ನ್ಯಾಷನಲ್ ರಿಜಿಸ್ಟ್ರಾರ್ ಆಫ್ ಸಿಟಿಜನ್ಸ್-ಎನ್ಆರ್ಸಿ- ಹೇಳುವುದೇನು? ಹೇಳದಿರುವುದೇನು?
ಎನ್‌ಆರ್‌ಸಿ (ನ್ಯಾಷನಲ್ ರಿಜಿಸ್ಟ್ರಾರ್ ಆಫ್ ಸಿಟಿಜನ್ಸ್- ರಾಷ್ಟ್ರೀಯ ನಾಗರಿಕರ ಪಟ್ಟಿ)ಯ ಹಿಂದಿನ ಕಥನವು ಹೇಳುತ್ತಿರುವುದಕ್ಕಿಂತ ಮುಚ್ಚಿಡುತ್ತಿರುವುದೇ ಹೆಚ್ಚು.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಅಸ್ಸಾಂನಲ್ಲಿ ಇದೀಗ ಎನ್‌ಆರ್‌ಸಿ (ನ್ಯಾಷನಲ್ ರಿಜಿಸ್ಟ್ರಾರ್ ಆಫ್ ಸಿಟಿಜನ್ಸ್- ರಾಷ್ಟ್ರೀಯ ನಾಗರಿಕರ ಪಟ್ಟಿ)ಯ ಅಂತಿಮ ಕರಡು ತಯಾರಾಗಿ ಜಾರಿಗೊಳ್ಳಲು ಸಿದ್ಧವಾಗುತ್ತಿದೆ. ಇದರಿಂದ ಎನ್‌ಆರ್‌ಸಿಗಾಗಿ ಒತ್ತಾಯ ಮಾಡುತ್ತಿದ್ದ ಶಕ್ತಿಗಳಿಗೆ ಹೊರಗಿನವರ ಉಪಟಳದಿಂದ ಒಂದಷ್ಟು ಮುಕ್ತಿ ಸಿಗಬಹುದು. ಸ್ಥಳೀಯರ ಪ್ರಕಾರ ಈ ಹೊರಗಿನವರು ಎನ್‌ಆರ್‌ಸಿಯು ಮಾನ್ಯತೆಯುಳ್ಳ ನಾಗರಿಕರೆಂದು ಮಾನ್ಯಮಾಡಲು ಪರಿಗಣನೆಗೆ ತೆಗೆದುಕೊಳ್ಳುವ ವರ್ಗೀಕರಣದ ಅವಕಾಶಗಳನ್ನು ಕಾನೂನು ಬಾಹಿರ ಮಾರ್ಗಗಳಿಂದ ದಕ್ಕಿಸಿಕೊಳ್ಳುತ್ತಿದ್ದರು. ಎನ್‌ಆರ್‌ಸಿಯಿಂದ ಅನುಕೂಲವಾಗಿದೆಯೆ ಎಂಬ ಪ್ರಶ್ನೆಯನ್ನು ಒಂದು ಕಡೆ ಇದ್ದೇ ಇದೆ. ಆದರೂ ಇದಕ್ಕಾಗಿ ಹೋರಾಡಿದ್ದ ಹಲವು ಅಹವಾಲುದಾರರಂತೂ ಇದರಿಂದ ಒಂದಷ್ಟು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಒಮ್ಮೆ ತಾವು ಕಾನೂನುಬದ್ಧ ಭಾರತೀಯ ನಾಗರಿಕರೆಂಬ ಗುರುತನ್ನು ಒಂದು ನಿಷ್ಪಕ್ಷಪಾತ ಮತ್ತು ಕ್ರಮಬದ್ಧ ವಿಧಾನಗಳ ಮೂಲಕ ಪಡೆದುಬಿಟ್ಟರೆ ಯಾವುದೇ ಆತಂಕವಿಲ್ಲದೆ ಮತ್ತು ಸದಾ ಅನುಮಾನದಿಂದ ನೋಡಲ್ಪಡುವ ಚಿತ್ರಹಿಂಸೆಯಿಂದ ಪಾರಾಗಿ ಸಾರ್ವಜನಿಕವಾಗಿ ತಮ್ಮ ಸಾಮಾಜಿಕ ಹಕ್ಕುಗಳನ್ನು ಚಲಾಯಿಸಬಹುದು ಎಂಬ ಭರವಸೆಯನ್ನು ಅವರು ಇಟ್ಟುಕೊಂಡಿದ್ದಾರೆ.
ವಾಸ್ತವವಾಗಿ, ಎನ್‌ಆರ್‌ಸಿಯ ಪ್ರಧಾನ ಪಠ್ಯದ ಪ್ರಕಾರ ಈ ರಾಷ್ಟ್ರೀಯ ಪಟ್ಟಿಯು ಹೊರಗಿನವರಿಗಿಂತ ಸಹ ಭಾರತೀಯನ ಬಗ್ಗೆ ತನ್ನ ನೈತಿಕ ಕರ್ತವ್ಯವಿದೆಯೆಂದು ಪ್ರತಿಪಾದಿಸುವಷ್ಟು ಉತ್ತಮ ಪರಿಸ್ಥಿತಿಯಲ್ಲಿರುವಂಥ ಒಂದು ಆರೋಗ್ಯಕರ ಸಾಮಾಜಿಕ ಮತ್ತು ನೈತಿಕ ವಾತಾವರಣವನ್ನು ನಿರ್ಮಿಸಲಿದೆ. ಭಾರತ ಸರ್ಕಾರವು ಸಹ ಈ ಪ್ರಕ್ರಿಯೆಯು ಇಲ್ಲಿನ ಸಹವಾಸಿಗಳ ಬಗ್ಗೆ ತನ್ನ ಕರ್ತವ್ಯವಿದೆಯೇ ವಿನಃ ಹೊರಗಿನವರ ಬಗ್ಗೆಯಲ್ಲ ಎಂಬ ಚಿಂತನೆಯನ್ನು ಮೂಡಿಸುವಂಥಾ ಉತ್ತಮ ಪರಿಸ್ಥಿತಿಗಳನ್ನು ನಿರ್ಮಿಸುವುದು ಈ ಎನ್‌ಆರ್‌ಸಿಯ ಉದ್ದೇಶವಾಗಿದೆ ಎಂದು ಔಪಚಾರಿಕ ಮಟ್ಟದಲ್ಲಿ ಹೇಳುತ್ತಿದೆ. ಅಂದರೆ ಈ ಎನ್‌ಆರ್‌ಸಿ ಪ್ರಕ್ರಿಯೆಯು ಒಮ್ಮೆ ಮುಗಿದ ನಂತರದಲ್ಲಿ ಹೊರಗಿನವರ ಪ್ರಶ್ನೆಯನ್ನು ಎನ್‌ಆರ್‌ಸಿಯು ಬಗೆಹರಿಸಿರುತ್ತದೆ. ಮತ್ತು ಆಗ ರಾಜ್ಯದಲ್ಲಿ ಇರುವವರೆಲ್ಲಾ ಪರಸ್ಪರರ ಬಗ್ಗೆ ಆದರ ಮತ್ತು ಹೊಣೆಗಾರಿಕೆಗಳಿರಬೇಕಾದ ಒಳಗಿನವರೇ ಆಗಿರುತ್ತಾರೆ.
ಆದರೆ ನಿಜಕ್ಕೂ ಪರಿಸ್ಥಿತಿ ಹೀಗಿದೆಯೇ? ಸ್ವದೇಶಿ ’ಭೂಮಿಪುತ್ರರ ಜೊತೆ ಹೊರಗಿನಿಂದ ಬಂದವರ ದೈನಂದಿನ ಅನುಭವವೇನು ಹೇಳುತ್ತದೆ? ಈ ಹೊರಗಿನಿಂದ ಬಂದ ವಲಸಿಗರನ್ನು ಸ್ಥಳೀಯರು ಅಥವಾ ಮಣ್ಣಿನಮಕ್ಕಳು ಸದಾ ನೈತಿಕವಾದಿ ಆಕ್ರಮಣಕಾರಿ ಕಣ್ಣೊಟದಿಂದ ನೋಡುತ್ತಾರೆ. ಆ ಮೂಲಕ ವಲಸಿಗರು ತಾವು ಕನಿಷ್ಟ ಪಕ್ಷ ವಿಶಾಲ ಮಾನವ ಕುಲದ ಸದಸ್ಯರೆಂಬ ಭಾವವನ್ನು ಕಳೆದುಕೊಳ್ಳುವಂತೆ ಮಾಡಿದ್ದಾರೆ. ಹೀಗಾಗಿ ಭಾರತದ ಸಂದರ್ಭದಲ್ಲಿ ಆತ್ಮ ವಿಶ್ವಾದಿಂದ ಮತ್ತು ಘನತೆ ಹಾಗೂ ಸ್ವಾಯತ್ತತೆಯಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ವಲಸಿಗರ ಮಟ್ಟಿಗೆ ಅನುಕ್ಷಣದ ಪ್ರಶ್ನೆಯಾಗಿಬಿಟ್ಟಿದೆ. ಮತ್ತೊಂದು ಕಡೆ ಈ ಹೊರಗಿನವ ಎಂಬ ಪ್ರಶ್ನೆಯು ಯಾವುದೋ ನಿರ್ದಿಷ್ಟ ದೇಶದ ಗಡಿದಾಟಿ ಬಂದವರನ್ನು ಮಾತ್ರ ಉದ್ದೇಶಿಸಿ ನಿರ್ವಚನಗೊಳ್ಳುತ್ತಿಲ್ಲ.
