ISSN (Print) - 0012-9976 | ISSN (Online) - 2349-8846

ಪೊಲೀಸರಿಗೆ ಕಡಿವಾಣ ಹಾಕುವರು ಯಾರು?.

ಪೊಲೀಸರ ಬಗ್ಗೆ ಜನರಲ್ಲಿ ನಂಬಿಕೆಯು ಕುಸಿಯುತ್ತಿದ್ದರೂ ಪೊಲೀಸ್ ವ್ಯವಸ್ಥೆಯ ಸುಧಾರಣೆ ಮಾತ್ರ ಅಮೆಗತಿಯಲ್ಲಿ ಸಾಗುತ್ತಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಕೇರಳದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವಾಗ ವ್ಯಕಿಯೋರ್ವನನ್ನು ಹತ್ಯೆ ಮಾಡಿದ ಆರೋಪದ ಮೇಲೆ, ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ, ಇಬ್ಬರು ಪೊಲೀಸರಿಗೆ ಮರಣದಂಡನೆಯನ್ನೂ ಮತ್ತು ಇನ್ನು ಮೂವರು ಪೊಲೀಸರಿಗೆ ಸೆರೆವಾಸದ ಶಿಕ್ಷೆಯನ್ನು ವಿಧಿಸಲಾಗಿದೆ. ೨೦೦೫ರಲ್ಲಿ ಉದಯಕುಮಾರ್ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಚಿತ್ರಹಿಂಸೆ ಕೊಟ್ಟು ಕೊಂದಿದ್ದರು. ಇದರ ಬಗ್ಗೆ ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಲಯವು ಕಳೆದ ತಿಂಗಳು ಅದಕ್ಕೆ ಕಾರಣರಾದ ಪೊಲೀಸರಿಗೆ ಶಿಕ್ಷೆಯನ್ನು ವಿಧಿಸಿದೆ. ಭಾರತದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವು ಸಂಭವಿಸುವ ದೊಡ್ಡ ಮತ್ತು ಕುಖ್ಯಾತ ಇತಿಹಾಸವೇ ಇದೆ. ಆದ್ದರಿಂದ ಈ ಪ್ರಕರಣದಲ್ಲಿ ಕಳೆದ ೧೩ ವರ್ಷಗಳಲ್ಲಿ ಯಾವ್ಯಾವ ಸಂಗತಿಗಳು ಪೂರಕವಾಗಿ ಕೂಡಿಬಂದು ತಪ್ಪಿತಸ್ತರಿಗೆ ಶಿಕ್ಷೆಯಾಗುವಂತಾಯಿತು ಎಂಬುದು ಅಧ್ಯಯನಯೋಗ್ಯ ವಿಷಯವಾಗಿದೆ. ಅಪರಾಧ ಮತ್ತು ಆರೋಪಿಗಳ ಜೊತೆ ವ್ಯವಹರಿಸುವಾಗ ಅನುಸರಿಸಬೇಕಾದ ನೀತಿ-ನಿಯಮಗಳ ಬಗ್ಗೆ ಮತ್ತು ತೋರಬೇಕಾದ ಉತ್ತರದಾಯಿತ್ವದ ಬಗ್ಗೆ ಪೊಲೀಸರಲ್ಲಿರುವ ಆಳವಾದ ತಿರಸ್ಕಾರ ಧೋರಣೆಯನ್ನೂ, ಮತ್ತು ಪೊಲೀಸ್ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಸುಪ್ರೀಂಕೋರ್ಟು ೨೦೦೬ರಲ್ಲಿ ಕೊಟ್ಟ ನಿರ್ದೇಶನದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯವನ್ನೂ ಈ ಪ್ರಕರಣವು ಸಾವಿರದೊಂದನೆಯ ಬಾರಿ ಸಮಾಜದ ಗಮನಕ್ಕೆ ತರುತ್ತಿದೆ.

 ಹಾಲೀ ಪ್ರಕರಣದಲ್ಲಿ ತನಿಖೆ ಮಾಡಿದ ಅಧಿಕಾರಿ ಮತ್ತು ಮರಣೋತ್ತರ ಪರೀಕ್ಷೆಯನ್ನು ಮಾಡಿದ ವೈದ್ಯರು ಪ್ರತಿಹಂತದಲೂ ತೋರಿದ ಎಚ್ಚರ ಮತ್ತು ಪಟುತ್ವಗಳು ಉದಯ್‌ಕುಮಾರ್ ಕೊಲೆಯ ಕಾರಣರಾದವರಿಗೆ ಶಿಕ್ಷೆ ಒದಗಿಸುವಲ್ಲಿ ಯಶಸ್ವಿಯಾದವು. ಸರ್ಕಾರವು ಸಂಬಂಧಪಟ್ಟ ಸರ್ಕಲ್ ಇನ್ಸ್‌ಪೆಕ್ಟರ್ ಅನ್ನು ವರ್ಗಾಯಿಸಿ ತನ್ನ ಪಾಲಿನ ಕೆಲಸವನ್ನು ಮಾಡಿದರೆ, ಕ್ರೈಂಬ್ರಾಂಚ್ ಪೊಲೀಸರು ಚಿತ್ರಹಿಂಸೆ ಆರೋಪ ಹೊತ್ತಿದ್ದ ಇಬ್ಬರೂ ಪೊಲೀಸರನ್ನು ಬಂಧಿಸಿದರು. ವಿಚಾರಣೆಯ ಸಂದರ್ಭದಲ್ಲಿ ಪ್ರಾಸಿಕ್ಯುಷನ್ನಿನ ಪ್ರಧಾನ ಸಾಕ್ಷಿಯೇ ಉಲ್ಟಾ ಹೊಡೆದು ಕೇಸು ಬಿದ್ದು ಹೋಗುವ ಹಂತಕ್ಕ್ಕೆ ತಲುಪಿತ್ತು. ಆಗ ಉದಯ್‌ಕುಮಾರರ ತಾಯಿಯು ಹೈಕೋರ್ಟಿನ ಮೊರೆ ಹೋಗಿ ಪ್ರಕರಣವನ್ನು ಸಿಬಿಐಗೆ ವಹಿಸಲು ಮನವಿ ಮಾಡಿದರು. ನಂತರದಲ್ಲಿ ಸಿಬಿಐ ಕೋರ್ಟು ಈ ಪ್ರಕರಣದ ಬಗ್ಗೆ ಅತ್ಯಪರೂಪದ ವಿಚಾರಣೆಯನ್ನು ನಡೆಸಿತು.

ಆದರೆ ಪೊಲಿಸ್ ಕಸ್ಟಡಿಯಲ್ಲಿ ನಡೆದ ಚಿತ್ರಹಿಂಸೆ ಮತ್ತು ಕೊಲೆಗಳ ಇನ್ನಿತರ ಪ್ರಕರಣಗಳಲ್ಲಿನ ವಿಚಾರಣೆಗಳು ಯಾವಬಗೆಯ ಅಡ್ಡಿ ಆತಂಕಗಳಲ್ಲಿ ಸಿಲುಕಿಕೊಳ್ಳುತ್ತವೆ ಎಂಬುದು ಸುಪರಿಚಿತವಾದ ಸಂಗತಿಯೇ: ಸಾಕ್ಷಿಗಳು ಉಲ್ಟಾ ಹೊಡೆದು ಪ್ರತಿಕೂಲ ಸಾಕ್ಷಿಗಳಾಗುತ್ತಾರೆ, ಪೊಲೀಸರ ಒತ್ತಡಕ್ಕೆ ಮಣಿದು ವೈದ್ಯರು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಪೊಲೀಸರನ್ನು ಸಂಪೂರ್ಣವಾಗಿ ದೋಷ ಮುಕ್ತಗೊಳಿಸುತ್ತಾರೆ, ತನಿಖೆಗಳು ಆರೋಪಿಯನ್ನು ರಕ್ಷಿಸಲು ಏನು ಮಾಡಬೇಕೋ ಅವೆಲ್ಲವನ್ನೂ ಮಾಡುತ್ತವೆ, ಮತ್ತು ಸಂತ್ರಸ್ತ ಕುಟುಂಬಗಳು ಹಣಕಾಸು ಮತ್ತು ಕಾನೂನು ಸಹಾಯಗಳನ್ನು ಪಡೆದುಕೊಳ್ಳಲಾಗದ ಅತಂತ್ರ ಸ್ಥಿತಿಯಲ್ಲಿರುತ್ತವೆ.

