ISSN (Print) - 0012-9976 | ISSN (Online) - 2349-8846

ಕಾನೂನು ರಕ್ಷಕರೇ ಕಾನೂನು ಭಂಜಕರಾದಾಗ..

ನ್ಯಾಯಪ್ರಕ್ರಿಯೆಗೆ ಅಡ್ಡಪಡಿಸುವ ವಕೀಲರ ಸಂಘಗಳನ್ನು ರಾಜ್ಯ ವಕೀಲರ ಪರಿಷತ್ತುಗಳು ಹದ್ದುಬಸ್ತಿನಲ್ಲಿಡಬೇಕು.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಕಾನೂನನ್ನು ರಕ್ಷಿಸಬೇಕಿರುವ ವಕೀಲರೇ ಕಾನೂನನ್ನು ಉಲ್ಲಂಘಿಸುವ ಮತ್ತೊಂದು ಪ್ರಕರಣ ಜಮ್ಮುವಿನಲ್ಲಿ ನಡೆದಿದೆ. ಕಥುವಾದ ೮ ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆಯ ಪ್ರಕರಣದಲ್ಲಿ ಆರೋಪ ಪಟ್ಟಿ (ಚಾರ್ಜ್ ಶೀಟ್)ಯನ್ನು ಸಲ್ಲಿಸಲು ಬಂದಿದ್ದ ಪೊಲೀಸರನ್ನು ಪ್ರತಿಭಟನಾ ನಿರತ ಕಥುವ ಮತ್ತು ಜಮ್ಮು ವಕೀಲರ ಸಂಘದ ವಕೀಲರು ತಡೆಗಟ್ಟುವ ಪ್ರಯತ್ನ ಮಾಡಿದ್ದಾರೆ. ಈ ಪ್ರಯತ್ನದಲ್ಲಿ ವಿಫಲರಾದ ವಕೀಲರು ಅಲ್ಲಿಗೇ ನಿಲ್ಲದೆ ಮುಷ್ಕರಕ್ಕೆ ಕರೆ ನೀಡಿ ಜಮ್ಮು ಮತ್ತು ಕಾಶ್ಮೀರದ ಹೈಕೊರ್ಟಿನ ನಡಾವಳಿಗಳನ್ನೇ ಸ್ಥಬ್ಧಗೊಳಿಸಿದ್ದಾರೆ. ಅವರು ಏಪ್ರಿಲ್ ೧೧ರಂದು ಬಂದ್ ಆಚರಿಸಲು ಬಹಿರಂಗವಾಗಿ ಕರೆನೀಡಿದ್ದಲ್ಲದೆ, ವರದಿಗಳ ಪ್ರಕಾರ, ಕೊಲೆಗೀಡಾದ ಬಾಲಕಿಯ ಸಂತ್ರಸ್ತ ಕುಟುಂಬದ ಪರವಾಗಿ ವಕಾಲತ್ತು ವಹಿಸಲು ಬಂದಿದ್ದ ವಕೀಲರಿಗೆ ಪ್ರಕರಣದಿಂದ ಹಿಂದೆ ಸರಿಯುವಂತೆ ಬೆದರಿಕೆಯೊಡ್ಡಿದ್ದಾರೆ. ಕೊನೆಗೆ ಸುಪ್ರೀಂಕೋರ್ಟು ಈ ವಕೀಲರ ಕಾನೂನುಬಾಹಿರ ವರ್ತನೆಗಳನ್ನು ಸ್ವಯಂ ಗಮನಕ್ಕೆ ತೆಗೆದುಕೊಂಡು ಅಡಚಣೆಯೊಡ್ಡುತ್ತಿರುವ ವಕೀಲರ ಬಗ್ಗೆ ಕಟುವಾಗಿ ಟೀಕೆ ಮಾಡಿತು. ನಂತರವಷ್ಟೇ ಉಚ್ಚ ನ್ಯಾಯಾಲಯ ಮತ್ತೆ ಕಾರ್ಯಾರಂಭ ಮಾಡಿದೆ.

