ISSN (Print) - 0012-9976 | ISSN (Online) - 2349-8846

ದೊಂಬಿಕೊಲೆಗಳ ಬಗ್ಗೆ ಸುಪ್ರೀಂ ಕೋರ್ಟು ತೀರ್ಪು ಪರಿಗಣಿಸದ ಒಂದು ಪ್ರಮುಖ ಅಂಶ

ದೊಂಬಿಕೊಲೆಗಳ (ಲಿಂಚಿಂಗ್) ಪ್ರಕರಣಗಳ ಬಗ್ಗೆ ಸುಪ್ರೀಂಕೋರ್ಟು ನೀಡಿರುವ ಆದೇಶವು ಯಾವ ಚೌಕಟ್ಟಿನೊಳಗೆ ಇಂಥಾ ಕ್ರೌರ್ಯಗಳು  ಸಂಭವಿಸುತ್ತಿವೆಯೆಂಬ ಅಂಶವನ್ನು ಪರಿಗಣಿಸಿಲ್ಲ

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ತೆಹ್‌ಸೀನ್ ಎಸ್ ಪೂನಾವಾಲಾ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟು ಜುಲೈ ೧೭ರಂದು ಆದೇಶವನ್ನು ನೀಡಿದ್ದು ದೇಶಾದ್ಯಂತ ನಡೆಯುತ್ತಿರುವ ಇಂಥಾ ದೊಂಬಿಕೊಲೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೆಲವು ನಿರ್ದೇಶನಗಳನ್ನು ಮತ್ತು ಮಾರ್ಗಸೂಚಿಗಳನ್ನೂ ನೀಡಿದೆ. ಆದರೆ ಈ ಆದೇಶದಲ್ಲೆಲ್ಲೂ ದನದ ಮಾಂಸ, ಮುಸ್ಲಿಮ್, ದಲಿತ, ಅಥವಾ ಸವರ್ಣ ಎಂಬ ಪದಗಳನ್ನೇ ಬಳಸಿಲ್ಲ. ಈ ಆದೇಶದಲ್ಲಿ ೧೧ ಬಾರಿ ಕಾನೂನು ಭಂಜಕ ಗುಂಪುಗಳು (ವಿಜಿಲಾಂಟಿಸಮ್) ಎಂಬ ಪದವನ್ನೂ ಮತ್ತು ೫ ಬಾರಿ ಕಾನೂನು ಮಾತ್ತು ಸುವ್ಯವಸ್ಥೆ  ಎಂಬ ಪದವನ್ನೂ ಬಳಸಲಾಗಿದೆ. ಹೀಗಾಗಿ ಈ ಆದೇಶವನ್ನು ಯಾವ ಸಂದರ್ಭದಲ್ಲಿ ನೀಡಲಾಗಿದೆಯೆಂಬುದನ್ನು ಮರೆತು  ಓದಿದರೆ ಅದು ೨೧ನೇ ಶತಮಾನದ ಭಾರತದ ಸಂದರ್ಭವನ್ನು ಉದ್ದೇಶಿಸಿ ನೀಡಿದ ಆದೇಶವೆನಿಸುವುದೇ ಇಲ್ಲ. ಬದಲಿಗೆ ಇತಿಹಾಸದ ಯಾವುದೋ ಪಾಳೇಗಾರಿ ಕಾಲದಲ್ಲಿ ನಡೆಯುತ್ತಿದ್ದ ವಿದ್ಯಮಾನವನ್ನು ಹತ್ತಿಕ್ಕಲು ನೀಡಿರಬಹುದಾದ ತೀರ್ಮಾನವೆಂದು ಭಾಸವಾಗುತ್ತದೆ.

