ISSN (Print) - 0012-9976 | ISSN (Online) - 2349-8846

ಬಿಜೆಪಿಯ ಆತ್ಮವಿಶ್ವಾಸದಲ್ಲಿ ಕುಸಿತ

ಚುನಾವಣಾ ಫಲಿತಾಂಶಗಳು ಜನತೆಯನ್ನು ರಾಜಕೀಯದ ಕೇಂದ್ರ ಸ್ಥಾನಕ್ಕೆ ಮತ್ತೆ ತಂದಿರಿಸಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಇತ್ತೀಚೆಗೆ ನಡೆದ ಚುನಾವಣೆಗಳ ಫಲಿತಾಂಶಗಳು ಚತ್ತೀಸ್‌ಘಡ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರಗ ಬಗ್ಗೆ ಜನತೆಯಲ್ಲಿರುವ ತಿರಸ್ಕಾರ ಮನೋಭಾವದ ಸ್ಪಷ್ಟ ಅಭಿವ್ಯಕ್ತಿಯಾಗಿರುವುದು ಮಾತ್ರವಲ್ಲದೆ ಕೇಂದ್ರಸರ್ಕಾರವು ಅನುಸರಿಸುತ್ತಿರುವ ಜನವಿರೋಧಿ ನೀತಿಗಳ ವಿರುದ್ಧ ಹೆಚ್ಚುತ್ತಿರುವ ಜನರ ಅಸಮಾಧಾನದ ಅಭಿವ್ಯಕ್ತಿಯೂ ಆಗಿದೆ. ಈ ನಕಾರಾತ್ಮಕ ಫಲಿತಾಂಶಗಳಿಗೆ ಆಯಾ ರಾಜ್ಯಗಳ ಅಂತರಿಕ ಅಂಶಗಳೇ ಕಾರಣವೆಂದು ಬಿಜೆಪಿಯ ತಂತ್ರನಿಪುಣರು ಮತ್ತು ಮಾತಿನಮಲ್ಲರು  ಎಷ್ಟೇ ವಾದಿಸುತ್ತಿದ್ದರೂ ರಾಷ್ಟ್ರ ರಾಜಕಾರಣದ ಮೇಲೆ ಈ ಫಲಿತಾಂಶ ಬೀರುವ ಪರಿಣಾಮಗಳು ಸ್ವಯಂ ವೇದ್ಯವಾಗಿದೆ. ಏಕೆಂದರೆ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿದ ಅಂಶಗಳಾದ ಕೃಷಿ ಬಿಕ್ಕಟ್ಟು, ನಿರುದ್ಯೋಗ ಮತ್ತು ಜೀವನೋಪಾಯಗಳ ನಷ್ಟಗಳಂಥ ಸಮಸ್ಯೆಗಳ ಬೇರುಗಳು ನೋಟು ನಿಷೇಧ, ಜಿಎಸ್‌ಟಿ ಮತ್ತು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದಂಥ ಕೇಂದ್ರದ ಆರ್ಥಿಕ ನೀತಿಗಳಲ್ಲಿದೆ. ಇದರರ್ಥ ಆಯಾ ರಾಜ್ಯ ಸರ್ಕಾರಗಳ ನಿರಂತರ ದುರಾಡಳಿತವೂ ಈ  ಪರಿಣಾಮಗಳಿಗೆ ಕಾರಣವಾಗಿಲ್ಲವೆಂದಲ್ಲ. ಅವೂ ಕೂಡ ಪ್ರಮುಖ ಕಾರಣವಾಗಿರುವುದರ ಜೊತೆಜೊತೆಗೆ ಕೇಂದ್ರದ ನೀತಿಗಳ ಸಹ ಆ ರಾಜ್ಯಗಳ ಬಿಜೆಪಿ ಸರ್ಕಾರಗಳ ಪರಿಸ್ಥಿತಿಗಳನ್ನು ಮತ್ತಷ್ಟು ಹದಗೆಡಿಸಿತ್ತು. ಜನರಲ್ಲಿ ಹೆಪ್ಪುಗಟ್ಟಿರುವ ಈ ಅಸಮಾಧಾನ ಮತ್ತು ಅದನ್ನು ಬಗೆಹರಿಸಲಾಗದ ತಮ್ಮ ಸರ್ಕಾರದ ಅಸಾಮರ್ಥ್ಯಗಳು ಕೊಡುತ್ತಿರುವ ಸೂಚನೆಗಳನ್ನು ಅರ್ಥಮಾಡಿಕೊಂಡ ಬಿಜೆಪಿ ಮತ್ತು ಸಂಘಪರಿವಾರವು ಚುನಾವಣಾ ಪ್ರಚಾರಗಳಲ್ಲಿ ತಮ್ಮ ಹಳೆಯ ದ್ವೇಷರಾಜಕಾರಣ ಮತ್ತು ಕೋಮು ಧೃವೀಕರಣದ ತಂತ್ರಕ್ಕೆ ಮರಳಿದ್ದರು. ಯೋಗಿ ಆದಿತ್ಯನಾಥರು ಪ್ರಚಾರಕರಾಗಿ ಈ ಚುನಾವಣೆಯಲ್ಲಿ ಮಾಡಿದ  ದ್ವೇಷಕಕ್ಕುವ ಮತ್ತು ಕೋಮುಪ್ರಚೋದಕ ಭಾಷಣಗಳು ಈ ತಂತ್ರೋಪಾಯಗಳ ಭಾಗವೇ ಆಗಿತ್ತು. ಆದರೆ ತಮ್ಮ ಬದುಕಿನ ಬವಣೆಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮತದಾನ ಮಾಡಿದ ಜನತೆಯನ್ನು ಇದು ವಿಚಲಿತಗೊಳಿಸಲಿಲ್ಲ. ವಾಸ್ತವವಾಗಿ ಯೋಗಿ ಆದಿತ್ಯನಾಥರು ಭಾಷಣ ಮಾಡಿದ ಕಡೆಗಳೆಲ್ಲಾ ಬಿಜೆಪಿಯು ಕಳಪೆ ಪ್ರದರ್ಶನ ಮಾಡಿರುವುದು ಕಂಡುಬರುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಗೋರಕ್ಷರ ಪುಂಡಾಟಿಕೆ ಮತ್ತು ಹಿಂಸಾಚಾರಗಳನ್ನು ಮುಕ್ತವಾಗಿ ಹರಿಬಿಟ್ಟಿದ್ದ ರಾಜಸ್ಥಾನದ ಆಳ್ವಾರ್ ಪ್ರದೇಶದಲ್ಲಿ ಬಿಜೆಪಿಯು ಹೀನಾಯವಾಗಿ ಸೋತಿದೆ. ತೆಲಂಗಾಣದಲ್ಲೂ ಯೋಗಿ ಆದಿತ್ಯನಾಥರು  ಯಾವುದೇ ಎಗ್ಗಿಲ್ಲದೆ ಕೋಮು ದ್ವೇಷದ ಪ್ರಚಾರ ಮಾಡಿದರೂ ಬಿಜೆಪಿಯ ಸೀಟುಗಳಿಕೆ ಗಣನೀಯವಾಗಿ ಇಳಿಕೆಯಾಗಿದೆ. ಅಷ್ಟುಮಾತ್ರವಲ್ಲ, ನರೇಂದ್ರಮೋದಿಯವರು ತಮ್ಮ ಪ್ರಚಾರದಲ್ಲಿ ಅತ್ಯಂತ ಅಗೌರವಯುತವಾದ ಪರಿಭಾಷೆಯನ್ನೂ ಬಳಸಿದ್ದನ್ನೂ ಸಹ ಮತದಾರರು ಒಪ್ಪಿಕೊಂಡಿಲ್ಲ. ಇದು ಹೆಚ್ಚುತ್ತಿರುವ ಹತಾಷೆಯ ದ್ಯೋತಕವಾಗಿದೆ.

