ISSN (Print) - 0012-9976 | ISSN (Online) - 2349-8846

ರೈತರೂ ಮತ್ತವರ ರಾಷ್ಟ್ರವೂ

ಉಳುವ ರೈತರಿಗೆ ಸ್ಪಂದಿಸುವ ರಾಷ್ಟ್ರದ ಅಗತ್ಯವಿದೆ; ಏಕೆಂದರೆ ಅವರು ಈ ರಾಷ್ಟ್ರದಿಂದ ಓಡಿಹೋಗುವ ಅಥವಾ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.

 

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ದೇಶದ ಸುಮಾರು ೨೦೦ ರೈತ ಸಂಘಟನೆಗಳ ಒಕ್ಕೂಟವಾಗಿರುವ ಆಲ್ ಇಂಡಿಯಾ ಕಿಸಾನ್ ಸಂಘರ್ಷ್ ಕೋ-ಆರ್ಡಿನೇಷನ್ ಕಮಿಟಿ (ಎಐಕೆಎಸ್‌ಸಿಸಿ-ಅಖಿಲ ಭಾರತ ರೈತ ಸಂಘರ್ಷ ಸಂಯೋಜನಾ ಸಮಿತಿ)ಯು ಒಂದು ಬೃಹತ್ ದಿಲ್ಲಿ ಚಲೋಗಾಗಿ ದೇಶಾದ್ಯಂತ ರೈತರನ್ನು ಸಂಘಟಿಸುತ್ತಿದೆ. ಅವರು ನವಂಬರ್ ೨೯ ಮತ್ತು ೩೦ರಂದು ದೇಶದ ರಾಜಧಾನಿಯನ್ನು ತಲುಪುವ ಯೋಜನೆಯನ್ನು ಹೊಂದಿದ್ದಾರೆ. ದೇಶದಲ್ಲಿನ ಕೃಷಿ ಬಿಕ್ಕಟ್ಟನ ಬಗ್ಗೆ ಚರ್ಚಿಸಲು ಒಂದು ವಿಶೇಷ ಸಂಸತ್ ಅಧಿವೇಶನವನ್ನು ಕರೆಯಬೇಕೆಂಬುದು ಈ ರೈತ ಹೋರಾಟ ಸಂಯೋಜನಾ ಸಮಿತಿಯ ಪ್ರಧಾನ ಆಗ್ರಹವಾಗಿದೆ. ಆ ವಿಶೇಷ ಅಧಿವೇಶನವು ಸ್ವಾಮಿನಾಥನ್ ಅಯೋಗದ ಶಿಫಾರಸ್ಸುಗ ಬಗ್ಗೆ , ಕನಿಷ್ಟ ಬೆಂಬಲ ಬೆಲೆ ನೀತಿಯ ಅನುಷ್ಠಾನ ಮತ್ತು ನಿಯಂತ್ರಣದ ಬಗ್ಗೆ, ಬೆಳೆ ವಿಮಾ ನೀತಿಯ ಸಮಸ್ಯಾತ್ಮಕ ಖಾಸಗೀಕರಣದ ಬಗ್ಗೆ, ಬರಪೀಡಿತ ಪ್ರದೇಶಗಳನ್ನು ವರ್ಗೀಕರಿಸುವಲ್ಲಿ ಸರ್ಕಾರವು ಅನುಸರಿಸುತ್ತಿರುವ ದೋಷಪೂರಿತ ಪದ್ಧತಿಯ ಬಗ್ಗೆ, ವಿವಿಧ ಬ್ಯಾಂಕುಗಳಿಂದ ಸಾಲವನ್ನು ಪಡೆದಿರುವ ರೈತರ ಬಗ್ಗೆ ಬ್ಯಾಂಕುಗಳು ಅನುಸರಿಸುತ್ತಿರುವ ತಾರತಮ್ಯದ ನೀತಿಗಳ ಬಗ್ಗೆ ಚರ್ಚಿಸಲೆಂದೇ ನಿಗದಿಯಾಗಬೇಕೆಂಬುದು ರೈತರ ಬಯಕೆಯಾಗಿದೆ. ರೈತರ ಅನುಭವಗಳೇ ಹೇಳುವಂತೆ ಸಾಲವನ್ನು ವಸೂಲಿ ಮಾಡಲು ಹಲವಾರು ಬ್ಯಾಂಕುಗಳು ಕಠಿಣವಾದ ಮತ್ತು ಅವಮಾನಕಾರಿಯಾದ ಕ್ರಮಗಳನ್ನು ಅನುಸರಿಸುತ್ತವೆ. ಆದರೆ ಅದೇ ಸಮಯದಲ್ಲಿ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಸಾಲವಾಗಿ ಪಡೆದು ಮರುಪಾವತಿ ಮಾಡದ ಹಲವಾರು ವ್ಯಕ್ತಿಗಳ ಬಗ್ಗೆ ಇದೇ ಬ್ಯಾಂಕುಗಳು ಅತ್ಯಂತ ಉದಾರವಾಗಿ ವರ್ತಿಸುತ್ತವೆ. ದೇಶದ ದೊಡ್ಡ ಸಂಖ್ಯೆಯ ರೈತರು ಬ್ಯಾಂಕುಗಳ ಈ ಬಗೆಯ ತಾರತಮ್ಯ ನೀತಿಯ ಬಲಿಪಶುಗಳಾಗಿದ್ದಾರೆ.

