ISSN (Print) - 0012-9976 | ISSN (Online) - 2349-8846

ಒಂದು ಪ್ಲಾಸ್ಟಿಕ್ ವಿಪತ್ತು

ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರದೆ ಮತ್ತು ಬಳಕೆದಾರರಲ್ಲಿ ಜಾಗೃತಿ ಮೂಡಿಸದೆ ಬಳಸಿ-ಬಿಸಾಡುವ ಪ್ಲಾಸ್ಟಿಕ್ ಅನ್ನು ನಿಷೇಧಿಸುವುದರಿಂದ ಮಾತ್ರ ಯಾವುದೇ ಪ್ರಯೋಜನವಿಲ್ಲ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಉಪದೇಶಗಳು ಮತ್ತು ಘೋಷಣೆಗಳು ಬದಲಾವಣೆಗಳನ್ನು ತರುವುದಿಲ್ಲ; ಅವುಗಳ ಜೊತೆಗೆ ವಿವರವಾದ, ಪ್ರಾಯೋಗಿಕವಾದ ಮತ್ತು ಆಚರಣೆಗ ತರಬಲ್ಲ ಯೋಜನೆಗಳಿದ್ದಾಗ ಮಾತ್ರ ಬದಲಾವಣೆಗಳು ಸಾಧ್ಯ. ವಿಶ್ವ ಪರಿಸರ ದಿನವಾದ ಜೂನ್ ೫ ರಂದು ಪ್ರಧಾನಿ ನರೇಂದ್ರ ಮೋದಿಯವರು ೨೦೨೨ರ ವೇಳೆಗೆ ಭಾರತವು ಬಳಸಿ-ಬಿಸಾಡುವ ಪ್ಲಾಸ್ಟಿಕ್ ಇಂದ ಸಂಪೂರ್ಣ ವಿಮುಕ್ತಿ ಸಾಧಿಸಲಿದೆಯೆಂದು ಘೋಷಿಸಿದರು. ಆದರೆ ಈ ನಾಟಕೀಯ ಘೋಷಣೆಯನ್ನು ಅವಧಿಯೊಳಗೆ ಸಾಧಿಸುವ ಯಾವುದಾದರೂ ಯೋಜನೆಯಿದೆಯೇ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ.

ನಾವು ಪ್ಲಾಸ್ಟಿಕ್ ಎಂದು ಕರೆಯುವ ಈ ಪಾಲಿಥಿಲೀನ್ ಅನ್ನು ೧೮೯೮ರಲ್ಲೇ ಆವಿಷ್ಕರಿಸಲಾಯಿತಾದರೂ ಅದರ ಸಾಮೂಹಿಕ ಉತ್ಪಾದನೆ ಶುರುವಾದದ್ದು ಮಾತ್ರ ೧೯೩೯ರಲ್ಲಿ. ಅಂದಿನಿಂದ ಅದು ಬಳಸಿ-ಬಿಸಾಡುವ ಪ್ಲಾಸ್ಟಿಕ್‌ನಿಂದ ಮೊದಲುಗೊಂಡು ಇತರ ಹಲವು ಬಗೆಯ ಬಳಕೆಗಳ ಮೂಲಕ ನಮ್ಮ ಜೀವನವನ್ನು ಆವರಿಸಿಕೊಂಡಿದೆ. ಇದು ಅಗ್ಗ, ಹಗುರ ಮತ್ತು ಬೇಕೆಂದಂತೆ ಮಾರ್ಪಾಡಾಗಬಲ್ಲ ಬಳಕಾ ಸಾಮಗ್ರಿಯಾಗಿದೆ. ಹೀಗಾಗಿ ಅದರ ಬದಲಿಗೆ ಮತ್ತೊಂದರ ಬಳಕೆಯನ್ನು ಪರಿಚಯಿಸುವುದು ಅಷ್ಟು ಸುಲಭವಲ್ಲ. ಇದು ಬಳಸಿ ಬಿಸಾಕು ತತ್ವವನ್ನಾಧರಿಸಿದ ಹಳೆಯ ಕೈಗಾರಿಕಾ ದೇಶಗಳಿಂದ ನಾವು ಆಮದು ಮಾಡಿಕೊಂಡಿರುವ ಆರ್ಥಿಕ ಅಭಿವೃದ್ಧಿ ಮಾದರಿಯ ಪ್ರತೀಕವೂ ಆಗಿದೆ. ಇಲ್ಲಿ ಯಾವುದೂ ಶಾಶ್ವತವಾಗುಳಿಯುವಂತಿಲ್ಲ. ಆಗ ಮಾತ್ರ ಕೈಗಾರಿಕೆಯ ಯಂತ್ರಗಳು ತಿರುಗುತ್ತಿರಲು ಸಾಧ್ಯ. ಈ ಮಾದರಿಯನ್ನು ಬದಲಾಯಿಸುವುದು ಊಹಿಸಲಸಾಧ್ಯವೆಂಬಂತೆ ಕಾಣುತ್ತದೆ. ಆದರೂ ಇದರಿಂದ ಉಂಟಾಗುತ್ತಿರುವ ಅನಾಹುತವನ್ನು ವಿಶ್ವಸಂಸ್ಥೆಯ ಪರಿಸರ ಯೋಜನೆಯು ಪ್ಲಾಸ್ಟಿಕ್ ವಿಪತ್ತು ಎಂದು ಬಣ್ಣಿಸಿದ್ದು ಈ ಬಳಸಿ ಬಿಸಾಡು ಸಂಸ್ಕೃತಿಯ ಬಗೆಗಿನ ನಮ್ಮ ಉಡಾಫೆಯ ಧೋರಣೆಯ ಮೂಲವೂ ಇದೇ ಆಗಿದೆ.

ಇಂದು ನಮ್ಮ ಮಹಾ ಸಾಗರಗಳು ಅಂದಾಜು ೧೫ ಕೋಟಿ ಟನ್ನಿನಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಒಳಗಿರಿಸಿಕೊಂಡಿದೆ ಎಂಬುದು ಸಾಬೀತಾಗಿದೆ; ಇದರಿಂದಾಗಿ ಸಮದ್ರ ಜೀವಿಗಳು, ಪಕ್ಷಿಗಳು ಮತ್ತು ಸಸ್ಯಗಳು ಉಸಿರುಗಟ್ಟಿ ಸಾಯುತ್ತಿವೆ; ದೊಡ್ಡ ಪ್ರಮಾಣದ ಜಮೀನುಗಳ ಮೇಲೆ ನಾಶವಾಗದ ಪ್ಲಾಸ್ಟಿಕ್ ಯುಕ್ತ ತ್ಯಾಜ್ಯಗಳನ್ನು ಸುರಿಯಲಾಗುತ್ತಿದ್ದು ಅವು ಮಣ್ಣಿನೊಳಗೆ ಕರಗಿಹೋಗದೆ ಹಾಗೆಯೇ ವಿಷಯುಕ್ತವಾಗುಳಿಯುತ್ತಿವೆ; ಮತ್ತು ಈ ತ್ಯಾಜ್ಯಗಳಿಂದ ಮೈಕ್ರೋ ಪ್ಲಾಸ್ಟಿಕ್ಕುಗಳು ಜಲಸಂಪನ್ಮೂಲದೊಳಗೆ ಮತ್ತು ಆಹಾರ ಚಕ್ರದೊಳಗೆ ಬೆರೆತುಹೋಗುತ್ತಿರುವುದು  ಮತ್ತೊಂದು