ISSN (Print) - 0012-9976 | ISSN (Online) - 2349-8846

ಐಕ್ಯತೆಗೆ ಬೇಕಾದ ಸಹಜ ಮನೋಧರ್ಮವೇ ಕಾಣೆಯಾಗಿರುವಾಗ..

ಭಾರತೀಯ ಜನತಾ ಪಕ್ಷದ ಐಕ್ಯತೆಯ ಪ್ರತಿಮೆ ಯೋeನೆಯು ಸರ್ಕಾರಗಳ ಕಾರ್ಪೊರೇಟ್ ಕಕ್ಷಿದಾರತನವನ್ನು ಮತ್ತೊಮ್ಮೆ ಸಾಬೀತು ಪಡಿಸುತ್ತಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಐಕ್ಯತೆಯ ಪ್ರತಿಮೆ ಯೋಜನೆಯು ಜಗತ್ತಿನ ರಾಜಕೀಯ ವರ್ತುಲಗಳಲ್ಲಿ ದೇಶಕ್ಕೆ ಮುಜುಗರವನ್ನುಂಟುಮಾಡುತ್ತಿದೆ. ಅಮೆರಿಕದ ವಾಶಿಂಗ್‌ಟನ್ ಪೋಸ್ಟ್ ಪತ್ರಿಕೆಯು ಈ ಯೋಜನೆಂi ಬಗ್ಗೆ ವಿವರಿಸುತ್ತಾ  ಈ ೬೦೦ ಅಡಿ ಎತ್ತರದ ಪ್ರತಿಮೆಯ ಸೃಷ್ಟಿಯು ಭಾರತದ ಜಾಗತಿಕ ಮಹತ್ವಾಕಾಂಕ್ಷೆಯನ್ನು ಎಷ್ಟು ಪ್ರತಿನಿಧಿಸುತ್ತದೆಯೋ ಅಷ್ಟೇ ಮಟ್ಟಿಗೆ ಅದರ ನಾಯಕನ ರಾಜಕೀಯ ಅಹಮಿಕೆಯನ್ನೂ ಪ್ರತಿನಿಧಿಸುತ್ತದೆ ಎಂದು ಬಣ್ಣಿಸಿದೆ. ಹಾಗೂ ಬ್ರಿಟಿಷ್ ಸಂಸದ ಪೀಟರ್ ಬೋನ್ ಅವರು ಒಂದು ದೇಶವು ಒಂದು ಪ್ರತಿಮೆಗಾಗಿಯೇ ಇಷ್ಟು ದೊಡ್ಡ ಮೊತ್ತವನ್ನು ವೆಚ್ಚ ಮಾಡುತ್ತಿರುವಾಗ ಅಂಥಾ ದೇಶವೊಂದಕ್ಕೆ ಅಭಿವೃದ್ಧಿ ಸಾಲ ಸಹಕಾರವನ್ನು ನೀಡುವ ಔಚಿತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ. ಏಕೆಂದರೆ ಭಾರತವು ಈ ಬೃಹತ್ ಯೋಜನೆಗಾಗಿ ೪೩ ಕೋಟಿ ಪೌಂಡುಗಳನ್ನು ವೆಚ್ಚ ಮಾಡುತ್ತಿರುವ ಸಮಯದಲ್ಲೇ ತನ್ನ ಸಾಮಾಜಿಕ ಯೋಜನೆಗಳ ವೆಚ್ಚವನ್ನು ಭರಿಸಲಿಕ್ಕಾಗಿ ಬ್ರಿಟಿಷ್ ಸರ್ಕಾರದಿಂದ ೧೧೦ ಕೋಟಿ ಪೌಂಡುಗಳ ಸಹಾಯವನ್ನು ಪಡೆದುಕೊಳ್ಳುತ್ತಿತ್ತು. ಹಾಗೂ ದೇಶದೊಳಗೂ ನೋಡಿದರೆ ಈ ಪ್ರತಿಮೆಯ ಸಂಭ್ರಮ ಕೇವಲ ಅಧಿಕಾರದ ವರ್ತುಲಗಳಿಗೆ ಸೀಮಿತವಾಗಿದೆಯೇ ವಿನಃ ಸಾಮಾನ್ಯ ಜನರು ಅದರಲ್ಲೂ ತಾವಿದ್ದ ಸ್ಥಳಗಳಿಂದ ಎತ್ತಂಗಡಿಯಾಗಿರುವ ಆದಿವಾಸಿಗಳು ತೀವ್ರವಾಗಿ ಬಾಧಿತರಾಗಿದ್ದಾರೆ. ಆದರೆ ಮೋದಿಯವರ ಪ್ರಕಾರ ಈ ಪ್ರತಿಮೆಯು ಭಾರತದ ಅಸ್ಥಿತ್ವನ್ನೇ ಪ್ರಶ್ನಿಸುತ್ತಿದ್ದವರಿಗೆ ತಕ್ಕ ಉತ್ತರವೂ, ನಮ್ಮ ಇಂಜನಿಯರಿಂಗ ಮತ್ತು ತಾಂತ್ರಿಕ ಶಕ್ತಿ ಸಾಮರ್ಥ್ಯಗಳ ಸಾಕಾರ ರೂಪವೂ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದೇಶಕ್ಕೆ ಒಂದು ಮಹತ್ತರವಾದ ಕೊಡುಗೆಯೂ ಆಗಿದೆ. ಆದರೆ ಇದಕ್ಕಾಗಿ ದೇಶವು ದೊಡ್ಡ ಮೊತ್ತದ ಹೊರೆಯನ್ನು ಹೊರಬೇಕಾಗಿ ಬಂದಿದೆ.

ಆದರೆ ಪ್ರತಿಮೆಯ ನಿರ್ಮಾಣಕ್ಕೆ ಆಗಿರುವ ಅಸಲಿ ವೆಚ್ಚವೆಷ್ಟೆಂದು ಯಾರಿಗಾದರೂ ತಿಳಿದಿದೆಯೇ? ವಿವಿಧ ದಾಖಲೆಗಳನ್ನು ಹೋಲಿಕೆ ಮಾಡಿ ನೋಡಿದಾಗ ಪ್ರಚಾರದಲ್ಲಿರುವ ಪ್ರ್ರತಿಮೆಯ ನಿರ್ಮಾಣ ವೆಚ್ಚದ ಮೊತ್ತವು ದಾಖಲೆಗಳು ತೋರುವ ವೆಚ್ಚಕ್ಕಿಂತ  ಕಡಿಮೆ ಇದೆ ಎಂಬುದು ಗೊತ್ತಾಗುತ್ತದೆ. ಈ ಪ್ರತಿಮೆಯ ನಿರ್ಮಾಣಕ್ಕೆ ೨೯೮೦ ಕೋಟಿ ರೂ.ಗಳಷ್ಟು ವೆಚ್ಚವಾಗಿದೆಯೆಂದು ಮಾಧ್ಯಮಗಳಲ್ಲಿ ಪದೇಪದೇ ಪ್ರಸ್ತಾವಿತವಾಗುತ್ತಿದೆ. ಇದು ಗುಜರಾತ್ ರಾಜ್ಯ ಸರ್ಕಾರದ ಬಜೆಟ್ ದಸ್ತಾವೇಜುಗಳಲ್ಲಿ ನಮೂದಾಗಿರುವಂತೆ ೨೦೧೪-೧೫ರಿಂದ ಈವರೆಗೆ ಗುಜರಾತ್ ರಾಜ್ಯ ಸರ್ಕಾರವೊಂದೇ ಭರಿಸಿರುವ ವೆಚ್ಚ ಮಾತ್ರವಾಗಿದೆ. ಇದಲ್ಲದೆ ಕೇಂದ್ರ ಸರ್ಕಾರದ ಬಜೆಟ್ಟಿನಲ್ಲಿ ಈ ಬಾಬತ್ತಿಗೆಂದು ೨೦೧೪-೧೫ ಮತ್ತು ೨೦೧೭-೧೮ರ ಸಾಲಿನಲ್ಲಿ ೩೦೯ ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ಎತ್ತಿಡಲಾಗಿದೆ. ಇದಲ್ಲದೆ ಸರ್ದಾರ್ ಸರೋವರ್ ನರ್ಮದಾ ನಿಗಮ್‌ನ ಜಂಟಿ ನಿರ್ವಾಹಕ ನಿರ್ದೇಶಕರಾದ ಸಂದೀಪ್ ಕುಮಾರ್ ಅವರು ೨೦೧೮ರ ನವಂಬರ್ ೯ ರಂದು ಇಂಡಿಯಾ ಟುಡೆಗೆ ಕೊಟ್ಟ ಸಂದರ್ಶನದಲ್ಲಿ ಹೇಳಿರುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಡೆತನದ ಸಾರ್ವಜನಿಕ ಉದ್ದಿಮೆಗಳು, ಖಾಸಗಿ ಕಂಪನಿಗಳು ಮತ್ತು ವ್ಯಕ್ತಿಗಳು ಒಟ್ಟು ೫೫೦ ಕೋಟಿ ರೂ.ಗಳಷ್ಟು ದೇಣಿಗೆಯನ್ನು ಈ ಯೋಜನೆಗಾಗಿ ನೀಡಿದ್ದಾರೆ. ಈ ಮೂರು ಮೂಲಗಳು ನೀಡುತ್ತಿರುವ ಅಂಕಿಅಂಶಗಳನ್ನೆಲ್ಲಾ ಕ್ರೂಢೀಕರಿಸಿದರೆ ಒಟ್ಟು ಈ ಯೋಜನೆಗಾಗಿ ೩೮೩೯ ಕೋಟಿ ರೂ. ವೆಚ್ಚವಾಗಿದೆಯೆಂದು ತಿಳಿದು ಬರುತ್ತದೆ. ಇದು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಮೊತ್ತಕ್ಕಿಂತ ೧.೩ ಪಟ್ಟು ಹೆಚ್ಚಿದೆ. ಅದೇ ರೀತಿ ಸಾರ್ವಜನಿಕ ಉದ್ದಿಮೆಗಳ ಕಾರ್ಪೊರೇಟ್ ಸಾಮಜಿಕ ಹೊಣೆಗಾರಿಕಾ (ಸಿಎಸ್‌ಆರ್) ಖಾತೆಯಿಂದ ನೀಡಲಾಗಿರುವ ೧೪೬.೮೩ ಕೋಟಿ ರೂ.ಗಳ ಬಗ್ಗೆಯೂ ಸಾಕಷ್ಟು ದ್ವಂದ್ವಗಳಿವೆ. ೨೦೧೩ರ ಕಂಪನಿ ಕಾಯಿದೆಯ ಏಳನೇ ಶೆಡ್ಯೂಲಿನ ಪ್ರಕಾರ ಉದ್ದಿಮೆಗಳು ತಮ್ಮ ಸಾಮಾಜಿಕ ಹೊಣೆಗಾರಿಕಾ ವೆಚ್ಚವನ್ನು ದೇಶದ ಪರಂಪರೆ, ಸಂಸ್ಕೃತಿ ಮತ್ತು ಕಲೆಯನ್ನು ರಕ್ಷಿಸುವ ಬಾಬತ್ತುಗಳ ಮೇಲೆ ಮಾಡಬಹುದು. ಆದರೆ ಉದ್ದಿಮೆಗಳು ಈ ಪ್ರತಿಮೆಗಾಗಿ ಕೊಟ್ಟಿರುವ ಕೊಡುಗೆಯನ್ನು ಆ ರೀತಿ ಪರಿಗಣಿಸುವುದು ಆ ಶೆಡ್ಯೂಲಿನ ಹಿಂದಿರುವ ಉದ್ದೇಶಕ್ಕೆ ಅನುಚಿತವಾದುದು ಎಂದು ಭಾರತದ ಮಹಾಲೇಖಪಾಲರು (ಕಂಪ್ಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ ಇಂಡಿಯಾ-ಸಿಎಜಿ) ಆ ಉದ್ದಿಮೆಗಳ ಲೆಕ್ಕವನ್ನು ತಿರಸ್ಕರಿಸಿದ್ದಾರೆ.

