ISSN (Print) - 0012-9976 | ISSN (Online) - 2349-8846

ಇಂಧನದ ಬೆಲೆಗಳು ಹತ್ತಿ ಉರಿಯುತ್ತಿರುವಾಗ

ಜಾಗತಿಕ ಕಚ್ಚಾತೈಲದ ಬೆಲೆಗಳಲ್ಲಿನ ಏರುಪೇರುಗಳಿಗಿಂತ ಸರ್ಕಾರದ ವಿಕೃತ ನೀತಿಗಳಿಂದಾಗಿಯೇ ಗ್ರಾಹಕರು ದುಬಾರಿ ಬೆಲೆಯನ್ನು ತೆರುವಂತಾಗಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಇಂಧನದ ಬೆಲೆಗಳು ದೇಶದಲ್ಲಿ  ಒಂದೇ ಸಮನೆ ಏರುತ್ತಿರುವುದು ಏನನ್ನು ಸೂಚಿಸುತ್ತದೆ? ಅದು ಬೆಲೆಏರಿಕೆಯಿಂದಾಗಿ ಬವಣೆ ಬೀಳುತ್ತಿರುವವ ಜನಸಾಮಾನ್ಯರ ಪರಿಸ್ಥಿತಿಯ ಬಗ್ಗೆ ಆಳುವ ಸರ್ಕಾರಕ್ಕಿರುವ ನಿರ್ಲಕ್ಷ್ಯವನ್ನೇ ಎತ್ತಿತೋರಿಸುತ್ತದೆ. ಇಂಧನದ ಬೆಲೆ ಏರಿಕೆಯ ವಿರುದ್ಧ ವಿರೋಧ ಪಕ್ಷಗಳು ದೇಶವ್ಯಾಪಿ ಮುಷ್ಕರವನು ನಡೆಸಿದ ನಂತರದಲ್ಲಿ ಕೇಂದ್ರ ಸರ್ಕಾರವು ಇಂಧನದ ಬೆಲೆಯನ್ನು ಇಳಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳ ಹೆಗಲಿಗೆ ವರ್ಗಾಯಿಸಿದೆ. ಇದಾದ ನಂತರ ಇಂಧನದ ಬೆಲೆಗಳನ್ನು ರಾಜಾಸ್ಥಾನದ ಸರ್ಕಾರವು ಲೀಟರಿಗೆ ರೂ.೨.೫೦ ಯಷ್ಟು ಮತ್ತು ಆಂಧ್ರಪ್ರದೇಶ ಸರ್ಕಾರವು ರೂ.೨ರಷ್ಟು ಇಳಿಸಿರುವುದನ್ನು ಬಿಟ್ಟರೆ ಈವರೆಗೆ ಉಳಿದ ಯಾವ ರಾಜ್ಯ ಸರ್ಕಾರಗಳು ಬೆಲೆಗಳಲ್ಲಿ ಕಡಿತ ಮಾಡಿಲ್ಲ. ಇಷ್ಟಾದರೂ ಇಂಧನದ ಬೆಲೆಗಳು ರೂ.೮೧-೮೩ ಮತ್ತು ರೂ. ೮೫-೮೭ರ ಆಸುಪಾಸಿನಲ್ಲೇ ತೂಗಾಡುತ್ತಿವೆ. ಇಡೀ ದೇಶದಲ್ಲೇ ಇಂಧನದ ಮೇಲೆ ಅತಿ ಹೆಚ್ಚು ವ್ಯಾಟ್ ತೆರಿಗೆಯನ್ನು ವಿಧಿಸುವ ಮುಂಬೈನಲ್ಲಿ ಇಂಧನದ ಬೆಲೆ ರೂ.೯೦ ನ್ನು ಮುಟ್ಟಿದೆ.

