ISSN (Print) - 0012-9976 | ISSN (Online) - 2349-8846

ಆಧಾರ- ಒಂದು ಏಕಪಕ್ಷೀಯ ನಿರ್ಧಾರ

ಆಧಾರ್ ಯೋಜನೆಯು ಅಪಾಯಕಾರಿ ದಿಕ್ಕಿನೆಡೆ ಸಾಗುತ್ತಿರುವುದೇಕೆಂಬ ಬಗ್ಗೆ ಸರ್ಕಾರ ಹಾಗೂ ಆಧಾರ್ ಪ್ರಾಧಿಕಾರವೇ ನಾಗರಿಕರಿಗೆ ಉತ್ತರಿಸಬೇಕು

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಭಾರತದ ಯುಐಡಿಎಐ ಸಂಸ್ಥೆ (ಯುನಿಕ್ ಇಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ-ಭಾರತದ ಅನನ್ಯ ಗುರುತು ಪ್ರಾಧಿಕಾರ- ಆಧಾರ್ ಪ್ರಾಧಿಕಾರ)ಯು ಭಾರತದ ಕೋಟ್ಯಾಂತರ ಜನತೆಯ  ಖಾಸಗಿ ಮಾಹಿತಿಗಳ ಬೃಹತ್ ಮಾಹಿತಿ ಆಗರವನ್ನು ಕ್ರೂಢೀಕರಿಸಿದೆ. ಆದರೆ ಪ್ರತಿಬಾರಿ ಈ ಅಪಾರ ಮಾಹಿತಿ ಆಗರವು ಎಷ್ಟು ಅಸುರಕ್ಷಿತವಾಗಿವೆ ಎಂಬ ಪ್ರಶ್ನೆ ಎದುರಾದಾಗಲೆಲ್ಲ ಆಧಾರ್ ಪ್ರಾಧಿಕಾರವು ಉತ್ತರ ಕೊಡದೆ ಪಲಾಯನ ಮಾಡುತ್ತದೆ. ಆದರೆ ಇತ್ತೀಚೆಗೆ ಚಂಡೀಘಡದ ’ಟ್ರಿಬ್ಯೂನ್’ ಪತ್ರಿಕೆಯ ವರದಿಗಾರ್ತಿಯೊಬ್ಬರು ಏಜೆಂಟ್ ಒಬ್ಬರಿಗೆ ಕೇವಲ ೫೦೦ ರೂ. ಪಾವತಿ ಮಾಡಿದ್ದಕ್ಕೆ ಆಧಾರ್ ಮಾಹಿತಿ ಆಗರಕ್ಕೆ ಪ್ರವೇಶ ಪಡೆದುಕೊಳ್ಳಲು ಸಾಧ್ಯವಾಯಿತೆಂಬುದನ್ನು ವಿಷದವಾಗಿ ಹೊರಗೆಡವಿದರು. ಆ ಮೂಲಕ ಆಧಾರ್ ಪ್ರಾಧಿಕಾರದಲ್ಲಿರುವ ಸಾರ್ವಜನಿಕರ ಖಾಸಗಿ ಮಾಹಿತಿಗಳು ಎಷ್ಟು ಅಸುರಕ್ಷಿತ ಎಂಬ ಸತ್ಯ ಮತ್ತೊಮ್ಮೆ ಬಯಲಿಗೆ ಬಂದಿದೆ. ಆದರೆ ಈಗಲೂ ಆಧಾರ್ ಪ್ರಾಧಿಕಾರ ತನ್ನ ತಪ್ಪನ್ನು ಅರ್ಥಮಾಡಿಕೊಳ್ಳದೆ ಆ ವರದಿಗಾರ್ತಿಯ ಮೇಲೆಯೇ ದೂರನ್ನು ದಾಖಲಿಸಿದೆ. ಮತ್ತೊಂದೆಡೆ ಸಾರ್ವಜನಿಕರೇ ತಮ್ಮ ಖಾಸಗಿ ಮಾಹಿತಿಯನು ರಕ್ಷಿಸಿಕೊಳ್ಳುವಂತೆ  ಇನ್ನೊಂದು ಪ್ರಾಯಾಸಕರ ಹಂತವನ್ನು ಪರಿಚಯಿಸಿದೆ. ಹೀಗಾಗಿ ಆಧಾರ್ ಪ್ರಾಧಿಕಾರದ ವಿಶ್ವಾಸಾರ್ಹತೆಯನ್ನು ನಂಬಲಾಗದ ಸಂದರ್ಭ ಖಂಡಿತವಾಗಿಯೂ ಎದುರಾಗಿದೆ.