ಪೊಲೀಸ್ ಸುಧಾರಣೆಯ ಕುರಿತು ೨೦೦೬ರಲ್ಲಿ ಸುಪ್ರೀಂ ಕೋರ್ಟು ನೀಡಿರುವ ನಿರ್ದೇಶನವು ಐದು ರಾಷ್ಟ್ರೀಯ ಪೊಲೀಸ್ ಅಯೋಗಗಳು ನೀಡಿದ ವರದಿಗಳ ಮತ್ತು ವಿವಿಧ ಸಂದರ್ಭಗಳಲ್ಲಿ ಹಲವು ಗಣ್ಯ ನ್ಯಾಯಾಧೀಶರು ಮತ್ತು ಪೊಲೀಸ್ ಉನ್ನತಾಧಿಕಾರಿಗಳ ನೇತೃತ್ವದಲ್ಲಿ ರಚಿತವಾದ ಅಯೋಗಗಳು ಮತ್ತು ಸಮಿತಿಗಳು ಕೊಟ್ಟ ವರದಿಗಳ ಶಿಫಾರಸ್ಸುಗಳ ಸಾರಾಂಶವನ್ನು ಪ್ರತಿಫಲಿಸುವಂತಿದೆ. ಸುಪ್ರೀಂ ಕೋರ್ಟು ಈ ಆದೇಶವನ್ನು ನೀಡಿದಾಗ ಪೊಲೀಸ್ ಸುಧಾರಣೆಯ ಬಗ್ಗೆ ಅವರೆಗೆ ತೋರುತ್ತಾ ಬಂದಿದ್ದ ಜಡ ಧೋರಣೆಯನ್ನು ಕೊನೆಗೊಳಿಸುವ ನಿರ್ಣಾಯಾತ್ಮಕ ಹೆಜ್ಜೆಯೆಂದು ಬಣ್ಣಿಸಲಾಗಿತ್ತು. ಆದರೆ ಆ ಭರವಸೆಗಳು ದಿನಗಳೆದಂತೆ ಹುಸಿಯಾಗತೊಡಗಿದವು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆ ನಿರ್ದೇಶನವನ್ನು ಒಂದೋ ತಮಗೆ ಬೇಕಾದಂತೆ ಮಾತ್ರ ಅನುಷ್ಠಾನಗೊಳಿಸಿದವು ಅಥವಾ ಸಂಪೂರ್ಣವಾಗಿ ನಿರ್ಲಕ್ಷಿಸಿದವು. ಸುಪ್ರೀಂಕೋರ್ಟಿನ ನಿರ್ದೇಶನದ ಕೆಲವು ಭಾಗಗಳು ಪೋಲಿಸ್ ವ್ಯವಸ್ಥೆಯ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಗಳ ಅಧಿಕಾರವನ್ನು ದುರ್ಬಲಗೊಳಿಸುವುದರಿಂದ ಕೋರ್ಟಿನ ನಿರ್ದೇಶನವನ್ನು ಯಾವ ಸರ್ಕಾರಗಳೂ ಉತ್ಸಾಹದಿಂದ ಪಾಲಿಸುತ್ತಿಲ್ಲ. ಒಂದು ವೇಳೆ ಸುಪ್ರೀಂ ಕೋರ್ಟು ತನ್ನ ಉಸ್ತುವಾರಿಯಲ್ಲೇ ತನ್ನ ನಿರ್ದೇಶನಗಳ ಅನುಷ್ಠಾನವಾಗಬೇಕೆಂದು ಆದೇಶಿಸಿದ್ದರೆ ಪರಿಸ್ಥಿತಿ ಇದಕ್ಕಿಂತ ಸ್ವಲ್ಪವಾದರೂ ಭಿನ್ನವಾಗಿರುತ್ತಿತ್ತು.

