ISSN (Print) - 0012-9976 | ISSN (Online) - 2349-8846

ಔಷಧಿಗಳ ಬೆಲೆ ಎಟುಕವಷ್ಟಿರಬೇಕು ಮತ್ತು ಎಲ್ಲೆಡೆ ದೊರಕಬೇಕು

ಔಷಧಿಗಳ ಸರಬರಾಜನ್ನು ಸರಿಯಗಿ ನಿರ್ವಹಿಸದೆ ಕೇವಲ ಅವುಗಳ ಬೆಲೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವ ತಂತ್ರದಿಂದ ಮಾತ್ರ ಔಷಧಿಗಳ ಲಭ್ಯತೆಯನ್ನು ಖಾತರಿ ಮಾಡಲಾಗುವುದಿಲ್ಲ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಭಾರತದಲ್ಲಿನ ಆರೋಗ್ಯ ವ್ಯವಸ್ಥೆಯು ಹೆಚ್ಚೆಚ್ಚು ಖಾಸಗೀಕರಣಗೊಳ್ಳುತ್ತಿದೆ. ಇದರಿಂದಾಗಿ ಒಟ್ಟಾರೆ ಆರೋಗ್ಯ ವೆಚ್ಚದ ಬಾಬತ್ತಿನಲ್ಲಿ ಸ್ವಂತ ಜೇಬಿನಿಂದ ಮಾಡುವ ವೆಚ್ಚ (ಔಟ್ ಆಫ್ ಪಾಕೆಟ್-ಒಒಪಿ) ಹೆಚ್ಚಾಗುತ್ತಿದೆ. ಈ ಕಾರಣದಿಂದ ಬಡವರಿಗೆ ಮತ್ತು ಇತರ ಅತಂತ್ರ ವರ್ಗಗಳಿಗೆ ಆರೋಗ್ಯ ರಕ್ಷಣೆಯ ವ್ಯವಸ್ಥೆ ಎಟುಕದಾಗಿದೆ. ಒಂದೋ ಅವರು ಆ ಏರುತ್ತಿರುವ ವೆಚ್ಚಗಳನ್ನು ಭರಿಸಲಾಗುತ್ತಿಲ್ಲ ಅಥವಾ ಅನಿವಾರ್ಯವಾಗಿ ಭರಿಸಲಸಾಧ್ಯವಾದ ವೆಚ್ಚಗಳನ್ನು ಮಾಡಿ ಮತ್ತಷ್ಟು ಬಡತನಕ್ಕೆ ದೂಡಲ್ಪಡುತ್ತಿದ್ದಾರೆ. ಆರೋಗ್ಯ ಸಂಬಂಧೀ ವೆಚ್ಚಗಳಲ್ಲಿ ಔಷಧಿ ಮತ್ತಿತರ ರೋಗ ನಿವಾರಣಾ ವೆಚ್ಚಗಳ ಪಾಲು ಹೆಚ್ಚುತ್ತಿರುವುದರಿಂದಲೇ ಕುಟುಂಬಗಳು ಮಾಡುವ ವೆಚ್ಚದಲ್ಲಿ ಆರೋಗ್ಯ ಸಂಬಂಧೀ ವೆಚ್ಚಗಳ ಪಾಲು ಸಹ ಹೆಚ್ಚಾಗುತ್ತಿದೆ. ಒಟ್ಟಾರೆ ಆರೋಗ್ಯ ಸಂಬಂಧೀ ವೆಚ್ಚಗಳಲ್ಲಿ ಶೇ.೪೦ ಭಾಗ ವೆಚ್ಚವು ಮತ್ತು ಸ್ವಂತ ಜೇಬಿನಿಂದ ಮಾಡುವ ವೆಚ್ಚದಲ್ಲಿ (ಒಒಪಿ)ಅರ್ಧಕ್ಕಿಂತ ಹೆಚ್ಚು ಭಾಗದಷ್ಟು ವೆಚ್ಚಗಳು ಔಷಧಿ ಮತ್ತು ರೋಗ ಪರಿಹಾರ ವೆಚ್ಚಗಳೇ ಆಗಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ೨೦೧೩ರಲ್ಲಿ ಜಾರಿ ಮಾಡಿದ ಔಷಧಿ ಬೆಲೆ ನಿಯಂತ್ರಣ ಆದೇಶ ಮತ್ತು ಜನೌಷಧಿ ಕೇಂದ್ರಗಳನ್ನು ಹೆಚ್ಚಿಸುವ ಮೂಲಕ ಜನರಿಕ್ ಔಷಧಿಯನ್ನು ವಿಸ್ತರಿಸುವ ಕ್ರಮಗಳು ಸ್ವಾಗತಾರ್ಹವಾಗಿವೆ. ಆದರೆ ಇವು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದು ಮಾತ್ರ ಚರ್ಚಾರ್ಹ ವಿಷಯವಾಗಿದೆ.