ಇಂಥಾ ಒಂದು ವಿಸ್ತೃತವಾದ ಮತ್ತು ಸಕಲವನ್ನು ಒಳಗೊಂಡಿರುವ ಒಂದು ಮಾಹಿತಿ ಆಗರವು ಸಹಜವಾಗಿಯೇ ದಾಳಿಗೆ ಈಡಾಗುವ ಸಂಭವವು ಹೆಚ್ಚಾಗಿಯೇ ಇರುತ್ತದೆ. ಈಗಾಗಲೇ ಅನಧಿಕೃತವಾಗಿ ಮಾಹಿತಿಗಳನ್ನು ಗಳಿಸಿಕೊಂಡಿರುವ ಮತ್ತು ಮಾಹಿತಿಗಳ ದುರ್ಬಳಕೆ ಮತ್ತು ಪ್ರಕಟಿಸಿರುವಂಥ ಹಲವಾರು ಪ್ರಕರಣಗಳು ವರದಿಯಾಗಿವೆ. ಇತ್ತೀಚಿನ ಟ್ರಿಬ್ಯೂನ್’ ವರದಿಯಂತೂ ಹೇಗೆ ಕೆಲವು ಅನಧಿಕೃತ ದಲ್ಲಾಳಿಗಳು ಈ ಖಾಸಗಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ ಮತ್ತು ಮಾರಿಕೊಳ್ಳುತ್ತಿದ್ದಾರೆ ಎಂಬುದನ್ನು ಬಯಲುಮಾಡಿದೆ. ಈ ಹಿಂದೆ ಹೇಗೆ ಏರ್‌ಟೆಲ್ ಪೇಮೆಂಟ್ ಬ್ಯಾಂಕು ತನ್ನ ಮೊಬೈಲ್ ಗ್ರಾಹಕರ ಸಮ್ಮತಿಯಿಲ್ಲದೆ ಅವರ ಹೆಸರಿನಲ್ಲಿ ಅಕೌಂಟನ್ನು ತೆರೆದದ್ದರ ಬಗ್ಗೆ ಮತ್ತು  ’ನೇರ ಹಣಕಾಸು ವರ್ಗಾವಣೆ’ ಪದ್ಧತಿಯಲ್ಲಿ ಸರ್ಕಾರಿ ಬ್ಯಾಂಕುಗಳಲ್ಲಿನ ಅವರ ಖಾತೆಗಳಿಗೆ ಜಮೆಯಾಗುತ್ತಿದ್ದ ಹಣವನ್ನು ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ನಲ್ಲಿ ಅವರ ಹೆಸರಿನಲ್ಲಿ ತೆರೆಯಲಾಗಿದ್ದ ಖಾತೆಗೆ ವರ್ಗಾವಣೆಯಾಗುವಂತೆ ಮಾಡಿದ್ದರ ಬಗ್ಗೆ ಕೇಳಿದ್ದೆವು. ಅಷ್ಟು ಮಾತ್ರವಲ್ಲದೆ ಜಾರ್ಖಂಡ್ ಸರ್ಕಾರವು ತನ್ನ ವೆಬ್ ಸೈಟಿನಲ್ಲಿ ಸುಮಾರು ಹತ್ತು ಲಕ್ಷ ಪಿಂಚಣಿದಾರರ ಬ್ಯಾಂಕ್ ಅಕೌಂಟ್ ವಿವರಗಳನ್ನು, ಅವುಗಳ ಆಧಾರ್ ಸಂಖ್ಯೆಗಳನ್ನು ಮತ್ತು ಅವರ ಹೆಸರು ಹಾಗೂ ವಿಳಾಸಗಳನ್ನು ಪ್ರಕಟಿಸಿತ್ತು.

