗೆಯಲ್ಪಟ್ಟಿವೆ. ಈ ಹಿನ್ನೆಲೆಯಲ್ಲೂ ಆ ಶೀರ್ಷಿಕೆ ಅತ್ಯಂತ ಸೂಕ್ತವೆನಿಸುತ್ತದೆ.  ಈ ಸುದೀರ್ಘ ಪಟ್ಟಿಗೆ ಘಾನಾ ವಿಶ್ವವಿದ್ಯಾಲಯದ ಆವರಣದಲ್ಲಿದ್ದ ಎಮ್.ಕೆ. ಗಾಂಧಿಯವರ ಪ್ರತಿಮೆಯೂ ಸೇರಿಕೊಳ್ಳುತ್ತದೆ. ಇತ್ತೀಚೆಗೆ ಕೆಲವು ಪ್ರಾಧ್ಯಾಪಕರ ಒತ್ತಡಕ್ಕೆ ಮಣಿದು ಆ ವಿಶ್ವವಿದ್ಯಾಲಯದ ಆವರಣದಲ್ಲಿದ್ದ ಗಾಂಧಿಯವರ ಪ್ರತಿಮೆಯನ್ನು ಕಿತ್ತುಹಾಕಲಾಗಿದೆ.  ಒಂದೆಡೆ ಎರಡೂ ದೇಶಗಳ ಸರ್ಕಾರಗಳಿಗೆ ಗಾಂಧಿ ಪ್ರತಿಮೆಯು ಭಾರತದ ರಾಷ್ಟ್ರಪತಿಗಳು ೨೦೧೬ರಲ್ಲಿ ಕೈಗೊಂಡಿದ್ದ ಮೂರು ರಾಷ್ಟ್ರಗಳ ಪ್ರವಾಸದ ನೆನಪಿನ ದ್ಯೋತಕವಾಗಿದ್ದರೆ, ಘಾನಾದ ಸಾಮಾನ್ಯ  ಜನರ ಮಟ್ಟಿಗೆ ಗಾಂಧಿಯವರ ರಾಜಕೀಯ ವ್ಯಕ್ತಿತ್ವ ಯಾವುದೇ ಸಾಮ್ರಾಜ್ಯಶಾಹಿ ವರ್ಣಬೇಧವಾದಿ (ರೇಸಿಸ್ಟ್)ಗಿಂತ ಭಿನ್ನವಾಗೇನಿಲ್ಲ. ವಾಸ್ತವವಾಗಿ ಗಾಂಧಿ ಪ್ರತಿಮಾ ಭಂಗವು ಸಾಕಷ್ಟು ಕಾಲದಿಂದ ಆಫ್ರಿಕಾದ ವಸಾಹತುಶಾಹಿ ವಿರೋಧಿ ಮತ್ತು ವರ್ಣಬೇಧ ವಿರೋಧಿ ಪ್ರತಿಮಾ ಭಂಜನೆಗಳ ಭಾಗವೇ ಆಗಿಬಿಟ್ಟಿದೆ. ಇದು ೨೦೧೫ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಪ್ರತಿಮೆಗೆ ಬಿಳಿಬಣ್ಣ ಮೆತ್ತುವುದರಿಂದ ಪ್ರಾರಂಭವಾಗಿ ಇತ್ತೀಚಿಗೆ ಭಾರತದ ರಾಷ್ಟ್ರಪತಿ ಮಾಲ್ವಾಯ್‌ಗೆ ಭೇಟಿ ನೀಡಿದಾಗ ಅಲ್ಲಿ ಸ್ಥಾಪಿಸಬೇಕೆಂದಿದ್ದ ಗಾಂಧಿ ಪ್ರತಿಮೆಯನ್ನು ತಡೆಗಟ್ಟುವತನಕ ಮುಂದುವರೆದುಕೊಂಡೇ ಬಂದಿದೆ. ಆದರೆ ಈ ಎಲ್ಲಾ ಪ್ರಕರಣಗಳಲ್ಲಿ ಎದ್ದುಕಾಣವ ಒಂದು ಸೋಜಿಗದ ಸಂಗತಿಯೆಂದರೆ ಗಾಂಧಿ ಪ್ರತಿಮೆಗಳ ಸ್ಥಾಪನೆಯ ಸಂದರ್ಭದಲ್ಲಿ ಅದು