ಆದರೆ ತಮ್ಮ ಎಂದಿನ ಗೊಂದಲಮೂಡಿಸುವ ತಂತ್ರಗಳನ್ನು ಮುಂದುವರೆಸಿರಿರುವ ಸಂಘಪರಿವಾರ ಮತ್ತು ಬಿಜೆಪಿಗಳು  ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ನಡೆದಿರುವ ನಿಕಟ ಸ್ಪರ್ದೆಗಳನ್ನು ತೋರಿಸುತ್ತಾ  ತಮಗಾಗಿರುವ ನಷ್ಟಗಳನ್ನು ಮುಚ್ಚಿಡುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ, ಓಟುಗಳಿಕೆಯ ಮಾನದಂಡದಿಂದ ನೋಡಿದರೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸ್ಪರ್ಧೆಗಳು ಈ ಹಿಂದಿನಷ್ಟೆ ನಿಕಟವಾಗಿ ಮತ್ತು ತುರಿಸಿನಿಂದ ನಡೆದಿದ್ದು ರಾಜಸ್ಥಾನದಲ್ಲಿ ಬಿಜೆಪಿಯು ಓಟುಗಳಿಕೆಯಲ್ಲಿ ಗಣನೀಯವಾದ ನಷ್ಟವನ್ನು ಅನುಭವಿಸಿದೆಯೆಂಬುದು ಸ್ಪಷ್ಟವಾಗಿದೆ. ಬಿಜೆಪಿಯ ಇಂಥಾ ಎಲ್ಲಾ ಮೇಲ್ಪದರದ ಮತ್ತು ವಿವರಣೆಯಿಲ್ಲದ ವಿವರಗಳ ಸಮರ್ಥನೆಗಳ ಮತ್ತು ಆಡಳಿತ ವಿರೋಧಿ ಮನೋಭಾವವೆಂಬ ಕಾಲ್ಪನಿಕ ಗ್ರಹಿಕೆಗಳ ನಡುವೆಯೂ ಸಂಭವಿಸಿರುವ ವಾಸ್ತವವೇನೆಂದರೆ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕಳೆದ ೧೫ ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ಕೆಳಗುರುಳಿಸಿದೆ ಮತ್ತು ರಾಜಸ್ಥಾನದಲ್ಲಿದ್ದ ದೊಡ್ಡ ಅಂತರವನ್ನು ಮೀರಿಬಂದಿದೆ. ೨೦೧೪ರ ಲೋಕಸಭಾ ಚುನಾವಣೆಯಲ್ಲಿ  ಈ ಮೂರೂ ರಾಜ್ಯಗಳ ಒಟ್ಟು ೬೫ ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿಯು ೬೨ನ್ನು ಗೆದ್ದುಕೊಂಡಿತ್ತು. ಹೀಗಾಗಿ ಕಾಂಗ್ರೆಸ್ ಪಕ್ಷವು  ಈ ರಾಜ್ಯಗಳಲ್ಲಿ ಎಷ್ಟೇ ಕಡಿಮೆ ಬಹುಮತದಿಂದ ಅಧಿಕಾರ ರಚಿಸಿದರೂ ಸಹ ರಾಜಕೀಯ ಶಕ್ತಿಗಳ ಸಮತೋಲನದಲ್ಲಿ ಪ್ರಮುಖ ಬದಲಾವಣೆ ಬಂದಿದ್ದು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಗೆ ದೊಡ್ಡ ಸವಾಲನ್ನೇ ಒಡ್ಡಲಿದೆ. ನಗರ ಪ್ರದೇಶಗಳಲ್ಲೂ ಸಹ ಬಿಜೆಪಿಯು ದೊಡ್ಡ ಹಿನ್ನೆಡೆಯನ್ನನುಭವಿಸಿದೆ; ವಾಸ್ತವವಾಗಿ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಗಳಲ್ಲಿ ಬಿಜೆಪಿಯ ಹಿನ್ನೆಡೆಯು ಎದ್ದುಕಾಣುತ್ತದೆ. ಇದು ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಜಿಎಸ್‌ಟಿ ವ್ಯವಸ್ಥೆಯು ಸಣ್ಣ ವ್ಯವಹಾರೋದ್ಯಮಿಗಳ ಮೇಲೆ ಮಾಡಿರುವ ದುಷ್ಪರಿಣಾಮಗಳ ಗ್ಗೆ ಮಡುಗಟ್ಟಿರುವ ಅಸಮಾಧಾನದ ಸ್ಪಷ್ಟ ಅಭಿವ್ಯಕ್ತಿಯೇ ಆಗಿದೆ. ನಗರ ಪ್ರದೇಶಗಳಲ್ಲಿ ಮೋದಿಯವರ ಮತ್ತು ಬಿಜೆಪಿಯ ಪ್ರಭಾವ ದಟ್ಟವಾಗಿದೆಯೆಂದು ನಂಬಲಾಗಿದ್ದು ಈ ಚುನಾವಣೆಗಳು ಆ ಅಭಿಪ್ರಾಯದ ಬುಡವನ್ನು ಅಲುಗಾಡಿಸಿದೆ.

ಆದರೆ ಜನರಲ್ಲಿ ಮಡುಗಟ್ಟಿರುವ ಈ ಅಸಹನೆ ಮತ್ತು ಆಕ್ರೋಶಗಳನ್ನು ಪರಿಗಣಿಸಿದಾಗ ಕಾಂಗ್ರೆಸ್ ಪಕ್ಷವು ಇನ್ನೂ ಹೆಚ್ಚಿನ ಅಂತರದೊಂದಿಗೆ ಜಯವನ್ನು ಸಾಧಿಸಬೇಕಿತ್ತು. ಹಾಗೆ ಅದು ಮೂರನೇ ಎರಡರಷ್ಟು ಬಹುಮತವನ್ನು ಪಡೆದು ಬಿಜೆಪಿಯನ್ನು ನಿರ್ಣಾಯಕವಾಗಿ ಸೋಲಿಸಿರುವುದು ಚತ್ತೀಸ್‌ಗಡ್‌ನಲ್ಲಿ ಮಾತ್ರ. ಕಾಂಗ್ರೆಸ್ ನಿರೀಕ್ಷಿತವಾದ ಅಂತರದಲ್ಲಿ ಗೆಲುವನ್ನು ಸಾಧಿಸದೇ ಹೋದದ್ದಕ್ಕೆ ಶಿವರಾಜ್ ಸಿಂಗ ಚೌಹಾಣ್ ಅವರ ಜನಪ್ರಿಯತೆ ಮತ್ತು ಕೊನೆಯ ಅವಧಿಯಲ್ಲಿ ಮೋದಿಯವರು ರಾಜಸ್ಥಾನದಲ್ಲಿ ಮಾಡಿದ ಪ್ರಚಾರಗಳು ಕಾರಣವೆಂಬ ವಿವರಣೆಗಳು ಅರ್ಧ ತಿಳವಳಿಕೆಯ ಮಾತುಗಳಷ್ಟೇ ಆಗಿವೆ. ಕಾಂಗ್ರೆಸ್ ಅಷ್ಟು ದೊಡ್ಡ ಮಟ್ಟದ ಗೆಲುವನ್ನು ಸಾಧಿಸದಿರಲು ಅದರ ಸಂಘಟನಾ ದೌರ್ಬಲ್ಯ ಮತ್ತು ಜನತೆಯ ಜೀವನ ಮತ್ತು ಜೀವನೋಪಾಯಗಳ ಸಮಸ್ಯೆಗಳ ಕುರಿತು ನಿರಂತರವಾಗಿ ಗಮನವನ್ನು ಕೇಂದ್ರೀಕರಿಸುವಲ್ಲಿನ ವೈಫಲ್ಯತೆಗಳೇ ಕಾರಣವೆನ್ನಬಹುದು. ಪಕ್ಷದ ಪ್ರಚಾರವನ್ನು ನಿರಂತರವಾಗಿ ಜನರ ಬಿಕ್ಕಟ್ಟಿನ ಬಗ್ಗೆಯೇ ನಿರಂತರವಾಗಿ ಕೇಂದ್ರೀಕರಿಸಿದ್ದರಿಂದ ಚತ್ತೀಸ್‌ಗಡ್‌ನಲ್ಲಿ ಪಡೆದುಕೊಂಡ ಯಶಸ್ಸಿನಿಂದ ಕಾಂಗ್ರೆಸ್ ಪಕ್ಷ ಸಾಕಷ್ಟು ಪಾಠಗಳನ್ನು ಕಲಿಯಬಹುದಾಗಿದೆ. ಒಂದು ದ್ವಿಪಕ್ಷೀಯ ಸ್ಪರ್ಧೆಯ ಸನ್ನಿವೇಶದಲ್ಲಿ, ಕಾಂಗ್ರೆಸ್ಸನ್ನು ಬಿಟ್ಟರೆ ಬೇರೆ ಪರ್ಯಾಯವಿಲ್ಲದಂಥ ಸಂದರ್ಭದಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಎಡಪಂಥೀಯ ಸಂಘಟನೆಗಳ ಮತ್ತು ಜನತೆಯ ಚಳವಳಿಗಳ ನೇತೃತ್ವದಲ್ಲಿ ನಡೆದ ರೈತ ಹೋರಾಟಗಳ ಲಾಭಗಳು ಕಾಂಗ್ರೆಸ್ಸಿಗೇ ದಕ್ಕಿದೆ. 

ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಬಿಜೆಪಿಯು ಉಳಿಸಿಕೊಂಡಿರುವ ಸಾಮಾಜಿಕ ತಳಹದಿ ಮತ್ತು ಮತಪ್ರಮಾಣಗಳು ಅದು ಪುನಃ ಚೇತರಿಸಿಕೊಳ್ಳುವುದಕ್ಕೆ ಸಾಕಷ್ಟು ಅವಕಾಶವನ್ನು ನೀಡುವಂತಿದ್ದು ಕಾಂಗ್ರೆಸ್ ಪಕ್ಷವು ಕೇವಲ ಗತ್ಯಂತರವಿಲ್ಲದ ಅನಿವಾರ್ಯವೆಂತಾಗುವುದಷ್ಟೆ ಅದರ ಬೆಳವಿಗೆ ಸಾಕಾಗುವುದಿಲ್ಲ. ಜನತೆಯ ಜೀವನ ಪರಿಸ್ಥಿತಿಗಳನ್ನು ಸುಧಾರಿಸುವಂಥ ಮತ್ತು ಸಾಮಾಜಿಕ ಭದ್ರತೆಯನ್ನು ಖಾತರಿಗೊಳಿಸುವಂಥ ಪರ್ಯಾಯ ನೀತಿಗಳ ಶಕೆಯನ್ನು ಅದು ಪ್ರಾರಂಭಿಸಬೇಕು. ಗ್ರಾಮೀಣ ಬಿಕ್ಕಟ್ಟಿನ ಬಗ್ಗೆ ಗಮನಹರಿಸುವುದರ ಜೊತೆಜೊತೆಗೆ ಗೋರಕ್ಷಕರ ಮತ್ತು ಸಂಘಪರಿವಾರದ ಗೂಂಡಾಗಳ ಉಪಟಳವನ್ನು ಮಟ್ಟ ಹಾಕಲೂ ಸಹ ಅದು ಸೂಕ್ತ ಮತ್ತು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಚುನಾವಣೆಗೆ ಮುನ್ನ ಸಂಘಪರಿವಾರ ಮತ್ತು ಬಿಜೆಪಿ ಕೋಮು ದ್ವೇಷದ ಪ್ರಚಾರಗಳನ್ನು ಹೆಚ್ಚುಮಾಡುವ ಸಂಭವವೂ ಇರುವುದರಿಂದ ಈ ನಡೆಗಳು ಇನ್ನಷ್ಟು ಮಹತ್ವವನ್ನು ಪಡೆದುಕೊಳ್ಳುತ್ತವೆ. ಈ ಚುನಾವಣೆಗಳಲ್ಲಿ ಪಡೆದುಕೊಂಡಿರುವ ಮನ್ನಡೆಯನ್ನು ಕಾದುಕೊಳ್ಳಬೇಕೆಂದರೆ ಕಾಂಗ್ರೆಸ್ ಪಕ್ಷವೂ ಈ ಮೂರೂ ರಾಜ್ಯಗಳಲ್ಲಿ ಅಂಥಾ ಪರ್ಯಾಯ ಆರ್ಥಿಕ ನೀತಿಗಳ ಚಹರೆಯನ್ನು ಪ್ರಾಯೋಗಿಕವಾಗಿ ಕಾಣಿಸಬೇಕಿದೆ. ಈ ಮೂರೂ ಚುನಾವಣೆಗಳ ಫಲಿತಾಂಶಗಳ ಪ್ರಮುಖ ಸಂದೇಶವು ಜನತೆಯ ಬದುಕನ್ನು ಮತ್ತೆ ರಾಜಕೀಯದ ಕೇಂದ್ರ ಸ್ಥಾನಕ್ಕೆ ತರುವುದೇ ಆಗಿದ್ದು ಅದನ್ನು ಅನುಸರಿಸಿದರೆ ಮಾತ್ರ ವಿರೋಧಪಕ್ಷಗಳ ಪರವಾಗಿ ಬದಲಾಗಿರುವ ರಾಜಕೀಯ ಗತಿಯನ್ನು ಉಳಿಸಿಕೊಳ್ಳಲು ಸಾಧ್ಯ. ಸಾರ್ವಜನಿಕ ಚರ್ಚೆಯು ರಾಜಕೀಯ ನೀತಿಗಳ ಬಗ್ಗೆ ಇರಬೇಕೇ ವಿನಃ ರಾಜಕೀಯ ನೇತಾರರ ಬಗ್ಗೆಯಲ್ಲ. ಬರಲಿರುವ ಲೋಕಸಭಾ ಚುನಾವಣೆಗಳಲ್ಲಿ ನೈಜವಾದ ಬದಲಾವಣೆ ಕಾಣಬೇಕೆಂದರೂ ಸಾರ್ವಜನಿಕ ಚರ್ಚೆಗಳಲ್ಲಿ ಈ ಸಾರಭೂತ ಬದಲಾವಣೆ ಬರಬೇಕಿರುವುದು ಅತ್ಯಗತ್ಯ.

 

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top