ಈ ಎಲ್ಲಾ ಸಂದರ್ಭಗಳಲ್ಲೂ ಸಾರ್ವಜನಿಕ ಆಕ್ರೋಶವು ಸ್ಪೋಟಗೊಳ್ಳುತ್ತಿತ್ತು. ಆದರೆ ಪ್ರತಿಬಾರಿಯೂ ಆಧಾರ್ ಪ್ರಾಧಿಕಾರವು ಬಯೋಮೆಟ್ರಿಕ್ ಮಾಹಿತಿಯು ಅತ್ಯಂತ ಸುರಕ್ಷಿತವೆಂದೂ :  ಸರ್ಕಾರವು ವೆಬ್‌ಸೈಟಿನಲ್ಲಿ ಪ್ರಕಟ ಮಾಡಿದ ಆಧಾರ್ ವಿವರಗಳು ಸಾರ್ವಜನಿಕರಿಗೆ ಹಿತಾಸಕ್ತಿಗಳಿಗೆ ಯಾವುದೇ ಆಪಾಯವನ್ನು ಉಂಟುಮಾಡುವುದಿಲ್ಲ.. ಹಾಗೂ ಬಯೋ ಮೆಟ್ರಿಕ್ ವ್ಯವಸ್ಥೆ ಇಲ್ಲದೆ ಕೇವಲ ಸಂಖ್ಯಾವಿವರಗಳನ್ನು ಇಟ್ಟುಕೊಂಡು ವಿವರಗಳ ದುರ್ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡಿತ್ತು. (೨೦೧೭ರ ನವಂಬರ್ ೨೦ರಂದು ಆಧಾರ್ ಪ್ರಾಧಿಕಾರವು ನೀಡಿದ ಪತ್ರಿಕಾ ಹೇಳಿಕೆಯಿಂದ..). ಅದು ಈಗಲೂ ವೆಬ್‌ಸೈಟಿನಲ್ಲಿ ವಿವರಗಳನ್ನು ಪ್ರಕಟಿಸಿದ ಸಂಗತಿಯನ್ನು ಸಣ್ಣ ವಿಷಯವೆಂದು ತಳ್ಳಿ ಹಾಕುತ್ತಿದೆಯಲ್ಲದೆ ಯಾವುದೇ ಮಾಹಿತಿಯು ಸೋರಿಕೆಯಾಗಿಲ್ಲವೆಂದೇ ವಾದಿಸುತ್ತಿದೆ. ಅಲ್ಲದೆ ತಾನು ನೀಡುತ್ತಿರುವ ಸೌಲಭ್ಯಗಳ ಬಳಕೆಯ ಮೇಲೆ ಪ್ರಾಧಿಕಾರವು ಸಂಪೂರ್ಣ ನಿಗಾ ವ್ಯವಸ್ಥೆಯನ್ನು ಮಾಡಿಕೊಂಡಿರುವುದರಿಂದ ಯಾವುದೇ ದುರ್ಬಳಕೆಯನ್ನು ಪತ್ತೆಹಚಬ್ಬಹುದೆಂದು ಪ್ರತಿಪಾದಿಸುತ್ತಿದೆ. ಹಾಗಿದ್ದರೂ ’ಟ್ರಿಬ್ಯೂನ್’ ಪತ್ರಿಕೆಯಲ್ಲಿ ವರದಿಯಾದಂಥ ಪ್ರಮಾಣದಲ್ಲಿ ಹೇಗೆ ಅಂಥಾ ದೊಡ್ಡ ಪ್ರಮಾಣದ ಮಾಹಿತಿ ದುರ್ಬಳಕೆಯು ಪ್ರಾಧಿಕಾರದ ಗಮನಕ್ಕೆ ಬಾರದೆ ಹೋಯಿತೆಂಬುದರ ಬಗ್ಗೆ ಮಾತ್ರ ಅದರ ಬಳಿ ಯಾವುದೇ ವಿವರಣೆಯಿಲ್ಲ.

ಆದರೂ ಈ ಎಲ್ಲಾ ಘಟನೆಗಳ ನಂತರ ಎಚ್ಚೆತ್ತುಕೊಂಡಂತೆ ತೋರಿಸಿಕೊಳ್ಳಲು  ಆಧಾರ್ ಪ್ರಾಧಿಕಾರವು ತನ್ನ ೫೦೦೦ ಅಧಿಕಾರಿಗಳನ್ನು ಮಾಹಿತಿ ಆಗರದ ಪ್ರವೇಶ ಪಡೆಯದಂತೆ ನಿರ್ಬಂಧ ವಿಧಿಸಿದೆ ಮತ್ತು ಹೊಸ ಬಗೆಯ ಎರಡು ಹಂತದ ಭದ್ರತಾ ವ್ಯವಸ್ಥೆಯನ್ನು ಪರಿಚಯಿಸಿದೆ (ವರ್ಚುಯಲ್ ಗುರುತು ಪತ್ರ ಮತ್ತು ಗ್ರಾಹಕರ ಸೀಮಿತ ವಿವರಗಳು (ಕೆವೈಸಿ-ನೋ ಯುವರ್ ಕಸ್ಟಮರ್)). ಈಗಾಗಲೇ ಖಾಸಗಿ ವ್ಯವಹಾರಸ್ಥರು ಕೋಟ್ಯಾಂತರ ಆಧಾರ್ ಅರ್ಜಿಗಳನ್ನು ವಿಲೇವಾರಿ ಮಾಡಿ ಮುಗಿಸಿದ್ದಾರೆ. ಇಷ್ಟೆಲ್ಲ ಆದ ಮೇಲೆ ಕಳೆದ ವರ್ಷ ಆ ಕೆಲಸವನ್ನು ಸರ್ಕಾರಿ ಕೇಂದ್ರಗಳಿಗೆ, ಬ್ಯಾಂಕುಗಳಿಗೆ ಮತ್ತು ಅಂಚೆ ಕಚೇರಿಗಳಿಗೆ ವಹಿಸಲು ಆಧಾರ್ ಪ್ರಾಧಿಕಾರ ತೀರ್ಮಾನಿಸಿದೆ. ಘಟನೆ ನಡೆದ ನಂತರವಷ್ಟೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಆಧಾರ್ ಪ್ರಾಧಿಕಾರದ ಒಂದು ಗುಣಲಕ್ಷಣವೇ ಆಗಿಬಿಟ್ಟಿದೆ. ಪ್ರತಿಯೊಂದು ಹೆಜ್ಜೆಯಲ್ಲೂ ಅದು ಯಾರ ಜೊತೆಯೂ ಸಮಾಲೋಚನೆ ಮಾಡದೆ ಸಾರ್ವಜನಿಕರ ಮೇಲೆ ತನ್ನ ಏಕಪಕ್ಷೀಯ ಕ್ರಮಗಳನ್ನು ಹೇರುತ್ತಾ ಬಂದಿದೆ. ಇದು ಆಧಾರ್ ಪ್ರಾಧಿಕಾರದ ಸ್ಥಾಪನೆಯೊಂದಿಗೇ ಪ್ರಾರಂಭವಾಯಿತು. ಇದಕ್ಕೆ ಸಂಬಂಧಪಟ್ಟ ಶಾಸನವೊಂದನ್ನು ಜಾರಿ ಮಾಡುವ ಮುಂಚೆಯೇ ಆಧಾರ್ ನೊಂದಣಿ ಮತ್ತು ಜೋಡಣೆ ಪ್ರಕ್ರಿಯೆ ಪ್ರಾರಂಭವಾಗಿತ್ತು. ನಮ್ಮ ಖಾಸಗಿತನದ ಮತ್ತು ಮಾಹಿತಿಗಳ ಸುರಕ್ಷತೆಯ ಬಗ್ಗೆ ಕಾನೂನು ಅಥವಾ ಭದ್ರತೆಯನ್ನು ಖಾತರಿಪಡಿಸುವ ಯಾವ ವ್ಯವಸ್ಥೆಯೂ ಇಲ್ಲದೆಯೇ ಈ ಯೋಜನೆಯು ನಮ್ಮ ನಿತ್ಯ ಜೀವನದ ಎಲ್ಲಾ ಅಂಶಗಳನ್ನು ಆವರಿಸಿಕೊಳ್ಳುತ್ತಾ ಹೋಯಿತು. ಈ ನಡುವೆ ಜನನ ಪತ್ರದಿಂದ ಹಿಡಿದು ಮರಣ ಪತ್ರದವರೆಗೆ ಮತ್ತು ಅವೆರಡರ ನಡುವಿನ ಅವಧಿಯಲ್ಲಿ ಸಾರ್ವಜನಿಕರಿಗೆ ಅಗತ್ಯಬೀಳುವ ಎಲ್ಲಾ ಸೇವೆಗಳಿಗೂ ಆಧಾರ್ ಸಂಖ್ಯೆಯನ್ನು ನೀಡುವಂತೆ ಸರ್ಕಾರವು ಸಾರ್ವಜನಿಕರ ಮೇಲೆ ನಿರಂತರ ಒತ್ತಡವನ್ನು ಹೇರತೊಡಗಿತು. ಇದು ಎಷ್ಟು ಅಸಂಗತ ಪ್ರಮಾಣಕ್ಕೆ ತಲುಪಿತೆಂದರೆ ಉತ್ತರ ಪ್ರದೇಶ ಸರ್ಕಾರವು ನಿರಾಶ್ರಿತರು ರಾತ್ರಿ ತಂಗುದಾಣದಲ್ಲಿ ಮಲಗುವುದಕ್ಕೂ ಆಧಾರ್ ಸಂಖ್ಯೆಯನ್ನು ಕಡ್ಡಾಯ ಮಾಡಿತ್ತು. ಆದರಿಂದಲೇ ಸುಪ್ರೀಂಕೋರ್ಟು ಭಾರತ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರದ ಮಟ್ಟಿಗೆ ಆಧಾರ್ ಸಂಖ್ಯೆಯಿಲ್ಲದವರು ಅಸ್ಥಿತ್ವದಲ್ಲೇ ಇಲ್ಲ ಎಂದು ಅರ್ಥವೇ ಎಂದು ಪ್ರಶ್ನಿಸಿತ್ತು. 