ಗಾಬರಿಗೊಳಿಸುವ ವಿಷಯವಾಗಿದೆ. ಇತ್ತೀಚೆಗೆ ಹಲವಾರು ದೇಶಗಳಲ್ಲಿನ ಕುಡಿಯುವ ನೀರಿನ ಸ್ಯಾಂಪಲ್ ಮಾದರಿಗಳ  ಅಧ್ಯಯನ ನಡೆದಿದ್ದು ಮೈಕ್ರೋ ಪ್ಲಾಸ್ಟಿಕ್ಕಿನಿಂದ ಕುಡಿಯುವ ನೀರು ಕಲುಷಿತಗೊಂಡಿರುವ ದೇಶಗಳಲ್ಲಿ ಭಾರvವು ಅಮೆರಿಕ ಮತ್ತು ಲೆಬನಾನಿನ ನಂತರ ಮೂರನೇ ಸ್ಥಾನದಲ್ಲಿದೆ; ಪರೀಕ್ಷೆ ಮಾಡಲ್ಪಟ್ಟ ಶೇ.೮೨.೪ರಷ್ಟು  ಮಾದರಿ ಸಂಗ್ರಹಗಳು ಪ್ಲಾಸ್ಟಿಕ್‌ಯುಕ್ತವಾಗಿತ್ತು. ನೀರು ಮತು ಆಹಾರಗಳ ಮೂಲಕ ಪ್ಲಾಸ್ಟಿಕ್ಕನ್ನು ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಇನ್ನೂ ಗಂಭೀರವಾದ ಅಧ್ಯಯನ ನಡೆಯುತ್ತಿದೆ. ಆದರೆ  ಪ್ಲಾಸ್ಟಿಕ್ ತ್ಯಾಜಗಳಿಂದ ನೀರು ಸರಬರಾಜಿಗೇ ತೊಂದರೆಯಾಗುತ್ತಿದೆಯೆಂಬುದೇ ಸಾಕಷ್ಟು ಕಳವಳಕಾರಿಯಾದ ಸಂಗತಿಯಾಗಿದೆ. ೧೯೫೦ರ ನಂತರದಲ್ಲಿ ವಿಶ್ವದಲ್ಲಿ ೮೩೦ ಕೋಟಿ ಟನ್ನುಗಳಷ್ಟು ಪ್ಲಾಸ್ಟಿಕ್ಕನ್ನು ಉತ್ಪಾದಿಸಲಾಗಿದ್ದು ಅದರಲ್ಲಿ ಕೇವಲ ಶೇ.೨೦ರಷ್ಟನ್ನು ಮಾತ್ರ ಮರುಬಳಕೆ ಮಾಡಲಾಗಿದೆ ಅಥವಾ ಸುಟ್ಟುಹಾಕಲಾಗಿದೆ. ಉಳಿದದ್ದು ಸಾಗರದಲ್ಲಿ, ಪರ್ವತ ಶ್ರೇಣಿಗಳಲ್ಲಿ, ನದಿ-ತೊರೆಗಳಲ್ಲಿ, ಬಾವಿಗಳಲ್ಲಿ, ಮತ್ತು ಭಾರತದಂಥ ಕಡೆಗಳಲ್ಲಿ ನಗರೀಕರಣದ ಖಾಯಿಲೆಯ ಪ್ರತೀಕವಾಗಿ ನಿಂತಿರುವ ಬೆಟ್ಟದಂತಾ ಕಸದ ರಾಶಿಗಳಲ್ಲಿ ಸೇರಿಕೊಂಡಿದೆ. ಈ ಸಮಸ್ಯೆಯು ಅಗಾಧ ಸ್ವರೂಪವನ್ನು ಪಡೆದುಕೊಂಡಿದೆ. ಇದು ಬಗೆಹರಿಯಬೇಕೆಂದರೆ ಉತ್ಪಾದನೆ ಮತ್ತು ಬಳಕೆಗಳ ಬಗ್ಗೆ ನಮ್ಮ ಧೋರಣೆಗಳನ್ನು ಹಿಂದುಮುಂದಾಗಿಸಿ ಪರಿಶೀಲಿಸುವ ಅಗತ್ಯವಿದೆ.

