ISSN (Print) - 0012-9976 | ISSN (Online) - 2349-8846

ಮತ್ತೆ ಊಳಿಗಮಾನ್ಯತೆಯತ್ತ ಸರಿಯುತ್ತಿರುವ ಭಾರತದ ರಾಜಕೀಯ

ಬಿಜೆಪಿಯು ಕರ್ನಾಟಕದಲ್ಲಿ ನಡೆಸಿದ ಚುನಾವಣಾ ಪ್ರಚಾರವು ಹೇಗಾದರೂ ಸರಿಯೇ ಸರಿ ಗೆದ್ದರೆ ಸಾಕೆಂಬ ಧೋರಣೆಯನ್ನು ಬಯಲುಮಾಡಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಕರ್ನಾಟಕದ ಚುನಾವಣಾ ಫಲಿತಾಂಶವನ್ನು ಹಲವಾರು ರೀತಿಗಳಲ್ಲಿ ವಿವರಿಸಬಹುದು. ಇದನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ತತ್ವಭ್ರಷ್ಟ ರಾಜಕಾರu ಎಂದು ಕೂಡಾ ವ್ಯಾಖ್ಯಾನಿಸಬಹುದು. ಆ ಎರಡೂ ಪಕ್ಷಗಳು ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿದ್ದಲ್ಲಿ ಚುನಾವಣಾ ಫಲಿತಾಂಶಗಳು ಹೊರಬಂದ ನಂತರ ಅವರ ಪರಿಸ್ಥಿತಿ ಇನ್ನೂ ಸುರಕ್ಷಿತವಾಗಿರುತ್ತಿತ್ತು. ಕರ್ನಾಟಕದ ಜನತೆಯ ಮಟ್ಟಿಗೆ ಚುನಾವಣೆಗಳು ತುಂಬಾ ಮುಖ್ಯವಾಗಿದ್ದುದು ನಿಜವೇ ಆಗಿದ್ದರೂ ಬಿಜೆಪಿಯ ಲೆಕ್ಕಾಚಾರ ಮಾತ್ರ ಸ್ಪಷ್ಟವಾಗಿ ಬೇರೆಯೇ ಇತ್ತು. ಭಾರತವನ್ನು ರಾಜಕೀಯವಾಗಿ ಸಂಪೂರ್ಣವಾಗಿ ಗೆದ್ದುಕೊಳ್ಳುವ ತನ್ನ ಆಶಯಗಳನ್ನು ಸಾಧಿಸಿಕೊಳ್ಳಲು ಬಿಜೆಪಿಗೆ ಈ ಚುನಾವಣೆಗಳು ಅತಿ ಮಹತ್ವದ್ದಾಗಿತ್ತು. ಬಿಜೆಪಿಯ ರಾಷ್ಟ್ರೀಯ ನಾಯಕರೊಬ್ಬರು ಭಾರತದ ಶೇ.೮೦ರಷ್ಟು ಚುನಾವಣಾ ಭೂಭಾಗವನ್ನು ಬಿಜೆಪಿ ಗೆದ್ದುಕೊಂಡಿದೆ ಎಂದು ನೀಡಿರುವ ಹೇಳಿಕೆಯಲ್ಲಿ ಅದು ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ. ಇದೇ ಹೇಳಿಕೆಯನ್ನು ಆಧರಿಸಿ ಪತ್ರಿಕೆಯೊಂದು ಬಿಜೆಪಿ ಭೂಪಟವೊಂದನ್ನು ರಚಿಸಿ ಅವರ ಹೇಳಿಕೆಗೆ ಮತ್ತಷ್ಟು ಪುಷ್ಟಿಯನ್ನು ಒದಗಿಸಿತು. ಹಿಂದೂತ್ವದ ರಾಜಕೀಯ ಪರಿಕಲ್ಪನೆಗಳಲ್ಲಿ ಚುನಾವಣ ವಿಜಯವನ್ನು ಭೂಭಾಗದ ನಿಯಂತ್ರಣವೆಂದು ತಿಳಿದುಕೊಳ್ಳಲಾಗುತ್ತದೆಯೇ ವಿನಃ ತನ್ನ ಆದರ್ಶವಾದಿ ತಿಳವಳಿಕೆಗಳ ವಿಸ್ತರಣೆಯೆಂದಲ್ಲ.

ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ರಾಜಕೀಯ ಅಧಿಕಾರವನ್ನು ಪಡೆದುಕೊಳ್ಳಬೇಕೆಂಬ ಬಿಜೆಪಿಯ ರಾಜಕೀಯ ಅಭಿಲಾಷೆಯಲ್ಲಿ ಯಾವುದೇ ತಪ್ಪಿಲ್ಲವಾದರೂ ಅದಕ್ಕಿಂತ ಮುಖ್ಯವಾದದ್ದು ಮತದಾರರ ಮನಒಲಿಸಲು ಅನುಸರಿಸುವ ಮಾರ್ಗದ ನೈತಿಕತೆ. ತನ್ನ ಪಕ್ಷದ ಕಾರ್ಯಕರ್ತರ ಮೇಲೆ ಹಾಗೂ ಅಂತಿಮವಾಗಿ ಮತದಾರ ಸಮೂಹದ ಮೇಲೆ ನೈತಿಕ ಶಿಸ್ತಿನ ಪ್ರಭಾವನ್ನು ಉಂಟುಮಾಡಬಹುದಾದ ನೈತಿಕತತ್ವದ ಆಧಾರದಲ್ಲಿ ಮತದಾರರನ್ನು ಮನಒಲಿಸುವಂತ ನೈತಿಕತೆ ಎಲ್ಲಕ್ಕಿಂತ ಮುಖ್ಯವಾದದ್ದು. ಉದಾಹರಣೆಗೆ ಅಂಥಾ ಒಂದು ನೈತಿಕತೆಯನ್ನು ಪಾಲಿಸಿದ್ದೇ ಆದಲ್ಲಿ ಬಿಜೆಪಿಯು ತನ್ನ ಪಕ್ಷ  ೨೦೧೪ರ ಲೋಕಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಮತ್ತು ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಜಾರಿ ಮಾಡಲು ತೆಗೆದುಕೊಂಡ ಕ್ರಮಗಳನ್ನು ವಿವರಿಸುವಂತಾಗಬೇಕಿತ್ತು. ಆದರೆ ತಮ್ಮ ಚುನಾವಣಾ ಪ್ರಚಾರದಲ್ಲಿ ಬಿಜೆಪಿಯು ಇದರ ಬಗ್ಗೆ ಪ್ರಸ್ತಾಪವನ್ನೇ ಮಾಡದೆ ಇವುಗಳ ಬಗ್ಗೆ ಸಂಬಂಧವೇ ಇಲ್ಲದ ವಿಷಯಗಳನ್ನು ಚರ್ಗೆಗೊಡ್ಡಿತು. ನಿಜ ಹೇಳಬೇಕೆಂದರೆ, ತನ್ನ ಕೆಲವು ಚುನಾವಣಾ ಭರವಸೆಗಳನ್ನು ಈಡೇರಿಸಲು ವಿಫಲವಾದದ್ದಕ್ಕೆ ಸೂಕ್ತ ಸಮರ್ಥನೆಯನ್ನು ನೀಡಲಾಗದ ಪರಿಸ್ಥಿತಿಯಿಂದಾಗಿಯೇ ಅದು ತನ್ನ ರಾಜಕೀಯ ಎದುರಾಳಿಗಳ ವಿರುದ್ಧ ಅಸಭ್ಯ ಭಾಷೆಯಲ್ಲಿ ದಾಳಿಗಿಳಿಯಿತು.