ಹಾಲೀ ಜಾರಿಯಲ್ಲಿರುವ ಬೆಂಬಲ ಬೆಲೆಯ ನೀತಿಯು ರೈತರ ಹಿತಾಸಕ್ತಿಗೆ ಪೂರಕವಾಗಿರುವ ಬಗ್ಗೆ ರೈತರಿಗೆ ಅಪಾರವಾದ ಗುಮಾನಿಯಿದೆ. ಅಪಾರವಾಗಿ ಲಾಭವನ್ನು ಮಾಡುವ ಉದ್ದೇಶವನ್ನು ಹೊಂದಿರುವ ಖಾಸಗಿ ವ್ಯಕ್ತಿಗಳ ಹಿಡಿತದಲ್ಲಿರುವ ಮಾರುಕಟ್ಟೆಯ ವೈಪರೀತ್ಯದಿಂದ ಈ ಬೆಂಬಲ ಬೆಲೆಯು ತಮ್ಮನ್ನು ಹೇಗೆ ಬಚಾವು ಮಾಡಬಲ್ಲದು ಎಂದು ರೈತರು ಬಹುಕಾಲದಿಂದ ಕೇಳುತ್ತಲೇ ಬಂದಿದ್ದಾರೆ. ಅದೇರೀತಿ ವಾಣಿಜ್ಯ ಬೆಳೆಗಳ ಮೇಲೆ ಕಾರ್ಪೊರೇಟ್ ವಿಮಾ ಕಂಪನಿಗಳ ಕಬಂಧ ಹಿಡಿತವನ್ನು ಇನ್ನಷ್ಟು ವಿಸ್ತರಿಸುವ ನೀತಿಗಳು ರೈತರಿಗಿಂತ ಕಂಪನಿಗಳಿಗೇ ಹೆಚ್ಚಿನ ಅನುಕೂಲವನ್ನು ಮಾಡಿಕೊಡುತ್ತದೆಂಬ ಬಗ್ಗೆ  ರೈತರು ಸಂದೇಹ ಪಡಲು ಸಾಕಷ್ಟು ಕಾರಣಗಳಿವೆ. ಹಾಗೆಯೇ ದೂರ ಸಂವೇದಿ ತಂತ್ರಜ್ನಾನವು ಜಲಾಶಯಗಳ ಪರಿಸ್ಥಿತಿಯ ನಿಖರ ಚಿತ್ರಣ ಕೊಡಲಾರದು ಎಂಬ ಆಳವಾದ ಸಂದೇಹವೂ ರೈತರಿಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಕೃಷಿ ಬಿಕ್ಕಟ್ಟು ಉಲ್ಫಣಗೊಳ್ಳುತ್ತಿದ್ದು ದೇಶಾದ್ಯಂತ ಮೂರು ಲಕ್ಷಕ್ಕೂ ಹೆಚ್ಚು ರೈತರ ದುರಂತಮಯ ಆತ್ಮಹತ್ಯೆಗಳಿಗೆ ಕಾರಣವಾಗಿದೆ.