ಈ ಸಮಸ್ಯೆಯನ್ನು ನಿವಾರಿಸಲು ಭಾರತವು ತೆಗೆದುಕೊಂಡಿರುವ ಕ್ರಮಗಳು ಸಮಸ್ಯೆಯ ತಲೆಗಿಂತ ಬಾಲವನ್ನು ಮಾತ್ರ ಪರಿಗಣಿಸುವಂತಿದೆ. ಇದೇ ರೀತಿಯ ಧೋರಣೆಯನ್ನು ವಾಹನಗಳು ಉಂಟು ಮಾಡುತ್ತಿರುವ ಮಾಲಿನ್ಯವನ್ನು ನಿಯಂತ್ರಣ ಮಾಡುವಲ್ಲೂ ಪ್ರದರ್ಶಿಸಲಾಗಿದೆ. ವಾಹನಗಳು ಬಳಸುತ್ತಿರುವ ಇಂಧನಗಳ ಗುಣಮಟ್ಟದ ಮೇಲೆ ನಿಯಂತ್ರಣವನ್ನು ಹೇರುವ ಬದಲಿಗೆ ಎಲ್ಲಾ  ವಾಹನಗಳಿಗೂ ಪರಿಸರ ಮಾಲಿನ್ಯ ತಪಾಸಣೆಯನ್ನು ಮಾತ್ರ ಕಡ್ಡಾಯ ಮಾಡಲಾಗಿದೆ. ಈವರೆಗೆ ಭಾರತದ ೧೮ ರಾಜ್ಯಗಳು ತಮ್ಮ ರಾಜ್ಯಗಳ ನಿರ್ದಿಷ್ಟ ನಗರಗಳಲ್ಲಿ ಮತ್ತು ಪ್ರದೇಶಗಳಲ್ಲಿ ಬಳಸಿ-ಬಿಸಾಕುವ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿವೆ. ಆದರೆ ಈ ಕ್ರಮಗಳು ಜಗತ್ತಿನಾದ್ಯಂತ ಎಲ್ಲೂ ಯಶಸ್ವಿಯಾಗಿಲ್ಲ. ಬಳಸಿ-ಬಿಸಾಕುವ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರಲ್ಲಿ  ಅತಿ ಹೆಚ್ಚು ಯಶಸ್ಸನ್ನು ಸಾಧಿಸಿರುವ  ರಾಜ್ಯ ಸಿಕ್ಕಿಮ್. ಆ ರಾಜ್ಯದಲ್ಲಿ ೧೯೯೮ರಲ್ಲೇ ಬಳಸಿ-ಬಿಸಾಕುವ ಪ್ಲಾಸ್ಟಿಕ್ಕಿನ ಮೇಲೆ ನಿಷೇಧವನ್ನೂ ಹೇರಿದ್ದರೂ ಈವರೆಗೆ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಾಗಿಲ್ಲ. ಆದರೂ ಆ ರಾಜ್ಯವು ತನ್ನ ಜನರಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಾಧ್ಯವಾಗಿದೆಯಲ್ಲದೆ ಅಗ್ಗದ ಬೆಲೆಯ ಪರ್ಯಾಯಗಳನ್ನು ಪರಿಚಯಿಸುವ ಪ್ರಯತ್ನಗಳನ್ನೂ ಮಾಡಿದೆ. ೨೦೧೪ರಲ್ಲಿ ಟಾಕ್ಸಿಕ್ ಲಿಂಕ್ ಎಂಬ ಸಂಸ್ಥೆಯು ವಿಷಕಾರಿ ತ್ಯಾಜ್ಯಗಳು ಮತ್ತು ಪರಿಸರ ಎಂಬ ಬಗ್ಗೆ ನಡೆಸಿದ ಅಧ್ಯಯನದಲ್ಲಿ ದೆಹಲಿ, ಚಂಡಿಘಡ ಮತ್ತು ಸಿಕ್ಕಿಮ್‌ಗಳೂ ಸೇರಿದ್ದವು. ಅದರ ಪ್ರಕಾರ ದೆಹಲಿ ಮತ್ತು ಚಂಡೀಘಡಗಳು ಪ್ಲಾಸ್ಟಿಕ್ ಚೀಲಗಳ ಬಳಕೆಯ ಮೇಲೆ ನಿಷೇಧವನ್ನು ಹೇರಿದ್ದರೂ ಅದರ ಬಳಕೆಯನ್ನು ತಗ್ಗಿಸಲು ಅಥವಾ ಅದರ ಪರಿಣಾಮಗಳ ಬಗ್ಗೆ ಜನಜಾಗೃತಿಯನ್ನು ಮೂಡಿಸಲು ಯಶಸ್ವಿಯಾಗಿಲ್ಲ. ದೆಹಲಿ ಮತ್ತು ಚಂಡೀಘಡದಂಥಾ ಸಣ್ಣ ಸಣ್ಣ ರಾಜ್ಯಗಳಲೇ ಪ್ಲಾಸ್ಟಿಕ್ ನಿಷೇಧದ ಅನುಷ್ಠಾನದ ಪರಿಸ್ಥಿತಿ ಹೀಗಿರುವಾಗ ಇತ್ತೀಚೆಗೆ ತಾನೇ ಪ್ಲಾಸ್ಟಿಕ್ ನಿಷೇಧ ಮಾಡಿದಂಥ ಮಹಾರಾಷ್ಟ್ರದಂಥ ದೊಡ್ಡ ರಾಜ್ಯಗಳಲ್ಲಿ ಇಂಥಾ ನಿಷೇಧಗಳು ಸಫಲವಾಗುವ ಸಾಧ್ಯತೆ ಎಷ್ಟಿರಬಹುದು?

