ISSN (Print) - 0012-9976 | ISSN (Online) - 2349-8846

ಉಸಿರಿನ ಬೆಲೆ

ವಾಯು ಮಾಲಿನ್ಯವು ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಅದನ್ನು ನಿಯಂತ್ರಿಸಲು ಪರಿಣಾಮಕಾರಿ ಮತ್ತು ದೀರ್ಘಕಾಲೀನ ಪರಿಹಾರಗಳನ್ನು ಹುಡುಕಬೇಕಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಭಾರತೀಯರು ವಾಯು ಮಾಲಿನ್ಯದ ಕಾರಣದಿಂದಾಗಿ ಅತಿ ಹೆಚ್ಚು ಸಾವುಗಳಿಗೆ ಮತ್ತು ಖಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆಂಬ ಸಂಗತಿಯನ್ನು ಲಾನ್ಸೆಟ್ ಪ್ಲಾನೆಟರಿ ಹೆಲ್ತ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿಯೂ ಕೂಡ ಸಾಬೀತುಪಡಿಸಿದೆ. ಆ ಸಂಶೋಧನಾ ವರದಿಯ ಫಲಿತಾಂಶಗಳು ಗಾಬರಿ ಹುಟ್ಟಿಸುವಂತಿವೆ. ಏಕೆಂದರೆ ಜಗತ್ತಿನಲ್ಲೇ ಅತಿ ಹೆಚ್ಚು ವಾಯು ಮಾಲಿನ್ಯಕ್ಕೆ ಗುರಿಯಾಗಿರುವ ಈ ದೇಶದಲ್ಲಿ ವಾಯುಮಾಲಿನ್ಯದ ಪರಿಣಾಮಗಳನ್ನು ನಿವಾರಣೆ ಮಾಡುವ ಕ್ರಮಗಳನ್ನು ಅತ್ಯಂತ ತ್ವರಿತವಾಗಿ ತೆಗೆದುಕೊಳ್ಳಲೇ ಬೇಕಿರುವ ತುರ್ತನ್ನು ಅದು ಬೊಟ್ಟು ಮಾಡಿ ತೋರಿಸಿದೆ. ವಾಯು ಮಾಲಿನ್ಯವು ಆರೋಗ್ಯ ಮತ್ತು ಆಯಸ್ಸಿನ ಮೇಲೆ ಬೀರುತ್ತಿರುವ ಪರಿಣಾಮದ ವ್ಯಾಪ್ತಿ ಮತ್ತು ಪ್ರಮಾಣವನ್ನು ಇಲ್ಲಿಯವರೆಗೂ ಭಾರತದಲ್ಲಿ ಸಂಪೂರ್ಣವಾಗಿ ಗ್ರಹಿಸಿಯೇ ಇರಲಿಲ್ಲ.

ಈ ಅಧ್ಯಯನವನ್ನು ೨೦೧೭ರಲ್ಲಿ ಭಾರತದ ವಿವಿಧ ಸಂಸ್ಥೆಗಳಿಗೆ ಸೇರಿದ ಹಲವು ವಿಜ್ನಾನಿಗಳು ಜಂಟಿಯಾಗಿ ನಡೆಸಿದ್ದರು. ವಾತಾವರಣಲ್ಲಿ ಉಳಿದುಕೊಂಡಿರುವ ಘನ ಪದಾರ್ಥ ಮಾಲಿನ್ಯ ಮತ್ತು ಮನೆಮಾರುಗಳು ಉಂಟುಮಾಡುವ ಮಾಲಿನ್ಯಗಳ ರಾಜ್ಯವಾರು ಅಧ್ಯಯನ ನಡೆಸಿದ ಈ ವಿಜ್ನಾನಿಗಳು ತಮ್ಮ ಫಲಿತಾಂಶವನ್ನು ಸಾವು, ರೋಗದ ಹೊರೆ ಮತ್ತು ಜೀವಿತಾವಧಿಯ ಅಂದಾಜುಗಳ ಮೇಲೆ ಸಮಾಜೋ-ಜನಸಂಖ್ಯಾ ಆಧಾರಿತವಾದ ಮೂರು ವರ್ಗೀಕರಣದಡಿ ನೀಡಿದ್ದಾರೆ. ಅದರ ಪ್ರಕಾರ ಭಾರತದ ಜನತೆ ೨೦೧೭ರಲ್ಲಿ  ವಾರ್ಷಿಕವಾಗಿ ಸರಾಸರಿ ಪ್ರತಿಘನ ಅಡಿಗೆ ೮೯.