ISSN (Print) - 0012-9976 | ISSN (Online) - 2349-8846
Reader Mode

ಕೂಲಿ ಕೊಡದ ಕೆಲಸ

ವಿಳಂಬವಾಗಿ ಕೂಲಿ ಪಾವತಿ ಮಾಡುವುದು ಮತ್ತು ಸಮರ್ಪಕವಾಗಿ ಕೂಲಿ ಹೆಚ್ಚಿಸದಿರುವುದು ಮಹಾತ್ಮ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯ ಸಾರವನ್ನೇ ಕಸಿಯುತ್ತಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಸಮಯಕ್ಕೆ ಸರಿಯಾಗಿ ಕೂಲಿಯನ್ನು ಪಾವತಿಸುವುದು ಹಕ್ಕು ಆಧಾರಿತ ಕನಿಷ್ಟ ಆದಾಯ ಖಾತರಿ ಯೋಜನೆಯಾದ ಮಹಾತ್ಮ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (ಎಂಎನ್‌ಆರ್‌ಇಜಿಎ- ನರೇಗಾ)ದ  ತಿರುಳಾಗಿದೆ. ಆದರೆ ಈ ಕಾಯಿದೆಯ ಅನುಷ್ಠಾನವನ್ನು ಪರಿಶೀಲಿಸುತ್ತಲೇ ಬಂದಿರುವ ’ನರೇಗಾ ಸಂಘರ್ಷ್ ಮಂZ’ನ ಪ್ರಕಾರ ಫೆಬ್ರವರಿಯಲ್ಲಿ ಶೇ. ೬೪ರಷ್ಟು, ಮಾರ್ಚಿಯಲ್ಲಿ ಶೇ.೮೬ ಮತ್ತು ಏಪ್ರಿಲ್‌ನಲ್ಲಿ ಶೇ.೯೯ ರಷ್ಟು ಕೂಲಿ ಪಾವತಿ ಆದೇಶಗಳು ಜಾರಿಯಾಗಿರಲಿಲ್ಲ. ಈ ನರೇಗಾ ಯೋಜನೆಯಲ್ಲಿ ತಡವಾಗಿ ಕೂಲಿ ಪಾವತಿಯಾಗುವುದು ಹೊಸದೇನಲ್ಲವಾದರೂ, ನರೇಗಾ ಕೂಲಿ ಪಾವತಿ ವ್ಯವಸ್ಥೆಗೆ ಇತ್ತೀಚೆಗೆ ತರಲಾಗಿರುವ ತಿದ್ದುಪಡಿಗಳು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿವೆ.

ನರೆಂದ್ರ ಮೋದಿ ಸರ್ಕಾರವು ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಎನ್‌ಇಎಫ್‌ಎಂಎಸ್- ರಾಷ್ಟ್ರೀಯ ವಿದ್ಯುನ್ಮಾನ ಸಂಪನ್ಮೂಲ ನಿಯಂತ್ರಣ ವ್ಯವಸ್ಥೆ)ಯಲ್ಲಿ ಯಾವುದೇ ಸೋರಿಕೆಯಾಗದಂತೆ ಮೋಡಿಕೊಳ್ಳಲು ಕೂಲಿ ಪಾವತಿಗಳನ್ನು ಫಂಡ್ ಟ್ರಾನ್ಸ್‌ಫರ್ ಆರ್ಡರ್ (ಎಫ್‌ಟಿಒ- ಹಣ ವರ್ಗಾವಣೆ ಆದೇಶ)ದ ಮೂಲಕ ಮಾಡುವಂತೆ ಆದೇಶಿಸಿದೆ. ತದನಂತರದಲ್ಲಿ ಆಧಾರ್ ನೊಂದಾಯಿತ ಬ್ಯಾಂಕ್ ಖಾತೆಯ ಮೂಲಕ ಪಾವತಿ ಮಾಡುವ ಪದ್ಧತಿಯೂ ಜಾರಿಯಾಯಿತು. ಹಣ ವರ್ಗಾವಣೆಯಲ್ಲಿ ಯಾವುದೇ ಸೋರಿಕೆಯಾಗದೆ ಫಲಾನುಭವಿಗಳಿಗೆ ಸಂಪೂರ್ಣವಾಗಿ ದಕ್ಕಬೇಕೆಂಬ ಉದ್ದೇಶವು ಶ್ಲಾಘನೀಯವೇ ಆಗಿದ್ದರೂ ಆಚರಣೆಯಲ್ಲಿ ಹೊಸ ವ್ಯವಸ್ಥೆಯ ಪ್ರಾಯೋಗಿಕತೆ ಮತ್ತು ಬುಡಮಟ್ಟದಲ್ಲಿ ಅದರಿಂದ ಆಗುತ್ತಿರುವ ಪರಿಣಾಮಗಳು ಕಳವಳಕಾರಿಯಾಗಿವೆ. ಇಂಥಾ ಕ್ರಮಗಳ ಅನುಷ್ಠಾನವನ್ನು ದಿನಗಳೆದಂತೆ ಸುಧಾರಿಸಬಹುದು. ಆದರೆ ಈ ಪದ್ಧತಿಯು ವಿಕೇಂದ್ರೀಕೃತ ಸಹಭಾಗೀ ಅಭಿವೃಧ್ಹಿ ಪ್ರಕ್ರಿಯೆಯನ್ನೇ ತಿರುವು ಮುರುವು ಮಾಡಿಬಿಡುತ್ತಿದೆ.

ಹಳೆಯ ವರ್ತುಲ ನಿಧಿ ವ್ಯವಸ್ಥೆಯಲ್ಲಿ ಈ ಯೋಜನೆಯನ್ನು ಜಾರಿ ಮಾಡುವ ಪ್ರತಿ ಹಂತದ ಕಾರ್ಯಭಾರಿಯ ಬಳಿಯೂ ತಮ್ಮದೇ ಆದ ಖಾತೆಗಳು ಮತ್ತು ಹಣಪಾವತಿ ಮಾಡಲು ಅಧಿಕೃತ ಸಹಿ ಮಾಡುವ ಪ್ರಭಾರಿಯೂ ಇರುತ್ತಿದ್ದರು. ಇದು ಸ್ಥಳೀಯ ಸಂಸ್ಥೆಗಳ ಮೂಲಕ ವಿಕೇಂದ್ರೀಕೃತ ಅಭಿವೃದ್ಧಿಯನ್ನು ಬಲಗೊಳಿಸಲು ರೂಪಿಸಲಾಗಿದ್ದ ಸಂಪನ್ಮೂಲ ವರ್ಗಾವಣೆ ವ್ಯವಸ್ಥೆಯಾಗಿತ್ತು. ಆದರೆ ಎನ್ ಇಎಫ್‌ಎಂಎಸ್ ವ್ಯವಸ್ಥೆಯಲ್ಲಿ ಇಡೀ ಸಂಪನ್ಮೂಲವು ಭಾರತ ಸರ್ಕಾರದಡಿಯಲ್ಲಿ ಒಂದೇ ಖಾತೆಯಡಿ ಕೇಂದ್ರೀಕೃತಗೊಂಡಿರುತ್ತದೆ ಮತ್ತು ಅನುಷ್ಠಾನ ಮಾಡುವ ಸಂಸ್ಥೆಗಳಿಗೆ ಆಗುವ ಹಣ ವರ್ಗಾವಣೆಯು ಕೇವಲ ಸಾಂಕೇತಿಕವಾಗಿರುತ್ತದೆ. ನರೇಗಾ ಅನುಷ್ಠಾನ ಮಾಡುವ ಸಂಸ್ಥೆಗಳು ಎಫ್‌ಟಿಒ ಮೂಲಕ ಮಸ್ಟರ್ ರೋಲ್‌ನಲ್ಲಿರುವಂತೆ ಕೂಲಿ ಪಾವತಿ ಮಾಡಬೇಕಿರುವ ಪಟ್ಟಿಯನ್ನು ತಯಾರಿಸುತ್ತವೆ. ಪ್ರತಿ ಕೂಲಿ ಪಾವತಿಗೆ ಎಫ್‌ಟಿಒ ಸಿದ್ಧಪಡಿಸಿದ ಬಳಿಕ ಯೋಜನಾಧಿಕಾರಿಯು ಹಣ ಪಾವತಿ ಮಾಡಲು ಅದನ್ನು ಅಪ್‌ಲೋಡ್ ಮಾಡುತ್ತಾರೆ. ಸಾಮಗ್ರಿ-ಸರಂಜಾಮುಗಳ ಖರೀದಿಗೆ ಪಾವತಿ ಮಾಡಲು ಸಹ ಇದೇ ವ್ಯವಸ್ಥೆಯನ್ನು ಅನುಸರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಎಲ್ಲೂ ಮಾನವ ಮಧ್ಯಪ್ರವೇಶವೇ ಇಲ್ಲದಿರುವುದರಿಂದ ಸೋರಿಕೆಯೂ ಇರುವುದಿಲ್ಲ. ಆದರೆ ಇದರಲ್ಲಿ ಇಡೀ ಪ್ರಕ್ರಿಯೆಯನ್ನೇ ಬಲಹೀನಗೊಳಿಸಬಲ್ಲ ದೊಡ್ಡ ದೌರ್ಬಲ್ಯವೊಂದಿದೆ.