ತಮ್ಮೆರಡೂ ದೇಶಗಳ ಮೈತ್ರಿ ಸಂಬಂಧದ ಪ್ರತೀಕವೆಂದು ಬಣ್ಣಿಸಿದ್ದ ಆ ದೇಶಗಳ ನಾಯಕರು, ಆ ಪ್ರತಿಮೆಗಳ ಭಂಗವಾದಾಗ ಅಥವಾ ಕಿತ್ತೊಗೆದಾಗ ಮಾತ್ರ ತಮ್ಮ ದೇಶದ ಜನರ ಪ್ರತಿರೋಧಕ್ಕೆ ಅಂಜಿಕೊಂಡು ಅದಕ್ಕೂ ತಮಗೂ ಸಂಬಂಧವಿಲ್ಲವೆಂಬಂತೆ ಹೊಣೆಗಾರಿಕೆಯಿಂದ ಜಾರಿಕೊಂಡಿಬಿಟ್ಟರು. ಒಂದು ವೇಳೆ ರಾಜಕೀಯ ನಾಯಕರ ಮೌನವು ಗಾಂಧಿಯ ಮೇಲಿನ ವರ್ಣಬೇಧದ ಆಪಾದನೆಗೆ ಪುಷ್ಟಿಕೊಡುವುದಾದರೆ ಅಂಥಾ ರಾಜಕೀಯ ನಾಯಕರ ಪ್ರತಿಮಾ ಸ್ಥಾಪನೆ ಮಾಡುವ ವಿದ್ಯಮಾನಗಳು ವಾಸ್ತವವಾಗಿ ಸೂಚಿಸುವುದಾದರೂ ಏನನ್ನು?  

ಗಾಂಧಿಯವರ ಸುತ್ತಾ ಹಬ್ಬಿಕೊಂಡಿರುವ ಪ್ರಭಾವಳಿ ಮತ್ತು ಅದರ ಭಾಗವಾದ ಗಾಂಧಿ ಪ್ರತಿಮೆಗಳ ಸ್ಥಾಪನೆಯನ್ನು  ಭಾರತ ಮತ್ತು ಆಫ್ರಿಕಾ ದೇಶಗಳ ಪ್ರಭುತ್ವಗಳೆರಡೂ ತಮ್ಮ ಮೃದು ರಾಜತಾಂತ್ರಿಕ ನೀತಿಗೆ ಪೂರಕವಾದ ರಾಜತಾಂತ್ರಿಕ ಕ್ರಮವಾಗಿ ಅನುಸರಿಸುತ್ತವೆ. ಆದರೆ ಸಮಯ ಬಂದಾಗ ಇದೇ ಪ್ರತಿಮೆಗಳೇ ಆಫ್ರಿಕಾದ ಪ್ರಭುತ್ವಗಳಿಗೆ ತಮ್ಮ ತಮ್ಮ ರಾಷ್ಟ್ರ ಪ್ರಭುತ್ವದ ಅಸ್ಮಿತೆಯ ರಾಜಕೀಯದಾಟಗಳಿಗೆ ಪೂರಕವಾಗಿಯೂ ಬಳಕೆಯಾಗುತ್ತವೆ. ಉದಾಹರಣೆಗೆ ಗಾಂಧಿ ಪ್ರತಿಮಾ ಭಂಗದ ಮೂಲಕ ವರ್ಣಬೇಧ ನೀತಿಯನ್ನು ಕೇವಲ ಬಣ್ಣವಾದಕ್ಕಿಳಿಸಿಬಿಡಬಹುದು ಮತ್ತು ಆ ಮೂಲಕ ಅದನ್ನು ತಮ್ಮ ಸ್ಥಳೀಯ ಇತಿಹಾಸದಲ್ಲಿ ಹಾಸುಹೊಕ್ಕಾಗಿರುವ ಜನಾಂಗೀಯಬೇಧನೀತಿಯನ್ನು ಮರೆಮಾಚಲು ಉಪಯೋಗಿಸಬಹುದು. ಉದಾಹರಣೆಗೆ ಘಾನಾದ ಆಕನ್ ಜನಾಂಗೀಯ ರಾಜಸತ್ತೆಯು ಇತರ ಜನಾಂಗೀಯ ಗುಂಪುಗಳನ್ನು ಗುಲಾಮರನ್ನಾಗಿರಿಸಿಕೊಂಡ ಇತಿಹಾಸವಿದೆ. ಅದು ಇಂದಿಗೂ ಘಾನಾದ ಚುನಾವಣಾ ರಾಜಕಾರಣವನ್ನು ಆಕಾನ್ ಮತ್ತು ಆಕಾನೇತರ ಬುಡಕಟ್ಟುಗಳ ಆಧಾರದಲ್ಲಿ ವಿಭಜಿಸಿದೆ ಮತ್ತು ರಾಜಕೀಯ ಅಧಿಕಾರ ಮತ್ತು ಅವಕಾಶಗಳೂ ಸಹ  ಅದೇ ಆಧಾರದಲ್ಲಿ ಕೇಂದ್ರೀಕರಣಗೊಂಡಿವೆಯಂಬ ಆರೋಪಕ್ಕೂ ಗುರಿಯಾಗಿವೆ. ಅದೇನೇ ಇದ್ದರೂ ಆರ್ಥಿಕ ಮಾನದಂಡದಲ್ಲಿ ಸಾಪೇಕ್ಷವಾಗಿ ಸಂಪನ್ನವಾಗಿರುವ ದೇಶದ ದಕ್ಷಿಣಭಾಗಕ್ಕೆ ಜನಾಂಗೀಯ ಒಳನಾಡಿನಿಂದ ಹೆಚ್ಚುತ್ತಿರುವ ವಲಸೆಗಳು ಸಾಂಪ್ರದಾಯಿಕ ಜನಾಂಗೀಯ ಮನೋಭಾವಗಳ ದುರ್ಲಾಭವನ್ನು ಪಡೆದುಕೊಳ್ಳುವ  ರಾಜಕೀಯ ವ್ಯೂಹತಂತ್ರವನ್ನು ಸುಲಭವಾಗಿಸಿಲ್ಲ. ಹೀಗಾಗಿ ಘಾನದ ೨೫-೩೦ ವಯೋಮಾನದ ಯುವಜನತೆಗೆ ಈ ಸ್ಥಳೀಯ ಪರಂಪರೆಗಳ ಬಗ್ಗೆ ಅರಿವಿದೆಯೇ ಅಥವಾ ಅದರಿಂದ ಪ್ರಭಾವಕ್ಕೊಳಗಾಗಿದ್ದಾರೆಯೇ ಎಂಬ ಪ್ರಶ್ನೆಯೂ ಇದೆ. ಈ ಅಂಶಗಳು ಘಾನಾದ ರಾಜಕೀಯದಲ್ಲಿ ಜನಾಂಗೀಯ/ಸಾಂಸ್ಕೃತಿಕ ಅಂಶಗಳ ಪ್ರಭಾವವನ್ನು ಕಡಿಮೆ ಮಾಡಿದ್ದರೂ ಸಂಪೂರ್ಣವಾಗಿ ನಿರ್ಮೂಲನೆಯನ್ನಂತೂ ಮಾಡಿಲ್ಲ.

ಇದರ ಜೊತೆಗೆ ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ನ್ಯಾಷನಲ್ ಡೆಮಾಕ್ರಟಿಕ್ ಕಾಂಗ್ರೆಸ್ (ಎನ್‌ಡಿಸಿ) ಮತ್ತು ನ್ಯೂ ಪೇಟ್ರಿಯಾಟಿಕ್ ಪಾರ್ಟಿ (ಎನ್‌ಪಿಪಿ) ಗಳ ನಡುವೆ ರಾಜಕೀಯ ನೀತಿಗಳಿಗೆ ಸಂಬಂಧಪಟ್ಟಂತೆ ಯಾವ ದೊಡ್ಡ ವ್ಯತ್ಯಾಸಗಳೂ ಇಲ್ಲ. ತಮ್ಮ ತಮ್ಮ ಪಕ್ಷಗಳ ರಾಜಕೀಯ ಪರಂಪರೆ ಮತ್ತು ಸಿದ್ಧಾಂತಗಳು ಭಿನ್ನಭಿನ್ನವೆಂದು ಎರಡೂ ಪಕ್ಷಗಳೂ ಹೇಳಿಕೊಳ್ಳುತ್ತಿದ್ದರೂ ಎರಡೂ ಪಕ್ಷಗಳೂ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಶಿಫಾರಸ್ಸು