ಎನ್‌ಆರ್‌ಸಿ ಪ್ರಕ್ರಿಯೆ ಅಂತಿಮಗೊಂಡ ಮಾತ್ರಕ್ಕೆ ಹಕ್ಕುಗಳ ಉಲ್ಲಂಘನೆ ಮತ್ತು ತಪ್ಪು ಗುರುತಿನ ಅವಘಡಗಳ ಸರಣಿ ಮುಕ್ತಾಯವಾಗುವುದಿಲ್ಲ. ವಾಸ್ತವವಾಗಿ. ನಮಗೆ ದಮ್ಮಿತ್ತು, ಅದಕ್ಕೆ ನಾವೇ ಮೊದಲು ಎನ್‌ಆರ್‌ಸಿ ಮಾಡಿದೆವು ಎಂದು ಹೇಳುತ್ತಾ ಹಾಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಅದರ ಬೆಂಬಲಿಗರ ಮಾತುಗಳಲ್ಲಿ ನೈತಿಕ ಸತ್ವವಿಲ್ಲ. ಅವರು ಬಳಸುವ ಭಾಷೆಯಲ್ಲಿ ವ್ಯಕ್ತವಾಗುವ ಶೌರ್ಯವು ಅದರಲ್ಲಿ ಅಂತರ್ಗತವಾಗಿರುವ ದುರಂತವನ್ನು ಕಾಣಲು ನಿರಾಕರಿಸುತ್ತದೆ. ಈ ಎನ್‌ಆರ್‌ಸಿ ಕಸರತ್ತಿನಿಂದ ಉದ್ಭವವಾಗಲಿರುವ ಮಾನವೀಯ ಸಂಕಷ್ಟಗಳನ್ನು ಅಷ್ಟೇ ಗತ್ತಿನಿಂದ ನಾವು ಪರಿಹರಿಸಲು ಸಿದ್ಧರಿದ್ದೇವೆಯೇ?
ವಿಜಯೀಭಾವನ್ನು ಹೊರಹಾಕುವ ಆ ಭಾಷೆಯ ಹಿಂದೆ ಇಡೀ ಮಾನವತೆಯ ಭಾಗವಾಗಿ ತನ್ನನ್ನು ತಾನು ಕಾಣಬಲ್ಲ ನೈತಿಕ ಸಂವೇದನೆಗಳು ಶೂನ್ಯವಾಗಿರುವ ಸಂಕೇತವಿದೆ. ಅಷ್ಟು ಮಾತ್ರವಲ್ಲದೆ ದೇಶದ ಗಡಿಗಳಾಚೆ ಇರುವ ಸ್ವಧರ್ಮೀಯರನ್ನು ಮಾತ್ರ ಈ ದೇಶದೊಳಗೆ ಬರಮಾಡಿಕೊಳ್ಳುವ ಪ್ರಸ್ತಾಪವೂ ಸರ್ಕಾರದ ಚರ್ಚೆಯಲ್ಲಿದೆ. ಸೂಡಾನಿನಲ್ಲಿ ೧೯೮೪-೮೫ರಲ್ಲಿ ಸಂಭವಿಸಿದ ಅಂತರ್ಯುದ್ಧದ ಸಂದರ್ಭದಲ್ಲಿ ಇಸ್ರೇಲ್ ಇದೇ ಧೋರಣೆಯನ್ನು ಅನುಸರಿಸಿತ್ತು. ಆ ಪ್ರಕರಣದಲ್ಲಿ ಇಸ್ರೇಲಿನ ಈ ಧೋರಣೆಗೆ ಅರಬ್ಬರು ತೋರಿದ ಪ್ರತಿರೋಧದಿಂದ ಅದು ಕಿಂಚಿತ್ತೂ ಹಿಂಜರಿಯಲಿಲ್ಲ. ಬದಲಿಗೆ ಸೂಡಾನಿನ ನಿರಾಶ್ರಿತ ಶಿಬಿರದಲ್ಲಿ ಸಿಲುಕಿಕೊಂಡಿದ್ದ ಇಥಿಯೋಪಿಯಾ ದೇಶದ ಯೆಹೂದಿಗಳನ್ನು ಮಾತ್ರ ವಿಮಾನದ ಮೂಲಕ ಪಾರುಮಾಡಿತು. ಇಸ್ರೇಲಿ ಸರ್ಕಾರದ ಈ ಧೋರಣೆಯು ನೈತಿಕ ದೃಷ್ಟಿಯಲ್ಲಿ ಅತ್ಯಂತ ಸಮಸ್ಯಾತ್ಮಕವಾಗಿದೆ. ಏಕೆಂದರೆ ಅದು ಅಂತರ್ಯುದ್ಧದಲ್ಲಿ ಸಿಲುಕಿಕೊಂಡಿದ್ದ ಇತರ ಯಾವುದೇ ಮನುಷ್ಯ ಜೀವಗಳಿಗಿಂತ ಯೆಹೂದಿಗಳ ಜೀವವು ಹೆಚ್ಚು ಮೌಲ್ಯಯುತವಾದದ್ದೆಂದು ಭಾವಿಸಿತು. ಆದರೆ ಭಾರತದಂಥ ಸಂದರ್ಭದಲ್ಲಿ ಈ ಧೋರಣೆಯನ್ನು ಅನುಸರಿಸುವುದೆಂದರೆ ಒಂದು ಅಧಿಕಾರಿಗಳ ಗುಂಪು, ಅಥವಾ ಒಂದು ಗುಂಪಿನ ಹಿತಾಸಕ್ತಿಯನ್ನು ಮಾತ್ರ ಪ್ರತಿನಿಧಿಸುವ ಸಂಕುಚಿತ ದೃಷ್ಟಿಕೋನದ ನಾಯಕ ಅಥವಾ ನಾಯಕರು ಸಂಬಂಧಪಟ್ಟ ಪ್ರಾಂತ್ಯದ ಇಡೀ ಮಾನವ ಸಮುದಾಯದ ವಿಧಿಯನ್ನು ನಿರ್ಧರಿಸುತ್ತಾರೆ ಎಂದಾಗುತ್ತದೆ. ಆಗ, ಅಲ್ಲಿನ ಬಹಳಷ್ಟು ಜನರ ಬದುಕು ಅಲ್ಲಿನ ಮಣ್ಣಿನ ಮಕ್ಕಳ ದಾಕ್ಷಿಣ್ಯ ಮತ್ತು ದ್ವೇಷಗಳ ನೆರಳಲ್ಲಿ ಸಾಗಬೇಕಾದ ದುಸ್ಥಿತಿಯನ್ನು ಉಂಟುಮಾಡುವಂಥ ಪ್ರಕ್ರಿಯೆಯನ್ನು ಭಾರತ ಸರ್ಕಾರವು ಅನುಸರಿಸಬೇಕೆ ಎಂಬ ಪ್ರಶ್ನೆಯನ್ನು ಕೇಳಲೇ ಬೇಕಾಗುತ್ತದೆ. ಹೀಗಾಗಿ ಎನ್‌ಆರ್‌ಸಿ ಹೇಳದ ಒಂದು ಸಂಗತಿಯೇನೆಂದರೆ ಅಂತಿಮವಾಗಿ ಈ ಪಟ್ಟಿಯಿಂದ ಹೊರಗುಳಿಯಲ್ಪಡುವವರು ಒಂದೆಡೆ ನಾಗರಿಕ ಸಮಾಜದ ತೀವ್ರವಾದ ತಿರಸ್ಕಾರಕ್ಕೂ ಮತ್ತೊಂದೆಡೆ ಸರ್ಕಾರಗಳ ಶಾಸ್ವತವಾದ ಅನುಮಾನಗಳಿಗೂ ಗುರಿಯಾಗುತ್ತಾ ಬದುಕನ್ನು ಸಾಗಿಸಬೇಕಿರುತ್ತದೆ. ಕೆಲವರು ತಿರಸ್ಕಾರದಿಂದಲ್ಲದೆ ಅನುಕಂಪದಿಂದಲೂ ಕಾಣಬಹುದು. ಆದರೆ ಅದು ಅವರಿರುವ ದುಸ್ಥಿಗೆ ಪರಿಹಾರವನ್ನಂತೂ ಒದಗಿಸುವುದಿಲ್ಲ.