ಮೊದಲನೆಯದಾಗಿ ಬಾಕಿ ಉಳಿದುಹೋಗುವ ಎಫ್‌ಟಿಒಗಳ ಸಮಸ್ಯೆ. ಮ್ಯನೇಜ್‌ಮೆಂಟ್ ಇನ್ಫಾರ್ಮೇಷನ್ ಡೇಟಾ (ಎಂಐಎಸ್)ನ ಪ್ರಕಾರ ೨೦೧೮ರ ಏಪ್ರಿಲ್ ೧೯ರ ವೇಳೆಗೆ ೨೦೧೭-೧೮ರಲ್ಲಿ ಸಲ್ಲಿಸಲಾದ ಎಫ್‌ಟಿಒಗಳಲ್ಲಿ ಶೇ.೧೯.೫೫ರಷ್ಟು ಇನ್ನೂ ಬಾಕಿ ಉಳಿದಿದ್ದವು ಮತ್ತು ಶೇ.೨.೩೮ರಷ್ಟು ತಿರಸ್ಕೃತವಾಗಿತ್ತು. ಒಟ್ಟಾರೆಯಾಗಿ ಶೇ.೨೧.೯೩ರಷ್ಟು ಎಫ್‌ಟಿಒಗಳು ಪಾವತಿಯಾಗಿರಲಿಲ್ಲ. ಈ ಬಾಕಿ ಉಳಿದ ಎಫ್‌ಟಿಒ ಸಮಸ್ಯೆಯಿಂದಾಗಿ ನರೇಗಾ ಕಾರ್ಮಿಕರ ಮತ್ತು ಸರಬರಾಜುದಾರರ ಖಾತೆಗಳಿಗೆ ಮೂರು-ನಾಲ್ಕು ತಿಂಗಳು ಅಥವಾ ಇನ್ನೂ ಹೆಚ್ಚು ಸಮಯ ಕಳೆದರೂ ಕಳೆದರೂ ಹಣ ಪಾವತಿಯಾಗುತ್ತಿಲ್ಲವೆಂದು ವಿವಿಧ ರಾಜ್ಯಗಳ ವರದಿಗಳು ಹೇಳುತ್ತಿವೆ. ವಿವಿಧ ರಾಜ್ಯಗಳಲ್ಲಿ ಬಾಕಿ ಉಳಿದಿರುವ ಕೂಲಿ  ಮತ್ತು ಸಾಮಗ್ರಿ-ಸರಂಜಾಮು ಸರಬರಾಜುದಾರರಿಗೆ ಮಾಡಬೇಕಾದ ಪಾವತಿಗಳ ಮೊತ್ತವೂ ಇದಕ್ಕೆ ಪುರಾವೆಯೊದಗಿಸುತ್ತಿದೆ.