೨೦೦೩ರ ಮಾಜಿ ಕ್ಯಾಪ್ಟನ್ ಹರೀಶ್ ಉಪ್ಪಾಲ್ ಮತ್ತು ಭಾರತ ಸರ್ಕಾರದ ನಡುವಿನ ತಗಾದೆಯಲ್ಲಿ ವಕೀಲರು ಮುಷ್ಕರ ಹೂಡುವ ಅಥವಾ ಸಾಂಕೇತಿಕವಾಗಿಯೂ ಕೆಲಸಕ್ಕೆ ಬಹಿಷ್ಕಾರ ಮಾಡುವ ಹಕ್ಕಿಲ್ಲವೆಂದು ಸುಪ್ರೀಂ ಕೋರ್ಟು ಅತ್ಯಂತ ಸ್ಪಷ್ಟವಾಗಿ ಆದೇಶಿಸಿದ್ದರೂ ವಕೀಲರ ಸಂಘಗಳನ್ನು ಹದ್ದುಬಸ್ತಿನಲ್ಲಿಡಲು ಆಗುತ್ತಿಲ್ಲ. ಅಷ್ಟು ಮಾತ್ರವಲ್ಲದೆ, ಆ ಆದೇಶದಲ್ಲಿ  ಯಾವುದೇ ವಕೀಲರ ಸಂಘ ಅಥವಾ ವಕೀಲರ ಪರಿಷತ್ತುಗಲಾಗಲೀ ಮುಷ್ಕರ ಅಥವಾ ಬಹಿಷ್ಕಾರಕ್ಕೆ ಕರೆನೀಡುವ ಉದ್ದೇಶದಿಂದ ಕರೆಯಲಾಗುವ ಸಭೆಗಳಿಗೆ ಅನುಮತಿ ನೀಡಬಾರದು ಮತ್ತು ಅಂಥ ಬೇಡಿಕೆಗಳನ್ನು ಕಡೆಗಣಿಸಬೇಕು ಎಂದು ಕೂಡಾ ವರಿಷ್ಠ ನ್ಯಾಯಾಲಯ ಆದೇಶಿಸಿದೆ. 

ಕಳೆದ ಕೆಲ ಸಮಯದಿಂದ ವಕೀಲರು ನಡೆಸುತ್ತಿರುವ ಮುಷ್ಕರ, ಬಹಿಷ್ಕಾರ ಅಥವಾ ಬೆದರಿಕಾ ಪ್ರತಿಭಟನೆಗಳಿ ಹಿಂದಿನ ಕಾರಣಗಳಿಗೂ  ನ್ಯಾಯಾಲಯಗಳ ಅಥವಾ ನ್ಯಾಯದಾನ ವ್ಯವಸ್ಥೆಗೂ ಯಾವ ಸಂಬಂಧವೂ ಇಲ್ಲ. ೨೦೧೬ರಲ್ಲಿ ದೆಹಲಿಯ ಪಾಟಿಯಾಲ ಕೋರ್ಟಿನ ಆವರಣದೊಳಗೆ ಕೆಲವು ವಕೀಲರು ಪತ್ರಕರ್ತರ ಮತ್ತು ಜೆಎನ್‌ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ದೈಹಿಕ ಹಲ್ಲೆ ನಡೆಸಿದ ದೃಶ್ಯಾವಳಿಗಳನ್ನು ಕೆಲವು ಸುದ್ದಿ ಮಾಧ್ಯಮಗಳು ಬಿತ್ತರಿಸಿದ್ದವು. ತಮ್ಮ ಈ ಕೃತ್ಯವನ್ನು ಆ ವಕೀಲರು ರಾಷ್ಟ್ರವಾದಿ ಕರ್ತವ್ಯವೆಂದೂ ಸಹ ಸಮರ್ಥಿಸಿಕೊಂಡರು. ಅದೇ ವರ್ಷ ಬೆಂಗಳೂರಿನ ವಕೀಲರು ಪೊಲೀಸರ ಜೊತೆಗೆ ಹಿಂಸಾತ್ಮಕ ಮುಖಾಮುಖಿಗಿಳಿದಿದ್ದರು ಮತ್ತು ಕೇರಳದ ವಕೀಲರು ಸುದೀರ್ಘಕಾಲದ ಮುಷ್ಕರ ಹೂಡಿದ್ದರು ಮತ್ತು ಅದು ಆಗಾಗ ಕೈಮೀರಿದ ಘಟನೆಗಳಿಗೆ ಕಾರಣವಾಗಿತ್ತು.