ಎದುರಾಳಿಗಳು, ವಿರೋಧಿಗಳು ಮತ್ತು ಸ್ಪರ್ಧಾಳುಗಳು ಬಳಸುವ ಭಾಷೆ ಮತ್ತು ಪದಗಳು ಒಬ್ಬ ರಾಜಕೀಯ ನಾಯಕನನ್ನು ಇನ್ನಷ್ಟು ಸಭ್ಯ ಭಾಷೆ ಬಳಸಲು ಪ್ರೇರೇಪಿಸುವಂತಿರಬೇಕು. ಆದರೆ ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಯೋಜನೆಗೆ ಅರ್ಥಾತ್ ಕಾಂಗ್ರೆಸ್ಸನ್ನು ರಾಜಕೀಯವಾಗಿ ನಾಶಗೊಳಿಸುವ ಯೋಜನೆಗೆ ಅಂಥ ಸಭ್ಯಾ ಭಾಷೆ ಕೂಡಿಬರುವುದಿಲ್ಲ. ಬಿಜೆಪಿಯ ರಾಜಕೀಯ ಮಹತ್ವಾಕಾಂಕ್ಷೆಗೆ ತನ್ನ ಎದುರಾಳಿಯನ್ನು ಶತ್ರುವಿಂತೆ ಚಿತ್ರಿಸುವಂಥ ಭಾಷೆಯ ಅಗತ್ಯವಿದೆ.ಈ ದರ್ದಿನಿಂದಾಗಿಯೇ ಬಿಜೆಪಿಯ ನಾಯಕರು ಪೌರುಷದ ಮತ್ತು ಸೇನಾತ್ಮಕ ಶೌರ್ಯದ ಭಾಷೆಯನ್ನು ಬಳಸುತ್ತಾರೆ. ಇತ್ತೀಚೆಗೆ ತಾನೆ ಮುಕ್ತಾಯಗೊಂಡ ಕರ್ನಾಟಕದ ಚುನಾವಣೆಗಳಲ್ಲಿ ಬಿಜೆಪಿಯ ಕೆಲವು ಪ್ರಮುಖ ನಾಯಕರು ಎರಡು ಬಗೆಯ ಭಾಷೆಯನ್ನು ಬಳಸಿದರು. ಒಂದು ಅಸಭ್ಯವಾದ ಭಾಷೆ. ಮತ್ತೊಂದು ಪೌರುಷ ಮತ್ತು ಸೇನಾತ್ಮಕ ಶೌರ್ಯದ ಭಾಷೆ. ವಿರೋಧ ಪಕ್ಷದ ಅದರಲ್ಲೂ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಅಸಭ್ಯವಾಗಿ ವೈಯಕ್ತಿಕ ದಾಳಿಗಳನ್ನು ಮಾಡಲಾಯಿತು. ತನ್ನ ರಾಜಕೀಯ ಶತ್ರುವಾದ ಕಾಂಗ್ರೆಸ್ ಅನ್ನು ರಾಜಕೀಯವಾಗಿ ನಾಶಗೊಳಿಸುವ ಉದ್ದೇಶದಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೈನಿಕ ಶೌರ್ಯದ ಮಾತುಗಳನ್ನು ಬಳಸಿದರು. ವಾಸ್ತವವಾಗಿ ಬಿಜೆಪಿಗೆ ದೇಶದಲ್ಲಿ ವಿರೋಧ ಪಕ್ಷಗಳೇ ಇಲ್ಲದಂತೆ ಮಾಡಿ ತಾನು ಆಳುವ ಪಕ್ಷವಾಗಬೇಕೆಂಬ ಉಮೇದು ಇದೆ. ಆದರೆ ಬಿಜೆಪಿಯಲ್ಲಿರುವ ಅಂಥಾ ನಾಯಕರಿಗೆ ಪ್ರಜಾತಂತ್ರದ ತರ್ಕ ಅರ್ಥವಾಗುವುದಿಲ್ಲ. ಈಗಲೂ ದೊಡ್ಡ ಸಂಖ್ಯೆಯ ಮತದಾರರು ತಮ್ಮ ವಿವೇಚನೆಯನ್ನು ಬಳಸಿ ಸರಿಯಾದ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ನೈತಿಕ ಸ್ಥೈರ್ಯವನ್ನು ಪ್ರದರ್ಶಿಸುತ್ತಿರುವುದರಿಂದಲೇ ತಮ್ಮ ಪಕ್ಷವು ಸ್ಪಷ್ಟ ಬಹುಮತ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದೂ ಸಹ ಅರ್ಥವಾಗುವುದಿಲ್ಲ. ಅವರ ಈ ಧೋರಣೆಯು  ಈಶಾನ್ಯ ಭಾರತದ ಮಣಿಪುರ ಮತ್ತು ಮೇಘಾಲಯ ರಾಜ್ಯಗಳಲ್ಲೂ ಮತ್ತು ಪಶ್ಚಿಮದ ಗೋವಾದಲ್ಲೂ ಹಾಗೂ ದಕ್ಷಿಣ ಭಾರತದ ಕರ್ನಾಟಕದಲ್ಲೂ ಎದ್ದು ಕಾಣುತ್ತದೆ.