೨೦೧೦ ಮತ್ತು ೨೦೧೪ರಲ್ಲಿ ಇಂಧನದ ಬೆಲೆಗಳನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸಲಾಯಿತು. ಆದರೆ ಅದರಿಂದಾಗಿ ಜಾಗತಿಕವಾಗಿ ತೈಲ ಬೆಲೆಗಳು ಇಳಿದಾಗ ಅದರ ಲಾಭವು ಗ್ರಾಹಕರಿಗೆ ಸಿಗುವಂತಾಗಿದ್ದರೆ ಈಗಿನಂತೆ ಜಾಗತಿಕ ಬೆಲೆಗಳು ಏರಿದಾಗ ಅದರ ಹೊರೆಯನ್ನು ಹೊರುವುದರಲ್ಲಿ ಅರ್ಥವಿರುತ್ತಿತ್ತು. ಆದರೆ ವಾಸ್ತವವು ಅದಕ್ಕೆ ತದ್ವಿರುದ್ಧವಾಗಿದೆ. ಒಂದು ಅಂದಾಜು ಲೆಕ್ಕಾಚಾರದಂತೆ  ಇಂಧನದ ಮಾರಾಟ ಬೆಲೆಯ ಶೇ.೫೦ರಷ್ಟಾಗುವ ಕೇಂದ್ರದ ಎಕ್ಸೈಸ್ ತೆರಿಗೆ ಮತ್ತು ರಾಜ್ಯಗಳ ವ್ಯಾಟ್ ತೆರಿಗೆಗಳು ಮತ್ತು ಶೇ. ೯ರಷ್ಟು ಡೀಲರ್‌ಗಳ ಕಮಿಷನ್ನನ್ನು ಸೇರಿಸಿದ ನಂತರದಲ್ಲಿ ಗ್ರಾಹಕರು ಇಂಧನದ ಅಸಲಿ ಬೆಲೆಯ (ಇಂಧನದ ಬಿಡಿ ಮಾರಾಟಗಾರರು ಡೀಲರಿಗೆ ಕೊಡುವ ಬೆಲೆಗಿಂತ) ಎರಡು ಪಟ್ಟು ಬೆಲೆಯನ್ನು ತೆರುತ್ತಾರೆ ಎಂಬುದು ಗೊತ್ತಾಗುತ್ತದೆ. ಗ್ರಾಹಕರ ಮೇಲೆ ಬೀಳುವ ಈ ತೆರಿಗೆ ಮತ್ತು ಸುಂಕಗಳ ಹೊರೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿದಾಗ (೨೦೧೪ರ ಸೆಪ್ಟೆಂಬರ್ ನಂತರದಲ್ಲಿ ಪ್ರಥಮ ಬಾರಿಗೆ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ ೮೦ ಡಾಲರಷ್ಟಾಗಿದೆ) ಗ್ರಾಹಕರು ದುಬಾರಿ ಬೆಲೆ ತೆರಬೇಕಾಗುವುದು ಒಂದೆಡೆಯಾದರೆ ಮತ್ತೊಂದೆಡೆ ಅದೇ ವ್ಯವಸ್ಥೆಯೇ  ಜಾಗತಿಕ ಕಚ್ಚಾ ತೈಲದ ಬೆಲೆ ಇಳಿದಾಗ ಅದರ ಲಾಭವು ಗ್ರಾಹಕರಿಗೆ ಸಿಗದಂತೆ ತಡೆಗಟ್ಟುತ್ತದೆ. ೨೦೧೪ರ ಸೆಪ್ಟೆಂಬರ್ ಮತ್ತು ೨೦೧೬ರ ಜನವರಿ ನಡುವೆ ಜಾಗತಿಕ ಕಚ್ಚಾ ತೈಲದ ಬೆಲೆ ಎಂದಿಗೂ ಬ್ಯಾರೆಲ್‌ಗೆ ೬೦ ಡಾಲರ್‌ನ ಗಡಿ ದಾಟಿರಲಿಲ್ಲ. ಆದರೂ ಆ ಅವಧಿಯಲ್ಲೇ ಕೇಂದ್ರ ಸರ್ಕಾರವು ಎಕ್ಸೈಸ್ ಸುಂಕವನ್ನು ಒಂಭತ್ತು ಬಾರಿ ಹೆಚ್ಚಿಸಿತ್ತು. ಇದರಿಂದಾಗಿ ಸಾಧಾರಣ ಪೆಟ್ರೋಲಿನ ಮೇಲಿನ ಸುಂಕ ಶೇ.೧೫೦ರಷ್ಟು ಅಂದರೆ ಲೀಟರೊಂದಕ್ಕೆ ರೂ.