೨೦೦೮ರ ಮೇಯಲ್ಲಿ ಮೊಹಮ್ಮದ್ ಶೋಯಬ್ ಎಂಬ ಲಖನೌನ ವಕೀಲರು ಫೈಜಾಬಾದ್‌ನ ವಕೀಲರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಏಕೆಂದರೆ ಆ ಕೋಪೋದ್ರಿಕ್ತ ವಕೀಲರ ಪ್ರಕಾರ ಶೋಯಬ್ ಅವರು ಭಯೋತ್ಪಾದಕನೊಬ್ಬನನ್ನು ರಕ್ಷಿಸಲು ಬಂದಿದ್ದರು. ವಾಸ್ತವವಾಗಿ, ಬಹಳಷ್ಟು ವಕೀಲರ ಸಂಘಗಳು ತಾವು ಭಯೋತ್ಪಾದಕ ಎಂದು ಪರಿಗಣಿಸುವ ವ್ಯಕ್ತಿಯ ಪರವಾಗಿ ವಕಾಲತ್ತು ವಹಿಸುವುದಿಲ್ಲವೆಂಬ ಸಾಮೂಹಿಕ ನಿರ್ಣಯವನ್ನು ಕೈಗೊಳ್ಳುತ್ತಿವೆ. ಬಸ್ತರ್‌ನಲ್ಲಿ ’ಜಗದಾಲ್‌ಪುರ್ ಕಾನೂನು ಸಹಕಾರದ ಗುಂ’ನ್ನು ಮಾವೋವಾದಿಗಳಿಗೆ ಸಹಾಯ ಮಾಡುತ್ತಿದೆ ಎಂಬ ಆರೋಪ ಹೊರಿಸಿ ಹಿಂತಿರುಗುವಂತೆ ಮಾಡಿದ್ದರು. ಇದು ಭಾರತದ ವಕೀಲರ ಪರಿಷತ್ತಿನ ನಿಯಮಾವಳಿಗಳ ಭಾಗವಾಗಿರುವ ವೃತ್ತಿಪರ ನಡವಳಿಕೆ ಮತ್ತು ವರ್ತನೆಗಳ ೧೧ ನೇ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಅದರ ಪ್ರಕಾರ: ಯಾವುದೇ ವಕೀಲರು ತನ್ನ ಸ್ಥಾನಮಾನ ಮತ್ತು ಪ್ರಕರಣದ ಸ್ವರೂಪವನ್ನು ಆಧರಿಸಿ ಒಂದು ನಿರ್ದಿಷ್ಟ ಶುಲ್ಕವನ್ನು ಸ್ವೀಕರಿಸಿ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಯಾವುದೇ ಪ್ರಾಧಿಕಾರದ ಮುಂದೆ ವಕಾಲತ್ತು ವಹಿಸುವಾಗ ತನ್ನ ಕಕ್ಷಿದಾರರು ಒದಗಿಸುವ ಮಾಹಿತಿ/ಆದೇಶದ ಪರವಾಗಿ ವಕಾಲತ್ತು ವಹಿಸಬೇಕು. ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ವಕೀಲರು ತನ್ನ ಕಕ್ಷಿದಾರನ ಮಾಹಿತಿ/ಆದೇಶಗಳನ್ನು ನಿರಾಕರಿಸಬಹುದು.