 ಈ ನ್ಯಾಯಾದೇಶವನ್ನು ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಅವರು ಬರೆದಿದ್ದು, ಅದು ಸಮಸ್ಯೆಯ ನೈಜ ಸ್ವರೂಪವನ್ನು ಅರ್ಥಮಾಡಿಕೊಂಡಂತೆ ಕಾಣುವುದೇ ಇಲ್ಲ: ಏಕೆಂದರೆ ದೊಂಬಿಕೊಲೆಗಳು ತತ್‌ಕ್ಷಣದ ಆವೇಶದಲ್ಲೂ ಸಂಭವಿಸುವುದಿಲ್ಲ ಮತ್ತು ಅದು ಕೇವಲ ಕಾನೂನು ಮತ್ತು ಸುವ್ಯವಸ್ಥೆ ಮುರಿದು ಬಿದ್ದಂಥ ಮತ್ತೊಂದು ವಿದ್ಯಮಾನವೂ ಅಲ್ಲ. ಬದಲಿಗೆ ಅದು ಸಮಾಜದಲ್ಲಿ ಒಂದು ನಿರ್ದಿಷ್ಟ ವ್ಯವಸ್ಥೆಯನ್ನು ಉಳಿಸಿಕೊಂಡು ಬರಲೆಂದೇ ರೂಪಿಸಿರುವ  ಸಾಧನವಾಗಿದೆ. ಇವು ಈ ಸಮಾಜದ ದಮನಿತ ಸಮುದಾಯಗಳು ತಮಗೆ ಗೊತ್ತುಪಡಿಸಿದ ಸ್ಥಾನಗಳಲ್ಲಿರದೆ ಮುಂದೆ ಹೋಗಲು ಯತ್ನಿಸಿದರೆ ಯಾವ ಬೆಲೆ ತೆರಬೇಕಾಗಬಹುದೆಂದು ನೆನಪಿಸಲು ನಡೆಸುವ ಕ್ರೌರ್ಯವಾಗಿದೆ. ಮತ್ತು ಈ ಅಪರಾಧ ಚರ್ಯೆಯು ಸಾರ್ವಜನಿಕ ಪ್ರದರ್ಶನದ ಅಂವನ್ನೂ ಒಳಗೊಂಡಿದ್ದು ಪ್ರಭುತ್ವ ಯಂತ್ರಾಂಗದ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲವನ್ನೂ ಪಡೆದುಕೊಂಡಿರುತ್ತದೆ.

 ನ್ಯಾಯಲಯವು ನೀಡಿರುವ ಆದೇಶದಲ್ಲಿ ಈ ವಿಷಯದ ಬಗ್ಗೆ ದೇಶ-ವಿದೇಶದಲ್ಲಿ ನಡೆದಿರುವ ವಿದ್ವತ್ ಬರಹಗಳ ಯಾವ ಉಲ್ಲೇಖವೂ ಇಲ್ಲ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಡೆದಿರುವ ಯಾವೊಂದು ಪ್ರಕರಣವನ್ನೂ ಈ ಆದೇಶವು ವಿವರವಾಗಿ ಚರ್ಚಿಸಿಯೂ ಇಲ್ಲ. ವಿವರಿಸಿಯೂ ಇಲ್ಲ. ದೇಶಾದ್ಯಂತ ನಡೆಯುತ್ತಿರುವ ದೊಂಬಿಕೊಲೆಗಳ ವಿದ್ಯಮಾನದ ಬಗ್ಗೆ ಗಂಭೀರ ವಿಶ್ಲೇಷಣೆ ಇರಬೇಕಾದ ಜಾಗವನ್ನು ಕೇವಲ ಕೆಲವು ಗುಣವಾಚಕಗಳು  ಆಕ್ರಮಿಸಿಕೊಂಡಿವೆ. ಈ ಸಮಸ್ಯೆ ಉದ್ಭವಿಸಲು ಮೂಲಕಾರಣವೇನೆಂದು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನೇ ನ್ಯಾಯಾಲಯವು ಮಾಡಿಲ್ಲ. ಬದಲಿಗೆ ಇಡೀ ವಿದ್ಯಮಾನವು ತನ್ನ ಕರ್ತವ್ಯವನ್ನು ನಿಭಾಯಿಸಲಾಗದ ದುರ್ಬಲ ಪೊಲೀಸ್ ವ್ಯವಸ್ಥೆಯಿಂದ ಉಂಟಾಗುತ್ತಿದ್ದು, ನ್ಯಾಯಾಲಯದ ಸುಫರ್ದಿಯಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಂಡರೆ ಸಮಸ್ಯೆಯು ಬಗೆಹರಿಯುತ್ತದೆಂಬ ಚೌಕಟ್ಟಿನಲ್ಲಿ ಆದೇಶವನ್ನು ನೀಡಲಾಗಿದೆ. ಹೀಗಾಗಿ ಪೊಲೀಸರು ಕ್ರಮಗಳನ್ನು ತೆಗೆದುಕೊಳ್ಳುವ ಒತ್ತಡವು ನಿರ್ಮಾಣವಾದರೆ ಸಮಸ್ಯೆಯು ಬಗೆಹರಿಯುತ್ತದೆಂದು ವಿಶ್ವಾಸವಿರಿಸಲಾಗಿದೆ. ಆದರೆ ಜಾರ್ಖಂಡಿನಲ್ಲಿ ಸಂಭವಿಸಿದ  ಅಲಿಮುದ್ದೀನ್ ಅನ್ಸಾರಿಯವರ ಹತ್ಯಾ ಪ್ರಕರಣವು ನ್ಯಾಯಾಲಯವು ಶಿಫಾರಸ್ಸು ಮಾಡಿದ್ದ ರೀತಿಯಲ್ಲೇ ನಡೆದರೂ ಯಾವುದೇ ಪ್ರತಿಫಲವಿರಲಿಲ್ಲವೆಂಬ ಬಗ್ಗೆ ವರಿಷ್ಠ ನ್ಯಾಯಾಲಯಕ್ಕೆ ಅರಿವೇ ಇದ್ದಂತಿಲ್ಲ. ಆ ಪ್ರಕರಣದಲ್ಲಿ ಕೆಳಗಿನ ನ್ಯಾಯಾಲಯಗಳು ಎಂಟು ಜನ ಆರೋಪಿಗಳಿಗೆ ಶಿಕ್ಷೆಯನ್ನು ವಿಧಿಸಿದ್ದರೂ ತನಿಖೆ ಮತ್ತು ವಕಾಲತ್ತಿನಲ್ಲಿ ಇದ್ದ ಲೋಪಗಳಿಂದಾಗಿ ಜಾರ್ಖಂಡ್ ಉಚ್ಚ ನ್ಯಾಯಾಲಯ ಆ ಎಂಟೂ ಜನರಿಗೆ ಜಾಮೀನುಕೊಟ್ಟು ಬಿಡುಗಡೆ ಮಾಡಿತು.