ಈ ಹಿಂದೆ ಕೇಂದ್ರ ಸರ್ಕಾರದಿಂದ ಹಣ ವರ್ಗಾವಣೆ ತಡವಾದರೆ ರಾಜ್ಯಗಳೇ ತಮ್ಮ ಸಂಪನ್ಮೂಲಗಳಿಂದ ಅದನ್ನು ಭರಿಸಿ ನಂತರ ಕೇಂದ್ರದಿಂದ ಪಡೆದುಕೊಳ್ಳುತ್ತಿದ್ದವು. ಈಗ ಅದೂ ಸಾಧ್ಯವಾಗುವುದಿಲ್ಲ. ೨೦೧೬-೧೭ರಲ್ಲಿ ಒಟ್ಟಾರೆ ಈ ಯೋಜನೆಗೆ ನಿಗದಿಗೊಳಿಸಲಾಗಿದ್ದ ಮೊತ್ತದ ಕಾಲು ಭಾಗದಷ್ಟು ಅಂದರೆ ೧೨,೦೦೦ ಕೋಟಿ ರೂ.ಗಳಷ್ಟು ಹಣವು ಕೇಂದ್ರದಿಂದ ಬಾಕಿ ಉಳಿದಿತ್ತು. ಆಗ ಜಾರ್ಖಂಡ್ ಮತ್ತು ತ್ರಿಪುರಾ ಸರ್ಕಾರಗಳು ತಮ್ಮ ಸಂಪನ್ಮೂಲಗಳಿಂದ ತಮ್ಮ ತಮ್ಮ ರಾಜ್ಯಗಳಲ್ಲಿ ಬಾಕಿ ಇದ್ದ ಹಣವನ್ನು ಪಾವತಿ ಮಾಡಿದವು. ಆದರೆ ಈಗ ಈ ಹೊಸ ಎನ್‌ಇಎಫ್‌ಎಂಎಸ್ ಪದ್ಧತಿಯಲ್ಲಿ ಅದು ಸಾಧ್ಯವೇ ಇಲ್ಲ. ಇದರಿಂದಾಗಿ ಕೂಲಿ ಕಾರ್ಮಿಕರು ಈ ಯೋಜನೆಯಲ್ಲಿ ಕೆಲಸ ಮಾಡಿದ ೧೫ ದಿನಗಳಲ್ಲಿ ತಮ್ಮ ಸಂಪೂರ್ಣ ಕೂಲಿಯನ್ನು ಪಡೆದುಕೊಳ್ಳುವ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ. ಕೂಲಿ ಪಾವತಿಯ ಖಾತರಿ ಇಲ್ಲದೆ ಕೆಲಸ ಖಾತರಿ ಯೋಜನೆಯು ತನ್ನ ಪರಿಣಾಮಕತೆಯನ್ನೇ ಕಳೆದುಕೊಳ್ಳುತ್ತದೆ. ಕಾಲ ಕಳೆದಂತೆ ಈ ಯೋಜನೆಯಡಿ ಕೆಲಸ ಮಾಡುವ ಉಮೇದನ್ನು ಕಾರ್ಮಿಕರು ಕಳೆದುಕೊಂಡು ಇನ್ನೂ ಅಭದ್ರತೆಯಿಂದ ಕೂಡಿರುವ ಕೆಲಸಗಳನ್ನು ಹುಡುಕಿಕೊಳ್ಳುತ್ತಾರೆ ಅಥವಾ ದಿಕ್ಕೆಟ್ಟು ವಲಸೆ ಹೋಗುತ್ತಾರೆ. ತಮ್ಮ ದೈನಂದಿನ ಅಗತ್ಯಗಳನ್ನು ಪೂರಸಿಕೊಳ್ಳಲು ಬಡವರಿಗೆ ಪ್ರತಿ ದಿನ ಹಣದ ಅವಶ್ಯಕತೆ ಇರುತ್ತದೆ. ಹೀಗಾಗಿ ಈ ಯೋಜನೆಯಲ್ಲಿ ಕಾಲಕ್ಕೆ ಸರಿಯಾದ ಕೂಲಿ ಪಾವತಿಯಾಗದೇ ಇದ್ದಲ್ಲಿ ಅವರು ಪರ್ಯಾಯ ಉದ್ಯೋಗಗಳನ್ನು ನೋಡಿಕೊಳ್ಳುತ್ತಾರೆ. ಹೀಗಾಗಿ ಕೂಲಿ ಪಾವತಿಯಲ್ಲಿ ಆಗುವ ವಿಳಂಬ ಮತ್ತು ಕೂಲಿಯ ಬಗೆಗಿನ ಅನಿಶ್ಚತೆಗಳು ನರೇಗ ಯೋಜನೆಯ ಸಾರವನ್ನೇ ಕಸಿಯುತ್ತಿವೆ.