೧೯.೪೮gಷ್ಟು ಹೆಚ್ಚಾಯಿತು ಮತ್ತು ಡೀಸೆಲ್ಲಿನ ಮೇಲೆ ಶೇ.೩೩೦ರಷ್ಟು ಅಂದರೆ ರೂ. ೧೫.೫೩ರಷ್ಟು ಸುಂಕವು ಹೆಚ್ಚಾಯಿತು. ಇಂಧನ ಸುಂಕದ ಬಾಬತಿನಲ್ಲಿ ೨೦೧೪-೧೫ರಲ್ಲಿ ಕೇಂದ್ರ ಸರ್ಕಾರವು ಕೇವಲ ೯೯,೦೦೦ ಕೋಟಿ ರೂಗಳನ್ನು ಮಾತ್ರ ಸಂಗ್ರಹಿಸಿತ್ತು. ಆದರೆ ೨೦೧೬-೧೭ರಲ್ಲಿ ಈ ರೀತಿ ಸುಂಕವನ್ನು ಹೆಚ್ಚಿಸಿದ ಕಾರಣದಿಂದ ಕೇಂದ್ರವು ೨,೪೨,೦೦೦ ಕೋಟಿ ರೂ.ಗಳನ್ನು ಬಾಚಿಕೊಂಡಿತ್ತು. ಹೀಗಾಗಿ  ಇಂಧನದ ಬೆಲೆಯನ್ನು ಹೆಚ್ಚಿಸಿದ್ದರಿಂದ ಜನರ ಜೋಬು ಖಾಲಿಯಾದರೂ ಸರ್ಕಾರಿ ಖಜಾನೆ ಮಾತ್ರ ಖಂಡಿತಾ ಭರ್ತಿಯಾಗಿದೆ.

೨೦೧೯ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸುಲಭವಾಗಿ ಆದಾಯ ತರುತ್ತಿರುವ ಈ ಮಾರ್ಗವನ್ನು ಸರ್ಕಾರವು ಬಿಟ್ಟುಕೊಡಲಾರದು. ಒಂದು ಕಡೆ ರೂಪಾಯಿಯ ಬೆಲೆಯು ಕುಸಿಯುತ್ತಿರುವುದರಿಂದ ತೈಲ ಆಮದಿನ ವೆಚ್ಚ ಗಗನ ಮುಟ್ಟುತ್ತಿದೆ ಮತ್ತೊಂದು ಕಡೆ ಹೊಸದಾಗಿ ಜಾರಿಯಾಗಿರುವ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಇನ್ನೂ ಹಲವಾರು ಲೋಪದೋಷಗಳಿರುವುದರಿಂದ ತೆರಿಗೆ ಸಂಗ್ರಹವು ಹೆಚ್ಚುವುದರ ಬಗ್ಗೆಯೂ ಖಾತರಿಯಿಲ್ಲ. ಇಂಥಾ ಸಂದರ್ಭದಲ್ಲಿ ಇಂಧನದ ಮೇಲಿನ ಸುಂಕ/ತೆರಿಗೆಗಳನ್ನು ಕಡಿಮೆ ಮಾಡಿದರೆ ಅದು ಸರ್ಕಾರದ ವಿತ್ತೀಯ ಆದಾಯದ ಮೇಲೆ ಪರಿಣಾಮ ಬೀರಿ ಜನಪ್ರಿಯ ಜನಕಲ್ಯಾಣ ಯೋಜನೆಗಳಿಗೆ ಕತ್ತರಿ ಹಾಕಬೇಕಾಗುತ್ತದೆ. ಹಲವಾರು ಬಿಜೆಪಿ ಶಾಸಿತ ರಾಜ್ಯಗಳು ಜನರ ಒಲವನ್ನು ಪಡೆದುಕೊಳ್ಳುವ ಸಲುವಾಗಿ ಘೋಷಿಸಿರುವ ಜನಪ್ರಿಯ ಸಾಲ ಮನ್ನಾ ಯೋಜನೆಗಳಿಂದಾಗಿ ತಮ್ಮ ಬೊಕ್ಕಸವನ್ನು ಇತರ ಮೂಲಗಳಿಂದ ತುಂಬಿಕೊಳ್ಳಲೇ ಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿವೆ. ಹೀಗಾಗಿ ಅವು ಇಂಧನದ ಮೇಲಿನ ವ್ಯಾಟ್ ತೆರಿಗೆಯ ಭಾರವನ್ನು ಇಳಿಸುವ ಸಂಭವವಿಲ್ಲ. 