ಮಾಡಿದ ನವಉದಾರವಾದಿ ನೀತಿಗಳನ್ನೇ ಅನುಸರಿಸುತ್ತಾ ಬಂದಿವೆ. ಆ ಮೂಲಕ ಎರಡೂ ಪಕ್ಷಗಳೂ ಜಿಡಿಪಿ ಮತ್ತು ಬೆಳವಣಿಗೆ ಆಧಾರಿತ ಅಭಿವೃಧಿ ಕಥನಗಳನ್ನು ಹೆಚ್ಚೆಚ್ಚು ಮಾನ್ಯಗೊಳಿಸಿವೆ. ಹಾಗೂ ಈ ಅಭಿವೃದ್ಧಿಗೆ ಖಾಸಗಿ ಮತ್ತು ವಿದೇಶಿ ಬಂಡವಾಳಗಳು ಅತ್ಯಗತ್ಯವೆಂಬುದರ ಬಗ್ಗೆಯೂ ಬದ್ಧತೆಯನ್ನೂ ಪ್ರದರ್ಶಿಸಿವೆ. ಹೀಗಾಗಿ ಘಾನಾದ ರಾಜಕಾರಣವು ನೀತಿಯಾಧಾರಿತವಾಗುವುದಕಿಂತ ವ್ಯಕ್ತಿಯಾಧಾರಿತವಾಗಿಬಿಟ್ಟಿದೆ. ಮತ್ತು ಅವು ವ್ಯಕ್ತಿಗಳಿಗೆ ಮತ್ತು ಗುಂಪುಗಳಿಗೆ ಕೆಲವು ತುರ್ತು ಭೌತಿಕ ಬೆಂಬಲವನ್ನು ಘೋಷಿಸುವುದಕ್ಕೆ ಮಾತ್ರ ಸೀಮಿತವಾಗಿಬಿಟ್ಟಿವೆ. ಈ ವಿಷಯದಲ್ಲಿ ಎರಡೂ ಪಕ್ಷಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಇಂಥಾ ಸನ್ನಿವೇಶದಲ್ಲಿ ಚುನಾವಣೆಯ ಸಂದರ್ಭದಲ್ಲಿ ಯುವ ಮತದಾರರ ಮುಂದಿನ ಆಯ್ಕೆ ತುಂಬಾ ಸೀಮಿತವಾಗಿ ಬಿಡುತ್ತದೆ. ನೀತಿಗಳಿಗಿಂತ ಹೆಚ್ಚಾಗಿ ಯಾವ ಪಕ್ಷದ ಸರ್ಕಾರ ತಮ್ಮ ಆರ್ಥಿಕ, ಸಾಮಾಜಿಕ-ಸಾಂಸ್ಕೃತಿಕ ಕಾಳಜಿಗಳನ್ನು ಪ್ರತಿನಿದಿಸುತ್ತವೆ ಎಂಬ ಭಾವನೆಗಳನ್ನು ಆಧರಿಸಿ ಮತದಾನವು ನಡೆಯುತ್ತವೆ. ಇದು ಹಲವಾರು ಬಾರಿ ಘಾನದ ರಾಜಕಾರಣದಲ್ಲಿ ಪ್ರಸಿದ್ಧವಾಗಿಬಿಟ್ಟಿರುವ ಸ್ಕರ್ಟ್ ಮತ್ತು ಬ್ಲೌಸ್ ಮತದಾನಕ್ಕೆ ದಾರಿ ಮಾಡಿಕೊಟ್ಟಿದೆ. ಅಂದರೆ ಘಾನಾದ ಮತದಾರರು ಏಕಕಾಲದಲ್ಲಿ ಅಧ್ಯಕ್ಷ ಹುದ್ದೆಗೆ ಒಂದು ಪಕ್ಷದ ಅಭ್ಯರ್ಥಿಯನ್ನೂ ಮತ್ತು ಸಂಸತ್ ಸದಸ್ಯನ ಸ್ಥಾನಕ್ಕೆ ಮತ್ತೊಂದು ಪಕ್ಷದ ಉಮೇದುವಾರರನ್ನೂ ಆಯ್ಕೆ ಮಾಡುತ್ತಾರೆ. 