ವಿವಿಧ ಆಯೋಗಗಳ ವರದಿಗಳು ಮತ್ತು ಸುಪ್ರೀಂ ಕೋರ್ಟಿನ ನಿರ್ದೇಶನಗಳು ಸಮಗ್ರ ಸಲಹೆಗಳನ್ನು ಮುಂದಿಟ್ಟಿವೆ. ಇದರಲ್ಲಿ ೧೮೬೧ರ ಪೊಲೀಸ್ ಕಾಯಿದೆಯ ಬದಲಿಗೆ ಹೊಸ ಕಾಯಿದೆಯನ್ನು ಜಾರಿಗೆ ತರುವ ಪ್ರಸ್ತಾಪವಿದೆ. ಅದರಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳನ್ನೂ ಒಳಗೊಂಡಂತೆ ಪೊಲೀಸರ ನೇಮಕಾತಿ, ವರ್ಗಾವಣೆ ಮತ್ತು ಬಡ್ತಿ ಪದ್ಧತಿಗಳನ್ನು ಸುಧಾರಿಸುವ ಮೂಲಕ ಪೊಲೀಸ್ ಪಡೆಗಳನ್ನು ಸರ್ಕಾರದ ಹಸ್ತಕ್ಷೇಪದಿಂದ ಸ್ವತಂತ್ರಗೊಳಿಸುವ, ಪೊಲೀಸ್ ವ್ಯವಸ್ಥೆಯಲ್ಲಿನ ತನಿಖಾ ವಿಭಾಗವನ್ನು ಕಾನೂನು ಜಾರಿ ವಿಭಾಗದಿಂದ ಪ್ರತ್ಯೇಕಗೊಳಿಸುವ ಮತ್ತು ಪೊಲೀಸರ ವಿರುದ್ಧದ ದೂರುಗಳ ಬಗ್ಗೆ ವಿಚಾರಣೆ ನಡೆಸಲು ಒಂದು ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸುವ ಶಿಫಾರಸ್ಸುಗಳನ್ನು ಮಾಡಲಾಗಿದೆ.