ಆದರೂ ಏರುತ್ತಿರುವ ಇಂಧನದ ಬೆಲೆಗಳಿಂದಾಗಿ ಮತದಾರರು ತಮ್ಮ ಬಗ್ಗೆ ಅಸಮಾಧಾನಗೊಳ್ಳುವ ಬಗ್ಗೆ ಸರ್ಕಾರಗಳಿಗೆ ದಿಗಿಲಿದೆ. ಆದರೆ ಕರ್ನಾಟಕದ ಚುನಾವಣಾ ಸಂದರ್ಭದಲ್ಲಿ (ಏಪ್ರಿಲ್-ಮೇ) ಮಾಡಿದಂತೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಇಂಧನದ ಬೆಲೆಯನ್ನು ಪ್ರತಿದಿನವೂ ಪರಿಷ್ಕರಿಸುವುದನ್ನು ಕೈಬಿಡುವುದು ಹಳೆಯ ತಂತ್ರವಾಗಿದ್ದು, ಚುನಾವಣೆ ಮುಗಿದ ಕೂಡಲೇ ಇಂಧನದ ಬೆಲೆಯು ತೀವ್ರ ಏರಿಕೆಯಾಗುವುದರಿಂದ ಭವಿಷ್ಯದಲ್ಲಿ ಈ ತಂತ್ರ ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ. ಬದಲಿಗೆ ಅಂಥಾ ತಂತ್ರಗಳು ಸರ್ಕಾರದ ಅಸಲಿ ಗುಟ್ಟುಗಳನ್ನು ಬಯಲಿಗೆಳೆಯುವ ಸಾಧ್ಯತೆಯೇ ಹೆಚ್ಚು. ಈ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಳಾ  ಪ್ರತಿದಿನದ ಬೆಲೆಯನ್ನು ಹೇಗೆ ನಿಗದಿ ಮಾಡಲಾಗುತ್ತದೆ? ಇಂಧನದ ಬೆಲೆಯನ್ನು ತೈಲ ಕಂಪನಿಗಳನ್ನು ಹೇಗೆ ನಿಗದಿ ಮಾಡುತ್ತವೆಂಬ ಬಗ್ಗೆ ದಾಖಲೆಗಳನ್ನು ಒದಗಿಸಲು ಕೋರಿ ಹಾಕಿದ್ದ ಮನವಿಯೊಂದನ್ನು ಈ ವಾರ ದೆಹಲಿಯ ಹೈಕೋರ್ಟು ವಜಾ ಮಾಡಿದೆ. ಇಂಧನದ ಬೆಲೆ ನಿಗದಿಯ ಸುತ್ತಾ ಇಷ್ಟು ನಿಗೂಢತೆಯಿರುವಾಗ ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ ಅನುದಿನದ ಬೆಲೆ ಪರಿಷ್ಕರಣೆಯನ್ನು ನಿಲ್ಲಿಸಿದ ಕಾರಣಕ್ಕೆ ತೈಲ ಕಂಪನಿಗಳಿಗೆ ಆದ ನಷ್ಟ ೫೦೦ ಕೋಟಿ ರೂ. ಎಂಬುದಾಗಲೀ, ತದನಂತರದಲ್ಲಿ ಅದನ್ನು ತುಂಬಿಕೊಳ್ಳಲು ಇಂಧನದ ಬೆಲೆಯನ್ನು ಎಷ್ಟು ಹೆಚ್ಚಿಸಬೇಕೆಂಬ ಲೆಕ್ಕಾಚಾರವನ್ನಾಗಲೀ ಮಾಡಿದ್ದು ಹೇಗೆ ಎಂಬುದೂ ಕೂಡಾ ನಿಗೂಢ ಸೋಜಿಗವಾಗಿದೆ. 