ಅವಶ್ಯಕ ಔಷಧಿಗಳ ಬೆಲೆ ನಿಯಂತ್ರಣದ ವಿಷಯದ ಬಗ್ಗೆ ಕೇಂದ್ರದಲ್ಲಿ ಆಳ್ವಿಕೆ ಮಾಡಿರುವ ಈ ಹಿಂದಿನ ಸರ್ಕಾರಗಳೂ ಕಾಳಜಿ ವ್ಯಕ್ತಪಡಿಸಿದ್ದವು. ಆದರೆ ವಿವಿಧ ಸರ್ಕಾರಗಳು ವಿವಿಧ ಸಂದರ್ಭಗಳಲ್ಲಿ ಕೊಟ್ಟ ಭರವಸೆಗಳನ್ನೇ ಪದೇಪದೇ ಪುನರುಚ್ಚಾರ ಮಾಡುವುದನ್ನು ಬಿಟ್ಟರೆ ಬಡವರಿಗೆ ಅಗ್ಗದ ದರದಲ್ಲಿ ಔಷಧಿಗಳು ದೊರಕುವಂತೆ ಮಾಡುವ ಯಾವುದೇ ಶಾಸನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಈವರೆಗೆ ರಾಜ್ಯ ಸರ್ಕಾರಗಳೇ ಕೆಲವು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಂಡಿರುವುದು ಮತ್ತು ಕೇಂದ್ರ ಸರ್ಕಾರವು ನ್ಯಾಷನಲ್ ಹೆಲ್ತ್ ಮಿಷನ್ (ರಾಷ್ಟ್ರೀಯ ಆರೋಗ್ಯ ಮಿಷನ್)ನ ಮೂಲಕ ಉಚಿತ ಔಷಧಿ ಮತ್ತು ರೋಗಪತ್ತೆ (ಡಯಾಗ್ನಸ್ಟಿಕ್ ಸರ್ವೀಸ್) ಸೇವೆಗಳನ್ನು ಒದಗಿಸುವ ಮೂಲಕ ಅಲ್ಪಸ್ವಲ್ಪ ಉತ್ತೇಜನವನ್ನು ನೀಡಿರುವುದನ್ನು ಬಿಟ್ಟರೆ ಹೆಚ್ಚೇನೂ ಆಗಿಲ್ಲ. ಈ ನಿಟ್ಟಿನಲ್ಲಿ ಅನುಸರಿಸಲಾಗುತ್ತಿರುವ ನೀತಿಯ ಪ್ರಧಾನ ಒತ್ತಿರುವುದು ಬೆಲೆ ನಿಯಂತ್ರಣದ ಬಗ್ಗೆ ಮಾತ್ರ. ಆದರೆ ಈವರೆಗೆ ಈ ಬೆಲೆ ನಿಯಂತ್ರಣ ನೀತಿಯು ಅನ್ವಯವಾಗುತ್ತಿರುವುದು ಒಟ್ಟಾರೆ ಔಷದ ಮಾರುಕಟ್ಟೆಯ ಕಾಲುಭಾಗಕ್ಕಿಂತಲೂ ಕಡಿಮೆ ಪ್ರಮಾಣದ ಔಷಧಿಗಳಿಗೆ ಮಾತ್ರ. ಅಷ್ಟು ಮಾತ್ರವಲ್ಲ. ಈವರೆಗಿನ ಔಷಧಿ ಬೆಲೆ ನಿಯಂತ್ರಣ ನೀತಿಯ ಅನುಭವಗಳು ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಉದಾಹರಣೆಗೆ ೨೦೧೭ರ ನವಂಬರ್‌ನಲ್ಲಿ ಔಷಧಿ ಬೆಲೆ ನಿಯಂತ್ರಣ ಪ್ರಾಧಿಕಾರವು ಲಾಸಿಕ್ಸ್ ಎಂಬ ಹೆಸರಿನಲ್ಲಿ ಮಾರಟವಾಗುತ್ತಿದ್ದ ಮಕ್ಕಳ ಮೂತ್ರವಿಸರ್ಜನೆಯನ್ನು ನಿಯಂತ್ರಿಸುವ (ಡೈಯೂರಿಟಿಕ್) ಫ್ಯೂರೋಸಿಮೈಡ್ ಔಷಧಿಯ ಬೆಲೆಯನ್ನು ತಲಾ ೨೯ ಪೈಸೆಗೆ ನಿಗದಿಮಾಡಿತು. ಹೀಗಾಗಿ ಆ ಔಷಧಿಯ ಬೆಲೆಯು ೧೦೦-೧೧೦ ರೂಗಳಿಂದ ೧೦ ರೂ.ಗಳಿಗೆ ಇಳಿಸಲ್ಪಟ್ಟಿತು. ಆದರೆ ಇದನ್ನು ಉತ್ಪಾದಿಸುತ್ತಿದ್ದ ಉದ್ಯಮಿಗಳು ಪ್ರತೀಕಾರ ದೃಷ್ಟಿಯಿಂದ ಆ ಔಷಧಿಯ ಸರಬರಾಜನ್ನೆ ಕಡಿತ ಮಾಡಿಬಿಟ್ಟರು. 

ಭಾರತದ ಸ್ಥಳೀಯ ಔಷಧಿ ಮಾರುಕಟ್ಟೆಯ ರಚನೆಯೇ ಔಷಧಿ ಬೆಲೆ ನಿಯಂತ್ರಣಕ್ಕೆ ತೊಡಕನ್ನುಂಟುಮಾಡುವಂತಿದೆ. ಏಕೆಂದರೆ ಒಟ್ಟಾರೆ ಔಷಧಿ ವ್ಯಾಪಾರದ ಶೇ.೪೦ರಷ್ಟು ಮಾರುಕಟ್ಟೆಯನ್ನು ಕೇವಲ ೧೦ ಕಂಪನಿಗಳು ನಿಯಂತ್ರಿಸುತ್ತವೆ. ಇಂಥಾ ವ್ಯವಸ್ಥೆಯಲ್ಲಿ ಸರ್ಕಾರದ ಔಷಧಿ ಬೆಲೆ ನಿಯಂತ್ರಣ ಆದೇದಂತ ಕ್ರಮಗಳು ಬೆಲೆ ನಿಯಂತ್ರಣವನ್ನು ಸಾಧಿಸುವುದಕ್ಕಿಂತ ಬೆಲೆಯನ್ನು ಹಿಡಿತದಲ್ಲಿಟ್ಟುಕೊಂಡಿರುವವರ ಆಸಕ್ತಿಯನ್ನು ಕಾಯುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ಔಷಧದ ಬೆಲೆಯ ಮೇಲೆ ಆ ಬ್ರಾಂಡಿನ ಔಷಧ ಮಾರುಕಟ್ಟೆಯಲ್ಲಿ ಶೇ.೧ಕ್ಕಿಂತ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿರುವ ಬ್ರಾಂಡುಗಳ ಮಾರಾಟ ದರದ ಒಟ್ಟು ಸರಾಸರಿ ಬೆಲೆಯನ್ನು ಮೀರದಂತೆ ನಿರ್ಬಂಧ ಹೇರಲಾಗುತ್ತದೆ. ಆದರೆ ಆ ಔಷಧವನ್ನು ಉತ್ಪಾದಿಸುವ ಎಲ್ಲಾ ಕಂಪನಿಗಳೂ ತಮ್ಮೊಡನೆ ಒಪ್ಪಂದ ಮಾಡಿಕೊಂಡು ಔಷಧದ  ದರವನ್ನು ಒಮ್ಮೆಗೆ ಹೆಚ್ಚಿಸಿದರೆ ಸರಾಸರಿ ದರವೂ ಹೆಚ್ಚುವ ಮೂಲಕ ದರ ನಿಯಂತ್ರಣಕ್ಕೆ ಅರ್ಥವೇ ಇಲ್ಲದಂತಾಗುತ್ತದೆ. ಉದಾಹರಣೆಗೆ ಟೈಪ್-೨ ಡಯಾಬಿಟೀಸ್‌ಗಾಗಿ ಬಳಸುವ ಮೆಟಫಾರ್ಮಿನ್ ಔಷಧದ ದರವು ೧೯೯೫ರ ಔಷಧಿ ನಿಯಂತ್ರಣ ಆದೇಶದನ್ವಯ ನಿಗದಿಯಾದ ದರಕಿಂತ ಮೂರು ಪಟ್ಟು ಹೆಚ್ಚು ದರದಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿತ್ತು. ಆದರೆ ಅದರ ಮಾರುಕಟ್ಟೆ ದರವನ್ನು ಘೋಷಿಸಿದ್ದು ಮಾತ್ರ ಅದರ ಉತ್ಪಾದಕರೇ ಆಗಿದ್ದರು.

ಮತ್ತೊಂದು ಕಡೆ ಜೆನರಿಕ್ ಔಷದಿಗಳ ಸರಬರಾಜಿನಲ್ಲಿರುವ ಬಹಳಷ್ಟು ಕುಂದುಕೊರತೆಗಳು ಅದರ ಮಾರಾಟದ ಮೇಲೆ ಪರಿಣಾಮ ಬೀರುತ್ತವೆ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಯನ್ನು ಗಮನಿಸುವುದಾದರೆ ಸರಬರಾಜಿನ ದೋಷಗಳಿಂದಾಗಿ ಈಗಾಗಲೇ ಅಸ್ಥಿತ್ವದಲ್ಲಿರುವ ಜನರಿಕ ಔಷದಿಗಳ ಮಳಿಗೆಳ ನಿರ್ವಹಣೆ ಅತ್ಯಂತ ಅಸ್ತವ್ಯಸ್ತವಾಗಿವೆ. ಎಷ್ಟು ಔಷಧಿಗಳು ಬೇಕೆಂಬ ಮುಂದಂಜಾನಲ್ಲಿರುವ ಕೊರತೆ, ಪುರಾತನ ಕೊಳ್ಳಾಟದ ವ್ಯವಸ್ಥೆ, ಸಣ್ಣ ಮಾರುಕಟ್ಟೆ ಇವೇ ಇನ್ನಿತ್ಯಾದಿಗಳು ಜನರಿಕ್ ಔಷಧಗಳ ಮಾರಾಟ ವ್ಯವಸ್ಥೆಯಲ್ಲಿ ಹಲವು ತೊಡಕುಗಳನ್ನುಂಟುಮಾಡುತ್ತವೆ; ಹಾಗೆಯೇ ಜನರಿಕ್ ಔಷಧಿಗಳ ಗುಣಮಟ್ಟದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಬೇಡಿಕೆಯ ಮೇಲೆಯೇ  ಪರಿಣಾಮ ಬೀರುತ್ತದೆ. ಮತ್ತೊಂದು ಕಡೆ ಔಷಧಿ ದರ ನಿಯಂತ್ರಣದ ಬಹುಪಾಲು ಚಟುವಟಿಕೆಗಳು ರಾಜ್ಯ ಸರ್ಕಾರದಡಿ ಇರುವುದರಿಂದ ಅದರ ಅನುಷ್ಠಾನದಲ್ಲಿ ಸಮಾನ ಮತ್ತು ನಿರಂತರವಾದ ಮಾನದಂಡಗಳಿಲ್ಲ. ಇದಲ್ಲದೆ ಮಾರುಕಟ್ಟೆಯಲ್ಲಿ ಇರುವ ನಕಲಿ ಔಷದಗಳ ಪ್ರಮಾಣದ ಬಗ್ಗೆ ಗೊಂದಲ ಮತ್ತು ಗಾಬರಿ ಹುಟ್ಟಿಸುವಂತ ವರದಿಗಳಿವೆ. ಔಷಧ ಉತ್ಪಾದಕರ ಪ್ರಕಾರ ಮಾರುಕಟ್ಟೆಯಲ್ಲಿರುವ ಶೇ.