ISSN (Print) - 0012-9976 | ISSN (Online) - 2349-8846

ಯುಜಿಸಿಯ ಅಧಿಕಾರ ಹರಣ

ವಿಶ್ವವಿದ್ಯಾಲಯಗಳ ಧನಸಹಾಯ ಅಯೋಗ (ಯುಜಿಸಿ)ವನ್ನು ವಿಸರ್ಜಿಸಲು ಸರ್ಕಾರವು ವ್ಯವಸ್ಥಿತ ಪ್ರಯತ್ನಗಳನ್ನು ಮಾಡುತ್ತಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ವಿಶ್ವವಿದ್ಯಾಲಯಗಳ ಧನಸಹಾಯ ಅಯೋಗವು (ಯುಜಿಸಿ) ಕಳೆದ ಆರು ದಶಕಗಳಿಂದ ಭಾರತದ ಉನ್ನತ ಶಿಕ್ಷಣಕ್ಕೆ ಸೇವೆ ಸಲ್ಲಿಸುತ್ತಾ ಬಂದಿದೆ. ತನ್ನ ವಾರಿಗೆಯ ಇತರ ಸಂಸ್ಥೆಗಳಂತೆ ಯುಜಿಸಿಯು ಸಹ ಕಳೆದ ಕೆಲ ಸಮಯದಿಂದ ತನ್ನ ಮೇಲೆ ಹೊರಿಸಲಾದ ವಿಧವಿಧ ಜವಾಬ್ದಾರಿಗಳನ್ನು ಪೂರೈಸಲು ಹೆಣಗುತ್ತಲೇ ಇದೆ. ಬದಲಾಗುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯ ಸಂದರ್ಭಗಳು ಮತ್ತು ಸೊರಗುತ್ತಿರುವ ಅದರ ಸಂಪನ್ಮೂಲಗಳು ಕೂಡ ಇದಕ್ಕೆ ಕಾರಣವಾಗಿವೆ. ಯುಜಿಸಿಯನ್ನು  ಜಾರಿಗೆ ತಂದು ಅದಕ್ಕೆ ಹಣಕಾಸು ಅಧಿಕಾರವನ್ನು ಒದಗಿಸಿದ ಕಾಯಿದೆಗೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರವು ಮುಂದಾಗಿದ್ದು ಅದಕ್ಕೆ ಯುಜಿಸಿಯ ಕಾರ್ಯಕ್ಷಮತೆಯ ಬಗ್ಗೆ ಇರುವ ಅಸಮಾಧಾನವೂ ಕಾರಣವೇ ಎಂಬುದು ಸ್ಪಷ್ಟವಿಲ್ಲ. ಅಥವಾ ಯುಜಿಸಿಯ ಬದಲಿಗೆ ತರಬಯಸಿರುವ ಹೊಸ ವ್ಯವಸ್ಥೆಯು ಯಾವ ದೃಷ್ಟಿಕೋನದಿಂದ ಪ್ರೇರಿತವಾಗಿದೆಯೆಂಬುದೂ ಸಹ ಸ್ಪಷ್ಟವಿಲ್ಲ.

ಕೇಂದ್ರ ಸರ್ಕಾರವು ಯುಜಿಸಿಯ ಬದಲಿಗೆ ತರಬಯಸಿರುವ ಉನ್ನತ ಶಿಕ್ಷಣ ಅಯೋಗವೆಂಬ ಈ ಹೊಸ ಸಂಸ್ಥೆಗೆ ಯುಜಿಸಿಗೆ ಇದ್ದ ಎಲ್ಲಾ ಜವಾಬ್ದಾರಿಗಳನ್ನೂ ವಹಿಸಲಾಗುವುದು. ಆದರೆ ಯುಜಿಸಿ ಹೆಸರಿನಲ್ಲೇ ಅಡಕವಾಗಿದ್ದ ಹಣಕಾಸು (ಗ್ರಾಂಟ್-ಧನಸಹಾಯ) ಜವಾಬ್ದಾರಿ ಮಾತ್ರ ಈ ಹೊಸ ಸಂಸ್ಥೆಗೆ ಇರುವುದಿಲ್ಲ. ಈ ಜವಾಬ್ದಾರಿಯನ್ನು ಮಾನವ ಸಂಪನ್ಮೂಲ ಇಲಾಖೆಯೇ ನಿರ್ವಹಿಸಲಿದೆ. ಇದರಿಂದ ಉನ್ನತ ಶಿಕ್ಷಣ ವಲಯದಲ್ಲಿ ಉಳಿದಿರುವ ಅಲ್ಪಸ್ವಲ್ಪ ಸ್ವಾಯತ್ತತೆಯೂ ಇಲ್ಲದಾಗಿ ಉನ್ನತ ಶಿಕ್ಷಣದ ಮೇಲೆ ಮಂತ್ರಿ ಮತ್ತು ಅಧಿಕಾರಿಗಳ ನಿಯಂತ್ರಣವು ಹೆಚ್ಚಲಿದೆಯೆಂದು ವಿದ್ವತ್ ಲೋಕ ಆತಂಕವನ್ನು ವ್ಯಕ್ತಪಡಿಸುತ್ತಿದೆ.

