ISSN (Print) - 0012-9976 | ISSN (Online) - 2349-8846

ರಾಫೇಲ್ ತೀರ್ಪಿನ ವಿಚಾರಣೆಯಾಗಬೇಕಿದೆ!

ಅಧಿಕಾರದಲ್ಲಿರುವ ಸರ್ಕಾರವು ಎಷ್ಟರಮಟ್ಟಿಗೆ ಅನುಮತಿ ನೀಡುತ್ತದೆಯೋ ಅಷ್ಟರಮಟ್ಟಿಗೆ ಮಾತ್ರ ಸುಪ್ರೀಂ ಕೋರ್ಟು ತನ್ನ ನ್ಯಾಯಾಂಗ ಕ್ರಿಯಾಶೀಲತೆಯನ್ನು ತೋರಲು ಸಾಧ್ಯ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ರಾಫೇಲ್ ಒಪ್ಪಂದದ ಕುರಿತು ತನಿಖೆ ನಡೆಸಲು ಒಂದು ವಿಶೇಷ ತನಿಖಾ ತಂಡವನ್ನು ರಚಿಸಲು ಆದೇಶಿಸಬೇಕೆಂದು ದಾಖಲಾಗಿದ್ದ ಅಹವಾಲಿನ ಬಗ್ಗೆ ಸುಪ್ರೀಂ ಕೋರ್ಟು ನೀಡಿರುವ ತೀರ್ಪಿನಲ್ಲಿ ಒಂದು ಬಗೆಯ ಅವಸರ ಮತ್ತು ಅಪೂರ್ಣತೆ ಇಣುಕುಹಾಕುತ್ತಿದೆ. ಈ ಆದೇಶದಲ್ಲಿರುವ ಹಲವಾರು ತಪ್ಪು ಮಾಹಿತಿಗಳನ್ನು ಈಗಾಗಲೇ ಹಲವಾರು ವಿಶ್ಲೇಷಕರು ಬಯಲಿಗೆಳೆದಿದ್ದಾರೆ. ಈ ಒಪ್ಪಂದದ ಬಗ್ಗೆ ಭಾರತದ ಮಹಾಲೇಖಪಾಲರು (ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ- ಸಿಎಜಿ) ಈಗಾಗಲೇ ತಮ್ಮ ವರದಿಯನ್ನು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಬ್ಲಿಕ್ ಅಕೌಂಟ್ಸ್ ಕಮಿಟಿ-ಪಿಎಸಿ)ಗೆ ಸಲ್ಲಿಸಿದ್ದಾರೆಂಬುದು ಅದರಲ್ಲಿ ಅತ್ಯಂತ ಮುಖ್ಯವಾದದ್ದು. ಸಾರ್ವಜನಿಕ ವಲಯದ ಗಮನವನ್ನು ಸೆಳೆದಿರುವ ಈ ಕಣ್ಣಿಗೆ ರಾಚುವಂಥ ತಪ್ಪುಗಳ ಜೊತೆಜೊತೆಗೆ ಈ ತೀರ್ಪು ವಸ್ತುಸ್ಥಿತಿಯ ಬಗ್ಗೆ ಇನ್ನೂ ಹಲವಾರು ಪ್ರಶ್ನಾರ್ಹ ಗ್ರಹಿಕೆಗಳನ್ನೂ ಮತ್ತು ಕಾನೂನಾತ್ಮಕ ವಿಶ್ಲೇಷಣೆಗಳನ್ನೂ ಒಳಗೊಂಡಿದೆ.

ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಹರಿಬರಿಯಲ್ಲಿ ಕೈಗೆತ್ತಿಕೊಂಡದ್ದೂ ಸಹ ಈ ತಪ್ಪುಗಳನ್ನು ಇನ್ನಷ್ಟು ತೀವ್ರಸ್ವರೂಪದ್ದಾಗಿಸಿದೆ. ಈ ವಿಷಯದಲ್ಲಿ ಪ್ರಾರಂಭದಲ್ಲಿ ದಾಖಲಾದ ಅಹವಾಲು ದುರ್ಬಲವಾದ ತಳಹದಿ ಮತ್ತು ಹೆಚ್ಚು ಸಾರವಿಲ್ಲದ ಅಂಶಗಳಿಂದ ಕೂಡಿತ್ತೆಂಬುದನ್ನು ನ್ಯಾಯಾಲಯವು ಗುರುತಿಸಿದರೂ, ನಂತರದಲ್ಲಿ ಹೆಚ್ಚು ಮಾಹಿತಿಪೂರ್ಣವಾದ ಮತ್ತು ವಿವರವಾದ ಅಹವಾಲಿನ ಮಧ್ಯಪ್ರವೇಶವಾಗುವವರೆಗೂ ಪ್ರಕರಣವನ್ನು ಜೀವಂತವಾಗಿರಿಸಿಕೊಂಡಿತ್ತು. ಅಷ್ಟೆಲ್ಲಾ ಆದರೂ, ವಿಚಾರಣೆಯ ಯಾವ ಹಂತದಲ್ಲೂ ಈ ಒಪ್ಪಂದದ ಆಳವಾದ ತನಿಖೆಯಾಗುವ ಅಗತ್ಯವೆಂಬ ಅಭಿಪ್ರಾಯವು ನ್ಯಾಯಾಲಯಕ್ಕೆ ಸಂಪೂರ್ಣವಾಗಿ ಸಮ್ಮತವಾಗಲೇ ಇಲ್ಲ.

ವಿಚಾರಣೆಯ ಅವಧಿಯಲ್ಲಿ ನಡೆದ ಸಂಗತಿಗಳೂ ಸಹ ನ್ಯಾಯಾಲಯಕ್ಕೆ ಶೋಭೆ ತರುವಂತಹದ್ದಾಗಿರಲಿಲ್ಲ. ಮೊದಲನೆಯದಾಗಿ, ನ್ಯಾಯಾಲಯವು ಈ ಪ್ರಕರಣದಲ್ಲಿನ  ಬೆಲೆ ನಿಗದಿ ವಿಷಯದ ಬಗ್ಗೆ ವಿಚಾರಣೆ ನಡೆಸುವುದಿಲ್ಲವೆಂದು ಹೇಳಿತು. ನಂತರ ಮನಸ್ಸು ಬದಲಿಸಿ ಬೆಲೆ ನಿಗದಿಗೆ ಸಂಬಂಧಪಟ್ಟ  ಎಲ್ಲಾ ವಿಷಯಗಳನ್ನೂ ಸರ್ಕಾರವು ಮುಚ್ಚಿದ ಲಕೋಟೆಯಲ್ಲಿಟ್ಟು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಆದೇಶಿಸಿತು. ಎರಡನೆಯದಾಗಿ, ಕೇವಲ ಬೆಲೆ ನಿಗದಿಗೆ ಸಂಬಂಧಪಟ್ಟ ವಿಷಯಗಳನ್ನು ಮಾತ್ರ ಸಲ್ಲಿಸಬೇಕೆಂದು ಆದೇಶಿಸಿದ್ದರೂ ಕೇಂದ್ರ ಸರ್ಕಾರವು ಈ ಒಪ್ಪಂದದ ಬಗೆಗಿನ ತನ್ನೆಲ್ಲಾ ವಾದಗಳನ್ನು ಸಹ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಅವಕಾಶ ಕೊಟ್ಟಂತಾಗಿದೆ. ಆ ಮೂಲಕ ಸರ್ಕಾರದ ವಾದಗಳನ್ನು ತನ್ನ ಪ್ರತಿವಾದಗಳ ಮೂಲಕ ಬಯಲು ಮಾಡುವ ಅವಕಾಶವನ್ನು ಅಹವಾಲುದಾರರಿಗೆ ನಿರಾಕರಿಸಲಾಗಿದೆ. ಮಹಾಲೇಖಪಾಲರು ತಮ್ಮ ವರದಿಯನ್ನು ಪಿಎಸಿಗೆ ಸಲ್ಲಿಸಿದ್ದಾರೆಂಬ ತಪ್ಪು ಮಾಹಿತಿಯ ಮೂಲವೂ ಇದೇ ಆಗಿದೆಯೆಂಬುದು ಸ್ಪಷ್ಟ. ಈ ವಿಷಯದಲ್ಲಿ ಸರ್ಕಾರವೇ ನ್ಯಾಯಾಲಯಕ್ಕೆ ತಪ್ಪುದಾರಿ ಹಿಡಿಸಿತೇ ಅಥವಾ ನ್ಯಾಯಾಲಯವೇ ಆ ವರದಿಯನ್ನು ತಪಾಗಿ ಗ್ರಹಿಸಿತೇ ಎಂಬ ವಿಷಯ ಇನ್ನೂ ಅಸ್ಪಷ್ಟವಾಗಿದೆ. ಇದಕ್ಕೆ ಸಿಗುವ ಯಾವುದೇ ಉತ್ತರವೂ, ಸರ್ಕಾರವೇ ನ್ಯಾಯಾಲಯವನ್ನು ದಾರಿ ತಪ್ಪಿಸಿತು ಎಂಬ ಉತ್ತರವೂ ಸಹ,  ನ್ಯಾಯಾಲಯದ ಬಗ್ಗೆ ಗೌರವವನ್ನೇನೂ ಮೂಡಿಸುವುದಿಲ್ಲ. ನ್ಯಾಯಾಲಯವು ಸರ್ಕಾರದ ಅಂಥಾ ಪ್ರತಿಪಾದನೆಗಳ ಹುರುಳೇನೆಂಬುದನ್ನು ಬಯಲು ಮಾಡುವ ಅವಕಾಶವನ್ನು ಪ್ರತಿವಾದಿಗಳಿ ಕಲ್ಪಿಸಬೇಕಾದದ್ದು ನ್ಯಾಯಾಲಯದ ಕರ್ತವ್ಯ. ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಮಾತ್ರಕ್ಕೆ ನ್ಯಾಯಾಲಯವು ತನ್ನ ತೀರ್ಪನ್ನು ಸರ್ಕಾರದ ಪ್ರತಿಪಾದನೆಗಳನ್ನು ಆಧರಿಸಿ ನೀಡಬಾರದು.