ಟಾಕ್ಸಿಕ್ ಲಿಂಕ್ ಅಧ್ಯಯನವು ತೋರಿಸಿಕೊಡುವಂತೆ ಈ ಸಮಸ್ಯೆಗೆ ಎರಡು ಆಯಾಮಗಳಿವೆ: ಸಣ್ಣಪುಟ್ಟ ವ್ಯಾಪಾರಸ್ಥರು, ಅದರಲ್ಲೂ ವಿಶೇಷವಾಗಿ ತರಕಾರಿ ಮತ್ತು ಮಾಂಸಗಳಂಥಾ ಕೊಳೆಯಬಲ್ಲ ಸರಕುಗಳನ್ನು ಮಾರುವ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಚೀಲಗಳು ಅಗ್ಗದ ದರದಲ್ಲೂ ಮತ್ತು ಸುಲಭವಾಗಿಯೂ ದೊರೆಯುತ್ತದೆ; ಎರಡನೆಯದಾಗಿ, ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಪರಿಸರದ ಮೇಲಾಗುವ ಅನಾಹುತಗಳ ಬಗ್ಗೆ ಜನರಲ್ಲಿ ಜಾಗೃತಿ ಅತಿ ಕಡಿಮೆ ಮಟ್ಟದಲ್ಲಿರುವುದು. ಇದರ ಜೊತೆಗೆ ಭಾರತದಲ್ಲಿ ಎಲ್ಲಾ ಬಗೆಯ ಪರಿಸರ ಸಂಬಂಧೀ ಕಾನೂನುಗಳ ಜಾರಿ ಅತ್ಯಂತ ದುರ್ಬಲವಾಗಿರುವುದೂ ಸಹ ಸೇರಿಕೊಳ್ಳುತ್ತದೆ. ಹೀಗಾಗಿ ಒಂದೆಡೆ ಪ್ಲಾಸ್ಟಿಕ್ ಚೀಲಗಳು ಅತ್ಯಂತ ಅನುಕೂಲಕಾರಿಯಾಗಿರುವುದರಿಂದ ಅದರಿಂದ ಬಿಡಿ ಗ್ರಾಹಕನಿಗೆ ಲಾಭವಾಗುತ್ತಿದ್ದರೂ, ಅವುಗಳ ತ್ಯಾಜ್ಯದ ಪರಿಣಾಮವನ್ನು ಮಾತ್ರ ಇಡೀ ಸಮಾಜವೇ ಒಟ್ಟಾಗಿ ಹೊರಬೇಕಾಗಿರುವ ಸಾಮುದಾಯಿಕ ದುರಂತವನ್ನು ಅನುಭವಿಸುವಂತಾಗಿದೆ ಎಂದು ಆ ವರದಿ ಹೇಳುತ್ತದೆ. 