ಪೊಲೀಸ್ ವ್ಯವಸ್ಥೆಯ ಸುಧಾರಣೆಗಾಗಿ ನಡೆಯುತ್ತಿರುವ ಅಂದೋಲನದ ಪ್ರಧಾನವಾದ ಒತ್ತು ಪೊಲೀಸ್ ವ್ಯವಸ್ಥೆಯ ಮೇಲೆ  ಜನತೆಯ ನಂಬಿಕೆ ಸಂಪೂರ್ಣವಾಗಿ ಕುಸಿದುಹೋಗದಂತೆ ನೋಡಿಕೊಳ್ಳುವುದೇ ಆಗಿದೆ. ೨೦೧೮ರಲ್ಲಿ ಹೊರತಂದಿರುವ ಭಾರತದಲ್ಲಿ ಪೊಲೀಸ್ ವ್ಯವಸ್ಥೆಯ ಸ್ಥಿತಿಗತಿಗಳು ಎಂಬ ವರದಿಯು ಆರು ಅಂಶಗಳ ಬಗ್ಗೆ ತನ್ನ ಗಮನ ಹರಿಸಿತ್ತು. ಅವೆಂದರೆ  ಅಪರಾಧಗಳ ಹೆಚ್ಚಳದ ದರ, ಪೊಲೀಸ್ ಮತ್ತು ನ್ಯಾಯಾಲಯಗಳ ಮೂಲಕ ಬಗೆಹರಿಸಲಾದ ಪ್ರಕರಣಗಳು, ಪೊಲೀಸ್ ಪಡೆಗಳಲ್ಲಿ ವಿವಿಧ ಸಾಮಾಜಿಕ ಹಿನ್ನೆಲೆಯವರ ಇರುವಿಕೆ, ಮೂಲಭೂತ ಸೌಕರ್ಯಗಳು, ಸೆರೆಮನೆಗಳ ಅಂಕಿಅಂಶಗಳು, ಮತ್ತು ಪರಿಶಿಷ್ಟ ಜಾತಿ/ಪಂಗಡ, ಮಹಿಳೆ ಮತ್ತು ಮಕ್ಕಳ ಮೇಲಿನ ಪ್ರಕರಣಗಳ ವಿಲೇವಾರಿಯ ದರ. ವಾಸ್ತವವಾಗಿ ಈ ಆರೂ ಅಂಶಗಳಲ್ಲಿ ಪೊಲೀಸ್ ವ್ಯವಸ್ಥೆಯ ನಡಾವಳಿಗಳು  ಅಲಕ್ಷಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಹಿತಾಸಕ್ತಿಗೆ ಪೂರಕವಾಗಿರಲಿಲ್ಲವೆಂಬುದನ್ನು ಆ ವರದಿಯು ಹೇಳುತ್ತದೆ. ಅದರ ಪ್ರಕಾರ ಆರೋಪಿಗಳ ವರ್ಗ ಹಿನ್ನೆಲೆಯನ್ನು ಆಧರಿಸಿ ಪೊಲೀಸರು ತಾರತಮ್ಯ ತೋರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಆ ನಂತರದ ಸ್ಥಾನದಲ್ಲಿ ಲಿಂಗ, ಜಾತಿ ಮತ್ತು ಧರ್ಮಾಧಾರಿತ ಪಕ್ಷಪಾತಿ ಧೋರಣೆಗಳು ವ್ಯಕ್ತವಾಗುತ್ತವೆ. ಪೊಲೀಸರ ಬಗ್ಗೆ ಧಾರ್ಮಿಕ ಅಲ್ಪಸಂಖ್ಯಾತರದಲ್ಲಿ ಅದರಲ್ಲೂ ಮುಸ್ಲಿಮರಲ್ಲಿ ಅತಿ ಹೆಚ್ಚಿನ ಭೀತಿ ಮನೆ ಮಾಡಿಕೊಂಡಿದೆ.

ಹೀಗಾಗಿ ಪೊಲೀಸ್ ವ್ಯವಸ್ಥೆಯ ಸುಧಾರಣೆಯ ಜವಾಬ್ದಾರಿಯನ್ನು ಸುಪ್ರೀಂಕೋರ್ಟು ತಾನೇ ವಹಿಸಿಕೊಳ್ಳಬೇಕಿದೆ. ತನ್ನ ೨೦೦೬ರ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದನ್ನು ಖಾತರಿಗೊಳಿಸಬೇಕಿದೆ. ಮತ್ತು ಅದನ್ನು ಉಲ್ಲಂಘಿಸುವ ಸರ್ಕಾರಗಳ ಮೇಲೆ ಕೋರ್ಟಿನ ಆದೇಶದ ಉಲ್ಲಂಘನೆಯ ಕಾರಣಕ್ಕೆ ಶಿಕ್ಷೆಗೆ ಒಳಪಡಿಸಬೇಕಿದೆ.