೯ ಮೈಕ್ರೋಗ್ರಾಮಿನಷ್ಟು ಘನಪದಾರ್ಥ ವಾಯುಮಾಲಿನ್ಯಕ್ಕೆ ಗುರಿಯಾಗಿದ್ದಾರೆ. ಇದು ಜಗತ್ತಿನಲ್ಲೇ ಅತ್ಯಂತ ಅಧಿಕ ಪ್ರಮಾಣದ ಮಾಲಿನ್ಯಗಳಲ್ಲಿ ಒಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ವಾತಾವರಣದಲ್ಲಿನ ಘನಪದಾರ್ಥ ವಾಯುಮಾಲಿನ್ಯವು ಪ್ರತಿಘನ ಅಡಿಗೆ ೧೦ ಮೈಕ್ರೋಗ್ರಾಮಿಗಿಂತ ಕಡಿಮೆಯಿರಬೇಕೆಂದು ನಿಗದಿ ಮಾಡಿದೆ. ಭಾರತದ ಯಾವ ರಾಜ್ಯಗಳು ಸಹ ಅದನ್ನು ಪಾಲಿಸಲಾಗಿಲ್ಲ. ಇದಲ್ಲದೆ ರಾಷ್ಟ್ರೀಯ ವಾತಾವರಣ ವಾಯು ಗುಣಮಟ್ಟ ಪ್ರಮಾಣ ಮಾನಕ (ನ್ಯಾಷನಲ್ ಆಂಬಿಯೆಂಟ್ ಏರ್ ಕ್ವಾಲಿಟಿ ಸ್ಟಾಂಡರ್ಡ್-ಎನ್‌ಎಕ್ಯುಎಸ್)ವು ಸಹ ಪ್ರತಿ ಘನಅಡಿಗೆ ೪೦ ಮೈಕ್ರೋಗ್ರಾಮಿಗಿಂತ ಹೆಚ್ಚಿನ ವಾಯು ಮಾಲಿನ್ಯವಿರಬಾರದೆಂಬ ಪ್ರಮಾಣವನ್ನು  ನಿಗದಿ ಮಾಡಿದ್ದರೂ ಭಾರತದ ಶೇ.೭೭ ರಷ್ಟು ಜನರು ಅದಕ್ಕಿಂತ ಹೆಚ್ಚಿನ ವಾಯುಮಾಲಿನ್ಯಕ್ಕೆ ಗುರಿಯಾಗಿದ್ದಾರೆ.

ಭಾರತದಲ್ಲಿ ಈ ವಾಯುಮಾಲಿನ್ಯವು ತಂಬಾಕು ಸೇವನೆಗಿಂತ ಹೆಚ್ಚಿನ ಪರಿಣಾಮವನ್ನುಂಟು ಮಾಡುತ್ತಿದೆ. ಮತ್ತು ಉಸಿರಾಟದ ಸೋಂಕಿಗೆ, ಶ್ವಾಸಕೋಶ ಮತ್ತು ಹೃದಯ ಸಂಬಂಧೀ ಸಂಬಂಧೀ ಖಾಯಿಲೆಗಳಿಗೆ, ಪಾರ್ಶ್ವವಾಯು ಮತ್ತು ಡಯಾಬಿಟೀಸ್ (ಸಕ್ಕರೆ ಖಾಯಿಲೆ)ನಂಥ ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತಿದೆ. ಆ ಅಧ್ಯಯನದ ಪ್ರಕಾರ ೨೦೧೭ರಲ್ಲಿ ವಾಯು ಮಾಲಿನ್ಯದಿಂದ ೧೨ ಲಕ್ಷ ಸಾವುಗಳಾಗಿವೆ ಎಂದು ಅಂದಾಜಿಸಬಹುದು. ಹೀಗೆ ಸಾವಿಗೀಡಾದವರಲ್ಲಿ ಶೇ.೫೧.೪ರಷ್ಟು ಜನ ೭೦ಕ್ಕಿಂತ ಕಡಿಮೆ ವಯಸ್ಸಿನವರಾಗಿರಬಹುದೆಂದೂ ಸಹ ಆ ಅಧ್ಯಯನವು ತಿಳಿಸುತ್ತದೆ. ವಾಯು ಮಾಲಿನ್ಯವು ಕನಿಷ್ಟ ಪ್ರಮಾಣದಲ್ಲಿದ್ದಿದ್ದರೆ ಭಾರತೀಯರ ಸರಾಸರಿ ಆಯಸ್ಸು ೧.