ಈ ಪ್ರಕ್ರಿಯೆಯಿಂದ ಸಂತ್ರಸ್ತರಾಗಿ ಹೊರಗುಳಿಸಲ್ಪಡಬಹುದಾದ ಸಂತ್ರಸ್ತರ ಮುಖವನ್ನೊಮ್ಮೆ ಸರ್ಕಾರಗಳು ಗಮನಿಸಲು ಸಾಧ್ಯವಾದರೆ ಖಂಡಿತಾ ಆ ಸಂತ್ರಸ್ತರ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೋರಿಸುತ್ತದೆ. ಅಥವಾ ಏನಿಲ್ಲವೆಂದರೂ ಯಾರು ಹೊರಗಿನವರು ಎಂದು ಇತ್ಯರ್ಥ ಮಾಡುವ ವಿಷಯದ ಬಗ್ಗೆ ಕನಿಷ್ಟ ಬಗ್ಗೆ ಒಂದಷ್ಟು ಸಡಿಲತೆಯನ್ನು ತೋರುತ್ತದೆ. ಆದರೆ ಆ ರೀತಿ ಸಡಿಲತೆ ತೋರುವುದರಿಂದ ಮಣ್ಣಿನ ಮಕ್ಕಳು ಸಿಟ್ಟಾಗುತ್ತಾರೆ. ಏಕೆಂದರೆ ಅವರ ಪ್ರಕಾರ ಅಂಥಾ ಧೋರಣೆಯನ್ನು ಅನುಸರಿಸುವುದೆಂದರೆ ಯಾರು ಕಾನೂನುಬದ್ಧ ಸ್ಥಳಿಯರೆಂದು ವರ್ಗೀಕರಿಸಲು ಕಾಲಮಿತಿ ನಿಗದಿ ಮಾಡಲು ಹೋರಾಡಿದ ಸ್ಥಳಿಯರ ಹೋರಾಟದ ಆಶೋತ್ತರಗಳನ್ನು ಕಡೆಗಣಿಸುವುದೆಂದರ್ಥ. ಆದರೆ ಈ ತಪ್ಪಿಗೆ ದುರುದ್ದೇಶಗಳಿಲ್ಲವೆಂಬ ಸಮರ್ಥನೆಯಿದೆ. ವಾಸ್ತವವಾಗಿ ಒಂದು ಮಾನವ ಜೀವವನ್ನು ನಾಶಗೊಳಿಸುವುದನ್ನು ಮತ್ತು ಭೀತಿಗೊಳಪಡಿಸುವುದನ್ನು ತಡೆಗಟ್ಟುವ ಅಗತ್ಯದಿಂದ ಈ ತಪ್ಪು ಪ್ರೇರೇಪಣೆ ಪಡೆದಿರುತ್ತದೆ.
ತನ್ನದೇ ಜನರಿಂದ ತೀವ್ರವಾದ ಅನಾದರ ಮತ್ತು ಕೆಲವೊಮ್ಮೆ ಬಹಿರಂಗ ತಿರಸ್ಕಾರಕ್ಕೆ ಒಳಗಾಗಿರುವ ಅನುಭವವೇ ಆಳವಾದ ಪರಕೀಯ ಭಾವನೆಯನ್ನು ಇನ್ನಷ್ಟು ತೀವ್ರವಾಗಿ ಸೃಷ್ಟಿಸಬಹುದಾದ ಎನ್‌ಆರ್‌ಸಿ ಪ್ರಕ್ರಿಯೆಯು ನಿಲ್ಲಬೇಕೆಂಬ ಒತ್ತಾಯವನ್ನು ಹುಟ್ಟುಹಾಕುತ್ತಿದೆ. ಇಂಥಾ ಹೊರಗಿನವರೆಂಬ ಅಥವಾ ಪರಕೀಯನೆಂಬ ಭಾವಗಳು ವಿಶಾಲವಾದ ಮಾನವೀಯ ಕಾಳಜಿಗಳಿಂದ ಜನರನ್ನು ದೂರಮಾಡುತ್ತದೆ. ಈ ಸಂದರ್ಭದಲ್ಲಿ ನಾಗರಿಕ ಸಮಾಜ ಮತ್ತು ಪ್ರಭುತ್ವಗಳೆರಡಕ್ಕೂ ಇಂಥಾ ನೈತಿಕತೆಯಿರುವುದು ಅತ್ಯಂತ ಮುಖ್ಯವಾಗಿದೆ.