ISSN (Print) - 0012-9976 | ISSN (Online) - 2349-8846

ದಕ್ಷಿಣದಲ್ಲಿ ಉತ್ತರವಿಲ್ಲ..

ಆಂಧ್ರಪ್ರದೇಶದ ನಿರ್ಲಕ್ಷ್ಯ ಮತ್ತು ಅಲ್ಲಿ ನಡೆಯುತ್ತಿರುವ ಅಧಿಕಾರದ ಹಣಾಹಣಿಗಳು ಮೋದಿಯವರ ಬಿಜೆಪಿಗೆ ಹಲವು ಸಮಸ್ಯೆಗಳನ್ನು ತಂದೊಡ್ಡಿವೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ರಾಜಕೀಯ ಅಧಿಕಾರಕ್ಕಾಗಿ ಆಂಧ್ರಪ್ರದೇಶದಲ್ಲಿ ನಡೆಂತ್ತಿರುವ ಹಣಾಹಣಿಗಳು ರಾಜ್ಯದಲ್ಲಿ ಬಿಜೆಪಿಯ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆಯಲ್ಲದೆ ಮೋದಿ ಸರ್ಕಾರದ ಬೇರುಗಳಲ್ಲಿರುವ ಬಿರುಕುಗಳನ್ನೂ ಬಯಲಿಗೆಳೆದಿದೆ. ಎನ್‌ಡಿಎ ಒಕ್ಕೂಟದ ಅತ್ಯಂತ  ಹಳೆಯ ಮತ್ತು ದೊಡ್ಡ ಮಿತ್ರಪಕ್ಷವಾಗಿದ್ದ ಚಂದ್ರಬಾಬು ನಾಯುಡು ನೇತೃತ್ವದ ತೆಲುಗು ದೇಶಂ ಪಕ್ಷವು (ಟಿಡಿಪಿ) ಕೇಂದ್ರದಿಂದ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಸ್ಥಾಯಿಯನ್ನು (ಸ್ಪೆಷಲ್ ಕೆಟಗರಿ ಸ್ಟೇಟಸ್- ಎಸ್‌ಸಿಎಸ್) ಪಡೆದುಕೊಳ್ಳಲು ವಿಫಲವಾಗಿದ್ದರಿಂದ ಬಿಜೆಪಿಯ ಜೊತೆಗಿನ ತನ್ನ ಸ್ನೇಹವನ್ನು ಕಳಚಿಕೊಂಡಿದೆ. ಎಸ್‌ಸಿಎಸ್ ಸ್ಥಾಯಿಯನ್ನು ಪಡೆದುಕೊಳ್ಳಲು ವಿಫಲವಾಗಿರುವುದರಿಂದ ನಾಯ್ಡು ಸರ್ಕಾರವು ಪ್ರತಿಪಕ್ಷದ ನಾಯಕರಾದ ವೈಎಸ್ ಜಗನ್ ಮೋಹನ್ ರೆಡ್ಡಿಯಿಂದ ಮತ್ತು ೨೦೧೪ರ ಚುನಾವಣೆಯಲ್ಲಿ ನಾಯ್ಡು ಮತ್ತು ಬಿಜೆಪಿಯನ್ನು ಬೆಂಬಲಿಸಿದ್ದ ಚಿತ್ರನಟ -ರಾಜಕಾರಣಿ ಪವನ್ ಕಲ್ಯಾಣ್‌ರಿಂದ ರಾಜಕೀಯ ಸವಾಲನ್ನು ಎದುರಿಸುತ್ತಿದ್ದಾರೆ.