ಪ್ಲಾಸ್ಟಿಕ್ ಬಳಕೆಯ ನಿಯಂತ್ರಣ, ಶಿಕ್ಷಾಭೀತಿ, ಮತ್ತು ಪ್ರೋತ್ಸಾಹಕರ ಕ್ರಮಗಳಿಂದಾಗಿ ಒಂದಷ್ಟು ಪರಿಹಾರಗಳು ದೊರೆಯಬಹುದಾದರೂ, ನಿಜವಾದ ಸವಾಲಿರುವುದು ಬಳಸಿ-ಬಿಸಾಕುವ ಪ್ಲಾಸ್ಟಿಕ್ಕುಗಳ ಉತ್ಪಾದನೆಯನ್ನೇ ನಿಲ್ಲಿಸುವುದರಲ್ಲಿ. ಉದಾಹರಣೆಗೆ ಭಾರತದಲ್ಲಿ ಶೇ.೮೫-೯೦ರಷ್ಟು ಪ್ಲಾಸ್ಟಿಕ್ ಉತ್ಪಾದನೆಯು ನಡೆಯುವುದು ಅಸಂಘಟಿತ ಮತ್ತು ಅನಿಯಂತ್ರಿತ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ. ಅದೇನೇ ಇದ್ದರೂ ಬಳಸಿ-ಬಿಸಾಕುವ ಪ್ಲಾಸ್ಟಿಕ್ ಚೀಲಗಳ ಉತ್ಪಾzನೆಯನ್ನು ನಿಲ್ಲಿಸುವುದರ ಮೂಲಕವೂ ಸಂಪೂರ್ಣ ಪರಿಹಾರ ದೊರೆಯುವುದಿಲ್ಲ. ಏಕೆಂದರೆ ಶೇ.೪೮ರಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳು ಉತ್ಪಾದನೆಯಾಗುವುದು ಬ್ರಾಂಡೆಡ್ ಆಹಾರ ಪದಾರ್ಥಗಳ ಪ್ಯಾಕೇಜುಗಳಿಗೆ ಬಳಸುವ ಪ್ಲಾಸ್ಟಿಕ್ಕಿನಿಂದಾಗಿ. ಹೀಗಾಗಿ ಈ ಅನಾಹುತಕ್ಕೆ ಬಹುರಾಷ್ಟ್ರೀಯ ಕಂಪನಿಗನ್ನೂ ಒಳಗೊಂಡಂತೆ ದೊಡ್ಡ ದೊಡ್ಡ ಕೈಗಾರಿಕೋದ್ಯಮಗಳೂ ಸಹ  ಕಾರಣವಾಗಿವೆ. ಹೀಗಾಗಿ ಯಾವ ಕಾರ್ಖಾನೆಗಳು ತಮ್ಮ ಉತ್ಪನ್ನಗಳ ಪಾಕೇಜುಗಳಲ್ಲಿ ಮರುಬಳಕೆಯಾಗದ ಪ್ಲಾಸ್ಟಿಕ್ಕನ್ನು ಬಳಸುತ್ತಿವೆಯೋ ಅವು ಅಂಥಾ ತ್ಯಾಜ್ಯಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ಹೊರವಂತೆ ಮತ್ತು ಅದಕ್ಕಾಗುವ ವೆಚ್ಚವನ್ನು ಭರಿಸುವಂತೆ ಉತ್ಪಾದಕರ ಹೊಣೆಗಾರಿಕೆಯನ್ನು ವಿಸ್ತರಿಸಬೇಕು. ಅದರ ಜೊತೆಗೆ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಬಳಸಲಾಗುವ ಜೈವಿಕವಾಗಿ ಕೊಳೆತು ಕರಗಬಲ್ಲ ವಸ್ತುಗಳಿಂದ ಮಾಡಲ್ಪಟ್ಟ ಅಥವಾ ಕಾಗದ, ಸೆಣಬು ಮತ್ತು ಬಟ್ಟೆಗಳಿಂದ ಮಾಡಲ್ಪಟ್ಟ ಚೀಲಗಳು ಸುಲಭದರದಲ್ಲಿ ಲಭ್ಯವಾಗುವಂತಾಗಬೇಕು. ಅಂತಿಮವಾಗಿ ಗ್ರಾಹಕರು ಅನುಕೂಲತೆ ಮತ್ತು ಪರಿಸರಾತ್ಮಕ ವಿಪತ್ತುಗಳ ನಡುವೆ ಪ್ರಜ್ನಾಪೂರ್ವಕ ಆಯ್ಕೆಯನ್ನು ಸಹ ಮಾಡಿಕೊಳ್ಳುವಂತಾಗಬೇಕು.

Updated On : 27th Jun, 2018

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top