೭ ವರ್ಷದಷ್ಟು ಹೆಚ್ಚಾಗುತ್ತಿತ್ತು. ವಾತಾವರಣದಲ್ಲಿನ ಘನಪದಾರ್ಥ ಮಾಲಿನ್ಯ ಮತ್ತು ಮನೆಮಾರು ವಾಯು ಮಾಲಿನ್ಯದ ಪ್ರತಿ ರಾಜ್ಯದಲ್ಲೂ ಭಿನ್ನಭಿನ್ನವಾಗಿದು ಅದರ ಪರಿಣಾಮಗಳೂ ಭಿನ್ನಭಿನ್ನವಾಗಿವೆ. ಉತ್ತರಪ್ರದೇಶ, ಹರ್ಯಾಣ, ದೆಹಲಿ, ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ಘನಪದಾರ್ಥ ವಾಯುಮಾಲಿನ್ಯದಿಂದಾಗಿ ಕುಸಿತಗೊಳ್ಳುವ ಜೀವಮಾನ ದರ (ಡಿಸ್‌ಎಬಿಲಿಟಿ ಅಡ್ಜೆಸ್ಟೆಡ್ ಲೈಫ್ ಇಯರ್- ಡಿಎಎಲ್‌ವಯ್) ಇತರ ರಾಜ್ಯಗಳಿಗಿಂತ ಹೆಚ್ಚಿದ್ದರೆ ಚತ್ತೀಸ್‌ಗಡ್, ಮಧ್ಯಪ್ರದೇಶ ಮತ್ತು ಅಸ್ಸಾಮುಗಳಲ್ಲಿ ಮನೆಮೂಲದ ವಾಯುಮಾಲಿನ್ಯದಿಂದ ಕುಸಿತಗೊಂಡ ಜೀವಮಾನದ ದರ ಇತರ ರಾಜ್ಯಗಳಿಗಿಂತ ಹೆಚ್ಚಾಗಿದೆ. ಹೀಗೆ ವಾಯುಮಾಲಿನ್ಯವು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣ  ಪ್ರದೇಶವನ್ನು ಆವರಿಸಿಕೊಂಡಿದೆ. ಗ್ರಾಮೀಣ ಪ್ರದೇಶದ ಜನರು ಪ್ರಧಾನವಾಗಿ ಘನ ಉರುವಲಿನ ಬಳಕೆಯಿಂದಾಗಿ ಇತರರಿಗಿಂತ ಹೆಚ್ಚಿನ ಮಾಲಿನ್ಯಕ್ಕೆ ತುತ್ತಾಗಿದ್ದಾರೆ.

ಆರ್ಥಿಕತೆಯು ಬೆಳೆಯುತ್ತಿದ್ದಂತೆ ಕೈಗಾರಿಕೆಗಳಿಂದ ಉಂಟಾಗುವ ಮಾಲಿನ್ಯ, ವಾಹನಗಳ ಹೊಗೆ, ಹೊಲ-ಗದ್ದೆಗಳಲ್ಲಿ ಕೂಳೆಗಳನ್ನು ಸುಡುವುದರಿಂದ ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಗಳಿಂದ ಉಂಟಾಗುವ ಮಾಲಿನ್ಯವೂ ಹೆಚ್ಚಾಗುತ್ತಿದೆ. ಪ್ರತಿವರ್ಷವೂ ಚಳಿಗಾಲದ ವೇಳೆಗೆ ನವದೆಹಲಿಯನ್ನು ಆವರಿಸುವ ಹೊಂಜು (ಹೊಗೆ ಮತ್ತು ಮಂಜು-ಹೊಂಜು) ಮಾಡುತ್ತಿರುವ ಪರಿಣಾಮಗಳನ್ನು ಸರ್ಕಾರಗಳು ಗಮನಕ್ಕೆ ತೆಗೆದುಕೊಂಡು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲೇ ಬೇಕಾದ ಅನಿವಾರ್ಯ ಉಂಟಾಗಿದೆ. ಮಾಲಿನ್ಯದಿಂದ ಉಂಟಾಗುವ ಆರ್ಥಿಕ ನಷ್ಟಗಳೂ ಕೂಡಾ ದುಬಾರಿಯಾದದ್ದು