ಮೂರನೆಯದಾಗಿ, ರಕ್ಷಣಾ ವಲಂiದ ಖರೀದಿಗಳ ಅಗತ್ಯವಿದೆಯೇ ಎಂಬ ಬಗ್ಗೆ ತೀರ್ಪು ನೀಡುವುದು ತನ್ನ ತಾಂತ್ರಿಕ ಸಾಮರ್ಥ್ಯಕ್ಕೆ ಮೀರಿದ್ದು ಎಂದು ಹೇಳುತ್ತಲೇ ಮತ್ತೊಂದೆಡೆ ಭಾರತದ ವಾಯುಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲು ಡಸಾಲ್ ರಾಫೇಲ್ ಯುದ್ಧ ವಿಮಾನಗಳ ಅಗತ್ಯವಿದೆಯೆಂದು ನ್ಯಾಯಾಲಯದ ತೀರ್ಪು ದಾಖಲಿಸುತ್ತದೆ. ವಿಚಾರಣೆಯ ವೇಳೆಯಲ್ಲಿ ನ್ಯಾಯಾಲಯವು ಭಾರತದ ವಾಯುಪಡೆಗಳ ಅಧಿಕಾರಿಗಳೊಂದಿಗೆ ನಡೆಸಿದ ಅನೌಪಚಾರಿಕ ಮತ್ತು ಗೊತ್ತುಗುರಿಯಿಲ್ಲದ ಅಭಿಪ್ರಾಯ ವಿನಿಮಯವೇ ಇದಕ್ಕೆ ಕಾರಣ. ಈ ಹೇಳಿಕೆಯನ್ನು ವಾಯುಪಡೆಯ ಅಧಿಕಾರಿಗಳು ನ್ಯಾಯಾಲಯದ ರಿವಾಜಿನಂತೆ ಪ್ರಮಾಣಿಸಿಯೂ ಹೇಳಲಿಲ್ಲ ಅಥವಾ ಯಾವುದೇ ಲಿಖಿತ ರೂಪದಲ್ಲೂ ಅದನ್ನು ದಾಖಲಿಸಲಿಲ್ಲ. ಹೀಗಾಗಿ ಯಾವುದನ್ನು ಕೆಳಹಂತದ ನ್ಯಾಯಾಲಯವೇ ನ್ಯಾಯಸಮ್ಮತವಲ್ಲವೆಂದು ತಿರಸ್ಕರಿಸಬಹುದೋ, ಅಂಥ ಹೇಳಿಕೆಗಳ ಮೇಲೆ ಸುಪ್ರೀಂಕೋರ್ಟು ಸಂಪೂರ್ಣವಿಶ್ವಾಸಡುತ್ತದೆ ಮತ್ತು ಈ ಒಪ್ಪಂದದ ಬಗ್ಗೆ ಯಾವುದೇ ತನಿಖೆಯ ಅಗತ್ಯವಿಲ್ಲವೆಂಬ ತನ್ನ ತೀರ್ಪಿಗೆ ಅದನ್ನೇ ಆಧಾರಾವಾಗಿರಿಸಿಕೊಳ್ಳುತ್ತದೆ. 