ಕೇಂದ್ರ ಹಾಗೂ ರಾಜ್ಯಗಳೆರಡರಲ್ಲೂ ಶತಾಂii ಗತಾಯ ಅಧಿಕಾರವನ್ನು ವಶಪಡಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ಬಿಜೆಪಿ ಅದಕ್ಕಾಗಿ ನೈತಿಕತೆಯ ಯಾವ ಮಾನದಂಡಗಳಿಂದಲೂ ಸಮರ್ಥಿಸಲಾಗದ ಹಾದಿಯನ್ನು ಹಿಡಿದಿದೆ. ಈ ರಾಜ್ಯಗಳಲ್ಲಿ ಅತಿ ದೊಡ್ಡ ಪಕ್ಷವು ಅಧಿಕಾರವನ್ನು ಹಿಡಿಯಲು ಅವಕಾಶ ಮಾಡಿಕೊಡುವ ಪ್ರಜಾತಾಂತ್ರಿಕ ತತ್ವಗಳನ್ನು ಅದು ಉಲ್ಲಂಘಿಸಿದೆ. ಮೇಘಾಲಯದಲ್ಲಿ ತನಗೇ ಕೇವಲ ಇಬ್ಬರು ಸದಸ್ಯಬಲವಿದ್ದರೂ ಮಿಂಚಿಂತೆ ಕಾರ್ಯಾಚಾರಣೆ ಮಾಡಿ ಅಧಿಕಾರ ವಶಪಡಿಸಿಕೊಂಡರೆ ಕರ್ನಾಟಕದಲ್ಲಿ ಸರಳಬಹುಮತವನ್ನು ಪಡೆಯದೆ ಕೇವಲ ೧೦೪ ಸ್ಥಾನಗಳನ್ನು ಮಾತ್ರ ಗಳಿಸಿದರೂ ಅಧಿಕಾರ ರಚಿಸಲು ಮುಂದಾಗುವ ಧಾರ್ಷ್ಟ್ಯವನ್ನು ಪ್ರದರ್ಶಿಸಿದೆ.

ಹೇಗೆ ಆದರೂ ಸರಿಯೇ ಎಲ್ಲವನ್ನೂ ಗೆಲ್ಲಬೇಕೆಂಬ ಅದರ ಉಮೇದಿನಿಂದಾಗಿ ಬಿಜೆಪಿ ಪಕ್ಷದ ನಾಯಕರು ಪರಸ್ಪರ ವಿರುದ್ಧ ಬಗೆಯ ಪರಿಸ್ಥಿತಿಗಳಲ್ಲೂ ವಿಜಯದ ಪರವಾದ ವಾದಮಂಡನೆ ಮಾಡುತ್ತಾರೆ. ಬಿಜೆಪಿಯ ಮಟ್ಟಿಗೆ ಅಧಿಕಾರವನ್ನು ವಶಪಡಿಸಿಕೊಳ್ಳುವ ತನ್ನ ಅಂತಿಮ ಗುರಿಯ ಎದಿರು ನೈತಿಕ ಋಜುತ್ವಗಳಿಗೆ ಯಾವ ಸ್ಥಾನವೂ ಇಲ್ಲ. ಆದರೆ ಒಂದು ಸಭ್ಯ ಪ್ರಜಾತಂತ್ರದ ಭವಿಷ್ಯವು ಕೇವಲ ಫಲಿತಾಂಶವನ್ನು  ಅಧರಿಸಿರುವುದಿಲ್ಲ. ಬದಲಿಗೆ ತಮ್ಮ ದುಷ್ಟ ಉದ್ದೇಶಗಳಿಗಾಗಿ ಪ್ರಜಾತಾಂತ್ರಿಕ ವಿಧಾನಗಳನ್ನು ಉಲ್ಲಂಘಿಸದೆ ಮತ್ತು ಅಸಭ್ಯ ಭಾಷೆಯನ್ನು ಬಳಸದೆ ಮತದಾರರ ಬೆಂಬಲವನ್ನು ಕ್ರೂಢಿಕರಿಸಿಕೊಳ್ಳಬಲ್ಲ ರಾಜಕೀಯ ಪಕ್ಷಗಳ ಸಾಮರ್ಥ್ಯದ ಮೇಲೆ ಪ್ರಜಾತಂತ್ರದ ಭವಿಷ್ಯ ನಿಂತಿದೆ. ಸಭ್ಯ ಪ್ರಜಾತಂತ್ರದ ಬೇರುಗಳನ್ನು ಗಟ್ಟಿಗೊಳಿಸುವ ಉದ್ದೇಶಗಳಿಗೆ ಬದ್ಧರಾದ ಪಕ್ಷಗಳ ಕಾರ್ಯಕರ್ತರು ಚುನಾವಣಾ ಪ್ರಕ್ರಿಯೆಯಲ್ಲಿ ತಮ್ಮ ಕಾರ್ಯಕ್ರಮಗಳ ಮತ್ತು ಭವಿಷ್ಯದ ದೃಷ್ಟಿಕೋನದ ಸಾರವನ್ನು ಜನರ ಮುಂದಿಡುತ್ತಾರೆ. ಆದರೆ ಊಳಿಗಮಾನ್ಯ ರಾಜಸತ್ತೆಯ ಕಾಲವನ್ನು ಪುನರುಜ್ಜೀವನಗೊಳಿಸುವ ಆಶಯಗಳು ಅಂಥಾ ಒಂದು ಸಭ್ಯ ಪ್ರಜಾತಂತ್ರದ ಪರಿಕಲ್ಪನೆಗೆ ತದ್ವಿರುದ್ಧವಾಗಿಯೇ ವರ್ತಿಸುತ್ತಿರುತ್ತದೆ.

ಅಂಥಾ ಒಂದು ಮಹತ್ವಾಕಾಂಕ್ಷೆಯ ಒಳಸಾರವೇನೆಂದರೆ ಈ ಹಿಂದೆ ಒಂದು ಜಾತಿಯ ಸಾಮಾಜಿಕ ಅಧಿಪತ್ಯವನ್ನು ಸಾಧ್ಯಗೊಳಿಸಿದ ರಾಜಕೀಯ ಆಡಳಿತವನ್ನು ಸಾಕಾರಗೊಳಿಸುವುದೇ ಆಗಿದೆ. ಆದರೆ ಪ್ರಜಾತಂತ್ರದಲ್ಲಿ ಸಭ್ಯತೆಯನ್ನು ಉಳಿಸಿಕೊಳ್ಳಬೇಕೆಂಬ ಸಾಮೂಹಿಕ ಹಿತಾಸಕ್ತಿಯನ್ನುಳ್ಳ ಈ ದೇಶದ ಜನರಾದ ನಾವು,  ಪ್ರಜಾತಂತ್ರದ ಚೌಕಟ್ಟನ್ನು ಬಳಸಿಕೊಂಡೇ ಶ್ರೇಣೀಕೃತ ಸಾಮಾಜಿಕ ಅಧಿಪತ್ಯವನ್ನು ಸ್ಥಾಪಿಸಬಯಸುವ  ಹಾಗೂ ಕುಟುಂಬ ರಾಜಕರಣವನ್ನು ಮುಂದುವರೆಸಿಕೊಂಡು ಹೋಗಬಯಸುವ ಪಕ್ಷಗಳ ನಡುವೆ ಏನನ್ನು ಆಯ್ಕೆ ಮಾಡಿಕೊಳ್ಳಬಹುದು? ಈ ಊಳಿಗಮಾನ್ಯ ಮಹತ್ವಾಕಾಂಕ್ಷೆಯು ನಾನು ಈಗ ಆಳ್ವಿಕೆಯಲ್ಲಿದ್ದೇನೆ..ಅದರೆ ನಂತರ ಆಳಿಸಿಕೊಳ್ಳಲೂ ಸಿದ್ಧನಾಗಿರುತ್ತೇನೆ ಎಂಬ ನೈತಿಕ ತತ್ವವನ್ನು ಕಡೆಗಣಿಸುತ್ತದೆ. ಬದಲಿಗೆ ಈ ಆಕ್ರಮಣಕಾರಿ ಆಶಯವು ನಾನು ಅದಿಕಾರದಲ್ಲಿದ್ದೇನೆ, ಮತ್ತು ಪ್ರಾಯಶಃ ಎಂದೆಂದಿಗೂ ನಾನೇ ಅಧಿಕಾರದಲ್ಲಿ ಮುಂದುವರೆಯುತ್ತೇನೆ ಎಂಬ ತತ್ವವನ್ನು ಅಪ್ಪಿಕೊಳ್ಳುತ್ತದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top