ಸರ್ಕಾರವು ಪ್ರಾರಂಭದಲ್ಲಿ ಆಧಾರ್ ಯೋಜನೆಯು ಯಾವುದಕ್ಕೆ ಅಗತ್ಯವೆಂದು ಹೇಳಿತ್ತೋ ಅದನ್ನು ಮೀರಿ ಇತರ ಕಡೆಗೂ ಅದನ್ನು ವಿಸ್ತರಿಸುತ್ತ ಆಧಾರ್ ಶಾಸನದ ದುರ್ಬಳಕೆ ಮಾಡುತ್ತಿರುವುದರ ಕುರಿತಾದ ದೂರೊಂದು ೨೦೧೫ರಿಂದ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗಾಗಿ ಕಾಯುತ್ತಿದೆ. ಅದರ ಬಗೆಗಿನ ವಿಚಾರಣೆಯು ಇದೇ ಜನವರಿ ೧೭ರಂದು ಪ್ರಾರಂಭವಾಗಲಿದೆ. ಆ ವಿಚಾರಣೆಯಲ್ಲಿ ಸುಪ್ರೀಂಕೋರ್ಟು ಕೆಳಗಿನ ಎಲ್ಲಾ ಅಂಶಗಳನ್ನು ಪರಿಗಣಿಸುವ ಅಗತ್ಯವಿದೆ- ಈ ಆಧಾರ್ ಯೋಜನೆಯ ಹಿಂದಿದ್ದ ಮೂಲ ಉದ್ದೇಶವೇನು? ಮತ್ತು ಅದೇಕೆ ಎಲ್ಲವನ್ನೂ ಆವರಿಸಿಕೊಳ್ಳುವಂತೆ ಹರಡಿಕೊಳ್ಳುತ್ತಿದೆ; ಮಾಹಿತಿ ಆಗರದ ಸುರಕ್ಷತೆಯಲ್ಲಿ ಆಗುತ್ತಿರುವ ಲೋಪಗಳು; ಆಧಾರ್ ಸಂಬಂಧೀ ಅಂಶಗಳಿಂದಾಗಿ ಸಾರ್ವಜನಿಕರಿಗೆ ದೊರಕಬೇಕಿದ್ದ ಸೌಲಭ್ಯಗಳ ನಿರಾಕರಣೆಯಾಗುತ್ತಿರುವುದರ ಕುರಿತು; ಎಲ್ಲಾ ಮಾಹಿತಿಗಳನ್ನು ಸಂಪೂರ್ಣ ನೀಡಿ ಸಮ್ಮತಿಯನ್ನು ಪಡೆದುಕೊಳ್ಳುವ ನಿಯಮ ಮತ್ತು ಖಾಸಗಿತನದ ನಿಯಮಗಳ ದುರ್ಬಳಕೆ; ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಈ ಎಲ್ಲಾ ಅಂಶಗಳನ್ನು ನಿರ್ವಹಿಸುವಲ್ಲಿ ಆಧಾರ್ ಪ್ರಾಧಿಕಾರದ ವೈಫಲ್ಯ.