ಮತ್ತೊಂದು ಕಡೆ ಸರ್ಕಾರವು ತನ್ನ ನಿರ್ಧಾರದ ಬೆಂಬಲಕ್ಕೆ ಹಲವಾರು ಪರಿಣಿತ ಸಮಿತಿಗಳ ವರದಿಗಳನ್ನು ಉಲ್ಲೇಖಿಸುತ್ತಿದೆ. ಅಸಲು ಸಮಸ್ಯೆ ಎದುರಾಗುತ್ತಿರುವುದು ಅಲ್ಲೇ. ಒಂದು ದಶಕದ ಹಿಂದೆ ದಿವಂಗತ ಯಶಪಾಲ್ ಅವರ ನೇತೃತ್ವದಲ್ಲಿ ರಚಿಸಲಾದ ಸಮಿತಿ ಹಾಗೂ ರಾಷ್ಟ್ರೀಯ ಜ್ನಾನ ಅಯೋಗವೂ ಕೂಡಾ ಯುಜಿಸಿಯ ಪಾತ್ರವನ್ನು ಪರಿಗಣಿಸಿತ್ತು. ಈ ಎರಡೂ ಸಮಿತಿಗಳು ಕೊಟ್ಟ ವರದಿಗಳು ಯುಜಿಸಿಯನ್ನು ರದ್ದುಮಾಡುವುದಕ್ಕೆ ರೂಪುಗೊಂಡಿರುವ ಸರ್ವಸಮ್ಮತಿಯೆಂದೇ ಭಾವಿಸಲಾಗಿತ್ತು. ಅದರೆ ಅವರು ಗುರುತಿಸಿದ ಸಮಸ್ಯೆಗಳು ಮತ್ತು ಅವರು ಅಂತಿಮವಾಗಿ ನೀಡಿದ ಶಿಫಾರಸ್ಸಿನ ಹಿಂದಿನ ಆಧಾರಗಳು ಮತ್ತು ಸ್ವರೂಪಗಳು ಭಿನ್ನವಾಗಿವೆ. ರಾಷ್ಟ್ರೀಯ ಜ್ನಾನ ಅಯೋಗದ ಪ್ರಮುಖ ಕಾಳಜಿಯು ಬೆಳೆಯುತ್ತಿರುವ ಖಾಸಗಿ ಕ್ಷೇತ್ರಕ್ಕೆ ಮುಕ್ತ ಅವಕಾಶವನ್ನು ಕೊಡುವುದಾಗಿದ್ದರೆ ಯಶಪಾಲ್ ಸಮಿತಿಯು ಉನ್ನತ ವೃತ್ತಿಪರ ಶಿಕ್ಷಣವನ್ನು ನಿಯಂತ್ರಿಸುವ ಸಂಸ್ಥೆಗಳು ಮತ್ತು ಯುಜಿಸಿಯು ಒಂದರಮೇಲೊಂದು ಸವಾರಿ ಮಾಡುವ ರೀತಿ ಇರುವ ಅಂಶಗಳ ಬಗ್ಗೆ ಹೆಚ್ಚು ಕಳವಳ ಹೊಂದಿತ್ತು.  ವಾಸ್ತವವಾಗಿ ಯಶಪಾಲ್ ಸಮಿತಿಯು ಯುಜಿಸಿಯನ್ನು ರದ್ದು ಮಾಡಬೇಕೆಂಬ ಶಿಫಾರಸ್ಸನ್ನು ನೀಡಿರಲೇ ಇಲ್ಲ. ಯಶಪಾಲ್ ಸಮಿತಿ ಬಳಸಿದ ಪದ ಯುಜಿಸಿಯ ಕಾರ್ಯಭಾರವನ್ನು ಒಳಗೊಳ್ಳುವಂಥ (ಸಬ್‌ಸ್ಯೂಮ್) ಸಂಸ್ಥೆಯನ್ನು ಕಟ್ಟಬೇಕು ಎಂಬುದಾಗಿತ್ತು. ಅಂದರೇ ಒಂದೆಡೆ ಯುಜಿಸಿಯು  ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ನ್ಯಾಯಬದ್ಧ ಧನಸಹಾಯ ವಿತರಣೆ ಮಾಡುವಂಥ ಗುರುತರ ಜವಾಬ್ದಾರಿಯನ್ನು ಮುಂದುವರೆಸಿಕೊಂಡು ಹೋಗಲು ಬಿಟ್ಟು ತುಂಬಾಸಮಯದಿಂದ ನಿರ್ಲಕ್ಷಿಸಲಾಗಿರುವ ಪಠ್ಯಕ್ರಮಗಳನ್ನು ತಯಾರಿಸುಂಥ, ವಿವಿಧ ವಿದ್ವತ್ ಕ್ಷೇತ್ರಗಳ ನಡುವೆ ಮತ್ತು ಉನ್ನತ ವೃತ್ತಿಪರ ಶಿಕ್ಷಣದ ವಿವಿಧ ವಲಯಗಳ ನಡುವೆ  ಅಂತರ್‌ಶಿಸ್ತೀಯ ಅಧ್ಯಯನದ ಸೇತುವೆಗಳನ್ನು ಕಟ್ಟುವಂಥ ಮೂಲಭೂತವಾಗಿ ಚರ್ಚೆ ಮತ್ತು ಸಂವಾದಗಳ ವೇದಿಕೆಯಾಗಿರುಂಥ ಒಂದು ಹೊಸ ಸಂಸ್ಥೆಯನ್ನು ಕಟ್ಟಬೇಕೆಂಬುದು ಅದರ ಶಿಫಾರಸ್ಸಿನ ಸಾರವಾಗಿತ್ತು.

ಆದರೆ ಈಗ ಸರ್ಕಾರ ಮುಂದಿಟ್ಟಿರುವುದು ಯುಜಿಸಿಯ ಹಣಕಾಸು ಜವಾಬ್ದಾರಿಯನ್ನು ಮಾನವ ಸಂಪನ್ಮೂಲ ಇಲಾಖೆಗೆ ವರ್ಗಾಯಿಸಬೇಕೆಂಬ ಪ್ರಸ್ತಾಪ. ವೃತ್ತಿಪರ ಶಿಕ್ಷಣದ ಹಲವು ಅಂಶಗಳನ್ನು ಆಂಶಿಕವಾಗಿ ಪ್ರಸ್ತಾವಿತ ಉನ್ನತ ಶಿಕ್ಷಣ ಅಯೋಗದ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಪ್ರಸ್ತಾಪಗಳು ಯಶಪಾಲ್ ಅಯೋಗದ ಕೆಲವು ಶಿಫಾರಸ್ಸುಗಳ ಪ್ರತಿಧ್ವನಿಯಂತೆ ಕೇಳಿಸಿದರೂ ಇದು ಮಾತ್ರ ಯಶಪಾಲ್ ಸಮಿತಿಯ ಶಿಫಾರಸ್ಸುಗಳಿಗೆ ತದ್ವಿರುದ್ಧವಾದ ಪ್ರಸ್ತಾಪವಾಗಿದೆ. ಈ ರೀತಿ ಹಣಕಾಸು ಅಧಿಕಾರವನ್ನು ಮತ್ತು ನಿಯಂತ್ರಣ ಆಧಿಕಾರವನ್ನು ಬೇರ್ಪಡಿಸುವುದು ಮತ್ತು ಹಣಕಾಸು ಅಧಿಕಾರವನ್ನು ಸರ್ಕಾರಕ್ಕೆ ವರ್ಗಾಯಿಸುವ ಪ್ರಸ್ತಾಪಗಳು ಜನರಲ್ಲಿ ಸಂದೇಹವನ್ನು ಮೂಡಿಸುತ್ತದೆಂಬುದರ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಸಂಪನ್ಮೂಲ ವರ್ಗಾವಣೆಯಲ್ಲಿ ಆಗಬಹುದಾದ ಯಾವುದೇ ತೊಡರುಗಳನ್ನು ಆನ್‌ಲೈನ್ ಮೂಲಕವೇ ಸರಿತಿದ್ದುವಂಥ ಭರವಸೆಗಳನ್ನು ಸರ್ಕಾರ ನೀಡಿದೆ. ಆದರೆ ಸಾಂಸ್ಥಿಕ ಮೌಲ್ಯಮಾಪನ ಹಾಗೂ ಇನ್ನಿತರ ಪದ್ಧತಿಗಳನ್ನು ಜಾರಿಗೆ ತರುವ ಮೂಲಕ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಆಚರಣೆಗೆ ತಂದಿರುವ ತಥಾಕಥಿತ ಪ್ರತಿಭಾಧಾರಿತ ಆಡಳಿತವು ತನ್ನ ವಿಶ್ವಾಸಾರ್ಹತೆಯನ್ನು ಕುಗ್ಗಿಸಿದೆ ಎಂಬುದರ ಅರಿವು ಸರ್ಕಾರಕ್ಕಿಲ್ಲ ಎಂಬುದನ್ನೇ ಈ ಪ್ರಸ್ತಾಪಗಳು ಎದ್ದು ತೋರಿಸುತ್ತವೆ. ಯುಜಿಸಿಯು ಈವರೆಗೆ ನಿರ್ವಹಿಸಿಕೊಂಡು ಬಂದಿರುವ ಉನ್ನತ ಶಿಕ್ಷಣದ ಹಣಕಾಸು ನಿರ್ವಹಣೆಯನ್ನು ಬದಲಾಯಿಸಲು ಕಾಯಿದೆಗೆ ತಿದ್ದುಪಡಿ ತರಲು ಸರ್ಕಾರವು ತೆಗೆದುಕೊಳ್ಳುತ್ತಿರುವ ಕ್ರಮಗಳ ವೇಗವು ಆತಂಕವನ್ನೂ ಹುಟ್ಟಿಸುವಂತಿದೆ. ಮತ್ತು ವಿಪರ್ಯಾಸದಿಂದಲೂ ಕೂಡಿದೆ. ಈ ಕ್ರಮಗಳು ಏಕೆ ಆತಂಕಕಾರಿಯೆಂದರೆ ಕಳೆದ ಹಲವಾರು ಬಜೆಟ್ಟುಗಳಲ್ಲಿ ಉನ್ನತ ಶಿಕ್ಷಣಕ್ಕೆ ನೀಡುತ್ತಿದ್ದ ಹಣವನ್ನು ಕಡಿತಗೊಳಿಸುತ್ತಲೇ ಬರಲಾಗಿದೆ. ಉನ್ನತ ಶಿಕ್ಷಣದಲ್ಲಿ ದೊಡ್ಡಮಟ್ಟದಲ್ಲಿ ಖಾಸಗಿ ಕ್ಷೇತ್ರವು ಬೆಳೆಯುತ್ತಿದೆ ಮತ್ತು ಅವುUಳ ಹಣಕಾಸಿನ ಮೇಲೆ ಯಾವುದೇ ಪರಿಣಮಕಾರಿ ಸರ್ಕಾರಿ ನಿಯಂತ್ರಣವಿಲ್ಲದಿರುವುದು ಭವಿಷ್ಯದಲ್ಲಿ ಉನ್ನತ ಶಿಕ್ಷಣ ವಲಯದಲ್ಲಿ ಹೊರಹೊಮ್ಮಲಿರುವ ನೀತಿಗಳು ಏನಾಗಿರಲಿವೆಯೆಂಬ ಮುನ್ಸೂಚನೆಗಳನ್ನು ನೀಡುತ್ತಿವೆ.