ಈ ಅಪರಾಧಗಳು ಹೇಗೆ ಸಂಭವಿಸುತ್ತಿದೆಯೆಂಬ ಬಗ್ಗೆ  ಭಿನ್ನಭಿನ್ನ ವಿವರಣೆಗಳು ಇರುವ ಸಾಧ್ಯತೆಯೇ ಇಲ್ಲ. ಈ ಸದ್ಯ ದೇಶಾದ್ಯಂತ ನಡೆಯುತ್ತಿರುವ ದೊಂಬಿಕೊಲೆಗಳು ಬಿಜೆಪಿ ಪಕ್ಷವು ದೇಶಾದ್ಯಂತ ಚುನಾವಣಾ ವಿಜಯವನ್ನು ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಸಂಭವಿಸುತ್ತಿವೆ ಮತ್ತು  ದನದ ಮಾಂಸದ ಸುತ್ತಾ ಮುಸ್ಲಿಮರನ್ನು ಮತ್ತು ದಲಿತರನ್ನು ಗುರಿಮಾಡಿಕೊಳ್ಳುತ್ತಿವೆ. ಆಯಾ ರಾಜ್ಯಗಳಲ್ಲಿ ಬಿಜೆಪಿಯು ಇನ್ನೂ ಅಧಿಕಾರಕ್ಕೆ ಬರದ ಸಂದರ್ಭದಲ್ಲಿಯೂ ದನದಮಾಂಸದ ಪುಕಾರಿನ  ಸುತ್ತಾ ದಲಿತರು ಮತ್ತು ಮುಸ್ಲಿಮರ ನಡೆದ ದಾಳಿಗಳಲ್ಲಿ  ಆರೋಪಿತರಾದವರಿಗೆ ಸಂಘಪರಿವಾರದೊಂದಿಗೆ ಸಂಬಂಧsವಿದ್ದದ್ದು ಬೆಳಕಿಗೆ ಬಂದಿದೆ. ಅಚ್ಚೇದಿನ್ಗಳ ಭರವಸೆಯನ್ನು ನೀಡುವ ಅಬ್ಬರದ ಪ್ರಚಾರದ ಮೂಲಕ ೨೦೧೪ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ ನೀಡಿದ ಸಂದೇಶದಲ್ಲಿ ಮುಸ್ಲಿಮ್ ಉದ್ಯಮಿಗಳಿಗೆ ಪ್ರಧಾನವಾಗಿ ಲಾಭ ತರುತ್ತಿದ್ದ ದನದ ಮಾಂಸದ ರಪ್ಟಿನ ಪಿಂಕ್ ಕ್ರಾಂತಿಯ ಬಗ್ಗೆ ಹಿಂದುಗಳಿಗೆ ಅಸಮಾಧಾನವಿರುವ ಸಂಗತಿಯನ್ನು ಜತನದಿಂದ ಹೆಣೆಯಲಾಗಿತ್ತು.

 ಹೀಗಾಗಿ ಈ ಸಮಸ್ಯೆಯ ಹಿಂದಿರುವ ರಾಜಕಿಯ ಸ್ವರೂಪವನ್ನು ಗುರುತಿಸಲು ನಿರಾಕರಿಸುವ ಮೂಲಕ ಸುಪ್ರೀಂ ಕೋರ್ಟು ಯಾವ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದೆಯೋ ಅದನ್ನು ಸಾಧಿಸುವಲ್ಲಿ ವಿಫಲವಾಗುತ್ತಿದೆ. ಈ ರೀತಿಯ ದೊಂಬಿಕೊಲೆಗಳಲ್ಲಿ ಆರೋಪಿಗಳಾಗಿದ್ದವರು ಕೇವಲ ಜಾಮೀನಿನ ಮೇಲೆ ಹೊರಬಂದ ಮಾತ್ರಕ್ಕೆ ಅವರನ್ನು ಕೇಂದ್ರದ ಮಂತ್ರಿಯೊಬ್ಬರು ಸಾರ್ವಜನಿಕವಾಗಿ ಹೂವಿನ ಹಾರದ ಮೂಲಕ ಬರಮಾಡಿಕೊಂಡು ತಾವು ಕಾನೂನಿನ ಪ್ರಕ್ರಿಯೆಯನ್ನಷ್ಟೇ ಗೌರವಿಸುತ್ತಿದ್ದೇನೆಂದು ಸಮರ್ಥಿಸಿಕೊಳ್ಳುತ್ತಿರುವಾಗ ದೊಂಬಿಕೊಲೆಗಳನ್ನ ಹತ್ತಿಕ್ಕಲೆಂದೇ  ರೂಪಿಸಬಹುದಾದ ಒಂದು ಕಾನೂನು ಜನರಲ್ಲಿ ಕಾನೂನಿನ ಬಗ್ಗೆ ಭಯವನ್ನು ಹೇಗೆ ಬಿತ್ತಲು ಸಾಧ್ಯ? ಉತ್ತರಪ್ರದೇಶದ ಮುಖ್ಯಮಂತ್ರಿಗಳು ತಮ್ಮ ರಾಜ್ಯದಲ್ಲಿ ಪೊಲೀಸರು ನಡೆಸಿರುವ ಕಾನೂನು ಬಾಹಿರ ಕೊಲೆಗಳನ್ನು ತಮ್ಮ ಸರ್ಕಾರದ ಸಾಧನೆಯೆಂಬಂತೆ ಕೊಚ್ಚಿಕೊಳ್ಳುತ್ತಿರುವಾಗ ಸುಪ್ರೀಂ ಕೋರ್ಟು ಕಾನೂನಿನ ಆಡಳಿತದ ಬಗ್ಗೆ ಕೊಡುವ ಪವಿತ್ರ ಉಪದೇಶಗಳಿಂದ ಮತ್ತು ಪೊಲೀಸರಿಗೆ ನೀಡುವ ಯಾವುದೇ ನಿರ್ದೇಶನದಿಂದ ಯಾವ ಪರಿಣಾಮವನ್ನು ನಿರೀಕ್ಷಿಸಲು ಸಾಧ್ಯ?