ನಾಯ್ಡುವಿನ ಪ್ರಧಾನ ಪ್ರತಿರೋಧಿಯಾದ ಜಗನ್ ರೆಡ್ಡಿಯವರು ಈ ಹಿಂದೆ ತನ್ನ ತಂದೆ ವೈ.ಎಸ್. ರಾಜಶೇಖರ್ ರೆಡ್ಡಿ (ವೈಎಸ್‌ಆರ್) ಮಾಡಿದ ರೀತಿಯಲ್ಲೇ ೨೦೧೭ರ ನವಂಬರ್‌ನಲ್ಲಿ ಒಂದು ದೊಡ್ಡ ಪಾದಯಾತ್ರೆಯನ್ನು ಪ್ರಾರಂಭಿಸಿದ್ದರು. ವೈಎಸ್‌ಆರ್ ನಡೆಸಿದ ಪಾದಯಾತ್ರೆಯಿಂದಾಗಿ ನಾಯ್ಡು ಅವರು ಅಧಿಕಾರವನ್ನು ಕಳೆದುಕೊಂಡಿದ್ದು ಮಾತ್ರವಲ್ಲದೆ ಒಂದು ದಶಕದ ಕಾಲ ಅಧಿಕಾರದಿಂದ ದೂರ ಉಳಿಯಬೇಕಾಯಿತು. ನರೇಂದ್ರಮೋದಿಯವರ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಪ್ರಥಮವಾಗಿ ಮಾಂಡಿಸಿದ್ದು ವೈಎಸ್‌ಆರ್ ಕಾಂಗ್ರೆಸ್ ಪಕ್ಷವೇ ಆಗಿತ್ತು. ಆಂಧ್ರಪ್ರದೇಶದಲ್ಲಿ ಅನಾವರಣಗೊಳ್ಳುತ್ತಿರುವ ರಾಜಕೀಯ ನಾಟಕವು ಇದರಲ್ಲೂ ಅಭಿವ್ಯಕ್ತಗೊಂಡಿದೆ. ಇದನ್ನು ಅನುಸರಿಸಿ ನಾಯ್ಡು ಅವರೂ ಕೇಂದ್ರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಸೂಚನೆಯನ್ನು ನೀಡುವುದು ಅನಿವಾರ್ಯವಾಯಿತು. ಎರಡೂ ಗೊತ್ತುವಳಿಗಳೂ ಸಹ ಚರ್ಚೆಗೆ ಬರಲಿಲ್ಲವೆಂಬುದು ಬೇರೆ ಮಾತು.

ಹತ್ತು ವರ್ಷಗಳ ಕಾಲ ಅಧಿಕಾರದಿಂದ ದೂರವಿದ್ದ ನಾಯ್ಡು ಅವರು ಮತ್ತೆ ಅಧಿಕಾರ ಪಡೆದದ್ದು ೨೦೧೪ರಲ್ಲಿ. ಆದರೆ ಆಗ ಆಂಧ್ರಪ್ರದೇಶ ವಿಭಜಿತವಾಗಿತ್ತು. ನಾಯ್ಡುರವರು ಎಸ್‌ಸಿಎಸ್ ಸ್ಥಾನ್ರಮಾನದ ವಿಷಯವನ್ನು ಸಾಕಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲವೆಂದೂ, ಹೊಸ ರಾಜಧಾನಿ ಅಮರಾವತಿಗಾಗಿ ಮಾಡಬೇಕಿದ್ದ ಭೂ ಸ್ವಾಧೀನ ವಿಷಯವನ್ನು ಹಾಗೂ ಪೋಲಾವರಂ ನೀರಾವರಿ ಯೋಜನೆಯ ವಿಷಯವನ್ನು ಸಮರ್ಪಕವಾಗಿ ನಿರ್ವಹಿಸಲಿಲ್ಲವೆಂಬ ಗಂಭೀರವಾದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಎರಡೂ ಯೋಜನೆಗಳ ವಿರುದ್ಧ ನಾಗರಿಕ ಸಮಾಜ ಹಾಗೂ ಭೂಮಿ ಮತ್ತು ಜೀವನೋಪಾಯವನ್ನು ಕಳೆದುಕೊಳ್ಳುತ್ತಿರುವವರು ತೀವ್ರವಾದ ಪ್ರತಿರೋಧವನ್ನು ಮಾಡಿದ್ದಾರೆ. ಕೇಂದ್ರ ಸರ್ಕಾರದ ಜೊತೆ ತನಗಿರುವ ಸನ್ನಿಹಿತವಾದ ಸಂಬಂಧವನ್ನು ಬಳಸಿಕೊಂಡು ೨೦೧೪ರ ರಾಜ್ಯ ಪುನರ್‌ಸಂಘಟನಾ ಕಾಯಿದೆಯನ್ನು ಜಾರಿಗೊಳಿಸುವಂತೆ ಮಾಡಲಾಗಲೀ ಅಥವಾ ಹೊಸ ರಾಜ್ಯವನ್ನು ಕಟ್ಟಲು ಬೇಕಾದಷ್ಟು ಸಂಪನ್ಮೂಲಗಳನ್ನು ಅಥವಾ ಯೋಜನೆಗಳನ್ನು ಪಡೆದುಕೊಳ್ಳಲಾಗಲೀ ನಾಯ್ಡು ಅವರಿಗೆ ಸಾಧ್ಯವಾಗಲಿಲ್ಲ. ಈ ವೈಫಲ್ಯಗಳು ನಾಯ್ಡು ಅವರ ವಿರುದ್ಧ ಆಡಳಿತರೂಢ ವಿರೋಧಿ (ಆಂಟಿ ಇನ್ಕ್ಯುಬೆನ್ಸಿ) ಮನೋಭಾವವನ್ನು ಹುಟ್ಟುಹಾಕಿದೆ.  ೨೦೦೦ದ ಪ್ರಾರಂಭದಲ್ಲಿ ಮಾಹಿತಿ ತಂತ್ರಜ್ನಾನದ ಜಾಗತಿಕ ಕಂಪನಿಗಳನ್ನು ಹೈದಾರಾಬಾದಿಗೆ  ದೊಡ್ಡಮಟ್ಟದಲ್ಲಿ ಆಕರ್ಷಿಸುವ ಮೂಲಕ ನಾಯ್ಡು ಅವರು ಸಮರ್ಥ ಆಡಳಿತಗಾರನೆಂಬ  ಪ್ರತಿಷ್ಟೆಯನ್ನು ಗಳಿಸಿಕೊಂಡಿದ್ದರು. ಆದರೆ ೨೦೧೯ರ ಮೇ ಯಲ್ಲಿ ಆಂಧ್ರಪ್ರದೇಶದಲ್ಲಿ ಚುನಾವಣೆಗಳು ನಡೆಯಲಿದ್ದು ಟಿಡಿಪಿಯ ಪ್ರತಿಷ್ಟೆಗೆ ದೊಡ್ಡ ಕುಂದುಂಟಾಗಿದೆ.

ನಾಯ್ಡು ಅವರು ಎನ್‌ಡಿಎಯಿಂದ ಹೊರಬಂದಿರುವ ಬಿಜೆಪಿ ಆಂಧ್ರಪ್ರದೇಶದಲ್ಲಿ ತನ್ನದೇ ಆದ ಸ್ವಂತ ನೆಲೆಯನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಬಿಜೆಪಿಯ ಈ ಹಿಂದಿನ ಚುನಾವಣಾ ಸಾಧನೆಗಳನ್ನು ನೋಡುವುದಾದಲ್ಲಿ ಅಂಥಾ ಸಾಧ್ಯತೆಗಳು ತುಂಬಾ ಕಡಿಮೆಯೆಂದೇ ಹೇಳಬಹುದು. ೨೦೧೪ರಲ್ಲಿ ವಿಭಜಿತ ಆಂಧ್ರಪ್ರದೇಶದಲ್ಲಿದ್ದ ಒಟ್ಟು ೨೫ ಲೋಕಸಭಾ ಸ್ಥಾನಗಳಲ್ಲಿ ಟಿಡಿಪಿ ೧೫ ಸ್ಥಾನಗಳನ್ನೂ, ವೈಎಸ್‌ಆರ್‌ಸಿಪಿ ೮ ಸ್ಥಾನಗಳನ್ನೂ ಗೆದ್ದುಕೊಂಡರೆ ಬಿಜೆಪಿ ಗೆದ್ದದ್ದು ಕೇವಲ ಎರಡು ಸ್ಥಾನಗಳನ್ನು ಮಾತ್ರ. ೧೯೯೯ರಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಏಳು ಸ್ಥಾನಗಳನ್ನು ಪಡೆದುಕೊಂಡಿದ್ದೇ ಈವರೆಗಿನ ಬಿಜೆಪಿಯ ಅತ್ಯುತ್ತಮ ಸಾಧನೆಯಾಗಿದೆ. ಆಂಧ್ರಪ್ರದೇಶದಲ್ಲಿ ಎಂದಿಗೂ ಒಂದು ಸ್ವತಂತ್ರ ಶಕ್ತಿಯಾಗಿರದ ಬಿಜೆಪಿ ಈಗ ತನ್ನ ಮೈತ್ರಿಕೂಟದ ಸದಸ್ಯನ ಮತ್ತು ರಾಜ್ಯದ ಜನತೆಯ ಹಿತಾಸಕ್ತಿಯನ್ನು ಉಪೇಕ್ಷೆ ಮಾಡಿದ್ದರ ಪರಿಣಾಮವನ್ನು ಅನುಭವಿಸುತ್ತಾ ಒಂಟಿಯಾಗಿಬಿಟ್ಟಿದೆ. ಟಿಡಿಪಿಯು ರಾಜ್ಯದ ಕಮ್ಮಾ ಸಮುದಾಯದ ನಡುವೆ ದೀರ್ಘಕಾಲದಿಂದ ಬಲವಾದ ನೆಲೆಯನ್ನು ಹೊಂದಿದೆ. ಅದೇ ರೀತಿ ವೈಎಸ್‌ಆರ್‌ಸಿಪಿಗೆ ರೆಡ್ಡಿ, ದಲಿತ ಮತ್ತು ಕ್ರಿಶ್ಚಿಯನ್ ಸಮುದಾಯದ ನಡುವೆಯೂ ಮತ್ತು ಚಿತ್ರನಟ ಪವನ್ ಕಲ್ಯಾಣ್‌ಗೆ ಅಭಿಮಾನಿಗಳು ಮತ್ತು ಕಾಪು ಸಮುದಾಯದ ನಡುವೆ ಬಲವಾದ ನೆಲೆಯಿದೆ. ಬಿಜೆಪಿಗೆ ಈ ಬಗೆಯ ಯಾವುದೇ ಬಲವಾದ ಖಚಿತ ಮತದಾರರ ನೆಲೆಯಿಲ್ಲ.