ಸರ್ಕಾರವು ತನ್ನ ಪ್ರಸ್ತಾವಿತ ನೀತಿಗಳ ಜಾರಿಗೆ ತೋರುತ್ತಿರುವ ಅವಸರವೂ ಮತ್ತು ವಿಪರ್ಯಾಸವೂ ಎದ್ದುಕಾಣುವುದು ಇಲ್ಲಿ.  ೧೯೮೬ರಲ್ಲಿ ರೂಪಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿಯ ಬದಲಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡೊಂದನ್ನು ರೂಪಿಸುವ ಪ್ರಕ್ರಿಯೆಯನ್ನು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಪ್ರಾರಂಭಿಸಿ ಇಲ್ಲಿಗೆ ನಾಲ್ಕು ವರ್ಷಗಳಾದವು. ಹೊಸ ನೀತಿಯೊಂದನ್ನು ರೂಪಿಸುವ ಪ್ರಕ್ರಿಯೆಯು ಈವರೆಗೆ ಹಲವಾರು ಸ್ಥಿತ್ಯಂತರಗಳನ್ನು ಕಂಡಿದೆ. ಇದರಲ್ಲಿ ಆಗುತ್ತಿರುವ ವಿಳಂಬವು ಅಪಾರ ಆಶಾವಾದಿಗಳಿಗೂ ಭ್ರಮನಿರಸನ ತಂದಿದೆ. ಇದೀಗ ಅದರ ಕರಡನ್ನು ಕಸ್ತೂರಿ ರಂಗನ್ ಸಮಿತಿಯು ತಯಾರಿಸುತ್ತಿದ್ದು ೨೦೧೮ರ ಸೆಪ್ಟೆಂಬರ್ ಒಳಗೆ ಹೊಸ ಕರಡು ಸಿದ್ಧವಾಗಲಿದೆಯೆಂದು ಹೊಸ ಗಡುವನ್ನು ಸರ್ಕಾರ ನೀಡಿದೆ. ಹೀಗಾಗಿ ಈ ಹೊಸ ಕರಡು ಉನ್ನತ ಶಿಕ್ಷಣದ ಹಣಕಾಸು ನಿರ್ವಹಣೆ ಮತ್ತು ಅದರಲ್ಲಿ ಯುಜಿಸಿಯ ಪಾತ್ರದ ಬಗ್ಗೆಯೂ ಪ್ರಸ್ತಾಪವನ್ನು ಮಾಡಲಿದೆಯೆಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಒಂದು ನೀತಿಯ ಕರಡನ್ನು ತಯಾರಿಸಲೆಂದು ಇಟ್ಟುಕೊಂಡಿರುವ ಗಡುವಿನ ಮೂರು ತಿಂಗಳು ಮುಂಚೆಯೇ ಯುಜಿಸಿಯ ಪ್ರಧಾನ ಪಾತ್ರವೊಂದಕ್ಕೆ ಕಾಯಿದೆಯಲ್ಲಿ ತಿದ್ದುಪಡಿತರಲು ಸದನದಲ್ಲಿ ಸರ್ಕಾರವು ನಡೆಸುತ್ತಿರುವ ಪ್ರಯತ್ನಗಳು ನಿರಾಶೆಯನ್ನು ಹುಟ್ಟಿಸುವಂತಿದೆ. ಒಂದು ಹೊಸ ರಾಷ್ಟ್ರೀಯ ಶಿಕ್ಷಣ ಕಾಯಿದೆಯ ಕgಡು  ತಯಾರಾಗುತ್ತಿರುವ ಹೊತ್ತಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವಂಥ ಯಾವುದೇ ಪ್ರಮುಖ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲವೆಂಬ ನಿರೀಕ್ಷೆ ಎಲ್ಲರಲ್ಲಿತ್ತು.

