ISSN (Print) - 0012-9976 | ISSN (Online) - 2349-8846

ಅವಸಾನದತ್ತ ಸಾರ್ವಜನಿಕ ವಿಶ್ವವಿದ್ಯಾಲಯಗಳು

ಸಾರ್ವಜನಿಕ ವಿಶ್ವವಿದ್ಯಾಲಯಗಳ ಅಸ್ಥಿತ್ವದ ಮೇಲೆಯೇ ದಾಳಿ ನಡೆಸುತ್ತಿರುವ ಸರ್ಕಾರವು ತನ್ನ ಸಂವಿಧಾನಾತ್ಮಕ ಕರ್ತವ್ಯವನ್ನು ಉಲ್ಲಂಘಿಸುತ್ತಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಮಧ್ಯಯುಗದ ಕಥೆಗಾರ ಮಿನ್ಹಜ್ ಸಿರಾಜ್ ಅವರು ೧೨ನೇ ಶತಮಾನದ ಅಂಚಿನಲ್ಲಿ ಪೂರ್ವ ಭಾರತವನ್ನು ಗೆದ್ದುಕೊಂಡ ಭಕ್ತಿಯಾರ್ ಖಿಲ್ಜಿಯವರು ಬಿಹಾರದ ಒಂದು ಕೋಟೆಯ ಮೇಲೆ ದಾಳಿ ನಡೆಸಿದ್ದನ್ನು ದಾಖಲಿಸುತ್ತಾರೆ. ಆ ಕಥೆಯ ಪ್ರಕಾರ ಕೋಟೆಯನ್ನು ವಶಪಡಿಸಿಕೊಂಡ ಖಿಲ್ಜಿಗೆ ಅಲ್ಲಿ ಕಂಡುಬಂದದ್ದು ದೊಡ್ಡ ಸಂಖ್ಯೆಯ ಬ್ರಾಹ್ಮಣರು ಮತ್ತು ಅಪಾರವಾದ ಪುಸ್ತಕಗಳು. ಆಗ ತಾನು ಆಕ್ರಮಿಸಿರುವುದು ಕೋಟೆಯನ್ನಲ್ಲ ಬದಲಿಗೆ ಒಂದು ವಿಶ್ವವಿದ್ಯಾಲಯವನ್ನು ಎಂಬುದು ಆತನಿಗೆ ಅರಿವಾಗುತ್ತದೆ.

ತಬಾಕತ್-ಇ-ನಾಸಿರಿ ಎಂಬ ಗ್ರಂಥದಲ್ಲಿ ಉಲ್ಲೇಖವಾಗಿರುವ ಈ ವಾಕ್ಯಗಳನ್ನು ಬಲಪಂಥೀಯ ಪಂಡಿತರು ತಪಾಗಿ ಅರ್ಥೈಸಲು ಸದಾ ಹಾತೊರೆಯುತ್ತಿರುತ್ತಾರೆ. ಅವರ ಪ್ರಕಾರ ಇದು ಮುಸ್ಲಿಂ ದಾಳಿಕೋರನೊಬ್ಬ ಪುರಾತನವಾದ ನಳಂದಾ ವಿಶ್ವವಿದ್ಯಾಲಯದ ಮೇಲೆ ನಡೆಸಿದ್ದ ದಾಳಿಯ ಕಥನ. ಅದೇನೇ ಇದ್ದರೂ ಈ ಕಥನವು ಹಾಲೀ ಸರ್ಕಾರ ಮತ್ತದರ ಬೆಂಬಲಿಗರು ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಜ್ನಾನದ ಕೇಂದ್ರಗಳೆಂದು ಭಾವಿಸದೆ ದೇಶದ್ರೋಹಿಗಳ ಆವಾಸ ಸ್ಥಾನವೆಂದು  ಭಾವಿಸಿ ನಡೆಸುತ್ತಿರುವ ದಾಳಿಗೆ ಒಂದು ಒಳ್ಳೆಯ ಉಪಮೇಯವನ್ನಂತೂ ಒದಗಿಸುತ್ತಿದೆ. ಉದಾಹಣೆಗೆ ಕಳೆದ ವರ್ಷ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದ ಕಾರ್ಗಿಲ್ ಯುದ್ಧದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ನಿವೃತ್ತ ಸೇನಾಧಿಕಾರಿ ಜೆಡಿ ಭಕ್ಷಿಯವರು ಇದೀಗ ಜೆಎನ್‌ಯು ಅನ್ನು ಮರಳಿ ಗೆದ್ದುಕೊಂಡಿರುವ ಸರ್ಕಾರ ಆಕ್ರಮಣವನ್ನು ಮುಂದುವರೆಸಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಜಾಧವ್‌ಪುರ್ ವಿಶ್ವವಿದ್ಯಾಲಯಗಳ ಕೊಟೆಗಳನ್ನೂ ಧ್ವಂಸ ಮಾಡಬೇಕೆಂದು ಕರೆನೀಡಿದ್ದರು.