ವಲ್ಲಭಭಾಯಿ ಪಟೇಲರ ಪರಂಪರೆಯ ನೈಜ ವಾರಸುದಾರರು ತಾವೆಂದು ತೋರಿಸಿಕೊಳ್ಳಲೋಸುಗ ಭಾರತೀಯ ಜನತಾ ಪಕ್ಷದ ಮತ್ತು ಮೋದಿಯವರು ನಡೆಸುತ್ತಿರುವ ವೀರೋಚಿತ ಪ್ರಯತ್ನಗಳ ಹಿಂದೆ ತಮ್ಮ ಈ ವೈಭವೋಪೇತ ಯೋಜನೆಗೆ ಪರಂಪರೆಯ ಹಣೆಪಟ್ಟಿಯನ್ನು ದಕ್ಕಿಸಿಕೊಳ್ಳುವ ಗುಪ್ತ ಉದ್ದೇಶವೂ ಇದೆಯೇ? ಆದರೆ ಹೀಗೆ ಸಿಎಸ್‌ಆರ್ ಸಂಪನ್ಮೂಲವನ್ನು ಪ್ರತಿಮೆ ನಿರ್ಮಾಣದಂಥ ಅನುತ್ಪಾದಕ ವೆಚ್ಚಗಳಿಗೆ ಬಳಸಿಕೊಂಡುಬಿಡುವುದನ್ನು ಒಳಗೊಂಡಂತೆ ತಮ್ಮ ಇತರ ಹಲವಾರು ಆಡಳಿತಾತ್ಮಕ ವೈಫಲ್ಯಗಳನ್ನು ಜನರ ಕಣ್ಣಿನಿಂದ ಮರೆಮಾಚಲು ಇಷ್ಟೇ ಸಾಲುವುದಿಲ್ಲ. ಭಾರತದಲ್ಲಿ ಈ ಸಿಎಸ್‌ಆರ್ ವೆಚ್ಚಗಳ ಬೆಳವಣಿಗೆ ಅತ್ಯಂತ ನಿಧಾನಗತಿಯಲ್ಲಿದ್ದರೂ ಅದರ ಶೇ.೬೦ ಭಾಗವನ್ನು ಆರೋಗ್ಯ, ಬಡತನ ರೇಖೆಯಿಂದ ಮೇಲೆತ್ತುವ ಕಾರ್ಯಕ್ರಮಗಳು, ನೀರು ಮತ್ತು ನೈರ್ಮಲ್ಯ, ಶಿಕ್ಷಣ ಮತ್ತು ಜೀವನೋಪಾಯಗಳ ಸೃಷ್ಟಿಯಂಥ ಸಾಮಾಜಿಕ ಕ್ಷೇತ್ರಗಳ ಮೇಲಿನ ವೆಚ್ಚಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಕ್ಷೇತ್ರದ ಅಭಿವೃದ್ಧಿಯಲ್ಲಿ ಸರ್ಕಾರದ ಪಾತ್ರ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಸಿಎಸ್‌ಆರ್ ಸಂಪನ್ಮೂಲಗಳನ್ನು ಇತರ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುವುದರಿಂದ ದುಷ್ಪರಿಣಾಮಗಳೇ ಉಂಟಾಗುತ್ತವೆ. ೨೦೧೪-೧೫ರ ನಂತರದ ನಾಲ್ಕು ವರ್ಷಗಳಲ್ಲಿ ಗುಜರಾತ್ ರಾಜ್ಯದಲ್ಲೇ ಅಭಿವೃದ್ಧಿ ವೆಚ್ಚಗಳು ಒಟ್ಟಾರೆ ಬಜೆಟ್ಟಿನ ಶೇ.೭೦ ರಿಂದ ಶೇ.೬೦ಕ್ಕೆ ಇಳಿದಿದ್ದರೆ, ಅದೇ ಅವಧಿಯಲ್ಲಿ  ಅಭಿವೃದ್ಧಿಯೇತರ ವೆಚ್ಚಗಳು ಶೇ.೩೦ರಿಂದ ಶೇ.