ಎಂಬುದನ್ನು ಇನ್ನು ನಿರ್ಲಕ್ಷ್ಯ ಮಾಡಲಾಗದು. ವಾಯುಮಾಲಿನ್ಯದಿಂದ ಆರೋಗ್ಯಕ್ಕೆ ಉಂಟಾಗುವ ಅಪಾಯವೂ ಸಹ ಆರ್ಥಿಕತೆಗೆ ಹಾನಿಯನ್ನುಂಟುಮಾಡುತ್ತದೆ. ೨೦೧೬ರಲ್ಲಿ ಬಿಡುಗಡೆಯಾದ ವಾಷಿಂಗ್‌ಟನ್ ವಿಶ್ವವಿದ್ಯಾಲಯ ಮತ್ತು ವಿಶ್ವಬ್ಯಾಂಕ್‌ಗಳ ಜಂಟಿ ಅಧ್ಯಯನದ ಪ್ರಕಾರ ಭಾರತವು ೨೦೧೩ರಲ್ಲಿ ವಾಯುಮಾಲಿನ್ಯದಿಂದಾಗಿ ೫೦೫.೧ ಶತಕೋಟಿ ಡಾಲರಿನಷ್ಟು ಸಂಕ್ಷೇಮಾಭಿವೃದ್ಧಿಯ ನಷ್ಟವನ್ನು ಎದುರಿಸಿದೆ. ಹಾಗೆಯೇ ವಾಯುಮಾಲಿನ್ಯದಿಂದಾಗಿ ಭಾರತವು ೨೦೧೩ರಲ್ಲಿ ೫೫.೩೯ ಶತಕೋಟಿ ಬಿಲಿಯನ್ ಡಾಲರಿನಷ್ಟು ಕಾರ್ಮಿಕ ಉತ್ಪಾದಕತೆಯನ್ನು ಕಳೆದುಕೊಂಡಿತ್ತು. ಇದು ಜಗತ್ತಿನಲ್ಲೇ ಅತಿ ಹೆಚ್ಚು ಪ್ರಮಾಣದ ಶ್ರಮನಷ್ಟವಾಗಿದೆ. ಸಂಕ್ಷೇಮಾಭಿವೃದ್ಧಿ ನಷ್ಟ ಮತ್ತು ಕಾರ್ಮಿಕ ಉತ್ಪಾದಕತೆಯ ನಷ್ಟವೆರಡನ್ನೂ ಒಟ್ಟು ಸೇರಿಸಿದರೆ ವಾಯುಮಾಲಿನ್ಯದಿಂದಾಗಿ ೨೦೧೩ರಲ್ಲಿ ಭಾರತದ ಒಟ್ಟಾರೆ ದೇಶೀಯ ಉತ್ಪನ್ನಕ್ಕೆ-ಜಿಡಿಪಿಗೆ- ಶೇ.೮.೫ರಷ್ಟು ನಷ್ಟ ಉಂಟಾಗಿದೆ. ಹೀಗಾಗಿ ವಾಯು ಮಾಲಿನ್ಯವು ಆರ್ಥಿಕ ಪ್ರಗತಿಗೆ ಅಡ್ಡಿಯನ್ನುಂಟು ಮಾಡುತ್ತಿದೆ.

ಆದರೆ ವಾಯುಮಾಲಿನ್ಯದಿಂದ ದಿನೇದಿನೇ ಪರಿಸ್ಥಿತಿಯು ಬಿಗಡಾಯಿಸುತ್ತಾ ಹೊದ ನಂತರದಲ್ಲೇ ಕೇಂದ್ರ ಸರ್ಕಾರವು ವಾಯುಮಾಲಿನ್ಯದ ಸಮಸ್ಯೆಯನ್ನು ಪರಿಗಣಿಸಲು ಪ್ರಾರಂಭಿಸಿದೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ಶುದ್ದ ಗಾಳಿ ಯೋಜನೆ (ಎನ್‌ಸಿಎಪಿ)ಯೊಂದನ್ನು ರೂಪಿಸುವ ಮೂಲಕ ವಾಯುಮಾಲಿನ್ಯವು ಒಂದು ದೇಶವ್ಯಾಪಿ ಸಮಸ್ಯೆಯೆಂಬುದನ್ನು ಗುರುತಿಸಿದೆ. ಈ ಯೋಜನೆಯು ದೇಶಾದ್ಯಂತ ವಾಯು ಗುಣಮಟ್ಟದ ಮೇಲೆ ನಿಗಾ ಇಡಲು ಅಗತ್ಯವಿರುವ ಸಾಂಸ್ಥಿಕ ಸಾಮರ್ಥ್ಯವನ್ನು ಬಲಪಡಿಸುವ, ವಾಯುಮಾಲಿನ್ಯವು ಆರೋಗ್ಯದ ಮೇಲೆ ಉಂಟುಮಾಡುತ್ತಿರುವ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಅಗತ್ಯವಿರುದ ಸ್ಥಳೀಯ ಅಧ್ಯಯನಗಳನ್ನು ನಡೆಸುವ ಮತ್ತು ರಾಷ್ಟ್ರೀಯ ಹೊಗೆ ತ್ಯಾಜ್ಯ ಯಾದಿಯೊಂದನ್ನು ಸಿದ್ಧಪಡಿಸುವ ಉದ್ದೇಶಗಳನ್ನು ಹೊಂದಿದೆ. ಆದರೆ ಈ ಕಾರ್ಯಕ್ರಮವು ವಾಯುಮಾಲಿನ್ಯವನ್ನು ನಿರ್ದಿಷ್ಟ ಕಾಲಾವಧಿಯಲ್ಲಿ ನಿರ್ದಿಷ್ಟ ಮಟ್ಟಕ್ಕೆ ಇಳಿಸಬೇಕೆಂಬ ಗುರಿಯನ್ನಾಗಲೀ, ಆ ಗುರಿಯನ್ನು ಮುಟ್ಟಲು ಬೇಕಾದ ಯೋಜನೆಯನ್ನಾಗಲೀ ಹೊಂದಿಲ್ಲವೆಂದು ಪರಿಸರವಾದಿಗಳು ಟೀಕಿಸುತ್ತಿದ್ದಾರೆ. ಈ ಟೀಕೆಗಳು ಅತ್ಯಂತ ಸಮಂಜಸವಾಗಿವೆ. ಏಕೆಂದರೆ, ೨೦೧೭ರ ಡಿಸೆಂಬರ್ ಒಳಗೆ ಉಷ್ಣು ವಿದ್ಯುತ್ ಸ್ಥಾವರಗಳು ಹೊಗೆ ತ್ಯಾಜ್ಯವನ್ನು ನಿಗದಿತ ಮಟ್ಟಕ್ಕೆ  ಇಳಿಸಬೇಕಿತ್ತು. ಆದರೆ ಕೇಂದ್ರ ಸರ್ಕಾರವು  ಕಲ್ಲಿದ್ದಲು ಆಧಾರಿತ ಉಷ್ಣು ವಿದ್ಯುತ್ ಸ್ಥಾವರಗಳ ಮಾಲಿನ್ಯ ಮಿತಿಯನ್ನು ಸಡಿಲಿಸಿದೆ ಹಾಗೂ ಹೊಸ ಸ್ಥಾವರಗಳು ಕಾನೂನು ಬದ್ಧವಾಗಿ ಪಾಲಿಸಬೇಕಿದ್ದ ಮಾಲಿನ್ಯಮಿತಿ ಕ್ರಮಗಳಿಗೆ ವಿನಾಯಿತಿ ನೀಡಿದೆ. ಅಷ್ಟು ಮಾತ್ರವಲ್ಲ. ದೊಡ್ಡದೊಡ್ಡ ಕಟ್ಟಡ ನಿರ್ಮಾಣ ಯೋಜನೆಗಳನ್ನು ಕಡ್ಡಾಯವಾಗಿ ಮಾಡಬೇಕಿದ್ದ ಪರಿಸರದ ಪ್ರಭಾವದ ಆಂದಾಜಿನ ಹೊಣೆಗಾರಿಕೆಯಿಂದ (ಎನ್‌ವಿರಾನ್‌ಮೆಂಟ್ ಇಂಪಾಕ್ಟ್ ಅಸೆಸ್‌ಮೆಂಟ್) ಮುಕ್ತಗೊಳಿಸಿದೆ. ಇದು ವಾಯುಮಾಲಿನ್ಯವನ್ನು ತಡೆಗಟ್ಟುವಲ್ಲಿ ಸರ್ಕಾರಕ್ಕಿರುವ ಬದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏಕೆಂದರೆ ವಾಯುಮಾಲಿನ್ಯವನ್ನು ಗಡಿಗಳನ್ನು ದಾಟಿದ ಕಾರ್ಯಕ್ರಮ ಸಂಯೋಜನೆಯಿಂದ ಮಾತ್ರ ತಡೆಗಟ್ಟಲು ಸಾಧ್ಯವಿಲ್ಲ. ಅದಕ್ಕೆ ರಾಜಕೀಯ ಮತ್ತು ಸಾರ್ವಜನಿಕ ಇಚ್ಚೆಗಳು ಅನಿವಾರ್ಯ. ಮತ್ತು ಬುಡಮಟ್ಟದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದು ಅತ್ಯಗತ್ಯ. 

 

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top