ಅಂತಿಮವಾಗಿ ನೋಡುವುದಾದರೆ, ಸುಪ್ರೀಂ ಕೋರ್ಟಿನ ತೀರ್ಪು ರಾಫೇಲ್ ಒಪ್ಪಂದದ ಬಗೆಗೆ ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿದ್ದ ಯಾವ ವಿವಾದಗಳನ್ನು ಬಗೆಹರಿಸಲಿಲ್ಲ. ಬದಲಿಗೆ ಒಪ್ಪಂದದ ಬಗ್ಗೆ ಇನ್ನಷ್ಟು ಪ್ರಶ್ನೆಗಳ ಹುಟ್ಟಿಗೆ ಕಾರಣವಾಯಿತಲ್ಲದೆ ಅಂಥಾ ವಿವಾದಗಳನ್ನು ಬಗೆಹರಿಸಬಲ್ಲ ತನ್ನ ಸಾಂಸ್ಥಿಕ ಸಾಮರ್ಥ್ಯಗಳ ಬಗ್ಗೆಯೂ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿತು. ಹಿಂದಿನ ಯುಪಿಎ ಸರ್ಕಾರದ ಅವಧಿಂi ಕೊನೆಯ ವರ್ಷಗಳಲ್ಲಿ ಹೊರಬಂದ ಹಗರಣಗಳ ತನಿಖೆಯ ಬಗ್ಗೆ ತೋರಿದ ಉತ್ಸಾಹಕ್ಕೆ ಹೋಲಿಸಿದರೆ ಅಷ್ಟೇ ಉತ್ಸಾಹವನ್ನು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿವಾದಾತ್ಮಕ ಸಂಗತಿಗಳಾದ ನೋಟು ನಿಷೇಧದಿಂದ ಹಿಡಿದು ನ್ಯಾಯಮೂರ್ತಿ ಬ್ರಜ್‌ಗೋಪಲ್ ಹರಿಕಿಷನ್ ಲೋಯಾ ಅವರ ಅನುಮಾನಾಸ್ಪದ ಸಾವಿನವರೆಗಿನ ಯಾವುದೇ ವಿವಾದಗಳನ್ನು ತನಿಖೆ ಮಾಡುವುದರಲ್ಲಿ ನ್ಯಾಯಾಲಯವು ತೋರಿಸುತ್ತಿಲ್ಲ ಎಂದು ಜನಸಾಮಾನ್ಯರಿಗೆ ಅನಿಸುತ್ತದೆ. ಹೀಗಾಗಿ ಆಯಾ ಕಾಲದ ಸರ್ಕಾರಗಳು ಎಷ್ಟು ಅನುಮತಿಯನ್ನು ನೀಡುತ್ತವೆಯೋ ಅಷ್ಟರಮಟ್ಟಿಗಿನ ಕ್ರಿಯಾಶಿಲತೆಯನ್ನು ಮಾತ್ರ ನ್ಯಾಯಾಲಯಗಳು ತೋರಲು ಸಾಧ್ಯವೆಂಬ ಕಹಿಯಾದ ತೀರ್ಮಾಕ್ಕೆ  ಬರಬಹುದು.  