 ಈ ಹಿನ್ನೆಲೆಯಲ್ಲೇ ರೈತರ ಈ ಬೃಹತ್ ರ್‍ಯಾಲಿಯು ಕೃಷಿ ಬಿಕ್ಕಟ್ಟಿನ ಸಮಸ್ಯೆಯನ್ನು ಸಾರ್ವಜನಿಕರ ಕೇಂದ್ರ ಗಮನಕ್ಕೆ ತರಲು ಉದ್ದೇಶಿಸಿದೆ. ಈ ಕೃಷಿ ಬಿಕ್ಕಟ್ಟನ್ನು ಬಗೆಹರಿಸುವ ಬಗ್ಗೆ ಕನಿಷ್ಟ ಕಾಳಜಿಯನ್ನು ತೋರದ ಸರ್ಕಾರದ ಜೊತೆ ಒಂದು ಪ್ರಜಾತಾಂತ್ರಿಕ ಸಂವಾದ ಮಾಡುವುದು ಈ ರ್‍ಯಾಲಿಯ ಉದ್ದೇಶವಾಗಿದೆ. ಭಾರತದ ಆರ್ಥಿಕತೆಯ ಅಧಿಕೃತ ಲೆಕ್ಕಾಚಾರಗಳಲ್ಲಿ ರೈತರ ಸಮಸ್ಯೆಯು ಒಂದು ಅತಿಥಿ ಪಾತ್ರವಾಗಿ ಬಂದುಹೋಗುತ್ತದೆ ಅಥವಾ ಸಂಪೂರ್ಣವಾಗಿ ನಿರ್ಲಕ್ಷಕ್ಕೆ ಒಳಪಡುತ್ತದೆ ಎಂಬ ಪ್ರಬಲವಾದ ವಾದವಿದೆ. ವಿಸ್ತೃತವಾದ ಮತ್ತು ದುಬಾರಿಯಾದ ಜಾಹಿರಾತುಗಳಲ್ಲಿ ಬಿತ್ತರಿಸಲ್ಪಡುವ ಸರ್ಕಾರಿ ಕಥನಗಳು ವಾಸ್ತವದಲ್ಲಿ ರೈತರ ಆತ್ಮಹತ್ಯೆಗಳಂಥ ದುರಂತಮಯ ನೈಜ ಪರಿಸ್ಥಿತಿಯನ್ನು ಲೇವಡಿ ಮಾಡುತ್ತಿರುತ್ತವೆ.

ಈ ವಿಷಯಗಳನ್ನು ಸಂಸತ್ತಿನಲ್ಲಿ ಚರ್ಚೆ ಮಾಡಲು ಸರ್ಕಾರವು ಏಕೆ ಸಿದ್ಧವಿಲ್ಲವೆಂಬುದಕ್ಕೆ ಕಾರಣಗಳನ್ನು ಹುಡುಕುವುದು ಕಷ್ಟವೇನಿಲ್ಲ. ಈ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ತನ್ನ ವೈಫಲ್ಯವನ್ನು ಅದು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ವಾಸ್ತವವಾಗಿ, ಕೃಷಿ ಬಿಕ್ಕಟ್ಟನು ನಿರ್ಲಕ್ಷಿಸುವುದರಲ್ಲಿ ಮಾತ್ರವಲ್ಲದೆ ಕಾರ್ಪೊರೇಟ್ ಹಿತಾಸಕ್ತಿಯ ಪರವಾಗಿ ನಿಂತು ಬಿಕ್ಕಟ್ಟನ್ನು ಉಲ್ಫಣಗೊಳಿಸಿದ್ದಕ್ಕೂ ತನ್ನನ್ನು ಹೊಣೆಗಾರನನ್ನಾಗಿಸಬಹುದೆಂಬ ಭಯ ಸರ್ಕಾರಕ್ಕಿದೆ.