ಹೀಗಾಗಿ ತನ್ನದೇ ಆದ ನೆಲೆಯನ್ನು ಸೃಷ್ಟಿಸಿಕೊಳ್ಳುವ ಪ್ರಯತ್ನದಲ್ಲಿ ಬಿಜೆಪಿಯು ಈಗ ಕಾಪುಗಳನ್ನು ಹಿಂದುಳಿದ ಸಮುದಾಯಗಳ ಪಟ್ಟಿಗೆ ಸೇರಿಸಬೇಕೆಂಬ ಕಾಪು ಸಮುದಾಯದ ಆಗ್ರಹಕ್ಕೆ ಬೆಂಬಲ ನೀಡಲು ಪ್ರಾರಂಭಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡೆ ಬಿಜೆಪಿಯು ತನ್ನ ರಾಜ್ಯ ಘಟಕಕ್ಕೆ ಹೊಸ ಅಧ್ಯಕ್ಷರನ್ನೂ ಕೂಡ ನೇಮಕ ಮಾಡುವ ಸನ್ನಾಹದಲ್ಲಿದೆ. ಇದರಿಂದಾಗಿ ಹಲವು ಪ್ರಮುಖ ಪ್ರಾದೇಶಿಕ ನಾಯಕರು ತನ್ನ ಪಕ್ಷವನ್ನು ಸೇರಬಹುದೆಂಬ ನಿರೀಕ್ಷೆಯನ್ನು ಹೊಂದಿದೆ. ಏಕೆಂದರೆ ಈ ರಣತಂತ್ರವು ಈ ಹಿಂದೆಯೂ ಆ ಪಕ್ಷಕ್ಕೆ ಲಾಭವನ್ನು ತಂದುಕೊಟ್ಟಿತ್ತು. ೨೦೦೯ರ ಚುನಾವಣೆಗೆ ಮುನ್ನ ’ಪ್ರಜಾರಾಜ್ಯಂ’ ಪಕ್ಷವನ್ನು ಸ್ಥಾಪಿಸಿದ್ದ ಪವನ್ ಕಲ್ಯಾಣರ ಹಿರಿಯ ಸಹೋದರ ಚಿತ್ರನಟ ಚಿರಂಜೀವಿಯವರು ಕಾಪು ಸಮುದಾಯದ ಬೆಂಬಲವನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಶ್ರಮ ಹಾಕಿದ್ದರು. ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಮಾಡಿದ ಚಿರಂಜೀವಿಯವರ ಪಕ್ಷವು ೨೦೧೧ರಲ್ಲಿ ಕಾಂಗ್ರೆಸ್‌ನಲ್ಲಿ ವಿಲೀನಗೊಂಡಿತು. ಆದರೆ ಈಗ ರಾಜ್ಯದ ರಾಜಕೀಯ ವಲಯದ ಕಥನಗಳಿಗೆ ಬಿಜೆಪಿಯು ಹೊಸ ದಿಕ್ಕನ್ನು ನೀಡುವ ಆಶಯವನ್ನು ಹೊಂದಿದೆ. : ದೊಡ್ಡ ಹಾಗೂ ಪ್ರಭಾವಿ ಸಮುದಾಯವಾಗಿದ್ದರೂ ಈವರೆಗೆ ಬಲವಾದ ರಾಜಕೀಯ ಧ್ವನಿಯನ್ನು ಪಡೆದುಕೊಳ್ಳದ ಕಾಪು ಸಮುದಾಯದ ಪಾಲನ್ನು ಆಗ್ರಹಿಸುವ ಮೂಲಕ ರಾಜ್ಯಕ್ಕೆ ಮೋದಿಯವರು ಮಾಡಿದ ಅನ್ಯಾಯ ಮಾಡಿದರೆಂಬ ಪ್ರಧಾನ ಕಥನವನ್ನು ಹಿಮ್ಮೆಟ್ಟಿಸುವುದು.