ಎರಡನೆಯದಾಗಿ, ಈ ಕೇಂದ್ರೀಕೃತ ಪ್ರಕ್ರಿಯೆಗಳು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಬದಲು ದುರ್ಬಲಗೊಳಿಸುತ್ತವೆ. ಈ ಪಂಚಾಯತ್‌ರಾಜ್ ಸಂಸ್ಥೆಗಳು ಕಳೆದ ೨೫ ವರ್ಷಗಳಿಂದ ಒಕ್ಕೂಟ ವ್ಯವಸ್ಥೆಯ ಅಂತರ್ಗತ ಭಾಗವೇ ಆಗಿದ್ದರೂ ಮೇಲಿನಿಂದ ಅಧಿಕಾgಗಳು, ಕಾರ್ಯಭಾರಗಳು ಮತ್ತು ಕಾರ್ಯಭಾರಿ ಅಧಿಕಾರಿಗಳ ವರ್ಗಾವಣೆಯಾಗದಿರುವುದರಿಂದ ಅವು ದುರ್ಬಲವಾಗಿಯೇ ಉಳಿದುಕೊಂಡಿವೆ. ನರೇಗ ಯೋಜನೆಯು ಒಂದೇ ಬಾರಿಗೆ ಈ ಮೂರನ್ನೂ ಒದಗಿಸಿತ್ತು. ಹಲವಾರು ರಾಜ್ಯಗಳಲ್ಲಿ ಗ್ರಾಮ ಪಂಚಾಯತಿಗಳು ಪ್ರಥಮ ಬಾರಿಗೆ ಬ್ಯಾಂಕ್ ಖಾತೆಯನ್ನು ತೆರೆದವಲ್ಲದೆ ತಮ್ಮ ಖಾತೆಯಲ್ಲಿ ನಿಯಮಿತವಾಗಿ ಹಣವನ್ನು ಪಡೆದುಕೊಳ್ಳಲು ಪ್ರಾರಂಭಿಸಿದ್ದವು. ಆದರೆ ಗ್ರಾಮ ಪಂಚಾಯತ್‌ಗಳನ್ನು ಸಬಲೀಕರಿಸಿದ್ದ ಈ ಪ್ರಕ್ರಿಯೆಗಳು ಎನ್‌ಇಎಫ್‌ಎಮ್‌ಎಸ್ ಮತ್ತು ಎಫ್‌ಟಿಒಗಳನ್ನು ಜಾರಿಗೆ ತಂದ ನಂತರ ನಿಂತುಹೋದವು.

ವಿಳಂಬವಾಗಿ ಕೂಲಿ ಪಾವತಿ ಮಾಡುವ ಪದ್ಧತಿಯನ್ನು ಕೂಡಲೇ ಸರಿಪಡಿಸಬೇಕು. ಆದರೆ ಅಷ್ಟೇ ಮುಖ್ಯವಾಗಿ ಕೂಲಿ ದರದ ನೀತಿಯನ್ನು ಅಮೂಲಾಗ್ರವಾಗಿ ಪುನರ್‌ಪರಿಶೀಲಿಸುವ ಅಗತ್ಯವಿದೆ. ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆಯು ಕೃಷಿ ಕೂಲಿಗಳ ಬಳಕೆದಾರರ ಸೂಚ್ಯಂಕವನ್ನು ಆಧರಿಸಿ ಕೂಲಿದರವನ್ನು ವಾರ್ಷಿಕವಾಗಿ ಪರಿಷ್ಕರಿಸುತ್ತದೆ. ಆದರೆ ಈಗ ಹಲವಾರು ರಾಜ್ಯಗಳಲ್ಲಿ ಕನಿಷ್ಟ  ಕೂಲಿ ದರಗಳು ಮತ್ತು ವಾಸ್ತವ ಕೂಲಿ ದರಗಳು ನರೇಗದ ಕೂಲಿದರಗಳಿಗಿಂತ ಹೆಚ್ಚಿವೆ. ಇದು ೨೦೦೬ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದಾಗ ಇದ್ದ ಪರಿಸ್ಥಿತಿಗೆ ಸಂಪೂರ್ಣವಾಗಿ ತದ್ವಿರುದ್ಧವಾಗಿದೆ. ೨೦೦೬ರಲ್ಲಿ ನರೇಗದಡಿ ೬೦ ರೂ ಕೂಲಿಯನ್ನು ನಿಗದಿಗೊಳಿಸಲಾಗಿತ್ತು. ಮತ್ತು ಅದು ಹಲವಾರು ರಾಜ್ಯಗಳ ನಿಗದಿತ ಕೃಷಿ ಕೂಲಿ ಹಾಗೂ ವಾಸ್ತವ ಕೃಷಿ ಕೂಲಿಗಿಂತ ಹೆಚ್ಚೇ ಆಗಿತ್ತು.