೪೦ಕ್ಕೇರಿದೆ. ಪರಿಸ್ಥಿತಿ ಹೀಗಿರುವಾಗ ಈ ಯೋಜನೆಯಲ್ಲಿ ತಮ್ಮ ಭಾಗೀದಾರಿಕೆಯನ್ನು ಸಮರ್ಥಿಸಿಕೊಳ್ಳಲು ಉದ್ಯೋಗ ಸೃಷ್ಟಿಯ ಬಗ್ಗೆ ಮಾಡುತ್ತಿರುವ ಪ್ರಚಾರಗಳನ್ನು ಬಿಜೆಪಿಯಾಗಲೀ, ಮೋದಿಯಾಗಲೀ, ಸಾರ್ವಜನಿಕ ಉದ್ದಿಮೆಗಳು ಅಥವಾ ಕಾರ್ಪೊರೇಟ್ ಉದ್ದಿಮೆಗಳಾಗಲೀ ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಆರ್ಥಿಕತೆಯನ್ನು ಸಾರ್ವತ್ರಿಕವಾಗಿ ಆವರಿಸಿಕೊಳ್ಳುತ್ತಿರುವ ಉದ್ಯೋಗ ರಹಿತತನವನ್ನು ಮತ್ತು ನಿರ್ದಿಷ್ಟವಾಗಿ ಸರ್ಕಾರದ ಅಂಗಳದಲ್ಲೇ ಇರುವ  ದೊಡ್ಡ ಮಟ್ಟದ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡದಿರಲು ಕಾರಣವಾಗಿರುವ ರಾಜಕೀಯ ಇಚ್ಚಾಶಕ್ತಿಯನ್ನು ಕೊರತೆಯನ್ನು ಈ ಬಗೆಯ ಕುತ್ಸಿತ ಆರ್ಥಿಕ ತರ್ಕಗಳಿಂದ ಮರೆಮಾಚಲು ಸಾಧ್ಯವಿಲ್ಲ.

ಅಂಥಾ ಘೊಷಣೆಗಳ ಟೊಳ್ಳುತನವನ್ನು ನಿರ್ಲಕ್ಷಿಸುವುದು, ಅಥವಾ ಸಮಾಜದ ಅಂಚಿನಲ್ಲಿ ಬದುಕುತ್ತಿರುವ ಜನರ ಬಗ್ಗೆ ಸರ್ಕಾರ ತೋರುವ ಕಾಳಜಿಯ ನmನೆಯ ಹಿಂದಿನ ಪೊಳ್ಳುತನವನ್ನು ಗಮನಿಸದೇ ಇದ್ದುಬಿಡುವುದು ಅಸಾಧ್ಯ. ಆದಿವಾಸಿ ಸಂಶೋಧನೆ ಮತ್ತು ತರಬೇತಿ ಸಂಸ್ಥ್ಥೆಯನ್ನು ಸ್ಥಾಪಿಸಲು ವಿಶೇಷ ಅನುದಾನವನ್ನು ಕೊಡುವಲ್ಲಿ ಎಲ್ಲಿಲ್ಲದ ಉತ್ಸಾಹವು ಕಂಡುಬರುತ್ತದೆ. ಆದರೆ, ಈ ಯೋಜನೆಯಿಂದ ಸ್ಥಳಾಂತರಿಸಲ್ಪಟ್ಟ್ಟ ಹಳ್ಳಿಗಳಿಗೆ ಸಾಮಾಜಿಕ ಬೆಂಬಲವನ್ನು ಒದಗಿಸುವ ಪ್ರಶ್ನೆ ಬಂದಾಗ ಮಾತ್ರ ಇದ್ದಬದ್ದ ಆಸಕ್ತಿಯೂ ಆವಿಯಾಗಿ ಹೋಗಿಬಿಡುತ್ತದೆ. ಈ ಹಿಂದೆ ಸರ್ದಾರ್ ಸರೋವರ್ ಯೋಜನೆಯಲ್ಲಿ ಸ್ಥಳಾಂತರಗೊಂಡ ಆದಿವಾಸಿಗಳ ಅನುಭವಗಳು ಸ್ಪಷ್ಟಪಡಿಸುವಂತೆ ಸೂಕ್ತವಾದ ಸಾಮಾಜಿಕ ಬೆಂಬಲ ದೊರೆಯದಿದ್ದರೆ ಎಷ್ಟೇ ದೊಡ್ಡ ಮೊತ್ತದ ಪರಿಹಾರ ನೀಡಿದರೂ ಒಂದು ಕಾಲಾವಧಿಯ ನಂತರ ಅವು ನಿಷ್ಪ್ರಯೋಜಕವಾಗಿಬಿಡುತ್ತವೆ. ಯಾವುದೇ ಸಾಮಾಜಿಕ, ರಾಜಕೀಯ ಅಥವಾ ಆರ್ಥಿಕ ಬಂಡವಾಳವಿರದ ಅಥಾವ ಯಾವುದೇ ಸರ್ಕಾರಿ ಯೋಜನೆಗಳ ಸೌಕರ್ಯಗಳನ್ನು ಪಡೆದುಕೊಳ್ಳಲಾಗದ ಈ ಆದಿವಾಸಿ ಸಮುದಾಯಗಳು ಒಟ್ಟಾರೆ ಸಾಮಾಜಿಕ-ಆರ್ಥಿಕ ಸಂಕಷ್ಟಗಳಿಗೆ ಬಲಿಯಾಗುತ್ತಾರೆ. ವಂಚಿತರು ಎದಿರಿಸಬೇಕಾಗುವ ಈ ಎಲ್ಲಾ  ಸಂಕಷ್ಟಗಳ ಲೆಕ್ಕಾಚಾರವನ್ನು ಹಿಡಿದರೆ ಈ ಯೋಜನೆಯ ವೆಚ್ಚವು ಆ ದೈತ್ಯ ಪ್ರತಿಮೆಗಿಂತ ಎಷ್ಟೋಪಟ್ಟು ಹೆಚ್ಚಾಗುತ್ತದೆ.

ಒಂದು ಸಹಜ ಮನೋಧರ್ಮದ ಸಂಗತಿಯಾಗಿ ಹೇಳುವುದಾದರೆ ಐಕ್ಯತೆಯೆಂಬುದು ತಮ್ಮ ಸಾಮಾಜಿಕ ಮೌಲ್ಯವನ್ನು ಸಾಕಾರ ಮಾಡಿಕೊಳ್ಳಲು ಜನತೆಗೆ ಅತ್ಯಗತ್ಯವಾಗಿ ಬೇಕಿರುವ ಮೌಲ್ಯವಾಗಿದೆ. ಆದರೆ ಈ ಐಕ್ಯತೆ ಎಂಬ ಪದಕ್ಕೆ ನಿರ್ದಿಷ್ಟವಾದ ಸಹಜ ಸಾರವನ್ನು ತುಂಬಲು ಬಿಜೆಪಿ ನಿಜಕ್ಕೂ ಬಯಸುತ್ತದೆಯೇ? ಪಟೇಲರ ಪ್ರತಿಮೆಯನ್ನು ಐಕ್ಯತೆಯ ಪ್ರತಿಮೆ ಎಂದು ಹೆಸರಿಸಿರುವುದು ಒಂದು ರಾಜಕೀಯ ಶಬ್ಧಜಾಲವಷ್ಟೇ ಆಗಿದ್ದು ಹಾಲೀ ಸರ್ಕಾರದ ಕೋಮು ಧೃವೀಕರಣದ ರಾಜಕೀಯಕ್ಕೆ ಮುಖವಾಡ ತೊಡಿಸಲು ಸರ್ದಾರ್ ಪಟೇಲರ ಐಕ್ಯತೆಯ ಸಿದ್ಧಾಂತವನ್ನೂ ಸಹ ಅದು ಬಹಿರಂಗವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹಣಕಾಸು ಕ್ಷೇತ್ರದಲ್ಲಿ ಹೆಚ್ಚೆಚ್ಚು ಜನರನ್ನು ಒಳಗೊಳ್ಳುವ ಹೆಸರಿನಲ್ಲಿ, ಕಪ್ಪುಹಣದ ಮೇಲಿನ ದಾಳಿಯ ಹೆಸರಿನಲ್ಲಿ, ಮತ್ತು ಕಾರ್ಪೊರೇಟ್ ದಿವಾಳಿ ಕೋರತನವನ್ನು ನಿಪಟಾಯಿಸುವ ಹೆಸರಿನಲ್ಲಿ ಸರ್ಕಾರವು ಜಾರಿಗೊಳಿಸುತ್ತಿರುವ ಆಕ್ರಮಣಕಾರಿ ಆರ್ಥಿಕ ನೀತಿಗಳನ್ನು ನೋಡಿದರೆ ಸಾಮಾನ್ಯಜನರ ಮೇಲೆ ಈ ಯೋಜನೆಗಳ ಜಾರಿಯ ಹೊರೆಯನ್ನು ಹೊರೆಸುತ್ತಾ ಮತ್ತೊಂದೆಡೆ ತನ್ನ ಕಾರ್ಪೊರೇಟ್ ಕಕ್ಷಿದಾರರ ಹಿತಾಸಕ್ತಿಯನ್ನು ಕಾಯುವಂತ ವ್ಯೂಹತಂತ್ರವನ್ನು ಇನ್ನಷ್ಟು ಬಲಿಷ್ಠಗೊಳಿಸಿಕೊಳ್ಳುತ್ತಿರುವುದೇ ಕಂಡುಬರುತ್ತದೆ.