ಭಾರತದಲ್ಲಿ ಕಚ್ಚಾ ತೈಲವನ್ನಲ್ಲದೇ ಇಂಧನವನ್ನೇ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬ ರೀತಿಯಲ್ಲಿ ಇಂಧನದ ಬೆಲೆಯನ್ನು ನಿಗದಿ ಮಾಡಲಾಗುತ್ತದೆ. ಹಾಗೆ ನೋಡಿದರೆ ೨೦೧೭-೧೮ರಲ್ಲಿ ಭಾರತವು ೨೩೮೫.೮ ಕೋಟಿ ರೂಗಳಷ್ಟು ಇಂಧನವನ್ನು ರಫ್ತು ಮಾಡಿ ೭೪.೪ ಕೋಟಿ ರೂ.ಗಳಷ್ಟು ಇಂಧನವನ್ನು ಮಾತ್ರ ಆಮದು ಮಾಡಿಕೊಂಡಿತ್ತು. ಅಂದರೆ ಇಂಧನದ ರಫ್ತು ಪ್ರಮಾಣವು ಆಮದಿನ ಪ್ರಮಾಣಕ್ಕಿಂತ ೩೨ ಪಟ್ಟು ಹೆಚ್ಚಾಗಿತ್ತು. ಇದಕ್ಕೆ ಪ್ರಮುಖ ಕಾರಣ ನಮ್ಮ ತೈಲ ಪರಿಷ್ಕರಣ ಸಾಮರ್ಥ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿರುವುದು.ಆದರೆ ಇಂಧನ ಬೆಲೆಯ ಲೆಕ್ಕಾಚಾರಗಳು ತಪ್ಪು ಗ್ರಹಿಕೆಯಿಂದ ಕೂಡಿವೆ. ಅದರ ಲೆಕ್ಕಾಚಾರವನ್ನು  ತೈಲ ಸಂಸ್ಕರಣಾ ಬಾಗಿಲಲ್ಲಿ (ರಿಫೈನರಿ ಗೇಟ್ ಪ್ರೈಸ್) ತಗಲುವ ವೆಚ್ಚಗಳನ್ನು ಆಧರಿಸಿ ಮಾಡಲಾಗುತ್ತದೆ. ಅಂದರೆ ಭಾರತೀಯ ತೈಲ ತಯಾರಿಕಾ ಮತ್ತು ಸಂಸ್ಕರಣಾ ಕಂಪನಿಗಳು ಸಹ ತಮ್ಮ ಲಾಭ ನಷ್ಟಗಳ ಲೆಕ್ಕಾಚಾರವನ್ನು ತಾವು ಉತ್ಪಾದಿಸುವ ಇಂಧನಗಳ ವೆಚ್ಚವನ್ನು  ಆಮದು ಇಂಧನಕ್ಕೆ ತಗಲುವ ವೆಚ್ಚಕ್ಕೆ ಸರಿಸಮನಾಗಿ ಲೆಕ್ಕ ಹಾಕುತ್ತವೆ. ಇದರಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚ ತೈಲದ ಬೆಲೆಗಳು ಏರಿದಾಗಲೆಲ್ಲಾ ತೈಲ ತಯಾರಿಕಾ ಕಂಪನಿಗಳು ಅಪಾರ ಲಾಭವನ್ನು ಮಾಡಿಕೊಳ್ಳುತ್ತವೆ. ಈ ಲೆಕ್ಕಾಚಾರದಿಂದಾಗಿ ಕಚ್ಚಾತೈಲದ ಬದಲು ಸಿದ್ಧ ಇಂಧನವನ್ನೇ ಆಮದು ಮಾಡಿಕೊಂಡಿದ್ದರೆ ಎಷ್ಟು ಬೆಲೆ ತೆರಬೇಕಾಗಿತ್ತೋ ಅಷ್ಟು ಬೆಲೆಯನ್ನು ಪ್ರತಿಬಾರಿ ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಯಾದಾಗಲೆಲ್ಲಾ ಗ್ರಾಹಕರು ತೆರುತ್ತಲೇ ಇದ್ದಾರೆ. ಹೀಗಾಗಿ ಸಂಭಾವ್ಯ ಲಾಭ ಅಥವಾ ನಷ್ಟಗಳು ವಾಸ್ತವ ಲಾಭ ಅಥವಾ ನಷ್ಟಗಳಿಗಿಂತ ಹೆಚ್ಚಾಗಿಯೇ ಅಂದಾಜಾಗುತ್ತವೆ. ಹಾಗೂ ಬಹಳಷ್ಟು ಬಾರಿ ಸಂಭಾವ್ಯತೆಯನ್ನೇ ವಾಸ್ತವವೆಂದು ಪರಿಗಣಿಸಲಾಗುತ್ತದೆ.

ಭಾರತದಲ್ಲಿ ಇಂಧನ ಬೆಲೆಯ ನಿಗದಿಯೆಂಬುದು ಆರ್ಥಿಕ ಕಸರತ್ತಿಗಿಂತ ಒಂದು ರಾಜಕೀಯ ಹೇಳಿಕೆಯಾಗಿದೆ. ೨೦೧೪ರಲ್ಲಿ ಉದ್ಯಮಿ ಸ್ನೇಹಿ ಧೋರಣೆಯನ್ನು ಅಳವಡಿಸಿಕೊಂಡು ಡೀಸೆಲ್ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಿದ ಅಧಿಕಾರ ರೂಢ ಎನ್‌ಡಿಎ ಸರ್ಕಾರವು ಈಗ ಚುನಾವಣೆಗೆ ಮುನ್ನ ತನ್ನ ವಿತ್ತೀಯ ಲೆಕ್ಕಾಚರವನ್ನು ಸರಿ ಇಟ್ಟುಕೊಳ್ಳಲು ತೈಲ ತಯಾರಿಕಾ ಕಂಪನಿಗಳ ಲಾಭದ ಮೇಲೆ ದೊಡ್ದ ಮಟ್ಟದ ತೆರಿಗೆಯನ್ನು ವಿಧಿಸುತ್ತಿದೆ. ಒಂದು ಬ್ಯಾರೆಲ್ ತೈಲಕ್ಕೆ ೭೦ ಡಾಲರ್‌ಗಿಂತ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವುದರ ಮೇಲೆ ಈಗ ತೆರಿಗೆ ವಿಧಿಸಲಾಗಿದೆ; ಆದರೆ ಈ ತೆರಿಗೆ ವಿಧಿಸಲು ಸರ್ಕಾರವು ಈ ಪ್ರಮಾಣವನ್ನು ಹೇಗೆ ನಿಗದಿ ಮಾಡಿತೆಂಬುದು ಸ್ಪಷ್ಟವಾಗಿಲ್ಲ. ಆದರೆ ಸರ್ಕಾರ ಮತ್ತು ಕಂಪನಿಗಳ ನಡುವೆ ಲಾಭ ಹಂಚಿಕಾ ಸೂತ್ರವಿದ್ದರೂ ಅದರ ಜೊತೆಜೊತೆಗೆ ಈ ಅಧಿಕ ತೆರಿಗೆUಳನ್ನು ಹೇರಲಾಗುತ್ತಿದೆ. ಇದರಿಂದಾಗಿ ತೈಲ ಉದ್ದಿಮೆಗೆ ಅತ್ಯಗತ್ಯವಾಗಿರುವ ದೇಶಿ ಮತ್ತು ವಿದೇಶಿ ತೈಲ ಸಂಶೋಧನಾ ಚಟುವಟಿಕೆಗಳಿಗೆ ಬೇಕಾದ ಸಂಪನ್ಮೂಲವನ್ನು ಒದಗಿಸಲು ಕಷ್ಟವಾಗುತ್ತದೆಂಬ ಕಾರಣವನ್ನು ಮುಂದೊಡ್ಡಿ ಸರ್ಕಾರದ ಈ ನೀತಿಗಳ ಬಗ್ಗೆ ತೈಲ ಕಂಪನಿಗಳಲ್ಲಿ ಅಸಮಾಧಾನ ಏರ್ಪಟ್ಟಿದೆ. ಹೀಗೆ ಭಾರತದ ಇಂಧನ ಕ್ಷೇತ್ರ ಸಿಕ್ಕುಸಿಕ್ಕಾದ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡಂತಾಗಿದೆ. 

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top