ಆದರೆ ಅಂಥ ತೀರ್ಮಾನಗಳೂ ಸಹ ಕೆಲವು ಆಳವಾದ ಸತ್ಯಗಳನ್ನು ಮರೆಮಾಚಿಬಿಡಬಹುದು. ಈ ಹಿಂದೆ ನ್ಯಾಯಾಂಗದ ಹಲವಾರು ಮಧ್ಯಪ್ರವೇಶಗಳಿಗೆ ಕಾರಣವಾಗಿದ್ದ ಮಹಾಲೇಖಪಾಲರ (ಸಿಎಜಿ) ವರದಿಯ ಬಗ್ಗೆ ಈ ಮಧ್ಯೆ ಎಲ್ಲೂ ಏನೂ ಕಾಣಬರುತ್ತಿಲ್ಲ ಅಥವಾ  ಕೇಳಿಬರುತ್ತಿಲ್ಲ. ನ್ಯಾಯಾಲಯಗಳು ತನಿಖೆ ಮಾಡಲು ಆಧರಿಸುತ್ತಿದ್ದ ಸಿಬಿಐ, ಅದರೊಳಗಿನ ಅಂತರಿಕ ಕಿತ್ತಾಟಗಳ ಮಧ್ಯೆ ಸರ್ಕಾರದ ಅನಗತ್ಯ ಮಧ್ಯಪ್ರವೇಶದಿಂದಾಗಿ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಅದರ ಮೇಲೆ ನಿಗಾ ಇಡಬೇಕಿದ್ದ ಕೇಂದ್ರೀಯ ವಿಚಕ್ಷಣಾ ದಳವು (ಸಿವಿಸಿ) ಸಮಸ್ಯೆ ಬಿಗಡಾಯಿಸುವವರೆಗೆ ಮೌನ ಪ್ರೇಕ್ಷಕನಾಗಿಯೇ ಉಳಿದಿತ್ತು. ಹೀಗೆ ಉಳಿದ ಯಾವ ಸಂಸ್ಥೆಗಳು ಕಾನೂನಿಗೆ ತಕ್ಕಂತೆ ಕೆಲಸ ನಿರ್ವಹಿಸದೇ ಇರುವಂಥಾ ಪರಿಸ್ಥಿತಿಯಲ್ಲಿ ರಾಪೇಲ್ ಒಪ್ಪಂದದ ವಿಷಯದಲ್ಲಿ ನ್ಯಾಯಾಲಯವು ಮಾಡುತ್ತಿದ್ದ ಯಾವುದೇ ಮಧ್ಯಪ್ರವೇಶ ಕತ್ತಲಲ್ಲಿ ಕತ್ತಿ ಹಿರಿದಂತಷ್ಟೇ ಆಗಿರುತ್ತಿತ್ತು.

ರಾಫೇಲ್ ವಿವಾದದಲ್ಲಿ ಯಾವುದೇ ದುರುದ್ದೇಶಗಳಿಲ್ಲ ಎಂದು ನ್ಯಾಯಾಲಯವು ಕೊಟ್ಟಿರುವ ಆದೇಶ ಅತ್ಯಂತ ಸೋಜಿಗವನ್ನು ಉಂಟುಮಾಡುವಂತಿದೆ. ಸರ್ಕಾರವು ಕೊಟ್ಟ ಮಾಹಿತಿಯನ್ನು ಆಧರಿಸಿ ತನ್ನ ತೀರ್ಪನ್ನು ಕೊಡುವಲ್ಲಿ ನ್ಯಾಯಾಲಯವು ಅಸಾಧಾರಣ ಅವಸರವನ್ನು ತೋರಿದೆ. ಒಂದು ಸಮಗ್ರ ತೀರ್ಮಾನವನ್ನು ನೀಡಲು ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವೇ ಆಗಿದ್ದರೂ ಸರ್ಕಾರವು ಎಲ್ಲ  ಮಾಹಿತಿಗಳನ್ನೂ  ಕೊಟ್ಟಂತೆ ಕಾಣುತ್ತಿಲ್ಲ. ಹೀಗಾಗಿ ನ್ಯಾಯಾಲಯಗಳು ಅಗತ್ಯವಿರುವ ಹೆಚ್ಚುವರಿ ಮಾಹಿತಿಗಳನ್ನು ಒದಗಿಸಲು ಸರ್ಕಾರಕ್ಕೆ ಆದೇಶಿಸಬೇಕಿತ್ತು. ಆದ್ದರಿಂದ  ಮುಂದಾದರೂ ಈ ಪ್ರಕರಣದಲ್ಲಿ ಇನ್ನೂ ಸಮಗ್ರವಾದ ತೀರ್ಪು ಬರಬೇಕಿದೆ.