ವಕೀಲರ ಪರಿಷತ್ತುಗಳು ಶಾಸನ ಬದ್ಧ ನಿಯಂತ್ರಣ ಸಂಸ್ಥೆಗಳಾಗಿದ್ದರೂ, ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪದೇಪದೇ ಬಹಿಷ್ಕಾರ ಹಾಗೂ ಪ್ರತಿಭಟನೆಗಳಿಗೆ ಕರೆ ನೀಡುವುದು ಮಾತ್ರ ವಕೀಲರ ಸಂಘಗಳಾಗಿವೆ. ಈ ವಕೀಲರ ಸಂಘಗಳು ವಕೀಲರ ದೈನಂದಿನ ಆಗೂಹೋಗುಗಳ ಮೇಲೆ ದಟ್ಟವಾದ ಪ್ರಭಾವವನ್ನು ಹೊಂದಿರುತ್ತವಾದ್ದರಿಂದ ಅದರ ಆದೇಶಗಳನ್ನು ಮೀರಿ ನಡೆಯಲು ಸಾಮಾನ್ಯವಾಗಿ ವಕೀಲರು ಸಿದ್ಧರಿರುವುದಿಲ್ಲ. ಇಂಥಾ ವಕೀಲರು ಮತ್ತು ವಕೀಲರ ಸಂಘಗಳು ತಪ್ಪಾಗಿ ನಡೆದುಕೊಂಡಾU ಅವುಗಳ ಮೇಲೆ ಕ್ರಮಕೈಗೊಳ್ಳುವುದು ವಕೀಲರ ಪರಿಷತ್ತಿನ ಹೊಣೆಗಾರಿಕೆಯಾಗಿದೆ. ಮತ್ತು ಅದಕ್ಕೆ ಬೇಕಾದ ಶಾಸನಾತ್ಮಕ ಅಧಿಕಾರ ವಕೀಲರ ಪರಿಷತ್ತುಗಳಿಗಿವೆ. ಆದರೂ ಮುಷ್ಕರಗಳಿಗೆ ಕರೆನೀಡುವವರ ಮೇಲೆ ಮತ್ತು ಕೆಲವು ಕಕ್ಷಿದಾರರ ಪರವಾಗಿ ವಕಾಲತ್ತು ವಹಿಸದಂತೆ ನಿರ್ಬಂಧಿಸುವವರ ಮೇಲೆ ವಕೀಲರ ಪರಿಷತ್ತುಗಳು ಈವರೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಹಾಲೀ ಪ್ರಕರಣದಲ್ಲಂತೂ ಸ್ವಯಂ ಸುಪ್ರೀಂ ಕೋರ್ಟೇ ವಕೀಲರ ಸಂಘದ ಕ್ರಮವನ್ನು ತರಾಟೆಗೆ ತೆಗೆದುಕೊಳ್ಳಬೇಕಾಯಿತು.

ಈ ರೀತಿ ವಕೀಲರು ಪದೇ ಪದೇ ಮುಷ್ಕರ ಹಾಗೂ ಪ್ರತಿಭಟನೆಗಳಲ್ಲಿ ತೊಡಗಿಕೊಳ್ಳುತ್ತಿರುವುದರ ಮತ್ತೊಂದು ಕಳವಳಕಾರಿ ಪರಿಣಾಮವೇನೆಂದರೆ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದಿರುವ ದಾವೆಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿರುವುದು. ೨೦೧೭ರಲ್ಲಿ ನೀಡಲಾದ ಭಾರತೀಯ ಕಾನೂನು ಅಯೋಗದ ೨೬೬ನೇ ವರದಿಯ ಪ್ರಕಾರ ಭಾರತದ ಕೆಳಹಂತದ ನ್ಯಾಯಾಲಯಗಳಲ್ಲೇ ೨.೫ ಕೋಟಿ ದಾವೆಗಳು ಬಾಕಿ ಇದ್ದು, ವಕೀಲರ ಮುಷ್ಕರಗಳ ಕಾರಣದಿಂದ ನ್ಯಾಯಾಲಯದ ಸಮಯ ಹರಣವಾಗುತ್ತಿರುವುದೂ ಸಹ ಅದಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಪದೇಪದೇ ನ್ಯಾಯಾಲಯಗಳಲ್ಲಿ ವಿಚಾರಣೆಗಳು ಮುಂದೂಡಲ್ಪಟ್ಟು ಪ್ರಕರಣಗಳು ಇತ್ಯರ್ಥವಾಗದೆ  ವಿಳಂಬವಾಗುತ್ತಿರುವುದಕ್ಕೂ ವಕೀಲರ ಮುಷ್ಕರಗಳು ಒಂದು ಕಾರಣವಾಗಿವೆ. ಭಾರತೀಯ ಸಮಾಜದಲ್ಲಿ ವಕೀಲರಿಗೆ ಪ್ರತಿಷ್ಟಿತ ಸ್ಥಾನವಿದೆ. ಬಡ ಆರೋಪಿಗಳು ತಮಗೆ ರಕ್ಷಣೆಯನ್ನು ಮತ್ತು ನ್ಯಾಯವನ್ನು ವಕೀಲರೇ ಒದಗಿಸಿಕೊಡುತ್ತಾರೆಂಬ ಭರವಸೆಯಲ್ಲಿರುತ್ತಾರೆ. ಪ್ರತಿಯೊಂದು ಕಾನೂನಿನಂತೆಯೇ ನಡೆಯುವುದದು ಖಾತರಿಯಾಗುವುದು ಹಾಗೂ ಪ್ರಜಾತಾಂತ್ರಿಕ ಹಕ್ಕುಗಳ ರಕ್ಷಣೆಯು ವಕೀಲರ ನಡಾವಳಿ ಮತ್ತು ಕೆಲಸದ ಬಗ್ಗೆ ಇರುವ ನೀತಿತತ್ವಗಳನ್ನು ಹೆಚ್ಚಾಗಿ ಆಧರಿಸಿರುತ್ತದೆ.  ಆಯಾ ರಾಜ್ಯಗಳ ವಕೀಲರ ಪರಿಷತ್ತುಗಳ ನಿಯಂತ್ರಣ ಮತ್ತು ಉಸ್ತುವಾರಿಗಳನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ. ಮತ್ತು ಕಾನೂನು ಶಿಕ್ಷಣದಲ್ಲಿ ಕಾನೂನಿಗೆ ಸಂಬಂಧಪಟ್ಟ ನೀತಿತತ್ವಗಳ ಶಿಕ್ಷಣವು ಒಂದು ಗಣನೀಯ ಭಾಗವಾಗಬೇಕು. ಪದೇಪದೇ ಮುಷ್ಕರಗಳಿಗೆ ಕರೆ ನೀಡುವ ಬದಲು ವಕೀಲರು ಪತ್ರಿಕಾ ಹೇಳಿಕೆ ಮತ್ತು ನ್ಯಾಯಾಲಯದ ಹೊರಗಡೆ ಶಾಂತಿಯುತ ಪ್ರತಿಭಟನೆ ಮಾಡುವಂಥ ಕ್ರಮಗಳಿಗೆ ಮುಂದಾಗಬಹುದು. ಹಾಗೂ ಆ ಮೂಲಕ ತಮ್ಮ ವೃತ್ತಿಯು ತಮ್ಮಿಂದ ಅಪೇಕ್ಷಿಸುವ ಕಾನೂನು ಮತ್ತು ನೈತಿಕ ನಿಯಮಗಳಿಗೆ ತಕ್ಕಂತೆ ವರ್ತಿಸಲೂ ಸಾಧ್ಯವಾಗುತ್ತದೆ.

ಆದರೆ ಕಥುವಾ ಮತ್ತು ಜಮ್ಮು ವಕೀಲರ ಸಂಘಗಳ ಸದಸ್ಯರು ಮಾಡಿದಂತೆ, ಕಾನೂನನ್ನು ರಕ್ಷಿಸಬೇಕಾದ ವಕೀಲರೇ ಪ್ರತಿಭಟನೆಗಿಳಿದರೆ  ಮತ್ತು ಮುಷ್ಕರದ ಸಮಯದಲ್ಲಿ ಗಲಭೆಕೋರ ಗುಂಪಿನಂತೆ ವರ್ತಿಸಿದರೆ ಅತ್ಯಾಚಾರ ಹಾಗೂ ತಪ್ಪಿತಸ್ಥರಿಗೆ  ತಕ್ಕ  ಶಿಕ್ಷೆ ದೊರೆಯುತ್ತದೆಂಬ ವಿಶ್ವಾಸ  ಕೊಲೆಗೀಡಾದ ಬಾಲಕಿಯ ಕುಟುಂಬದವರಿಗೆ ಹೇಗೆ ತಾನೆ ಬರಲು ಸಾಧ್ಯ? ಹೀಗಾಗಿ ಆಯಾ ವಕೀಲರ ಪರಿಷತ್ತುಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಲ್ಲದೆ ತಮ್ಮ ಸ್ವ ನಿಯಂಯ್ತ್ರಣ ಪದ್ಧತಿಗಳನ್ನು ಮತ್ತಷ್ಟು ಬಲಪಡಿಸಿಕೊಂಡು ವಕೀಲರನ್ನು ನಿಜಕ್ಕೂ ಕಾನೂನಿನ ರಕ್ಷಕರಾಗಿ ವರ್ತಿಸುವಂತೆ ಮಾಡಲು ಇದು ಸಕಾಲವಾಗಿದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top