ಈ ಅಧಿಕ ಕೂಲಿ ದರದಿಂದಾಗಿಯೇ ಈ ಯೋಜನೆಯು ಕೂಲಿಕಾರ್ಮಿಕರಿಗೆ ಆಕರ್ಷಕವಾಗಿ ಕಂಡಿತ್ತು. ಗ್ರಾಮೀಣ  ಕಾರ್ಮಿಕ ಮಾರುಕಟ್ಟೆಯಲ್ಲಿ ಈ ಯೋಜನೆಯು ಗ್ರಾಮೀಣ ಕೂಲಿದರವನ್ನು ಹೆಚ್ಚಿಸಿತ್ತು. ಆದರೆ ಇಂದು ಪರಿಸ್ಥಿತಿಯು ತದ್ವಿರುದ್ಧವಾಗಿರುವುದರಿಂದ ಹಲವಾರು ರಾಜ್ಯಗಳಲ್ಲಿ ನರೇಗಾ ಯೋಜನೆಯು ಕೂಲಿ ಕಾರ್ಮಿಕರನ್ನು ಆಕರ್ಷಿಸುತ್ತಿಲ್ಲ. ಇದರ ಒಂದು ಸೂಚನೆಯೇನೆಂದರೆ ಮಹಿಳಾ ಕಾರ್ಮಿಕರು ಈ ಯೋಜನೆಯಲ್ಲಿ ಸೇರುತ್ತಿದ್ದಾರೆ. ಆದರೆ ಪುರುಷ ಕಾರ್ಮಿಕರು ಮಾತ್ರ ಹೆಚ್ಚಿನ ಕೂಲಿ ಸಿಗುವ ಪರ್ಯಾಯ ಉದ್ಯೋಗವನ್ನು ಅರಸುತ್ತಿದ್ದಾರೆ.

ಈಗಾಗಲೇ ಜಾರಿಯಲ್ಲಿರುವ ಕೂಲಿದರಕ್ಕಿಂತ ಕಡಿಮೆ ಕೂಲಿಯನ್ನು ಖಾತರಿಗೊಳಿಸುವುದು  ಯಾವ ಬಗೆಯ ಖಾತರಿಯೂ ಅಲ್ಲ.  ಕೂಲಿಯನ್ನು ಅಸ್ಥಿತ್ವದಲ್ಲಿರುವ ದರಕ್ಕಿಂತ ಹೆಚ್ಚಿಗೆ ನಿಗದಿ ಪಡಿಸುವ ಮೂಲಕ ಮಾತ್ರ ನಿಜವಾದ ಜೀವನ ಖಾತರಿಯನ್ನು ಒದಗಿಸಲು ಸಾಧ್ಯ. ಕೂಲಿ ಪಾವತಿಯ ಖಾತರಿ ಮತ್ತು ಅಸ್ಥಿತ್ವದಲ್ಲಿರುವ ಮಾರುಕಟ್ಟೆ  ದರಕ್ಕೆ ಅನುಸಾರವಾಗಿ ಕನಿಷ್ಟ ಕೂಲಿ ದರವನ್ನು ಒದಗಿಸುವ ಮೂಲಕ ಮಾತ್ರ ನರೇಗ ಯೋಜನೆಯನ್ನು ಮತ್ತೊಮ್ಮೆ ಜನಪ್ರಿಯಗೊಳಿಸಲು ಸಾಧ್ಯ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top