ಈ ಬಗೆಯ ಅನಿಶ್ಚತತೆಯು ಚುನಾವಣಾ ಪರಿಣಾಮಗಳಲ್ಲಿ ಆಡಳಿತರೂಢ ಸರ್ಕಾರಗಳ ಮೇಲಿನ ರಾಜಕೀಯ ವಿಮರ್ಶೆಯನ್ನು ನಗಣ್ಯಗೊಳಿಸುತ್ತದೆ. ಅದೇ ಸಮಯದಲ್ಲಿ ಮತದಾರರ ಹಕ್ಕುದಾರಿಕೆಗಿಂತ ದಾನಿ-ಋಣಿ ರೀತಿಯ ಸಂಬಂಧವು ಬೇರೂರಲು ಹೆದ್ದಾರಿಯನ್ನು ತೆರೆಯುತ್ತದೆ. ಇನ್ನು ನಗರ ಪ್ರದೇಶಗಳ ಪ್ರತಿಷ್ಟಿತರ ಬೆಂಬಲವು ಪ್ರಭುತ್ವವು ಎಷ್ಟರಮಟ್ಟಿಗೆ  ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸಿ, ಬೆಳವಣಿಗೆಯನ್ನು ಖಾತರಿಗೊಳಿಸುತ್ತದೋ ಎಂಬುದನ್ನು ಆಧರಿಸಿದೆ. ಅದರಲ್ಲೂ ಜಿಡಿಪಿಯು ಕುಸಿಯುತ್ತಾ, ಹಣದುಬ್ಬರದ ಹೊರೆಯು ಹಿಗ್ಗುತ್ತಿರುವಾಗ, ವಿದ್ಯುತ್ ಕೊರತೆಯು ತೀವ್ರವಾಗಿ ಆವರಿಸಿಕೊಳ್ಳುತ್ತಿರುವಾಗ ಮತ್ತು ತೈಲ ಕ್ಷೇತ್ರದ ಆದಾಯವು ಏರುವ ಬಗ್ಗೆ ನಿರೀಕ್ಷೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಭುತ್ವದ ನಿರ್ವಹಣೆಯ ಬಗೆಗಿನ ಗ್ರಹಿಕೆಗಳು ಅವರ ಬೆಂಬಲವನ್ನು ಪ್ರಭಾವಿಸುತ್ತವೆ. ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿಯು ಐತಿಹಾಸಿಕವಾಗಿ ನಿರ್ದಿಷ್ಟ ಪ್ರದೇಶದ ಪಕ್ಷಪಾತಿಯಾಗಿರುವುದರಿಂದ ಬದಲಾವಣೆಯ ರಾಜಕೀಯವು ಟೋಳ್ಳಾಗಿಬಿಡುತ್ತದೆ. ಅತ್ಯಂತ ಹಿಂದುಳಿದಿರುವ ಉತ್ತರಪ್ರಾಂತ್ಯಗಳಿಂದ ಸರ್ಕಾರೇತರ ಸಂಸ್ಥೆಗಳಿಂದ ನಿರ್ದೇಶಿತವಾದ ಮಧ್ಯಪ್ರವೇಶಗಳು ಹೆಚ್ಚಾಗಬೇಕೆಂಬ ಆಗ್ರಹಗಳು ಕೇಳಿಬರುತ್ತಿದ್ದು ಆಡಳಿತರೂಢ  ಸರ್ಕಾರಗಳಿಗೆ  ಹೊಸ ರೀತಿಯ  ಮಾಡು ಅಥವಾ ಮಡಿ ಎಂಬಂಥ ಪರೀಕ್ಷೆಯನ್ನೊಡ್ಡಿವೆ.  ಹಾಗೂ ಎರಡೂ ಪಕ್ಷಗಳು ಪ್ರಧಾನವಾಗಿ ಕೂಲಿ ಕಾರ್ಮಿಕರಿಂದ ಕೂಡಿರುವ ತಳಮಟ್ಟದ ಸದಸ್ಯರನ್ನೂ ಮತ್ತು ಕಾಲಾಳುಗಳನ್ನೇ ನೆಚ್ಚಿಕೊಂಡಿವೆ. ತಳಮಟ್ಟದಲ್ಲಿ ಎಲ್ಲ ಬಗೆಯ ಸಂಘಟನಾತ್ಮಕ ಕೆಲಸಗಳನ್ನು ಮಾಡುವವರು, ಪ್ರಚಾರ ಮಾಡುವವರೂ, ತಮ್ಮ ನಾಯಕರ ಪರವಾಗಿ ಘೋಷಣೆಗಳನ್ನು ಹಾಕುವವರೂ ಇವರೇ ಆಗಿದ್ದಾರೆ. ತಾವು ಪಕ್ಷಗಳಿಗಾಗಿ ಮಾಡುವ ಈ ಕೆಲಸಗಳಿಗೆ ಪ್ರತಿಯಾಗಿ ಈ ಕಾಲಾಳುಗಳು ಉದ್ಯೋಗವನ್ನು ನಿರೀಕ್ಷಿಸುತ್ತಾರೆ.