೨೦ರಷ್ಟು ಔಷಧಿಗಳು ಕಳಪೆ ಗುಣಮ್ಮಟ್ಟದವು ಅಥವಾ ನಕಲಿ ಔಷಧಗಳು. ಸರ್ಕಾರದ ಪ್ರಕಾರ ಭಾರತದ ಒಟ್ಟಾರೆ ಔಷಧ ಮಾರುಕಟ್ಟೆಯಲ್ಲಿರುವ ಔಷಧಿಗಳಲ್ಲಿ ಶೇ.೧೦ರಷ್ಟು ಔಷಧಿಗಳು ನಕಲಿಯಾಗಿವೆ. ಅಷ್ಟು ಮಾತ್ರವಲ್ಲದೆ ಕಡಿಮೆ ದರದ ಔಷಧಗಳು ಕಳಪೆಯಾಗಿರುತ್ತವೆ ಎಂಬ ಜನರ ಗ್ರಹಿಕೆಯನ್ನು ನಿವಾರಿಸುವುದು ಸಹ ಅಷ್ಟು ಸುಲಭವಲ್ಲ.

 ಭಾರತದ ಸಾರ್ವತ್ರಿಕ ಆರೋಗ್ಯ ಸೇವಾ ನೀತಿ ಚೌಕಟ್ಟು ಸಮಾನತೆ, ಲಭ್ಯತೆ ಮತ್ತು ಎಟುಕುವ ದರದ ಮಾನದಂಡಗಳನ್ನು  ಆಧರಿಸಿದೆ; ಹಾಗೂ ಈ ನೀತಿಗಳನ್ನು ಅನುಷ್ಠಾನಕ್ಕೆ ತರುವಾಗ ಕೆಲವು ಬೆಲೆಯನ್ನು ತೆರಲೇ ಬೇಕಾಗುತ್ತದೆ. ಉದಾಹರಣೆಗೆ ಹಾಲಿ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ವಿಮೆ ಆಧಾರಿತ ಹಣಕಾಸು ಪೂರಣದ ಅಧಾರದಲ್ಲಿ ರೂಪಿತವಾಗಿರುವ ಸಾರ್ವತ್ರಿಕ ಆರೋಗ್ಯ ಸೇವಾ ಯೋಜನೆಯನ್ನು ಗಮನಿಸೋಣ. ಒಂದು ಕಡೆ ಈ ಯೋಜನೆಯು ಬಡವರಿಗೆ ಆರೋಗ್ಯ ಸೇವೆಯು ಲಭ್ಯವಾಗುವಂತೆ ಮಾಡಿದರೂ ಎಟುಕುವ ದರದ ಖಾತರಿಗೆ ಯಾವುದೇ ಕ್ರಮಗಳಿಲ್ಲ. ಇದಕ್ಕೆ ತಕ್ಕ ಹಾಗೆ ಸಾರ್ವಜನಿಕ ಆರೋಗ್ಯ ಸೇವಾ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ಮೂಲಕ ಆರೊಗ್ಯ ಸೇವೆಯ ಸರಬರಾಜನ್ನು ಖಾತರಿಗೊಳಿಸದಿರುವುದರಿಂದ ಈ ಯೋಜನೆಯು ಈಗಾಗಲೇ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಿರುವ ಖಾಸಗಿ ಕ್ಷೇತ್ರಕ್ಕೆ ಅನುಕೂಲಕಾರಿಯಾಗಬಹುದು. ಇಂಥಾ ಸಂದರ್ಭದಲ್ಲಿ ಬೆಲೆ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ, ಸಬರಾಜು ವ್ಯವಸ್ಥೆಯನ್ನು ಸುಧಾರಿಸುವ, ಮತ್ತು ಔಷಧಿ ಮಾರುಕಟ್ಟೆಯನ್ನು ಸರಿಯಾಗಿ ಗ್ರಹಿಸುವ ಮೂಲಕ ಮಾತ್ರ ಬೆಲೆ ನಿಯಂತ್ರಣವು ಅವಶ್ಯಕ ಔಷಧಿಗಳ ಬೆಲೆಯನ್ನು ನಿಯಂತ್ರಿಸಬಹುದು. ಹಾಗಿಲ್ಲದೆ ಹೋದರೆ ಬೆಲೆ ನಿಯಂತ್ರಣ ಕ್ರಮದಿಂದಾಗಿ ಬೆಲೆ ಕಡಿಮೆಯಾದರೂ ಔಷಧಿಗಳೇ ಲಭ್ಯವಾಗದೆ ಹೋಗಬಹುದು. ಈ ಎರಡೂ ಅಂಶಗಳ ನಡುವೆ ಸಮತೋಲನವನ್ನು ಕೇವಲ ಆರ್ಥಿಕ ಕ್ರಮಗಳಿಂದ ಮಾತ್ರ ಸಾಧಿಸಲು ಸಾಧ್ಯವಿಲ್ಲ. ಅದಕ್ಕೆ ರಾಜಕೀಯ ಇಚ್ಚಾಶಕ್ತಿಯೂ ಬೇಕಾಗುತ್ತದೆ. ಈಗಾಗಲೇ ಸಾಬೀತಾಗಿರುವಂತೆ ಮೂಲಭೂತ ಸೌಕರ್ಯಗಳನ್ನು ಸುಧಾರಣೆ ಮಾಡಿ ಎಲ್ಲರಿಗೂ ಅಗ್ಗದ ದರದಲ್ಲಿ ರೋಗ ಪತ್ತೆ ಸೇವೆಗಳು ಮತ್ತು ಔಷಧಿಗಳು ಲಭ್ಯವಾಗುವಂತಾಗಿಬಿಟ್ಟರೆ ಸಾರ್ವಜನಿಕ ಕ್ಷೇತ್ರದ ಮೂಲಕವೇ ಅಗ್ಗದದರದ ಆರೋಗ್ಯ ಸೇವೆಯನ್ನು ನೀಡಬಹುದು ಮತ್ತು ಜನರ ಆರೋಗ್ಯ ಮತ್ತು ಯೋಗಕ್ಷೇಮಗಳನ್ನು ಖಾತರಿಗೊಳಿಸಬಹುದು. ಆದರೆ ಹಾಲೀ ಸರ್ಕಾರವು ಬೇಡಿಕೆ ಆಧಾರಿತ ಹಣಕಾಸು ಒದಗಿಸುವ ವ್ಯವಸ್ಥೆಯ (ವಿಮೆ) ಮೇಲೆ ಒತ್ತುಕೊಡುವ ಮೂಲಕ ತನ್ನ ಪಾತ್ರವನ್ನು ಆರೋಗ್ಯ ಸೇವೆಯನ್ನು ದಕ್ಕುವಂತೆ ಮಾಡುವುದಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳುತ್ತಿದೆ ಮತ್ತು ಆರೋಗ್ಯ ಸೇವೆಯನ್ನು ಒದಗಿಸುವ ಜವಾಬ್ದಾರಿಯನ್ನು ಮಾತ್ರ ಖಾಸಗಿ ಕ್ಷೇತ್ರಕ್ಕೆ ಬಿಟ್ಟುಕೊಡುತ್ತಿದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top