ತನ್ನ ನಿಯಂತ್ರಣದಲ್ಲಿರುವ ಸೂಕ್ಷ್ಮ ಮಾಹಿತಿಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲಾದ ಇಂಥಾ ಪ್ರಾಧಿಕಾರದ ಮೇಲುಸ್ತುವಾರಿ ಹೇಗೆ? ಭಾರತದಲ್ಲಿ ಇಂಥಾ ಮಹಿತಿ ಆಗರಗಳ ಸುರಕ್ಷತೆಯನ್ನು ಹೇಗೆ ಖಾತರಿ ಮಾಡಬೇಕು ಎಂಬ ಬಗ್ಗೆ ರಚಿಸಲಾಗಿದ್ದ ಶ್ರೀ. ಬಿಎನ್ ಕೃಷ್ಣ ಸಮಿತಿಯು ಬಿಡುಗಡೆ ಮಾಡಿದ್ದ ಶ್ವೇತಪತ್ರದಲ್ಲಿ ಮಾಹಿತಿ ಸುರಕ್ಷತೆಯ ಅತ್ಯಗತ್ಯ ನಿಯಮಗಳಲ್ಲಿ  ಸಾಕಷ್ಟು ಸಾಮರ್ಥ್ಯವುಳ್ಳ ಉನ್ನತ ಮಟ್ಟದ ಶಾಸನಾತ್ಮಕ ಪ್ರಾಧಿಕಾರವು ಮಾಹಿತಿ ರಕ್ಷಣ ನಿಯಮಗಳ ಜಾರಿಯ ಉಸ್ತುವಾರಿಯನ್ನು ನೋಡಿಕೊಳ್ಳುವುದು ಅತಿ ಮುಖ್ಯವೆಂದು ಸಲಹೆ ನೀಡಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಥಾ ಒಂದು ಪ್ರಾಧಿಕಾರದ ಅನುಭವಗಳ ಬಗ್ಗೆಯೂ ಅದು ಉಲ್ಲೇಖವನ್ನು ಮಾಡಿತ್ತು. ಸ್ಪಷ್ಟವಾಗಿ ಅರ್ಥವಾಗುವುದೇನೆಂದರೆ ಅಂಥಾ ಪ್ರಾಧಿಕಾರವು ಈಗ ಅಸ್ಥಿತ್ವದಲ್ಲಿರುವ ಆಧಾರ್ ಪ್ರಾಧಿಕಾರದಿಂದ ಸ್ವತಂತ್ರವಾಗಿರಬೇಕು ಮತ್ತು ಅದರ ಮೇಲುಸ್ತುವಾರಿ ನಡೆಸುವಷ್ಟು ಸಮರ್ಥವಿರಬೇಕು. ನಾವು ಮಾಹಿತಿಗಳ ಯುಗದಲ್ಲಿದ್ದೇವೆ. ಮಾಹಿತಿಗಳು ಕೇವಲ ಪ್ರಭುತ್ವಕ್ಕೆ ಮಾತ್ರವಲ್ಲದೆ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಿಗೂ ಅತ್ಯಗತ್ಯವಾಗಿದೆ. ಆದರೆ ನಮ್ಮ ದೇಶದಲ್ಲಿ ಆಧಾರ್ ಯೋಜನೆಯು ಜಾರಿಗೆ ಆಗುತ್ತಿರುವ ರೀತಿಯನ್ನು ನೋಡಿದರೆ ವ್ಯಕ್ತಿಗಳ ಖಾಸಗಿತನದ ಹಕ್ಕಿನ ಬಗ್ಗೆ ಸರ್ಕಾರಕ್ಕಿರುವ ಬೇಜವಾಬ್ದಾರಿ ಧೋರಣೆಯು ಎದ್ದುಕಾಣುತ್ತದೆ. ಖಾಸಗಿತನದ ಹಕ್ಕನ್ನು ತೀರಾ ಇತ್ತೀಚೆಗೆ ದೇಶದ ಅತ್ಯುನ್ನತ ನ್ಯಾಯಾಲಯವೂ ಕೂಡಾ ಎತ್ತಿಹಿಡಿದಿದೆ. ಸುಪ್ರೀಂ ಕೋರ್ಟು ಈ ಹಕ್ಕನ್ನು ಮತ್ತೊಮ್ಮೆ ಎತ್ತಿಹಿಡಿದು ಈವರೆಗೆ ಆಗಿರುವ ತಪ್ಪುಗಳನ್ನು ಸರಿತಿದ್ದುತ್ತದೆಂಬುದು ಎಲ್ಲರ ನಿರೀಕ್ಷೆ. 

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top