ಈ ಪ್ರತಿಮೆ ಯೋಜನೆಯಲ್ಲೂ ಅಷ್ಟೆ. ಪ್ರತಿಮೆಗೆ ತಾಮ್ರದ ಹೊದಿಕೆ ಹೊದಿಸುವ ಭಾಗವನ್ನು ಚೀನಾಗೆ ಹೊರಗುತ್ತಿಗೆ ನೀಡಲಾಗಿತ್ತು. ಉಳಿದಂತೆ ಈ ಯೋಜನೆಯನ್ನು ಜಾರಿಗೆ ತಂದ ಇಂಜನಿಯಯರಿಂಗ್ ಕಂಪನಿಯ ಮೇಲೆ ಸರ್ಕಾರದ ಮೇಕ್ ಇನ್ ಇಂಡಿಯಾ- ಭಾರತದಲ್ಲೇ ತಯಾರಿಸಿ ನೀತಿಯ ಯಾವ ಒತ್ತಡವನ್ನೂ ಸರ್ಕಾರ ಹೇರಲಿಲ್ಲ. ಆದರೆ ಸರ್ದಾರ್ ಸರೋವರದ ಅಚ್ಚುಕ್ಕಟ್ಟು ಪ್ರದೇಶದ ರೈತಾಪಿಯು ಮಾತ್ರ ಈ ವೈಭವಯುತ ಯೋಜನೆಗಾಗಿ ಅನುಮೋದನೆಯಾಗಿದ್ದ ೯೦.೩೮೯ ಕಿಮೀ ಉದ್ದದ ನಾಲಾಜಾಲದಲ್ಲಿ ಶೇ.೨೦ರಷ್ಟನ್ನೂ ಮತ್ತು ನೀರಾವರಿಯಾಗಬೇಕಿದ್ದ ೧೭.೯೨ ಲಕ್ಷ ಹೆಕ್ಟೇರಿನಷ್ಟು ಜಮೀನಿನಲ್ಲಿ ಶೇ.೭೫ರಷ್ಟನ್ನೂ ಬಿಟ್ಟುಕೊಡಬೇಕಾಯಿತು. ಹೀಗೆ ಸರ್ದಾರ್ ಪಟೇಲರ ಆದರ್ಶಗಳಿಗೆ ಬಹಿರಂಗವಾಗಿಯೇ ಅಗೌರವವನ್ನು ತೋರುತ್ತಾ ಪಟೇಲರ ಪರಂಪರೆಯ ವಾರಸುದಾರಿಕೆಯನ್ನು ಪಡೆದುಕೊಳ್ಳಲು ನಡೆಸುತ್ತಿರುವ ಈ ಪ್ರಯತ್ನದ ಹಿಂದೆ ರಾಷ್ಟ್ರದ ಹಿತಾಸಕ್ತಿಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುವಂಥಾ ಸಂಕುಚಿತ ಉದ್ದೇಶ ಮಾತ್ರವಿದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top