ಆಡಳಿತ ರೂಢ ಸಂಸ್ಥೆಗಳಿಗೆ ಒಂದು ಸಾಂಸ್ಥಿಕ ಪೂರ್ವಗ್ರಹವಿರುವುದು ಜಗತ್ತಿನಾದ್ಯಂತ ಕಂಡುಬರುವ ವಿದ್ಯಮಾನವೇ ಆಗಿದೆ. ಅಮೆರಿಕದ ಚಿಕಾಗೋ ಪೊಲೀಸ್ ಸುಧಾರಣೆಯ ಪ್ರಕರಣದಲ್ಲಿ, ಅಲ್ಲಿನ ೨೦೧೭ರ ಒಂದು ನ್ಯಾಯಾಂಗ ಇಲಾಖಾ ವರದಿಯು ಚಿಕಾಗೋ ಪೊಲೀಸ್ ಪಡೆಗಳು ಜನಾಂಗೀಯ ಪಕ್ಷಪಾತಿ ಧೋರಣೆಗಳಿಗೆ ಪಕ್ಕಾಗಿದೆಯೆಂಬುದನ್ನು ಮತ್ತು ಅಲ್ಲಿನ ಪೊಲೀಸ್ ಪಡೆಗಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಬಲಪ್ರಯೋಗವನ್ನು ಬಳಸುವ ಮತ್ತು ತಮ್ಮ ಅಪರಾಧಗಳನ್ನು ಗುರುತು ಕಾಣದಂತೆ ಅಳಿಸಿಬಿಡುವ ಸಂಸ್ಕೃತಿಯು ವ್ಯಾಪಕವಾಗಿ ಹರಡಿಕೊಂಡಿದೆಯೆಂದು ಹೇಳಿತ್ತು. ಒಬ್ಬ ಕರಿ ಬಾಲಕನನ್ನು ಒಬ್ಬ ಬಿಳಿ ಪೊಲೀಸ್ ದಾರುಣವಾಗಿ ಕೊಂದುಹಾಕಿದ ಪ್ರಕರಣದ ಹಿನ್ನೆಲೆಯಲ್ಲಿ ಈ ಅಧ್ಯಯನ ನಡೆದಿತ್ತು. ಹೀಗಾಗಿ ಚಿಕಾಗೋ ಪೊಲೀಸರು ತಮ್ಮ ಉತ್ತರದಾಯಿತ್ವವನ್ನು ಖಾತರಿ ಮಾಡುವ ವಿವರವಾದ ಯೋಜನೆಯನ್ನು ಸಿದ್ಧಪಡಿಸಿದರು. ಮತ್ತು ಅದು ಅಮೆರಿಕದ ಉನ್ನತ ಕೋರ್ಟಿನ ಪರಿವೀಕ್ಷಣೆಯಲ್ಲಿ ಅನುಷ್ಠಾನಗೊಳ್ಳುತ್ತಿದೆ.

ಉದಯ್‌ಕುಮಾರ್ ಅವರನ್ನು ಚಿತ್ರಹಿಂಸೆ ಕೊಟ್ಟು ಸಾಯಿಸಿದ ಪ್ರಕರಣದಲ್ಲಿ ತನ್ನ ತೀರ್ಪನ್ನು ನೀಡುತ್ತಾ ಈ ಪ್ರಕರಣದಲ್ಲಿ ಆರೋಪಿಗಳು ವರ್ತಿಸಿರುವ ರೀತಿ ಪೊಲೀಸ್ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ ಎಂದು ಸಿಬಿಐ ನ್ಯಾಯಾಧೀಶರು ಹೇಳಿದ್ದಾರೆ. ಮತ್ತು ಪೊಲೀಸ್ ವ್ಯವಸ್ಥೆಯ ಮೇಲೆ ಜನರು ನಂಬಿಕೆ ಕಳೆದುಕೊಂಡರೆ ಅದು ಸಮಾಜದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ..ಹಾಗೂ ಅದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿರುತ್ತದೆ ಎಂದು ಆ ತೀರ್ಪು ಎಚ್ಚರಿಸಿದೆ. ಒಬ್ಬ ಭ್ರಷ್ಟನಾದರೂ ಬಡವರಿಗೆ ಉಪಕಾರಿಯಾಗಿರುವ ಸಿನಿಮೀಯ ಪೊಲೀಸರು ಧಬಾಂಗ್ ರೀತಿಯ ಹಿಂದಿ ಸಿನಿಮಾಗಳನ್ನು ಜನಪ್ರಿಯಗೊಳಿಸಬಹುದು. ಆದರೆ ವಾಸ್ತವವು ಅದಕ್ಕಿಂತ ಸಾಕಷ್ಟು ಭಿನ್ನವಾಗಿದ್ದು ಆದಷ್ಟು ಬೇಗ ಮತ್ತು ಅತ್ಯಂತ ಪ್ರಾಮಾಣಿಕವಾಗಿ ಪೊಲೀಸ್ ಸುಧಾರಣೆಗಳು ತ್ವರಿತವಾಗಿ ಜಾರಿಗೊಳ್ಳಬೇಕಿದೆ.

Back to Top