ಆದರೆ ಸೀಮಿತ ಭೌತಿಕ ಸಂಪನ್ಮೂಲಗಳಿರುವ ಒಂದು ರಾಜಕೀಯ ವ್ಯವಸ್ಥೆಯಲ್ಲಿ ದಾನಿ-ಋಣಿ ಬಗೆಯ ರಾಜಕೀಯ ವ್ಯವಸ್ಥೆಯು ಅತ್ಯಂತ ಸ್ಪೋಟಕಶೀಲತೆಯನ್ನು ಪಡೆದಿರುತ್ತದೆ. ಸರ್ಕಾರವು ತನ್ನ ವೆಚ್ಚದ ಅರ್ಧಕ್ಕಿಂತ ಹೆಚ್ಚಿನ ಭಾಗಕ್ಕೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸ್ವರೂಪಗಳ ಬಾಹ್ಯ ನೆರವನ್ನೇ ಆಧರಿಸಿರುವಾಗ ಮತ್ತು ಸರ್ಕಾರವು ತನ್ನದೇ ಆದ ಮೂಲಗಳಿಂದ ಮಾಡುವ ಶೇ.೮೦ರಷ್ಟು ವೆಚ್ಚವು ಸರ್ಕಾರೀ ಸಿಬ್ಬಂದಿಗಳ ವೇತನಕ್ಕೇ ವೆಚ್ಚವಾಗುತ್ತಿರುವಾಗ ಹೇಗೆ ತಾನೇ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯ? ಅಂಥ ನಿರ್ಬಂಧಗಳಿಂದ ಘಾನಾ ದೇಶವೊಂದೇ ಬಳಲುತ್ತಿದೆಯೆಂದೇನಲ್ಲ. ಆಫ್ರಿಕಾದ ಇತರ ದೇಶಗಳಲ್ಲೂ  ಆಳವಾಗಿ ನವ ಉದಾರವಾದ ಮತ್ತು ಜಾಗತೀಕರಣಗಳು ಬೇರುಬಿಡುತ್ತಿವೆ. ಜೊತೆಗೆ ರಾಷ್ಟ್ರೀಯ ಸ್ವನಿರ್ಣಯಾಧಿಕಾರದ ಹೆಸರಿನಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಕೈಬಿಡುತ್ತಾ ಪ್ರಜಾತಂತ್ರದ ಜೊತೆಗೆ ರಾಜಿ ಮಾಡಿಕೊಳ್ಳುತ್ತಿವೆ. ಆದರೂ ಘಾನಾ ದೇಶಕ್ಕೆ  ಆಫ್ರಿಕಾದಲ್ಲೇ ಗಟ್ಟಿಯಾದ ಪ್ರಜಾಪ್ರಭುತ್ವವಿರುವ ದೇಶವೆಂಬ ಹೆಸರಿದೆ. ಆದ್ದರಿಂದಲೇ, ದೇಶದಲ್ಲಿರುವ ಮೇಲುಕೀಳಿನ ’ಬಣ್ಣವಾದ’ದ  ಭಾವನೆಗಳನ್ನು ಅನಿವಾಸಿ ಏಷಿಯನ್ನರ ಅಥವಾ ಭಾರತೀಯರ ವಿರುದ್ಧ ತಿರುಗಿಸುತ್ತಾ ತನ್ನ  ಪ್ರಭುತ್ವದ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಯಸುವ ಅದರ ತಂತ್ರಗಳು ಅಲ್ಲಿನ ಪ್ರಜಾತಂತ್ರದ ಸ್ಥಿರತೆಯ ಬಗ್ಗೆ ವಿಶ್ವಾಸವನ್ನೇನೂ ಹುಟ್ಟಿಸುವುದಿಲ್ಲ. ಆರ್ಥಿಕ ಏಕೀಕರಣವನ್ನು ಸಾಧಿಸುವ ಯಂತ್ರಾಂಗವಿಲ್ಲದ ಪ್ರಭುತ್ವವೊಂದು ತನ್ನ ಸಾಂಸ್ಥಿಕ ದೌರ್ಬಲ್ಯ ಅಥವಾ ಅಸಾಮರ್ಥ್ಯಗಳ ಕಾರಣದಿಂದ ಹೇಗೆ ಪ್ರಜಾತಂತ್ರದೊಂದಿಗೆ ರಾಜಿಮಾಡಿಕೊಲ್ಳಬಲ್ಲದು ಎಂಬುದನ್ನು ಇದು ಮತ್ತೊಮ್ಮೆ ಗಮನಕ್ಕೆ ತಂದಿದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top