ಯುಜಿಸಿ ಕಾಯಿದೆಗೆ ತಿದ್ದುಪಡಿ ತರಲು ಸರ್ಕಾರ ಮಾಡುತ್ತಿರುವ ತರಾತುರಿಯನ್ನು ನೋಡಿದರೆ ಯುಜಿಸಿಗೆ ನೀಡಲಾಗಿರುವ ಹಣಕಾಸು ಜವಾಬ್ದಾರಿಯನ್ನು ಹಿಂತೆಗೆದುಕೊಳ್ಳುವ ತನ್ನ ನಿರ್ಧಾರಕ್ಕೆ ಯಾವುದೇ ಹೊಸ ನೀತಿಗಳು ಅಡ್ಡಬರದಂತೆ ಮಾಡುವುದೇ ಅದರ ಉಪಾಯವೆಂದು ಕಾಣುತ್ತದೆ. ಅಥವಾ ಬರಲಿರುವ ಹೊಸ ನೀತಿಯು ಶಿಕ್ಷಣ ಕ್ಷೇತ್ರಗಳಲ್ಲಿ ಯಾವುದೇ  ಹೊಸ ಉಪಕ್ರಮಗಳಿಗೆ ಅದರಲ್ಲೂ ಹಣಕಾಸಿಗೆ ಸಂಬಂಧಪಟ್ಟ ವಿಷಯದಲ್ಲಿ ಯಾವೂದೇ ನೀತಿ ತೊಡಕುಗಳು ಹುಟ್ಟಿಸದಂತೆ ನೋಡಿಕೊಳ್ಳಲಿದೆಯೆಂಬುದನ್ನು ಸರ್ಕಾರ ಈ ಕ್ರಮಗಳು ಹೇಳುತ್ತಿವೆ. ೧೯೯೦ರ ನಂತರ ಸಾಮಾಜಿಕ ಕ್ಷೇತ್ರಗಳ ನೀತಿಯನ್ನು ನಿರ್ಧರಿಸುವಲ್ಲಿ ಆರ್ಥಿಕ ನೀತಿಗಳು ವಹಿಸುತ್ತಿರುವ ಪ್ರಧಾನ ಪಾತ್ರವನ್ನು ಗಮನಿಸಿದಾಗ ಈ ಊಹೆಗಳಿಗೆ ಆಧಾರವಿದೆಯೆಂಬುದು ಅರ್ಥವಾಗುತ್ತದೆ. ಇನ್ನು ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ನವ ಉದಾರವಾದಿ ಆರ್ಥಿಕ ನೀತಿಗಳ ಪ್ರಭಾವವಾಗದಂತೆ ನೋಡಿಕೊಳ್ಳುವ ಬಗ್ಗೆ  ಕೇಂದ್ರ ಸರ್ಕಾರಕ್ಕಾಗಲೀ ಅಥವಾ ಯಾವುದೇ ರಾಜ್ಯ ಸರ್ಕಾರಗಳಿಗಾಗಲೀ ಕಿಂಚಿತ್ತೂ ಕಾಳಜಿ ಇಲ್ಲವೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹಾಲೀ ಕ್ರಮವೂ ಸಹ ಅದೇ ದಿಕ್ಕಿನಲ್ಲಿದೆ. ಏಕೆಂದರೆ ಈ ಕ್ರಮವೂ ಸಹ ಸಾರ್ವಜನಿಕ ಸಂಸ್ಥೆಗಳ ಪಾತ್ರವನ್ನು ಮತ್ತಷ್ಟು ಮೊಟಕುಗೊಳಿಸುತ್ತಿದೆ. ಪ್ರತಿಭೆ ಮತ್ತು ಗುಣಮಟ್ಟದ ಆಧಾರದ ವಿತರಣೆಯ ಹೆಸರಿನಲ್ಲಿ ಹಣಕಾಸು ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಲಿದೆ. ಮತ್ತು ಇವೆಲ್ಲದರ ಪರಿಣಾಮವಾಗಿ ದೇಶದ ಬೌದ್ಧಿಕ ಬದುಕು ಮತ್ತು ಜ್ನಾನೋತ್ಪಾದನೆಯಲ್ಲಿ ಖಾಸಗಿ ಬಂಡವಾಳಕ್ಕೆ ಹೆಚ್ಚಿನ ಪಾತ್ರವನ್ನು ಒದಗಿಸಲಿದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top