ರೈತರ ಈ ಬೃಹತ್ ರ್‍ಯಾಲಿಯು ಹಲವಾರು ಕಾರಣಗಳಿಗಿಂತ ಮಹತ್ವದ್ದಾಗಿದೆ. ಮೊದಲನೆಯದಾಗಿ ಇದು ಈ ಹಿಂದೆ ಶರದ್ ಜೋಷಿಯವರ ಶೇತ್ಕರಿ ಸಂಘಟನೆ ಮಾಡುತ್ತಿದ್ದ ರೈತ ರ್‍ಯಾಲಿಗಳಿಗಿಂತ ಭಿನ್ನವಾಗಿರುವ ಭರವಸೆಯನ್ನು ನೀಡುತ್ತಿದೆ. ಶರದ್ ಜೋಷಿಯವರ ಶೇತ್ಕರಿ ಸಂಘಟನೆಯು ಇಂಡಿಯಾ ಮತ್ತು ಭಾರತದ ನಡುವಿನ ಎರಡು ತದ್ವಿರುದ್ಧ ವೈರುಧ್ಯಗಳನ್ನು ಪರಿಕಲ್ಪಿಸಿಕೊಂಡು ರೈತರನ್ನು ಸಂಘಟಿಸುತ್ತಿತ್ತು. ನಗರದ ಮಧ್ಯಮವರ್ಗವನ್ನು ತೀವ್ರವಾಗಿ ವಿಮರ್ಶಿಸುತ್ತಿದ್ದ ಜೋಷಿಯವರು, ಈ ವರ್ಗದ ಕೊಳ್ಳುಬಾಕ ಜೀವನ ಶೈಲಿಗಾಗಿ ಗ್ರಾಮೀಣ ಪ್ರದೇಶದ ದುಡಿಯುವ ಮತ್ತು ಉಳುವ ರೈತಾಪಿ ಜನರು ತ್ಯಾಗವು ಸಬ್ಸಿಡಿಯನ್ನು ಒದಗಿಸುತ್ತಿದೆ ಎಂದು ವಾದಿಸುತ್ತಿದ್ದರು. ಆದರೆ ಎಐಕೆಎಸ್‌ಸಿಸಿಯು ಈ ಧೃವೀಕೃತ ವೈರುಧ್ಯದಿಂದ ಹೊರಬಂದು ರೈತರ ಈ ಸಂಘಟನೆಗೆ ನಗರದ ಮಧ್ಯಮವರ್ಗದ ಬೆಂಬಲವನ್ನೂ ಬೆಂಬಲವನ್ನೂ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ರ್‍ಯಾಲಿಯು ಹಲವಾರು ವರ್ಗಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ. ವಿದ್ಯಾರ್ಥಿಗಳು, ಕಲಾವಿದರು, ಸಿನಿಮಾ ನಿರ್ಮಾಪಕರು, ಮಾಹಿತಿ ತಂತ್ರಜ್ನಾನ ಕ್ಷೇತ್ರದ ವೃತ್ತಿಪರರು ಮತ್ತು ಟೆಕ್ಕಿಗಳು ಹಾಗೂ ಬ್ಯಾಂಕ್ ಉದ್ಯೋಗಿಗಳು ಸಹ ಈ ರೈತ ರ್‍ಯಾಲಿಯನ್ನು ಬೆಂಬಲಿಸುತ್ತಿದ್ದಾರೆ. ರೈತರಿಗೆ ದಕ್ಕುತ್ತಿರುವ ಈ ಬಹುವರ್ಗೀಯ ಬೆಂಬಲವು ೨೦೧೮ರ ಮಾರ್ಚ್‌ನಲ್ಲಿ ನಡೆದ ನಾಸಿಕ್ ನಿಂದ ಮುಂಬೈವರೆಗಿನ ಐತಿಹಾಸಿಕ ರೈತ ನಡಿಗೆಯಲ್ಲಿ ಸ್ಪಷ್ಟವಾಗಿಯೇ ಅಭಿವ್ಯಕ್ತಗೊಂಡಿತ್ತು.

ಎರಡನೆಯದಾಗಿ ಸರ್ಕಾರವು ಕೃಷಿ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಒಂದು ವಿಶೇಷ ಅಧಿವೇಶನವನ್ನು ಕರೆಯಬೇಕೆಂಬ ಆಗ್ರಹದಲ್ಲಿ ನ್ಯಾಯೋಚಿತವಾದ ಅಂಶವಿದೆ. ಏಕೆಂದರೆ ಸರ್ಕಾರವು ಮುಂದಿಡುತ್ತಿರುವ ವಾದಗಳು (ಅಂಥ ವಾದವೇನಾದರೂ ಇದ್ದ ಪಕ್ಷದಲ್ಲಿ!) ಸತ್ಯಕ್ಕೆ ಹತ್ತಿರವಾಗಿದೆಯೋ ಅಥವಾ ಸುಳ್ಳಿಗೋ ಎಂದು ಸಾಬೀತುಪಡಿಸಲು ರೈತರು ಸರ್ಕಾರಕ್ಕೆ ಒಂದು ಅವಕಾಶವನ್ನು ಕೊಡುತ್ತಿದ್ದಾರೆ. ಮೂರನೆಯೆದಾಗಿ ಈ ಬಿಕ್ಕಟ್ಟನ್ನು ಚರ್ಚಿಸಲು ಬೇಕಾದ ತಾರ್ಕಿಕ ಮತ್ತು ಪರಿಕಲ್ಪನಾತ್ಮಕ ಹಿನ್ನೆಲೆಯನ್ನು ರೈತಾಪಿಯೇ ಮುಂದಾಗಿ ಒದಗಿಸಿದ್ದಾರೆ. 