ಒಂದು ವೇಳೆ ಈ ಎಲ್ಲಾ ಸಂಸ್ಥೆಗಳು ನ್ಯಾಯಾಲಯಕ್ಕೆ ಸಹಕಾರವನ್ನು ನೀಡಿದ್ದರೂ ನ್ಯಾಯಾಲಯದ ಮಧ್ಯಪ್ರವೇಶವು ನ್ಯಾಯವನ್ನು ಒದಗಿಸಲು ಅಥವಾ ಸಾಂವಿಧಾನಿಕ ಗುರಿಗಳನ್ನು ಈಡೇರಿಲು ಪೂರಕವಾಗಿರುತ್ತಿತ್ತು ಎಂದೇನೂ ಖಾತರಿಯಿಲ್ಲ. ಉದಾಹರಣೆಗೆ ೨-ಜಿ ಸ್ಫೆಕ್ಟ್ರಮ್ ಹಗರಣದ ಬಗ್ಗೆ ಸುಪ್ರೀಂ ಕೋರ್ಟು ತನ್ನ ಮೂರನೇ ಕಣ್ಣನ್ನು ತೆರೆದು ಕ್ರೋಧಾವಿಷ್ಟತೆಯನ್ನು ತೋರಿದ್ದರೂ ವಿಚಾರಣಾ ನ್ಯಾಯಾಲಯವು ಎಲ್ಲಾ ಆಪಾದಿತರನ್ನು ಬಿಡುಗಡೆ ಮಾಡುವ ಮೂಲಕ ಎಲ್ಲವೂ ತಣ್ಣಗಾಯಿತು. ಆದರೂ ಈ ಹಗರಣದ ತನಿಖೆಯಲ್ಲಿ ಭಾಗಸ್ಥರಾಗಿದ್ದ ಯಾವ ಸಂಸ್ಥೆಗಳಲ್ಲೂ ಕಿಂಚಿತ್ತೂ ಅಪರಾಧೀ ಪ್ರಜ್ನೆ ಕಂಡುಬರುತ್ತಿಲ್ಲ.

ರಾಫೇಲ್‌ನಂಥ ವಿಷಯಗಳಲ್ಲಿ ತನ್ನ ಪಾತ್ರದ ಕುರಿತು ನ್ಯಾಯಾಲಯವು ಪ್ರಕ್ರಿಯಾತ್ಮಕವಾಗಿ ಇನ್ನಷ್ಟು ಪರಿಪೂರ್ಣವಾದ ಮತ್ತು ಸಮತೋಲನದಿಂದ ಕೂಡಿದ  ಮೌಲ್ಯಮಾಪನ ಮಾಡಿಕೊಳ್ಳಬೇಕಿದೆ. ತಾನು ಕಾನೂನಾತ್ಮಕ ವಿವಾದಗಳ ಪಂಚಾಯ್ತಿ ಮಾಡುವ ಸಮತೋಲನದಿಂದ ಕೂಡಿದ ಮಧ್ಯಸ್ಥಿಕೆದಾರನೇ? ಅಥವಾ  ಸತ್ಯವನ್ನು ಹೊರತೆಗೆಯುವ ಜವಾಬ್ದಾರಿಯನ್ನು ಹೊಂದಿರುವ ಸಾರ್ವಜನಿಕ ಪರಿಶೋಧಕನೇ? ಅಥವಾ ಅದು ತನ್ನ ಅನುಕೂಲಕ್ಕೆ ತಕ್ಕಂತೆ ಎರಡರಲ್ಲೊಂದು ಪಾತ್ರವನ್ನು ವಹಿಸಿಕೊಳ್ಳಬಹುದೇ? ಇಂಥಾ ಒಂದು ಆತ್ಮಪರಿಶೀಲನೆಯನ್ನು ಅದು ಹೆಚ್ಚು ಕಾಲ ಮುಂದೂಡುವುದು ಸಾಧ್ಯವಿಲ್ಲ.

 

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top