ಆಂಧ್ರ್ರಪ್ರದೇಶದಲ್ಲಿ ಒಂದು ಸುಭದ್ರ ನೆಲೆಗಾಗಿ ಹೆಣಗಾಡುತ್ತಿರುವ ಸಂದರ್ಭದಲ್ಲೇ ದಕ್ಷಿಣ ಭಾರತದಲ್ಲಿ ತನ್ನ ನೆಲೆಯನ್ನು ಕಂಡುಕೊಳ್ಳಲು ಬಿಜೆಪಿಯು ಯಾವ ರಾಜಕೀಯ ತಂತ್ರೋಪಾಯಗಳನ್ನು ಮಾಡುತ್ತಿದೆ ಎಂಬುದು ಅನಾವರಣಗೊಳ್ಳುತ್ತಿದೆ. ಉದಾಹರಣೆಗೆ ಕರ್ನಾಟಕದಲ್ಲಿ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಕಾವೇರಿ ವಿಚಾರದಲ್ಲಿ ತನಗೆ ಅನ್ಯಾಯ ಮಾಡಿತೆಂಬ  ಭಾವನೆಯು ತಮಿಳುನಾಡಿನಲ್ಲಿ ವ್ಯಾಪಕವಾಗಿದೆ. ಅಲ್ಲದೆ ೧೫ನೇ ಹಣಕಾಸು ಅಯೋಗಕ್ಕೆ ನೀಡಲಾಗಿರುವ ಕೇಂದ್ರೀಕರಣದ ಬಗ್ಗೆ ಹೆಚ್ಚು ಒತ್ತಿರುವ ಮಾರ್ಗಸೂಚಿಯಿಂದ ಬಹಳಷ್ಟು ದಕ್ಷಿಣದ ರಾಜ್ಯಗಳು ತಮ್ಮ ವಿತ್ತೀಯ ಸಂಪನ್ನತೆಯನ್ನು ಕಳೆದುಕೊಳ್ಳಲಿವೆ.

೨೦೧೪ರಲ್ಲಿ ಆಂಧ್ರಪ್ರದೇಶ ವಿಭಜಿತಗೊಂಡು ಚುನಾವಣೆಗಳು ಎದುರಾದಾಗ ಬಿಜೆಪಿಯು ತನ್ನ ಪಕ್ಷಕ್ಕೆ ಹೊಸ ಸದಸ್ಯರನ್ನು ಸೆಳೆಯಲು ಯಶಸ್ವಿಯಾಗಿತ್ತು. ಏಕೆಂದರೆ ಆಗ ಮೋದಿಯವರ ಪ್ರಭಾವಳಿ ದೊಡ್ಡದಾಗಿತ್ತು ಮತ್ತು ಬಿಜೆಪಿಯ ಪ್ರಗತಿ ಏರುಗತಿಯಲ್ಲಿತ್ತು. ಆದರೆ ಈಗ ೨೦೧೯ರ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯು ಎದುರಾಗುತ್ತಿರುವ ಸಂದರ್ಭದಲ್ಲಿ ಬಿಜೆಪಿ ತನ್ನ ಪಕ್ಷಕ್ಕೆ ಹೊಸ ನಾಯಕ ಪಡೆಯನ್ನು ಸೆಳೆಯಲು ಕಷ್ತವಾಗಲಿದೆ. ತನ್ನ ಮೈತ್ರಿಕೂಟದ ಅಗತ್ಯಗಳಿಗೆ ಮತ್ತು ರಾಜ್ಯ ಸರ್ಕಾರಗಳ ಆಗ್ರಹಗಳಿಗೆ ಮಣೆಹಾಕದಿರುವುದರಿಂದ ಬಿಜೆಪಿಗಿದ್ದ ರಾಜಕೀಯ ಅವಕಾಶ ಕ್ಷೀಣಿಸಿದೆ. ಬಲಿಷ್ಟವಾದ ಪ್ರಾದೇಶಿಕ ಪಕ್ಷಗಳನ್ನು ಎದುರಿಸಬೇಕಾಗಿರುವುದರಿಂದ ಬಿಜೆಪಿಯ ರಾಜಕೀಯ ಯೋಜನೆಯು ಆಂಧ್ರಪ್ರದೇಶದಲ್ಲಿ ಮತ್ತು ಇತರ ದಕ್ಷಿಣ ರಾಜ್ಯಗಳಲ್ಲಿ ಬಲಹೀನಗೊಳ್ಳುತ್ತಲಿದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top