ವಿಶ್ವವಿದ್ಯಾಲಯಗಳ ವಿದ್ಯಮಾನಗಳಲ್ಲಿ  ಸರ್ಕಾರದ ವಿನಾಶಕಾರಿ ಮಧ್ಯಪ್ರವೇಶದ ವಿರುದ್ಧ ಮತ್ತು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಆರೋಪ ಹೊತ್ತವರನ್ನು ರಕ್ಷಿಸುತ್ತಿರುವುದರ ವಿರುದ್ಧ ಕಳೆದ ವಾರ ದೆಹಲಿಯಲ್ಲಿ ನಡೆದ ಪ್ರತಿಭಟನೆಂi ವೇಯಲ್ಲಿ ಜೆಎನ್‌ಯುದ ವಿದ್ಯಾರ್ಥಿಗಳ, ಅಧ್ಯಾಪಕ ವರ್ಗದವರ ಮೇಲೆ ಮಾತ್ರವಲ್ಲದೆ ಪತ್ರಕರ್ತರ ಮೇಲೂ ಮೇಲೆ ಕ್ರೂರವಾಗಿ ದಾಳಿ ನಡೆಸುವುದರ ಮೂಲಕ ಸರ್ಕಾರವು ತನ್ನ ನೈಜ ಉದ್ದೇಶಗಳನ್ನು ಬಯಲುಮಾಡಿಕೊಂಡಿದೆ. ಭಾರತದ ವಿಶ್ವವಿದ್ಯಾಲಯ ವ್ಯವಸ್ಥೆಯಲ್ಲಿ ಸರ್ಕಾರದ ಮಧ್ಯಪ್ರವೇಶ ಹೊಸದೇನಲ್ಲವಾದರೂ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವಂಥ ನಿರಂತರ ದಾಳಿಗಳು ಮಾತ್ರ  ಹಿಂದೆಂದೂ ಸಂಭವಿಸಿರಲಿಲ್ಲವೆಂದೇ ಹೇಳಬಹುದು.

ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಎರಡು ಅಂತರ್‌ಸಂಬಂಧವುಳ್ಳ ಅತ್ಯಂತ ಪ್ರಾಥಮಿಕ ಕರ್ತವ್ಯಗಳಿರುತ್ತವೆ. ಮೊದಲನೆಯದಾಗಿ ಹಾಲಿ ಅಸ್ಥಿತ್ವದಲ್ಲಿರುವ ಜ್ನಾನದ ಸೀಮೆಗಳನ್ನು ಅದು ಮತ್ತಷ್ಟು ವಿಸ್ತರಿಸಬೇಕು. ಅದು ಸಂಭವಿಸಬೇಕೆಂದರೆ ಎಲ್ಲಾ ಗ್ರಹೀತ ತಿಳವಳಿಕೆಗಳ ಬಗ್ಗೆ ಮತ್ತು ಆ ತಿಳವಳಿಕೆಗಳನ್ನು ಎತ್ತಿಹಿಡಿಯುವ ಅಧಿಕಾರ ರಚನೆಗಳ ಬಗ್ಗೆ ವಿಮರ್ಶಾತ್ಮಕ ಧೋರಣೆಗಳನ್ನು  ಬೆಳೆಸಿಕೊಳ್ಳಬೇಕು. ಮೊದಲನೆಯ ಉದ್ದೇಶಕ್ಕೆ ಆತುಕೊಂಡೇ ಇರುವ ಎರಡನೆಯ ಕರ್ತವ್ಯವೆಂದರೆ ಅವು ಜವಾಬ್ದಾರಿಯುತ ಮತ್ತು ಚಿಂತನಶೀಲ ನಾಗರಿಕರನ್ನು ಉತ್ಪಾದಿಸಬೇಕು. ಇದಾಗಬೇಕೆಂದರೆ ಎಲ್ಲಾ ಸಾಂಪ್ರದಾಯಿಕ ಜ್ನಾನಗಳನ್ನು ಪ್ರಶ್ನಿಸುವ ಮತ್ತು ಎಲ್ಲಾ ಬಗೆಯ ಯಾಜಮಾನಿಕ ಸಂಸ್ಥೆಗಳನ್ನೂ ವಿಮರ್ಶಾತ್ಮಕವಾಗಿ ಪರಿಶೀಲಿಸುವಂಥ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ಹೀಗಾಗಿ ಸಾರ್ವಜನಿಕ ವಿಶ್ವವಿದ್ಯಾಲಯಗಳು ಮೊದಲು ಸಂವಾದಿಯಾಗಬೇಕಿರುವುದು ಸಾರ್ವಜನಿಕರೊಂದಿಗೆಯೇ ವಿನಃ ಸರ್ಕಾರದೊಂದಿಗಲ್ಲ. ಆದ್ದರಿಂದ ಸರ್ಕಾರ ಮತ್ತು ಅದು ನಿಯಂತ್ರಿಸುವ ಸಂಸ್ಥೆಗಳು ಎಷ್ಟರಮಟ್ಟಿಗೆ ಯಾಜಮಾನ್ಯ ಸಿದ್ಧಾಂತಗಳ ಅಭಿವ್ಯಕ್ತಿಯಾಗಿರುತ್ತವೋ ಅಷ್ಟರಮಟ್ಟಿಗೆ ಸರ್ಕಾರದ ಎಲ್ಲಾ ಕ್ರಮಗಳನ್ನು ವಿಮರ್ಶಾತ್ಮಕ ಮೌಲ್ಯಮಾಪನಕ್ಕೆ ಗುರಿಪಡಿಸುವುದು ಸಾರ್ವಜನಿಕ ವಿಶ್ವವಿದ್ಯಾಲಯಗಳ ಪ್ರಥಮ ಕರ್ತವ್ಯವೇ ಆಗಿರುತ್ತದೆ. ಅಧಿಕಾರದಲ್ಲಿರುವವರನ್ನು ನಿರಂತರ ಉಸ್ತುವಾರಿಯಲ್ಲಿಟ್ಟಿರುವುದು ಒದು ಸಜೀವ ಪ್ರಜಾತಂತ್ರದ ನಿದರ್ಶನವೇ ಆಗಿರುತ್ತದೆ. ಹೀಗಾಗಿ ಯಾವುದನ್ನು ಈ ಸರ್ಕಾರವು ದೇಶ ವಿರೋಧಿ’ ಎಂದು ಕರೆಯುತ್ತದೆಯೋ ಅದು ಸಾರ್ವಜನಿಕ ವಿಶ್ವವಿದ್ಯಾಲಯಗಳ ಜವಾಬ್ದಾರಿಯೇ ಆಗಿದೆ. ಸರ್ಕಾರದ ಕ್ರಮಗಳನ್ನು ಪ್ರಶ್ನಿಸುವುದು ದೇಶದ್ರೋಹ ಎಂದಾಗುವುದಾದರೆ ಸಾರ್ವಜನಿಕ ವಿಶ್ವವಿದ್ಯಾಲಯಗಳು ಅದನ್ನು ನ್ಯಾಕ್ ಕೊಡುವ ಶ್ರೇಯಾಂಕಗಳಿಗಿಂತ ಮೌಲ್ಯಯುತವಾದ ಗೌರವವೆಂದು ಭಾವಿಸಬೇಕು.

 ಒಂದು ಪ್ರಜಾತಂತ್ರದಲ್ಲಿ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ನಡುವೆ ಕೊಡು-ಕೊಳೆ ಸಂಬಂಧಗಳಿರಬೇಕು. ಸಾರ್ವಜನಿಕ ವಿಶ್ವವಿದ್ಯಾಲಯಗಳು ಜ್ನಾನವನ್ನು ಉತ್ಪಾದಿಸಬೇಕು. ಮತ್ತು ಸರ್ಕಾರಗಳು ಅಂಥ ಜ್ನಾನದ ನೆರವನ್ನು ನಾಗರಿಕರ ಕಲ್ಯಾಣಕ್ಕೆ ಮತ್ತು ಅವರ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯಗಳನ್ನು ವಿಸ್ತರಿಸುವುದಕ್ಕೆ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವುದಕ್ಕೆ ಬಳಸಿಕೊಳ್ಳಬೇಕು. ಅಷ್ಟು ಮಾತ್ರವಲ್ಲದೆ, ಶಾಸಕರನ್ನೂ ಒಳಗೊಂಡಂತೆ, ನ್ಯಾಯಾಧೀಶರು, ಮಂತ್ರಿಗಳು ಮತ್ತು ತಂತ್ರಜ್ನರಂಥ ಸಾರ್ವಜನಿಕ ಸೇವಕರಿಗೆ ತರಬೇತಿ ಕೊಡುವುದೂ ಸಹ ಒಂದು ಸಾರ್ವಜನಿಕ ವಿಶ್ವವಿದ್ಯಾಲಯದ ಕರ್ತವ್ಯವಾಗಿರುತ್ತದೆ. ವಿಪರ್ಯಾಸದ ಸಂಗತಿಯೆಂದರೆ ಒಬ್ಬ ಸಾಮಾನ್ಯ ಗುಮಾಸ್ತನಿಂದ ಹಿಡಿದು ಸರ್ಕಾರದ ಮುಖ್ಯಸ್ಥರವರೆಗೆ ಎಲ್ಲರೂ ವಿಶ್ವವಿದ್ಯಾಲಯದ ವ್ಯವಸ್ಥೆಯ ಉತ್ಪನ್ನಗಳೇ ಆಗಿದ್ದರೂ ಹಣಕಾಸಿನ ಕೊರತೆಯ ಹೆಸರಲ್ಲೋ ಅಥವಾ ಶತ್ರುಗಳ ಕೋಟೆ ಎಂದು ಹಣೆಪಟ್ಟಿ ಲಗತ್ತಿಸಿಯೋ ಅದೇ ವಿಶ್ವವಿದ್ಯಾಲಯ ವ್ಯವಸ್ಥೆಯನ್ನು ಥೆಯನ್ನು ನಾಶಗೊಳಿಸಲು ಸರ್ಕಾರ ಸಿದ್ಧವಾಗಿದೆ.

ಇದಕ್ಕೆ ಪ್ರತಿಯಾಗಿ ಒಂದು ಸಾರ್ವಜನಿಕ ವಿಶ್ವವಿದ್ಯಾಲಯವು ಯಾವುದೇ ನಿರ್ಬಂಧ ಅಥವಾ ಭೀತಿಗಳಿಲ್ಲದೆ ಕೆಲಸ ಮಾಡುವಂಥ ವಾತಾವರಣವನ್ನು ಸರ್ಕಾರಗಳು ಖಾತರಿಗೊಳಿಸಬೇಕಿರುತ್ತದೆ. ಒಂದು ವಿಶ್ವವಿದ್ಯಾಲಯಕ್ಕೆ ಸ್ವಾಯತ್ತತೆಯನ್ನು ಕೊಡಮಾಡುವುದರ ಮೂಲಕ ಸರ್ಕಾರಗಳು  ಉಪಕಾರವನ್ನೇನು ಮಾಡುತ್ತಿಲ್ಲ. ಅದು ಸರ್ಕಾರದ ಹೊಣೆಗಾರಿಕೆಯಾಗಿದ್ದು ಪ್ರಜಾತಂತ್ರವನ್ನು ರಕ್ಷಿಸಬೇಕಿರುವ ಅದರ ಜವಾಬ್ದಾರಿಯ ಭಾಗವೂ ಆಗಿದೆ. ಸ್ವಾಯತ್ತತೆಯನ್ನು ಉತ್ತೇಜಿಸುವುದೆಂದರೆ ಸರ್ಕಾರದ ಉಸ್ತುವಾರಿಗೆ ಸೀಮಿತವಾಗುವುದು ಎಂದೂ  ಎಂದೂ ಆಗಬಹುದು. ಆದರೆ ಅದು ಶೈಕ್ಷಣಿಕ ಪಠ್ಯಗಳನ್ನು ಮತ್ತು ಸಂಶೋಧನಾ ಕಾರ್ಯಸೂಚಿಗಳನ್ನು ನಿಗದಿಪಡಿಸುವ ರೀತಿಯಲ್ಲೋ ಅಥವಾ ಆಳುವ ಪಕ್ಷದ ಬಾಲಬಡುಕರನ್ನು ಪ್ರಮುಖ ಸ್ಥಾನಗಳಿಗೆ ನೇಮಿಸುವ ರೀತಿಯಲ್ಲೋ ಅಥವಾ ಕಾನೂನು ಪಾಲಕ ಯಂತ್ರಾಂಗದ ಮೂಲಕ ವಿಶ್ವವಿದ್ಯಾಲಯದ ಶೈಕ್ಷಣಿಕ ಬದುಕಿನಲ್ಲಿ ಶಿಸ್ತನ್ನು ತರುವಂಥಾ ಕ್ರಮಗಳ ರೂಪದಲ್ಲೋ ಖಂಡಿತಾ ಇರಬಾರದು. ಉತ್ತಮ ಗುಣಮಟ್ಟದ ಮತ್ತು ತನ್ನ ಸರೀಕರಿಂದ ಗೌರವಿಸಲ್ಪಡುವಂಥ ವಿದ್ವಾಂಸರಿಗೆ ಮತ್ತು ವೃತ್ತಿಪರರಿಗೆ ಆಯಾ ಸಂಸ್ಥೆಗಳನ್ನು ನಡೆಸುವಲ್ಲಿ ಹೆಚ್ಚಿನ ಪಾತ್ರವನ್ನು ಖಾತರಿಪಡಿಸುವುದೇ ಸರ್ಕಾರ ವಹಿಸಬಹುದಾದ ಸರಿಯಾದ ಪಾತ್ರವಾಗಿರುತ್ತದೆ. ಅಷ್ಟು ಮಾತ್ರವಲ್ಲದೆ ಸಂಶೋಧಕರಿಗೆ, ಅಧ್ಯಾಪಕರಿಗೆ ಮತ್ತು  ವಿದ್ಯಾರ್ಥಿಗಳಿಗೆ ತಮ್ಮ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಬೇಕಾದ ಮೂಲಭೂತ ಸೌಕರ್ಯ ಮತ್ತು ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸಿ ಅವರನ್ನು ಮಾರುಕಟ್ಟೆ ಶಕ್ತಿಗಳ ಗುಲಾಮರಾಗದಂತೆ ತಡೆಯುವುದೂ ಸಹ  ಸರ್ಕಾರದ ಕರ್ತವ್ಯವಾಗಿರುತ್ತದೆ. ಇದರ ಜೊತೆಗೆ ವಿಶ್ವವಿದ್ಯಾಲಯದ ಸಮುದಾಯದ ಎಲ್ಲಾ ಹಂತಗಳಲ್ಲೂ ಎಲ್ಲಾ ಹಿನ್ನೆಲಯ ನಾಗರಿಕರ ಪ್ರಾತಿನಿಧ್ಯವೂ ಇರುವಂತೆ ನೋಡಿಕೊಂಡು ಸಾಮಾಜಿಕ ನ್ಯಾಯವನ್ನು ಪಾಲಿಸುವುದು ಮತ್ತು ಆ ಮೂಲಕ ವಿಶ್ವವಿದ್ಯಾಲಯಗಳು ಸಮಾಜದ ಯಾಜಮಾನ್ಯ ಹಿನ್ನೆಲೆಯ ವರ್ಗ ಮತ್ತು ಜಾತಿಗಳ ಉಪಕರಣಗಳಾಗದಂತೆ ತಡೆಗಟ್ಟುತ್ತಾ ಅವಕಾಶಗಳಲ್ಲಿ ಸಮಾನತೆಯನ್ನು ಕಾಪಾಡಿಕೊಳ್ಳುವ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಪಾಲಿಸುವುದೂ ಸಹ ಸರ್ಕಾರದ ಕರ್ತವ್ಯವಾಗಿರುತ್ತದೆ.

ಆದರೆ ಇವತ್ತು ಯಾವುದನ್ನು ಸ್ವಾಯತ್ತತೆ ಎಂದು ಪ್ರಚಾರ ಮಾಡಲಾಗುತ್ತಿದೆಯೋ ಅದರಲ್ಲಿ ಸರ್ಕಾರವು ಒಂದು ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ತಾನು ವಹಿಸಬೇಕಾದ ಪಾತ್ರಕ್ಕೆ ತದ್ವಿರುದ್ಧವಾದ ಪಾತ್ರವನ್ನು ವಹಿಸುತ್ತಿದೆ. ವಾಸ್ತವವಾಗಿ ಆ ಮೂಲಕ ನಾಗರಿಕರ ಪ್ರತಿಯಾಗಿ ತನಗಿದ್ದ ಎಲ್ಲಾ ಜವಾಬ್ದಾರಿಗಳನ್ನು ತೊರೆದುಕೊಳ್ಳುತ್ತಿದೆ. ಇತ್ತೀಚೆಗೆ ಮಾನವ ಸಂಪನ್ಮೂಲ ಮಂತ್ರಿಗಳು  ವಿಶ್ವವಿದ್ಯಾಲಯಗಳಿಗೆ ಹಂತಹಂತವಾಗಿ ಸ್ವಾಯತ್ತತೆಯನ್ನು ನೀಡಲಾಗುವುದೆಂದು ನೀಡಿರುವ ಹೇಳಿಕೆಯು ಸಾರಾಂಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುತ್ತಿದ್ದ ಸಾರ್ವಜನಿಕ ಸಂಪನ್ಮೂಲವನ್ನು ಹಿಂತೆಗೆದುಕೊಳ್ಳುವ ನೀತಿಗೆ ಮತ್ತೊಂದು ಹೆಸರಾಗಿದೆ. ಇದರರ್ಥವೇನೆಂದರೆ ವಿಶ್ವವಿದ್ಯಾಲಯದ ಶಾಖೆಗಳು ಆರ್ಥಿಕ ದೃಷ್ಟಿಯಿಂದ ವ್ಯವಹಾರ ಯೋಗ್ಯವಾಗಲು ಮಾರುಕಟ್ತೆ ಶಕ್ತಿಗಳಿಗೆ ಶರಣು ಹೋಗಬೇಕು. ಇದು ಒಂದು ಸಾರ್ವಜನಿಕ ವಿಶ್ವವಿದ್ಯಾಲಯಗಳ ಮೇಲಿನ ದಾಳಿ ಮಾತ್ರವಲ್ಲ ಒಂದು ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರ್ಕಾರವು ಯಾವುದರಿಂದ ತನ್ನ ಮಾನ್ಯತೆಯನ್ನು ಗಳಿಸಿಕೊಳ್ಳುತ್ತದೋ ಆ ಸಾಮಾಜಿಕ ಒಪ್ಪಂದದ ಉಲ್ಲಂಘನೆಯೂ ಆಗಿದೆ.

ಪ್ರಚಲಿತ ದಂತಕಥೆಗಳ ಪ್ರಕಾರ ನಳಂದಾ ವಿಶ್ವವಿದ್ಯಾಲಯದಲ್ಲಿದ್ದ ಎಲ್ಲಾ ಪುಸ್ತಕಗಳನ್ನು ಸಂಪೂರ್ಣವಾಗಿ ಸುಟ್ಟುಹಾಕಲು ಮೂರು ತಿಂಗಳು ಬೇಕಾದವಂತೆ. ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನೂ ಸಹ ಒಂದೇ ದಿನದಲ್ಲಿ ನಾಶಮಾಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ನಿರಂತರವಾಗಿ ಹೋರಾಡುತ್ತಿರುವುದು ನಿಜವಾದರೂ ಸರ್ಕಾರದ ಉದ್ದೇಶವೇನೆಂಬುದರ ಬಗ್ಗೆ ಮಾತ್ರ ಕಿಂಚಿತ್ತು ಸಂದೇಹವೂ ಉಳಿದಿಲ್ಲ. ತನ್ನ ಮತದಾರರನ್ನು ಮುಠಾಳರನ್ನಾಗಿಸಿ ಬಚಾವಾಗಬಹುದೆಂದು ಸರ್ಕಾರವು ಭಾವಿಸಿದ್ದರೂ ಇತಿಹಾಸದ ಆಕ್ರೋಶದಿಂದ ಬಚಾವಾಗಲು ಸಾಧ್ಯವಿಲ್ಲ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top