ಮತ್ತೊಂದು ಕಡೆ ದನದ ಮಾಂಸವನ್ನು ಇಟ್ಟುಕೊಳ್ಳುವುದನ್ನೇ ಅಪರಾಧವೆಂದು ಮಾಡಿ ಹಲವಾರು ಬಿಜೆಪಿ ಶಾಸಿತ ರಾಜ್ಯಗಳು ಜಾರಿಗೆ ತಂದಿರುವ ದನದ ಮಾಂಸ ನಿಷೇಧ ಕಾನೂನುಗಳನ್ನು ಪ್ರಶ್ನಿಸಿ ಹಾಕಲಾಗಿರುವ ದಾವೆಗಳು ೨೦೧೬ರಿಂದ ನೆನೆಗುದಿಗೆ ಬಿದ್ದಿದ್ದು ಸುಪ್ರೀಂ ಕೋರ್ಟು ಅದರ ವಿಚಾರಣೆಯನ್ನೇ ಇನ್ನೂ ಪ್ರಾರಂಭಿಸಿಲ್ಲ. ನ್ಯಾಯಮೂರ್ತಿ ಪುಟ್ಟಸ್ವಾಮಿ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದಲ್ಲಿ ತಮಗೆ ಇಷ್ಟವಾದ ಆಹಾರವನ್ನು ತಿನ್ನುವ ಹಕ್ಕನ್ನು ಸುಪ್ರೀಂ ಕೋರ್ಟು ಎತ್ತಿ ಹಿಡಿದಿದ್ದರೂ ತಮ್ಮದೇ ಕೋರ್ಟು ಈ ಹಿಂದೆ ದನದ ಮಾಂಸದ ಮಾರಾಟದ ಮೇಲಿನ ನಿಷೇಧವನ್ನು ಸಿಂಧುಗೊಳಿಸಿದ ತೀರ್ಮಾನವನ್ನು ಮಾತ್ರ ತಪ್ಪೆಂದು ಅಭಿಪ್ರಾಯ ಪಟ್ಟಿಲ್ಲ. ಹೀಗಾಗಿ ದಲಿತರ ಮತ್ತು ಮುಸ್ಲಿಮರ ಜೀವಗಳನ್ನು ಅಪಾಯಕ್ಕೊಡ್ಡುವ ಕಾನೂನಿನ ಚೌಕಟ್ಟನ್ನು ಮಾತ್ರ ಯಥಾವತ್ ಮುಂದುವರೆಸುವ ಕೋರ್ಟುಗಳು ದೊಂಬಿಕೊಲೆಗಳ ಬಗ್ಗೆ ಉಪದೇಶಗಳನ್ನೂ ಹಾಗೂ ಇಡೀ ವಿದ್ಯಮಾನದ ಬಗ್ಗೆ ಆತಂಕವನ್ನು ವ್ಯಕ್ತಪಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ.