ಅಂತಿಮವಾಗಿ, ಈ ದೇಶವು ಸಾಂಕೇತಿಕವಾಗಿ ಮಾತ್ರ ತಮ್ಮದೆಂದು ತೋರಿದರೂ ವಾಸ್ತವದಲ್ಲಿ ಅದು ಕಾರ್ಪೊರೇಟ್ ಹಿತಾಸಕ್ತಿಗಳಿಗೇ ಸೇರಿದೆಯೆಂಬ ಇಂಗಿತವನ್ನು ರೈತಾಪಿಯು ಈ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಇದು ಭೂಮಿ, ನೀರು, ಅರಣ್ಯ, ಮತ್ತು ಖನಿಜಗಳಂಥ ಕೃಷಿ ಸಂಪನ್ಮೂಲಗಳ ಹೆಚ್ಚುತ್ತಿರುವ ಖಾಸಗೀಕರಣದಲ್ಲಿ ಸ್ಪಷ್ಟಗೊಳ್ಳುತ್ತಲೇ ಇದೆ. ಸರ್ಕಾರದ ಸಹಕಾರದೊಂದಿಗೆ ಖಾಸಗಿ ಕಂಪನಿಗಳು ಹಣಕಾಸು, ಬೀಜ, ಗೊಬ್ಬರ ಮತ್ತು ಮಾರುಕಟ್ಟೆಯ ಮೇಲೆ ತಮ್ಮ ನಿಯಂತ್ರಣವನ್ನು ಹೆಚ್ಚಿಸಿಕೊಳ್ಳುತಾ ಕೃಷಿಯ ಮೇಲೆ ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಿದ್ದಾರೆ. ಈ ರ್‍ಯಾಲಿಯು ರೈತಾಪಿಯು ಮತ್ತಷ್ಟು ಭರವಸೆಯೊಂದಿಗೆ ತಮ್ಮ ಬದುಕನ್ನು ತಾವು ರೂಪಿಸಿಕೊಳ್ಳುವ ವಿಷಯದಲ್ಲಿ ಮಾತ್ರವಲ್ಲದೆ  ರೈತಾಪಿಯು ಹತಾಷವಾಗಿ ಆತ್ಮಹತ್ಯೆ ಮಾಡಿಕೊಳ್ಳದಂಥ ಪರಿಸ್ಥಿತಿಯನ್ನು ನಿರ್ಮಿಸುವ ಮೂಲಕ ದೇಶದ ಘನತೆಯನ್ನು ಹೆಚ್ಚಿಸುವ ಮಹತ್ವದ ವಿಷಯದಲ್ಲೂ ರೈತಾಪಿಯನ್ನು ಪರಿಗಣಿಸಲೇ ಬೇಕೆಂಬ ವಾಸ್ತವವನ್ನು ಆಳುವವರ್ಗಗಳಿಗೆ ಮನವರಿಕೆ ಮಾಡಿಕೊಡುವ ಉದ್ದೇಶವನ್ನೂ ಹೊಂದಿದೆ. ಹೀಗಾಗಿ ಕೃಷಿ ಬಿಕ್ಕಟ್ಟನ್ನು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಬೇಕೆಂಬ ಆಗ್ರಹವು ಕೃಷಿ ಬಿಕ್ಕಟ್ಟನ್ನು ನಿವಾರಿಸುವಲ್ಲಿ ಸರ್ಕಾರವು ತನ್ನ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆಯೆಂಬ ಸಂದೆಶವನ್ನು ಕೊಡುತ್ತಿದೆಯಲ್ಲದೆ ಒಂದುವೇಳೆ ಸಂಸತ್ತಿನಲ್ಲಿ ಚರ್ಚೆ ನಡೆದಿದ್ದೇ ಆದಲ್ಲಿ ಸರ್ಕಾರದ ಹೊಣೆಗಾರಿಕೆಯನ್ನು ಸಹ ನಿಗದಿ ಪಡಿಸಲಿದೆ.

Back to Top