ಸುಪ್ರೀಂಕೋರ್ಟು ಈ ವಿಷಯದಲ್ಲಿ ಕೆಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೇ ಮಾಡಿರುವ ಪಾಪದ ಜೊತೆಜೊತೆಗೆ ದೌರ್ಜನ್ಯಗಳಿಗೆ ಪೂರಕವಾದ ಇತರ ಕೆಲವು ಅಂಶಗಳನ್ನು ಸಕ್ರಿಯವಾಗಿ ಬೆಂಬಲಿಸುವ ಪಾಪವನ್ನೂ ಮಾಡಿದೆ. ಸುಭಾಷ್ ಕಾಶೀನಾಥ್ ಮಹಾಜನ್ ಮತ್ತು ಮಹಾರಾಷ್ಯ್ಟ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ, ಯಾವುದೇ ಮಾಹಿತಿ ಅಥವಾ ಪುರಾವೆಗಳಿಲ್ಲದಿದ್ದರೂ ಸುಪ್ರೀಂಕೋರ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯಗಳ ತಡೆ ಕಾಯಿದೆಯನ್ನು ದುರ್ಬಲಗೊಳಿಸಿ ದಲಿತರ ಮತ್ತು ಆದಿವಾಸಿಗಳ ಮೇಲೆ ದೌರ್ಜನ್ಯ ನಡೆಸುವ ಅಪರಾಧಿಗಳನ್ನು ಶಿಕ್ಷೆಗೆ ಒಳಪಡಿಸುವುದನ್ನು ಇನ್ನಷ್ಟು ಅಸಾಧ್ಯಗೊಳಿಸಿದೆ. ಹಾಗೆಯೇ ಇದೇ ಸುಪ್ರೀಂಕೋರ್ಟು ಗೋವನ್ನು ಒಳಗೊಂಡಂತೆ ಎಲ್ಲಾ ಹಾಲು ಕರೆಯುವ ಜಾನುವಾರುಗಳ ಜೀವವು ಮುಸ್ಲಿಂ ಕಸಾಯಿಗಳ  ಜೀವನೋಪಾಯಕ್ಕಿಂತ ಹೆಚ್ಚು ಮುಖ್ಯವೆಂದು ಘೋಷಿಸಿ ಗುಜರಾತ್ ಸರ್ಕಾರ ಮತ್ತು ಮಿರ್ಜಾಪುರ್ ಮೋತಿ ಖೂರೇಷಿ ಕಸಾಬ್ ಪ್ರಕರಣದಲ್ಲಿ ಗುಜರಾತಿನ ಅತ್ಯಂತ ಕ್ರೂರ ಗೋ ಹತ್ಯಾ ನಿಷೇಧ ಕಾಯಿದೆಯ ಸಾಂವಿಧಾನಿಕ ಸುಸಂಬದ್ಧತೆಯನ್ನು ಎತ್ತಿ ಹಿಡಿದಿದೆ.

ಹೀಗಾಗಿ ಪೋನಾವಾಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿರುವ ಆದೇಶದ ಬಗ್ಗೆ ಮೂಡುವ ಸಹಜವಾದ ಸಂದೇಹಗಳನ್ನು ಉಳಿಸಿಕೊಳ್ಳಬೇಕಿದೆ. ಭಾರತದಲ್ಲಿ ನಡೆಯುತ್ತಿರುವ ದೊಂಬಿಕೊಲೆಗಳ ಬಗ್ಗೆ ಏನಾದರೂ ಮಾಡಬೇಕೆಂಬ ಉದ್ದೇಶವನ್ನು ಹೊಂದಿದ್ದರೂ ಸಾರಂಶದಲ್ಲಿ ಅದನ್ನು ತಡೆಗಟ್ಟಲು ಅರ್ಥಪೂರ್ಣವಾದದ್ದೇನನ್ನು ಮಾಡದ ಆದೇಶವನ್ನಾಗಿ ಮಾತ್ರ ಈ ಆದೇಶವನ್ನು ಪರಿಗಣಿಸಬಹುದು. ಈ ಸಮಸ್ಯೆಯ ಬಗ್ಗೆ ನ್ಯಾಯಾಲಯದ ವಿಶ್ಲೇಷಣೆಯು ಉದ್ದೇಶಪೂರ್ವಕವಾದ ತಪ್ಪು ಮಾಹಿತಿಯಿಂದ ಕೂಡಿಲ್ಲವಾದರೂ ಅತ್ಯಂತ ಮೇಲುಮೇಲಿನದ್ದಾಗಿದೆ. ಹೀಗಾಗಿ ಅದು ಸೂಚಿಸಿರುವ ಪರಿಹಾರವು ಅಸಮರ್ಪಕವಾಗಿದೆ ಮತ್ತು ಅಪ್ರಬುದ್ಧವಾಗಿದೆ. ತನ್ನ ನ್ಯಾಯಿಕ ಕರ್ತವ್ಯಗಳನ್ನು ಚಿತ್ತಶುದ್ಧಿ ಮತ್ತು ಸಂಪೂರ್ಣ ಸಾಮರ್ಥ್ಯಗಳಿಂದ ಮಾಡದೆ ಕೇವಲ ಮೌಲ್ಯಗಳ ಬಗ್ಗೆ ಉಪದೇಶವನ್ನು ಮಾಡುವುದರಿಂದ ಸುಪ್ರೀಂಕೋರ್ಟಿನ ವಿಶ್ವಾಸಾರ್ಹತೆಯು ಹೆಚ್ಚುವುದಿಲ್ಲ. 

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top